ನಗರವಾಸಿಗಳ ಸಹವಾಸ ಇವುಗಳಿಗೆ ವನವಾಸ!

ನಗರವಾಸಿಗಳ ಸಹವಾಸ ಇವುಗಳಿಗೆ ವನವಾಸ!

©AJAX9_ISTOCK _GETTY IMAGES PLUS

ಹೀಗೊಂದು ದಿನ ಮಾವನ ಮನೆಯ ಅಂಗಳದಲ್ಲಿ ಕುಳಿತಿದ್ದೆ. ಮುಂಚೆ ಬಯಲಾಗಿದ್ದ, ಈಗ ಹಸಿರಿನಿಂದ ಕಂಗೊಳಿಸುತ್ತಿದ್ದ ಮರ ಗಿಡಗಳಿಂದ ಕೂಡಿದ ಮನೆಯ ಮುಂದಿನ ಕೈ-ತೋಟದ ನಡುವಿನ ಆಗಸದ ರಂಗನ್ನು ಸವಿಯುತ್ತಿದ್ದೆ. ವೈಟ್ ಫೀಲ್ಡ್ ನಂತಹ ನಗರದ ಮಧ್ಯೆಯೂ ಸಹ ಸ್ವಲ್ಪ ಜಾಗ ಸಿಕ್ಕರೆ ಹೇಗೆಲ್ಲಾ ಮಾಡಬಹುದು ಎಂಬುದಕ್ಕೆ ಸಣ್ಣ ನಿದರ್ಶನದಂತೆ ಇತ್ತು ಆ ವಾತಾವರಣ. ಈ ವರ್ಷದ ಮೊದಲಲ್ಲಿ ಗಿಡ ತರಲು ನರ್ಸರಿಗೆ ಹೋಗಿ ಕೇಳಿದಾಗ ಸ್ವಲ್ಪ ಬೆಳೆದ ಗಿಡಕ್ಕೆ ಹುಬ್ಬೇರಿಸುವಂತಹ ಬೆಲೆಯನ್ನು ಹೇಳಿದ್ದ ನರ್ಸರಿಯವನು. ಅದೇ ಗಿಡಗಳು ಈಗ ಅವನ ನರ್ಸರಿಯಲ್ಲಿನ ಗಿಡಗಳಿಗಿಂತ ಹೆಚ್ಚಾಗಿ, ಹಸನಾಗಿ ಬೆಳೆದು ನಿಂತಿದೆ. ಹೆಚ್ಚಿನ ನಗರವಾಸಿಗಳ ಬಿಗಿಯಾದ ಜೀವನ ಶೈಲಿಯಲ್ಲಿ ಇವಕ್ಕೆ ಸಮಯ ಕೊಡುವುದಿರಲಿ, ಹೀಗೂ ಮಾಡಬಹುದೆಂದು ಊಹಿಸಿಕೊಳ್ಳುವ ಗೋಜಿಗೂ ಹೋಗಿರುವುದಿಲ್ಲ. ಅಂತಹುದರಲ್ಲಿ ಇಂತಹ ಕೈ-ತೋಟ ಖುಷಿಯ ಅಚ್ಚರಿಯೂ ಹೌದು. ಹಾಕಿದ ಮೂರೇ ವರುಷಕ್ಕೆ ಬೆಳೆದು ಮರವಾಗಿದ್ದ ಗಸಗಸೆ ಮರ (singapore cherry tree), ಕೆಲವು ಅಲಂಕಾರಿಕ ಗಿಡಗಳು, ಬಾಳೆ ಗಿಡ, ದಾಸವಾಳ, ಮಾವಿನ ಗಿಡ ಹಾಗೂ ಇನ್ನೂ ಹಲವು ಸಣ್ಣ ಗಿಡಗಳಿಂದ ಕೂಡಿದ್ದ ‘ಮನೆ-ವನ’ ಅದು.  ಇಷ್ಟೆಲ್ಲಾ ನೋಡಿದ ಮೇಲೆ ನಮ್ಮಂತಹವರಿಗೆ ಬರುವ ಸಾಮಾನ್ಯ ಕುತೂಹಲದ ಪ್ರಶ್ನೆಯೇ ನನ್ನ ತಲೆಯಲ್ಲೂ ಬಂತು. ಇಂತಹ ಮರ-ಗಿಡಗಳು ಇರುವಾಗ ಕೇವಲ ಕಾಗೆ, ಕೋಗಿಲೆಗಳಂತಹ ಪಕ್ಷಿಗಳು ಬಿಟ್ಟು ಬೇರೆ ಯಾವ ಪಕ್ಷಿಗಳು ಭೇಟಿ ನೀಡುತ್ತವೆ? ಎಂದು ಜೋರಾಗಿ ಯೋಚಿಸುವಾಗಲೇ, ಅಕ್ಕನ ‘ಟೇಲರ್ ಬರ್ಡ್ ಬರ್ತವೆ…’ ಎಂಬ ಮಾತು ಕಿವಿಗೆ ಬಿತ್ತು. ಓಹ್ ಎಂದುಕೊಂಡ ಒಂದೆರೆಡು ತಾಸಿನಲ್ಲೇ ‘ಸಿಂಪಿಗ’ ಎಂದು ಕನ್ನಡದಲ್ಲಿ ಕರೆಯಲ್ಪಡುವ ಟೇಲರ್ ಬರ್ಡ್ ಬಂದು ನನ್ನ ಎದುರಿಗಿದ್ದ ಬಟ್ಟೆ ಒಣಹಾಕುವ ದಾರದ ಮೇಲೆ ಕುಳಿತುಕೊಂಡಿತು. ನಾನು ನಿಶ್ಚಲನಾಗಿ ಕುಳಿತಿದ್ದನ್ನು ಗ್ರಹಿಸಿ, ಇವನೇನು ಮಾಡಿಯಾನು ಎಂಬ ಬಂಡ ಧೈರ್ಯದಿಂದಲೋ ಏನೋ ಇನ್ನೂ ಹತ್ತಿರಕ್ಕೆ ಹಾರಿ ಬಂದು, ವಾಪಾಸ್ ಮರಕ್ಕೆ ಹಾರಿತು. ಈ ವರ್ತನೆ ವಿಚಿತ್ರವೋ-ಸಾಮಾನ್ಯವೋ ತಿಳಿಯದೇ ಯೋಚಿಸುವಾಗ, ’ಈ ಪಕ್ಷಿ ಓಡಾಡ್ತಾ ಇರ್ತದೆ ಮಗ್ನೇ… ಮೋಸ್ಟ್ ಲೀ ಗೂಡ್ ಕಟ್ಟಕೆ ಜಾಗ ನೋಡ್ತಾ ಇರ್ಬೋದು’ ಎಂಬ ಮಾವನ ಮಾತು ಅಶರೀರ ವಾಣಿಯಂತೆ ಕೇಳಿತು…

cc_man and animals

ಮಾನವನ ಉಗಮದಿಂದಲೂ ಅವನು ಸಾಮಾಜಿಕ ಜೀವಿಯೇ. ಅಷ್ಟೇ ಅಲ್ಲದೆ ಹಲವು ಕಾಡಿನ ಪ್ರಾಣಿಗಳನ್ನು ತನ್ನ ಕೆಲಸಕ್ಕೆ ಬಳಸಿಕೊಳ್ಳುತ್ತಾ ಅವನ್ನು ಸಾಕುಪ್ರಾಣಿಗಳನ್ನಾಗಿ ಮಾಡಿಬಿಟ್ಟಿದ್ದಾನೆ. ಈಗಿನ ನಾಯಿ, ಹಸು, ಕುರಿ, ಮೇಕೆ, ಕೋಳಿಗಳಂತಹ ಪ್ರಾಣಿಗಳು ಮುಂಚೆ ಕಾಡು ಪ್ರಾಣಿಗಳೇ ಆಗಿದ್ದವು. ಆದರೆ ಕೆಲವು ಜೀವಿಗಳು ತನಗೆ ಸುಲಭವಾಗಿ ಆಹಾರೋಪಚಾರಗಳು ದೊರೆಯುತ್ತವೆಂದೋ, ತನ್ನ ಭಕ್ಷಕ ಪ್ರಾಣಿಗಳಿಂದ ರಕ್ಷಣೆಗೆಂದೋ ಮನುಷ್ಯನ ಸಂಗಡ ಇರಲು ಬಯಸುತ್ತವೆ. ಉದಾಹರಣೆಗೆ ಕಾಗೆ, ಗುಬ್ಬಚ್ಚಿ, ಓತಿಕ್ಯಾತ, ಹಲ್ಲಿಗಳು ಮತ್ತು ಹಲವು ಕೀಟಗಳು. ಆದರೆ ಹೀಗೆ ಕಾಡಿನಿಂದ ವಲಸೆ ಬಂದು ಮನುಷ್ಯನ ವಾಸಸ್ಥಾನಕ್ಕೆ ಸೇರುವ ಇಂತಹ ಪ್ರಾಣಿಗಳಿಗೆ ಆಗುವ ಉಪಯೋಗಗಳ ಜೊತೆಗೇ ತಗಲುವ ಅಪಾಯಗಳೂ ಇವೆ. ನಾವೇನೋ ಅವುಗಳನ್ನು ಕೊಲ್ಲುತ್ತೇವೆ ಎಂದಲ್ಲ. ಬದಲಿಗೆ ನಮಗೆ ತಿಳಿಯದ ಹಾಗೆ ಅವುಗಳ ಜೀವಕ್ಕೆ ಕುತ್ತು ತರುತ್ತಿದ್ದೇವೆ… ಎನ್ನುತ್ತಿದೆ ಕೆಲ ಸಂಶೋಧನೆಗಳು.

ಪ್ರಪಂಚದಾದ್ಯಂತ ಸಂಗ್ರಹಿಸಿದ ನಗರವಾಸಿ ಮನುಷ್ಯ ಮತ್ತು ನಗರದಲ್ಲಿ ಕಾಣಸಿಗುವ ವನ್ಯ ಜೀವಿಗಳು ವಿಸರ್ಜಿಸಿದ ಮಲವನ್ನು ಪರೀಕ್ಷಿಸಿದಾಗ ತಿಳಿದುಬಂದದ್ದು, ಹಳ್ಳಿವಾಸಿ ಮನುಷ್ಯ ಅಥವಾ ಕಾಡಿನಲ್ಲಿ ಸಿಗುವ ಅದೇ ಪ್ರಾಣಿಗಳಲ್ಲಿ ಕಾಣಲು ಸಿಗದ ಹಲವು ರೋಗಕಾರಕ ಸೂಕ್ಷ್ಮ ಜೀವಿಗಳು ನಗರವಾಸಿ ಮಾನವ ಮತ್ತು ನಗರಕ್ಕೆ ಬಂದ ವನ್ಯಜೀವಿಗಳಲ್ಲಿ ಹೇರಳವಾಗಿ ಸಿಗುತ್ತಿದೆಯಂತೆ. ಈ ಹಿಂದಿನ ಸಂಶೋಧನೆಗಳು ಹೇಳುತ್ತವೆ, ಬಂಧನದಲ್ಲಿ ಇಟ್ಟಿರುವ ವನ್ಯಜೀವಿಗಳಲ್ಲಿ ಮನುಷ್ಯನಲ್ಲಿ ಕಂಡುಬರುವ ಜೀರ್ಣಾಂಗ ತೊಂದರೆಗಳು, ರೋಗನಿರೋಧಕ ಶಕ್ತಿ ಹೀನತೆ ಅಥವಾ ಕುಂಠಿತ ಬೆಳವಣಿಗೆಯಂತಹ ತೊಂದರೆಗಳು ಬಂದಿರುವುದು ಗಮನಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ನಗರವಾಸಿ ಮಾನವ ಮತ್ತು ಅಲ್ಲಿನ ವನ್ಯಜೀವಿಗಳ ನಡುವೆ ಇಂತಹ ಸನ್ನಿವೇಶವನ್ನು ಗಮನಿಸಿರುವುದು. ವಿಶೇಷವಾಗಿ ಇದು ಮನುಷ್ಯ ಮತ್ತು ಸರೀಸೃಪಗಳಲ್ಲಿ ಕಂಡು ಬಂದಿರುವುದು.

cc_Urban_wildlife-Cape_Town

ಇನ್ನೂ ನಿಖರವಾಗಿ ಹೇಳುವುದಾದರೆ, ಕೈಗಾರಿಕಾ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಕಂಡುಬರುವ ಬ್ಯಾಕ್ಟೀರಿಯಾಗಳು ಅಲ್ಲೇ ವಾಸಿಸುತ್ತಿರುವ ವನ್ಯಜೀವಿಗಳಲ್ಲೂ ಕಂಡುಬಂದಿವೆ. ಆಶ್ಚರ್ಯವೆಂದರೆ, ಹಳ್ಳಿಗಳಲ್ಲಿ ವಾಸಿಸುವ ಜನರಲ್ಲಿ ಆ ಬ್ಯಾಕ್ಟೀರಿಯಾಗಳು ಇಲ್ಲವೇ ಇಲ್ಲ, ಎನ್ನುತ್ತಾರೆ ಆಂಡ್ರ್ಯೂ ಮೊಲ್ಲರ್ ಎಂಬ ಜೀವಶಾಸ್ತ್ರಜ್ಞ. ಯಾವುದೇ ಜೀವಿಯಾಗಲಿ ಅವುಗಳು ರಕ್ಷಣೆಗೆ ಅಥವಾ ಆಹಾರಕ್ಕೆ ಅಥವಾ ಇನ್ಯಾವುದೋ ಕಾರಣಕ್ಕೆ ಇನ್ನೊಂದು ಜೀವಿಯ ಮೇಲೆ ಆಧರಿಸಿರುತ್ತದೆ. ಹೀಗೆ ಮಾನವ ಮತ್ತು ಅವನಲ್ಲಿ ಸಿಗುವ ಒಳ್ಳೆಯ ಬ್ಯಾಕ್ಟೀರಿಯಾಗಳ ಸಂಬಂಧವೂ ಒಂದು ನಿದರ್ಶನವೇ. ಹೀಗೆ ನಗರದಲ್ಲಿ ಸಿಗುವ ಕೆಲವು ಜೀವಿಗಳಾದ ಅಮೇರಿಕಾ ಭಾಗದಲ್ಲಿ ದೊರೆಯುವ ತೋಳ ಪ್ರಭೇದಕ್ಕೆ ಹತ್ತಿರವಿರುವ ಕೊಯೋಟ್ ಮತ್ತು ಹಲ್ಲಿಗಳ ಮಲವನ್ನು ಮತ್ತು ಅಲ್ಲಿನ ನಗರವಾಸಿ ಮಾನವನ ಒಟ್ಟು 492 ಮಲ ಮಾದರಿಗಳನ್ನು ಡಿ. ಎನ್. ಎ ಪರೀಕ್ಷೆಗೆ ಒಳಪಡಿಸಿದಾಗ ತಿಳಿದದ್ದು, ನಗರವಾಸಿ ಹಲ್ಲಿ ಮತ್ತು ಕೊಯೋಟ್ ಗಳಲ್ಲಿ ಕಂಡುಬಂದ ಸೂಕ್ಷ್ಮಜೀವಿಗಳ ಗುಂಪು ಹಳ್ಳಿವಾಸಿ ಮಾನವರಿಗಿಂತ ಅಥವಾ ಹಳ್ಳಿವಾಸಿ ವನ್ಯಜೀವಿಗಳಿಗಿಂತ ಹೆಚ್ಚು ನಗರವಾಸಿ ಮಾನವರ ದೇಹದಲ್ಲಿ ಕಂಡುಬಂದ ಸೂಕ್ಷ್ಮಜೀವಿಗಳ ಗುಂಪಿಗೇ ಹತ್ತಿರವಿದ್ದವು. ಅದರಲ್ಲೂ ನಗರವಾಸಿ ವನ್ಯಜೀವಿಗಳಲ್ಲಿ ಕಂಡುಬಂದ 18 ಬಗೆಯ ಬ್ಯಾಕ್ಟೀರಿಯಾಗಳು, ಹಳ್ಳಿವಾಸಿಗಳಾಗಿದ್ದ ವನ್ಯಜೀವಿಗಳಲ್ಲಿ ಇಲ್ಲವೇ ಇಲ್ಲ.

ಹಾಗಾದರೆ ಈ ಸೂಕ್ಷ್ಮಜೀವಿಗಳು ಮನುಷ್ಯರಿಂದ ಪ್ರಾಣಿಗಳಿಗೆ ಹೇಗೆ ಹರಡಿರಬಹುದು? ಎಂಬ ಈ ಪ್ರಶ್ನೆಗೆ ಉತ್ತರಿಸುವುದಾದರೆ, ಮನುಷ್ಯನ ಜೀವನದ ಹತ್ತಿರದಲ್ಲೇ ಇರುವ ಇಂತಹ ಜೀವಿಗಳು ಆಹಾರವನ್ನು ಅಲ್ಲಿಯೇ ಹುಡುಕಬೇಕು ಅಲ್ಲವೇ? ಹಾಗೆ ಸತ್ತ ಮನುಷ್ಯನನ್ನು ಆಹಾರವಾಗಿ ಸೇವಿಸಿಯೋ ಅಥವಾ ಮನುಷ್ಯ ತಿಂದು ಎಸೆದ ಆಹಾರವನ್ನು ತಿನ್ನುತ್ತಲೋ ವರ್ಗಾಯಿಸಿರಬಹುದು. ಅದಲ್ಲದೇ ಪ್ರತಿಯೊಬ್ಬ ಮನುಷ್ಯನ ಸುತ್ತಲೂ ನಮ್ಮ ದೇಹದ ಅಥವಾ ನಮ್ಮ ದೇಹದ ಮೇಲೆ ಆಧರಿಸಿರುವ ಬ್ಯಾಕ್ಟೀರಿಯಾಗಳ ಮೋಡವೇ ಇರುತ್ತದೆ. ಮನುಷ್ಯರನ್ನು ಸಮೀಪಿಸುತ್ತಾ ಅಂತಹ ಮೋಡಗಳ ಪರಿಧಿಯೊಳಗೆ ಬಂದ ಜೀವಿಗಳು ಅದೇ ಸೂಕ್ಷ್ಮಜೀವಿಗಳನ್ನು ತನ್ನೊಳಗೆ ಸೆಳೆದಿರಬಹುದು ಎಂದು ಊಹಿಸುತ್ತಾರೆ ಮೊಲ್ಲರ್.

ಈ ಸಂಶೋಧನಾ ಊಹೆಗಳು ನಮಗೆ ನೀಡುತ್ತಿರುವ ನೇರ ಸಂದೇಶ ಇದು. ಮಾನವನ ಕೃತ್ಯಗಳಿಂದ ಬೇಸತ್ತು ಬಾಳಲಾರದೆ ಆಹಾರ, ರಕ್ಷಣೆಯನ್ನರಸಿ ಬಂದ ಜೀವಿಗಳ ದುರಾದೃಷ್ಟಕ್ಕೆ ಇಲ್ಲಿಯೂ ಅವನಿಂದಲೇ ಬದುಕಲಾಗುತ್ತಿಲ್ಲ. ಕಾಡಿನಲ್ಲಿಯೂ ಬಾಳಲು ಬಿಡದೇ, ಇಲ್ಲಿಯೂ ಬದುಕಲಾಗದೇ ಜೀವಿಗಳು ಎತ್ತ ಹೋಗಬೇಕು?

(ಈ ಪ್ರಶ್ನೆಗೆ ನಿಮ್ಮ ಉತ್ತರವನ್ನು comment ಬಾಕ್ಸ್ ನಲ್ಲಿ ತಿಳಿಸಿ ಅಥವಾ [email protected] ಗೆ ಬರೆದು ಕಳಿಸಿ.)

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Print Friendly, PDF & Email
Spread the love
error: Content is protected.