ಭೂ-ಗತ ಜಗತ್ತಿನ ರಾಣಿ, ನಿಜವಾದ ಸಹಸ್ರಪದಿ!

ಭೂ-ಗತ ಜಗತ್ತಿನ ರಾಣಿ, ನಿಜವಾದ ಸಹಸ್ರಪದಿ!

ಗ್ರೀಕರ ಪುರಾಣದ ಪ್ರಕಾರ ಡಿಮೀಟರ್ ಎಂಬುವಳು ಕಾಳು, ಬೆಳೆ ಮತ್ತು ಫಲವತ್ತಿನ ದೇವತೆ. ಇವಳ ಗಂಡ ಝಿಯುಸ್, ಇವನು ಆಕಾಶದ ಅಧಿಪತಿ. ಗ್ರೀಕ್ ದೇವತೆಗಳ ರಾಜ. ಇವರಿಬ್ಬರ ಮುದ್ದಿನ ಮಗಳು ಪರ್ಸೆಫನೀ. ಇವಳು ಚೈತ್ರಾಕಾಲ ಹಾಗೂ ಸಮೃದ್ಧಿಯ ದೇವತೆ. ಇವಳ ದಿನಚರಿ ಬೆಳಗ್ಗೆ ಎದ್ದು ಸೂರ್ಯನ ರಶ್ಮಿಯಲ್ಲಿ ಮಿಂದು, ತಂಗಾಳಿಯೊಡನೆ ಪಿಸುಗುಟ್ಟು, ಹೂ-ಮೊಗ್ಗು, ದುಂಬಿಗಳ ಜೊತೆ ನರ್ತನವಾಡುವುದು. ಇವಳ ಸೌಂದರ್ಯ ಇಡೀ ಪ್ರಕೃತಿಯ ಸೌಂದರ್ಯದ ಹಾಗೇ ಯಾವಾಗಲೂ ಹೊಳೆಯುತ್ತಾ, ಇವಳ ನಗು ಕಂಡವರ ಮುಖವನ್ನೆಲ್ಲಾ ಅರಳಿಸುತ್ತಾ ಇತ್ತು. ಇವಳ ಸೌಂದರ್ಯವನ್ನು ಪ್ರತೀದಿನ ನೋಡುತ್ತಿದ್ದ ಭೂಗತ ಜಗತ್ತಿನ ರಾಜ ಹೀಡೀಸ್ ಗೆ ಸುಮ್ಮನಿರಲಾಗಲಿಲ್ಲ. ಒಂದು ದಿನ ಭೂಮಿಯನ್ನು ಸೀಳಿಕೊಂಡು ಬಂದು ಪರ್ಸೆಫನೀಯನ್ನು ಅಪಹರಿಸಿಕೊಂಡು ತನ್ನ ಪಾತಾಳಲೋಕಕ್ಕೆ ಹೋಗಿಬಿಡುತ್ತಾನೆ. ಅಲ್ಲಿ ಅವಳನ್ನು ಮದುವೆಯಾಗಲು ಇಚ್ಛಿಸಿ, ಆರು ದಾಳಿಂಬೆಗಳನ್ನು ನೀಡುತ್ತಾನೆ. ಅವಳನ್ನು ಮದುವೆಯಾಗುತ್ತಾನೆ. ಈಗ ಪರ್ಸೆಫನೀ ಭೂಗತ ಜಗತ್ತಿನ ರಾಣಿ. ಆದರೆ ಭೂಮಿಯ ಮೇಲಿನ ತನ್ನ ಸುಂದರ ದಿನಚರಿಯನ್ನು ನೆನೆದು ದಿನ ದಿನವೂ ಮರುಗುತಿರುತ್ತಾಳೆ. ಅವಳ ಮರುಕದಿಂದ ಭೂಮಿಯ ಮೇಲಿನ ಎಲ್ಲಾ ಸೌಂದರ್ಯವೂ ಹಾಳಾಗಿ, ಹಿಮಾವೃತವಾಗಿಬಿಡುತ್ತದೆ. ಇದನ್ನೆಲ್ಲಾ ಕಂಡ ತಾಯಿ ಡಿಮೀಟರ್, ಅವಳನ್ನು ಹುಡುಕುತ್ತಾಳೆ. ಆದರೆ ಫಲವಿಲ್ಲ. ಇಡೀ ಭೂಮಿಯ ಮೇಲೆ ಎಲ್ಲೂ ಅವಳ ಸುಳಿವು ಸಿಗುವುದಿಲ್ಲ. ಈ ವಿಷಯವನ್ನು ಝಿಯುಸ್ ಗೆ ಹೇಳಲಾಗಿ, ಝಿಯುಸ್

ಎಲ್ಲಾ ದೇವತೆಗಳನ್ನು ಕರೆದು ವಿಚಾರಿಸುತ್ತಾನೆ. ಭೂಮಿಯ ಆಗು-ಹೋಗುಗಳನ್ನೆಲ್ಲಾ ಕಾಣುವ ಸೂರ್ಯ ದೇವ ಹೀಲಿಯೋಸ್ ನಡೆದದ್ದನ್ನು ವಿವರಿಸುತ್ತಾನೆ. ಆದರೆ ಈಗಾಗಲೇ ಹೀಡೀಸ್ ಅವಳಿಗೆ ದಾಳಿಂಬೆಯನ್ನು ತಿನ್ನಿಸಿ ಮದುವೆಯಾಗಿದ್ದರಿಂದ, ದೇವತೆಗಳ ನಿಯಮದಂತೆ ಒತ್ತಾಯಪೂರ್ವಕವಾಗಿ ಅವಳನ್ನು ಕರೆತರಲಾಗುವುದಿಲ್ಲ. ಹಾಗೆಂದು ಸುಮ್ಮನಿದ್ದರೆ ಭೂಮಿಯ ಮೇಲಿನ ಜೀವಿಗಳೆಲ್ಲಾ ಹಿಮಯುಗ (ice age) ದಲ್ಲಿ ಸಿಲುಕಿ ಜೀವಕೋಟಿಯೇ ನಾಶವಾಗಿಬಿಡುತ್ತದೆ. ಇದನ್ನು ತಡೆಯಲು ಝಿಯುಸ್ ಹೀಡೀಸ್ ನೊಡನೆ ಒಂದು ಒಪ್ಪಂದಕ್ಕೆ ಬರುತ್ತಾನೆ. ಅದೇನೆಂದರೆ, ವರ್ಷದ ಆರು ತಿಂಗಳು ಪರ್ಸೆಫನೀ ಭೂಮಿಯ ಮೇಲಿದ್ದರೆ. ಉಳಿದ ಆರು ತಿಂಗಳು ಹೀಡೀಸ್ ನ ಜೊತೆ ಭೂಗತ ರಾಣಿಯಾಗಿರುತ್ತಾಳೆ. ಆದರೆ ಅವಳೆಲ್ಲೇ ಇದ್ದರೂ ಅಲ್ಲಿ ನಗು, ಸಂತೋಷ, ಸಮೃದ್ಧಿಯಿಂದ ತುಂಬಿರುತ್ತದೆ. ಆದ್ದರಿಂದಲೇ ಅವಳು ಭೂಮಿಯ ಮೇಲೆ ಇರುವ ಆ ಆರು ತಿಂಗಳು ಚೈತನ್ಯದಿಂದ ಕೂಡಿದ್ದು, ಅವಳಿಲ್ಲದ ಆರು ತಿಂಗಳು ಎಲ್ಲಾ ಹಿಮಾವೃತವಾಗಿಬಿಡುತ್ತವೆ. ಹೀಗೆ ವರ್ಷದಲ್ಲಿ ನಾವು ನೋಡುವ ಬೇರೆ ಬೇರೆ ಕಾಲಗಳು ಸೃಷ್ಠಿಯಾದವೆಂದು ಗ್ರೀಕರು ನಂಬಿದ್ದರು.

P.E. MARK ET AL_SCIENCETIFIC REPORTD 2021

ಹೀಗೆ ‘ಯುಮಿಲ್ಲಿಪಿಸ್ ಪರ್ಸೆಫನೀ’ ಎಂದು ಹೆಸರಿಟ್ಟು ಹೊಸದಾಗಿ ದಾಖಲಿಸಿದ ಮೊದಲ, ಸಾವಿರಕ್ಕೂ ಹೆಚ್ಚು ಕಾಲುಗಳನ್ನು ಹೊಂದಿದ ಏಕೈಕ ಹೆಸರನುಸರಿಸುವ ನಿಜವಾದ ಸಹಸ್ರಪದಿ. ಈ ಕೀಟಕ್ಕೆ ‘ಪರ್ಸೆಫನೀ’ ಎಂದು ಹೆಸರಿಡಲು ಕಾರಣ, ಮೇಲೆ ಹೇಳಿದ ಕಥೆಯಲ್ಲಿ ಬರುವ ಪರ್ಸೆಫನೀಯು ಭೂಗತಲೋಕದ ರಾಣಿ. 60 ಮೀಟರ್ ಅಥವಾ 197 ಅಡಿ ಆಳದಲ್ಲಿ ಸಿಗುವ ಈ ಸಹಸ್ರಪದಿಗೆ ತನ್ನ ಹೆಸರು ಹೇಳುವಂತೆ ಸಾವಿರಕ್ಕೂ ಹೆಚ್ಚು ಕಾಲುಗಳಿವೆ. ಇಷ್ಟುದಿನ ನಾವು ಸಹಸ್ರಪದಿ ಎಂದು ಕರೆಯುತ್ತಿದ್ದ ಯಾವ ಕೀಟಕ್ಕೂ ಸಾವಿರ ಕಾಲುಗಳು ಇರಲಿಲ್ಲ. ಆದರೆ ನಾವು ಈವರೆಗೆ ಎಲ್ಲೂ ಕಂಡಿರದಷ್ಟು ಸಾಲು ಸಾಲು ಕಾಲುಗಳನ್ನು ಗುರುತಿಸಿ ಆ ಕೀಟಕ್ಕೆ ಸಹಸ್ರಪದಿ ಎಂದು ಹೆಸರಿಡಲಾಗಿತ್ತು. ಆದರೆ ಎಲ್ಲರೂ ತಿಳಿದ ಹಾಗೆ ಸಹಸ್ರಪದಿಗೆ ಸಾವಿರ ಕಾಲುಗಳಿಲ್ಲ ಎಂಬುದು ವಾಸ್ತವವಾಗಿತ್ತು. ಆದರೆ ಈಗ ಆ ವಾಸ್ತವವನ್ನು ಬದಲಿಸುವ ಸಮಯ ಬಂದಾಗಿದೆ. ಇಲ್ಲಿಯವರೆಗೆ ಒಂದು ಸಹಸ್ರಪದಿಯಲ್ಲಿ ನಾವು ಕಂಡ ಅತಿಹೆಚ್ಚು ಪಾದಗಳಿರುವ ಸಹಸ್ರಪದಿಯೆಂದರೆ 750 ಕಾಲುಗಳು. ಆದರೆ ಈಗ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಕಂಡುಹಿಡಿದ ಯುಮಿಲ್ಲಿಪಿಸ್ ಪರ್ಸೆಫನೀ ಎಂದು ಕರೆಯುವ ಹೊಸ ಪ್ರಭೇದದ ಸಹಸ್ರಪದಿಯು 1,306 ಕಾಲುಗಳು ಹೊಂದಿರುವ ಏಕೈಕ ಸಹಸ್ರಪದಿ ಎಂದು ಗುರುತಿಸಿದ್ದಾರೆ.

ಖನಿಜಗಳನ್ನು ತೆಗೆಯುವ 60 ಮೀಟರ್ ಆಳದ ಕೊಳವೆ ಬಾವಿಯಲ್ಲಿ ಇರಬಹುದಾದ ಜೀವಸಂಕುಲ ಅಥವಾ ಕೀಟಲೋಕವನ್ನು ತಿಳಿಯಲು ಒಂದು ಬಟ್ಟಲಿನಲ್ಲಿ ಕೊಳೆತಿನಿಸನ್ನಿಟ್ಟು ಅಷ್ಟು ಆಳಕ್ಕೆ ಕಳುಹಿಸಿದರು. ಆಹಾರವನ್ನರಸಿ ಬಂದ ಸುಮಾರು 95 ಮಿಲಿ ಮೀಟರ್ ಉದ್ದದ ದಾರದಂತಹ ಕೀಟವನ್ನು ಕಂಡು, ನೋಡಲು ಇಷ್ಟು ವಿಶೇಷವಾಗಿವೆಯಲ್ಲಾ ಎಂದು, ಅದರ ಬಗ್ಗೆ ಕೊಂಚ ಸೂಕ್ಷ್ಮವಾಗಿ ಗಮನಿಸಲು ಬ್ಲ್ಯಾಕ್ಸ್ ಬರ್ಗ್ ನ ಒಂದು ಪ್ರಯೋಗಾಲಯಕ್ಕೆ ಕಳುಹಿಸಿದರು. ಇದನ್ನು ಗಮನಿಸಿದ ಪಾಲ್ ಮಾರೆಕ್ ಎಂಬ ಕೀಟತಜ್ಞನಿಗೆ ಆಶ್ಚರ್ಯ ಕಾದಿತ್ತು. ಭೂಮಿಯೊಳಗಿನ ಕೀಟಗಳು ಬದುಕಲು ಬೇಕಾಗುವ ಗುಂಡುಮುಖ, ಆಂಟೆನಾಗಳು ಇವುಗಳಲ್ಲೂ ಇತ್ತಾದರೂ ಇವುಗಳಿಗೆ ಕಣ್ಣುಗಳಿರಲಿಲ್ಲ. ಅಷ್ಟು ಆಳದಲ್ಲಿ ಜೀವಿಸುವ ಇವುಗಳಿಗೆ ಕಣ್ಣುಗಳ ಅವಶ್ಯಕತೆಯೂ ಅಷ್ಟಾಗಿ ಇರುವುದಿಲ್ಲ. ಹೀಗೆ ಅವುಗಳನ್ನು ಗಮನಿಸುತ್ತಾ ಹೋದ ಪಾಲ್ ಗೆ ಒಂದು ಹೆಣ್ಣು ಸಹಸ್ರಪದಿಯಲ್ಲಿದ್ದ ಕಾಲುಗಳನ್ನು ಎಣಿಸಿದ. ಆಗ ಅವನು ಎಣಿಸಿದ ಸಂಖ್ಯೆ ಅವನು ಇಲ್ಲಿಯವರೆಗೆ ಕಂಡಿದ್ದ ಸಹಸ್ರಪದಿಗಳ ಕಾಲುಗಳಿಗಿಂತ ಎರೆಡರಷ್ಟು ಕಾಲುಗಳನ್ನು ಕಂಡು, ‘ಅಯ್ಯೋ ದೇವರೇ! ಈ ಸಹಸ್ರಪದಿಗೆ 1000 ಕ್ಕೂ ಹೆಚ್ಚು ಕಾಲುಗಳಿವೆ’ ಎನ್ನುತ್ತಾನೆ.

P.E. MAREK ET AL_SCIENTIFIC REPORTS2021

400 ಮಿಲಿಯನ್ ವರ್ಷಗಳ ಹಿಂದೆಯೂ ಇದ್ದ ಸಹಸ್ರಪದಿಗಳು ಸುಮಾರು 6.6 ಅಡಿಯವರೆಗೂ ಬೆಳೆಯುತ್ತಿದ್ದವಂತೆ. ಅವುಗಳಿಗೆ ಇಷ್ಟು ಕಾಲುಗಳಿತ್ತೋ ಇಲ್ಲವೋ ತಿಳಿಯದು. ಆದರೆ ಕೇವಲ 3.7 ಇಂಚು ಇರುವ ಈ ಸಹಸ್ರಪದಿಗೆ ಇರುವ 1,306 ಪುಟಾಣಿ ಕಾಲುಗಳನ್ನು ಕಂಡರೆ ಎಂಥಾ ಕೀಟವಿಜ್ಞಾನಿಗೂ ಆಶ್ಚರ್ಯವೆನಿಸುತ್ತದೆ. ನೀಳವಾಗಿ ಉದ್ದವಿರುವ ಇವುಗಳು ಸಣ್ಣ ಶಿಲೀಂಧ್ರಗಳನ್ನು ತಿಂದು ಬದುಕುತ್ತವೆ ಎಂದು ವಿಜ್ಞಾನಿಗಳು ಊಹಿಸುತ್ತಿದ್ದಾರೆ. ಆದರೆ ಅವು ಯಾವುವು ಎಂದು ಇನ್ನು ತಿಳಿದಿಲ್ಲ. ಹೀಗೆ ಯುಮಿಲ್ಲಿಪಿಸ್ ಪರ್ಸೆಫನೀಯ ಇನ್ನೂ ಹತ್ತು ಹಲವು ರಹಸ್ಯಗಳಿರಬಹುದು, ಅದನ್ನು ತಿಳಿಯಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಆದರೆ ಏನೇ ಆಗಲೀ ಇಲ್ಲಿಯವರೆಗೆ ಪಠ್ಯ-ಪುಸ್ತಕದಲ್ಲಿ ಹೇಳುತ್ತಿದ್ದ, ‘ಸಹಸ್ರಪದಿಗಳು ಕೇವಲ ಹೆಸರಿಗಷ್ಟೇ ಸಾವಿರ ಕಾಲುಗಳು ಹೊಂದಿರುತ್ತವೆ, ನಿಜವಾಗಿಯೂ ಅವುಗಳಿಗೆ ಸಾವಿರ ಕಾಲುಗಳಿರುವುದಿಲ್ಲ’ ಎಂಬ ಮಾತನ್ನು ತೆಗೆಯುವ ಸಮಯ ಬಂದಾಗಿದೆ. ಎನ್ನುತ್ತಾರೆ ಪಾಲ್.

ಇಲ್ಲಿ ನಾವೂ ಗಮನಿಸುವುದಾದರೆ, ನಾವು ಸಂಶೋಧಿಸಿ, ಸರಿ ಇದೆ ಎಂದು ತಿಳಿದು ಪಸರಿಸುತ್ತಿದ್ದ ಪರಿಸರದ ಮೇಲಿನ ನಮ್ಮ ಜ್ಞಾನ, ಎಷ್ಟರ ಮಟ್ಟಿಗೆ ಸತ್ಯಕ್ಕೆ ಹತ್ತಿರವಿದೆ ಎಂದು ತಿಳಿಯಲು ಇಂತಹ ನಿದರ್ಶನಗಳು ನಿಸರ್ಗದೇವತೆಯು ನೀಡುತ್ತಲೇ ಇರುತ್ತಾಳೆ. ಅದನ್ನು ಗಮನಿಸುವ ಆ ಇಂದ್ರಿಯ ನಮ್ಮಲ್ಲಿ ಜಾಗೃತವಾಗಿರಬೇಕಷ್ಟೇ.

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Ultraviolet Night Neon Fluorescent Millipede

Spread the love
error: Content is protected.