ಪ್ರಕೃತಿ ಬಿಂಬ

ಕಿಡ್ನಿ ಉದ್ಯಾನ ಜೇಡ © ಡಾ. ಅಮೋಲ್.
ಈ ಜೇಡವು ನೇಕಾರ ಜೇಡಗಳ ಪ್ರಭೇದಕ್ಕೆ ಸೇರುತ್ತವೆ. ಇವು ಸಾಮಾನ್ಯವಾಗಿ ದಕ್ಷಿಣ, ಪೂರ್ವ ಹಾಗು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತವೆ. 6-9mm ನಷ್ಟು ಉದ್ದವಿರುವ ಹೆಣ್ಣು ಜೇಡಗಳು ಗಾತ್ರದಲ್ಲಿ ಗಂಡಿಗಿಂತ ದೊಡ್ಡದಾಗಿರುತ್ತವೆ. ಗಂಡು ಜೇಡಗಳು ಸರಿ ಸುಮಾರು 3-5mm ಉದ್ದವಿರುತ್ತವೆ. ಇದರ ಹೊಟ್ಟೆಯ ಭಾಗವು ದುಂಡಾಗಿದ್ದು, ಸಣ್ಣ ಕೂದಲನ್ನು ಒಳಗೊಂಡಿವೆ. ಈ ಜೇಡಗಳ ಹಿಂಭಾಗವು ಮಾನವನ ಮುಖವನ್ನು ಹೋಲುತ್ತವೆ.

ಏಡಿ ಜೇಡ © ಡಾ. ಅಮೋಲ್.
ಕೀಟಗಳನ್ನು ಭಕ್ಷಿಸುವ ಈ ಏಡಿ ಜೇಡಗಳು ಸಾಮಾನ್ಯವಾಗಿ ಆಸ್ಟ್ರೇಲಿಯಾ ಮತ್ತು ಪೂರ್ವ ಏಷ್ಯಾದಲ್ಲಿ ಕಂಡುಬರುತ್ತವೆ. ಈ ಜೇಡಗಳು ಬಿಳಿ ಬಣ್ಣದ್ದಾಗಿರುತ್ತವೆ ಅಥವಾ ಕೆಲವೂಮ್ಮೆ ಹಳದಿ ಬಣ್ಣದ ಮೇಲ್ಮೈಯನ್ನೂ ಹೊಂದಿರುತ್ತವೆ. ಈ ಕಾರಣದಿಂದಾಗಿ ಪರಭಕ್ಷಕಗಳಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತವೆ. ಈ ಜೇಡಗಳು ಬಲೆಯನ್ನು ಹೆಣೆಯುವುದಿಲ್ಲ, ಬದಲಾಗಿ ಎಲೆ ಮತ್ತು ಹೂಗಳ ಮರೆಯಲ್ಲಿ ಅವಿತುಕೊಂಡು ಹೊಂಚುಹಾಕಿ ಕೀಟಗಳನ್ನು ಹಿಡಿದು ತಿನ್ನುತ್ತವೆ. ಇದನ್ನು ಬಿಳಿ ಹೂವಿನ ಜೇಡ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

ದೈತ್ಯ ಜೇಡ © ಡಾ. ಅಮೋಲ್.
ಪೂರ್ವ ಮತ್ತು ಆಗ್ನೇಯ ಏಷ್ಯಾದಲ್ಲಿ ಈ ಜೇಡಗಳು ಕಂಡುಬರುತ್ತವೆ. ಈ ಜೇಡಗಳ ಬಲೆಯ ರೇಷ್ಮೆಯು ಹೊಳೆಯುವ ಹಳದಿ ಬಣ್ಣದ್ದಾಗಿರುತ್ತದೆ. ಇವುಗಳ ಬಲೆಗಳ ವ್ಯಾಸದ ಅಳತೆಯು ಸಾಮಾನ್ಯವಾಗಿ 0.5-1.0 m ಇರುತ್ತದೆ. ಇವು ಕೀಟಗಳನ್ನು ತಮ್ಮ ಆಹಾರವಾಗಿ ಸೇವಿಸುತ್ತವೆ. ಈ ಜೇಡಗಳ ಬಲೆಯು ಎಷ್ಟು ಬಲಿಷ್ಠವೆಂದರೆ ಕೆಲವೂಮ್ಮೆ ಪುಟ್ಟ ಹಕ್ಕಿಗಳು ಹಾಗೂ ಬಾವಲಿಗಳೂ ಸಹ ಸಿಕ್ಕಿಕೊಳ್ಳುತ್ತವೆ. ಒಂದು ಹೆಣ್ಣು ಜೇಡವು ಸುಮಾರು 2000 ಮೊಟ್ಟೆಗಳನ್ನೊಳಗೊಂಡ ಮೊಟ್ಟೆ ಚೀಲವನ್ನು ಭೂಮಿಯಲ್ಲಿ ಅಥವಾ ಎಲೆಗಳ ಕಸದಲ್ಲಿ ಮರಿಯಾಗಲು ಹುದುಗಿಸಿಡುತ್ತವೆ..

ಮುಳ್ಳು ಜೇಡ © ಡಾ. ಅಮೋಲ್.
ಈ ಜೇಡಗಳಲ್ಲಿನ ಕಿಬ್ಬೊಟ್ಟೆಯ ಮೇಲೆ ಮುಂದೆ ಚಾಚಿರುವ ಆರು ಮೊನಚಾದ ಭಾಗಗಳನ್ನು spines ಎಂದು ಉಲ್ಲೇಖಿಸಲಾಗುತ್ತದೆ. ಇವುಗಳು ಅರಣ್ಯದ ಅಂಚಿನಲ್ಲಿ ಹಾಗು ಕುರುಚಲು ಹುಲ್ಲುಗಾವಲಿನಲ್ಲಿ ಕಂಡುಬರುತ್ತವೆ. ಬಲೆಗಳಲ್ಲಿ ಸಿಲುಕುವ ಬಿಳಿ ನೊಣಗಳು, ಪತಂಗಗಳು ಹಾಗು ಜೀರುಂಡೆಗಳು ಇವುಗಳ ಆಹಾರ. ಗಂಡು ಜೇಡಗಳು ಹೆಣ್ಣು ಜೇಡಗಳಿಗಿಂತ ಗಾತ್ರದಲ್ಲಿ ಸಣ್ಣದಾಗಿರುತ್ತವೆ. ಈ ಜೇಡಗಳು ಹಲವಾರು ಪ್ರಭೇದದ ಜೇಡಗಳ ರೀತಿ ಮಾನವನಿಗೆ ನಿರುಪದ್ರವಿಯಾಗಿವೆ.
ಚಿತ್ರಗಳು: ಡಾ. ಅಮೋಲ್..
ಲೇಖನ: ದೀಪ್ತಿ ಎನ್.