ಅಷ್ಟನೇತ್ರ ಜೇಡ.

ಅಷ್ಟನೇತ್ರ  ಜೇಡ.

© ಪವನ್ ತಾವರೆಕೆರೆ

ಕಳೆದ ಲೇಖನದಲ್ಲಿ ಇರುವೆ ಅನುಕರಿಸುವ ಜೇಡದ ಬಗ್ಗೆ ವಿವರಿಸಿದ್ದೆ. ಅದು ನನ್ನ ಮಗನ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತೆಂದರೆ ಕಂಡ ಕಂಡಲ್ಲೆಲ್ಲಾಅವನು ಬೇರೆ ಬೇರೆ ರೀತಿಯ ಜೇಡಗಳನ್ನು ಹುಡುಕತೊಡಗಿದ್ದ! ಅವುಗಳ ಬಗ್ಗೆ ಪ್ರಶ್ನೆ ಕೇಳತೊಡಗಿದ್ದ (ಇದೊಂತರ ನನಗೆ ನನ್ನ ಬಾಲ್ಯದ ಹೋಮ್ ವರ್ಕ್ ದಿನಗಳು ಮರುಕಳಿಸಿದಂತೆ ಭಾಸವಾಗತೊಡಗಿತ್ತು! ನಾನು ಹಿಂದೆ ಇಂಜಿನಿಯರಿಂಗ್ ಕಾಲೇಜಿನ ಶಿಕ್ಷಕಿಯಾಗಿದ್ದಾಗ ಅದ್ಯಾವ ವಿದ್ಯಾರ್ಥಿ ನನಗೆ ಶಾಪ ಹಾಕಿದ್ದಳೋ/ನೋ ಈಗ ನನ್ನ ಮಗ ನನಗೆ ಇಷ್ಟೊಂದು ಅಸೈನ್ಮೆಂಟ್ ಕೊಡ್ತಾ ಇದ್ದಾನೆ ಅಂತ ಅನಿಸಿತ್ತು!) ನಾನಿನ್ನೂ ಹಿಂದಿನ ಪ್ರಶ್ನೆಯ ಉತ್ತರ ಹುಡುಕುವಷ್ಟರಲ್ಲಿ ಇವನು ಹೊಸದಾದ ಪ್ರಶ್ನೆಗಳ ಬಾಣ ಬಿಟ್ಟಿರುತ್ತಿದ್ದ. ಇವನಿಗೆ ಊಟ ಮಾಡಿಸುವಾಗ ಜೇಡಗಳನ್ನು ತೋರಿಸಲೇಬಾರದಿತ್ತು! ಯಾವುದಾದರೂ ಸ್ವಲ್ಪ ಸಾಮಾನ್ಯವಾದ, ಒಂದೇ ಪ್ರಭೇದವಿರುವ ಸಸ್ತನಿಯನ್ನು ತೋರಿಸಬೇಕಿತ್ತು! ಈ ಜೇಡಗಳನ್ನು ಗುರುತಿಸುವ ಕ(ಕ್ಲಿ)ಷ್ಟಕರವಾದ ಕೆಲಸದಿಂದ ಬಚಾವಾಗುತ್ತಿದ್ದೆ. ಈಗ ಯಾರಿಗಂದು ಏನು ಪ್ರಯೋಜನ?

© ಅನುಪಮಾ ಕೆ. ಬೆಣಚಿನಮರ್ಡಿ

‘ಮಾಡಿದ್ದುಣ್ಣೋ ಮಾರಾಯ’ ಎಂದು ಗೋಗರೆದು ಮಗನಿಗೆ ಊಟ ಮಾಡಿಸುವಾಗ, ಗೋಡೆಯ ಮೇಲೆ ನೊಣ ಬಂದು ಕುಳಿತಿತ್ತು. ಓಹ್ ಬದುಕಿದೆಯಾ ಬಡ ಜೀವವೇ ಎಂದು ಅದು ಹಾರಿ ಹೋಗುವ ಮುನ್ನ ಬೇಗನೆ ಮಗನಿಗೆ ತೋರಿಸಬೇಕೆಂಬ ಹವಣಿಕೆಯಲ್ಲಿದ್ದಾಗ ‘ಅವ್ವಾ ನೋಡಲ್ಲಿ, ನಿನ್ನ ನೊಣ ಗೊಟಕ್!’ ಎಂದ! ತಿರುಗಿ ನೋಡಿದರೆ ನೊಣ, ನೆಗೆಯುವ ಜೇಡದ (Jumping spider) ಬಾಯಲ್ಲಿತ್ತು. ಅದ್ಯಾವಾಗ ಹಿಡಿಯಿತು? ಎಲ್ಲಿತ್ತು ಈ ಜೇಡ? ಹೇಗೆ ಹಿಡಿಯಿತು ನನಗೆ ಏನೂ ಗೊತ್ತೇ ಆಗಲಿಲ್ಲ. ಕ್ರಿಕೆಟ್ ಆಟದಲ್ಲಿ ಮೂರನೇ ಅಂಪೈರ್ ನ ಕೇಳುವ ಹಾಗೆ ಇಲ್ಲೂ ಕ್ಯಾಮೆರಾ ಇದ್ದಿದ್ದರೆ ಎಷ್ಟು ಒಳ್ಳೆಯದಿತ್ತು ಎಂದೆನಿಸಿತು. ಜೇಡಕ್ಕೆ ಇದ್ಯಾವುದರ ಪರಿವೆಯೇ ಇರಲಿಲ್ಲ ಸುಮ್ಮನೆ ಬಾಯಲ್ಲಿ ಕಚ್ಚಿ ಕುಳಿತಿತ್ತು.  ಒಂದೆರಡು ಫೋಟೋ ತೆಗೆದರೂ ಕದಲಲಿಲ್ಲ. ಹೆಚ್ಚಾಗಿ ಈ ನೆಗೆಯುವ ಜೇಡಗಳು (Jumping spiders) ಮನುಷ್ಯ ಸಂಪರ್ಕ ಬಂದೊಡನೆ ನಾಚಿಕೊಂಡು ಪಲಾಯನಗೈಯುತ್ತವೆ. ಇದೇಕೋ ಹಾಗೆ ಮಾಡಲಿಲ್ಲ. ಅದರ ಬಾಯಲ್ಲಿ ಬೇಟೆ ಇದ್ದುದರಿಂದ ನಾನು ಕೂಡ ಹೆಚ್ಚು ಛೇಡಿಸಲಿಲ್ಲ. ಅದರ ಲಕ್ಷಣಗಳನ್ನು ನೋಡಿದರೆ ಈ ಜೇಡದ ಪ್ರಭೇದವು ನೆಗೆಯುವ ಜೇಡಗಳ ಗುಂಪಿನ ಸಾಲ್ಟಿಸಿಡೇ (Salticidae) ಎಂಬ ಕುಟುಂಬಕ್ಕೆ ಸೇರುತ್ತದೆ ಎಂದು ತಿಳಿಯಿತು. ಅದರ ಪ್ರಕಾರ ಈ ಜೇಡಕ್ಕೆ ಎಂಟು ಕಣ್ಣುಗಳಿದ್ದು, ತನ್ನ ಬೇಟೆಯನ್ನು ಬೇರೆ ಜೇಡಗಳ ಹಾಗೆ ಬಲೆ ಹೆಣೆದು ಸೆರೆಹಿಡಿಯದೇ ಬೇಟೆಯಾಡಿತ್ತು. ಅಷ್ಟರಲ್ಲಾಗಲೇ ನನ್ನ ಮಗ ಮೊಬೈಲ್ ತಂದು ಕೊಟ್ಟು ಫೋಟೋ ತೆಗೆಯಲು ಹೇಳಿ, ಅವನು ತನ್ನ ಭೂತಗನ್ನಡಿಯನ್ನು ತರಲು ಹೋದ. ಇದು ನೆಗೆಯುವ ಜೇಡ ಎಂದು ಸುಲಭವಾಗಿ ತಿಳಿದರೂ ನೆಗೆಯುವ ಜೇಡಗಳಲ್ಲಿನ ಯಾವ ಪ್ರಭೇದ ಎಂದು ತಿಳಿಯಲು ಹರಸಾಹಸ ಪಡಬೇಕಾಯಿತು. ಕಡೆಗೆ ಅದರ ಬಣ್ಣ ಹಾಗು ಇತರ ಲಕ್ಷಣಗಳ ಆಧಾರದ ಮೇಲೆ ಇದು ಪ್ಲೆಕ್ಸಿಪಸ್ ಪೈಕುಲ್ಲಿ (Plexippus paykulli) ಅಂತ ನಿರ್ಧರಿಸಿದೆ.  

© ಪವನ್ ತಾವರೆಕೆರೆ

ಇವುಗಳು ಹೆಚ್ಚಾಗಿ ಕಟ್ಟಡಗಳ ಗೋಡೆಯ ಮೇಲೆ, ಹೂಕುಂಡಗಳ ಹತ್ತಿರ, ಕೆಲವು ಬಾರಿ ಮರದ ಮೇಲೆ ಅಥವಾ ಬೆಳಕಿನ ಮೂಲದ ಅಡಿಯಲ್ಲಿ ಹುಳುಗಳನ್ನು ಬೇಟೆಯಾಡಲು ಹೊಂಚುಹಾಕಿ ಕುಳಿತಿರುವುದು ಕಾಣಸಿಗುತ್ತವೆ. ತನ್ನ ಎಂಟು ಕಣ್ಣುಗಳಿಂದ ತುಂಬಾ ನಿಖರವಾಗಿ ಬೇಟೆಯ ಇರುವನ್ನು ಗ್ರಹಿಸಿ ಅದರ ಮೇಲೆ ದಾಳಿ ಮಾಡುತ್ತವೆ.

ತನ್ನಲ್ಲಿರುವ ವಿಷವನ್ನು ಬೇಟೆಯ ದೇಹದಲ್ಲಿ ಚುಚ್ಚಿ ಬೇಟೆಯನ್ನು ತಿನ್ನುತ್ತವೆ. ಈ ನೆಗೆಯುವ ಜೇಡಗಳ ಗುಂಪಿನ ಪ್ರಭೇದಗಳಲ್ಲಿ ಗಮನಿಸಬಹುದಾದ ಗಮನಾರ್ಹ ವಿಷಯವೆಂದರೆ ಬೇರೆ ನೆಗೆಯುವ ಜೀವಿಗಳ ಕಾಲುಗಳಲ್ಲಿ ಕಂಡುಬರುವಂತಹ ಯಾವುದೇ ವಿಶೇಷ ರಚನೆ (ಉದಾಹರಣೆಗೆ, ಮಿಡತೆಯಲ್ಲಿ ಹಿಂಗಾಲುಗಳು ಮುಂಗಾಲುಗಳಿಗಿಂತಲೂ ಬಲಿಷ್ಠವಾಗಿವೆ) ಇಲ್ಲದಿದ್ದರೂ ಇವುಗಳ ಗಾತ್ರಕ್ಕಿಂತ 50 ಪಟ್ಟು ದೂರದವರೆಗೂ ನೆಗೆಯುವುದು. ಬದಲಾಗಿ ಜಿಗಿಯುವಾಗ ತನ್ನ ರಕ್ತ ಸಂಚಾರವನ್ನು ಕಾಲಿನಲ್ಲಿ ವೇಗಗೊಳಿಸಿ ಜಿಗಿಯುವ ಸಾಮರ್ಥ್ಯ ಪಡೆದಿದೆ. ಹೀಗಾಗಿ ಇದರ ಕಾಲುಗಳ ಸ್ನಾಯುಗಳು ಸಾಮಾನ್ಯ ರೀತಿಯಲ್ಲೇ ಇವೆ. ಜೇಡದ ಹಣೆಯಂತಿರುವ ಮುಂಭಾಗದಲ್ಲಿ ಎರಡು ದೊಡ್ಡದಾದ ಕಣ್ಣುಗಳಿದ್ದು, ಅದರ ಪಕ್ಕದಲ್ಲಿ ಎರಡು ಚಿಕ್ಕ ಚಿಕ್ಕ ಕಣ್ಣುಗಳಿವೆ. ಇನ್ನುಳಿದ ನಾಲ್ಕು ಕಣ್ಣುಗಳು ಜೇಡದ ತಲೆಯ ಮೇಲ್ಭಾಗದಲ್ಲಿ ಇವೆ. (ಅವುಗಳನ್ನು ಹುಡುಕಲು ನನ್ನ ಮಗ ಭೂತಗನ್ನಡಿಯೊಂದಿಗೆ ಕಸರತ್ತು ನಡೆಸಿದ್ದ!). ಈ ನೆಗೆಯುವ ಜೇಡಗಳಲ್ಲಿ ಸುಮಾರು ಪ್ರಭೇದಗಳಿದ್ದು, ಅವುಗಳಲ್ಲಿ ಸಾಕಷ್ಟು ನಮ್ಮ ಸುತ್ತಮುತ್ತವೇ ಇದ್ದರೂ ಅವುಗಳ ಪ್ರಭೇದವನ್ನು ನಿಖರವಾಗಿ ಗುರುತಿಸುವುದು ಸ್ವಲ್ಪ ಕಷ್ಟಸಾಧ್ಯ. ಉದಾಹರಣೆಗೆ ಕೈದೋಟದಲ್ಲಿರುವ ನೆಗೆಯುವ ಜೇಡ (Garden jumping spider), Green jumping spider, Elegant golden jumping spider, Mimicking jumping spiders, peacock jumping spider ಇತ್ಯಾದಿ.

ಕೆಲ ನೆಗೆಯುವ ಜೇಡಗಳು ಹೆಣ್ಣು ಜೇಡಗಳನ್ನು ಆಕರ್ಷಿಸಲು ಸ್ವಲ್ಪ ನೃತ್ಯ ಪ್ರದರ್ಶನ ಕೂಡ ಮಾಡುತ್ತವೆಯಂತೆ! ಹೊಟ್ಟೆಯನ್ನು ನೆಲಕ್ಕೆ ಬಡಿಯುತ್ತ ಅಥವಾ ಮುಂದಿನ ಎರಡು ಕಾಲುಗಳನ್ನು ಗಾಳಿಯಲ್ಲಿ ಮೇಲೆತ್ತಿ ನೃತ್ಯ ಪ್ರದರ್ಶಿಸುತ್ತವೆ. ಇದನ್ನು ನೋಡುವ ಭಾಗ್ಯ ನನಗಿನ್ನೂ ಒದಗಿ ಬಂದಿಲ್ಲ. ಪ್ಲೆಕ್ಸಿಪಸ್ ಪೈಕುಲ್ಲಿ (Plexippus paykulli) ಹೆಣ್ಣು ಜೇಡವು ಸಂತಾನೋತ್ಪತ್ತಿಯ ಸಮಯದಲ್ಲಿ ಒಂದು ಲೆನ್ಸ್ ಆಕಾರದ ಗೂಡನ್ನು ಗೋಡೆಗಳ ಮೂಲೆಯಲ್ಲಿ, ಎಲೆಗಳ ಮೇಲೆ ಹೆಣೆದು ಅದರಲ್ಲಿ 35 ರಿಂದ 60 ಮೊಟ್ಟೆಗಳನ್ನು ಇಟ್ಟು ಕಾವಲು ಕಾಯುತ್ತಿರುತ್ತದೆ. ಮರಿಗಳು ಹೊರ ಬಂದ ನಂತರವೂ ಕೆಲ ವಾರಗಳವರೆಗೆ ತಾಯಿಯು ಮರಿಗಳ ಜೊತೆಯಲ್ಲಿದ್ದು, ನಂತರ ಎಲ್ಲವೂ ಬೇರೆ ಬೇರೆಯಾಗಿ ಹರಡಿಕೊಳ್ಳುತ್ತವೆ.

© ಅನುಪಮಾ ಕೆ. ಬೆಣಚಿನಮರ್ಡಿ

ಈ ಜೇಡ ಗುರುತಿಸುವ ಅನುಭವವನ್ನು ಇನ್ನಷ್ಟು ಆಸಕ್ತಿದಾಯಕವಾಗಿ ಮಾಡಲು,ಅವತ್ತು ನಾನು ಜೇಡದ ದೋಸೆಯನ್ನು (ಬರೀ ದೋಸೆಯ ಆಕಾರ ಅಷ್ಟೇ! ಮತ್ತೇನನ್ನೋ ಕಲ್ಪಿಸಿಕೊಳ್ಳಬೇಡಿ!) ಮಾಡಿಕೊಟ್ಟೆ. ಮಗ ಅದನ್ನು ಮೇಲೆ ಕೆಳಗೆ ನೋಡಿ ನಲಿದು, ತುಪ್ಪ ಸವರಿದ ಜೇಡದ ಒಂದೊಂದೇ ಕಾಲುಗಳನ್ನು ಮುರಿದು ಚಟ್ನಿಯಲ್ಲಿ ಅದ್ದಿ ತಿನ್ನತೊಡಗಿದ.

ಲೇಖನ: ಅನುಪಮಾ ಕೆ. ಬೆಣಚಿನಮರ್ಡಿ.
             ಬೆಂಗಳೂರು ಜಿಲ್ಲೆ
.

Spread the love
error: Content is protected.