ಸಾವಿರ ವರುಷ ಕಾಡಿದ ಬ್ಯಾಕ್ಟೀರಿಯಾ.
ಶಾಲೆ ತೆರೆಯುತ್ತಿದ್ದುದು ಸುಮಾರು ಒಂಬತ್ತು ಘಂಟೆಯಾದರೂ ನಾವು ಮಾತ್ರ ಬೆಳಗಿನ ಏಳು ಘಂಟೆ ಬಸ್ಸಿಗೇ ಶಾಲೆಗೆ ಬಂದುಬಿಡುತ್ತಿದ್ದೆವು. ಏಕೆಂದರೆ ನಂತರದ 8.30 ಬಸ್ಸು ಸರಿಯಾದ ಸಮಯಕ್ಕೆ ಬರುತ್ತದೆ ಎಂಬ ಎಳ್ಳಷ್ಟು ನಂಬಿಕೆಯೂ ನಮ್ಮಲ್ಲಿ ಇರಲಿಲ್ಲ. ಶಾಲೆಗೆ ತಡವಾಗಿ ಹೋದರೆ ಮುಗಿಯಿತು ಕತೆ. ಅಂದು ಶಾಲೆಗೆ ಸೇರಿಸದೇ ಮನೆಗೆ ಕಳುಹಿಸಿಬಿಡುತ್ತಿದ್ದರು. ಮಕ್ಕಳಿಗೆ ಅದು ಒಳ್ಳೆಯ ವಿಷಯವೆ, ಏಕೆಂದರೆ ಮನೆಗೆ ನಡೆದು ಹೋಗುವ ಆ ಎರಡು ಕಿಲೋಮೀಟರ್ ದಾರಿಯನ್ನು ಅಡಿಗಡಿಗೂ ಲೆಕ್ಕ ಮಾಡಿ ಸುತ್ತ ಮುತ್ತಲ ಕುರುಚಲು ಕಾಡುಗಳಿಗೆ ನುಗ್ಗಿ, ಕಾರೆ ಹಣ್ಣು, ತೋಪ್ರೆ ಹಣ್ಣು, ಕಾಡು ಕರಿಬೇವು ಹಣ್ಣುಗಳನ್ನು ಹೆಕ್ಕಿ, ಅವಕಾಶ ಸಿಕ್ಕರೆ ಕ್ವಾರಿಯ ಬಂಡೆಗಳ ನಡುವೆ ನಿಂತ ನೀರಲ್ಲಿ ಈಜಿ ಮಜಾ ಮಾಡುತ್ತಾ ಮನೆಗೆ ಹೋಗಬಹುದಿತ್ತು. ಆದರೆ ಹಾಗೆ ಮನೆಗೆ ಹೋದರೆ ಬೀಳುವ ಏಟು ನೆನಪಿಗೆ ಬಂದರೆ, ಈ ಸಾಹಸವೆಲ್ಲಾ ಬೇಕೆ ಎನಿಸುತ್ತಿತ್ತು. ಅದಕ್ಕೇ ಶಾಲೆ ತೆರೆಯುವ ಒಂದೆರೆಡು ತಾಸು ಬೇಗನೆ ಬಂದರೆ ಗಿಲ್ಲಿ- ದಾಂಡು, ಲಗೋರಿ, ಕಣ್ಣಾ ಮುಚ್ಚಾಲೆಯಂತಹ ಆಟಗಳಿಗೂ ಅವಕಾಶ ದೊರಕುತ್ತಿತ್ತು. ಹೀಗೆ ಒಂದು ದಿನ ಬೆಳಿಗ್ಗೆ ಶಾಲೆಯ ಆವರಣದಲ್ಲಿ ಆಟವಾಡುವಾಗ ಯಾರಿಗೋ ಒಂದು ಹಾವು ಕಂಡಿತು. ಅದು ಬಹುಶಃ ನಾಗರ ಹಾವಿರಬೇಕು ಸರಿಯಾಗಿ ನೆನಪಿಲ್ಲ. ಆದರೆ ಅದು ನಾ ಕಂಡ ದೊಡ್ಡ ಹಾವಂತು ಖಂಡಿತ. ವಿಚಿತ್ರವೆಂದರೆ ಆ ಹಾವು ಬೇರೆ ಹಾವುಗಳಂತೆ ಮನುಷ್ಯರನ್ನು ಕಂಡರೆ ಕ್ಷಣಾರ್ಧದಲ್ಲಿ ಬಿಲ ಸೇರಿ ಕಾಣೆಯಾಗುವ ಹಾವಿನ ಹಾಗೆ ಇರಲಿಲ್ಲ. ನಾವು ಸುಮಾರು ಜನ ಸುತ್ತ ನಿಂತು ನೋಡುತ್ತಿದ್ದರೂ ಅದು ಮಾತ್ರ ಮಂದಗತಿಯಲ್ಲೇ ತೆವಳುತ್ತಿತ್ತು. ಅದನ್ನು ಕಂಡ ನನಗೆ ಏಕೆ ಹಾಗೆ ಎಂದು ಅರ್ಥವಾಗಲಿಲ್ಲ. ಜೊತೆಗೆ ಸಾಮಾನ್ಯವಾಗಿ ಆಗಿನ ಸಾಮಾನ್ಯ ಹುಡುಗನಂತೆ ನಾನೂ ತಾಳಲಾರದೇ ಒಂದು ಕಲ್ಲು ತೆಗೆದು ಅದರತ್ತ ಎಸೆದೆ. ಅದು ಹಾವಿಗೆ ತಾಗಿ ಸ್ವಲ್ಪ ವೇಗ ಹೆಚ್ಚಿಸಿತಾದರೂ ನಮ್ಮಿಂದ ತಪ್ಪಿಸಿಕೊಳ್ಳುವ ಉತ್ಸಾಹ ಮಾತ್ರ ತೋರಲಿಲ್ಲ. ಸ್ವಲ್ಪ ಸಮಯದ ನಂತರ ಯಾವುದೋ ಸಿದುಗಿನಲ್ಲಿ ಸೇರಿ ಕಾಣದಂತಾಯಿತು. ಅಷ್ಟರಲ್ಲಿ ಶಾಲೆಯ ಪ್ರಾರ್ಥನೆಯ ಗಂಟೆ ಬಾರಿಸಿದ ಕಾರಣ ಪ್ರಾರ್ಥನೆಗೆ ಹೊರಟೆವು. ನಾವು ಮಾಡಿದ್ದ ಈ ಘನಾತ್ಕಾರ್ಯ ನಾವು ಪ್ರಾರ್ಥನೆಗೆ ಸೇರುವ ಮುಂಚೆಯೇ ಮುಖ್ಯೋಪಾಧ್ಯಾಯರ ಕಿವಿಗೆ ಮಿಂಚಿನ ವೇಗದಲ್ಲಿ ಸೇರಿತ್ತು. ಪ್ರಾರ್ಥನಾ ಸಮಯದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಬಂದಿದ್ದ ಆ ತೆಗಳಿಕೆಯ ನುಡಿಗಳು ಈಗಲೂ ಮಾಸದಂತಿವೆ. ಬಹುಶಃ ಹದಿನೈದು ವರುಷಗಳ ಹಿಂದೆ ನಡೆದಂತಹ ಈ ಘಟನೆಗಳ ಕಾರಣದಿಂದಲೇ ನಾನು ಇಂದು ಹಾವಿನ ಬಗ್ಗೆ ಬೇರೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸಾಧ್ಯವಾಗುತ್ತಿದೆ ಎನ್ನಬಹುದು. ನಮ್ಮ ಆ ಹಿಂದಿನ ಘಟನೆಯಲ್ಲಿ ಇನ್ನೂ ಒಂದು ಬಹು ಮುಖ್ಯವಾದ ವಿಷಯವಿದೆ ಅದನ್ನು ನಿಮಗೆ ಹೇಳದೆ ನನ್ನೀ ಅನುಭವ ಪೂರ್ಣಗೊಳ್ಳುವುದಿಲ್ಲ. ಅದೇನೆಂದರೆ ಹಾವಿನ ದ್ವೇಷದ ವಿಷಯ. ಹಾವಿಗೆ ಹೊಡೆದ ಕಾರಣಕ್ಕೆ ಶಾಲೆಯ ಎಲ್ಲರ ಮುಂದೆಯೂ ಛೀಮಾರಿ ಸಿಕ್ಕಿದ್ದು ಸಾಲದು ಎಂಬಂತೆ ನನ್ನೊಬ್ಬ ಅಂದಿನ ಆಪ್ತ ಗೆಳೆಯ ಪ್ರಾರ್ಥನೆ ಮುಗಿದ ಬಳಿಕ ಹತ್ತಿರ ಬಂದು, ‘ನಾಗ್ರಾವು ಸುಮ್ನೆ ಬಿಡಲ್ಲ, ಹನ್ನೆರಡು ವರ್ಷ ಆದ್ರೂ ಅದು ಗ್ಯಾಪ್ನ ಇಟ್ಕೊಂಡಿರ್ತದೆ, ನಿಂಗೈತೆ…!’ ಎಂದು ಹೇಳಿದ ಮಾತುಗಳು ನನ್ನನ್ನು ಸುಮಾರು ದಿನಗಳ ಕಾಲ ಕಾಡಿದ್ದವು. ಡಾ. ವಿಷ್ಣುವರ್ಧನ್ ನಟನೆಯ ನಾಗರಹಾವು ಚಲನಚಿತ್ರದ ‘ಹಾವಿನ ದ್ವೇಷ ಹನ್ನೆರೆಡು ವರುಷ, ನನ್ನ ರೋಷ ನೂರು ವರುಷ’ ಎಂಬ ಹಾಡು ನನ್ನ ಆತ್ಮೀಯನ ಮಾತುಗಳಿಗೆ ಪುಷ್ಠಿ ನೀಡಿದ್ದವು. ನಾನು ಎಷ್ಟರಮಟ್ಟಿಗೆ ಹೆದರಿದ್ದೆನೆಂದರೆ ನಾನು ಹಾವಿಗೆ ಕಲ್ಲು ಹೊಡೆದ ದಿನದಿಂದ ಇನ್ನು ಹನ್ನೆರಡು ವರುಷ ಆ ದಿಕ್ಕಿಗೆ ಸಹ ಕಾಲಿಡಬಾರದು ಎಂದು, ಕಲ್ಲು ಹೊಡೆದ ದಿನ ಯಾವುದು ಇನ್ನು ಹನ್ನೆರಡು ವರ್ಷ ಎಂದರೆ ಎಷ್ಟನೇ ಇಸವಿಯ ತನಕ ನಾನು ಆ ದಿಕ್ಕಿಗೆ ಹೋಗಬಾರದು ಎಂದು ಕ್ಯಾಲೆಂಡರ್ ನಲ್ಲಿ ಗುರುತಿಸಿ ಇಟ್ಟಿದ್ದೆ! ಈಗ ಆ ಪ್ರಸಂಗ ತಮಾಷೆ ಎನಿಸುತ್ತಾದರೂ ಆಗಿನ ಆ ಭಯಕ್ಕೆ ಕೆಲ ದಿನಗಳ ವರೆಗೆ ನನಗೆ ಮದ್ದೇ ಸಿಕ್ಕಿರಲಿಲ್ಲ ಎಂಬುದು ವಾಸ್ತವ.
ಈ ಹಾವಿನ ದಶಕದ ಹಗೆಯು ಕ್ರಮೇಣ ಕಡಿಮೆಯಾಗುವುದಾದರೂ, ಇದ್ಯಾವುದೋ ಬ್ಯಾಕ್ಟೀರಿಯಾದ ಹಗೆ ಶತ-ದಶಕಗಳಾದರೂ ಹಾಗೆಯೇ ಇರುವ ಹಾಗಿದೆ. ಕೆಲವೇ ದಿನಗಳ ಹಿಂದೆ ಕಂಡು ಹಿಡಿದ ಹಾಗೂ ಮಕ್ಕಳಲ್ಲಿ ಶೀತಜ್ವರದ (influenza) ಗುಣಲಕ್ಷಣಗಳನ್ನು ಹೋಲುವ ‘ಹಿಬ್ (Hib)’ ಎಂದು ಕರೆಯಲ್ಪಡುವ ರೋಗ ತರುತ್ತಿದ್ದ ಬ್ಯಾಕ್ಟೀರಿಯಾ ಒಂದು 1300 ವರ್ಷದ ನಂತರ ಬಂದು ಮಕ್ಕಳನ್ನು ಕಾಡಿದೆ ಎಂದರೆ ನೀವು ನಂಬಲೇಬೇಕು. ಹೌದು, ‘ಹೀಮೋಫಿಲಸ್ ಇನ್ಫ್ಲುಎನ್ಸಾ ಟೈಪ್ ಬಿ (Haemophilus influenzae type b’) ಎಂಬ ಈ ಬ್ಯಾಕ್ಟೀರಿಯಾವನ್ನು ಮೊದಲು ಗುರುತಿಸಿದ್ದು, ಕ್ರಿ. ಶ. 550 ರಲ್ಲಿ. ಈ ಮೇಲೆ ಹೇಳಿದ ಹಾಗೆ ಶೀತಜ್ವರ ಗುಣಲಕ್ಷಣವನ್ನು ಹೋಲುವ, ಆದರೆ ಅದಕ್ಕಿಂತಲೂ ಅಪಾಯಕಾರಿಯಾದ ಶ್ವಾಸಕೋಶದ ಉರಿಯೂತ (pneumonia) ಮತ್ತು ಮಿದುಳ್ಪೊರೆಯುರಿತ (meningitis) ಅನ್ನು ಮಕ್ಕಳಲ್ಲಿ ಹೆಚ್ಚಾಗಿ ತರುತ್ತಿದ್ದ ಬ್ಯಾಕ್ಟೀರಿಯಾವಿದು. 1980ರ ನಂತರ ಬಂದ ಲಸಿಕೆಯಿಂದ ಹಿಬ್ ರೋಗವು ಮೂಲೆ ಸೇರಿತು.
ಇಂಗ್ಲೆಂಡಿನ ಒಂದು ರುದ್ರಭೂಮಿಯಲ್ಲಿ ದೊರೆತ ಆರು ವರ್ಷದ ಒಂದು ಮಗುವಿನ ಶವದ ಹಲ್ಲಿನ ಡಿ. ಎನ್. ಎ ಯನ್ನು ಪರೀಕ್ಷಿಸಿದಾಗ ಹಿಬ್ ರೋಗವೂ ಅವನಲ್ಲಿ ಇತ್ತು ಎಂಬ ವಿಷಯ ತಿಳಿಯುತ್ತದೆ. ಎಂದರೆ, ಕ್ರಿ. ಶ. 550 ರಲ್ಲಿ ಕಂಡಿದ್ದ ಅದೇ ಬ್ಯಾಕ್ಟೀರಿಯಾ ನಂತರ 1892ರಲ್ಲೇ ಮತ್ತೆ ಪತ್ತೆಯಾದದ್ದು, ಸರಿಸುಮಾರು 1300 ವರ್ಷಗಳ ಬಳಿಕ. ಇಂಗ್ಲೆಂಡಿಗೆ ಮೊದಲ ಬಾರಿ ಪ್ಲೇಗ್ ಬಂದ ಸಮಯದಲ್ಲೇ ಈ ಹಿಬ್ ರೋಗವೂ ಇತ್ತೆಂದು ತಿಳಿಯುತ್ತದೆ. ಪ್ಲೇಗ್ ರೋಗ ತರುವ ಬ್ಯಾಕ್ಟೀರಿಯಾ ಯರ್ಸಿನಿಯಾ ಪೆಸ್ಟಿಸ್ (Yersinia pestis) ಹಾಗೂ ಹಿಬ್ ರೋಗ ತರುವ ಹೆಚ್. ಇನ್ಫುಎನ್ಸೆ (H. influenzae) ಬ್ಯಾಕ್ಟೀರಿಯಾಗಳಲ್ಲಿ ಹೆಚ್. ಇನ್ಫುಎನ್ಸೆ ಬ್ಯಾಕ್ಟೀರಿಯಾವು ಕೇವಲ ಮನುಷ್ಯರಲ್ಲಿ ಕಾಣಸಿಗುತ್ತವೆ ಎನ್ನುತ್ತಾರೆ ಸಂಶೋಧಕರು. ಆದರೆ ಮಗುವಿನ ದೇಹದಲ್ಲಿ ಇದ್ದ ಯರ್ಸಿನಿಯಾ ಪೆಸ್ಟಿಸ್ ಕುರುಹು ಪತ್ತೆಹಚ್ಚಿದ ವಿಜ್ಞಾನಿಗಳು, ಈ ಮಗುವು ಸಾವನ್ನಪ್ಪಿದ್ದು ಪ್ಲೇಗ್ ರೋಗದಿಂದಲೇ ಎನ್ನುತ್ತಾರೆ. ಅದು ಹೇಗೆಂದರೆ ಹಿಬ್ ರೋಗ ಬಂದು ಬಳಲಿದ್ದ ಮಗುವಿನ ದೇಹಕ್ಕೆ ಪ್ಲೇಗ್ ಬಂದು ಅವನ ಸಾವಿಗೆ ಕಾರಣವಾಗಿದೆ ಎಂದು ಸಂಶೋಧಕರು ಊಹಿಸುತ್ತಾರೆ. ಇದಕ್ಕೆ ಬಲವಾದ ಕಾರಣವೂ ಇದೆ. ಅದೇನೆಂದರೆ ಹಿಬ್ ರೋಗವು ಶ್ವಾಸಕೋಶ ಸಂಬಂಧಿ ಖಾಯಿಲೆಯನ್ನು ಉಂಟುಮಾಡುತ್ತದೆ. ನಂತರ ನಿಧಾನವಾಗಿ ತೆರಳಿ ಕಾಲಿನ ಮಂಡಿಗೆ ತಲುಪಿದ ಬಳಿಕ ಮಂಡಿಚಿಪ್ಪು ಮತ್ತು ತೊಡೆಯ ಮೂಳೆಯನ್ನು ಕರಗಿಸಿ ಎರಡನ್ನೂ ಕೂಡಿಸಿ ಒಂದು ಮಾಡಿಬಿಡುತ್ತದೆ. ಹೀಗೆ ಆಗಲು ಕೆಲವು ವಾರಗಳೇ ಹಿಡಿಯುತ್ತದೆ. ಅಷ್ಟರಲ್ಲಿ ಪ್ಲೇಗ್ ರೋಗ ಆವರಿಸಿ ಮಗುವಿನ ಸಾವಿಗೆ ಕಾರಣವಾಗಿದೆ.
ಇಂತಹ ಸಂಶೋಧನೆಗಳಿಂದ ರೋಗಕಾರಕಗಳು ಹೇಗೆ ಹರಡುತ್ತವೆ? ಎಲ್ಲಿಯವರೆಗೆ ಬದುಕಿರಬಲ್ಲವು? ವರುಷಗಳುರುಳಿದಂತೆ ಕ್ರಮೇಣ ಹೇಗೆ ನಶಿಸುತ್ತವೆ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಬೇಕಾದ ಕೀಲಿ ಅಂಶಗಳನ್ನೂ ಹಾಗೂ ಪೂರಕ ವಸ್ತು ವಿಷಯವನ್ನೂ ಒದಗಿಸುತ್ತದೆ. ಪ್ರಾಚೀನ ರೋಗಗಳು ಮತ್ತು ಮುಂಬರಬಹುದಾದ ರೋಗಗಳನ್ನು ಸಮರ್ಥವಾಗಿ ಅಳೆಯಲು ಮತ್ತು ಎದುರಿಸಲು ಇದೊಂದು ಹಿರಿಹೆಜ್ಜೆ ಎಂದರೆ ತಪ್ಪಾಗಲಾರದು ಎಂದು ಪ್ರಪಂಚದ ಹಲವು ರೋಗ ತಜ್ಞರು, ಸಂಶೋಧಕರು ಮತ್ತು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಏನಾದರೇನು ಸಾಮಾನ್ಯನಾಗಿ ಈ ಸಂಶೋಧನೆಯನ್ನು ಅರ್ಥ ಮಾಡಿಕೊಳ್ಳುವುದಾದರೆ, ಬಹುಶಃ ನಾನು ಚಿಕ್ಕಂದಿನಲ್ಲಿ ಅಂದುಕೊಂಡಂತೆ ಹಾವಿನ ದ್ವೇಷ ಹನ್ನೆರೆಡು ವರುಷ ಎಂಬ ಮೂಢ ಭಾವನೆಯೇ ನಮ್ಮಲ್ಲಿ ಸಾವಿರಾರು ವರ್ಷಗಳು ಉಳಿದು ಬಂದಿದೆ ಎಂದರೆ, ಈ ಬ್ಯಾಕ್ಟೀರಿಯಾದ ಶೇಷ ಸಾವಿರಾರು ವರುಷಗಳವರೆಗೂ ಹಬ್ಬಿದೆ ಎಂಬ ಇಂತಹ ವೈಜ್ಞಾನಿಕ ವಾಸ್ತವಗಳನ್ನು ನಂಬಲು ಇನ್ನೆಷ್ಟು ಸಮಯ ಬೇಕೋ….!
ಮೂಲ ಲೇಖನ: ScienceNewsforStudents
ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.