ಅಲೆಮಾರಿಯ ಅನುಭವಗಳು -೦೨
© ನಾಗೇಶ್ ಓ. ಎಸ್.
(ಕಾನನ ಇ-ಮಾಸ ಪತ್ರಿಕೆಯ ಫೆಬ್ರವರಿ 2022 ರ ಪ್ರತಿಯ ಅಲೆಮಾರಿಯ ಅನುಭವಗಳು – ೦೧ ರ ಮುಂದುವರಿದ ಭಾಗ…)
ನಿತ್ಯವೂ ಹಸಿ ಹಸಿರನ್ನು ತನ್ನ ಮೈಯಿಂದ ಬಸಿದು ಕೊಡುವ ಪಶ್ಚಿಮ ಘಟ್ಟದ ತೇವಾಂಶ ಭರಿತ ಕಾಡುಗಳ ನಡುವೆ ಬೆಳೆದ ಹಿಮ – ಕಿತ್ತಳೆ ಕಡುಗೆಂಪು ಬಣ್ಣದ ಹೂವುಗಳಿಂದಾವೃತವಾದ ಅಶೋಕ ಮರದ ಬೇರುಗಳ ಮೈ ತೊಳೆದು ಬರುವ ಸಣ್ಣ ತೊರೆಯ ನೀರು ಈ ಅಂಗಾಲಿನೆದೆ ತಾಕುತ್ತಿದ್ದಂತೆಯೆ ಮೈ ಒಳಗೆ ಅಸಂಖ್ಯಾತ ಎಲೆಗಳು ತಿಳಿಗಾಳಿ ಸುಳಿಗೆ ಒಟ್ಟಿಗೆ ಕಂಪಿಸಿದಂತಹ ರೋಮಾಂಚನ ಒಂದು ಸಂಚಾರವಾಗುತ್ತದೆ! ಸರಿ ಸುಮಾರು ಮೂವತ್ತು ಮೂವತ್ತೈದು ಮೀಟರ್ ಎತ್ತರಕ್ಕೆ ಬೆಳೆವ ಬಿಳಿದೇವದಾರಿ ಮರಗಳು ಎರಡೂ ಕೈ ಚಾಚಿ ಬಾಚಿ ತಬ್ಬಿದರೂ ಆ ಒಂದುವರೆ ಮೀಟರ್ ನಷ್ಟು ಸುತ್ತಳತೆ ಹೊಂದಿದ ತಿರುಳು ಹಳದಿ ಮಿಶ್ರಿತ ಕಂದು ಬಣ್ಣದ ಕಾಂಡಗಳು ಕಾನ್ ಅರಣ್ಯ ವಲಯಗಳನ್ನು ಸಂಪೂರ್ಣವಾಗಿ ಆಳುತ್ತಿದೆ. ಈ ನಿತ್ಯ ಹಸಿರು ಕಾಡುಗಳನ್ನು ದಾಟಿ ಸುಮಾರು 250 ಸೆಂ.ಮೀ. ಗಳಿಗೂ ಅಧಿಕ ಮಳೆ ಸುರಿಸುವ ನಿತ್ಯ ಹರಿದ್ವರ್ಣದ ಹಸಿ ಹಸಿರು ಕಾಡುಗಳ ಒಳಹೊಕ್ಕಷ್ಟು ಸೂರ್ಯನ ಕಿರಣಗಳು ಸಹ ನೆಲಕ್ಕೆ ತಾಕದಷ್ಟು ದುರ್ಗಮವಾಗಿ ಜಟಿಲಗೊಳ್ಳುತ್ತವೆ! ಹೆಬ್ಬಲಸು, ದೂಪ, ನಂದಿ, ಹೊನ್ನೆ, ತೇಗದ ಮರಗಳು ಎದುರುಗೊಳ್ಳುವಾಗ ಏಲಕ್ಕಿ, ಲವಂಗದಂತಹ ಔಷಧಿ ಸಸ್ಯಗಳ ಸಂಪತ್ತು ಸಹ ಜೊತೆಗೂಡುತ್ತವೆ. ಹೆಚ್ಚು ಮಳೆ ಬೀಳುವ ಕಾಡಾಗಿರುವುದರಿಂದ ನಿತ್ಯವೂ ಹಸಿರುತನ ಕಾಡಿನುಸಿರನಲಿ ಮೇಳೈಸುತ್ತಿರುತ್ತದೆ.
ಹಸಿ ಕಾಡುಗಳ ಹಾದಿಯೂ ಸಹ ಭಯಂಕರ ದುಸ್ಥಿತಿಯಲ್ಲಿರುವ ಅಂದಾಜು ಬಿಡಿ, ಅಸಲಿಗೆ ಹಾದಿಯೂ ಇರುವುದಿಲ್ಲ! ನಾವು ಕಿತ್ತಿಡುವ ಹೆಜ್ಜೆಗಳ ಗುರುತು ಸಹ ಮೂಡದಷ್ಟು ಕಾಡು ತನ್ನ ಒಣಗಿದೆಲೆಗಳನ್ನು ಉದುರಿಸಿಕೊಂಡು ತನ್ನ ಒಳಗುಟ್ಟನ್ನು ಆಂತರಿಕವಾಗಿ ಕಾಪಾಡಿಕೊಳ್ಳತ್ತದೆ! ಇಂಥವೇ ತರಗೆಲೆಗಳ ಒಟ್ಟು ಮಿಶ್ರಣದ ಗುಡ್ಡೆ ಹಾಕಿಕೊಂಡು ತನ್ನ ಮೈ ತಾನೆ ಸುತ್ತಿಕೊಳ್ಳುತ್ತಾ ನಲವತ್ತು ದಿನಕ್ಕೂ ಹೆಚ್ಚು ಊಟವಿಲ್ಲದೆ ಹೆಬ್ಬಾವುಗಳು ತನ್ನ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿ ಮಾಡುತ್ತದೆ. ಹಾವುಗಳನ್ನು ಹಾವುಗಳೇ ನುಂಗುವ ಮತ್ತು ಹಾವಿನ ಮೊಟ್ಟೆಗಳನ್ನು ಹಸಿದ ಹಾವುಗಳೇ ಕಬಳಿಸುವ ಅಪರೂಪದ ಪ್ರಕೃತಿಯ ಹಸಿವಿನ ದೃಶ್ಯಗಳಿರುವ ಇಂಥಹ ಕಾಡುಗಳು ನಮ್ಮಲ್ಲಿ ಅಚ್ಚರಿಯ ಭಾವ ಮೂಡಿಸುತ್ತವೆ! ಹೆಜ್ಜೆ ಕಿತ್ತಿಟ್ಟಷ್ಟೂ ತರೆಗೆಲೆಗಳ ಮೈ ಮುರಿದ ಸದ್ದು ಗಾಳಿ ತರಂಗಗಳ ಒಳಹೊಕ್ಕು ಈ ಕಿವಿಗೆ ತಾಕಿ ಅನಂತ ಮೌನದ ಗುಟ್ಟೊಂದನ್ನು ಸೀಳುತ್ತದೆ!
ಎಂಟುನೂರು ಮೀಟರ್ ಎತ್ತರದ ಈ ಪಶ್ಚಿಮ ಘಟ್ಟದ ಕಾಡುಗಳು ತನ್ನ ಒಡಲೊಳಗೆ ಬೆಳೆಸಿಕೊಂಡ ಧುಮಾ ಮರಗಳು, ತನ್ನ ತಪ್ಪಲಿಗೆ ತಗಲುವ ಜಡಿಮಳೆಯ ಹನಿಯನ್ನೆಲ್ಲಾ ಬಸಿದು ತಾ ತೊಟ್ಟಿಕ್ಕುವಾಗ ತನ್ನದೇ ಕಾಂಡದವರೆಗೆ ನಿಸರ್ಗ ಸ್ನಾನ ಒಂದನ್ನು ನಿತ್ಯವೂ ಮಾಡುತ್ತಾ ತನ್ನ ಬೇರಿನ ಮೇಲ್ಭಾಗದ ಕಾಂಡದಿಂದ ಮೇಲಕ್ಕೆ ಪಾಚಿಗಟ್ಟಿಸಿಕೊಂಡಿರುತ್ತದೆ. ಇಂಥಹ ಅರೆ ಹಸಿ ಹಸಿರನ್ನು ಮುಟ್ಟಿ ಸುಖಿಸುವುದೇ ಒಂದು ತರ ಮಜವಾಗಿರುತ್ತದೆ. ಮೃದುವಲ್ಲದ ಅರೆಮೃದು (ಒರಟು ಮೈ) ಹಾಗೂ ತೊಗಟೆ ಸವರಿದನುಭವವಾಗುತ್ತದೆ! ಮುರಿದು ಬಿದ್ದ ಗಿಡಗಳ ಕಾಂಡದ ಮೈ ತೊಳೆದು ಹರಿವ ತೊರೆಯ ನೀರಿನ ಜುಳು ಜುಳು ಸದ್ದು ಒಂದರೆಕ್ಷಣ ನಮ್ಮನ್ನು ನಿಲ್ಲಿಸಿ ಮಾತಾಡಿಸಿದಂತೆ ಭಾಸವಾಗುತ್ತದೆ. ಅದಮ್ಯ ಸಮಾಧಾನದಿಂದ ಅರಳುವ ಶಿಲೀಂಧ್ರಗಳು ತಮ್ಮ ಸಣ್ಣ ಗಾತ್ರ ವಿನ್ಯಾಸಗಳ ಕಾರಣದಿಂದ ನಿರ್ಜೀವ ವಸ್ತುಗಳ ಮೇಲೆ ಮತ್ತು ಸಸ್ಯಗಳ ಮೇಲೆ ಬೇರೆ ಬೇರೆ ಬಣ್ಣಗಳಲ್ಲಿ ಬೆಳೆದು ತಮ್ಮ ರಹಸ್ಯವಾದ ಜೀವನ ಶೈಲಿಗಳ ಕೌತುಕದ ಗುಟ್ಟೊಂದನ್ನು ಬಿಟ್ಟುಕೊಡುತ್ತವೆ. ಇಷ್ಟು ಅಖಂಡ ಅರಣ್ಯ ಸಂಪತ್ತಿನಡಿಯಲ್ಲಿ ಜೌಗು ಕಾಣುವುದೇ ವಿರಳ!
ನಡೆದಷ್ಟು ಹುರುಪು ಹೆಚ್ಚುಗೊಳ್ಳುವ ಮತ್ತು ನಡೆಯಲೇಬೇಕಾದ ತುರ್ತು ಸಂದರ್ಭ ಒಂದನ್ನು ಸೃಷ್ಟಿಸಿಕೊಡುವ ದುರ್ಗಮ ಮತ್ತು ಭಯಂಕರ ಸೌಂದರ್ಯ ಹೊತ್ತ ಈ ಪಶ್ಚಿಮ ಘಟ್ಟದ ತಪ್ಪಲು ಸಾಲುಗಳು ಅರಳಿಸುವ ಹೂವುಗಳು ಹುಬ್ಬೇರಿಸಿ ನೋಡುವಂತೆ ತೆರೆದುಕೊಳ್ಳುತ್ತವೆ. ಸಾವಿರ ಸಾವಿರ ಪ್ರಭೇದಗಳನ್ನು ತನ್ನ ಒಡಲೊಳಗಿರಿಸಿಕೊಂಡು ಪೋಷಿಸುತ್ತಿದೆ. ಲಕ್ಷಾಂತರ ಜೀವ ಸಂಪತ್ತಿಗೆ ಉಸಿರು ಎರೆದು ಕೊಟ್ಟಿದೆ. ಕೋಟ್ಯಾಂತರ ಎಲೆಗಳು ನಿತ್ಯವೂ ಟಿಸಿಲೊಡೆಯಲು ಪ್ರೇರೇಪಿಸುತ್ತದೆ! ಇವೆಲ್ಲಾ ಅತಿ ಸೂಕ್ಷ್ಮ ಸಮಾಧಾನದಿಂದ ನಡೆಯುವ ಜೈವಿಕ ಕ್ರಿಯೆಗಳು. ಇಂತದೇ ಸೂಕ್ಷ್ಮತೆ, ಇಂತದೇ ತಾಳ್ಮೆ – ಸಮಾಧಾನ ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ಪ್ರಕೃತಿ ನರಳಿ ಅರಳುವುದು ಎಷ್ಟು ಚೆಂದವಾಗಿ ನಮಗೆ ಕಾಣುತ್ತದೆಯೊ ವಾಸ್ತವದಲ್ಲಿ ಬದುಕು ಸಹ ಅಷ್ಟೇ ಸಾಮ್ಯತೆಗೊಳಪಟ್ಟಿದ್ದು, ಅದನ್ನು ನಾವು ಆಂತರಿಕವಾಗಿ ಅವಲೋಕಿಸಬೇಕಿದೆ. ಅಲೆದಷ್ಟು ಹೊಸ ವಿಚಾರಗಳು ಹೊಳೆಯುತ್ತವೆ. ನೇಸರನ ಬಿಸಿಲುಕೋಲಿನ ಬಿಸಿ ತಾಕದ ಶೀತಲ ಒಳಗುಟ್ಟು ತೆರೆದುಕೊಳ್ಳುತ್ತದೆ. ವಿಸ್ತಾರಗೊಳ್ಳುವುದೆಂದರೆ ಅರಿಯುತ್ತ ಸಾಗುವುದೇ ಆಗಿದೆ. ಅರಿತಷ್ಟು ಲೌಕಿಕತೆ ತಾನೆ ಕಳಚಿಕೊಳ್ಳುತ್ತದೆ. ಪ್ರಕೃತಿಯ ಮೂಲ ಸೆಳೆತ ಒಳಗೊಳಗೆ ಜಾಗೃತಗೊಳ್ಳುತ್ತದೆ. ಅನಂತ ಸುಖದ ಜಗತ್ತು ಬರಮಾಡಿಕೊಳ್ಳುವಾಗ ನಿರಂತರ ಅಲೆದಾಟದ ದಣಿವಿಗೆ ಹೊಸ ಉತ್ಸಾಹ ಸಂಕಲನಗೊಳ್ಳುತ್ತದೆ. ಮತ್ತಷ್ಟು ತೆರೆದುಕೊಳ್ಳಬೇಕೆನಿಸುವುದೇ ಇಂತಹ ಸುಖ ಸುರಿದು ಬರುವಾಗ!
ಮುಂದುವರಿಯುವುದು. . . . .
ಲೇಖನ: ಮೌನೇಶ ಕನಸುಗಾರ.
ಕಲ್ಬುರ್ಗಿ ಜಿಲ್ಲೆ.