ಬ್ರೆಟ್ಟಸ್ ನೆಗೆಯುವ ಜೇಡ

© ಶಶಿಧರಸ್ವಾಮಿ ಆರ್. ಹಿರೇಮಠ
ಮಾವಿನ ಮರದ ಎಲೆಯ ಮೇಲೆ ಸಣ್ಣ ಜೀವಿಯೊಂದು ನಡೆದಾಡುವುದು ಗೋಚರಿಸಿದಾಗ ತಕ್ಷಣವೇ ಕ್ಯಾಮರವನ್ನು ಅದರತ್ತ ಗುರಿಮಾಡಿ ಮ್ಯಾಕ್ರೋ ಲೆನ್ಸ್ ನಲ್ಲಿ ನೋಡಿದೆ, ಅದು ಜೇಡವಾಗಿತ್ತು. ಜೇಡವು ಬಲು ಚುರುಕಾಗಿದ್ದು ಅಲ್ಲಿಂದ ನೆಗೆದು ಕೆಳಗಿನ ಎಲೆಯ ಮೇಲೆ ಕುಳಿತುಕೊಂಡಿತು. ನಾನು ಅದರ ಪೋಟೋಗ್ರಫಿ ಮಾಡತೊಡಗಿದೆ. ಅದು ಕ್ಯಾಮರದ ಲೆನ್ಸ್ ಅನ್ನು ತನ್ನ ಹೊಳಪಿನ ಕಣ್ಣಿನಿಂದ ದಿಟ್ಟಿಸಿ ನೋಡಿದಾಗ ನನ್ನ ಕೈ ಬೆರಳಿನಿಂದ ಕ್ಯಾಮರಾದ ಶಟರ್ (ಕವಾಟ ವೇಗದ) ಬಟನ್ ಅನ್ನು ಒತ್ತಿ ನಾಲ್ಕು ಫೋಟೋಗಳನ್ನು ಕ್ಲಿಕ್ಕಿಸಿದೆ.
ಈ ಜೇಡವು ‘ಬ್ರೆಟ್ಟಸ್ ಜಿಗಿಯುವ’ (Brettus Jumping Spider) ಹೆಣ್ಣು ಜೇಡವಾಗಿದ್ದು, ಇವನ್ನು ಆಂಗ್ಲ ಭಾಷೆಯಲ್ಲಿ ಜಂಪಿಂಗ್ ಸ್ಪೈಡರ್ (Jumping Spiders) ಗಳೆಂದು ಕರೆದು, ವೈಜ್ಞಾನಿಕವಾಗಿ ಬ್ರೆಟ್ಟಸ್ (Brettus) ಕುಲಕ್ಕೆ ಸೇರಿಸಲಾಗಿದೆ. ಇವನ್ನು ಸಂಧಿಪದಿ (ಆರ್ಥ್ರೋಪೋಡಾ- Arthropoda) ಗಳ, ಅರಾಕ್ನಿಡಾ (Arachnida) ವರ್ಗದ, ಅರನೀ (Araneae) ಗಣದ, ಸಾಲ್ಟಿಸಿಡೇ (Salticidae) ಕುಟುಂಬಕ್ಕೆ ಸೇರಿಸಲಾಗಿದೆ. ಇವುಗಳಲ್ಲಿ ಆರು ಪ್ರಭೇದಗಳು ದಕ್ಷಿಣ ಏಷ್ಯಾದ ಭಾರತದಿಂದ ಚೀನಾ ಮತ್ತು ಸುಲವೇಸಿವರೆಗೆ ಕಂಡುಬರುತ್ತವೆ. ಮಡಗಾಸ್ಕರ್ಗೆಯಲ್ಲಿ ಸ್ಥಳೀಯವಾಗಿ ಒಂದು ಪ್ರಭೇದವಿದೆ. ಬ್ರೆಟ್ಟಸ್ ಸಿಂಗುಲಾಟಸ್ (Brettus cingulatus) ಮತ್ತು ಬ್ರೆಟ್ಟಸ್ ಅಡೋನಿಸ್ (Brettus adonis) ನೆಗೆಯುವ ಜೇಡಗಳು ಇತರ ಜೇಡಗಳನ್ನು ಆಹಾರವಾಗಿ ಭಕ್ಷಣೆ ಮಾಡುತ್ತವೆ.

ಬ್ರೆಟ್ಟಸ್ ನೆಗೆಯುವ ಜೇಡಗಳು ನೋಡಲು ಸುಂದರ ಹಾಗೂ ಆಕರ್ಷಕವಾಗಿವೆ. ಹೆಣ್ಣು ಜೇಡವು 6-7 ಮಿ.ಮೀ. ಇದ್ದು, ಗಂಡು ಜೇಡವು ಹೆಣ್ಣಿಗಿಂತ ಚಿಕ್ಕದಾಗಿ 4-5 ಮಿ.ಮೀ. ಗಾತ್ರದಲ್ಲಿವೆ. ಉದ್ದನೆಯ ಶಿರೋವಕ್ಷವು ಮಧ್ಯದಲ್ಲಿ ಕೆಂಪಾಗಿದೆ. ಹಿಂಭಾಗವು ದುಂಡಾಗಿದೆ. ಪಾರ್ಶ್ವ ಬದಿಗಳಲ್ಲಿ ದಪ್ಪನಾಗಿ ವಕ್ರವಾಗಿರುವ ಬಿಳಿ ಪಟ್ಟಿಗಳಿವೆ. ಕಿಬ್ಬೊಟ್ಟೆ ಕಿರಿದಾಗಿದ್ದು, ಶಿರೋವಕ್ಷಗಿಂತ ಚಿಕ್ಕದಾಗಿದೆ. ಗೋಳಾಕಾರವಾದ ಕಿಬ್ಬೊಟ್ಟೆಯಲ್ಲಿ ಕೆಂಪು ಬಣ್ಣದ ದಪ್ಪ ಅಂಡಾಕಾರದ ಗುರುತಿದೆ. ಅಂಡಾಕಾರದ ಗುರುತಿನಲ್ಲಿ ಎರಡು ಹಳದಿ ಬಣ್ಣದ ಬಿರುಗೂದಲುಗಳು ವೃತ್ತಾಕಾರದಿಂದ ಕೂಡಿವೆ. ಹಳದಿ ಬಣ್ಣದ ತೇಪೆಯ ನಂತರ ಇಡೀ ದೇಹವು ಲೋಹದ ಬಣ್ಣದಿಂದ ಕೂಡಿದೆ. ಹೆಣ್ಣುಗಳಲ್ಲಿ ಶಿರೋವಕ್ಷವು ಕಂದು ಕಿತ್ತಳೆ ಬಣ್ಣವಾಗಿದ್ದು, ಪಾರ್ಶ್ವ ಬದಿಗಳಲ್ಲಿ ಬಿಳಿ ಪಟ್ಟಿಯನ್ನು ಹೊಂದಿವೆ. ನಾಲ್ಕು ಸಾಲುಗಳಲ್ಲಿ ಜೋಡಿಸಲ್ಪಟ್ಟ ಎಂಟು ಕಣ್ಣುಗಳಿದ್ದು, ಮುಂಭಾಗದ ಎರಡು ಕಣ್ಣುಗಳು ದೊಡ್ಡವಾಗಿವೆ. ಹಿಂಭಾಗದ ಹಾಗೂ ಮಧ್ಯದ ಕಣ್ಣುಗಳು ತುಂಬಾ ಸಣ್ಣದಾಗಿವೆ. ಚಾಕ್ಷುಷ (ನೇತ್ರದ- ಓಕ್ಯುಲರ್) ಪ್ರದೇಶವು ಚಿಕ್ಕದಾಗಿ ಕೂದಲುಗಳಿಂದ ಆವೃತವಾಗಿದೆ. ಉದ್ದವಾದ ಎಂಟು ಕಾಲುಗಳಿದ್ದು, ಮುಂದಿನ ಜೋಡಿ ಕಾಲುಗಳು ಮಂಡಿಚಿಪ್ಪು ಮತ್ತು ಸಂಧುಗಳು ಕೂದಲುಗಳ ಅಂಚುಗಳಿಂದ ಮುಚ್ಚಲ್ಪಟ್ಟು, ತೀಕ್ಷ್ಣವಾದ ಮುಳ್ಳುಗಳಿಂದ ಆವೃತವಾಗಿವೆ. ಕಾಲುಗಳು ಏಡಿಯಂತೆ ನಡೆದಾಡಲು ಸಹಾಯಕವಾಗಿವೆ. ನಾಲ್ಕನೇ ಜೋಡಿ ಕಾಲುಗಳು ಮೇಲ್ಮುಖವಾಗಿ ನೆಲೆಗೊಂಡಿವೆ.

ಈ ಜೇಡಗಳು ಮೋಹಕವಾಗಿ ನೃತ್ಯ ಪ್ರದರ್ಶನವನ್ನು ಮಾಡುತ್ತವೆ. ಹೆಣ್ಣು ಜೇಡಗಳು ಮೊಟ್ಟೆಗಳನ್ನು ಬಲೆ ಜಾಲವನ್ನು ನೇಯ್ದಿರುವ ಜಾಳಿಗೆಯಂತಿರುವ ಹಾಳೆಯ ಕೆಳಗೆ ಮುಚ್ಚಿಟ್ಟು ರಕ್ಷಿಸುತ್ತವೆ. ಇವು ತೋಟ, ಉದ್ಯಾನವನ, ಕುರುಚಲು ಕಾಡು, ತೋಪುಗಳ ಸಣ್ಣ ಮರಗಳಲ್ಲಿ ಹಾಗೂ ಎಲೆಗಳ ಮೇಲ್ಮೈಯಲ್ಲಿ ಕಾಣಸಿಗುತ್ತವೆ. ಈ ಜೇಡವು ಇತರೆ ಜೇಡಗಳನ್ನು ಬೇಟೆಯಾಡುತ್ತದೆ. ಬಲೆ ನೇಕಾರ ಜೇಡಗಳನ್ನು ತಿನ್ನಲು ಇಷ್ಟಪಡುತ್ತವೆ. ಅಲ್ಲದೇ ಬಲೆಗಾರ ಜೇಡಗಳನ್ನು ಸೆರೆಹಿಡಿಯಲು, ವಿಶಿಷ್ಟ ಕಾರ್ಯತಂತ್ರವನ್ನು ರೂಪಿಸಿ ಬಲೆಯ ಅಂಚಿನಲ್ಲಿ ನಿಂತು ಅದರ ಹಿಡಿಕೊಂಡಿನೊಂದಿಗೆ ರೇಷ್ಮೆ ತಂತಿಗಳನ್ನು ಕೀಳುವುದು, ಅದು ಪರಿಣಾಮಕಾರಿಯಾಗುವವರೆಗೂ ಹಲವಾರು ಮಾದರಿಯ ಲಯಗಳಿಂದ ಪ್ರಯತ್ನಿಸುತ್ತವೆ. ನಂತರ ಬೇಟೆಯ ಜೇಡವು ಪ್ರಲೋಭನೆಗೆ ಒಳಗಾದಾಗ ಅದನ್ನು ಆಕ್ರಮಣಕಾರಿ ಮಿಮಿಕ್ರಿಯೊಂದಿಗೆ ಇರಿಯುತ್ತ ಸೆರೆಹಿಡಿಯುತ್ತವೆ. ಆದಾಗ್ಯೂ ಬ್ರೆಟ್ಟಸ್ ನೆಗೆಯುವ ಜೇಡವು ನೇಯ್ದ ರೇಷ್ಮೆಯ ಬಲೆಗೆ ಅಂಟಿಕೊಳ್ಳುವುದಿಲ್ಲ ಮತ್ತು ಸುಲಭವಾಗಿ ಬಲೆಗಳಲ್ಲಿ ನಡೆಯಬಲ್ಲದು, ಆದರೆ ಸಾಮಾನ್ಯವಾಗಿ ಇತರ ಜೇಡಗಳ ಬೇರೆ ಬಲೆಗಳಿಗೆ ಹೋಗುವುದಿಲ್ಲ. ಈ ಜೇಡವು ಕೀಟಗಳನ್ನು ಸುಲಭವಾಗಿ ಹಿಂಬಾಲಿಸಿ, ವೇಗವಾಗಿ ಸಮೀಪಿಸುತ್ತ, ನಂತರ ನಿಧಾನಗೊಂಡು ಅಂತಿಮವಾಗಿ ಕೀಟವನ್ನು ಸೆರೆಹಿಡಿದು ನಿತ್ರಾಣಗೊಳಿಸಿ ಅದರ ರಸಹಾರವನ್ನು ಹೀರಿ ಸವಿಯುತ್ತವೆ.

ಈ ಬ್ರೆಟಸ್ ನೆಗೆಯುವ ಹೆಣ್ಣು ಜೇಡವು ಮಾವಿನ ಎಲೆಯ ತುಂಬೆಲ್ಲ ನಡೆದಾಡುತ್ತಿರುವಾಗ ವಿವಿಧ ಕೋನಗಳಿಂದ ಅದರ ಫೋಟೋಗಳನ್ನು ಕ್ಲಿಕ್ ಮಾಡಿಕೊಂಡೆ. ಪರಿಸರದಲ್ಲಿ ಜೇಡಗಳು ಪ್ರಮುಖವಾಗಿ ಕೀಟ ನಿಯಂತ್ರಕಗಳಾಗಿದ್ದು, ಅವುಗಳ ಆವಾಸ ತಾಣಗಳನ್ನು ಉಳಿಸಿ ಸಂರಕ್ಷಿಸಬೇಕಾಗಿದೆ.

ಚಿತ್ರ – ಲೇಖನ: : ಶಶಿಧರಸ್ವಾಮಿ ಆರ್. ಹಿರೇಮಠ.
ಹಾವೇರಿ ಜಿಲ್ಲೆ

ವನ್ಯಜೀವಿ ಛಾಯಾಗ್ರಹಣ, ಪಕ್ಷಿ, ಕೀಟ, ಸಸ್ಯವಿಕ್ಷಣೆ ಹಾಗೂ ಜೀವಿವೈವಿದ್ಯತೆಯಕುರಿತಾಗಿ ನಾಡಿನ ದಿನಪತ್ರಿಕೆ, ಮಾಸ ಪತ್ರಿಕೆಗಳಿಗೆ ಲೇಖನ ಬರೆಯುವುದು, ಹಾಗೂ ಪುಸ್ತಕ ಬರೆಯುವುದು.
ಶಾಲಾ-ಕಾಲೇಜುಗಳಿಗೆ ತೆರಳಿವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಜೀವವೈವಿದ್ಯದ ಬಗ್ಗೆ ಛಾಯಾಚಿತ್ರಗಳ ಸ್ಲೈಡ್ಶೋ ಮುಖಾಂತರ ವಿವರಣೆಯೊಂದಿಗೆ ತಿಳಿಹೇಳಿ ಜಾಗೃತಿ ಮೂಡಿಸುವುದು.