ಮಾರ್ಜಾಲಗಳ ಹಾದಿಯಲ್ಲಿ..
©ನವೀನ್ ಜಗಲಿ
ನನ್ನೂರು ಕರ್ನಾಟಕ ಭೂಪಟದಲ್ಲಿನ ದಕ್ಷಿಣದ ತುತ್ತತುದಿಯ ಚಾಮರಾಜನಗರ. ನನಗೆ ಬುದ್ಧಿ ಬಲಿತಾಗಿನಿಂದ ಕಾಡು, ಬೆಟ್ಟ-ಗುಡ್ಡ, ನದಿ-ಕೆರೆ, ಮೃಗಗಳಲ್ಲಿ ಏನೋ ಸೆಳೆತ. ನಮ್ಮ ಪ್ರದೇಶವು ಪೂರ್ವ ಘಟ್ಟಗಳ ಸಂಪತ್ಭರಿತ ಭೌಗೋಳಿಕ ದೃಶ್ಯಾವಳಿಗಳನ್ನೊಳಗೊಂಡ ವ್ಯಾಘ್ರಗಳ ತವರು. ಈ ಎಲ್ಲಾ ವಿಭಿನ್ನ ಜೀವ ವೈವಿಧ್ಯತೆಯು ನನ್ನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ನಮ್ಮೂರಿನಿಂದ ಪೂರ್ವಕ್ಕೆ ಅರ್ಧ ಗಂಟೆ ಮೋಟಾರಿನಲ್ಲಿ ಸಾಗಿದರೆ “ಬಿಳಿಗಿರಿ ಹುಲಿ ಸಂರಕ್ಷಿತ ಅರಣ್ಯ (ಬಿ. ಆರ್. ಟಿ)” ಪ್ರದೇಶವು ಹಾಗು ಈಶಾನ್ಯಕ್ಕೆ ಸಾಗಿದರೆ “ಮಲೆ ಮಹದೇಶ್ವರ ವನ್ಯಜೀವಿ ಧಾಮ” ಪ್ರದೇಶವು ಎದುರಾಗುತ್ತದೆ. ಅಲ್ಲಿಂದ ಮುಂದೆ “ಕಾವೇರಿ ವನ್ಯಜೀವಿ ಧಾಮ” ಸಿಗುತ್ತದೆ. ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾನು ಸಮಯ ಸಿಕ್ಕಾಗಲೆಲ್ಲ, ಕಾಡಿನ ಜಾಡುಗಳಲ್ಲಿ ಎಡವಿ ನಡೆಯಲು ಶುರುಮಾಡಿದ್ದೆ. ಇವೆಲ್ಲದಕ್ಕೂ ಜೊತೆಗಾರನಾಗಿ ಒಂದು ಕ್ಯಾಮೆರಾ ಕೂಡ ನನ್ನೊಡನೆ ಕೈ ಜೋಡಿಸಿತ್ತು.
ತೇಜಸ್ವಿಯವರ ಸೂಕ್ಷ್ಮಗ್ರಹಿಕೆತನ, ಆಸಕ್ತಿ, ಕೆನೆತ್ ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ಮಹಾಶಯರ ಬೇಟೆಯ ರೋಚಕ ಅನುಭವಗಳು, ಕೆದಂಬಾಡಿ ಜತ್ತಪ್ಪ ರೈ, ಕಾಕೇಮಾನೆಯವರ ಬೇಟೆಯ ಸಂಭ್ರಮ ಹಾಗೂ ನಮ್ಮ ತಲೆಮಾರನ್ನು ಪ್ರಭಾವಿಸಿದ ಕೃಪಾಕರ – ಸೇನಾನಿಯವರ ಸಾಕ್ಷ್ಯಚಿತ್ರಗಳು, ಕೆ. ಎಂ. ಚಿಣ್ಣಪ್ಪ ಸಾಹೇಬರ ಎದೆಗಾರಿಕೆ, ಕರ್ತವ್ಯ ಪ್ರಜ್ಞೆ, ಪರಿಸರ ಕಾಳಜಿ ನನ್ನನ್ನು ದಟ್ಟವಾಗಿ ಪ್ರಭಾವಿಸಿದರೆ, ಉಲ್ಲಾಸ್ ಕಾರಂತರ ಹುಲಿಗಳ ಬಗೆಗಿನ ವೈಜ್ಞಾನಿಕ ಅಧ್ಯಯನ, ಕ್ಯಾಮೆರಾ ಟ್ರ್ಯಾಪಿಂಗ್, ಸಂಶೋಧನೆಗಳೆಲ್ಲವೂ ನನ್ನೊಳಗಿನ ಸುಪ್ತ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸಿತು.
ನನ್ನ ಮೂಲ ಸ್ಥಾನದಿಂದ ಹತ್ತಿರವೆಂದರೆ 7 ರಿಂದ 8 ಕಿ. ಮೀ. ಪ್ರಯಾಣ ಬೆಳೆಸಿದರೆ ಸಾಕು ಬಿಳಿಗಿರಿ ರಂಗನಾಥ ಅರಣ್ಯ ವ್ಯಾಪ್ತಿಯ ಯಾವುದಾದರೊಂದು ಬಫರ್ ವಲಯವನ್ನು ಹೊಕ್ಕಬಹುದಿತ್ತು. ಫಕೀರನ ಹಾಗೆ ಕಾಡು ತಿರುಗಿ ಆನೆ, ಕರಡಿ, ಕೆನ್ನಾಯಿ, ಜಿಂಕೆ, ಕಡವೆ, ನೂರಾರು ಪಕ್ಷಿಗಳನ್ನು ತುಂಬಾ ಹತ್ತಿರದಿಂದ ಗಮನಿಸಿ ಫೋಟೋಗಳನ್ನು ಸೆರೆ ಹಿಡಿದಿದ್ದೆ. ಈ ಅಭಿರುಚಿಯಿಂದ ನಾನು ಎಷ್ಟೋ ಬೆಟ್ಟ-ಗುಡ್ಡಗಳನ್ನ ಹತ್ತಿ ಇಳಿದಿದ್ದರೂ ಕೂಡ, ಬಿಳಿಗಿರಿ ರಂಗನಾಥ ಸ್ವಾಮಿಯ ದೇವಸ್ಥಾನಕ್ಕೆ ಹೋಗುವ ಮುಖ್ಯ ರಸ್ತೆಯು ವಾರಕ್ಕೆರಡು ಬಾರಿಯಾದರೂ ನಮ್ಮನ್ನು ಕಾಡು ತಿರುಗಲು ಉದ್ರೇಕಿಸುತ್ತಿತ್ತು. ಗುಂಬಳ್ಳಿ ತನಿಖಾ ಠಾಣೆಯಿಂದ ಶುರುವಾಗುವ ಬಿಳಿಗಿರಿ ರಂಗನಾಥ ಅಭಯಾರಣ್ಯವು ಮೊದ-ಮೊದಲು ಶುಷ್ಕ ಎಲೆ ಉದುರುವ ಕಾಡಿನಿಂದ ಆರಂಭವಾಗುವ ದಾರಿ, ಮುಂದೆ ನಿಧಾನವಾಗಿ ಕೆರೆಗಳನ್ನು ಬಳಸಿಕೊಂಡು ಬೆಟ್ಟವನ್ನು ಏರುತ್ತಾ ಮುಂದುವರೆಯುತ್ತಿದ್ದರೆ, ರಸ್ತೆಯ ಇಕ್ಕೆಲಗಳಲ್ಲಿ ಬೃಹತ್ ಆಕಾರದ ಮರಗಳು ಕಾಡಿಗೆ ಹಿಡಿದ ಅಲಂಕೃತ ಛತ್ರಿಗಳಂತೆ ಭಾಸವಾಗುತ್ತವೆ. ಇದೇ ರಸ್ತೆ ಕವಲೊಡೆದು, ಒಂದು ದೇವಸ್ಥಾನಕ್ಕೆ ಇನ್ನೊಂದು ಕೆ. ಗುಡಿ ಆನೆ ಶಿಬಿರದ ಕಡೆ ಹೋಗುವ ದಾರಿಯಾಗುತ್ತದೆ. ನಾವು ಕೆ. ಗುಡಿಯ ಕಡೆಗೆ ಹೋಗುವ ದಾರಿ ಹಿಡಿದೆವೆಂದರೆ ಅಲ್ಲಿಯ ದಟ್ಟ ಮೌನ ಕಾಡಿನ ರೋಚಕತೆಯ ಮತ್ತೊಂದು ಆಯಾಮಕ್ಕೆ ನಮ್ಮನ್ನು ಕರೆದುಕೊಂಡು ಹೋಗಿಬಿಡುತ್ತದೆ.
ಅಲ್ಲಿನ ದಾರಿ, ದೂರದಲ್ಲಿನ ಬೆಟ್ಟದ ಮೇಲಿನ ಹುಲ್ಲುಗಾವಲಿನ ವಿಹಂಗಮ ನೋಟವನ್ನು ಒದಗಿಸಿದರೆ, ಅಂಕುಡೊಂಕಾದ ರಸ್ತೆ ಕಣಿವೆಗಳ ಪಕ್ಕದಲ್ಲೇ ಹಾದು ಹೋಗಿ ಅಲ್ಲಲ್ಲಿ ಮಳೆಯ ನೀರಿನ ಕೊರಕಲುಗಳು, ಸಣ್ಣಪುಟ್ಟ ತೊರೆಗಳು ಮಳೆಗಾಲದಲ್ಲಿ ಜೀವತಳೆದು ಕಾಡಿನೊಳಗೆ ಸಂಚರಿಸುವವರೆಲ್ಲರಿಗೂ ಅಪ್ಯಾಯಮಾನವಾಗಿಸುತ್ತದೆ. ಕಾಡಿನ ಸಂಭಾಷಣೆಗೆ ಸಾಕ್ಷಿಯಾಗಲು ನಾನು ಸಮಯವನ್ನೂ ಲೆಕ್ಕಿಸದೆ 15-20 ದಿನಗಳವರೆಗೆ ಮನೆಯನ್ನು ತೊರೆದು ಬಂದ ಉದಾಹರಣೆಗಳಿವೆ. ಮೊದಲಿನ ಅರಣ್ಯ ತನಿಖಾ ಠಾಣೆಯಿಂದ ಶುರುವಾಗುವ ಬಿಳಿಗಿರಿ ರಂಗನಾಥ ಅಭಯಾರಣ್ಯವು ಕ್ಯಾತಮಾರನ ಗುಡಿ (ಕೆ. ಗುಡಿ) ದಾಟಿ ಇನ್ನೊಂದು ಕಡೆಯ ತನಿಖಾ ಠಾಣೆಗೆ ಸರಿ-ಸುಮಾರು 30 ಕಿ. ಮೀ. ಆಗುವುದರಿಂದ, ಕಾಣುವ ಪ್ರಾಣಿ ಪಕ್ಷಿಗಳನ್ನು ಆಸ್ವಾದಿಸಲು ದಿನಕ್ಕೆ ಎರೆಡೆರಡು ಬಾರಿ ಸಂಪೂರ್ಣ ದೂರವನ್ನು ಗಸ್ತು ತಿರುಗುತ್ತಿದ್ದೆವು. ಈ ರೀತಿ ಅಲೆಯುವುದನ್ನು ಶುರುಮಾಡಿ ಆಗಲೇ 2-3 ವರ್ಷಗಳಾಗಿತ್ತು. ಆದ್ದರಿಂದ ಆ ದಾರಿಯಲ್ಲಿನ ಕೆರೆಗಳು, ಮರಗಳು ಮಕ್ಕಳ ಆಟದ ಮೈದಾನದಂತೆ ಸ್ಮೃತಿಪಟಲದಲ್ಲಿ ಅಚ್ಚಾಗಿತ್ತು. ಇಷ್ಟೆಲ್ಲಾ ಸುತ್ತಿ ದಣಿದರೂ ನಮಗೆ ದೈತ್ಯ ಮಾರ್ಜಾಲಗಳ ದರ್ಶನದ ಅದೃಷ್ಟ ಸಿಕ್ಕಿರಲಿಲ್ಲ.
ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶವು ರಾಜ್ಯದ ಪೂರ್ವಘಟ್ಟಗಳು ಪಶ್ಚಿಮಘಟ್ಟಗಳು ಸಂಧಿಸುವ ಮುಖ್ಯ ಪ್ರದೇಶವಾಗಿದ್ದು, ಸುಮಾರು 574 ಚ.ಕಿ.ಮೀ. ನಷ್ಟು ವಿಸ್ತಾರವಾಗಿದೆ. ಈ ಪ್ರದೇಶವು ಅರೆ ಶುಷ್ಕ ಎಲೆ ಉದುರುವ ಕಾಡುಗಳಿಂದ ಹಿಡಿದು ಶೋಲಾ ಹುಲ್ಲುಗಾವಲಿನವರೆಗೂ ಎಲ್ಲಾ ವಿಧವಾದ ಕಾಡುಗಳನ್ನು ಒಳಗೊಂಡಿದೆ. 2018ರ ಹುಲಿ ಗಣತಿಯ ಪ್ರಕಾರ ಈ ಪ್ರದೇಶವು 52 ರಿಂದ 80 ಹುಲಿಗಳಿಗೆ ಆವಾಸವನ್ನು ಒದಗಿಸಿದ್ದರೂ, ನನಗೆ ಒಮ್ಮೆಯೂ ಈ ಮಾರ್ಜಾಲಗಳ ದರ್ಶನವಾಗದೇ ಇದ್ದದ್ದು ಮಾತ್ರ ಬೇಸರದ ಸಂಗತಿಯಾಗಿತ್ತು. ಆದರೂ ಗಣತಿಯ ವೇಳೆ ಮತ್ತು ಕಾಡಲ್ಲಿ ಸಂಚರಿಸುವಾಗ ನಮ್ಮ ಕಣ್ತಪ್ಪಿಸಿ ಕಾಡಿನೊಳಗೆ ಕರಗಿ ಬಿಡುತ್ತಿದ್ದ ಇವುಗಳು ಬೇಸರ ತರಿಸಿದ್ದರೂ ಕಾಡನ್ನು ಇನ್ನೂ ಸೂಕ್ಷ್ಮವಾಗಿ ಅರಿಯಲು, ಸುತ್ತ ಮುತ್ತಲಿನ ಚಲನ-ವಲನವನ್ನು ಇನ್ನಷ್ಟು ಆಸಕ್ತಿದಾಯಕವಾಗಿ ಗ್ರಹಿಸಲು ಸಹಾಯ ಮಾಡಿವೆ. ಆದ ಕಾರಣ ಈ ಪ್ರದೇಶದಲ್ಲಿ ಸಿಗುವ ದೊಡ್ಡ ಸಸ್ತನಿಗಳಿಂದ ಹಿಡಿದು ಚಿಕ್ಕ ಪಕ್ಷಿಗಳ ಬಗ್ಗೆಯೂ ನನಗೆ ಪರಿಚಯವಿತ್ತು. ಜೊತೆಗೆ ನಾನು ಈ ದಾರಿಯಲ್ಲಿ ಐದಾರು ಬೇರೆ ಬೇರೆ ಕೆನ್ನಾಯಿಗಳ ಗುಂಪನ್ನು ಕಂಡಿದ್ದೆ (ಕೆನ್ನಾಯಿಗಳ ಗುಂಪಿಗೆ ಪ್ಯಾಕ್ ಎಂದು ಕರೆಯಲಾಗುತ್ತದೆ). ಮೂರ್ನಾಲ್ಕು ಕರಡಿಗಳನ್ನು, ಅಸಂಖ್ಯ ಆನೆ, ಕಾಟಿ, ಕಡವೆಗಳನ್ನು ಕಂಡಿದ್ದೇನೆ. ಹಲವಾರು ಬಾರಿ ಇವುಗಳನ್ನು ಗಮನಿಸಿರುವ ನನಗೆ ಇವುಗಳ ನಡುವಳಿಕೆ, ಗಡಿಗಳ ಬಗೆಗಿನ ತಿಳುವಳಿಕೆ ನನಗೆ ಅರಿವಿಲ್ಲದಂತೆಯೇ ಬಂದಿದೆ. ನನ್ನೀ ಪಯಣದಲ್ಲಿ ಅಜಾಗರೂಕತೆಯಿಂದ ಕಾಡಿನಲ್ಲಿ ಪ್ರಾಣಾಪಾಯದಿಂದ ಪಾರಾದ ನಿದರ್ಶನಗಳೂ ಸಹ ಇವೆ.
ನನ್ನ ಈ ಎಲ್ಲಾ ಸಾಹಸಗಳಿಗೆ ಜೊತೆಯಾಗುತ್ತಿದ್ದವನು ಸೋಮಶೇಖರ್. ವಯಸ್ಸಲ್ಲಿ ನನಗಿಂತ ದೊಡ್ಡವನಾದರು, ಸಮಾನ ಮನಸ್ಕ ಸ್ನೇಹಿತನನಾಗಿದ್ದರು. ವೃತ್ತಿಯಲ್ಲಿ ಸಿವಿಲ್ ಎಂಜಿನಿಯರಾಗಿದ್ದು, ವ್ಯಕ್ತಿತ್ವದಲ್ಲಿ ಸಾಹಸ ಮನೋಭೂಮಿಕೆಯವನು. ಆಗಷ್ಟೇ ಹೊಸದಾಗಿ ಕ್ಯಾಮೆರಾ ಖರಿದೀಸಿದ್ದ ಅವನು ಈ ಸಾಹಸಗಳಿಗೆ ಸಾಕ್ಷಿಯಾಗಿದ್ದನು. ಎಷ್ಟೋ ಸಲ ಆನೆ, ಕರಡಿಗಳಿಂದ ಕೂದಲೆಳೆಯಲ್ಲಿ ಪಾರಾಗಿದ್ದೆವು. ಒಂದು ದಿನ ನಡುಮಧ್ಯಾಹ್ನದಂದು ಗೆಳೆಯ ಸೋಮಶೇಖರ್ ನಿಗೆ ಕರೆ ಮಾಡಿ ಇನ್ನೊಂದರ್ಧ ಗಂಟೆಯಲ್ಲಿ ತಯಾರಾಗಿರು ಕಾಡಿಗೆ ಹೋಗೋಣವೆಂದೆ. ಅವನೂ ನನ್ನ ಕರೆಗೇ ಕಾಯುತ್ತಿದ್ದನೋ? ಏನೋ? ನಾನು ಅವನ ಮನೆ ಬಳಿ ಬರುವಷ್ಟರಲ್ಲೇ ತಯಾರಾಗಿನಿಂತಿದ್ದ. ಅಲ್ಲಿಂದ ಇಬ್ಬರೂ ಬೈಕನ್ನೇರಿ ಹೊರಟೆವು. ಮಹಾ ಜಿಪುಣನಾಗಿದ್ದ ಅವನನ್ನು ಛೇಡಿಸಲು ಪೆಟ್ರೋಲ್ ಗೆ ನಿನ್ನ ಪಾಲುಕೊಡು ಎಂದು ಮಾತಿಗೆಳೆದೆ. ಹುಟ್ಟಿನಿಂದಲೇ ಪರಮ ಜಿಪುಣನಾಗಿದ್ದ ಸೀನಿಯರ್ ಮಹಾಶಯ ಅವ.
ಕೇವಲ ಪೆಟ್ರೋಲ್ ಹಣದ ಪಾಲಿನ ವಿಷಯದಿಂದ ಶುರುವಾಗುವ ನಮ್ಮ ಸಂಭಾಷಣೆಯು ನಮ್ಮ ಮಾಸಿಕ ಸಂಬಳಗಳು, ಚಿರಾಸ್ತಿ, ಸ್ಥಿರಾಸ್ತಿಗಳ ತನಕವೂ ಧುಮುಕುತ್ತವೆ. ಕೊನೆಗೆ ಆ ಸಂವಾದದಲ್ಲಿ ಗೆದ್ದವನು ನಾನೇ ಎಂಬಂತೆ ಸೋಮಶೇಖರನು ಪೆಟ್ರೋಲ್ ಹಾಕಿಸಬೇಕಿತ್ತು. ಊರಿನಿಂದ ಹೊರಟ ನಾವು ದಾರಿಯಲ್ಲಿನ ಭತ್ತ- ಕಬ್ಬಿನ ಗದ್ದೆಗಳನ್ನ ದಾಟಿ ಹಳ್ಳಿಗಳನ್ನು ಬಳಸಿ, ಚೆಕ್ ಪೋಸ್ಟ್ ಬಳಿ ತಲುಪಿದ್ದೆವು. ಊರಿನಿಂದ ಚೆಕ್ ಪೋಸ್ಟ್ ವರೆಗೆ ನಾನು ಬೈಕ್ ಓಡಿಸಬೇಕು, ಮುಂದಿನ ಕಾಡಿನ ಸಂಪೂರ್ಣ ಸಾರಥ್ಯ ಸೋಮನದ್ದು. ಮತ್ತೆ ಚೆಕ್ ಪೋಸ್ಟ್ ನಿಂದ ಮನೆಯವರೆಗೂ ನಾನು ಓಡಿಸಬೇಕೆನ್ನುವುದು ನಮ್ಮಲ್ಲಿನ ಅಲಿಖಿತ ಒಪ್ಪಂದವಾಗಿತ್ತು. ಚೆಕ್ ಪೋಸ್ಟ್ ಬಳಿ ಬರುವ ಹೊತ್ತಿಗೆ ಸ್ವಲ್ಪ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅದು ವಾಹನಗಳ ವಿವರಗಳನ್ನು ನೊಂದಾಯಿಸುವ ಸಲುವಾಗಿ, ಕಾಡಿಗೆ ಹಸುರಿಗೆ ಸರಿದೂಗಿಸುವಂತಹ ಉಡುಗೆ ತೊಟ್ಟ ನಾವು ಆ ವಾಹನಗಳನ್ನೆಲ್ಲಾ ದಾಟಿ, ತನಿಖಾ ಠಾಣೆ ಬಳಿ ಬರುತ್ತಿದ್ದಂತೆ ದ್ವಾರ ಎಳೆಯುವ ವಾಚರ್ ಕಡೆ ತಿರುಗಿ, ಅರಾಮ್ ಹಾ ಎಂದರೆ ಸಾಕಾಗುತ್ತಿತ್ತು. ಆ ಕಡೆಯಿಂದ ಹಾ, ಹೂ ಎಂದೆಲ್ಲ ಶಬ್ದಗಳು ಬರುವುದಕ್ಕೆ ಮೊದಲೇ ಗೇಟ್ ದಾಟಿ ಹೊರಟುಬಿಡುತ್ತಿದ್ದೆವು. ಅದು ನಮಗೆ ಸಿಕ್ಕ ಪರವಾನಗಿ ಎಂದರೆ ತಪ್ಪಾಗಲಾರದು. ಏಕೆಂದರೆ ಅಲ್ಲಿ ಇಲಾಖೆಯವರನ್ನ ಬಿಟ್ಟರೆ ನಾವೇ ಜಾಸ್ತಿ ತಿರುಗುತ್ತಿದ್ದದ್ದು. ಕೆಲವೊಮ್ಮೆ ಹೊಸ ಗಾರ್ಡ್ಗಳು-ಫಾರೆಸ್ಟ್ರ್ಗಳು ವಾಹನಗಳ ವಿವರ ದಾಖಲಿಸುತ್ತಿದ್ದರೆ ನಮ್ಮ ಈ ವೇಷ ಭೂಷಣ ನೋಡಿ, ಯಾರೆಂದು ಅಲ್ಲಿರುವ ವಾಚರ್ಗಳನ್ನು ಕೇಳಿದರೆ, ವಾಚರ್ಗಳು ನಮ್ಮವರೇ ಸರ್! ಎಂದೊಡನೆ ಆ ಹೊಸ ಅಧಿಕಾರಿಗಳು ಸುಮ್ಮನಾಗುತ್ತಿದ್ದರು. ನಮ್ಮ ವೇಷಭೂಷಣಗಳನ್ನು ಕಂಡು ಇವರು ಅರಣ್ಯ ಇಲಾಖೆಯ ಸಿಬ್ಬಂದಿಯೇ ಇರಬಹುದೆಂದು ಅವರು ಭಾವಿಸುತ್ತಿದ್ದರೋ ಏನೋ? ಕೆಲವೊಮ್ಮೆ ವಾಚರ್ಗಳು ಬಂದ ಹೊಸ ಅಧಿಕಾರಿಗೆ ಅವ್ರು ಫೋಟೋ ತೆಗೆಯುವವರು ಮಾಮೂಲಿ ಬರೋವ್ರು ಕಣ್ಣಿಡಿ ಸರ್ ಎಂದು ಹೇಳಿ ನಮ್ಮನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ ಪ್ರಸಂಗಗಳೂ ಇವೆ. ಆದರೆ ನಮ್ಮ ಈ ಬಿಳಿಗಿರಿ ರಂಗನಾಥ ವನ್ಯಧಾಮ ಪ್ರದೇಶದಲ್ಲಿ ನಿರಂತರವಾಗಿ ನಾನು ಪ್ಲಾಸ್ಟಿಕ್ ಸ್ವಚ್ಛತೆಯಲ್ಲಿ ತೊಡಗುತ್ತಿದ್ದ ಕಾರಣ, ಕಾಡಿನ ರಸ್ತೆಯಲ್ಲಿ ಸಾಗಲು ನನಗೆ ಯಾವುದೇ ಅಡೆ ತಡೆಗಳು ಎದುರಾಗಿಲ್ಲ.
ಹಾಗೆ ಇದೆಲ್ಲ ಮುಗಿಯುವ ಹೊತ್ತಿಗೆ ಕುರುಚಲು ಕಾಡು ಶುರುವಾಗಿ ಬಿಸಿಲು ಕಣ್ಣಿಗೆ ಸ್ವಲ್ಪ ಸೂಕ್ಷ್ಮತೆಯನ್ನು ಕೊಟ್ಟಿತು. ನಾನು ಕ್ಯಾಮೆರಾ ತೆಗೆದು ಸೆಟ್ಟಿಂಗ್ ಪರಿಶೀಲಿಸಿ ಬಿಸಿಲಿನ ಬೇಗೆಗೆ ಚಿತ್ರವು ಓವರ್ ಎಕ್ಷ್ಪೋಸ್ ಆಗಿರುವುದನ್ನು ಕಂಡು ಐ. ಎಸ್. ಒ. ಅನ್ನು ಕಡಿಮೆ ಮಾಡಿ, ಎಡಕ್ಕೆ ಬಲಕ್ಕೆ ಕಣ್ಣಾಯಿಸಿದೆ. ಎಡಗಡೆ ರಸ್ತೆಯ ಬದಿಯಲ್ಲೇ ಅರ್ಧ ಸುಟ್ಟ ಮತ್ತು ಗಾಳಿಗೆ ಚದುರಿದ ಎಲೆಗಳಂತೆ ಕಂಡವು, ಸ್ವಲ್ಪ ಹತ್ತಿರಕ್ಕೆ ಬಂದ ತಕ್ಷಣ ಹೇಳಿದೆ.
ನಾನು: “ಡೂ ಸೋಮ ಸಿಕ್ಕಾಪಟ್ಟೆ ಏತಿಟ್ಟಿದಾವಲ್ಲೋ ಅಂದೆ, ಸೋಮ: ಹೂ ಕಡ ನೆನ್ನೆನು ಇತ್ತು, ಎರಡು ದಿನದ ಹಿಂದೆದು ಇರ್ಬೇಕು ಅಂದ. ನಾನು ಮನಸ್ಸಿನಲ್ಲೇ, ‘ಮಗನೇ ನೆನ್ನೇನು ಬಂದಿದಿಯಾ ದುಡ್ಡಿಲ್ಲ ದುಡ್ಡಿಲ್ಲ ಅಂತ ಯಾರ್ ಜೋತೆನಾದ್ರು ಬರ್ತೀರ್ತಿಯಲ್ಲ’ ಅಂತ ಶಪಿಸಿದೆ.
ಕೆನ್ನಾಯಿಗಳಲ್ಲಿ ಹೀಗೆ ಸಾಮೂಹಿಕವಾಗಿ ಮಲವಿಸರ್ಜನೆ ಮಾಡುವುದು ತನ್ನ ಗಡಿಗಳನ್ನ ಗುರುತಿಸುವ ಮತ್ತು ತನ್ನ ಇರುವಿಕೆಯನ್ನು ಮತ್ತೊಂದು ಗುಂಪಿಗೆ ತಿಳಿಹೇಳುವ ಒಂದು ಕ್ರಿಯೆ ಮತ್ತು ಇದೆ ಜಾಗದಲ್ಲಿ ಕೆಲವು ತಿಂಗಳ ಹಿಂದೆ ಕೆನ್ನಾಯಿಗಳ ಗುಂಪಿನೊಂದಿಗೆ ಸಣ್ಣ ಮರಿಗಳನ್ನು ನೋಡಿದ್ದೆವು. ಅದು ಸರಿ ಸುಮಾರು 12-15 ಕೆನ್ನಾಯಿಗಳ ಗುಂಪಾಗಿತ್ತು.
ಅಲ್ಲಿಂದ ಮುಂದೆ ಇನ್ನೊಂದು 40 ಮೀಟರ್ನಲ್ಲಿ ಬಲಕ್ಕೆ ವಿಶಾಲವಾದ ಕೆರೆಯಿತ್ತು. ನಾವು ಅಲ್ಲಿ ಹಂದಿ, ಜಿಂಕೆ, ನವಿಲುಗಳನ್ನ ಬಿಟ್ಟರೆ ಬೇರೇನನ್ನೂ ಕಂಡಿರಲಿಲ್ಲ. ಅವತ್ತು ಯಾಕೋ ಆ ಕೆರೆಯಲ್ಲಿ ಕೆಲವು ದೊಡ್ಡ ಬಂಡೆಗಳು ಅರ್ಧ ಮುಳುಗಿ ಅಲ್ಲಾಡುತ್ತಿದ್ದಂತೆ ಕಂಡಿತು. ನೋಡಿದರೆ 2 ಹೆಣ್ಣಾನೆ, ಒಂದು ಮರಿ ನೀರಿಗಿಳಿದಿತ್ತು. ಮರಿಯು ತಲೆಯವರೆಗೂ ನೀರಿನೊಳಗೆ ಮುಳುಗಿ ಸೊಂಡಿಲನ್ನು ಹಾಲಿಗಾಗಿ ಮೇಲೆ ಕೆಳಗೆ ಆಡಿಸುತ್ತಿತ್ತು. ಇನ್ನೆರಡು ಆನೆಗಳು ಅರ್ಧ ಮುಳುಗಿದ್ದು ತಮ್ಮ ಕಡೆಯಿಂದ ಸೊಂಡಿಲು ಎಟುಕುವವರೆಗೂ ಮುಂದೆ ಚಾಚಿ ನೀರನ್ನು ಮೇಲ್ಭಾಗದಿಂದಲೆ ಹೀರುತ್ತಿದ್ದವು.
ನನಗೆ ಇದೊಂದು ಯಾವಾಗಲೂ ಅಚ್ಚರಿಯ ವಿಷಯ. ಇವು ನಿಂತಲ್ಲೇ ನೇರ ಸೊಂಡಿಲನ್ನು ಕೆಳಗಿಳಿಸಿದರೆ ನೀರು ದೊರಕುತ್ತದೆ ಮತ್ತು ನಾನು ಹೇಳಿದ ಹಾಗೆಯೇ ಇವು ನೀರು ಕುಡಿಯುವುದನ್ನು ನಾನು ಗಮನಿಸಿದ್ದೇನೆ. ಆದರೆ ಆಗ ಇವು ಬಹುಪಾಲು ನೀರಿನ ದಂಡೆಯ ಮೇಲೆ ನಿಂತು ಹೀಗೆ ಮಾಡುತ್ತವೆ. ಆಗ ಇವೆರಡನ್ನೂ ತಾಳೆ ಮಾಡಿ ನೋಡಿದರೆ ಬಹುಶಃ ಅವು ಕೆರೆಯ ಒಳಗಡೆ ಇಳಿಯುವುದರಿಂದ ಕೆಳಗಿನ ಕೆಸರೆಲ್ಲ ಮೇಲೆದ್ದು ತನ್ನ ಬಳಿ ಇರುವ ನೀರು ಕೆಸರಾಗಬಹುದೆಂದು ಅವು ಸೊಂಡಿಲನ್ನು ಚಾಚುತ್ತವೆಯೋ ಅಂದುಕೊಂಡರೆ, ಕೆಲವು ಕಡೆ ನೆಲವನ್ನು ಬಗೆದು ಕುಡಿಯುವ ನೀರು ಕೂಡ ಕೆಸರಾಗಿರುತ್ತದೆ. ಅದು ಯಾಕೋ ಈ ತರಹದ ವಿಷಯಗಳಲ್ಲಿ ಪೂರ್ಣಚಂದ್ರ ತೇಜಸ್ವಿ ಹೇಳಿದ ವಿಚಾರ ತಲೆಗೆ ಹೊಳೆಯುತ್ತದೆ “ಸುಮ್ಮನೆ ಅಗತ್ಯ ಇದ್ದಷ್ಟು ಮಾತ್ರ ತಿಳಿದುಕೊಂಡು ಮಿಕ್ಕಿದ್ದನ್ನ ನೋಡಿ ಅಚ್ಚರಿ ಪಡುತ್ತ ಇರುವುದು ಒಳ್ಳೆಯದು”. ಹೀಗೆ ಇವೆಲ್ಲವನ್ನೂ ಗಮನಿಸಿ ಒಂದೆರಡು ಫೋಟೋ ತೆಗೆಯುತ್ತ ನಿಂತಿದ್ದೆವು, ಈ ಎಲ್ಲ ಮೌನವನ್ನು ಕದಡುವ ಹಾಗೆ ನಮ್ಮ ಎದುರಿನಿಂದ ಹಾರ್ನ್ ಹೊಡೆದುಕೊಂಡು ಬರುತಿದ್ದ ಬೈಕ್ ಸವಾರ ನಮ್ಮನ್ನು ನೋಡಿ ದೂರದಿಂದಲೇ ಬ್ರೇಕ್ ತುಳಿದಿದ್ದ ಅದು ಕರ್ಕಶ ಶಬ್ಧ ಮಾಡುತ್ತಾ ನಮ್ಮ ಪಕ್ಕ ಬಂದು ನಿಂತಿತು.
ಬಂದವನೇ ‘ಹೋ… ಆನೆಯಾ!? ನಾನು ಏನೋ ಅನ್ಕೊಂಡೆ, ಸದ್ಯಕ್ಕೆ ಇದೊಂದಾದ್ರು ಸಿಕ್ತಲ್ಲ.’ ಎಂದು ಒಬ್ಬನೇ ಜೋರಾಗಿ ಮಾತಾಡಿಕೊಂಡು ಮುನ್ನಡೆದ. ಇವನ ದುರ್ವರ್ತನೆಯನ್ನು ಕಂಡು ಮುಂದಿದ್ದ ಸೋಮ ನನ್ನನ್ನು ಹಿಂದಿರುಗಿ ನೋಡಿದ, ನಾನು ಅಸಹಾಯಕತೆಯಲ್ಲಿ ಅವನನ್ನು ನೋಡಿದೆ. ಆ ಧ್ವನಿಗೆ ವಿಚಲಿತವಾದ ಆನೆಗಳು ತೊಂದರೆಯಿದೆ ಎಂದು ಭಾವಿಸಿ ಕಾಲ್ಕಿತ್ತವು. ಅಲ್ಲಿಂದ ಅಂಕು ಡೊಂಕುಗಳಲ್ಲಿ ರಸ್ತೆಯು ಬೆಟ್ಟದ ಮೇಲೆ ಹೋಗುತ್ತದೆ. ಆ ದಾರಿಯುದ್ದಕ್ಕೂ ನೀರವ ಮೌನ, ಸುಡು ಬಿಸಿಲು. ದಾರಿಯುದ್ದಕ್ಕೂ ಸಿಗಬಹುದಾದ ಎರಡ್ಮೂರು ಕೆರೆಗಳಲ್ಲಿಯೂ ಏನೂ ಕಾಣಲಿಲ್ಲ. ನಿಧಾನವಾಗಿ ನಾವು ಬಿಳಿಗಿರಿ ರಂಗನಾಥ ದೇವಸ್ಥಾನದ ಬಳಿ ಇರುವ ಚಹಾ ಅಂಗಡಿ ಮುಂದೆ ನಿಂತೆವು. ಚಹಾ ಕುಡಿಯುತ್ತಾ ಮುಂದಿನ ಯೋಜನೆಯ ಬಗ್ಗೆ ಚರ್ಚಿಸಲು ಶುರು ಮಾಡಿದೆವು. ಕ್ಯಾತಮಾರನಗುಡಿ ದಾಟಿಕೊಂಡು ಕೊನೆಯ ತನಿಖಾಠಾಣೆ ವರೆಗೂ ತಲುಪಿ ಮತ್ತೆ ಬಂದ ದಾರಿಯನ್ನೇ ಬಳಸಿ ಊರಿಗೆ ಹೋಗೋಣವೆಂದು ನಿರ್ಧಾರವಾಯಿತು. ಇಲ್ಲಿಂದ ಮುಂದೆ ಸಿಗುವ ಕಾಡು ಮತ್ತು ರಸ್ತೆ ನಮಗೆ ಸ್ವಲ್ಪ ಅಪ್ಯಾಯಮಾನವಾಗಿತ್ತು. ಏಕೆಂದರೆ ಈ ದಾರಿಯು ತೇವಭರಿತ ಎಲೆ ಉದುರುವ ಕಾಡಿನಲ್ಲಿ ಹಾದುಹೋಗುತ್ತಿತ್ತು. ದಾರಿಯಿಂದಲೇ ದೂರದಲ್ಲಿ ಕಾಣುವ ಹುಲ್ಲುಗಾವಲುಗಳು, ದಾರಿಯ ಪಕ್ಕದಲ್ಲೇ ಇರುವ ಕಣಿವೆಗಳು ರೋಮಾಂಚನಗೊಳಿಸುತ್ತಿದ್ದವು. ಇವೆಲ್ಲದಕ್ಕಿಂತ ಹೆಚ್ಚಾಗಿ ಈ ರಸ್ತೆಯಲ್ಲಿ ಪ್ರವಾಸಿಗರಾಗಲಿ, ವಾಹನಗಳಾಗಲಿ ಓಡಾಡುವುದು ತೀರ ಕಡಿಮೆ. ಹಾಗೂ ರಸ್ತೆಯು ಸ್ವಲ್ಪ ಕಿರಿದಾಗಿದ್ದು, ಎಲ್ಲೆಡೆಯೂ ಕಾಡೇ ಆವರಿಸಿದೆ.
ಇದು ಹೇಗೆ ಭಾಸವಾಗುತ್ತಿತ್ತೆಂದರೆ ರಸ್ತೆಯ ಬದಿಯಲ್ಲೇ ಬೆಳೆದ ಲಂಟನಾ ಪೊದೆಗಳು, ಫರ್ನ್ ಜಾತಿಯ ಗಿಡಗಳು ಹಾಗೂ ತಮ್ಮನ್ನು ಬೇರ್ಪಡಿಸಿರುವ ರಸ್ತೆಯನ್ನು ತನ್ನೊಳಗೆ ಆಪೋಶನ ಮಾಡುವಂತೆ ಕಾಣುತ್ತಿತ್ತು. ಈ ದಾರಿಯಲ್ಲಿ ನಮಗೆ ತುಂಬಾ ವನ್ಯಜೀವಿಗಳ ದರ್ಶನವಾಗಿದ್ದು, ಅಲ್ಲಿಂದ ದಾರಿ ಸುತ್ತಿಬಳಸಿಸಾಗಿತ್ತು. ಮತ್ತೊಮ್ಮೆ ನನ್ನ ಕ್ಯಾಮೆರಾ ಐ, ಎಸ್. ಒ. ಬದಲಿಸಿ ಕ್ಯಾಮೆರಾಗೆ ಬೆಳಕು ಸರಿಯಾದ ಪ್ರಮಾಣದಲ್ಲಿ ಹರಿಯುತ್ತಿದೆಯೇ ಎಂದು ಪರೀಕ್ಷಿಸಿಕೊಂಡೆ. ಅಲ್ಲಿಂದ 7-8 ಕಿ. ಮೀ. ಮುಂದೆ ಸಾಗಿದರೆ ಎಡಕ್ಕೆ ಒಂದು ಕೆರೆಯಿದ್ದು, ಅದರ ಬಳಿಯಲ್ಲಿ ಹಲವಾರು ಪ್ರಭೇದದ ಪ್ರಾಣಿ-ಪಕ್ಷಿಗಳನ್ನು ಹಿಂದೆ ನಾವು ಕಂಡಿದ್ದೆವು. ಆ ಕೆರೆ ಹತ್ತಿರವಾದಂತೆ ನಮಗೆ ಯಾವೆಲ್ಲ ಪ್ರಾಣಿಗಳು ಎದುರಾಗಬಹುದೆಂಬ ಕುತೂಹಲದಿಂದ ನಿಧಾನವಾಗಿ ಚಲಿಸುತ್ತಿದ್ದೆವು. ನೀರವ ಮೌನ, ಸುತ್ತಲೂ ಚಿಲಿಪಿಲಿಗುಟ್ಟುವ ಹಕ್ಕಿಗಳ ಕಲರವ, ನಮ್ಮ ಬೈಕ್ ನ ಸದ್ದನ್ನು ಬಿಟ್ಟರೆ ಮಾನವ ನಿರ್ಮಿತ ಯಾವ ಧ್ವನಿಯು ಇಲ್ಲ. ಕೆರೆ ಹತ್ತಿರಾದಂತೆ ಮೈ ಎಲ್ಲಾ ಕಣ್ಣಾಗುತ್ತಿದೆ. ಕೆರೆಯ ಬಳಿ ಬಂದೊಡನೆ ನಮ್ಮ ನಿರೀಕ್ಷೆಗೆ ತಣ್ಣೀರು ಎರಚಿದಂತಾಯಿತು. ನಾವಲ್ಲಿ ಬಂದಾಗಲೆಲ್ಲ ಕೆರೆಯ ಮಧ್ಯೆ ಒಣಗಿದ ಮರದ ಕೊಂಬೆಯ ಮೇಲೆ ಕಾಣುತ್ತಿದ್ದ ಆಮೆಯೂ ಅಂದು ಯಾಕೋ ಕಣ್ಮರೆಯಾಗಿತ್ತು. ನಮ್ಮ ಉತ್ಸಾಹವೆಲ್ಲಾ ಕರಗಿಹೋಯಿತು. ನಮ್ಮ ಮನಸ್ಥಿತಿ ನಮ್ಮ ಬೈಕ್ ಗು ಅರ್ಥವಾಯಿತೋ ಏನೋ? ಅದು ಇದ್ದಕ್ಕಿದ್ದಂತೆ ನಿಷ್ಕ್ರಿಯವಾಯಿತು.
ಸೋಮನು ಕುಳಿತಲ್ಲಿಂದಲೇ ಕೈಯಿಂದ ಕೆರೆಯ ಒಂದಷ್ಟು ಭಾಗವನ್ನು ತೋರಿಸಿ, ‘ಇದರ ತುಂಬಾ ಇದ್ದುವು ಕಡ, ಕಾಡು ನಾಯಿಗಳು. ಏನ್ ಒಂದ್ 30 ಮೇಲೆ ಇದ್ದವೇನೋ! ಆದರೆ ಕ್ಯಾಮೆರಾ ಇರ್ಲಿಲ್ಲ ಆಗ. ಈಗ ಕ್ಯಾಮೆರಾ ಇದೆ ಅವೇ ಸಿಗ್ತಿಲ್ಲಾ ಥತ್ ನನ್ ಮಗಂದು’ ಎಂದು ತೋರಿಸಲು ಎತ್ತಿದ್ದ ಕೈ ಅನ್ನು ಇಳಿಸಿ ನಿಷ್ಕ್ರಿಯವಾಗಿದ್ದ ಬೈಕ್ ಅನ್ನು ಚಾಲು ಮಾಡಿ ನಿರಾಸೆಯಿಂದ ಮುನ್ನಡೆಯಲು ಶುರುಮಾಡಿದ. ಇಲ್ಲಿಯ ತನಕ ನಮಗೆ ಒಮ್ಮೆಯೂ ಮಾರ್ಜಾಲ ಕಾಣದಿದ್ದುದಕ್ಕೆ ಸೋಮನು ತನ್ನದೇ ಒಂದು ಸಿದ್ದಾಂತವನ್ನು ಪ್ರತಿಪಾದಿಸಿದ್ದ, ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕೆನ್ನಾಯಿಗಳನ್ನು ಕಂಡಿದ್ದ ಅವನು ಇವುಗಳೇ ಎಲ್ಲಾ ಜಿಂಕೆ, ಕಡವೆಗಳನ್ನು ಬೇಟೆಯಾಡಿ ಮಾರ್ಜಾಲಗಳನ್ನು ಬೇರೆ ಕಾಡಿನ ಕಡೆ ಹೋಗುವಂತೆ ಮಾಡಿವೆ ಎನ್ನುತ್ತಿದ್ದ. ಇದರಲ್ಲಿ ಸತ್ಯಾಸತ್ಯತೆ ಕಡಿಮೆ ಇದ್ದರೂ ನಮಗೆ ಮಾರ್ಜಾಲಗಳನ್ನು ಕಾಣದ್ದಕ್ಕೆ ಸ್ವಲ್ಪ ಸಮಾಧಾನವಂತೂ ಕೊಡುತ್ತಿತ್ತು.
ಆ ಕೆರೆಯ ಅಕ್ಕ ಪಕ್ಕ ನಾನು ಸಹ ಹಲವಷ್ಟು ಬಾರಿ ಕಾಡು ನಾಯಿಗಳನ್ನು ಕಂಡಿದ್ದೇನೆ. ಒಮ್ಮೆ ನಮ್ಮ ಎದುರೇ ಎಲ್ಲಾ ಕೆನ್ನಾಯಿಗಳು ಸೇರಿ ಒಂದು ಕಡವೆಯನ್ನು ಈ ಕೆರೆಯ ಪಕ್ಕದಲ್ಲಿ ಕೊಂದು ತಿಂದು ತೇಗಿದ್ದನ್ನು ಸಹ ನೋಡಿದ್ದೇವೆ. ಸೋಮ ತನ್ನ ಸಿದ್ದಾಂತವನ್ನು ಹೇಳುತ್ತಿದ್ದಾಗ ಈ ಹಳೆಯ ನೆನಪೆಲ್ಲಾ ನನ್ನ ಕಣ್ಣ ಮುಂದೆ ಬಂದು ಹೋಗುತ್ತಿದ್ದವು. ಕಾಡಿನ ಮಧ್ಯದಲ್ಲಿ ಯಾವುದೇ ವಾಹನವನ್ನು ನಿಲ್ಲಿಸಲು ಅನುಮತಿ ಇಲ್ಲದ ಕಾರಣ ನಿಧಾನವಾಗಿ ಆ ಕೆರೆಯನ್ನು ದಾಟಿ ಮುನ್ನಡೆಯಲು ಶುರುಮಾಡಿದೆವು. ಮುಂದುವರಿದಂತೆಲ್ಲ ಕಾಡು ಮತ್ತೆ ನೀರವ ಮೌನಕ್ಕೆ ಜಾರಿದಂತೆ ಭಾಸವಾಯಿತು. ಮುಂದೆ ಸಾಗುತ್ತಾ ಒಂದು ಸಣ್ಣ ಝರಿ ಬೆಟ್ಟದ ಮೇಲಿಂದ ಕೊರಕಲುಗಳ ಮುಖಾಂತರ ಹಾದು ಹೋಗುತ್ತಿರುವುದು ಕಣ್ ಸೆಳೆಯಿತು. ಅದನ್ನು ದಾಟಲು ಸಣ್ಣ ಸೇತುವೆ ಮೇಲೆಯೇ ರಸ್ತೆ ನಿರ್ಮಾಣವಾಗಿ ಅದಕ್ಕೆ ಹತ್ತಿರವಾಗುತ್ತಿದ್ದಂತೆ ಗೋಪೀ (Whistling thrush) ನ ಇಂಪಾದ ಸಂಗೀತ ಕಿವಿಗೆ ಕೇಳಿಸಿತು. ಅದು ಝರಿಯ ಪಕ್ಕದಲ್ಲಿನ ಪೊದೆ ಮೇಲೆ ಕುಳಿತು ಹಾಡುತ್ತಿತ್ತು. ನಮ್ಮ ಬರುವಿಕೆ ಇಷ್ಟವಾಗದೆ ಎದ್ದು ಮತ್ತೆಲ್ಲೋ ಕೂತು ಹಾಡಲು ಶುರು ಮಾಡಿತು. ಸಮಯ ಆಗಾಗಲೇ ನಾಲ್ಕು ಗಂಟೆ. ಸೂರ್ಯ ಬೆಟ್ಟಗಳ ತುದಿಯಿಂದ ಕೆಳಗಿಳಿಯುತ್ತಿದ್ದ. ಇದ್ದಕಿದ್ದ ಹಾಗೆ ಮೋಡಗಳು ಹೆಪ್ಪುಗಟ್ಟ ತೊಡಗಿದವು.
ಕೆ. ಗುಡಿ ಪ್ರದೇಶದ ಆನೆ ಶಿಬಿರ, ಮಾಹಿತಿ ಕೇಂದ್ರ, ಸಫಾರಿಗೆ ಹೋಗಲು ಇದ್ದ ಎಲ್ಲಾ ಕಛೇರಿಗಳು ನಾವು ಸಾಗುತ್ತಿದ್ದ ರಸ್ತೆಯ ಬಲಕ್ಕೆ ಇದ್ದವು. ಯಾವಾಗಲೂ ಇಲ್ಲಿ ಪ್ರವಾಸಿಗರ ವಾಹನಗಳು ಅಲ್ಲಲ್ಲಿ ನಿಂತಿರುತ್ತಿದ್ದವು. ಆದರೆ ಆಶ್ಚರ್ಯಕರವಾಗಿ ಆ ದಿನ ಅಲ್ಲಿ ಯಾರು ಇರಲಿಲ್ಲ. ಕಛೇರಿಗೆ ಬೀಗ ಬಿಗಿದು ನಿಶ್ಚಿಂತತೆಯಿಂದ ಮಲಗಿತ್ತು. ಅಲ್ಲಿಂದ ಮುಂದೆ ಬಂದು ಸಣ್ಣ ಚೆಕ್ಪೋಸ್ಟ್ ದಾಟಿದೆವು. ಅಲ್ಲಿಂದ ಬಹುಶಃ 40 ಮೀ, ಮುಂದೆ ಬಂದು ಬಲಕ್ಕೆ ತಿರುಗಿದೆವು. ನಾವು ಸಾಗುತ್ತಿದ್ದ ದಾರಿಯ ಎಡಕ್ಕೆ ಗುಡ್ಡ, ಬಲಕ್ಕೆ ಕಡಿದಾದ ರಸ್ತೆ ಸಾಗಿತ್ತು. ಬೆಟ್ಟಗಳನ್ನು ಸೀಳಿ ನಿರ್ಮಿಸಿದ್ದ ದಾರಿ ಅದಾಗಿತ್ತು. ಇದ್ದಕ್ಕಿದ್ದ ಹಾಗೇ ಯಾಕೋ ವಿಚಿತ್ರ ವಾಸನೆಯೊಂದು ಮೂಗಿಗೆ ಅಪ್ಪಳಿಸಿ ನಮ್ಮನ್ನು ಬಡಿದೆಬ್ಬಿಸಿತು. ನಾನೇ ಮೊದಲಿಗೆ ‘ಡೊ ಎಲ್ಲೋ ಒಡದದೆ ಕಡ’ ಅಂದೆ.
ನಮ್ಮ ಮೂಗಿಗೆ ಬಂದ ವಾಸನೆ ಸತ್ತ ಪ್ರಾಣಿಯದ್ದು. ಅದು ಬಹುಶಃ ಬಂದಿದ್ದು ನಮ್ಮ ರಸ್ತೆಯ ಬಲಕ್ಕೆ ಇದ್ದ ಸ್ವಲ್ಪ ಕಡಿದಾದ ಸ್ಥಳದಿಂದ. ಸ್ವಲ್ಪ ಹೊತ್ತು ಗಾಡಿ ನಿಲ್ಲಿಸಿ ಕಿವಿಗು ಕಣ್ಣಿಗೂ ಸ್ವಲ್ಪ ಕೆಲಸ ಕೊಟ್ಟು, ಯಾವುದಾದರೂ ಹಕ್ಕಿಯೋ ಪ್ರಾಣಿಯೋ ಕಾಡಿನೊಳಗೆ ಆಗುತ್ತಿದ್ದ ಸಂಗತಿಗಳ ಬಗ್ಗೆ ಸುಳಿವು ಕೊಡಬಹುದೆಂದು ಕ್ಷಣ ಹೊತ್ತು ಕಾದೆವು, ಆದರೆ ಏನೂ ಸುಳಿವು ಸಿಗಲಿಲ್ಲ. ಸ್ವಲ್ಪ ಹೊತ್ತಿನ ನಂತರ ಹಿಂದೆಯಿಂದ ಯಾವುದೋ ಗಾಡಿ ಬರುತ್ತಿದ್ದ ಶಬ್ದ ಕೇಳಿಸಿತು. ಹತ್ತಿರವಾಗುತ್ತಿದ್ದಂತೆ ಗಾಡಿಯನ್ನು ಗಮನಿಸಿದೆ. ಹಳದಿ ಬಣ್ಣದ ಮೊಟಾರ್ ಬೈಕಿನಲ್ಲಿ ಕಪ್ಪಗೆ ದಪ್ಪಗಿರುವ ವ್ಯಕ್ತಿಯು ಬರುತ್ತಿರುವುದು ಕಂಡಿತು. ಹಸಿರು ಬಣ್ಣದ ಟೋಪಿಯನ್ನ, ಅದನ್ನೇ ಹೋಲುವ ಪ್ಯಾಂಟ್ ಶರ್ಟ್ ಹಾಕಿದ್ದ ಅಲ್ಲೇ ವಾಸಿಸುವ ಸೋಲಿಗ ಜನಾಂಗಕ್ಕೆ ಸೇರಿದ ಸಫಾರಿ ಜೀಪ್ ಓಡಿಸುವ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈ ಎಲ್ಲ ಕಾಡು ಜನರನ್ನೆಲ್ಲ ಮುಖ್ಯವಾಹಿನಿಗೆ ತರುತ್ತೇನೆಂದು ಹೊರಟ ಸರ್ಕಾರದ ಯೋಜನೆಗಳಿಂದ, ಜೇನಿಗಾಗಿ, ಗೆಡ್ಡೆ ಗೆಣಸುಗಳನ್ನು ತಿಂದು ಯಾವುದೇ ಜಂಜಾಟಗಳಿಲ್ಲದೆ ಆರೋಗ್ಯವಾಗಿ ತೆಳ್ಳಗಿನ ದೇಹ ಹೊತ್ತು ಸೂರ್ಯ ಹುಟ್ಟೋಕು ಮುಂಚೆ ಎದ್ದು ರವಿ ಮರೆಯಾಗೋಕು ಮುಂಚೆ ಸೂರು ಸೇರುತಿದ್ದ ಜನರು. ಈಗ ಪಟ್ಟಣದವರ ತರ ಹೊಟ್ಟೆ ಬಿಟ್ಕೊಂಡು, ಅನಾರೋಗ್ಯದಿಂದ ಇರುವುದನ್ನು ನೋಡಿದರೆ ಮುಂದೊಂದು ದಿನ ಅವರು ನಮ್ಮ ಹಾಗೆ ಫಾರ್ಮಸಿಗಳ ಮೊರೆ ಹೋಗೋ ಅಥವಾ ಸಣ್ಣ ಫಾರ್ಮಸಿ ಅಂಗಡಿಗಳನ್ನು ಹಾಡಿಗಳಲ್ಲೆ ಇಟ್ಟುಕೊಳ್ಳುವ ಸಂದರ್ಭ ದೂರವಿಲ್ಲ ಎಂದು ಭಾವಿಸಿದೆ.
ಆ ಮೊಟಾರ್ ಬೈಕ್ ನಮ್ಮನ್ನು ದಾಟಿ ಮುಂದೆ ಬಂದು ನಿಂತು ನಾವು ವಾಸನೆ ಹಿಡಿಯುತ್ತಿದ್ದ ಕಡೆಗೆ ಮುಖ ಮಾಡಿ ನಮ್ಮನ್ನು ನೋಡಿದ. ನಾವು ಹಾಗೆಯೇ ಮಾತಿಗೆ ಎಳೆದೆವು. ಸೋಮ: ಏನ್ರೀ, ಏನ್ ಸಮಾಚಾರ ಸಫಾರಿಗೆ ಹೋಗಿದ್ರಾ? ಏನಾದ್ರೂ ಸೈಟಿಂಗ್ ಆಯ್ತಾ? ಡ್ರೈವರ್: ಲೆಪರ್ಡ್
ಸೋಮ: ಹ ಲೆಪರ್ಡ್ ಹಾ…! ಯಾವಕಡೆ, ಎಷ್ಟೊತ್ತಲ್ಲಿ, ಯಾವ ಬೀಟ್? ಡ್ರೈವರ್: ಹ್ಮ್ ಈ ಕಡೆ. ಎಂದು ತನ್ನ ಕಣ್ಣಿನಲ್ಲೇ ಕಣಿವೆಯ ಯಾವುದೋ ಭಾಗಕ್ಕೆ ನೆಟ್ಟು, ಹೊರಟು ಹೋದ, ಸೋಮ: ಥತ್, ಏನೋ ಇದು ಯಾರೋ ಇವನು ಎಲ್ಲಿ ಅಂತಾನೂ ನೆಟ್ಟಗೆ ಹೇಳಿಲ್ಲ ಇವರ ಕಥೆಗಳೇ ಇಷ್ಟು ಮಾತಾಡೋಕೆ ಕಷ್ಟಾ, ಇವನು ಯಾವಾಗಲೂ ಹೀಗೆ, ಅಂತ ಹೇಳಿ ಅವನಿಗೆ ಇವನ ಜೊತೆ ನಡೆದಿದ್ದ ಇನ್ಯಾವುದೋ ಸಂಭಾಷಣೆಯನ್ನು ಸೇರಿಸಿ ಶಪಿಸಿದ. ಇದೆಲ್ಲಾವನ್ನು ಕೇಳಿಸಿಕೊಳ್ಳುತ್ತಲೇ ವಾಸನೆ ಬಂದ ಕಡೆ ನೋಡುತ್ತಲೇ ಇದ್ದೆ. ಸೋಮ: ನಡಿಯಪ್ಪ ಟೈಂ ಆಗ್ತಿದೆ ಹೋಗೋಣ ಎಂದು ಗಾಡಿ ಸ್ಟಾರ್ಟ್ ಮಾಡಿ ಮುಂದೆ ಹೋದ, ಅಲ್ಲಿಂದ ಒಂದ್ಹತ್ತು ಮೀಟರ್ನಲ್ಲಿ ರಸ್ತೆಯ ಪಕ್ಕದಲ್ಲೇ ಮರವು ಭೂಮಿಯಿಂದ ಒಂದ್ಹತ್ತು ಅಡಿ ಮೇಲಕ್ಕೆ ಬೆಳೆದು ಮತ್ತೆ ಪೂರ್ವಕ್ಕೆ ಬಾಗಿ ಮತ್ತೆ ಮೇಲಕ್ಕೆ ಬೆಳೆದಿತ್ತು, ಆಗಾಗಲೇ ಸೂರ್ಯನ ಕಟ್ಟ ಕಡೆಯ ವಿದಾಯದ ಬೆಳಕಿನ ಕಿರಣಗಳು ಮರದ ಎಲೆಗಳನ್ನ ಸೀಳಿ ಕಪ್ಪಗಿನ ಮರದ ಕಾಂಡಕ್ಕೆ ಬಿದ್ದು, ಅಲಂಕರಿಸಿದ ಹಾಸಿಗೆಯoತೆ ಕಾಣುತಿತ್ತು.! ಆ ದೃಶ್ಯವನ್ನು ನನ್ನ ಜೊತೆ ಅವನು ನೋಡುತ್ತಿದ್ದ. ನೋಡು ಪೋಟೋ ಹೊಡುದ್ರೆ ಆ ಮರದ ಮೇಲೆ ಕುತ್ಕೊಬೇಕು ಆಗ ಹೊಡಿಬೇಕು, ಅದು ಫೋಟೋ ಅಂದ್ರೆ ಅಂದಿದ್ದ. ನಾನು ಬಿಟ್ಟು ಬಿಡದೆ ಆ ಮರವನ್ನೇ ನನ್ನ ಕಣ್ಣಿಂದ ಮರೆಯಾಗುವರೆಗೆ ನೋಡುತ್ತಿದ್ದೆ. ಮತ್ತೆ ಮುಂದೆ ಬಲಕ್ಕೆ ರಸ್ತೆ ತಿರುಗಿ ಮುಂದೆ ಸಾಗಿತ್ತು. ನಮ್ಮಿಂದ ತುಂಬಾ ದೂರದಲ್ಲಿ ಡ್ರೈವರ್ ಬೈಕಿನ ಹಿಂದಿನ ಕೆಂಪು ದೀಪ ಎದ್ದು ಕಾಣುತ್ತಿತ್ತು. ಏನೋ ಮರೆತವನಂತೆ ಸೋಮನು ಇದ್ದಕ್ಕಿದ್ಧ ಹಾಗೇ ಗಾಡಿ ನಿಲ್ಲಿಸಿ ಯೂ ಟರ್ನ್ ತೆಗೆದುಕೊಳ್ಳುತ್ತಿದ್ದ.
ನಾನು ‘ಯಾಕಪ್ಪಾ, ಈಗ ಎನ್ ಆಯ್ತು ಮತ್ತೆ ಯಾಕೆ ವಾಪಸ್?’ ಎಂದೆ. ಅವನು ವಾಪಸ್ ಹಂಗೇ ಹೋಗೋಣ ಈ ಕಡೆ ಏನೂ ಸಿಗಲ್ಲ ಎಂದ. ಇವನ ಹುಚ್ಚಾಟಕ್ಕೆ ತಲೆ ಕೆರೆದುಕೊಂಡು ಸುಮ್ಮನೆ ಕೂತೆ. ಯೂ ಟರ್ನ್ ಮಾಡಿದ ಸ್ಥಳದಿಂದ ವಾಪಸ್ 10 ಮೀ. ಬಂದಿದ್ದೆವು. ರಸ್ತೆಗೆ ಆತುಕೊಂಡಿದ್ದ ಒಂದು ದೊಡ್ಡ ಬಂಡೆ ರಸ್ತೆಯನ್ನು ಅರ್ಧ ಮುಚ್ಚಿದಂತಿತ್ತು. ಸ್ವಲ್ಪ ಎಡಕ್ಕೆ ಬಂದು ಬಲಕ್ಕೆ ತಿರುಗಿ ಕೊಳ್ಳಬೇಕಿದ್ದ ನಾವು ಆ ಬಂಡೆಯ ಪಕ್ಕಕ್ಕೆ ಬರುತಿದ್ದ ಹಾಗೇ ನಮಗಿಲ್ಲಿ ಜೀವನದಲ್ಲೇ ಮರೆಯಲಾಗದ ಅಪೂರ್ವ ದೃಶ್ಯವೊಂದು ಸಿದ್ದವಾಗಿತ್ತು. ನಾವು ನೋಡಿದ ಅದೇ ಮರದ ಮೇಲೆ, ನಮ್ಮ ಕಡೆಗೆ ಬೆನ್ನು ಮಾಡಿ ವಿರಾಜಮಾನವಾಗಿ ಕುಳಿತಿತ್ತು ದೈತ್ಯ ಚಿರತೆ.! ನಮ್ಮ ದಿಢೀರ್ ಆಗಮನ ಕಂಡು ಚಕಿತವಾಗಿ, ಎದ್ದು ಸುತ್ತು ಹಾಕಿ ನಮ್ಮ ಕಡೆ ಮುಖ ಮಾಡಿ ನಿಂತಿತು. ಇಷ್ಟೆಲ್ಲಾ ಆಗಿದ್ದು ಕೆಲವೇ ಸೆಕೆಂಡುಗಳಲ್ಲಿ. ನಮ್ಮ ಅನೇಕ ವರ್ಷಗಳ ಸುತ್ತಾಟ, ಶ್ರಮ, ಕನಸು ಆ ಕ್ಷಣದ ದರ್ಶನದಿಂದ ಈಡೇರಿತ್ತು!
ಎಲ್ಲಾ ಉದ್ವೇಗಗಳನ್ನು ಹಿಡಿತಕ್ಕೆ ತಂದುಕೊಂಡು ಕ್ಯಾಮೆರಾ ಏರಿಸಿ ಫೋಟೋ ಕ್ಲಿಕ್ಕಿಸಲು ಪ್ರಯತ್ನಿಸಿದೆ. ಕ್ಲಿಕ್ ಆಗಲೇ ಇಲ್ಲ ಕೌತುಕದಲ್ಲಿ ಲೆನ್ಸ್ ಕ್ಯಾಪ್ ತೆಗೆಯಲು ಮರೆತಿದ್ದೆ. ಅದನ್ನು ತೆಗೆದು ಮತ್ತೆ ಕ್ಯಾಮೆರಾ ಕಣ್ಣ ಮುಂದೆ ಬರುವ ಹೊತ್ತಿಗೆ ನಮ್ಮ ಬೈಕ್ ಎಷ್ಟು ಹತ್ತಿರ ಮುಟ್ಟಿತೆಂದರೇ, ಚಿರತೆ ಎರಡೇ ಜಿಗಿತಕ್ಕೆ ನಮ್ಮ ಮೇಲೆ ಎರಗಬಹುದಾಗಿತ್ತು. ನಾನು ಸೋಮನನ್ನು ನೋಡಿ ಅವನಿಗೆ ಹೇಳಬೇಕೆಂದರೆ ಅವನು ಕ್ಯಾಮೆರಾ ಸೆಟ್ಟಿಂಗ್ನಲ್ಲಿ ಮುಳುಗಿದ್ದ. ನಾನು ಒಂದೆರಡು ಫೋಟೋ ತೆಗೆಯುವ ಹೊತ್ತಿಗೆ ಎದ್ದು ನಿಂತಿದ್ದ ಹಮ್ಮೀರ, ಹಾಗೇ ಕೂತು ಆಕಳಿಸಿ ಆ ಕಡೆ, ಈ ಕಡೆ ನೋಡಲು ಶುರು ಮಾಡಿದ್ದ. ಅದೊಂದು ಬೃಹತ್ತಾದ ಗಂಡು ಚಿರತೆ ತನ್ನ ಮುಂಗಾಲುಗಳನ್ನ ಮುಂದಕ್ಕೆ ಚಾಚಿ ಹಿಂಗಾಲುಗಳ ಮೇಲೆ ಕುಳಿತಿತ್ತು. ಮೊದಲ ಬಾರಿಗೆ ಕಂಡ ಉದ್ವೇಗ, ಸಂತೋಷ, ಆಶ್ಚರ್ಯಗಳೆಲ್ಲದಕ್ಕೂ ಉಸಿರಾಟ ಜೋರಾಗಿ ಕ್ಯಾಮೆರಾ ಉಸಿರಾಟದ ಏರಿಳಿತಕ್ಕೆ ಓಲಾಡುತಿತ್ತು. ದೀರ್ಘ ಉಸಿರೆಳೆದೆಕೊಂಡು ಫೋಟೋ ಕ್ಲಿಕ್ಕಿಸುತ್ತಿದ್ದೆ.
ಚಿರತೆಯು ಆಗಾಗ ನಮ್ಮತ್ತ ತಿರುಗಿ ಮತ್ತೆ ರಸ್ತೆಯ ಕಡೆಗೆ ಗಮನ ಕೊಡುತ್ತಿತ್ತು. ಅನತಿ ದೂರದಿಂದ ವಾಹನ ಬರುವ ಶಬ್ಧಕ್ಕಿಂತ ಮಹದೇಶ್ವರನ ಹಾಡು ಜೋರಾಗಿ ಕೇಳಿಸುತ್ತಿತ್ತು. ಚಿರತೆ ಶಬ್ಧ ಬಂದ ಕಡೆ ಮೈಯೆಲ್ಲಾ ಕಿವಿಯಾಗಿಸಿ, ಕಿವಿ ಕಣ್ಣು ನೇರ ಆ ಕಡೆಗೆ ನೋಡಿ ಬಾಲ ಮೇಲಿಂದ ಕೆಳಕ್ಕೆ ಬಡಿದು ಸಣ್ಣಗೆ ಗುರುಗುಟ್ಟಿಸಿ ಎದ್ದು ನಿಂತುಕೊಂಡು ತಾನು ಇಳಿಯಬಹುದಾದ ದಾರಿಯನ್ನು ಕಣ್ಣಿನಲ್ಲೇ ಅಳತೆ ಮಾಡತೊಡಗಿತು. ನಮಗೋ ಅದು ಹೊರಟು ಹೋಗಿಬಿಡುತ್ತಲ್ಲ ಎನ್ನುವ ಹತಾಶೆ. ಆದರೆ ವಿಧಿಯಿಲ್ಲದೇ ಕಣ್ಮುಂದೆ ನಡೆಯುವ ದೃಶ್ಯವನ್ನು ಮೈ ಮರೆತು ನೋಡುತ್ತಿದ್ದೆವು. ದೂರದಲ್ಲಿ ಟಾಟಾ ಸುಮೋವೊಂದು ಬರುವುದನ್ನ ಕಂಡು ಚಿರತೆ ತನ್ನ ಮುಂಗಾಲುಗಳಲ್ಲಿ ಬಗ್ಗಿ ನಿಂತು ಒಂದೇ ನೆಗೆತಕ್ಕೆ ಹಾರಿ. ನಮ್ಮ ರೋಚಕತೆಗೆ ಸಂಪೂರ್ಣ ಪರದೆ ಎಳೆಯಿತು. ನಮ್ಮನ್ನು ತದೇಕ ಚಿತ್ತದಿಂದ ಗಮನಿಸಿ ಪೊದೆಗಳ ಹಿಂದೆ ಕಣ್ಮರೆಯಾಯಿತು.
ಹತ್ತಾರು ಬುಂಡೆ ಮಾಡಿಸಿದ ವ್ಯಕ್ತಿಗಳನ್ನು ಹೊತ್ತು ತಂದ ಸುಮೋ ನಮ್ಮನ್ನು ನೋಡಿ ವೇಗ ತಗ್ಗಿಸಿದ ತಕ್ಷಣವೇ ಒಂದೆರಡು ಬುರುಡೆಗಳು ಎಲ್ಲಾ ಕಿಟಕಿಗಳಿಂದ ಹೊರಗಡೆ ಬಂದು ಎಲ್ಲಾ ಕಡೆ ನೋಡಿ ಏನೂ ಇಲ್ಲ ನಡೀರಿ ಎಂದು ಅದೇ ವೇಗದಲ್ಲಿ ಹೊರಟುಹೋದರು. ಅವರಿಗೆ ಇಲ್ಲಿ ನಡೆದ, ನಡೆದಿರಬಹುದಾದ ದೃಶ್ಯದ ಪರಿವೆಯೇ ಇರಲಿಲ್ಲ. ಈ ಎಲ್ಲಾ ವಿದ್ಯಮಾನಗಳಿಂದ ಬೇಸರವಾದರೂ ಏನೋ ಸಾಧಿಸಿದ ಸಂತೋಷ, ತೃಪ್ತಿ ನಮ್ಮಲ್ಲಿ ಮನೆ ಮಾಡಿತ್ತು. ಇವತ್ತಿಗೆ ಇನ್ನೇನು ದರ್ಶನ ಭಾಗ್ಯ ದಕ್ಕದಿದ್ದರೂ ಪರವಾಗಿಲ್ಲ ಕೊನೆಗೂ ಗೆದ್ದೆವು, ಅಂತೆಲ್ಲ ಬೀಗುತ್ತಾ ನಮ್ಮ ಪ್ರಯಾಣವನ್ನು ಮುಂದುವರಿಸಿದೆವು. ಕಾಡಿನ ಮರೆಯಲಾಗದ ಅಪರೂಪದ ದೃಶ್ಯಗಳನ್ನು ಸೆರೆ ಹಿಡಿದಿದ್ದ ಕ್ಯಾಮೆರಾ ಹೆಗಲು ಅಪ್ಪಿಕೊಂಡರೆ ದೂರದ ಮಾಸ್ತಿಯಮ್ಮನ ಗುಡಿಯೊಳಗಿನ ಗಂಟೆಯ ಢಣ್ ಎನ್ನುವ ಶಬ್ಧವು ಕಿವಿಯನ್ನು ಅಪ್ಪಿಕೊಂಡಿತು. ಕಾಡು ನಿಧಾನವಾಗಿ ಕತ್ತಲೊಳಗೆ ಕರಗತೊಡಗಿತು. ನಮ್ಮ ನೆರಳುಗಳು ಗಾಢ ಅಂದಕಾರದಲ್ಲಿ ಜೀವ ಕಳೆದುಕೊಂಡವು. ನೆತ್ತಿಯ ಮೇಲಿನ ಚಂದ್ರ ತಣ್ಣಗೆ ನಮ್ಮನ್ನು ನೋಡಿ ನಗಲಾರಂಭಿಸಿದ್ದ.
ಲೇಖನ: ನವೀನ್ ಜಗಲಿ .
ಚಾಮರಾಜನಗರ ಜಿಲ್ಲೆ.