ಅಳಿವಿನಂಚಿನಲ್ಲಿರುವ ಬಿಳಿ ರಣಹದ್ದು.

ಅಳಿವಿನಂಚಿನಲ್ಲಿರುವ ಬಿಳಿ ರಣಹದ್ದು.

©  ಶಶಿಧರಸ್ವಾಮಿ ಆರ್. ಹಿರೇಮಠ.

ರಾಜಸ್ಥಾನ ರಾಜ್ಯದ ಜೈಸಲ್ಮೇರ್ ಮತ್ತು ಬಾರ್ಮರ್ ಹತ್ತಿರದ ಡೆಸರ್ಟ ನ್ಯಾಷನಲ್ ಪಾರ್ಕಿನಲ್ಲಿ ಹಕ್ಕಿಗಳ ಪೋಟೊಗ್ರಫಿಗಾಗಿ ಗೆಳೆಯರಾದ ಹೇಮಚಂದ್ರ ಜೈನ್ ಹಾಗೂ ಸೂರ್ಯಪ್ರಕಾಶರವರೊಂದಿಗೆ ತೆರೆದ ಜೀಪಿನಲ್ಲಿ ತೇರಳುತ್ತಿದ್ದೇವು. ಕಣ್ಣು ಹಾಸಿದಷ್ಟು ಬರೀ ಮರಳುಗಾಡು, ಅಲ್ಲಲ್ಲಿ ಕಾಣಸಿಗುವ ಕುರುಚಲು ಮರಗಳು. ಒಂದು ಎತ್ತರವಾದ ಮರಳಿನ ದಿಬ್ಬದ ಮೇಲೆ ಕಲ್ಲಿನ ರಾಶಿ. ಆ ಕಲ್ಲಿನ ರಾಶಿಯ ಮೇಲೆ ಸುತ್ತಲಿನ ಪ್ರದೇಶವನ್ನು ಅವಲೋಕಿಸುತ್ತ ಕುಳಿತ ಬಿಳಿ ರಣಹದ್ದು ಕಾಣಿಸಿತು. ತಕ್ಷಣವೇ ಚಾಲಕನಿಗೆ ಹೇಳಿ ಜೀಪನ್ನು ನಿಲ್ಲಿಸಿ ಲೆನ್ಸ್ ಅದರತ್ತ ಗುರಿಮಾಡಿ ನಾಲ್ಕಾರು ಪೋಟೊ ಕ್ಲಿಕ್ ಮಾಡಿಕೊಳ್ಳುತ್ತಿದ್ದಂತೆ ಅದು ಅಲ್ಲಿಂದ ಹಾರಿತು. ತಕ್ಷಣವೆ ಹಾರಿದ ದೃಶ್ಯಗಳ ಕ್ಲಿಕ್ ಮಾಡಿಕೊಂಡೆ. 

ಬಿಳಿ ರಣಹದ್ದುಗಳನ್ನು ಜಾಡಮಾಲಿ ರಣಹದ್ದು ಎಂತಲೂ ಕರೆದು ಆಂಗ್ಲ ಭಾಷೆಯಲ್ಲಿ ಈಜಿಪ್ಟಿಯನ್ ವಲ್ಚರ್ (Egyptian Vulture) ಅಥವಾ ವೈಟ್ ಸ್ಕ್ಯಾವೆಂಜರ್ ವಲ್ಚರ್ (White Scavenger Vulture) ಎಂದು ಕರೆದು, ಪಕ್ಷಿ ಶಾಸ್ತ್ರೀಯವಾಗಿ ನಿಯೋಫ್ರಾನ್ ಪರ್ಕನೊಪ್ಟರಸ್ (Neophron percnopterus) ಎಂದು ಹೆಸರಿಸಿ ಫಾಲ್ಕೋನಿಫಾರ್ಮಿಸ್ (Falconiformes) ಗಣದ ಅಸ್ಸಿಪಿಟ್ರಿಡೇ (Accipitridae) ಕುಟುಂಬಕ್ಕೆ ಸೇರಿಸಲಾಗಿದೆ. ಈಜಿಪ್ಟಿನ ಹಲವು ಪಿರಮಿಡ್ಗಳಲ್ಲಿ ಈ ಪಕ್ಷಿಯ ಚಿತ್ರವನ್ನು ಕೆತ್ತಲಾದ ಕಾರಣ ಈ ಹಕ್ಕಿಗೆ ಈಜಿಪ್ಟಿಯನ್ ವಲ್ಚರ್ ಎಂಬ ಹೆಸರು ಬಂದಿದೆ. “ಪರ್ಕ್ನೋಪ್ಟೆರಸ್” (percnopterus) ಎಂಬ ಪದವು “ಕಪ್ಪು ರೆಕ್ಕೆಗಳು” (black wings) ಎಂದರ್ಥ ಆದರೆ “ನಿಯೋಫ್ರಾನ್” ಪದವು ಗ್ರೀಕ್ ಪುರಾಣದಿಂದ ಬಂದಿದೆ. ಜೀಯಸ್ ನಿಯೋಫ್ರಾನ್ ಮತ್ತು ಈಜಿಪ್ತಿಯಸ್ ನಡುವೆ ಭಾರೀ ಸಂಘರ್ಷ ಉಂಟಾದಾಗ ರಣಹದ್ದುಗಳೆಂದು ನಿರ್ಧರಿಸಿದರು..

©  ಶಶಿಧರಸ್ವಾಮಿ ಆರ್. ಹಿರೇಮಠ.

ಇವು ಸುಮಾರು 60 ರಿಂದ 70 ಸೆಂ.ಮೀ. ನಷ್ಟು ದೇಹಗಾತ್ರವನ್ನು ಹೊಂದಿವೆ. ತಿಳಿಬಿಳಿ ಬಣ್ಣದ ತಲೆ ಹೊಂದಿದ್ದು, ಬಿಳಿ ಮತ್ತು ಕಪ್ಪು ರೆಕ್ಕೆಗಳಿಂದ ಕೂಡಿದ ಮಾಸಲು ಬಿಳಿ ಬಣ್ಣದ ಪಕ್ಷಿಯಾಗಿದೆ. ಮೊಂಡಾದ ಬಾಲವು ಕವಲಾಗಿದೆ. ಮುಖವು ಹಳದಿ ವರ್ಣದಾಗಿದ್ದು, ಬಲಿಷ್ಠವಾದ ಕೊಕ್ಕು ಹಳದಿ ಇದ್ದು, ಕಪ್ಪಾಗಿ ತುದಿಯಲ್ಲಿ ಕೊಕ್ಕೆಯಂತೆ ಬಾಗಿದೆ. ತಿಕ್ಷ್ಣವಾದ ದೃಷ್ಟಿ ಹೊಂದಿರುವ ಕೆಂಪಾದ ಕಣ್ಣುಗಳು. ಬಲಿಷ್ಟವಾದ ತಿಳಿ ಗುಲಾಬಿ ಬಣ್ಣದ ಕಾಲುಗಳಲ್ಲಿ ಉದ್ದವಾದ ಕಪ್ಪಾದ ಉಗುರುಗಳಿವೆ. ಕಾಲ್ಬೆರಳುಗಳು ಮಾಂಸವನ್ನು ಹರಿದು ಭಕ್ಷಿಸಲು ಮಾರ್ಪಟ್ಟಿವೆ.

©  ಶಶಿಧರಸ್ವಾಮಿ ಆರ್. ಹಿರೇಮಠ.

ಬಿಳಿ ರಣಹದ್ದುಗಳು ಮುಖ್ಯವಾಗಿ ಸತ್ತ ಪ್ರಾಣಿಗಳ ಮಾಂಸವನ್ನು ತಿಂದು ಪರಿಸರವನ್ನು ಸ್ವಚ್ಛಗೊಳಿಸುವ ಜಾಡಮಾಲಿ ಹಕ್ಕಿಗಳಾಗಿವೆ. ಕೆಲಸಲ ಸಣ್ಣ ಸಸ್ತನಿಗಳು, ಪಕ್ಷಿಗಳು ಮತ್ತು ಸಣ್ಣ ಸರೀಸೃಪಗಳನ್ನು ಬೇಟೆಯಾಡುತ್ತವೆ. ಇವು ಇತರ ಪಕ್ಷಿಗಳ ಮೊಟ್ಟೆಗಳ ಮೇಲೆ ದೊಡ್ಡ ಬೆಣಚು ಕಲ್ಲುಗಳನ್ನು ಹಾಕಿ ಒಡೆದು ತಿನ್ನುತ್ತವೆ. ಕೆಲಸಲ ಮನುಷ್ಯರ ಮಲವನ್ನು ತಿನ್ನುವುದು ಉಂಟು. ಒಂಟಿಯಾಗಿ ಅಥವಾ ಜೋಡಿಗಳಲ್ಲಿ ಎತ್ತರದ ಕೊಂಬೆ ಅಥವಾ ಕಲ್ಲು ಬೆಟ್ಟದ ತುದಿಯಲ್ಲಿ ಕುಳಿತು ವಿರಮಿಸುತ್ತವೆ. ಭಾರತದಲ್ಲಿ ಆಸ್ಸಾಂ ರಾಜ್ಯವನ್ನು ಹೊರತುಪಡಿಸಿ ಮಿಕ್ಕೆಲ್ಲಡೆ ಕಾಣಸಿಗುತ್ತವೆ. ಕರ್ನಾಟಕದಲ್ಲಿ ನಂದಿಬೆಟ್ಟ, ಸಾವನದುರ್ಗ, ರಾಣೆಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯ, ಮೈದನಹಳ್ಳಿ ಹತ್ತಿರದ ಜಯಮಂಗಲಿ ಅಭಯಾರಣ್ಯ, ಬಂಡೀಪುರ, ದೇವರಾಯನಪುರ, ಹಂಪಿಯ ಗುಡ್ಡಗಾಡು ಪ್ರದೇಶದಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಮೂರು ಉಪಜಾತಿಯ ಬಿಳಿ ರಣಹದ್ದುಗಳಿವೆ.                       

ರೈತರು ಬೇಸಾಯದಲ್ಲಿ ಉಪಯೋಗಿಸುವ ಕೀಟನಾಶಕ ಮತ್ತು ಇತರ ರಾಸಾಯನಿಕಗಳು ನೀರು ಮತ್ತು ಆಹಾರವನ್ನು ಸೇರಿಕೊಂಡು ಇವುಗಳ ದೇಹವನ್ನು ನೇರವಾಗಿ ಸೇರಿ ಅವುಗಳ ಮುಂದಿನ ಸಂತತಿ ನಶಿಸಲು ಕಾರಣವಾಗಿದೆ. ಈ ರಾಸಾಯನಿಕಗಳ ಪ್ರಭಾವದಿಂದ ಅವುಗಳ ಮೊಟ್ಟೆಗಳಲ್ಲಿನ ಸುಣ್ಣದ ಅಂಶ ಕಡಿಮೆಯಾಗಿ ಮೇಲ್ಪದರ ತೆಳುವಾಗುತ್ತಿದ್ದು, ತಾಯಿ ರಣಹದ್ದು ಒಮ್ಮೆ ಮೊಟ್ಟೆಯ ಮೇಲೆ ಕಾವು ಕೊಡಲು ಕುಳಿತರೆ ಒಡೆದು ಮರಿಯಾಗದೇ ವಂಶಾಭಿವೃದ್ಧಿಗೆ ಧಕ್ಕೆಯಾಗುತ್ತಿದೆ. ರೈತರಲ್ಲಿ ರಾಸಾಯನಿಕಗಳ ಬಳಕೆ ಪ್ರಮಾಣದ ಬಗ್ಗೆ ತಿಳುವಳಿಕೆ ಇಲ್ಲದೆ ಬಳಸಿದ್ದು ಬಿಳಿ ರಣಹದ್ದುಗಳ ಸಂತತಿಗೆ ಮಾರಕವಾಗಿದೆ. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಬಿಳಿ ರಣಹದ್ದುಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಈ ಎಲ್ಲ ಅಂಶಗಳಿಂದ ಪರಿಸರ ಸಂರಕ್ಷಣೆಯ ಅಂತರರಾಷ್ಟಿಯ ಒಕ್ಕೂಟದ ಪ್ರಕಾರ ಬಿಳಿ ರಣಹದ್ದುಗಳು ಅಳಿವಿನಂಚಿನಲ್ಲಿವೆ. ಅದು ಸಿದ್ದಪಡಿಸಿರುವ ಅಳಿವಿನಂಚಿನಲ್ಲಿರುವ ಹಕ್ಕಿಗಳ ಪಟ್ಟಿಯಲ್ಲಿ ಬಿಳಿ ರಣಹದ್ದುಗಳನ್ನು ಸೇರಿಸಲಾಗಿದೆ. (Red List of Threatened Species in IUCN (International Union for Conservation of Nature)) ಒಳಪಟ್ಟು ಇದು ಅಳಿವಿನಂಚಿನಲ್ಲಿರುವ ಸಾಧ್ಯತೆಯಿದೆ ಎಂದು ವರ್ಗೀಕರಿಸಲಾಗಿರುವ ಪ್ರಭೇದಗಳ ಕೆಂಪುಪಟ್ಟಿಗೆ ಸೇರಿಸಲಾಗಿದೆ.)                    

ಫೆಬ್ರವರಿಯಿಂದ ಏಪ್ರಿಲ್ ವರೆಗೆ ಎತ್ತರವಾದ ಮರಗಳ ಮೇಲೆ, ಎತ್ತರವಾದ ಬೆಟ್ಟಗಳ ತುದಿಯಲ್ಲಿರುವ ಕಲ್ಲುಗಳ ಸಂದುಗಳಲ್ಲಿ ಕಡ್ಡಿಗಳಿಂದ ಅವ್ಯವಸ್ಥಿತವಾದ ಗೂಡನ್ನು ಕಟ್ಟಿ ಒಂದರಿಂದ ಎರಡು ಮೊಟ್ಟೆ ಇಟ್ಟು, ದಂಪತಿಗಳೆರಡು ಮರಿಗಳನ್ನು ಪೋಷಣೆ ಮಾಡುತ್ತವೆ. ಮರಿಗಳು ನಾಲ್ಕು ತಿಂಗಳ ನಂತರ ಗೂಡು ಬಿಟ್ಟು ಹಾರಲು ಸಜ್ಜಾಗಿರುತ್ತವೆ. ಮರಿಯು ಪ್ರೌಢಾವಸ್ಥೆಗೆ ಕಾಲಿಡಲು ನಾಲ್ಕು ವರ್ಷಗಳು ಬೇಕಾಗುತ್ತದೆ. ಒಮ್ಮೆ ಕಟ್ಟಿದ ಗೂಡನ್ನೇ ಮುಂದಿನ ವರ್ಷಗಳಲ್ಲಿ ಸಂತಾನಾಭಿವೃದ್ಧಿಗಾಗಿ ಉಪಯೋಗಿಸುವುದುಂಟು. ಇವುಗಳು ಮೂವತ್ತು ವರ್ಷಗಳವರೆಗೂ ಬದುಕಬಲ್ಲವು. ನಮ್ಮ ಜೀಪು ಮತ್ತೊಂದು ಹಕ್ಕಿಯನ್ನು ಅರಸಿಕೊಂಡು ತೆರಳಿತು.


ಲೇಖನ: ಶಶಿಧರಸ್ವಾಮಿ ಆರ್. ಹಿರೇಮಠ.
             ಹಾವೇರಿ ಜಿಲ್ಲೆ
.

Print Friendly, PDF & Email
Spread the love
error: Content is protected.