ಕಂದಕ ರತ್ನ ಕೊಡತಿ ನೊಣದ ಗೊದ್ದ ಭಕ್ಷಣೆ.

ಕಂದಕ ರತ್ನ ಕೊಡತಿ ನೊಣದ ಗೊದ್ದ ಭಕ್ಷಣೆ.

© ಶಶಿಧರಸ್ವಾಮಿ ಆರ್.ಹಿರೇಮಠ.

ಮಾಗಿಯ ಚಳಿಗೆ ಸುತ್ತಮುತ್ತಲಿನ ಜೀವಸಂಕುಲವೆ ಮಂಕಾಗಿ ವಿಶ್ರಮಿಸುತ್ತಿತ್ತು. ಭೂತಾಯಿಯ ಒಡಲಾಳದಿಂದ ಮೇಲೆ ಬಂದ ರವಿಯು ಜೀವಜಗತ್ತಿನಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿತ್ತು. ಈ ಕೊರೆವ ಚಳಿಯಲ್ಲೂ ಮ್ಯಾಕ್ರೋ ಪೋಟೋಗ್ರಫಿ ಮಾಡುವ ಹಂಬಲದಿಂದ ನಾನು ಕ್ಯಾಮೆರಾ ಹಿಡಿದು ಮನೆಯಿಂದ ಹೊರ ನಡೆದು, ಮ್ಯಾಕ್ರೋ ಫೋಟೋಗ್ರಫಿಗೆ ಬೇಕಿರುವಂತಹ ಜೀವಿಗಳನ್ನು ಅರಸುತ್ತಾ ಮನೆಯಿಂದ ಸ್ವಲ್ಪ ದೂರದಲ್ಲಿರುವ ಪಕ್ಕದ ಹೊಲಕ್ಕೆ ಕಾಲಿಟ್ಟೆ. ಆ ಹೊಲದಲ್ಲಿ ನಿರ್ಮಿಸಿದ್ದ ನೀರಿನ ಇಂಗುಗುಂಡಿ ಕಂದಕವಾಗಿ ಮಾರ್ಪಟ್ಟಿತ್ತು. ಇದರ ಹತ್ತಿರದಲ್ಲಿದ್ದ ಬೇಲಿಯ ಸಾಲಿನಲ್ಲಿ ಅರಳಿನಿಂತ ಮಿಳ್ಳಿ ಹೂವು (Ipomoea indica), ಅದರ ಮೇಲೆ ಬಿದ್ದ ತುಂತುರು (ಇಬ್ಬನಿ) ಹನಿಗಳು ಆಗ ತಾನೇ ಇಳೆಗೆ ಇಳಿದ ಸೂರ್ಯ ರಶ್ಮಿಯ ಕೃಪೆಯಿಂದ, ಪೋಣಿಸಿದ ಮುತ್ತಿನ ಹಾರದಂತೆ ಕಣ್ಸೆಳೆದವು. ಅವುಗಳ ಫೋಟೋ ಕ್ಲಿಕ್ಕಿಸುತ್ತಿದ್ದೆ. ನನ್ನ ಈ ಏಕಾಗ್ರತೆಗೆ ಭಂಗ ತರುವಂತೆ ರುಯ್ಯನೆ ಸಣ್ಣ ಜೀವಿಯೊಂದು ಕಣ್ಣಿನ ಮುಂದೆಯೇ ಹಾರಿ ಹೋದಂತೆ ಭಾಸವಾಯಿತು. ಹೋದದ್ದು ಏನಿರಬಹುದು ಎಂದು ಯೋಚಿಸುತ್ತಿರುವಾಗ ಬೇಲಿ ಸಾಲಿನ ಪಕ್ಕದಲ್ಲಿರುವ ತುಂಡಾದ ಗಂಜಿಮುಳ್ಳಿನ (Azima tetracantha) ಟೊಂಗೆಯಲ್ಲಿ ಏರೋಪ್ಲೇನ್ ಚಿಟ್ಟೆಯೊಂದು ಕುಳಿತಿರುವುದು ಕಂಡಿತು.

 ಈ ಏರೋಪ್ಲೇನ್ ಚಿಟ್ಟೆಯು, ರೆಕ್ಕೆ ಗೊದ್ದವನ್ನು ಹಿಡಿದು ತಂದು ಚಪ್ಪರಿಸಿ ಸ್ವಾದಿಸುತ್ತಿತ್ತು. ಕ್ಯಾಮೇರಾದ ಲೆನ್ಸ್ ಅದರತ್ತ ಗುರಿಮಾಡಿ ಫೋಟೋ ಕ್ಲಿಕ್ಕಿಸಲು ಮುಂದಾದೆ. ಆದರೆ ನಾನು ಸೂರ್ಯನಿಗೆ ಅಭಿಮುಖವಾಗಿ ನಿಂತಿದ್ದ ಕಾರಣ ಆ ಏರೋಪ್ಲೇನ್ ಚಿಟ್ಟೆಯು ಸಿಲ್ಲೋಟ್ ಆಗಿ ಕಂಡಿತು. ಹಿನ್ನೆಲೆ (ಬ್ಯಾಕ್ ಗ್ರೌಂಡ್) ಯಲ್ಲಿ ತುಂಬಾ ಅಡೆ-ತಡೆಗಳೂ ಸಹ ಇದ್ದುದರಿಂದ ಫೋಟೋಗಳು ಸರಿಯಾಗಿ ಬರುವುದಿಲ್ಲವೆಂಬುದು ಅರಿತು ನಾ ನಿಂತಿದ್ದ ವಿರುದ್ಧ ದಿಕ್ಕಿಗೆ ಹೋಗಿ ಫೋಟೋ ತೆಗೆಯಲು ನಿರ್ಧರಿಸಿದೆ. ನನ್ನ ಚಲನವಲನಗಳು ಆ ಜೀವಿಯ ಔತಣಕೂಟಕ್ಕೆ ತೊಂದರೆ ನೀಡಬಹುದು ಎಂಬ ಕಳವಳದಿಂದ ಹಾಗೇ ಸ್ವಲ್ಪ ಹಿಂದೆ ಸರಿದು ಬೇಲಿಸಂದಿಯಲ್ಲಿ ನುಸುಳಿ ನಿಧಾನವಾಗಿ ನಡೆದು ಅದರ ಮುಂದೆ ಬಂದು ನಿಂತೆ. ಅಲ್ಲಿ ಒಳ್ಳೆ ಹಿನ್ನೆಲೆಯೂ (ಬ್ಯಾಕ್ ಗ್ರೌಂಡ್) ಸಿಕ್ಕಿತು. ಉಪಹಾರವನ್ನು ಸೇವಿಸುವುದರಲ್ಲಿ ಮಗ್ನವಾಗಿದ್ದ ಏರೋಪ್ಲೇನ್ ಚಿಟ್ಟೆಯ ಛಾಯಾಚಿತ್ರಗಳನ್ನು, ನನ್ನ ಕ್ಯಾಮೇರಾ ಮುಖಾಂತರ ಚಟ್ರ್… ಚಟ್ರ್… ಎಂದು ಶಬ್ದ ಮಾಡಿ ದಾಖಲಿಸತೊಡಗಿದೆ. ಈ ಜೀವಿಯ ಹೆಸರು “ಕಂದಕ ರತ್ನ ಕೊಡತಿ ನೊಣ.”

© ಶಶಿಧರಸ್ವಾಮಿ ಆರ್.ಹಿರೇಮಠ

ಕಂದಕ ರತ್ನ ಕೊಡತಿ ನೊಣದ ವಿವರಣೆ

ಕೊಡತಿ ನೊಣಗಳು ಶಿರಭಾಗದಲ್ಲಿ ಎರಡು ಸಂಯುಕ್ತ ಕಣ್ಣುಗಳನ್ನು (compound eye) ಹೊಂದಿದ್ದು, ಅದರ ಕೆಳಗೆ ಅಗೆಯುವ ಅಂಗವಾದ ಮ್ಯಾಕ್ಸಿಲ್ಲವನ್ನು (Maxilla) ಮತ್ತು ದವಡೆಯ ಮೂಳೆಯಾದ ಹಸ್ವಸ್ಥಿ ಅಂದರೆ ಮ್ಯಾಂಡಿಬಲ್ (Mandibles)ಗಳನ್ನು ಹೊಂದಿರುತ್ತವೆ. ಮೇಲ್ತುಟಿಯಾದ ಲೇಬ್ರಮ್ (Labrum) ಕೆಳಗೆ ತಲೆಯ ಎರಡೂ ಬದಿಗಳಲ್ಲಿ ಸಂಯೋಜಕ ಸ್ನಾಯುಗಳು ಜೋಡಿಸಲ್ಲಟ್ಟಿವೆ ಹಾಗೂ ಈ ದವಡೆಗಳು ತುಂಬಾ ಉತ್ತಮವಾದ ಚಲನೆಯನ್ನು ಹೊಂದಿದ್ದು, ಕತ್ತರಿಸುವ, ಅಗಿಯುವ ಮತ್ತು ಪುಡಿಮಾಡುವ ಶಕ್ತಿಯನ್ನು ನಿರ್ವಹಿಸಿ ಅಪಹರಿಸಿದ ಬೇಟೆಯನ್ನು ಭಕ್ಷಿಸುತ್ತವೆ. ಬೇಟೆಯು ಎಷ್ಟೇ ಗಟ್ಟಿಯಾಗಿದ್ದರೂ, ಘನ ಆಹಾರವಾದರೂ ಸಹ ದವಡೆಗಳು ಅದನ್ನು ನುರಿಸಬಲ್ಲವು.

© ಶಶಿಧರಸ್ವಾಮಿ ಆರ್.ಹಿರೇಮಠ

ಈ ಏರೋಪ್ಲೇನ್ ಚಿಟ್ಟೆಗಳನ್ನು ನಮ್ಮೂರಲ್ಲಿ ರೈತರು “ಕಲ್ಲ್ ವಡ್ಡ” ಗಳೆಂದು ಕರೆಯುವರು. ಇವು ಅಧಿಕ ಸಂಖ್ಯೆಯಲ್ಲಿ ಹಾರಾಟವನ್ನು ನಡೆಸುತ್ತಾ ಇದ್ದರೆ ಆ ದಿನ ಮಳೆ ಬರುವುದೆಂಬ ನಂಬಿಕೆ, ಈಗಲೂ ರೈತಾಪಿ ಜನರಲ್ಲಿದೆ. ಅದು ಸತ್ಯವೂ ಆಗಿದೆ. ನಾನು ಕನ್ನಡದಲ್ಲಿ ಈ ಏರೋಪ್ಲೇನ್ ಚಿಟ್ಟೆಗೆ “ಕಂದಕ ರತ್ನ ಕೊಡತಿ ನೊಣ” ಹೆಸರು ತುಂಬ ಸೂಕ್ತ ಎಂದು ಭಾವಿಸುವೆ. ಕಾರಣ ಇವು ಯಾವಾಗಲೂ ಕಂದಕದಂತಹ ಜಾಗದಲ್ಲಿ ಕಂಡುಬರುತ್ತವೆ. ಇವನ್ನು ಇಂಗ್ಲೀಷಿನಲ್ಲಿ ಡಿಚ್ ಜ್ಯುವೆಲ್ ಡ್ರಾಗನ್‌ಫ್ಲೈ (Ditch Jewel Dragonfly) ಎಂದು ಕರೆದು ವೈಜ್ಞಾನಿಕವಾಗಿ ಬ್ರಾಕಿಥೆಮಿಸ್ ಕಂಟಾಮಿನಟಾ (Brachythemis contaminata) ಎಂದು ಹೆಸರಿಸಿದ್ದಾರೆ. ಸಂದೀಪದಿಗಳ ಕೀಟ ವರ್ಗದ ಓಡೋನಾಟ (Odonata) ಗಣದ ಲಿಬೆಲ್ಲುಲಿಡೆ (Libellulidae) ಕುಟುಂಬಕ್ಕೆ ಸೇರಿದೆ.

ಗಂಡು ಕೊಡತಿ ನೊಣವು 18-21 mm ರಷ್ಟು ಉದ್ದವಿದ್ದು, ಮುಂದಿನ ಹಾಗೂ ಹಿಂದಿನ ರೆಕ್ಕೆಗಳು 20-23 mm ನಷ್ಟು ಉದ್ದವಾಗಿವೆ. ಹೆಣ್ಣು ಕೊಡತಿ ನೊಣವು 18-20 mm ರಷ್ಟು ಉದ್ದವಿದ್ದು, ಮುಂದಿನ ಹಾಗೂ ಹಿಂದಿನ ರೆಕ್ಕೆಗಳು 22-25 mm ಉದ್ದವಾಗಿವೆ. ಇವುಗಳಿಗೆ ಕಂದು-ಟೋಪಿಯ ಹಳದಿ ಮಿಶ್ರಿತ ಹಸಿರು ಕಣ್ಣುಗಳಿವೆ. ಇದರ ಎದೆಯು ಆಲೀವ್ ಕಂದು ಬಣ್ಣದ್ದಾಗಿದ್ದು, ಉದರ ಬದಿಯಲ್ಲಿ ಕೆಂಪು ಮಿಶ್ರಿತ ಕಂದು ಬಣ್ಣದ ಪಟ್ಟೆಗಳಿಂದ ಹಾಗೂ ಕೆಳಭಾಗವು ಕಂದು ಪಟ್ಟೆಗಳಿಂದ ಕೂಡಿದೆ. ನಾಲ್ಕು ರೆಕ್ಕೆಗಳು ಪಾರದರ್ಶಕವಾಗಿದೆ. ವಿಶಾಲವಾದ, ಪ್ರಕಾಶಮಾನವಾದ ಕಿತ್ತಳೆ ತಂತುಕೋಶವು ತಳದಿಂದ 2 ರಿಂದ 3 ಕೆಂಪು ಬಣ್ಣದ ಟೆರೊಸ್ಟಿಗ್ಮಾ ಕೋಶಗಳವರೆಗೆ ವಿಸ್ತರಿಸಿವೆ. ಹೊಟ್ಟೆಯು ಕೆಂಪು ಬಣ್ಣದ್ದಾಗಿದೆ. ಗುದದ ಉಪಾಂಗಗಳು ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿವೆ. ಗಂಡು ಕೊಡತಿ ನೊಣಕ್ಕೆ ಹೋಲುತ್ತದೆಯಾದರೂ ತಿಳಿ ಹಳದಿ ಮಿಶ್ರಿತ ಹಸಿರು ಬಣ್ಣದಲ್ಲಿದೆ. ರೆಕ್ಕೆಗಳು ಪಾರದರ್ಶಕವಾಗಿ ತಳದಲ್ಲಿ ಹಳದಿ ಬಣ್ಣದ ಛಾಯೆಯನ್ನು ಹೊಂದಿರುತ್ತವೆ. ಆದರೆ ಗಂಡಿನಲ್ಲಿ ಕಂಡುಬರುವ ಪ್ರಕಾಶಮಾನವಾದ ಕಿತ್ತಳೆ ತಂತುಕೋಶವು ಹೆಣ್ಣುಗಳಲ್ಲಿ ಇರುವುದಿಲ್ಲ. ಇವು ಕಳೆಯುಕ್ತ ಕೊಳಗಳು, ಸರೋವರಗಳು ಇಲ್ಲವೇ ನಿಧಾನಗತಿಯಲ್ಲಿ ಹರಿಯುವ ತೊರೆಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ವಿಶೇಷವಾಗಿ ನಿಂತ ನೀರಿನಲ್ಲಿ. ಕೊಳಚೆ ಕಾಲುವೆಗಳು, ತೊಟ್ಟಿಗಳು, ಕೊಳಗಳು ಮತ್ತು ಹಳ್ಳಗಳ ಪ್ರದೇಶದ ಉದ್ದಕ್ಕೂ ಇವು ತುಂಬ ಸಾಮಾನ್ಯವಾಗಿ ಕಾಣಸಿಗುತ್ತವೆ.

ಕೊಡತಿ ನೊಣವು ಬೇಟೆಯಾಡಿ ತಂದಿದ್ದ ಗೊದ್ದದ ತಲೆ, ರೆಕ್ಕೆ, ರುಂಡ-ಮುಂಡ ಮತ್ತು ಕಾಲುಗಳನ್ನು ಒಂದೊಂದಾಗಿ ಭಾರಿ ಭೋಜನದಂತೆ ಅಗೆದು ನುಂಗಿ ಮುಗಿಸಿತು. ಈಗ ಅದಕ್ಕೆ ನಾನು ಇರುವುದು ಲಕ್ಷ್ಯವಾಗಿರಬೇಕು, ತನ್ನ ಸಂಯುಕ್ತ ಕಣ್ಣುಗಳನ್ನು ಹೊರಳಿಸಿ ನೋಡಿ ಸುಯ್ಯನೆ ಹಾರಿ ಹೋಯಿತು.

© ಶಶಿಧರಸ್ವಾಮಿ ಆರ್.ಹಿರೇಮಠ


ಲೇಖನ: ಶಶಿಧರಸ್ವಾಮಿ ಆರ್.ಹಿರೇಮಠ
          ಹಾವೇರಿ ಜಿಲ್ಲೆ

Print Friendly, PDF & Email
Spread the love
error: Content is protected.