ಪ್ರಕೃತಿ ಬಿಂಬ
ಬೂದುಬಾಲದ ಉಲಿಯಕ್ಕಿ © ರಘು ಕುಮಾರ್ ಸಿ.
ಭಾರತದ ಉಪಖಂಡ, ಶ್ರೀಲಂಕಾ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಈ ಬೂದುಬಾಲದ ಉಲಿಯಕ್ಕಿಯು ಸಿಸ್ಟಿಕೋಲಿಡೆ ಕುಟುಂಬಕ್ಕೆ ಸೇರುತ್ತದೆ. ಈ ಹಕ್ಕಿಯನ್ನು ವೈಜ್ಞಾನಿಕವಾಗಿ ಪ್ರಿನಿಯಾಹಾಡ್ಗ್ಸೋನಿ (Prinia hodgsonii) ಎಂದುಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಹುಲ್ಲಿನಿಂದ ಕೂಡಿದ ತೆರೆದ ಕಾಡುಪ್ರದೇಶ ಮತ್ತು ಕುರುಚಲು ಕಾಡುಗಳಲ್ಲಿ ಕಾಣಸಿಗುತ್ತದೆ. ಸರಿಸುಮಾರು 15 ಸೆಂ. ಮೀ. ಉದ್ದದ ಈ ಉಲಿಯಕ್ಕಿಗಳು ಸಣ್ಣದಾದ ದುಂಡಗಿನ ರೆಕ್ಕೆಗಳು, ಉದ್ದವಾದ ಬಾಲ, ಬಲವಾದ ಕಾಲುಗಳು ಮತ್ತು ಚಿಕ್ಕದಾದ ಕಪ್ಪು ಕೊಕ್ಕನ್ನು ಹೊಂದಿರುತ್ತವೆ. ಸಂತಾನೋತ್ಪತ್ತಿಯ ಸಮಯದಲ್ಲಿ ಪುಕ್ಕಗಳು ಬೂದು ಬಣ್ಣದಲ್ಲಿದ್ದು, ಎದೆಯ ಮೇಲೆ ಬೂದು ಬಣ್ಣದ ಪಟ್ಟಿಯಿರುತ್ತದೆ. ವಿವಿಧ ಬಗೆಯ ಕೀಟಗಳನ್ನು ಇವು ತಮ್ಮ ಆಹಾರವಾಗಿ ಸೇವಿಸುತ್ತವೆ.
ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಸಿಲೋನ್ ಮತ್ತು ಬರ್ಮಾ ದೇಶಗಳ ಉದ್ಯಾನವನ, ಕುರುಚಲು ಕಾಡು, ತೋಟಗಳಲ್ಲಿ ಕಂಡುಬರುವ ಈ ಸೂರಕ್ಕಿಗಳು ನೆಕ್ಟರಿನಿಡೇ (Nectariniidae) ಕುಟುಂಬಕ್ಕೆ ಸೇರುತ್ತವೆ. ಇವುಗಳನ್ನು ವೈಜ್ಞಾನಿಕವಾಗಿ ನೆಕ್ಟರಿನಿಯಾ ಏಶಿಯಾಟಿಕಾ (Nectarinia asiatica)ಎಂದು ಕರೆಯಲಾಗುತ್ತದೆ. ಗುಬ್ಬಚ್ಚಿಗಿಂತ ಸಣ್ಣದಾದ, ಮಿರುಗುವ ಕಡು ನೇರಳೆ ಬಣ್ಣದ ಮೈ, ಬಾಗಿದ ಸೂಜಿ ಮೊನೆಯ ಕೊಕ್ಕು ಮತ್ತು ಮೋಟು ಬಾಲವನ್ನು ಹೊಂದಿದೆ. ಹೆಣ್ಣು ಪಕ್ಷಿಯ ದೇಹದ ಮೇಲ್ಭಾಗವು ಬೂದು ಬಣ್ಣವಿದ್ದು, ತಳಭಾಗವು ಮಾಸಲು ಹಳದಿಯಾಗಿರುತ್ತದೆ. ಹೂವಿನ ಮಕರಂದ ಮತ್ತು ಜೇಡರ ಹುಳು ಇತ್ಯಾದಿ ಕೀಟಗಳು ಇದರ ಆಹಾರವಾಗಿವೆ.
ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಬರ್ಮಾ ದೇಶಗಳ ಕುರುಚಲು ಕಾಡು, ತೇವ ಪ್ರದೇಶ ಮತ್ತು ತೋಟಗಳಲ್ಲಿ ಕಂಡುಬರುವ ಕೆಂಪು ರಾಟವಾಳ ಪಕ್ಷಿಯು ಎಸ್ಟ್ರಿಲ್ಡಿಡೇ (Estrildidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಅಮಾಂಡವ ಅಮಾಂಡವ (Amandava amandava) ಎಂದು ಕರೆಯಲಾಗುತ್ತದೆ. ತಲೆ, ಎದೆ, ಹೊಟ್ಟೆಭಾಗವು ಕಡು ಕೆಂಪು ಬಣ್ಣವಿದ್ದು, ಎದೆ, ಹೊಟ್ಟೆ ಮತ್ತು ರೆಕ್ಕೆಯ ಮೇಲೆ ಬಿಳಿ ಚುಕ್ಕೆಗಳಿರುತ್ತವೆ. ಕೀಟಗಳು, ಹುಲ್ಲಿನ ಬೀಜಗಳು ಹಾಗು ಧಾನ್ಯಗಳು ಇವುಗಳ ಆಹಾರವಾಗಿವೆ. ಗಟ್ಟಿ ಕಾಳುಗಳನ್ನು ಅಗಿಯಲು ಬಲವಾದ ಕೊಕ್ಕನ್ನು ಸಹ ಹೊಂದಿವೆ.
ಪಾಕಿಸ್ತಾನ, ಭಾರತ, ದಕ್ಷಿಣ ಚೀನಾ ಮತ್ತು ಆಗ್ನೇಯ ಏಷ್ಯಾದ ಕುರುಚಲು ಕಾಡು ಹಾಗೂ ಶುಷ್ಕ ಪ್ರದೇಶಗಳಲ್ಲಿ ಕಂಡುಬರುವ ಉಲಿಯಕ್ಕಿಯು ಸಿಸ್ಟಿಕೋಲಿಡೇ (Cisticolidae) ಕುಟುಂಬಕ್ಕೆ ಸೇರುತ್ತದೆ. ಇವನ್ನು ವೈಜ್ಞಾನಿಕವಾಗಿ ಪ್ರಿನಿಯಾ ಇನ್ನೋರ್ನಾಟಾ (Prinia inornata) ಎಂದು ಕರೆಯಲಾಗುತ್ತದೆ. ಇದು ಮಾಸಲು ಕಂದು ಬಣ್ಣದ ಪಕ್ಷಿಯಾಗಿದ್ದು, ಬಿಳಿ ಹುಬ್ಬು, ಚಿಕ್ಕ ಕವಲಿರುವ ಬಾಲ ಮತ್ತು ಕೊಕ್ಕನ್ನು ಹೊಂದಿರುತ್ತದೆ. ಗದ್ದ, ಹೊಟ್ಟೆ, ಕತ್ತಿನ ತಳಭಾಗವು ಮಾಸಲು ಬಿಳಿ ಬಣ್ಣದ್ದಾಗಿರುತ್ತದೆ. ಕೀಟಗಳು ಈ ಹಕ್ಕಿಯ ಪ್ರಧಾನ ಆಹಾರವಾಗಿದೆ.
ಚಿತ್ರಗಳು : ರಘು ಕುಮಾರ್ ಸಿ
ಲೇಖನ : ದೀಪ್ತಿ ಎನ್.