ಜೀವಂತ ದೈತ್ಯ ಪರ್ವತಗಳು.

ಜೀವಂತ ದೈತ್ಯ ಪರ್ವತಗಳು.

© ಸ್ಮಿತಾ ರಾವ್.

ಬೆಟ್ಟ, ಗುಡ್ಡ, ಘಟ್ಟ ಮತ್ತು ಪರ್ವತ ಶ್ರೇಣಿಗಳ ಉಗಮವು ಭೂಮಂಡಲದ ಅದ್ಭುತ ಸೃಷ್ಟಿಗಳಲ್ಲೊಂದು. ಸಣ್ಣ ಬೆಟ್ಟ-ಗುಡ್ಡಗಳು, ಭೂ-ಸವೆತದ ಫಲವಾಗಿ ರೂಪುಗೊಂಡರೆ, ದೈತ್ಯ ಘಟ್ಟ-ಪರ್ವತಗಳು ಭೂ-ಪದರಗಳ ತಿಕ್ಕಾಟದಿಂದ (ಉದಾಹರಣೆ ಹಿಮಾಲಯ ಪರ್ವತಗಳ ಶ್ರೇಣಿ), ಜ್ವಾಲಾಮುಖಿಯ ಸ್ಪೋಟದಿಂದ (ಉದಾಹರಣೆ ಕಿಲಿಮಂಜಾರೋ ಪರ್ವತ, ತಂಜೇನಿಯ ದೇಶ) ಮತ್ತು ಭೂ-ಸ್ಥರಗಳ ಜೋಡಣೆಯಿಂದ (ಉದಾಹರಣೆ ಸೈರ ನೆವಡ ಪರ್ವತ, ಯುನೈಟೆಡ್ ಸ್ಟೇಟ್ಸ್) ರೂಪುಗೊಂಡಿವೆ.

ಈ ಪರ್ವತಗಳು ಮಾನವನ ವಿಕಾಸದಲ್ಲೇ ಅತ್ಯಂತ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿವೆ. ಮಾನವ ಪ್ರವಾಹಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ಬೆಟ್ಟಗಳ ಮೇಲೆ ವಾಸಿಸುವುದನ್ನು ಅನಾದಿಕಾಲದಿಂದಲೂ ರೂಢಿಸಿಕೊಂಡ. ಮುಂದುವರೆದಂತೆ ಶತ್ರು ಸೈನ್ಯಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ತನ್ನ ಆಡಳಿತದ ಕೇಂದ್ರಗಳನ್ನು, ನಗರ-ಪಟ್ಟಣಗಳನ್ನು ಬೆಟ್ಟ-ಗುಡ್ಡಗಳ ಮೇಲೆ ನಿರ್ಮಿಸುವುದನ್ನು ರೂಢಿಸಿಕೊಂಡ, ಉದಾ: ರೋಮ್ ಸಾಮ್ರಾಜ್ಯ ಕಟ್ಟಿದ್ದು ಏಳು ಬೆಟ್ಟಗಳ ಮೇಲೆ. ಅಷ್ಟೇ ಅಲ್ಲ ದಕ್ಷಿಣ ಭಾರತದ ಸಾಕಷ್ಟು ರಾಜರು, ಸಾಮಂತರು ಕೋಟೆ ಕಟ್ಟಿ ಆಳ್ವಿಕೆ ಮಾಡುತ್ತಿದ್ದದ್ದು ಬೆಟ್ಟಗಳ ಮೇಲೆಯೇ.

ಬೆಟ್ಟ-ಪರ್ವತಗಳಿಂದಾಗುವ ನೇರ ಉಪಯೋಗಗಳು ಸಾಕಷ್ಟಿವೆ. ವಿಶ್ವದ ಅರ್ಧಕ್ಕೂ ಹೆಚ್ಚು ಜನರಿಗೆ ನೀರನ್ನು ಒದಗಿಸುತ್ತಿರುವುದು ಪರ್ವತಗಳೇ. ಮೋಡಗಳನ್ನು ತಡೆದು ಮಳೆ ತರುವಲ್ಲಿ ಇವುಗಳ ಪಾತ್ರ ಮಹತ್ವದ್ದು. ನೂರಾರು ನದಿಗಳ ಮೂಲ ಸಹ ನಮ್ಮ ಈ ಬೆಟ್ಟ-ಪರ್ವತಗಳೇ. ನಾವು ಇಂದು ಆಹಾರಕ್ಕಾಗಿ ಬೆಳೆಯುತ್ತಿರುವ ಜೋಳ, ಮುಸುಕಿನ ಜೋಳ, ಆಲೂಗಡ್ಡೆ, ಬಾರ್ಲಿ, ಟೊಮ್ಯಾಟೊ, ಸೇಬಿನಂತಹ ಬೆಳೆಗಳು, ಕಾಫಿ, ಚಹಾದಂತಹ ವಾಣಿಜ್ಯ ಬೆಳೆಗಳು ಮತ್ತು ಕುರಿ, ಮೇಕೆ, ಯಾಕ್ ಮುಂತಾದ ಸಾಕು ಪ್ರಾಣಿಗಳು ವಿಕಾಸಗೊಂಡಿದ್ದು ಪರ್ವತಗಳ ಮೇಲೆಯೇ.

ಇವೆಲ್ಲವೂ ಒಂದೆಡೆಯಾದರೆ ಜೀವಸಂಕುಲದ ವಿಕಾಸದಲ್ಲಿ ಈ ಪರ್ವತಗಳ ಪಾತ್ರ ಬಹು ಪ್ರಮುಖವಾದದ್ದು. ಪರ್ವತಗಳು ಭೂಪ್ರದೇಶದ 25% ರಷ್ಟು ಭಾಗದಲ್ಲಿ ಮಾತ್ರ ಹಂಚಿಕೆಯಾಗಿದ್ದರೂ ಪ್ರಪಂಚದಲ್ಲಿನ 85% ಕ್ಕಿಂತಲೂ ಹೆಚ್ಚು ಉಭಯವಾಸಿ, ಪಕ್ಷಿ ಮತ್ತು ಸಸ್ತನಿಗಳಿಗೆ ಆಶ್ರಯವನ್ನು ನೀಡಿವೆ ಮತ್ತು ಇವುಗಳಲ್ಲಿ ಹೆಚ್ಚಿನವು ಪರ್ವತ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿವೆ. ಇದಕ್ಕೆ ಮುಖ್ಯ ಕಾರಣ ಆ ಸೀಮಿತ ಪ್ರದೇಶದೊಳಗೆ ನಡೆಯುವ ಪ್ರಭೇದೀಕರಣ (In situ-speciation).

© ಅರವಿಂದ ರಂಗನಾಥ್.

ಪರ್ವತದ ಹೊರ ಮೇಲ್ಮೈ ಪದರಗಳು ಹವಾಮಾನದ ಬದಲಾವಣೆಗಳಿಗೆ ಸುದೀರ್ಘ ಕಾಲಾವಧಿಯವರೆಗೆ ಒಡ್ಡಿದ ಪರಿಣಾಮದಿಂದಾಗಿ, ಜೀವ ವಿಕಾಸಗೊಳ್ಳಲು ಸಾಕಷ್ಟು ಸಮಯಾವಕಾಶವನ್ನು ಕೊಟ್ಟಿರುತ್ತದೆ ಮತ್ತು ಆ ಪರ್ವತ ರೂಪಗೊಂಡ ಮೂಲ ಪದಾರ್ಥಗಳ ಕಾರಣದಿಂದಾಗಿ ಹೆಚ್ಚು ಜೀವ ವೈವಿಧ್ಯತೆ ಸಾಧ್ಯ. ಉದಾಹರಣೆ: ಯಾವ ಪರ್ವತವು ಅತಿ ಹೆಚ್ಚು ಜೀವವೈವಿಧ್ಯಮಯವಾಗಿರುತ್ತದೆಯೋ ಆ ಪರ್ವತವು ಸಮುದ್ರದ ತಳದಿಂದ ಎದ್ದು ಬಂದ ಪದರಗಳಿಂದ ರೂಪಗೊಂಡ ಪರ್ವತವಾಗಿರುತ್ತದೆ (ಹಿಮಾಲಯ ಪರ್ವತದ ಭೂಭಾಗಗಳು).

ಒಂದು ವೇಳೆ ಭೂಮಿಯು ಬೆಟ್ಟ-ಗುಡ್ಡ, ಪರ್ವತಗಳಿಲ್ಲದೆ ಸಮತಟ್ಟಾದ ಪ್ರದೇಶವಾಗಿದ್ದರೆ ಯಾವುದೇ ಹೆಚ್ಚಿನ ಜೀವವೈವಿಧ್ಯತೆ ಇಲ್ಲದೆ ವಿಶ್ವದಾದ್ಯಂತ ಏಕರೂಪ ಜೀವಿಗಳನ್ನು ನಿರೀಕ್ಷಿಸಬಹುದಿತ್ತೇನೋ? ಸಮತಟ್ಟಾದ ಪ್ರದೇಶದಲ್ಲಿ ಒಂದು ಪರ್ವತ ಉದ್ಭವಿಸಿದರೆ ಅದರ ಮೇಲ್ಮೈ ವಿಸ್ತೀರ್ಣ ಹೆಚ್ಚಾಗುತ್ತದೆ ಮತ್ತು ವಾತಾವರಣ ಬದಲಾಗುತ್ತಾ ಹೋಗುತ್ತದೆ. ಬೆಟ್ಟದ ಎತ್ತರ ಹೆಚ್ಚಾದಂತೆ ಉಷ್ಣಾಂಶವು ಪ್ರತಿ ಕಿಲೋಮೀಟರ್ ಗೆ 6.5o C ನಂತೆ ಕಡಿಮೆಯಾಗುತ್ತಿರುತ್ತದೆ. ಉಷ್ಣಾಂಶ ಕಡಿಮೆಯಾದಂತೆ ಇದಕ್ಕೆ ಪರಸ್ಪರ ಸಂಬಂಧಪಟ್ಟ ಇತರ ಹವಾಮಾನದ ಮಾನದಂಡಗಳು ಅದರೊಂದಿಗೆ ಬದಲಾವಣೆಯಾಗಿ ಹೊಸ ಪ್ರಭೇದದ ಜೀವಿ ವಾಸಿಸಲು ಹೊಸ ಸ್ಥಳಾವಕಾಶವನ್ನು ಅನಾವರಣಗೊಳಿಸುತ್ತಿರುತ್ತವೆ. ಬಹುಶಃ ಈ ಕಾರಣದಿಂದಲೇ ಪರ್ವತಗಳಲ್ಲಿ ಹೆಚ್ಚಿನ ಜೀವವೈವಿಧ್ಯತೆ ಕಾಣಸಿಗುತ್ತಿರುವುದು.

© ಅರವಿಂದ ರಂಗನಾಥ್.

ಉದಾಹರಣೆಗೆ “A” ಎಂಬ ಗಿಡ 1000 ಮೀಟರ್ ಎತ್ತರದಲ್ಲಿ ಜೀವಿಸುತ್ತಿದೆ ಎಂದು ತಿಳಿಯೋಣ, ಅದು 23oC ಉಷ್ಣಾಂಶದಲ್ಲಿ ಬೆಳೆಯುತ್ತಿರುತ್ತದೆ, ಅದರಂತೆ ಮಳೆಯ ಪ್ರಮಾಣ, ಆರ್ದ್ರತೆ, ವಾಯುಮಂಡಲದ ಒತ್ತಡ, ಸೌರ ವಿಕಿರಣ ಮತ್ತು ಗಾಳಿಯ ವೇಗ ಎಲ್ಲವೂ ಆ “A” ಗಿಡಕ್ಕೆ ಹೊಂದಾಣಿಕೆಯಾಗಿರುತ್ತವೆ. ಆ ಗಿಡಕ್ಕೆ ತಗುಲುವ ರೋಗಾಣು, ಸೂಕ್ಷ್ಮಾಣು ಜೀವಿಗಳು, ಗಿಡದಲ್ಲಿರುವ ಉಪಯೋಗಕಾರಿ ಸೂಕ್ಷ್ಮಾಣು ಜೀವಿಗಳು, ಗಿಡವನ್ನು ತಿನ್ನುವ ಕೀಟ, ಪ್ರಾಣಿ ಭಕ್ಷಕಗಳು, ಪರಾಗಸ್ಪರ್ಶ ಮಾಡುವ ವಾಹಕಗಳು, ಬೀಜಗಳನ್ನು ಪ್ರಸರಣ ಮಾಡುವ ಪ್ರಾಣಿ-ಪಕ್ಷಿಗಳು “A” ಗಿಡದೊಂದಿಗೆ ಪರಸ್ಪರವಾಗಿ ವಿಕಾಸಗೊಂಡಿರುತ್ತವೆ.

ಒಂದು ವೇಳೆ ಅದೇ “A” ಗಿಡವನ್ನು ಅಲ್ಲಿಂದ 1000 ಮೀಟರ್ ಎತ್ತರಕ್ಕೆ ಕೊಂಡೊಯ್ದು ಬೆಳೆಸಲು ಪ್ರಾರಂಭಿಸಿದರೆ, ಅಲ್ಲಿನ ಉಷ್ಣಾಂಶ 23o C ರಿಂದ 17.5o C ಗೆ ಇಳಿದಿರುತ್ತದೆ. ಇದರಂತೆ ಇತರ ವಾತಾವರಣದ ಮಾನದಂಡಗಳು ವ್ಯತ್ಯಾಸಗೊಂಡಿರುತ್ತವೆ. ಈ ಹೊಸ ವಾತಾವರಣದಲ್ಲಿ “A” ಗಿಡ ರೋಗಕಾರಕ ಸೂಕ್ಷ್ಮಾಣು ಜೀವಿಗಳ ದಾಳಿಗೆ ತುತ್ತಾಗಿ ಸಾಯಬಹುದು. ಗಿಡಕ್ಕೆ ಬೇಕಾದ ಉಪಯೋಗಕಾರಿ ಸೂಕ್ಷ್ಮಾಣು ಜೀವಿಗಳು ಅಲ್ಲಿ ಸಿಗದೇ ಇರಬಹುದು. ಇದನ್ನೇ ಹೆಚ್ಚು ತಿನ್ನುವ ಗಿಡ ಭಕ್ಷಕಗಳು, ಗಿಡವನ್ನು ತಿಂದು ಮುಗಿಸಬಹುದು, ಪರಾಗಸ್ಪರ್ಶ ಮಾಡುವ ಜೀವಿಗಳೇ ಇಲ್ಲದಿರಬಹುದು, ಬೀಜ ಪ್ರಸರಣ ಮಾಡುವ ಜೀವಿಗಳು ಕಾಣೆಯಾಗಿರಬಹುದು. ಇವುಗಳಲ್ಲಿ ಯಾವುದಾದರೂ ಒಂದು ಅಂಶ ಗಿಡದ ಮೇಲೆ ಪ್ರಭಾವ ಬೀರಿದರೂ ಆ ಗಿಡ ಬದುಕಿ ತನ್ನ ಮುಂದಿನ ಸಂತತಿಯನ್ನು ಮುಂದುವರಿಸಲಾಗದು.

© ಅರವಿಂದ ರಂಗನಾಥ್.

ಪರ್ವತದ ಎತ್ತರ ಹೆಚ್ಚಾದಂತೆ ಅಲ್ಲಿಯ ಮಣ್ಣಿನ ಗುಣ-ಲಕ್ಷಣಗಳು, ಅಲ್ಲಿನ ಸೂಕ್ಷ್ಮಾಣು ಜೀವಿಗಳ ಸಮೂಹ, ಅಲ್ಲಿನ ಕೀಟ ಜಗತ್ತು, ಇತರ ಗಿಡ-ಮರ, ಪ್ರಾಣಿ-ಪಕ್ಷಿ ಎಲ್ಲವೂ ಬದಲಾಗುತ್ತಾ ಹೋಗುತ್ತವೆ. ಆದ್ದರಿಂದಲೇ ಪರ್ವತದ ಎತ್ತರಕ್ಕೆ, ಅಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಅಲ್ಲಿನ ಜೀವರಾಶಿಗಳು ಪರಸ್ಪರ ವಿಕಾಸಗೊಂಡಿರುತ್ತವೆ. ಎತ್ತರದ ಪ್ರದೇಶಗಳಲ್ಲಿ ಬದುಕಲು ವಿಕಾಸಗೊಂಡಿರುವ ಈ ಜೀವಿಗಳು, ಸಮತಟ್ಟಾದ ಪ್ರದೇಶಗಳಲ್ಲಿ ಬದುಕಲು ಸಾಧ್ಯವಿಲ್ಲ. ಹಾಗೆಯೇ ಎಲ್ಲಾ ಜೀವಿಗಳಿಗೂ ತನ್ನದೇ ಸೂಕ್ತ ವಾಸಸ್ಥಾನವಿರುತ್ತದೆ (Niche), ಅದರಿಂದಾಚೆಗೆ ಅವು ಬದುಕಿ ತನ್ನ ಸಂತತಿಯನ್ನು ಮುಂದುವರಿಸಲಾರವು.

ಮಾನವನು ತನ್ನ ಅತಿಯಾದ ಲೋಭದಿಂದ ಸಾಕಷ್ಟು ಪರ್ವತ ಪ್ರದೇಶಗಳನ್ನು ಇಂದು ವಿನಾಶದ ಹಂತಕ್ಕೆ ತಂದು ನಿಲ್ಲಿಸಿದ್ದಾನೆ.  ಗಣಿಗಾರಿಕೆ, ಮಾಲಿನ್ಯ, ಅಕ್ರಮ ಪ್ರವಾಸೋದ್ಯಮ, ಬೇಟೆ, ಅತಿಯಾದ ಜಾನುವಾರು ಮೇಯಿಸುವಿಕೆ, ಯಥೇಚ್ಚವಾಗಿ ಅರಣ್ಯ ಉತ್ಪನ್ನಗಳ ಹೊರತೆಗೆಯುವಿಕೆ, ಅರಣ್ಯ ಅತಿಕ್ರಮಣ, ಅರಣ್ಯನಾಶ, ಅರಣ್ಯೀಕರಣ ಹೆಸರಲ್ಲಿ ನೆಡುವ ಏಕ ರೀತಿಯ ನೆಡುತೋಪುಗಳು, ಹವಾಮಾನ ಬದಲಾವಣೆ, ಬೃಹತ್ ಜಲವಿದ್ಯುತ್ ಯೋಜನೆಗಳು ಮತ್ತು ದೊಡ್ಡ ಅಣೆಕಟ್ಟುಗಳ ನಿರ್ಮಾಣದಿಂದ ಪರ್ವತಗಳಿಗೆ ಮತ್ತು ಅಲ್ಲಿ ನೆಲೆಸಿರುವ ಜೀವಿಗಳಿಗೆ ಕಂಟಕವನ್ನು ಸೃಷ್ಟಿಸುತ್ತಿದ್ದಾನೆ ಮತ್ತು ಅವುಗಳನ್ನು ವಿನಾಶಕ್ಕೆ ದೂಡುತ್ತಿದ್ದಾನೆ.

© ಅರವಿಂದ ರಂಗನಾಥ್.

ಎಲ್ಲಾ ನಾಗರಿಕತೆಗಳಲ್ಲೂ ನಮ್ಮ ಪೂರ್ವಜರಿಗೆ ಪರ್ವತಗಳೆಂದರೆ ಒಂದು ದೈವತ್ವದ ಭಾವನೆ ಇತ್ತು. ಅವು ಆಧ್ಯಾತ್ಮದ ಪ್ರತೀಕಗಳಾಗಿದ್ದವು. ಬಹುಶಃ, ಆ ನಂಬಿಕೆಯಿಂದಲೇ ಎಷ್ಟೋ ವರ್ಷಗಳ ಕಾಲ ಪರ್ವತಗಳು ಮತ್ತು ಪರಿಸರವು ಸುರಕ್ಷಿತವಾಗಿತ್ತೆಂದು ಹೇಳಬಹುದು. ನಾವು ಎಂದು ವಿದ್ಯಾವಂತರಾದೆವೋ, ದೇವರ ಅಸ್ತಿತ್ವವನ್ನೇ ಅಲ್ಲಗೆಳೆದೆವೋ ಅಲ್ಲಿಂದ ಶುರುವಾಯಿತು ಮಾನವ-ಪರಿಸರ ನಡುವಿನ ಸಂಘರ್ಷ. ದೇವರು ಇರುವನೋ ಇಲ್ಲವೋ ಗೊತ್ತಿಲ್ಲ, ಆದರೆ ಇದ್ದಾನೆ ಎಂಬ ಭಕ್ತಿಯಿಂದಲೋ ಅಥವಾ ಭಯದಿಂದಲೋ ಪರಿಸರ ವ್ಯವಸ್ಥೆಯು ಇತ್ತೀಚಿನವರೆಗೂ ಸಾಕಷ್ಟು ಸುರಕ್ಷಿತವಾಗಿತ್ತು ಎಂದರೆ ತಪ್ಪಾಗಲಾರದು.

© ಅರವಿಂದ ರಂಗನಾಥ್.


ಲೇಖನ: ಹರೀಶ ಎ. ಎಸ್.
             ಜಿಕೆವಿಕೆ, ಬೆಂಗಳೂರು ಜಿಲ್ಲೆ
.

Spread the love
error: Content is protected.