ಆನೆ ಸೊಂಡಿಲ ಬಲ..

ಆನೆ  ಸೊಂಡಿಲ ಬಲ..

ಇಷ್ಟು ಹೊತ್ತು ನೀರವ ಮೌನದ ಮೃದು ಅಲೆಗಳಲ್ಲಿ ಈಜಿ ತೇಲುತ್ತಿದ್ದ ನನ್ನ ನಿದ್ರಾ ಲೋಕಕ್ಕೆ ಆ ಶಬ್ಧ ನುಸುಳಿ ಬಂದು ಒಂದು ಸಣ್ಣ ಸುನಾಮಿಯನ್ನೇ ಎಬ್ಬಿಸಿತ್ತು. ಕಣ್ಣು ಬಿಟ್ಟು ನೋಡುವ ಮುಂಚೆಯೇ ಕಿವಿಗಳಿಗೆ ಯಾರೋ ಕಿರುಚುವ ಶಬ್ಧ ರವಾನೆಯಾಗಿಬಿಟ್ಟಿತ್ತು. ಭಯ, ಕೋಪ, ವೇದನೆಯ ಜೊತೆಗೆ ಯಾವುದೋ ತೂಕದ ವಸ್ತುವನ್ನು ನಾನೆ ಎತ್ತಿದ ಹಾಗೆ ನನ್ನ ದೇಹವನ್ನು ಮಲಗಿದ ಭಂಗಿಯಿಂದ ನಿಧಾನಕ್ಕೆ ಮೇಲೆತ್ತಿದೆ. ಕಣ್ಣು ಬಿಟ್ಟು ನೋಡಿದರೆ ಕತ್ತಲು, ನಿದ್ದೆಯ ಮಂಪರು. ಕಣ್ಣು ತನ್ನ ಸುತ್ತಲಿನ ಬೆಳಕಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಯ್ತು. ಕಾರಿನಲ್ಲಿರುವವರ ನೋಟದ ದಿಕ್ಕು ನನ್ನ ಕಡೆಗೇ ತಿರುಗಿತ್ತು.  ಸ್ವಲ್ಪ ಆಶ್ಚರ್ಯವಾಯಿತು. ಓಹ್ ಮನೆಗೆ ಹೋಗುವ ದಾರಿಯಾದ ಕಾಡಿನಲ್ಲಿ ಚಲಿಸುತ್ತಿದ್ದರಿಂದ ಯಾವುದೋ ಪ್ರಾಣಿಯನ್ನು ಕಂಡಿರಬೇಕು ಎಂದುಕೊಂಡೆ. ಆದರೆ ಅವರ ಮಾತಿನ ವೈಖರಿ ಹಾಗೂ ಭಯದಿಂದ ಕೂಡಿದ್ದ ಶಬ್ಧ ತರಂಗಗಳನ್ನು ಗಮನಿಸಿ, ನಾನೂ ಆ ದಿಕ್ಕಿಗೆ ತಿರುಗಿದೆ. ಕಾರಿನ ಡಿಕ್ಕಿಯಲ್ಲಿ ಕುಳಿತಿದ್ದರಿಂದ ನನ್ನ ಮುಖವನ್ನು ಕೇವಲ 90 ಡಿಗ್ರೀ ತಿರುಗಿಸಬೇಕಿತ್ತು ಅಷ್ಟೇ. ಮಹಾ ಎಂದರೆ ಏನಿರಬಹುದು ಜಿಂಕೆಯೋ, ಸಾರಂಗವೋ ಇಲ್ಲಾ ಕಾಟಿಯೇ ಇರಬಹುದು ಎಂದು ತಿಳಿದು ಕುತೂಹಲದಿಂದ ತಿರುಗಿದೆ. ಬಾಳೆ ಎಲೆಯಂಥಾ ಎರೆಡು ಆಕೃತಿಗಳು ಅಲುಗಾಡುತ್ತಿದ್ದವು. ಏನೆಂದುಕೊಂಡಿರಿ… ಆನೆಯ ಕಿವಿಗಳು ಕಣ್ರೀ… ಕೆಲವೇ ಗಜಗಳ ಅಂತರದಲ್ಲಿ ಗಜರಾಜ. ನನ್ನೆಲ್ಲಾ ಮಂಪರು ಕ್ಷಣಾರ್ಧದಲ್ಲಿ ಮಾಯವಾಗಿ ನಿದ್ರೆಯೇ ನಿದ್ರಾಲೋಕಕ್ಕೆ ಹಿಂತಿರುಗಿತ್ತು. ಏಕೆಂದರೆ ಹುಟ್ಟಿದಾಗಿನಿಂದ (ಸುಮಾರು 15 ವರ್ಷಗಳು) ಅದೇ ದಾರಿಯಲ್ಲಿ ಓಡಾಡುತ್ತಿದ್ದರೂ ಆನೆಯನ್ನು ಅಷ್ಟು ಹತ್ತಿರದಿಂದ ನೋಡಿದ್ದು ಅದೇ ಮೊದಲು. ಟಾ ಟಾ ಸುಮೋವಿನ ಕೆಂಪು ಬ್ರೇಕ್ ಬೆಳಕಿನಲ್ಲಿ ಅದು, ಕೋಪಗೊಂಡ ಮದವೇರಿದ ಆನೆಯಂತೆ ಕಂಡರೂ ಅದು ನಿಂತ ಜಾಗದಿಂದ ಕದಲಲಿಲ್ಲ. ಆದ್ದರಿಂದ ಇದೂ ನಮ್ಮ ಹಾಗೆ ಸಾಧು, ಸ್ನೇಹ ಜೀವಿ ಎಂದುಕೊಂಡಿದ್ದೆವು. ಜೊತೆಗೆ ನಮ್ಮ ಕಾರು ಇನ್ನೂ ಚಾಲನೆಯಲ್ಲಿದ್ದು, ಒಂದು ವೇಳೆ ಆನೆ ಬಂದರೂ ಸಹ ಚಾಲಕರ ಸೀಟ್ ನಲ್ಲಿದ್ದ ನಮ್ಮ ಬಾಸ್ ಮುಂದೆ ಹೋಗಿ ನಮ್ಮನ್ನು ಕಾಪಾಡಿಕೊಳ್ಳುವ ಭಂಗಿಯಲ್ಲೇ ಇದ್ದರು. ಆದ್ದರಿಂದ ಆನೆ ದಾಳಿ ಮಾಡಿದರೂ ಸಹ ತಪ್ಪಿಸಿಕೊಳ್ಳಬಹುದು ಎಂಬ ಸಣ್ಣ ಧೈರ್ಯವೂ ಎಲ್ಲೋ ಮೂಲೆಯಲ್ಲಿತ್ತು. ಆದರೆ ಅಂದುಕೊಂಡದ್ದು ಒಂದು, ಆದದ್ದು ಇನ್ನೊಂದು. ಇದ್ದಕ್ಕಿದ್ದಂತೆ ಗೀಳಿಟ್ಟು ಒಂದು ಹೆಜ್ಜೆ ಮುಂದೆ ಇಟ್ಟಿತು. ನಮ್ಮ ದುರಾದೃಷ್ಟವಶಾತ್, ಮುಂದೆ ಮೂವ್ ಮಾಡಲು ಹೊರಟಾಗ ಕಾರು ಕೂಡ ಆಫ್ ಆಯ್ತು. ಆ ದೇವರಿಗೆ ಅಲ್ಲೆಲ್ಲೋ ಮೂಲೆಯಲ್ಲಿದ್ದ ಆ ಧೈರ್ಯದ ತುಣುಕೂ ಕಂಡುಬಿಟ್ಟಿತೆನಿಸುತ್ತದೆ, ಮುಗಿಯಿತು ಅಲ್ಲಿಗೆ ನಮ್ಮ ಸಾಧು-ಸ್ನೇಹತಾ ಭಾವ, ಬದುಕಿದರೆ ಸಾಕು ಬಡಜೀವ ಎನ್ನುವಷ್ಟು ಭಯವಾಗಿತ್ತು. ಗುದ್ದಿದರೆ ನಾನು ಮತ್ತು ನನ್ನ ಸ್ನೇಹಿತನೇ ಮೊದಲ ಜೋಡಿ ಕಾಯಿಗಳು ಅದಕ್ಕೆ ಹೊಡೆಯಲು ಸಿಗುತ್ತಿದ್ದುದು. ಸರಿ ಬಿಡು ನಮ್ಮ ಹಣೆಬರಹ ಎಂದುಕೊಂಡು ಕೂತಾಯಿತು. ಆದರೆ ನಮ್ಮ ಪುಣ್ಯಕ್ಕೆ ಆನೆ ಇನ್ನೊಂದು ಹೆಜ್ಜೆಯನ್ನು ಮುಂದೆ ಇಡಲಿಲ್ಲ. ನಮ್ಮನ್ನು ದುರುಗುಟ್ಟುತ್ತಾ ನೋಡುತ್ತಿತ್ತು. ಆ ಕೆಲವು ಕ್ಷಣಗಳ ಅಂತರದಲ್ಲಿ ಕಾರನ್ನು ಆನ್ ಮಾಡಲಾಗಿ, ಸ್ವಲ್ಪ ಸಮಯದ ನಂತರ ನಾವೂ ಸಹ ಸುರಕ್ಷಿತವಾಗಿ ಮನೆ ಸೇರಿದೆವು. ದಾರಿಯಲ್ಲಿ ನಡೆದ ಚರ್ಚೆಯಲ್ಲಿ ತಿಳಿದು ಬಂದದ್ದು ಇದು. ಆನೆಯು ತನ್ನ ಕಾಲುಗಳ ಸಂದಿಯಲ್ಲಿದ್ದ ತನ್ನ ಮರಿಯ ರಕ್ಷಣೆಗಾಗಿ ನಮ್ಮನ್ನು ಕೇವಲ ಅಲ್ಲಿಂದ ಓಡಿಸಲು ಮಾಡಿದ ಪ್ರಾಮಾಣಿಕ ಮಾತೃ ಪ್ರಯತ್ನವಿದು ಎಂದು. ಹೀಗೆ ಆನೆಯನ್ನು ಎದುರಾಗಿ ನೋಡಿದ ಘಟನೆಗಳು ಕೆಲವಿದ್ದರೆ, ಆನೆಗಳು ಸುತ್ತಮುತ್ತಲಿದ್ದಾವೆ ಎಂದು ಅವುಗಳು ತಮ್ಮ ಬಲ ಪ್ರಯೋಗಿಸಿ ಮರಗಳನ್ನು ಮುರಿಯುವ ಶಬ್ದವನ್ನು ಆಲಿಸಿ ಕಂಡುಹಿಡಿದದ್ದೇ ಹೆಚ್ಚು.

‘ಆನೆ ನಡೆದದ್ದೇ ದಾರಿ’ ಎನ್ನುವುದುಂಟು. ಇದನ್ನು ಯಾರೋ ಸುಮ್ಮನೆ ಹೇಳಲಿಲ್ಲ. ನಿಜವಾಗಿಯೂ ಕಾಡಿನಲ್ಲಿ ಆನೆ ಏನಾದರು ಪೊದೆಗಳ ಮಧ್ಯದಲ್ಲಿ ಮರಗಳ ಸಂದಿಯಲ್ಲಿ ನಡೆದರೆ ಅಲ್ಲಿ ನಾವು ಓಡಾಡುವಷ್ಟು ದಾರಿಯೇ ಆಗುತ್ತದೆ. ಈಗಲೂ ಸಹ ಅರಣ್ಯ ಇಲಾಖೆ ಮತ್ತು ಕಾಡಿನಲ್ಲಿ ಕೆಲಸ ಮಾಡುವ ಎಷ್ಟೋ ವನ ರಕ್ಷಕರು ಅವುಗಳು ನಡೆದ ದಾರಿಯನ್ನೇ ಬಳಸುತ್ತಾರೆ. ಆ ದೈತ್ಯಕಾಯನ ಬಲ ಅಷ್ಟು. ಸಾಮಾನ್ಯವಾಗಿ ಆನೆಯ ದೇಹದಾರ್ಢ್ಯವನ್ನು ಗಮನಿಸಿದರೆ, ಇದು ಬಲಿಷ್ಠ ಪ್ರಾಣಿ ಎನ್ನುವುದು ಅರಿವಾಗುತ್ತದೆ. ಆದರೆ, ನಾವು ಊಹಿಸಲು ಆಗದಷ್ಟು ಬಲವನ್ನು ಆನೆಯ ಒಂದು ಭಾಗವಾದ ಸೊಂಡಿಲೂ ಹೊಂದಿದೆ ಎಂದರೆ ನಂಬಬೇಕು ನೀವು. ಆದರೆ ಇಲ್ಲಿ ಸೊಂಡಿಲಿನ ಬಲವನ್ನು ನಾವು ತೂಕದ ವಸ್ತುವನ್ನು ಎತ್ತುವುದರಿಂದ ಅಳೆಯುತ್ತಿಲ್ಲ. ಬದಲಿಗೆ ನೀರು-ಗಾಳಿಯನ್ನು ಒಳಗೆ ಎಳೆದುಕೊಳ್ಳುವ ವೇಗದ ಆಧಾರದ ಮೇಲೆ ಅಳೆಯುತ್ತಿದ್ದೇವೆ ಎನ್ನುತ್ತಿದ್ದಾರೆ ಈ ಸಂಶೋಧನಾ ತಂಡ.

STUPORTS_ISTOCK_GETTY IMAGES PLUS

ಕೆಲಸ ಮುಗಿಸಿ ಬಂದು ಅಮ್ಮನಿಗೆ ಒಂದು ಲೋಟ ಕಾಫಿ ಹೇಳಿ ಕುರ್ಚಿಯಲ್ಲಿ ಕುಳಿತು, ಆ ಕಾಫಿಯನ್ನು ಸವಿಯುವಾಗ ನಾವು ಹೇಗೆ ಆ ದ್ರವವನ್ನು ನಮ್ಮ ಬಾಯಿಯ ಒಳಕ್ಕೆ ಎಳೆದುಕೊಳ್ಳುತ್ತೇವೆ? ಎಷ್ಟು ವೇಗದಲ್ಲಿ ಎಳೆದುಕೊಳ್ಳುತ್ತೇವೆ? ಎಂಬುದನ್ನು ನಾವು ಗಮನಿಸಿರುವುದಿಲ್ಲ. ಹಾಗೆಯೇ ಮೂಗಿನ ಮುಂದುವರೆದ ಭಾಗವಾಗಿರುವ ಆನೆಯ ಸೊಂಡಿಲನ್ನು ಆನೆ ಹೇಗೆ ಬಳಸುತ್ತದೆ? ಅದರೊಳಗೆ ಗಾಳಿ ಅಥವಾ ದ್ರವ ಎಷ್ಟು ವೇಗದಲ್ಲಿ ಚಲಿಸುತ್ತದೆ? ಎಂಬುದನ್ನು ತಿಳಿದರೆ ಅಚ್ಚರಿಯಾಗುವುದರಲ್ಲಿ ಸಂದೇಹವಿಲ್ಲ. ಇದನ್ನು ತಿಳಿದುಕೊಳ್ಳಲು ಆಂಡ್ರೂ ಮತ್ತು ತಂಡ ಆನೆಯ ಮುಂದೆ ದೊಡ್ಡ ನೀರಿನ ಪಾತ್ರೆಯನ್ನು ಇಟ್ಟು, ಆನೆ ನೀರು ಕುಡಿಯುವ ಸಂದರ್ಭದಲ್ಲಿ ಆನೆಯ ಸೊಂಡಿಲನ್ನು ಶ್ರವಣಾತೀತ ಶಬ್ಧ ಚಿತ್ರಣದಿಂದ (ultrasonic sound imaging) ಗಮನಿಸಿದರು. ಅಲ್ಲಿ ಅವರಿಗೆ ಅಚ್ಚರಿ ಮುಂಬಾಗಿಲಲ್ಲೇ ಕಾದಿತ್ತು. ಏಕೆಂದರೆ ಆನೆ ನಮ್ಮ ನಿಮ್ಮ ಹಾಗೆ ನೀರನ್ನು ಹೀರಿಕೊಳ್ಳಲಿಲ್ಲ. ಆನೆ ಸೊಂಡಿಲಿನಲ್ಲಿ ನೀರನ್ನು ಹೀರುವಾಗ ಅನೆಯ ಸೊಂಡಿಲಿನ ಒಳಭಾಗದ ಜಾಗ ಹೆಚ್ಚಾಯಿತು. 5 ಲೀ ಹಿಡಿಸುವಷ್ಟು ಇದ್ದ ಜಾಗ ಮೊದಲಿಗಿಂತ 60% ಹೆಚ್ಚಾಯಿತಂತೆ. ಅಂದರೆ ಸುಮಾರು 8 ಲೀ ನೀರು ಹಿಡಿಸುವಷ್ಟು ಜಾಗ. ಇದರಿಂದಾಗಿ ಆನೆ ನೀರನ್ನು ವೇಗವಾಗಿ ಎಳೆದುಕೊಳ್ಳುತ್ತಿತ್ತು. ಹೆಚ್ಚು-ಕಡಿಮೆ 4 ಲೀ ಪ್ರತೀ ಸೆಕೆಂಡಿನ ವೇಗದಲ್ಲಿ ಹೀರಿಕೊಳ್ಳುತ್ತಿತ್ತು. ಅಂದರೆ ಈಗಿನ ಸ್ನಾನ ಗೃಹದಲ್ಲಿ ಮೇಲಿಂದ ಮಳೆಯ ಹಾಗೆ ನೀರು ಬೀಳುವ ಜರಡಿಯಂತಹ, 24 ಜರಡಿಗಳಲ್ಲಿ ಒಂದೇ ಬಾರಿಗೆ ನೀರು ಬೀಳುವ ರಭಸದಷ್ಟು ಇರುತ್ತದೆ ಎಂದು ಅಂದಾಜಿಸಬಹುದು.

ಇದು ಒಂದಾದರೆ, ಆನೆಗೆ ತಿನ್ನುವ ವಸ್ತು ಕೊಟ್ಟಾಗ ನಾವು ಗಮನಿಸಿರುವ ಹಾಗೆ, ಸೊಂಡಿಲಿನ ತುದಿಯಿಂದ ಹಿಡಿದುಕೊಂಡು ಬಾಯಿಗೆ ಇಟ್ಟುಕೊಳ್ಳುತ್ತದೆ ಅಲ್ಲವೇ… ಹಾಗೆಯೇ ನಮ್ಮ ಊಹೆಯಂತೆಯೇ ಸಂಶೋಧನೆಯಲ್ಲಿ ಆನೆಗೆ ನೀಡಿದ ಒಂದೆರೆಡು ಬೀಟ್ ರೂಟ್ ನಂಥಹ ಗಡ್ಡೆಗಳನ್ನು ಆನೆ ಅದೇ ರೀತಿಯಲ್ಲಿ ತೆಗೆದುಕೊಂಡಿತು. ಮುಂಚಿನ ಹಾಗೆ ಆನೆ ಸೊಂಡಿಲಿನ ಒಳಗಿನ ಜಾಗವೇನು ಬದಲಾಗಲಿಲ್ಲ. ಆದರೆ, ಅದೇ ಗೆಡ್ಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಟ್ಟಾಗ ಅವು ತೆಗೆದುಕೊಂಡ ಬಗೆ ತಿಳಿದು ನನಗೂ ಅಚ್ಚರಿಯಾಯ್ತು. ಹೌದು, ಹೆಚ್ಚಿನ ಸಂಖ್ಯೆಯಲ್ಲಿದ್ದ ಗೆಡ್ಡೆಗಳನ್ನು ತೆಗೆದುಕೊಳ್ಳಲು ಅವು ಸೊಂಡಿಲಿನೊಳಗೆ ಗಾಳಿಯನ್ನು ವೇಗವಾಗಿ ಎಳೆದುಕೊಳ್ಳುತ್ತಾ ನಿರ್ವಾತವನ್ನು ಸೃಷ್ಟಿಸಿದವು. ಆ ನಿರ್ವಾತದಿಂದ ಗೆಡ್ಡೆಗಳು ಗಾಳಿಯಲ್ಲಿ ಮೇಲಕ್ಕೆ ಎದ್ದವು, ಅದನ್ನು ಸೊಂಡಿಲಿನಲ್ಲಿ ಹಿಡಿದು ಸ್ವಾಹಾ ಮಾಡಿದವಂತೆ. ಅವುಗಳು ಸೊಂಡಿಲಿನಲ್ಲಿ ಗಾಳಿಯನ್ನು ಎಳೆದ ರಭಸವನ್ನು ನೀರು ಎಳೆದ ರಭಸದ ಸಹಾಯದಿಂದ ಲೆಕ್ಕ ಹಾಕಿದರು. ಸೊಂಡಿಲಿನಲ್ಲಿ ಗಾಳಿಯ ವೇಗ ಎಷ್ಟಿತ್ತು ಗೊತ್ತೇನು…? ಬರೋಬ್ಬರಿ 150 ಮೀಟರ್ ಪ್ರತೀ ಸೆಕೆಂಡಿನ ವೇಗದಲ್ಲಿ! ಅಂದರೆ ಸುಮಾರು 540 ಕಿ. ಮೀ. ಪ್ರತೀ ಘಂಟೆಯ ವೇಗ! ಮಾನವ ತಯಾರಿಸಿರುವ ಪ್ರಪಂಚದ ಅತ್ಯಂತ ವೇಗದಲ್ಲಿ ಚಲಿಸುವ ಕಾರಿನ ವೇಗ (435 ಕಿ. ಮೀ. ಪ್ರತೀ ಘಂಟೆಯ ವೇಗ) ಕ್ಕಿಂತಲೂ ಹೆಚ್ಚು. ನಾವು ಸೀನುವಾಗ ನಮ್ಮ ನಾಸಿಕದಿಂದ ಗಾಳಿ ಹೊರಡುವ ವೇಗಕ್ಕಿಂತ 30 ಪಟ್ಟು ಹೆಚ್ಚು ವೇಗದಲ್ಲಿ. ಆನೆಯ ಸೊಂಡಿಲೊಳಗಿನ ಇಂತಹ ವಿದ್ಯಮಾನವನ್ನು ಕಂಡುಹಿಡಿದ ನಮ್ಮ ವಿಜ್ಞಾನಿ/ಇಂಜಿನಿಯರುಗಳ ತಂಡ ಅದನ್ನು ನಮ್ಮ ದಿನನಿತ್ಯದ ಬಳಕೆಗೆ ಹೇಗೆ ಬಳಸಿಕೊಳ್ಳಬಹುದೆಂಬ ಹುಡುಕಾಟದಲ್ಲಿದ್ದಾರೆ.

ನಾಗರ ಹಾವು ನುಸುಳಿದಂತೆ, ಬಳ್ಳಿ ಬಳುಕುವಂತೆ ನುಲಿಯುವ ಆನೆಯ ಸೊಂಡಿಲಿನ ನಳಿಕೆಯಲ್ಲೇ ಅಡಗಿರುವ ಇಂತಹ ಅಚ್ಚರಿಯ ಸಂಗತಿಗಳನ್ನು ನಾವು ತಿಳಿಯಲು ಇಷ್ಟು ಸಾವಿರ ವರ್ಷಗಳು ಬೇಕಾಯಿತು. ಹಾಗಾದರೆ ಇಂತಹ ವಿಸ್ಮಯ ಜಗತ್ತನ್ನೇ ಕೋಟ್ಯಾಂತರ ವರ್ಷಗಳಿಂದ ಹೊತ್ತು ನಿಂತಿರುವ ಭೂಮಿಯ ನಿಗೂಢತೆಯನ್ನು ಅರಿತವರಾರು?

ಮೂಲ ಲೇಖನ: ScienceNewsforStudents ವೀಡಿಯೋ ವೀಕ್ಷಿಸಲು ಇದನ್ನು ಸ್ಕ್ಯಾನಿಸಿ.

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Print Friendly, PDF & Email
Spread the love
error: Content is protected.