ಸಾಗರ ಸಾರಿದ ಸುದ್ದಿ!

ಸಾಗರ ಸಾರಿದ ಸುದ್ದಿ!

ಏನು ಮಾಡಬೇಕು? ಎಂಬ ಪ್ರಶ್ನೆಗೆ ಉತ್ತರವಿಲ್ಲದ ರಾತ್ರಿಯದು. ಮುಂದಿನ ಸಮುದ್ರದ ಅಲೆಗಳು ಏನನ್ನೋ ಹೇಳಲು ಹತ್ತಿರ ಬಂದು ಸುಮ್ಮನಾಗುತ್ತಿವೆ. ಕೆಲವು ಧೈರ್ಯ ಮಾಡಿ ಶಬ್ಧ ಮಾಡಿದರೂ ಹೇಳಲಾಗುತ್ತಿಲ್ಲ. ನನ್ನ ಪರಿಸ್ಥಿತಿಯೂ ಹಾಗೇ ಇತ್ತು. ಇಂಜಿನಿಯರಿಂಗ್ ನ ನಾಲ್ಕು ವರ್ಷದ ಅವಧಿಯಲ್ಲಿ ಎಲ್ಲೂ ಪ್ರವಾಸ ಹೋಗದ ನಾನು ಮತ್ತು ನನ್ನ ನಾಲ್ಕು ಜನ ಸ್ನೇಹಿತರು ಕೇರಳ ಪ್ರವಾಸ ಮಾಡಿ ದಕ್ಷಿಣ ಭಾರತದ ಪಶ್ಚಿಮ ದಿಕ್ಕಿಗೆ ತನ್ನ ಬಾಹುಗಳನ್ನು ಚಾಚಿ ಸವರುತ್ತಿದ್ದ ಅರಬ್ಬೀ ಸಮುದ್ರದ ಬಳಿ ಕೂತು ಯೋಚಿಸುತ್ತಿದ್ದೆವು. ನಾಳೆ ಬೆಳಿಗ್ಗೆ ನನ್ನ ಸ್ನೇಹಿತನ ಎರಡು ವರ್ಷ ಹಳೆಯ ಒಂದು ವಿಷಯದ ಪರೀಕ್ಷೆ ಇದೆ. ಅದಕ್ಕೆ ಹೋಗಲೇ ಬೇಕೆಂದರೆ ರಾತ್ರಿಯೆಲ್ಲಾ ಕಾರು ಚಲಾಯಿಸಬೇಕಿತ್ತು. ಸಮುದ್ರದ ಮೇಲೆ ಸಾಗಿ ಬಂದ ಬಿಸಿ ಗಾಳಿ ಇದನ್ನೇ ಕಿವಿಯ ಬಳಿ ಗುನುಗುತ್ತಿತ್ತು. ತಲೆಯೂ ಬಿಸಿಯಾಗಿತ್ತು. ಇದನ್ನೇ ಅವನಿಗೆ ವಿವರಿಸಿ ಕೇಳಿದೆ. ಆಗಲೇ ತಿಳಿದದ್ದು ಅವನ ಮನಸ್ಸು ಸಾಗರದಷ್ಟು ದೊಡ್ಡದು ಎಂದು. ಏಕೆಂದಿರಿ? ನಮ್ಮ ಆ ಪ್ರವಾಸದ ಸಲುವಾಗಿ ಅವನ ಎರಡು ವರ್ಷದ ಪರೀಕ್ಷೆಯನ್ನೇ ಒಂದು ವರ್ಷ ಮುಂದೂಡಿದ್ದ. ತಮಾಷೆಯ ಸಂಗತಿ ಎಂದರೆ ಹಿಂದಿನ ವರ್ಷ ಅದೇ ವಿಷಯದ ಪರೀಕ್ಷೆಯನ್ನು ಅವನು ಇಂತಹುದೇ, ಕೇರಳದ ಪ್ರವಾಸಕ್ಕೆ ಬಂದಾಗಲೇ ಬರೆದಿರಲಿಲ್ಲ! ಬಹುಶಃ ಅದೇ ಅಭ್ಯಾಸವಾಗಿಬಿಟ್ಟಿರಬಹುದು. ಏನಾದರೇನು, ನನಗೆ ಆ ಬೃಹತ್ ಸಮುದ್ರದೊಂದಿಗಿನ ಸಂಭಾಷಣೆಗೆ ಇನ್ನಷ್ಟು ಕಾಲಾವಕಾಶ ಸಿಕ್ಕಿತು. ಅಂದಿನ ಆ ಸಂಭಾಷಣೆಯಲ್ಲಿ ಎಷ್ಟೋ ವಿಚಾರ, ಸುದ್ದಿ, ಅರಿವುಗಳು ಬಯಲಾದವು.

ಅಂತಹುದೇ ಅರಿವಿನ ಸುದ್ದಿಯನ್ನು ಸಾಗರಗಳು ನಮ್ಮ ಮನುಕುಲದ ಮುಂದೆ ಬಂದು ಪ್ರತೀ ಕ್ಷಣ ಹೇಳುತ್ತಿವೆ. ಅದನ್ನು ನಾವು ಗಮನಿಸಿಯೇ ಇಲ್ಲ. ಆದರೆ ನಮ್ಮ ಹಾಗಲ್ಲದ ಕಿಸೈ ತನಕ ಮತ್ತು ಕೈಲ್ ವಾನ್ ಹೌಟನ್ ಎಂಬ ಸಾಗರ ಪರಿಸರಶಾಸ್ತ್ರಜ್ಞರು ಆ ಅಲೆಗಳಿಗೆ ಬೆಲೆ ಕೊಟ್ಟು ಆಲಿಸಿದ್ದಾರೆ. ಆಗ ಅವರು ಕೇಳಿಸಿಕೊಂಡಿದ್ದಾದರೂ ಏನು? ಸಾಗರ ಸಾರುತ್ತಿದ್ದ ಪ್ರಮುಖ ಸುದ್ದಿ ಇದು, ‘ನಿಮ್ಮ ಭೂ ಪ್ರದೇಶಗಳ ಸುತ್ತ ಆವರಿಸಿರುವ ನಾವು ಅಂದರೆ ಸಾಗರಗಳು ದಿನೇ ದಿನೇ‌ ಹೆಚ್ಚು ಶಾಖವೇರುತ್ತಿದ್ದೇವೆ. ಇದರ ಪರಿಣಾಮದ ಅರಿವಿದೆಯೇ?’ ಎಂದು. ಓಹ್ ಹೌದೇ… ಜಾಗತಿಕ ತಾಪಮಾನದ ಪರಿಣಾಮ ಇಂತಹುದು ಆಗುತ್ತಿದೆ ಎನ್ನುವುದು ವಾಸ್ತವ. ಅದನ್ನು ನಾವು ಈಗಾಗಲೇ‌ ಮರೆತು ನಮ್ಮ ನಮ್ಮ ಜೀವನದ ಅತಿ ಮುಖ್ಯ ಕೆಲಸಗಳಲ್ಲಿ ತೊಡಗಿಕೊಂಡಾಗಿದೆ. ಮುಂದಿನ ದೊಡ್ಡ ಪ್ರಮಾಣದ ತೊಂದರೆ ನಮ್ಮ ಬಳಿ ಬರುವವರೆಗೂ ಹೀಗೆ ಇರುತ್ತೇವೆ ಎನ್ನುವ ಅತೀ ಬುದ್ಧಿವಂತರು ನಮ್ಮಲ್ಲಿದ್ದಾರೆ. ಅಂತವರಿಗಲ್ಲ ಈ ಸುದ್ದಿ, ಬದಲಿಗೆ ನಮ್ಮ ಮತ್ತು ಮುಂದಿನ ಪೀಳಿಗೆಯ ಮೇಲೆ ಕಾಳಜಿ ಇರುವ ಜವಾಬ್ದಾರಿಯುತ ಮಾನ್ಯರಿಗೆ.

© CHELLE GENTEMANN, CHARLES THOMPSON AND JEFFREY R. HALL_PO.DAAC_JPL

ಅಸಲಿಗೆ ಏನು ಈ ಸಾಗರ ‘ತಾಪ’ತ್ರಯ? ಅದನ್ನೇ‌ ಹೇಳಲು ಹೊರಟಿದ್ದೇನೆ. ಸಮುದ್ರ ಅಥವಾ ಸಾಗರಗಳು ನೋಡಲು ಶಾಂತ, ಸೌಮ್ಯವಾಗಿ ಕಂಡರೂ ಅದರ ಗರ್ಭದಲ್ಲಿ ಅಡಗಿರುವ ಜೀವಕೋಟಿಗಳೆಷ್ಟೋ… ಹಾಗೆಯೇ ನಿಗೂಢಗಳೂ ಅಷ್ಟೆ. ಜಲಜೀವವೈವಿಧ್ಯತೆಯ ಆಳ ಅಗಲ ಬಲ್ಲವರು ತುಂಬಾ ಕಡಿಮೆ. ಇಂತಹ ಪರಿಸರ ವ್ಯವಸ್ಥೆಯಲ್ಲಿ ನಮ್ಮ ವಾತಾವರಣದ ಹಾಗೆ ನೀರಿನ ಉಷ್ಣಾಂಶವು ಅಲ್ಲಿನ ಜೀವರಾಶಿಗೆ ಬಹು ಮುಖ್ಯ ಅಂಶ. ಸಾಗರದ ನೀರಿನ ಉಷ್ಣಾಂಶದಲ್ಲಿ ಏರು ಪೇರಾದರೆ ಅಲ್ಲಿನ ಜೀವಿಗಳಿಗೆ ಆಗುವ ಅಪಾಯವೂ ಅಪಾರ. ಹಾಗೆಂದು ನೀರಿನ ತಾಪ ಬದಲಾಗುವುದೇ ಇಲ್ಲವೇ? ಎಂದು ನೀವು ಕೇಳಬಹುದು. ಖಂಡಿತ ಆಗುತ್ತದೆ. ಆದರೆ ಸಾಮಾನ್ಯವಾಗಿ ಬದಲಾಗುವ ಈ ತಾಪ ಅಲ್ಲಿ ವಾಸಿಸುವ ಜೀವಿಗಳ ಜೀವಕ್ಕೆ ಕುತ್ತು ಬರುವ ಹಾಗೆ ಇರುವುದಿಲ್ಲ. ಕೆಲವೊಮ್ಮೆ ಕಾರಣಾಂತರಗಳಿಂದ ಏರುವ ಆ ತಾಪ ಗಣನೀಯ ಮಟ್ಟದಲ್ಲಿ ಇದ್ದರೆ ಅಲ್ಲಿನ ಜೀವಿಗಳಿಗೆ ತೊಂದರೆ ತಪ್ಪಿದ್ದಲ್ಲ. ಸುಮಾರು 150 ವರ್ಷದ ಹಿಂದೆ ಆಗೊಮ್ಮೆ ಈಗೊಮ್ಮೆ ಸಾಗರ ಮೇಲ್ಮೈ ನ ತಾಪಮಾನ ಅತೀ ಹೆಚ್ಚು ಎಂಬ ಮಟ್ಟಕ್ಕೆ ಹೋಗುತ್ತಿತ್ತು. ಆದರೆ ಈಗ ಇರುವ ಸಾಗರದ ಮೇಲ್ಮೈನ ಸಾಮಾನ್ಯ ತಾಪಮಾನ ಆಗ ಅತೀ ಹೆಚ್ಚು ಎಂದು ಹೇಳಲ್ಪಡುವ ತಾಪಮಾನಕ್ಕೆ ಸಮ ಇದೆಯಂತೆ. ಇದನ್ನು ಸಾಗರ ಪರಿಸರಶಾಸ್ತ್ರಜ್ಞರು 1870-2019ರ ವರೆಗೆ ಗಮನಿಸಿದ ಸಾಗರದ ಮೇಲ್ಮೈ ತಾಪಮಾನದ ಮಾಹಿತಿಯಿಂದ ಕಂಡುಕೊಂಡಿದ್ದಾರೆ. ಅಂದರೆ ಶತಮಾನದ ಹಿಂದೆ ಇದ್ದ ಸಾಗರಕ್ಕಿಂತ ಸರಿಸುಮಾರು 57% ಹೆಚ್ಚು ಭಾಗದ ಸಾಗರದ ಮೇಲ್ಮೈನ ತಾಪಮಾನ ಗಣನೀಯವಾಗಿ ಹೆಚ್ಚಾಗಿದೆ. ಇವರ ಅಧ್ಯಯನದ ಪ್ರಕಾರ ಸಾಗರದ ಮೇಲ್ಮೈ ಉಷ್ಣಾಂಶವನ್ನು ಪ್ರತೀ ವರ್ಷಕ್ಕಲ್ಲದೇ ಪ್ರತೀ ತಿಂಗಳಿಗೊಮ್ಮೆ ದಾಖಲಿಸಿಕೊಳ್ಳುತ್ತಿದ್ದರು. ಹಾಗೆ ನೋಡುವಾಗ ಇವರಿಗೆ ತಿಳಿದ ಇನ್ನೊಂದು ಅಚ್ಚರಿಯ ಸಂಗತಿ ಎಂದರೆ 2014ರಲ್ಲಿ ಸಾಗರದ ಈ ತಾಪಮಾನ ಮರುಕಳಿಸಲಾಗದ ಬಿಂದುವಿಗೆ ತಲುಪಿತ್ತು (point of no return) ಎಂದು.

ಈ ಚಿತ್ರದಲ್ಲಿ ನೀವು ಗಮನಿಸಬಹುದು. ನಾಲ್ಕು ವಿವಿಧ ದಶಕಗಳಲ್ಲಿ ಪ್ರಪಂಚದ ಎಲ್ಲಾ ಸಾಗರಗಳ ನೀರಿನ ಮೇಲ್ಮೈ ತಾಪಮಾನ ಎಷ್ಟರಮಟ್ಟಿಗೆ ಏರಿದೆ ಎಂದು ಕೆಂಪು ಬಣ್ಣದಿಂದ ಗುರುತಿಸಬಹುದು

© K.R. TANAKA AND K.S. VAN HOUTAN_PLOS CLIMATE 2022

ನಾವು ಭೂಮಿಯ ಮೇಲೆ ಹಲವು ಡಿಗ್ರೀ ತಾಪಮಾನ ಬದಲಾದರೂ ಜೀವನ ಸಾಗಿಸುತ್ತೇವೆ. ಹಾಗೆ ಸಮುದ್ರ ಅಥವಾ ಸಾಗರದಲ್ಲೂ ಆಗುವುದಿಲ್ಲವೇ? ಎಂದೆನಿಸಬಹುದು. ಖಂಡಿತ ಹಾಗೆ ಆಗುವುದಿಲ್ಲ. ಏಕೆಂದರೆ ಸಮುದ್ರದಲ್ಲಿ ನಮ್ಮ ಭೂಪ್ರದೇಶದ ಮೇಲೆ ಇರುವ ಜೀವಿಗಳಿಗಿಂತ ಎಷ್ಟೋ ಹೆಚ್ಚಿವೆ, ಜೊತೆಗೆ ಅಷ್ಟೇ ಸೂಕ್ಷ್ಮವೂ ಆಗಿವೆ. ನೀರಿನ ತಾಪದಲ್ಲಿ ಆಗುವ 1/2 ಅಥವಾ 1 ಡಿಗ್ರೀ ಬದಲಾವಣೆಯನ್ನೇ ತಾಳಲಾರದೆ ಅಸುನೀಗುವ ಜೀವಿಗಳಿವೆ. ಹೀಗಿರುವಾಗ ಕೆಲವು ಡಿಗ್ರೀಗಳು ಹೆಚ್ಚಿದರೆ… ಕಡಲ ಹಕ್ಕಿಗಳು ಹಸಿವಿನಿಂದ ಸಾಯುತ್ತವೆ, ಹವಳದ ಸಂತತಿಗಳ ಅವನತಿ, ಸಮುದ್ರ/ಸಾಗರಗಳಲ್ಲಿನ ಕಾಡುಗಳೇ ಎಂದು ಕರೆಯುವ ಸಮುದ್ರ ಕಳೆ(kelp)ಯ ಕೊಲೆಯಾಗುತ್ತದೆ. ಮೀನುಗಳು, ತಿಮಿಂಗಿಲಗಳು, ಆಮೆಗಳಂತಹ ಜೀವಿಗಳು ತಂಪಾದ ಜಾಗಗಳನ್ನು ಅರಸಿ ಸಾವಿರಾರು ವರ್ಷಗಳು ತಮ್ಮ ಪೀಳಿಗೆಯನ್ನು ಬೆಳೆಸಿಕೊಂಡು ಬಂದಿದ್ದ ತಮ್ಮ ವಾಸಸ್ಥಾನಗಳನ್ನು ಅಗಲಿ ವಲಸೆ ಹೋಗಬೇಕಾಗುವ ಅನಿವಾರ್ಯ ಒದಗುತ್ತದೆ.

Underwater. Original public domain image from Wikimedia Commons

ಸಾಮಾನ್ಯವಾಗಿ ನಾವು ಸಂಶೋಧನೆಗಳಿಂದ ತಿಳಿಯುವುದೇನೆಂದರೆ ಹಿಂದೆ ನಡೆದುದ್ದನ್ನು ಆಧರಿಸಿ ಮುಂದಿನ ಭವಿಷ್ಯದಲ್ಲಿ ನಡೆಯಬಹುದಾದ ಒಳ್ಳೆಯ ಅಥವಾ ಕೆಟ್ಟ ಪ್ರಭಾವಗಳ ಬಗ್ಗೆ ಅರಿತು ಅಚ್ಚರಿ ಅಥವಾ ಎಚ್ಚರಿಕೆಯನ್ನು ಪಡೆದುಕೊಳ್ಳುತ್ತೇವೆ. ಆದರೆ ಇಲ್ಲಿನ ಈ ಸಂಶೋಧನೆ ಈಗಾಗಲೇ ವಾಸ್ತವವಾಗಿಬಿಟ್ಟಿರುವ ಅನಾಹುತದ ನಾಂದಿಯಾಗಿರುವುದನ್ನು ಸಾರುತ್ತಿದೆ. ಸಾಗರದ ಮೇಲ್ಮೈ ಶಾಂತವಾಗಿದ್ದು ಒಳಗೆ ಇಷ್ಟು ಕಟು ಸತ್ಯ ಹೊಂದಿರುವ ಹಾಗೆ ಇದನ್ನೆಲ್ಲ ಕೇಳಿದ ಮೇಲೂ ನಾವೂ ನಮ್ಮ ನಮ್ಮ ದಿನನಿತ್ಯದ ಕೆಲಸಗಳೇ ಹೆಚ್ಚೆಂದು ಸುಮ್ಮನಾಗಿಬಿಡಬೇಕೆ…?

ಸಾಗರ ಸಾರಿದೆ ಸುದ್ದಿ, ಅರಿತು ಬದಲಾಗುವಷ್ಟು ಇದೆಯೇ ನಮಗೆ ಬುದ್ಧಿ?!

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Print Friendly, PDF & Email
Spread the love
error: Content is protected.