ಎಂಟೆದೆಯ ಭಂಟ ಈ ಎಂಟಡ!

ಎಂಟೆದೆಯ ಭಂಟ ಈ ಎಂಟಡ!

© ಧನರಾಜ್ ಎಂ

ಸುಮಾರು ಏಳು ವರ್ಷದ ಹಿಂದೆ ವೈಲ್ಡ್ಲೈಫ್ ವರ್ಕ್ ಶಾಪ್ ಒಂದರಲ್ಲಿ ಎಂಟಡ (Entada rheedii) ಅನ್ನುವ ಬಳ್ಳಿಯ ಬಗ್ಗೆ ತಿಳಿಯಿತು. ಅದು ನನಗೆ ಪರಿಚಯವಾದ ದಿನದಿಂದ ಇತ್ತೀಚಿನವರೆಗೂ ಎಲ್ಲಿಯೂ ನೋಡಲು ಸಿಕ್ಕಿರಲಿಲ್ಲ. ಅದರ ಬಗೆಗಿನ ಅಚ್ಚರಿ ನನ್ನಲ್ಲಿ ಎಷ್ಟಿತ್ತೆಂದರೆ ಎಂಟಡ ಹೆಸರಿನ ಠಸ್ಸೆ ನನ್ನ ಮನಸಲ್ಲಿ ಮೂಡಿತ್ತು. ಬೇರಾವ ಗಿಡ, ಮರ, ಬಳ್ಳಿಯೂ ನನಗೆ ಇಷ್ಟು ಕುತೂಹಲ ಮೂಡಿಸಿರಲಿಲ್ಲ. ಕ್ಯಾರಮ್ ಬೋರ್ಡ್ ಆಡಲು ಉಪಯೋಗಿಸುವ ಪಾನ್ಗಳಿಗಿಂತ ದೊಡ್ಡದಾದ ಈ ಬೀಜವನ್ನು ಕೈಯಲ್ಲಿ ಹಿಡಿದಾಗಿನ ಅಂದಿನ ನನ್ನ ಕುತೂಹಲ ಮತ್ತೆ ನೀಗಿದ್ದು, ಈಚೆಗೆ ಸೌಪರ್ಣಿಕ ನದಿಯ ದಡದಲ್ಲಿ ಉಳಿದುಕೊಂಡಾಗ. ಜಿಟಿ ಜಿಟಿ ಮಳೆಯಲ್ಲಿ ಹಾವು ಕಪ್ಪೆಗಳನ್ನರಸುತ್ತಾ ಒಂದು ಸಣ್ಣ ಚಾರಣಕ್ಕೆಂದು ಟಾರ್ಚ್ ಹಿಡಿದು ನಡೆದವನಿಗೆ, ಸಣ್ಣ ತೊರೆಯ ಪಕ್ಕ ಸಿಕ್ಕಿದ್ದೇ ಈ ಎಂಟಡ ಪ್ರಭೇದದ ಬೀಜ. ಸಿಕ್ಕ ಎರಡನ್ನು ಕಿಸೆಯೊಳಗೇರಿಸಿ ಬಂದು ಕುಟುಂಬಕ್ಕೆಲ್ಲ ತೋರಿಸಿ, ಅದರ ಬಗ್ಗೆ ತಿಳಿದದ್ದನ್ನು ಎಲ್ಲರಿಗೂ ವಿವರಿಸಿದೆ. ನನಗೆ ಸೋಜಿಗವೆನಿಸಿದ್ದು ಹೆಸರಘಟ್ಟದ ಪಕ್ಕದಲ್ಲಿರುವ ಹಳ್ಳಿಯೊಂದರಲ್ಲಿ ತನ್ನ ಬಾಲ್ಯ ಕಳೆದ ನನ್ನ ಅಮ್ಮನಿಗೂ ಇದರ ತಕ್ಕಮಟ್ಟಿನ ಪರಿಚಯವಿದ್ದದ್ದು, ನನ್ನ ಉತ್ಸಾಹಕ್ಕೆ ದನಿಗೂಡಿಸುತ್ತಾ ಈ ಕಾಯಿಯನ್ನು ಕಂಬಿಗೋ ಅಥವಾ ಹಗ್ಗಕ್ಕೋ ಬಿಗಿದು ಜಾನುವಾರುಗಳ ಕುತ್ತಿಗೆಗೆ ಕಟ್ಟುತ್ತಿದ್ದರೆಂದು ನೆನಪು ಮಾಡಿಕೊಂಡರು. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಆನೆಝರಿ ಕ್ಯಾಂಪ್ನ ನಿರ್ವಾಹಕರು ಸಹ ಹೌದೆನ್ನುತ್ತಾ ತಲೆದೂಗಿದರು. ಮಲೆನಾಡಿನ ಜನರು ಇದನ್ನು ಸಾಂಬಾರಿಗಾಗಿ ಬಳಸುತ್ತಾರೆ, ಹಾಗೆಯೇ ದೂರದ ಆಫ್ರಿಕ ಕೆಲ ದೇಶದ ಜನರು ಈ ಬೀಜದಿಂದ ಹುರಿದ ಪುಡಿಯನ್ನು ಕಾಫಿಯ ರೀತಿ ಉಪಯೋಗಿಸುತ್ತಾರೆಂದು ತಿಳಿಸಿಕೊಟ್ಟರು. ಬೆಂಗಳೂರಿಗೆ ಮರಳಿದ ಮೇಲೆ, ಇದರ ವೈಶಿಷ್ಟ್ಯಗಳನ್ನು ಅರಿಯಲು ಪ್ರಾರಂಭಿಸಿದಾಗ ತಿಳಿಯಿತು – ಈ ಬೀಜಗಳನ್ನು ಅಮೇಜ್ಹಾನಲ್ಲಿ ಆರಕ್ಕೆ ಮುನ್ನೂರು ರೂಪಾಯಿಯಂತೆ ಮಾರುತ್ತಾರೆಂದು! ಇರಲಿ, ನಾವು ಇದರ ಬಗ್ಗೆ ಮತ್ತಷ್ಟು ತಿಳಿಯುವ ಪ್ರಯತ್ನ ಮಾಡೋಣ ಬನ್ನಿ.

© ಭಾನು ಪ್ರಕಾಶ್

ಎಂಟಡ ಜೀನಸ್ ನಲ್ಲಿ ಸರಿ ಸುಮಾರು 30 ಪ್ರಭೇದಗಳಿವೆ. ಅದರಲ್ಲಿ ಕೆಲವು ಮರಗಳು, ಪೊದೆಗಳು ಮತ್ತು ಬಳ್ಳಿಗಳೂ (Liana) ಇವೆ. ಇವೆಲ್ಲವು ಲೆಗ್ಯುಮಿನೋಸೇ (Leguminosae) ಕುಟುಂಬಕ್ಕೆ ಸೇರುವವು ಮತ್ತು ಪ್ರಪಂಚದ ಹಲವಾರು ಉಷ್ಣವಲಯದ ದೇಶಗಳಲ್ಲಿ ಕಂಡು ಬರುತ್ತವೆ. ನಮಗೆ ಚೆನ್ನಾಗಿ ಪರಿಚಯವಿರುವ ಮತ್ತು ಅಡುಗೆಯಲ್ಲಿ ಬಳಸುವ ಬಟಾಣಿಯಿದೆಯಲ್ಲಾ? ಇದು ಸಹ ಅದೇ ಕುಟುಂಬಕ್ಕೆ ಸೇರಿದ್ದರೂ ಬಟಾಣಿಗಿಂತಲು ಬಹುಶಃ ನೂರು ಪಾಲು ದೊಡ್ಡದಿರುತ್ತದೆ. ಈ ಬಳ್ಳಿ ಬಿಡುವ ಕಾಯಿಗಳು ಮೂರರಿಂದ ನಾಲ್ಕು ಅಡಿಗಳವರೆಗೂ ಉದ್ದವಿದ್ದು, ಅದರೊಳಗೆ ಹತ್ತಕ್ಕೂ ಮೇಲಾಗಿ ಬೀಜಗಳಿರುತ್ತವೆ. ಪ್ರತಿಯೊಂದು ಬೀಜವು ಸುಮಾರು ಮೂರು ಅಂಗುಲ ವ್ಯಾಸ ಹೊಂದಿರುತ್ತದೆ. ಇದು ಚಪ್ಪಟೆಯಾಗಿ ಡಿಸ್ಕ್ ಆಕಾರದಲ್ಲಿದ್ದು, ಕಂದು ಬಣ್ಣದ ಮೇಲ್ಮೈ ಬಲು ಗಟ್ಟಿ ಇರುತ್ತದೆ. ಸಾಮಾನ್ಯವಾಗಿ ಇವು ನದಿ, ತೊರೆ ಮತ್ತು ಸಮುದ್ರದಂಚಿನ ಕಾಡಿನಲ್ಲಿ ಕಾಣ ಸಿಗುತ್ತವೆ. ಇದಕ್ಕೆ ಕಾರಣವೆಂದರೆ, ಈ ಆನೆಗಾತ್ರದ ಬೀಜಗಳು ತೇಲುವ (Buoyancy) ಭೌತಿಕ ಸಾಮರ್ಥ್ಯ ಹೊಂದಿವೆ. ಈ ಗಿಡಗಳಲ್ಲಿನ ಮತ್ತೊಂದು ಗಮನಾರ್ಹ ವಿಶೇಷತೆಯೆಂದರೆ, ಎಂಟಡ ಬಳ್ಳಿಯು ಆರ್ಕಿಮಿಡೀಸ್ ಸ್ಕ್ರೂ ಮಾದರಿಯಲ್ಲಿ ತನ್ನ ಆಸುಪಾಸಿನಲ್ಲಿರುವ ಮರಗಳನ್ನು ಅಪ್ಪಿ ಬೆಳೆಯುತ್ತವೆ. ಅಂದರೆ ಗಡಿಯಾರದ ಮುಳ್ಳು ನಡೆಯುವ ವಿರುದ್ಧ ದಿಕ್ಕಿನಲ್ಲಿ ಇದು ಬೆಳೆಯುತ್ತದೆ.

© ಭಾನು ಪ್ರಕಾಶ್

ತಾನು ಬೆಳೆಯಲು ಮತ್ತೊಂದು ಮರದ ಅವಶ್ಯಕತೆಯಿರುವ ಇಂತಹ ಸಣ್ಣ ಬಳ್ಳಿ, ದೈತ್ಯಾಕಾರದ ಕಾಯಿ ಬಿಡುವುದಾದರು ಹೇಗೆ? ಎಂದು ನಮಗೆ ಅನ್ನಿಸದಿರುವುದೇ? ಹೆಚ್ಚಿನ ದ್ಯುತಿಸಂಶ್ಲೇಷಕ/ಬೆಳಕಡುಗೆ (photosynthesis) ದರದ ಕಾರಣದಿಂದಾಗಿ, ಈ ಬಳ್ಳಿಯು ಅತಿ ವೇಗವಾಗಿ ಬೆಳೆಯುತ್ತವಷ್ಟೆ ಅಲ್ಲದೆ ಅತಿಶಯ ಗಾತ್ರದ ಕಾಯಿ ಮತ್ತು ಬೀಜಗಳನ್ನು ಉತ್ಪಾದಿಸುತ್ತವೆ. ಹಿಂದೊಮ್ಮೆ ಎಂಟಡದ ಒಂದು ಪ್ರಭೇದದ ಏಳು ಬೀಜಗಳನ್ನು ಯಲ್ಲಾಪುರದಿಂದ ತಂದು ನಮ್ಮ ಬೆಂಗಳೂರಿನ IISC ಯಲ್ಲಿ ಸಂಶೋಧನೆಗಾಗಿ ನೆಡಲಾಯಿತು; ಆ ಏಳರಲ್ಲಿ ಒಂದು, ಬಹುನಿಯಾ ಪರ್ಪರಯಾ (Bauhinia purpurea) ಮರದ ಸಹಾಯ ಪಡೆದುಕೊಂಡು ಬೃಹತ್ತಾಗಿ ತನ್ನ ಮೇಲಾವರಣ ಬೆಳೆಸಿಕೊಂಡಿದೆ. ಆದರೆ 25 ವರ್ಷದ ಅದರ ಆಯಸ್ಸಿನಲ್ಲಿ ಕೇವಲ 5 ಐದು ಬಾರಿ ಕಾಯಿ ಬಿಟ್ಟಿದ್ದು, ಪಶ್ಚಿಮ ಘಟ್ಟದಲ್ಲಿ ಕಾಣಸಿಗುವ ಗಾತ್ರ ಇಲ್ಲಿ ಸಾಧ್ಯವಾಗಿಲ್ಲ; ಇದಕ್ಕೆ ಕಾರಣಗಳೇನೆಂದು ಮುಂದಿನ ದಿನಗಳಲ್ಲಿ ಸ್ಪಷ್ಟತೆ ಸಿಗಬಹುದೇನೊ, ಕಾದು ನೋಡೋಣ!


ಲೇಖನ: ಭಾನು ಪ್ರಕಾಶ್
             ಬೆಂಗಳೂರು ನಗರ ಜಿಲ್ಲೆ

Print Friendly, PDF & Email
Spread the love
error: Content is protected.