ಪ್ರಕೃತಿ ಬಿಂಬ
© ಅಭಿಷೇಕ್ ಜೆ., ಸಾಮಾನ್ಯ ಮರ ಕಪ್ಪೆ (ಕಾಮನ್ ಇಂಡಿಯನ್ ಟ್ರೀ ಫ್ರಾಗ್)
ಭಾರತ, ಭೂತಾನ್, ನೇಪಾಳ, ಶ್ರೀಲಂಕಾ, ಪಶ್ಚಿಮ ಹಾಗು ದಕ್ಷಿಣ ಬಾಂಗ್ಲಾದೇಶದಾದ್ಯಂತ ಕಂಡುಬರುವ ಈ ಕಪ್ಪೆಗಳು, ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುವ ಮರ ಕಪ್ಪೆಗಳ ಪ್ರಭೇದದಲ್ಲಿ ಒಂದಾಗಿವೆ. ಬೇಸಿಗೆ ಕಾಲದಲ್ಲಿ ಮನೆಗಳಲ್ಲಿ ಹೆಚ್ಚು ತೇವಾಂಶವಿರುವ ಜಾಗಗಳಾದ ಅಡುಗೆ ಕೋಣೆ, ಸ್ನಾನದ ಕೋಣೆಗಳಲ್ಲಿ ಇವು ಕಾಣಸಿಗುತ್ತವೆ.
ಈ ಕಪ್ಪೆಗಳ ದೇಹದ ಉದ್ದಳತೆ 7 ರಿಂದ 8 ಸೆಂಟಿಮೀಟರ್ಗಳಷ್ಟಿದ್ದು. ಕಂದು, ಹಳದಿ, ಬೂದು ಅಥವಾ ಗಾಢವಾದ ಚುಕ್ಕೆ ಹಾಗೂ ಗುರುತುಗಳಿರುವ ಬಿಳಿ ಬಣ್ಣವನ್ನು ಹೊಂದಿರುತ್ತವೆ. ಮೈಯ ಮೇಲ್ಭಾಗ ನಯವಾಗಿದ್ದು, ಹೊಟ್ಟೆಯ ಮೇಲೆ ಹಾಗು ತೊಡೆಯ ಕೆಳಗೆ ಹರಳಾಗಿರುತ್ತವೆ. ತಲೆಯ ಬದಿಯಲ್ಲಿ ಕಣ್ಣುಗಳಿದ್ದು, ಸಾಮಾನ್ಯ ಎಲೆ ಕಪ್ಪೆಗಳಿಗಿರುವಂತೆ ಹಿಂಗಾಲುಗಳು ಜಾಲ ಪಾದಗಳನ್ನು (ಪಾದದ ಬೆರಳುಗಳ ಮಧ್ಯೆ ಚರ್ಮವಿರುವಂಥದ್ದು) ಹೊಂದಿವೆ. ಹೆಣ್ಣು ಕಪ್ಪೆ 1೦೦-4೦೦ ಮೊಟ್ಟೆಗಳನ್ನಿಡುತ್ತವೆ. 3-4 ದಿನಗಳೊಳಗೆ ಆ ಮೊಟ್ಟೆ ಒಡೆಯುತ್ತದೆ. ಹೀಗೆ, ಅವುಗಳು ದೊಡ್ಡ ಕಪ್ಪೆಗಳಾಗಲು ಸುಮಾರು 7 ವಾರಗಳು ಬೇಕಾಗುತ್ತದೆ.
© ಅಭಿಷೇಕ್ ಜೆ., ಕಂದು ಬಣ್ಣದ ಉಷ್ಣವಲಯದ ಕಪ್ಪೆ (ಡಸ್ಕಿ ಟೊರೆಂಟ್ ಫ್ರಾಗ್ ಅಥವಾ ಬ್ರೌನ್ ಟ್ರೊಪಿಕಲ್ ಫ್ರಾಗ್)
ಕಂದು ಬಣ್ಣದ ಉಷ್ಣವಲಯದ ಕಪ್ಪೆಗಳು, ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ಕಂಡುಬರುವ ಸಣ್ಣ ಪ್ರಭೇದದ ಕಪ್ಪೆಗಳು. ಈ ಕಪ್ಪೆಗಳ ನೈಸರ್ಗಿಕ ಆವಾಸಸ್ಥಾನಗಳು ಅರಣ್ಯದಲ್ಲಿ ವೇಗವಾಗಿ ಹರಿಯುವ ತೊರೆಗಳಾಗಿವೆ. ಗಂಡು ಕಪ್ಪೆಗಳ ಅಳತೆ ಸುಮಾರು 27.9-28.8 ಮಿಲಿಮೀಟರ್ಗಳಾದರೆ ಹೆಣ್ಣು ಕಪ್ಪೆಯ ಅಳತೆ ಸುಮಾರು 30.0-33.1 ಮಿಲಿಮೀಟರ್. ಮೂತಿ ಮೊಣಚಾಗಿದ್ದು, ಟಿಂಪ್ಯಾನಮ್ (ಕಿವಿಯ ಭಾಗ) ಚಿಕ್ಕದು ಮತ್ತು ಅಸ್ಪಷ್ಟವಾಗಿದೆ. ಜಾಲ ಪಾದಗಳನ್ನು ಹೊಂದಿವೆ, ಅಂದರೆ ಕಾಲ್ಬೆರಳುಗಳು ಸಂಪೂರ್ಣವಾಗಿ ಜಾಲಬಂಧದಿಂದ ಕೂಡಿರುತ್ತವೆ. ಚರ್ಮವು ಮೇಲೆ ಮತ್ತು ಕೆಳಗೆ ನಯವಾಗಿರುತ್ತದೆ.
© ಅಭಿಷೇಕ್ ಜೆ., ಮಲಬಾರ್ ಹಾರುವ ಕಪ್ಪೆ (ಮಲಬಾರ್ ಗ್ಲೈಡಿಂಗ್ ಫ್ರಾಗ್)
ಮಲಬಾರ್ ಹಾರುವ ಕಪ್ಪೆ ಭಾರತದ ಪಶ್ಚಿಮಘಟ್ಟಗಳ ಬಹುತೇಕ ಪ್ರದೇಶಗಳಲ್ಲಿ ಕಂಡುಬರುತ್ತವೆ. ಸಮುದ್ರಮಟ್ಟದಿಂದ ಸುಮಾರು 3೦೦ – 12೦೦ ಮೀ. ಎತ್ತರವಿರುವ ಪ್ರದೇಶಗಳಲ್ಲಿ ಕಂಡುಬರುವ ಇವು, ಮರಗಪ್ಪೆಗಳ ಒಂದು ಪ್ರಭೇದವಾಗಿವೆ. ನಿತ್ಯ ಹಸಿರಾಗಿರುವಂತಹ ಪ್ರದೇಶಗಳು, ಎಲೆ ಉದುರುವ ಕಾಡುಗಳಲ್ಲಿ, ಮರಗಳ ಮೇಲ್ಭಾಗದಲ್ಲಿ, ಅಡಿಕೆ, ಕಾಫಿ ತೋಟಗಳಲ್ಲಿಯೂ ಕಾಣಬಹುದಾದ ಈ ಕಪ್ಪೆಗಳು, ಸುಮಾರು 1೦ ಸೆ.ಮೀ. ಗಳವರೆಗೆ ಬೆಳೆಯುತ್ತದೆ. ಹಚ್ಚ ಹಸಿರು ಮೈಬಣ್ಣವಿರುವ ದೇಹದಲ್ಲಿ, ಕಪ್ಪು ಹಾಗೂ ಬಿಳಿ ಚುಕ್ಕೆಗಳಿರುತ್ತವೆ. ಇದರ ಹಿಂಭಾಗದ ಅಂಗಗಳು ಸ್ವಲ್ಪ ದೂರದ ಮಟ್ಟಿಗೆ ತೇಲಲು ಸಹಕಾರಿಯಾಗಿವೆ. ಇದರ ಕಾಲು ಬೆರಳುಗಳ ಮಧ್ಯ ಕೆಂಪು ಜಾಲಪೊರೆ ಇರುತ್ತದೆ. ಇದರ ಹಿಮ್ಮಡಿಯ ಮೇಲೆ ಒಂದು ರೀತಿಯ ಗಾಢ ಚರ್ಮವಿದ್ದು ಮರಗಳ ಹಾಗೂ ಪೊದೆಗಳ ಮೇಲೆ ಗಟ್ಟಿಯಾಗಿ ತಳವೂರಲು ಈ ಚರ್ಮದ ವೈಶಿಷ್ಟ್ಯಗಳು ಸಹಾಯ ಮಾಡುತ್ತವೆ. ಇದರ ಕೂಗು “ಕಟ್ ಕಟ್ ಕಟ್ ಕಟಾ ಕಟಾ ಕರ್ ಕರ್ … ” ಎನ್ನುವಂತೆ ಇದ್ದು, ಗಂಡು ಕಪ್ಪೆಗಳು ಹೆಣ್ಣು ಕಪ್ಪೆಗಳಿಗಿಂತ ಗಾತ್ರದಲ್ಲಿ ಚಿಕ್ಕದಿರುತ್ತವೆ.
© ಅಭಿಷೇಕ್ ಜೆ., ನೀರು ಹನಿ ಕಪ್ಪೆ (ವಾಟರ್ ಡ್ರೊಪ್ಲೆಟ್ ಫ್ರಾಗ್)
ನೀರು-ಹನಿ ಕಪ್ಪೆಗಳೆಂದು ಕರೆಯಲ್ಪಡುವ ಈ ಕಪ್ಪೆಗಳು, ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತವೆ. ಹಾಗು ಅವು ಅಲ್ಲೇ ಸ್ಥಳೀಯವಾಗಿರುವ ಕಪ್ಪೆಗಳಾಗಿವೆ. ಇವುಗಳು ಅಳಿವಿನಂಚಿನಲ್ಲಿರುವ ಕಪ್ಪೆಗಳಾಗಿದ್ದು, ಅಪರೂಪದ ಬುಷ್ಫ್ರಾಗ್ ಪ್ರಭೇದದ್ದಾಗಿದೆ. ಮೈಮೇಲೆ ನೀರು ಹನಿಗಳು ಬಿದ್ದಂತೆ ಅಥವಾ ನೀರಿನ ಹನಿಯನ್ನು ಹೋಲುವುದರಿಂದ ಇವುಗಳನ್ನು ನೀರು ಹನಿ ಕಪ್ಪೆಯೆಂದು ಕರೆಯುತ್ತಾರೆ. ಸಾಮಾನ್ಯವಾಗಿ ಎತ್ತರದ ಮರಗಳಲ್ಲಿ ವಾಸಿಸುವ ಇವು ಮುಂಗಾರಿನ ಸಮಯದಲ್ಲಿ ಜೋರಾಗಿ ಶಬ್ದವನ್ನು ಮಾಡುತ್ತವೆ.
ಚಿತ್ರಗಳು: ಅಭಿಷೇಕ್ ಜೆ.
ಲೇಖನ: ಶಾಂಭವಿ ಎನ್.
ನಿಜಕ್ಕೂ ಅದ್ಬುತ
ಕಪ್ಪೆಗಳ ಕುರಿತಾಗಿ ಹಲವು ವಿಷಯಗಳನ್ನು ತಿಳಿದುಕೊಂಡೆ. ಚಿತ್ರಗಳು ಸಹ ರಮಣೀಯವಾಗಿದೆ.
ಧನ್ಯವಾದಗಳು.