ಅಲೆಮಾರಿಯ ಅನುಭವಗಳು -0೬

ಅಲೆಮಾರಿಯ ಅನುಭವಗಳು  -0೬

©ವಿಪಿನ್ ಬಾಳಿಗಾ

ಮಾನ್ಸೂನ್ ವಾತಾವರಣದಂತೆ ಇರುವ ತಣ್ಣನೆ ಹೊದಿಕೆಯನ್ನೆ ಸದಾ ಮೈಗೆ ಮೆತ್ತಿಕೊಂಡು, ಚುಮುಗುಡುವ ಚಳಿಯನ್ನೆ ಬೆಚ್ಚಗೆ ತನ್ನೆದೆಯೊಳಗೆ ಕಾಪಿಟ್ಟುಕೊಂಡಿರುವ, ಕಣ್ಣು ಹರಿಸಿದಷ್ಟು ಹಸಿರನ್ನೆ ಹಾಸಿರುವ ಸಹ್ಯಾದ್ರಿಯ ಈ ಸಾಲು ಸಾಲು ಬೆಟ್ಟಗಳಿಗೆ, ಗ್ರೀನ್ ವ್ಯಾಲಿ ಅಂತಲೂ ಕರೆಯುವ ವಾಡಿಕೆ! ಬೆಳಗಾವಿಯಿಂದ ಬೈಕ್ ತಿರುಗಿಸಿ ಸಾವಂತವಾಡಿ ಮಾರ್ಗವಾಗಿ ಹೊರಟರೆ ಇಡೀ ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು ಮಳೆ ಬೀಳುವಂತ ಸಮುದ್ರ ಮಟ್ಟದಿಂದ ಸರಿ ಸುಮಾರು 690 ಮೀಟರ್ ಎತ್ತರದಲ್ಲಿರುವ ಪಶ್ಚಿಮ ಘಟ್ಟದ ಈ ಅಂಬೋಲಿ ಎದುರುಗೊಳ್ಳುತ್ತದೆ.

ಸದಾ ಹಸಿಯನ್ನೆ ಬಸಿದು ಕೊಡುವ ಈ ಘಟ್ಟದ ಮಡಿಲೊಳಗೆ ಮಳೆ ಸದಾ ಸಕ್ರಿಯವಾಗಿ ಸುಳಿದಾಡುತ್ತದೆ. ನದಿಗಳು ಮೈತುಂಬಿಕೊಂಡು ಝುಳುಝುಳು ಹರಿಯುವಾಗ ಅದೆಷ್ಟು ನವನವೀನ ಬೇರುಗಳಿಗೆ ತಾಕುತ್ತದೆಯೊ, ಅದೆಷ್ಟು ಕಲ್ಲುಬಂಡೆಗಳಿಗೆ ಎಡುವುತ್ತದೆಯೊ ಸ್ವತಃ ನದಿಗಳೇ ಬಲ್ಲ ಸೂಕ್ಷ್ಮ ಸಂಗತಿ ಇದು! ಈ ನದಿಗಳು ತೆವಳುತ್ತಲೊ ಇಲ್ಲವೆ ತಮ್ಮನ್ನು ತಾವು ರಕ್ಕಸ ರಭಸದಿಂದ ತಳ್ಳಿಕೊಂಡು ಘಟ್ಟದ ಮೇಲ್ಭಾಗದಿಂದ ದೊಪ್ಪನೆ ಪ್ರಪಾತ ಒಂದಕ್ಕೆ ಬಂದು ಬಿದ್ದಾಗ ಜಲ-ಪಾತಗೊಂಡು ಹರಿವು ಸಡಿಲಗೊಳ್ಳುತ್ತದೆ. ತುಂತುರು ಇಡೀ ಗಾಳಿಕೆನೆಯ ಗಲ್ಲ ಚಿವುಟುತ್ತದೆ. ಇಂತಹದ್ದೊಂದು ದೃಶ್ಯವೊಂದನ್ನು ಕಣ್ಣಿಗೆ ಕಟ್ಟುವಂತೆ ಕಾಣಸಿಗುವುದು ಅಂಬೋಲಿ ಜಲಪಾತದ ಹಸಿ ಮೈಯ ಸಿಂಹಕಟಿ ನಡುವಲ್ಲಿ ನಿಂತು ನೋಡುವಾಗ.

© ಧನರಾಜ್ ಎಂ.

ಬೈಕ್ ಒಂದು ಕಡೆ ನಿಲ್ಲಿಸಿ, ಜಲಪಾತದೆಡೆಗೆ ಹೆಜ್ಜೆ ಹಾಕುವಾಗ ಪಶ್ಚಿಮಘಟ್ಟದ ಕಪ್ಪನೆಯ ಮೋಡ ಮೈಸಡಲಿಸಿ ಝಾಡಿಸಿದಂತಾಯಿತೇನೋ ಗೊತ್ತಿಲ್ಲ, ಮಳೆ ಹನಿಯ ಶರಗಳು ಈ ನಖಶಿಖಾಂತ ಹೊಕ್ಕು ಸಂಭ್ರಮಿಸಿ ಸ್ವಾಗತಿಸಿದವು! ಕಣ್ಣು ಹಾಯಿಸಿದಷ್ಟು, ಹಸಿ ಹಸಿರು ಕಾನನ. ಮೈ ನವಿರೇಳುವಂತಹ ಪ್ರಪಾತಗಳು, ಪರ್ವತಗಳ ಶಿರ ತಾಕುವ ಮೋಡಗಳ ಹಿಂಡು, ನಿರಂತರ ಮಳೆಯಿಂದಾಗಿ ಶಿಖರಗಳ ಶಿರದಲ್ಲಿ ಶೇಖರಣೆಗೊಂಡ ನೀರು, ಘಟ್ಟದ ಯಾವ ದಿಕ್ಕಿಗೆ ನೋಡಿದರೂ ಹೆಸರಿಲ್ಲದ ಹತ್ತಾರು ಜಲಪಾತಗಳು ಪ್ರಪಾತದೆಡೆಗೆ ಬೀಳುತ್ತಿರುತ್ತವೆ. ದಾವಂತದ ಹೆಜ್ಜೆಗಳನ್ನು ಹಾಕುತ್ತಾ ದೊಡ್ಡ ಜಲಪಾತದ ಮೈ-ಮೀನಖಂಡ ತಲುಪಿದಾಗ ಬಿಸಿಲು ಕೋಲುಗಳು ಪಶ್ಚಿಮಘಟ್ಟದ ತಪ್ಪಲು ನೂಕಿ ಬರುತ್ತಿದ್ದವು. ಧುಮ್ಮಿಕ್ಕುವ ಜಲಧಾರೆಯ ಮಡಿಲಲ್ಲಿ ಸಮಾಧಾನ ಆಗುವವರೆಗೂ ತಲೆಕೊಟ್ಟು ಎರೆಸಿಕೊಳ್ಳಬಹುದು. ಪ್ರಕೃತಿ ತೋಯಿಸುವಂತಹ ಈ ಜಳಕ ಮೈ ಪುಳಕಗೊಳಿಸುವಂತದ್ದು! ತೋಯ್ದ ಬಟ್ಟೆಯಲ್ಲೆ ಜಲಪಾತದ ಕೆಳಗಿಳಿದು ಒಂದಷ್ಟು ಹೊತ್ತು ಎಳೆಬಿಸಿಲಿಗೆ ಮೈ ಒಡ್ಡಿ ಗೂಡಂಗಡಿಯ ಗೊಂಜಾಳ ತಿಂದಾಗ ಉದರವೂ ಸಮಧಾನಗೊಂಡಿತು! ಅಲ್ಲಿಂದ ಬೈಕನ್ನು ಬೆಳಗಾವಿ ಕಡೆಯ ರಸ್ತೆಯಲ್ಲಿ ಮೂರು ಕಿಲೋಮೀಟರ್ ಕ್ರಮಿಸಿದೆವಷ್ಟೆ ಹಿರಣ್ಯಕೇಶಿ ಎದುರಾಯಿತು.

ದಂತಕತೆಯೊಂದರ ಪ್ರಕಾರ ಅಂಬೋಲಿಯ ಸುತ್ತಮುತ್ತಲು 108 ಶಿವ ದೇವಾಲಯಗಳಿದ್ದವಂತೆ. ಈಗ ಬೆರಳೆಣಿಕೆಯಷ್ಟು ಮಾತ್ರ ಬೆಳಕಿಗೆ ಬಂದಿವೆ. ಅವುಗಳಲ್ಲಿ ಹಿರಣ್ಯಕೇಶಿಯೂ ಒಂದು.   ದೊಡ್ಡ ಬಂಡೆಯ ಗುಹೆಗಳ ಗರ್ಭದೊಳಗಿಂದ ಹಿರಣ್ಯಕೇಶಿ ಮತ್ತು ಮಾರ್ಕಂಡೇಯ ನದಿಗಳು ಹುಟ್ಟುತ್ತವೆ. ಜೋಡು ಜಡೆಯ ಝರಿಗಳು ಬೆಸೆದುಕೊಂಡು ಶಿವಲಿಂಗವನ್ನು ತೋಯಿಸಿ ಮುಂದೆ ಕರ್ನಾಟಕದ ಘಟಪ್ರಭಾ ನದಿಯಾಗಿ ಭೋರ್ಗರೆದು ಗೊಡಚಿನಮಲ್ಕಿ ಜಲಪಾತವನ್ನು ಸೃಷ್ಟಿಸುತ್ತವೆ! ಆಗಾಗ ಸುರಿವ ತುಂತುರು ಮಳೆಯಲ್ಲೇ ಮತ್ತಷ್ಟು ತೋಯಿಸಿಕೊಂಡು ಒಂದೆರಡು ಕಿಮೀ ವಾಪಾಸ್ ನಡೆದುಕೊಂಡು ಬರುವಾಗ ಚೆಂದದ ಪಾತರಗಿತ್ತಿಗಳು, ಮಳೆಹುಳಗಳು, ಆಗಾಗ ಕಾಲಿಗೇರುವ ಇಂಬಳಗಳು ನಮ್ಮ ಚಾರಣವನ್ನೂ ಸಮೃದ್ಧಗೊಳಿಸಿದವು.

©ವಿಪಿನ್ ಬಾಳಿಗಾ

ಅಲ್ಲಿಂದ ಬೆಳಗಾವಿ ರಸ್ತೆ ಮಾರ್ಗವಾಗಿ ಸುಮಾರು 9 ಕಿಮೀ ದೂರ ಬಂದು ಬೈಕ್ ಎಡಗಡೆಗೆ ತಿರುವಿಕೊಂಡು ಮೂರು ಕಿಲೋಮೀಟರ್ ಕ್ರಮಿಸಿದ್ದಷ್ಟೆ ನಮಗೆ ಎದುರುಗೊಂಡಿದ್ದು ಕವಾಳಾ ಸೇಠ್! ಮುಂಗಾರಿನಲ್ಲಿ ಬೀಸುವ ಮಾನ್ಸೂನ್ ಮಾರುತಗಳ ಹೊಡೆತಕ್ಕೆ ಜಲಪಾತದ ನೀರು ಹಿಮ್ಮುಖವಾಗಿ ಮೇಲಕ್ಕೆ ಹಾರುತ್ತಿರುತ್ತದೆ. ಅದಕ್ಕಾಗಿಯೆ ಇಲ್ಲಿರುವ ಒಂದು ಜಲಪಾತಕ್ಕೆ ರಿವರ್ಸ್ ವಾಟರ್ ಫಾಲ್ ಎಂದೆ ಹೆಸರು ಬಂದಿದೆ. ಘಟ್ಟದ ಮೇಲ್ಛಾವಣಿಯಂತೆ ಕಾಣುವ ಇದು ಒಂದಷ್ಟು ಬಯಲನ್ನು ನಮಗಾಗಿ ಸೃಷ್ಟಿಸಿಗೊಂಡಂತಿದೆ‌. ವಿಶಾಲವಾದ ಬಯಲ ತುದಿಗೆ ನಿಗೂಢ ಪ್ರಪಾತದ ಅಂಚಿನ ಸೆರಗೂ ಇದೆ. ಆ ಕತ್ತಿಯಂಚಿನ ತುದಿಗೆ ಅರಣ್ಯ ಇಲಾಖೆ ಒಂದಷ್ಟು ಬಂದೋಬಸ್ತು ಮಾಡಿದೆ. ಮಳೆಗಾಲದಲ್ಲೂ ಎಲೆ ಉದುರಿಸಿಕೊಂಡ ಬೋಳು ಮರದ ಮೈ ಯಾವಾಗಲೂ ಹಸಿಹಸಿಯಾಗಿ ಕಾಣಸಿಗುತ್ತವೆ. ಭರ್ತಿ ಮಂಜಿನ ವ್ಯೂಹವನ್ನು ಭೇದಿಸುವ ಸೂರ್ಯ ರಶ್ಮಿಗಳು ಕಣ್ಣಾಮುಚ್ಚಾಲೆ ಆಟ ಶುರುವಿಟ್ಟುಕೊಳ್ಳುತ್ತವೆ.

© ಅರವಿಂದ ರಂಗನಾಥ್

ಅಂಬೋಲಿ ಘಟ್ಟಗಳಲ್ಲಿ ಕಾಡೆಮ್ಮೆ, ಕಾಡು ಹಂದಿ, ಮಂಗ, ಹುಲ್ಲೆಗಳು (ಎಂಟೆಲೋಪಗಳು), ಜಿಂಕೆಗಳು ಆಗೊಮ್ಮೆ ಈಗೊಮ್ಮೆ ಚಿರತೆಗಳೂ ಸಹ ಕಾಣಸಿಗುತ್ತವೆ. ನೀರಿನ ಕೊರತೆಯನ್ನೇ ಎದುರಿಸದ ಕಾರಣ ಇಲ್ಲಿ ಪಕ್ಷಿ ಸಂಕುಲ ಸದಾ ತಮ್ಮ ಕೊರಳೊಳಗಿಂದ ಸಣ್ಣ ಧ್ವನಿಯಲ್ಲಿ ತಮ್ಮ ಇರುವಿಕೆಯನ್ನು ಹಾಜರುಪಡಿಸುತ್ತವೆ. ಮಂಗಟ್ಟೆಗಳು (ಹಾರ್ನ್ ಬಿಲ್), ಪ್ಯಾರಾಡೈಸ್ ನೊಣಹಿಡುಕ (ಪ್ಯಾರಾಡೈಸ್ ಫ್ಲೈ ಕ್ಯಾಚರ್), ಕಾಜಾಣ (ಡ್ರೋಂಗೊ), ಹಳದಿ ಹುಬ್ಬಿನ ಪಿಕಳಾರ (ಯಲ್ಲೊ ಬ್ರೌಡ್ ಬುಲ್ ಬುಲ್) ಕೆಂಪು ಮೀಸೆಯ ಪಿಕಳಾರ (ರೆಡ್ ವಿಸ್ಕರ್ಡ್ ಬುಲ್ ಬುಲ್) ಹಳದಿ ಬೆನ್ನಿನ ಸೂರಕ್ಕಿ (ಕ್ರಿಮ್ಸನ್ ಬ್ಯಾಕ್ದ್ ಸನ್ ಬರ್ಡ್), ಕಿತ್ತಳೆ ತಲೆಯ ನೆಲ ಸಿಳ್ಳಾರ (ಆರೆಂಜ್ ಹೆಡೆಡ್ ಗ್ರೌಂಡ್ ಥ್ರಶ್) ಹರಟೆ ಮಲ್ಲಗಳು (ಬ್ಯಾಬ್ಲರ್) ಇಂತಹ ಮುಂತಾದ ಪಕ್ಷಿ ಪ್ರಭೇದಗಳು ಇಡಿ ಅಂಬೋಲಿ ತಿರುವುಗಳ ಅನಂತ ಮೌನವನ್ನು ತಣ್ಣಗೆ ಕೊಂದು ಹಾಕುತ್ತವೆ. ಅಲ್ಲಲ್ಲಿ ಕಲ್ಲುಗಳ ಬುಡದಲ್ಲಿ ಚೇಳು-ಇಂಬಳ-ಸರಿಸೃಪಗಳು-ಕಪ್ಪೆಗಳು ಬೆಚ್ಚಗೆ ಕೂತು ಕಾಲವನ್ನು ದೂಡುತ್ತವೆ. ಸದಾ ಹಸಿರನ್ನು ಕಣ್ಣೆರಚುವಂತೆ ತುಂಬಿಕೊಡುವ ಫರ್ನ್, ಹೊಳೆ ಮತ್ತಿ, ಸೀಗೆಕಾಯಿ, ಅಲ್ಲಿಷ್ಟು ಇಲ್ಲಿಷ್ಟು ಮಾವು, ನಂದಿ, ಐನ್, ಹಿರ್ದಾ, ಅಂಜಾನ್ ಮರಗಳು ಪಶ್ಚಿಮ ಘಟ್ಟದ ಸೊಬಗನ್ನು ದ್ವಿಗುಣಗೊಳಿಸಿವೆ. ಅಂಬೋಲಿ ಘಾಟ್ ನಲ್ಲಿ ನಂಗರ್ತಾಸ್ ಜಲಪಾತ ಭೇದಿಸುವ ರಹಸ್ಯ ಕಂದರಗಳಂತಹ ಅದೆಷ್ಟೊ ಕಂದರಗಳು ನಿಗೂಢವಾಗಿಯೆ ಕಣ್ಣ ಮರೆಯಲ್ಲಿ ಅಡಕವಾಗಿವೆ. ಜೀವ ಪೋಷಕವನ್ನು ಸದಾ ಉತ್ಪತ್ತಿ ಮಾಡುತ್ತಲೆ ಸಾಕಷ್ಟು ಜೀವಗಳಿಗೆ ಪೂರಕವಾಗಿರುವ ಈ ಗ್ರೀನ್ ವ್ಯಾಲಿಯನ್ನು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಿದ್ದು ಒಂದಷ್ಟು ಖುಷಿಯ ಸಂಗತಿ. ಇಡೀ ಶಿಖರ ಶಿರದಲ್ಲಿ ಅಡ್ಡಾಡಿದ ಅನುಭವ ಆಗುತ್ತದೆ. ಜಟಿಲ ಕಾಡು ಹೊಕ್ಕು ಇಂಬಳದ ಕಾಟ ತಡಿಯುವ ಗೋಜು ಯಾವುದು ಇರುವುದಿಲ್ಲ. ಒಂದು ಘಟ್ಟದ ಮೇಲ್ಮೈಯನ್ನು ಈ ಪಾದಗಳು ಸವರಿ ನಡೆಯುವಾಗ ಹೊಸದೊಂದು ಅನುಭವ ಈ ನೆನಪಿನ ಸುಪರ್ದಿಯಲ್ಲಿ ಸೇರಿಕೊಳ್ಳುತ್ತದೆ. ಚಾರಣದೊಟ್ಟಿಗೆ – ಮೋಡ – ಮಳೆ – ನದಿ – ಜಲಪಾತ – ಹುಲ್ಲುಗಾವಲು – ನೂರಾರು ಚಿಟ್ಟೆಗಳು – ಸರಿಸೃಪಗಳು – ಅಲ್ಲಲ್ಲಿ ಸಿಗುವ ಸೇತುವೆ – ನದಿಯಂಚಿನ ಮಡಿಲ ಮರಳು – ಮಂಜು ಕೊರೆದಷ್ಟು ಹೊಸ ಹೊಸ ತಿರುವುಗಳು ಎಲ್ಲವನ್ನೂ ಒಂದು ನೆನಪಿನ ಮೂಟೆಯಲ್ಲಿ ಕಟ್ಟಿಕೊಂಡು ಬರುವಷ್ಟು ಅಂಬೋಲಿ ಘಾಟ್ ಕೊಡುತ್ತದೆ. ಹೊಸ ಹುರುಪು ಉತ್ಸಾಹ ಮತ್ತು ಕೌತುಕ ತುಂಬುವ ದಿನನಿತ್ಯದ ನಿರಂತರ ಬದಲಾವಣೆಯ ಪ್ರಕೃತಿಗೆ ನಾವು ಸದಾ ಋಣಿಯಾಗಿರಬೇಕು!

ಮುಂದುವರಿಯುವುದು. . . . .

ಲೇಖನ: ಮೌನೇಶ ಕನಸುಗಾರ
             ಕಲ್ಬುರ್ಗಿ ಜಿಲ್ಲೆ
.

             

Print Friendly, PDF & Email
Spread the love
error: Content is protected.