ಜೇಡದ ನಡಿಗೆಯ ಜಾಡುಹಿಡಿದು…

ಜೇಡದ ನಡಿಗೆಯ ಜಾಡುಹಿಡಿದು…

© CC_spider main walking

ಇತ್ತೀಚೆಗಷ್ಟೇ ತೆರೆಕಂಡ ‘ಸ್ಪೈಡರ್ ಮ್ಯಾನ್; ನೋ ವೇ ಹೋಮ್’ ಚಿತ್ರ ಭರ್ಜರಿಯ ಯಶಸ್ಸು ಗಳಿಸಿತು. ಚಿತ್ರದಲ್ಲಿನ ಸಾಹಸ ದೃಶ್ಯಗಳು ಮತ್ತು ಹಾಸ್ಯ ನೆನೆಯುವಂತದ್ದು. ಸಾಹಸ ದೃಶ್ಯಗಳಲ್ಲಿ ಅವರ ನಟನೆ, ಗಾಳಿಯಲ್ಲಿ ಜಿಗಿಯುವುದು, ಗೋಡೆಯ ಮೇಲೆ ನಿಜ ಜೇಡದಂತೆ ತೆವಳುವುದು ಇವೆಲ್ಲಾ ವಾಸ್ತವವಲ್ಲದಿದ್ದರೂ ನೋಡಲು ಮಾತ್ರ ಚೆನ್ನಾಗಿತ್ತು. ಆಹ್… ನಿಜ ಜೇಡದಂತೆ ಗೋಡೆಯ ಮೇಲೆ ನಡೆಯುವುದು ನಮಗೆ ಸಾಧ್ಯವಿಲ್ಲ ಎಂದೆನಾ? ಹಾಗಾದರೆ ನನ್ನ ಮಾತನ್ನು ಹಿಂದೆ ತೆಗೆದುಕೊಳ್ಳುತ್ತೇನೆ. ಯಾಕೆಂದರೆ ನೀವೂ ಜೇಡದಂತೆ ಗೋಡೆಗಳ ಮೇಲೆ ನಡೆಯಬಹುದು. ನಿಜವಾಗಿಯೂ, ನಂಬಲಾಗುತ್ತಿಲ್ಲ ಅಲ್ಲವೇ. ಹಾಗಾದರೆ ಈ ಸಂಶೋಧನೆಯನ್ನು ನಿಮಗೆ ಹೇಳಲೇ ಬೇಕು. ಈ ಸಂಶೋಧನೆಯ ವಿಷಯವಸ್ತು ಜೇಡಗಳು ಲಂಬಕೋನದ ಗೋಡೆಗಳ ಮೇಲೆ ಅಥವಾ ಛಾವಣಿ ಮೇಲೆ ಉಲ್ಟಾ ನಡೆದಾಡುವ ವಿಧಾನ ಮತ್ತು ಕಾರಣವನ್ನು ವಿಸ್ತರಿಸುತ್ತದೆ. ಅದೇ ವಿಧಾನ ಬಳಸಿ ನಾವೂ ಸ್ಪೈಡರ್ ಮ್ಯಾನ್ ನಂತೆ ಗೋಡೆಯ ಮೇಲೆ ನಡೆಯಬಹುದು.

© CC_spiderman

ಎಷ್ಟೋ ಕೀಟಗಳು ಮರ ಗಿಡಗಳನ್ನು ಹತ್ತುತ್ತವೆ. ಆದರೆ ಜೇಡ ಇಲ್ಲಿ ಕೀಟಗಳು ನಡೆದಾಡುವುದು ಅಸಾಧ್ಯ ಎಂಬ ಸ್ಥಳಗಳಲ್ಲೂ ಸಹ ಲೀಲಾ ಜಾಲವಾಗಿ ನಡೆದಾಡುತ್ತಿರುತ್ತವೆ. ಜೇಡಗಳು ಹೇಗೆ ಬಹುತೇಕ ಮೇಲ್ಮೈಗಳಲ್ಲಿ ಅಷ್ಟು ಸಲೀಸಾಗಿ ನಡೆದಾಡುತ್ತವೆ ಎಂಬುದನ್ನು ತಿಳಿಯಲು ಯಾವ ಸಂಶೋಧಕರೂ ಅಷ್ಟಾಗಿ ಪ್ರಯತ್ನಿಸಿರಲಿಲ್ಲ ಎನ್ನುತ್ತಾರೆ ಕ್ಲೀಮೆನ್ಸ್, ಜರ್ಮನಿಯ ಕೀಲ್ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರಜ್ಞ. ಜೇಡಗಳ ಈ ಪ್ರತಿಭೆಗೆ ಕಾರಣ ಜೇಡಗಳ ಕಾಲಿನಲ್ಲಿರುವ ಸಣ್ಣ ಸಣ್ಣ ಕೂದಲುಗಳು. ಹೌದು, ಜೇಡಗಳ ಕಾಲುಗಳಲ್ಲಿ ಯಾವುದೇ ತರಹದ ದ್ರವ ರೂಪದ ಅಂಟು ಇರುವುದಿಲ್ಲ. ಬದಲಿಗೆ ಅವು ಒಣ ಅಂಟುವಿಕೆಯನ್ನು (dry adhesion) ಹೊಂದಿವೆ. ಅದರಿಂದಲೇ ಜೇಡಗಳು ಬಹುತೇಕ ಮೇಲ್ಮೈಗಳ ಮೇಲೆ ಅಷ್ಟು ನಿರಾಯಾಸವಾಗಿ ಓಡಾಡುವುದು. ಇದಕ್ಕೆ ಮುಖ್ಯ ಕಾರಣ ಅವುಗಳ ಕಾಲುಗಳಲ್ಲಿರುವ ನಾರಿನ ಹಾಗೆ ಕಾಣುವ ಸಣ್ಣ ಸಣ್ಣ ಕೂದಲುಗಳಿಂದ (A ಮತ್ತು B). ಹಾಗು ಆ ಕೂದಲುಗಳು ನಾವು ರಸಾಯನಶಾಸ್ತ್ರದ ಪ್ರಯೋಗಗಳಲ್ಲಿ ಬಳಸುವ ‘ಸ್ಪಾಚುಲಾ’ ತರಹದ ರಚನೆ ಹೊಂದಿದೆ. ಅದಕ್ಕೆ ಆ ಕೂದಲುಗಳನ್ನು ‘ಸ್ಪಾಚುಲೆ’ ಎಂದು ಕರೆಯಲಾಗಿದೆ. ಹೀಗಾಗಿ ಈ ವಿಶೇಷ ಕೂದಲುಗಳು ಯಾವುದಾದರು ಮೇಲ್ಮೈನ ಸಂಪರ್ಕಕ್ಕೆ ಬಂದರೆ, ಅದರಲ್ಲಿರುವ ಅಣುಗಳ ಜೊತೆಗೆ ಬಂಧ (bond) ಬೆಸೆದು ಆ ಮೇಲ್ಮೈಗೆ ಅಂಟಿಕೊಳ್ಳುತ್ತವೆ.

© B POERSCHKE, SN GORB AND F SCHABER
© ಜೈಕುಮಾರ್ ಆರ್
© Wandering Tiger Spider c.SERGIO AMITI_GETTY IMAGES

ಈ ಹೊಸ ಸಂಶೋಧನೆಯ ಮುಂಚೆಯೇ ಕ್ಲೀಮೆನ್ಸ್ ಗೆ ಜೇಡಗಳು ತನ್ನ ಕಾಲಿನ ಕೂದಲುಗಳ ಸಹಾಯದಿಂದ ಗೋಡೆಯ ಮೇಲೆ ಓಡಾಡಲು ಅಥವಾ ಅಂಟಿಕೊಳ್ಳಲು ಉಪಯೋಗವಾಗುತ್ತದೆ ಎಂದು ತಿಳಿದಿದ್ದರು. ಆದರೆ ಅದು ಅಷ್ಟು ಚೆನ್ನಾಗಿ ಹೇಗೆ ಕೆಲಸಮಾಡುತ್ತದೆ ಎಂದು ತಿಳಿಯಬೇಕಿತ್ತು. ಇದಕ್ಕಾಗಿ ಕ್ಲೀಮೆನ್ಸ್ ಮತ್ತು ಸಹೋದ್ಯೋಗಿಗಳು ದಕ್ಷಿಣ ಅಮೇರಿಕಾದಲ್ಲಿ ಸಿಗುವ ‘ತಿರುಗುವ ಹುಲಿ ಜೇಡ (tiger wandering spider)’ ಎಂಬ ಬಗೆಯ ಜೇಡವನ್ನು ಅಧ್ಯಯನಕ್ಕೆ ತೆಗೆದುಕೊಂಡರು. ಜೇಡದ ಕಾಲುಗಳಲ್ಲಿನ ಕೂದಲನ್ನು ಎಳೆಯಲು ಪ್ರಯತ್ನಿಸಿದರು. ಎಳೆದಾಗ ಒಂದು ಕೂದಲ ಬದಲಿಗೆ ಇಡೀ ಕಾಲೆ ಕಿತ್ತು ಬಂತು. ಓಹ್… ಇದೇನಿದು! ಎಂದು ಆಶ್ಚರ್ಯ ಪಡಬೇಡಿ. ಇದು ಜೇಡವು ತನ್ನ ಭಕ್ಷಕರಿಂದ ತಪ್ಪಿಸಿಕೊಳ್ಳುವ ಒಂದು ಸಾಮಾನ್ಯ ಉಪಾಯ. ಇದಾದ ನಂತರ ಸಂಶೋಧಕರು ಒಂದು ಶಕ್ತಿಯುತವಾದ ಸೂಕ್ಷ್ಮದರ್ಶಕವನ್ನು ಬಳಸಿ ಜೇಡದ ಕಾಲಿನ ಕೂದಲ ಎಳೆಯನ್ನು ಸೂಕ್ಷ್ಮವಾಗಿ ಗಮನಿಸಿದರು. ಮೊದಲಿಗೆ ಕ್ಲೀಮೆನ್ಸ್, ಕೂದಲಿನ ಎಳೆಗಳು ಒಂದೇ ದಿಕ್ಕಿನಲ್ಲಿ ತಿರುಗಿರುತ್ತವೆ ಎಂದು ಭಾವಿಸಿದ್ದರು. ಆದರೆ ಅವರ ಆಶ್ಚರ್ಯಕ್ಕೆ ಕೂದಲಿನ ಎಳೆಗಳು ಒಂದೇ ದಿಕ್ಕಿನ ಬದಲಿಗೆ ಬಹುತೇಕ ಎಲ್ಲಾ ದಿಕ್ಕುಗಳಲ್ಲಿ ತಿರುಗಿದ್ದವು. ಇದಾದ ತಕ್ಷಣ ಕ್ಲೀಮೆನ್ಸ್ ಆ ಕೂದಲೆಳೆಗಳ ಅಂಟುವಿಕೆಯ ಬಲವನ್ನು ಗಾಜಿನ ಮೇಲ್ಮೈ ಕೂಡಾ ಸೇರಿದಂತೆ ಎಲ್ಲಾ ತರಹದ ಮೇಲ್ಮೈಗಳ ಮೇಲೆ ಪರೀಕ್ಷಿಸಿದರು. ಕೆಲವು ಕೂದಲುಗಳು ಒಂದು ದಿಕ್ಕು ಅಥವಾ ಕೋನದಲ್ಲಿ ಹೆಚ್ಚು ಅಂಟಿನ ಬಲವನ್ನು ತೋರಿದರೆ, ಉಳಿದವು ಬೇರೆ ಬೇರೆ ಕೋನಗಳಲ್ಲಿ ತನ್ನ ಅಂಟಿನ ಬಲವನ್ನು ತೋರುತ್ತಿದ್ದವು. ಇದನ್ನು ಕೇಳಿದಾಗ ನಮಗೇ ಅನಿಸುವ ಹಾಗೆ, ಜೇಡ ಯಾವ ಮೇಲ್ಮೈ ಮೇಲಾದರೂ ಕಾಲಿಡಲಿ ಅಥವಾ ಯಾವ ಕೋನದಲ್ಲಾದರೂ ಕಾಲಿಡಲಿ ಸಲೀಸಾಗಿ ನಿಲ್ಲಬಹುದು ಹಾಗು ಓಡಾಟ ನಡೆಸಬಹುದು ಎಂದು. ಇದೇ ಮಾತನ್ನು ಉತ್ತರ ಕ್ಯಾರೋಲಿನಾದ ಜೀವಶಾಸ್ತ್ರಜ್ಞೆ ತಮ್ಮ ಮಾತುಗಳಲ್ಲಿ ಹೇಳುತ್ತಾರೆ… ‘ಹಲವಾರು ಕೂದಲುಗಳು ವಿವಿಧ ದಿಕ್ಕಿನಲ್ಲಿ ತಿರುಗಿರುವುದು ಜೇಡಕ್ಕೆ ಎಲ್ಲಾ ಮೇಲ್ಮೈ ಮೇಲೆ ನಿರಾಯಾಸವಾಗಿ ಅಂಟಿಕೊಳ್ಳುವ ಗುಣವನ್ನು ನೀಡುತ್ತದೆ’ ಎಂದು.

© ಜೈಕುಮಾರ್ ಆರ್

 ‘ಈ ಸಂಶೋಧನೆ ಗಮನ ಸೆಳೆಯುವ ಹಾಗಿದೆ’ ಎಂದು ಸೇರಿಸುತ್ತಾರೆ ಆಲಿ ಧಿನೋಜ್ವಾಲ. ಇವರು ಓಹಿಯೋದ ಒಂದು ವಿಶ್ವವಿದ್ಯಾಲಯದ ವಸ್ತು ವಿಜ್ಞಾನಿ. ‘ಈ ಸಂಶೋಧನೆ ಹೊಸ ತರಹದ ಅಂಟು ಪದಾರ್ಥಗಳನ್ನು ಅಭಿವೃದ್ಧಿಗೊಳಿಸಲು ಪೂರಕವಾಗಿದೆ. ಉದಾಹರಣೆಗೆ ಹೊಸ ಬಗೆಯ ಅಂಟು ಟೇಪನ್ನು ಸೃಷ್ಟಿಸುವಲ್ಲಿ ಈ ಸಂಶೋಧನೆ ನೆರವಾಗಬಹುದು. ಜೊತೆಗೆ ಇಂತಹ ಸಂಶೋಧನೆಗಳು ನಮಗೆ ಕಷ್ಟವೆನಿಸುವ ಕೆಲಸಗಳನ್ನು ಪ್ರಕೃತಿ ಎಷ್ಟು ಸಲೀಸಾಗಿ ಮತ್ತು ಸಮರ್ಥವಾಗಿ ಮಾಡುತ್ತದೆ ಎಂಬ ವಿಷಯವನ್ನು ರುಜುವಾತು ಮಾಡುತ್ತದೆ.’ ಇದನ್ನು ಇನ್ನೊಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋದ ಕ್ಲೀಮೆನ್ಸ್ ಮತ್ತು ಸಹೋದ್ಯೋಗಿಗಳು ಜೇಡದ ಕಾಲಿನ ಕೂದಲುಗಳನ್ನು ಮನುಷ್ಯ ಧರಿಸುವ ಕೈ ಚೀಲಕ್ಕೆ (hand gloves) ವಿವಿಧ ಕೋನಗಳಲ್ಲಿ ಅಳವಡಿಸಿದರು. ಹೀಗೆ ಅಳವಡಿಸಿದ ಕೈ ಚೀಲ ಒಬ್ಬ ವ್ಯಕ್ತಿಯ ತೂಕವನ್ನು ತಡೆಯುವ ಮಟ್ಟಿಗೆ ಬಲವಾಗಿ ಗೋಡೆಯನ್ನು ಹಿಡಿದಿತ್ತು. ಇದರ ಅರ್ಥ ಇಂತಹ ಕೈ ಚೀಲಗಳನ್ನು ಧರಿಸಿ ನಾವೂ ಸಹ ಸಿನೆಮಾದಲ್ಲಿ ತೋರುವ ಸ್ಪೈಡರ್ ಮ್ಯಾನ್ ನಂತೆ ನಿಜವಾಗಿಯೂ ಗೋಡೆಗಳ ಮೇಲೆ ನಡೆಯುವ ಮಹಾಶಕ್ತಿ ಪಡೆದಂತೆ.

ನೋಡಿದರಾ… ಎಲ್ಲೋ ಮನೆಯ ಮೂಲೆಯಲ್ಲಿ ತನ್ನ ಗೂಡು ಕಟ್ಟಿ ನಾನಿಲ್ಲಿ ಇಲ್ಲವೇ ಇಲ್ಲ ಅನ್ನೋ ರೀತಿಯಲ್ಲಿ ಬದುಕುವ ಜೇಡದ ಕಾಲಿನಲ್ಲೇ ಇಂತಹ ಮಹಾಶಕ್ತಿ ಅಡಗಿದೆ. ಹಾಗೆ ನೋಡಿದರೆ ಪ್ರತಿಯೊಂದು ಜೀವಿಯೂ ಜೀವ ವಿಕಾಸದಲ್ಲಿ ನಮಗಿಂತ ಮೊದಲು ಬಂದು ಲಕ್ಷಾಂತರ ವರ್ಷಗಳು ಬದುಕಿ ಈ ದಿನದವರೆಗೆ ನಮಗೆ ನೋಡಲು ಸಿಗುತ್ತಿವೆಯೆಂದರೆ, ಪ್ರಕೃತಿ ಮಾತೆಯ ಸಹಾಯದಿಂದ ಎಲ್ಲವೂ ಯಾವುದೋ ಒಂದು ಮಹಾಶಕ್ತಿಯನ್ನು ಹೊಂದಿವೆ ಎಂದೇ ಅರ್ಥ. ಅಂತಹ ಅತೀವ ಶಕ್ತಿ ಹೊಂದಿರುವ ಪ್ರತೀ ಜೀವಿಯನ್ನು ಹಾಗೂ ಅದನ್ನು ದಯಪಾಲಿಸಿದ ನಿಸರ್ಗ ಮಾತೆಯ ಶಕ್ತಿಯನ್ನು ಗೌರವಿಸಿ, ನಮ್ಮ ಬದುಕಿನ ಪ್ರತೀ ಹೆಜ್ಜೆಯನ್ನು ಎಚ್ಚರದಿಂದ ಇಡಲು ಶುರುಮಾಡೋಣ.

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Print Friendly, PDF & Email
Spread the love
error: Content is protected.