ಪ್ರಕೃತಿ ಬಿಂಬ
ಆಗಸ ನೀಲಿ ಚಿಟ್ಟೆ ©ಕೃಷ್ಣ ದೇವಾಂಗಮಠ
ಲೈಕೆನಿಡ್ಸ್’ “Lycaenidae” ಅಥವಾ ಬ್ಲೂಸ್ ಕುಟುಂಬಕ್ಕೆ ಸೇರಿದ ಈ ಸಣ್ಣ ಚಿಟ್ಟೆಗಳು ಶುಷ್ಕ ಪ್ರದೇಶಗಳನ್ನು ಹೊರತುಪಡಿಸಿ ಭಾರತದೆಲ್ಲೆಡೆ ಕಾಣಸಿಗುತ್ತವೆ. ನೆಲದ ಸಮೀಪ, ನಿಧಾನಗತಿಯಲ್ಲಿ ಹಾರಾಡುವ ಇವುಗಳು ಕುರುಚಲು ಕಾಡು ಮತ್ತು ಹೂವುಗಳನ್ನು ತಮ್ಮ ವಾಸಸ್ಥಾನವಾಗಿ ಆರಿಸಿಕೊಳ್ಳುತ್ತವೆ. ಮಳೆಗಾಲದಲ್ಲಿ ಇವುಗಳ ಕೆಳ ಮೈಬಣ್ಣವು ಬೂದು ಮಿಶ್ರಿತ ಬಿಳಿಯಾಗಿದ್ದು, ಬೇಸಿಗೆಯಲ್ಲಿ ಕಂದು ಬಣ್ಣವನ್ನು ಹೊಂದಿರುತ್ತವೆ. ಗಂಡು ಚಿಟ್ಟೆಯ ಮೇಲ್ಭಾಗವು ತೆಳುವಾದ ಕಪ್ಪು ಅಂಚಿನಿಂದ ಕೂಡಿದ ತಿಳಿ ನೀಲಿ ಬಣ್ಣದ್ದಾಗಿರುತ್ತದೆ ಹಾಗು ಹೆಣ್ಣು ಚಿಟ್ಟೆಯ ಬಣ್ಣವು ಗಂಡಿಗಿಂತ ತೆಳುವಾಗಿದ್ದು, ವಿಶಾಲವಾದ ಕಪ್ಪು ಅಂಚನ್ನು ಹೊಂದಿರುತ್ತದೆ. ಅಶೋಕ, ಹೊಂಗೆ, ಗುಲಗಂಜಿ, ಮುತ್ತುಗ, ಅರಸು ತೇಗ ಮತ್ತು ಏಲಕ್ಕಿ ಮುಂತಾದವುಗಳು ಅತಿಥೇಯ ಸಸ್ಯಗಳಾಗಿವೆ.
ಸಂಧ್ಯೆ ಚಿಟ್ಟೆ © ಕೃಷ್ಣ ದೇವಾಂಗಮಠ
ಆಫ್ರಿಕಾ, ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ವಿವಿಧ ಭಾಗಗಳಲ್ಲಿ ವಿಸ್ತರಿಸಿರುವ ಈ ಚಿಟ್ಟೆಗಳು ‘ನಿಂಫಾಲಿಡೇ’ “Nymphalidae” ಕುಟುಂಬಕ್ಕೆ ಸೇರುತ್ತವೆ. ವರ್ಷ ಪೂರ್ತಿ ಹಾರಾಡುವ ಇವುಗಳು ಕುರುಚಲು ಕಾಡುಗಳಲ್ಲಿ ವಾಸಿಸುತ್ತವೆ. ಮರದ ರಸ, ಹಣ್ಣುಗಳು ಮತ್ತು ಹೂವುಗಳನ್ನು ಆಹಾರವಾಗಿ ಸೇವಿಸುವ ಈ ಚಿಟ್ಟೆಗಳು ಮುಂಜಾನೆ ಮತ್ತು ಮುಸ್ಸಂಜೆಯ ಹೊತ್ತು ನೆಲದ ಸಮೀಪದಲ್ಲಿ ಹಾರಾಡುವುದನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ ಮುಂಗಾರಿನಲ್ಲಿ ರೆಕ್ಕೆಯ ಅಂಚಿನಲ್ಲಿ ಕಣ್ಣಿನಾಕಾರದ ಬಿಂದುಗಳ ಸರಣಿಯನ್ನು ಹಾಗೂ ಬೇಸಿಗೆಯಲ್ಲಿ ಕಣ್ಣಿನಾಕಾರದ ಬಿಂದುಗಳಿಲ್ಲದ ಮಚ್ಚೆಗಳನ್ನು ಕಂದು ಬಣ್ಣದಿಂದ ಇವುಗಳನ್ನು ಗುರುತಿಸಬಹುದಾಗಿದೆ. ಅಕ್ಕಿ ಹುಲ್ಲು, Crytococcum spp, Eleusine spp, Panicum spp, ಮತ್ತು ಜೋಳದ ಹುಲ್ಲು ಇವುಗಳ ಅತಿಥೇಯ ಸಸ್ಯಗಳಾಗಿವೆ.
.
ಗುಂಡು ಕಪ್ಪು ಚುಕ್ಕೆ ಚಿಟ್ಟೆ © ಕೃಷ್ಣ ದೇವಾಂಗಮಠ
ಮೌರಿಟಾನಿಯಾ, ನೈಜರ್, ಸುಡಾನ್, ಉಗಾಂಡಾ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಓಮನ್, ಉತ್ತರ ಆಫ್ರಿಕಾ, ಬಾಲ್ಕನ್ಸ್, ಪಶ್ಚಿಮ ಏಷ್ಯಾ, ಮಧ್ಯ ಏಷ್ಯಾ ಮತ್ತು ಭಾರತದಲ್ಲಿ ಕಂಡುಬರುವ ಈ ಪುಟ್ಟ ಚಿಟ್ಟೆಗಳು, ‘ಲೈಕೆನಿಡ್ಸ್’ “Lycaenidae” ಅಥವಾ ಬ್ಲೂಸ್ ಕುಟುಂಬಕ್ಕೆ ಸೇರಿವೆ. ಈ ಚಿಟ್ಟೆಗಳು ಶುಷ್ಕ ಸವನ್ನಾವನ್ನು ತಮ್ಮ ವಾಸಸ್ಥಾನವಾಗಿ ಆರಿಸಿಕೊಳ್ಳುತ್ತವೆ. ಚಿಟ್ಟೆಯ ಕೆಳಭಾಗವು ಪ್ರಧಾನವಾಗಿ ಕಾಣುವ ಕಪ್ಪು ಗೆರೆಗಳನ್ನು ಹೊಂದಿದೆ. ಈ ಹಿಂದೆ ವಿಶಿಷ್ಟ ಜಾತಿಯೆಂದು ಪರಿಗಣಿಸಲಾಗಿದ್ದ ಇವುಗಳನ್ನು, ಇಂದು ಬಾಲ್ಕನ್ ಪಿಯರೋಟ್ನ ಪೂರ್ವ ಉಪಜಾತಿಗಳೆಂದು ಪರಿಗಣಿಸಲಾಗಿದೆ. Ziziphus nummularia, Ziziphus jujuba, unidentified Ziziphus ಪ್ರಭೇದದ ಸಸ್ಯಗಳು ಇವುಗಳ ಅತಿಥೇಯನ್ನು ನೀಡುತ್ತವೆ.
ಕಿತ್ತಳೆ ತುದಿ © ಕೃಷ್ಣ ದೇವಾಂಗಮಠ
ಭಾರತ ಮತ್ತು ಶ್ರೀಲಂಕಾದಲ್ಲಿ ಕಂಡುಬರುವ ಈ ಚಿಟ್ಟೆಗಳು ‘ಪಿಯರಿಡೆ’ (Pieridae) ಕುಟುಂಬಕ್ಕೆ ಸೇರಿವೆ. ಇವು ಸಾಮಾನ್ಯವಾಗಿ ಪೊದೆ ಮತ್ತು ಹೂಗಳ ಬಳಿ ಆಹಾರಕ್ಕಾಗಿ ಹಾರಾಡುವುದನ್ನು ಕಾಣಬಹುದು. ರೆಕ್ಕೆಗಳ ತುದಿಗಳಲ್ಲಿ ಕಿತ್ತಳೆ – ಹಳದಿ ಬಣ್ಣವಿದ್ದು, ಅಂಚಿನಲ್ಲಿ ಕಪ್ಪು ಬಣ್ಣದ ಮಚ್ಚೆಯನ್ನು ಹೊಂದಿವೆ. ರೆಕ್ಕೆಯ ಅಡಿಗಳಲ್ಲಿ ಬಿಳಿ ಮಿಶ್ರಿತ ಹಳದಿ ಬಣ್ಣವನ್ನು ಹೊಂದಿರುತ್ತವೆ. ಮರಗಾಡೆ ಗಿಡಗಳು ಈ ಚಿಟ್ಟೆಗಳ ಅತಿಥೇಯ ಸಸ್ಯಗಳಾಗಿವೆ.
ಚಿತ್ರಗಳು: ಕೃಷ್ಣ ದೇವಾಂಗಮಠ.
ಲೇಖನ: ದೀಪ್ತಿ ಎನ್.