ಮುಳ್ಳು ಮಳ್ಳಿ ಬ್ರಹ್ಮದಂಡೆ ಸಸ್ಯ
© ಶಶಿಧರಸ್ವಾಮಿ ಆರ್. ಹಿರೇಮಠ
ನೆಲದಲ್ಲಿ ಹರಡಿ ಬಳುಕುವ ಈ ಶ್ವೇತ ಸುಂದರಿಯನ್ನು ಮುಟ್ಟಲು ಹೋದರೆ ಬೆರಳಿಗೆಲ್ಲ ಮುಳ್ಳುಗಳು ಮುತ್ತಿಡುತ್ತವೆ. ಮೈಮೇಲೆಲ್ಲ ಮುಳ್ಳಿನಿಂದ ತುಂಬಿದ ಮಳ್ಳಿ ಸಸ್ಯವೇ ಬ್ರಹ್ಮದಂಡೆ. ಬ್ರಹ್ಮದಂಡೆಯನ್ನು ಬ್ರಹ್ಮದಂಡಿ, ಉತ್ಕಂಠ, ನರಿಮುಳ್ಳು ಎಂತಲೂ… ಸಸ್ಯಶಾಸ್ತ್ರೀಯವಾಗಿ ಎಕಿನಾಪ್ಸ್ ಎಕಿನೇಟಸ್ (Echinops echinatus) ಎಂದು ಕರೆದು ಅಸ್ಟರೇಸಿ (Asteraceae) ಸಸ್ಯ ಕುಟುಂಬಕ್ಕೆ ಸೇರಿಸಲಾಗಿದೆ.
ಈ ಮೂಲಿಕೆ ಸಸ್ಯವು ಭಾರತ ಮೂಲದ್ದಾಗಿದೆ. ಇದು ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ದೇಶಗಳಲ್ಲಿ ಕಂಡುಬರುತ್ತದೆ. ಪಾಳುಬಿದ್ದ ಭೂಮಿ, ಗುಡ್ಡಗಾಡು ಪ್ರದೇಶ, ಹೊಲಗಳ ಬದುಗಳಲ್ಲಿ ಬೆಳೆಯುವ ಸಸ್ಯವಾಗಿದೆ. ಇದು ಚಿಕ್ಕದಾದ, ಸದೃಢವಾದ ಕಾಂಡಗಳನ್ನು ಹೊಂದಿದೆ. ಬುಡದಿಂದ ಕವಲೊಡೆದು ಹುಲುಸಾಗಿ ಬೆಳೆಯುವುದರಿಂದ ಸಣ್ಣ ಪೊದೆಯಂತೆ ಕಾಣುತ್ತದೆ. ಇದು 1 ರಿಂದ 1.5 ಅಡಿ ಎತ್ತರದವರೆಗೆ ಬೆಳೆಯಬಲ್ಲದು. ಪರ್ಯಾಯವಾಗಿ ಜೋಡಿಸಲ್ಪಟ್ಟ ಉದ್ದವಾದ ಎಲೆಗಳ ಅಂಚು ಸೀಳಾಗಿದೆ. ಈ ಸೀಳುಗಳ ತುದಿಯು ಮುಳ್ಳಿನಂತೆ ಮೊನಚಾಗಿದೆ. ಕಡು ಹಸಿರು ಬಣ್ಣದ ಎಲೆಗಳು 7 ರಿಂದ 12 ಸೆಂ.ಮೀ. ಉದ್ದವಾಗಿರುತ್ತವೆ. ಸಸ್ಯದ ಮೇಲೆಲ್ಲಾ ಬಿಳಿ ವರ್ಣದ ಸೂಕ್ಷ್ಮವಾದ ಕೂದಲುಗಳಿವೆ. ಎಲೆಗಳ ಕಂಕುಳು ಹಾಗೂ ಕಾಂಡದ ತುದಿಯಿಂದ ಮುಳ್ಳುಗಳಿಂದಾವೃತವಾದ 3 ರಿಂದ 5 ಸೆಂ.ಮೀ ಗಾತ್ರದಲ್ಲಿನ ಗೋಳಾಕಾರದ ಚಂಡು ಹೂಗುಚ್ಛ ಬೆಳೆಯುತ್ತವೆ. ಈ ಹೂ ಚಂಡಿನಲ್ಲಿ ಬಿಳುಪಾದ 5 ಮೀ.ಮೀ ನಷ್ಟು ಸಣ್ಣ ಗಾತ್ರದ ಪುಷ್ಪದಳದ ಹೂವುಗಳು ಅರಳುತ್ತವೆ. ಡಿಸೆಂಬರ್-ಜನವರಿ ಮಾಹೆಯು ಹೂಬಿಡುವ ಸಮಯವಾಗಿದೆ.
ಈ ಗಿಡಮೂಲಿಕೆಯು ಪೂಜ್ಯನೀಯ ಸ್ಥಾನವನ್ನು ಹೊಂದಿದ್ದು, ಉತ್ತರ ಕರ್ನಾಟಕದಲ್ಲಿ ಈ ಸಸ್ಯವನ್ನು ದೀಪಾವಳಿ, ಬಲಿ ಪಾಡ್ಯಮಿ ಪೂಜೆಯಲ್ಲಿ ಜನರು ಅದಕ್ಕೆ ವಿಶೇಷ ಸ್ಥಾನ ನೀಡಿ ಜೋಳದ ದಂಟು, ಕೊಲಾಣೆಸೊಪ್ಪು, ಕವಚಿ ಕಡ್ಡಿ, ಉತ್ರಾಣಿ ಕಡ್ಡಿ, ಬೆಂಡು ಹೂ, ತೊಗ್ರಿ ಗಿಡದ ಜೊತೆಯಲ್ಲಿ ಬ್ರಹ್ಮದಂಡೆಯನ್ನು ಸೇರಿಸಿ ಕಟ್ಟಿದ ಐದು ಕಟ್ಟಿನ ಹುಲಸಿನ ಹಂದರ ನಿರ್ಮಿಸಿ “ಹಟ್ಟಿ ಲಕ್ಕವ್ವ”ಳನ್ನು ಸೆಗಣಿಯಿಂದ ಮಾಡಿದ ಗುರ್ಜವ್ವಳನ್ನು ಮಧ್ಯದಲ್ಲಿರಿಸಿ ಪೂಜಿಸಿ ಅಪ್ಪಟ ಗ್ರಾಮೀಣ ಸಂಪ್ರದಾಯಗಳೊಂದಿಗೆ ಆಚರಿಸಲಾಗುತ್ತದೆ.
ಸಸ್ಯದ ವಿವಿಧ ಭಾಗಗಳಾದ ಬೇರುಗಳು, ಎಲೆಗಳು, ತೊಗಟೆ, ಹೂಗಳನ್ನು ನಾಟೀ ಹಾಗೂ ಆಯುರ್ವೇದದ ವೈದ್ಯ ಪದ್ದತಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಚರ್ಮವ್ಯಾಧಿಗೆ, ತುರಿಕೆ, ಗಾಯವಾಸಿಗೆ, ರೋಗ ನಿರೋಧಕ ಶಕ್ತಿ, ಜೀರ್ಣ ಶಕ್ತಿ ಹೆಚ್ಚಿಸಲು, ವೀರ್ಯ ವರ್ಧನೆ, ಲೈಂಗಿಕ ರೋಗ ನಿವಾರಣೆ, ಜ್ವರ ನಿವಾರಕಗಳಲ್ಲಿ ಈ ಸಸ್ಯವನ್ನು ಬಳಸಲಾಗುತ್ತದೆ. ಈ ಸಸ್ಯವು ಕಲಾ (Painted Lady Butterfly-Vanessa cardui) ಚಿಟ್ಟೆಯ ಕಂಬಳಿಹುಳುವಿನ ಆತಿಥ್ಯೇಯ ಸಸ್ಯವಾಗಿದೆ.
ಚಿತ್ರ – ಲೇಖನ: ಶಶಿಧರಸ್ವಾಮಿ ಆರ್. ಹಿರೇಮಠ
ಹಾವೇರಿ ಜಿಲ್ಲೆ
ವನ್ಯಜೀವಿ ಛಾಯಾಗ್ರಹಣ, ಪಕ್ಷಿ, ಕೀಟ, ಸಸ್ಯವಿಕ್ಷಣೆ ಹಾಗೂ ಜೀವಿವೈವಿದ್ಯತೆಯಕುರಿತಾಗಿ ನಾಡಿನ ದಿನಪತ್ರಿಕೆ, ಮಾಸ ಪತ್ರಿಕೆಗಳಿಗೆ ಲೇಖನ ಬರೆಯುವುದು, ಹಾಗೂ ಪುಸ್ತಕ ಬರೆಯುವುದು.
ಶಾಲಾ-ಕಾಲೇಜುಗಳಿಗೆ ತೆರಳಿವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಜೀವವೈವಿದ್ಯದ ಬಗ್ಗೆ ಛಾಯಾಚಿತ್ರಗಳ ಸ್ಲೈಡ್ಶೋ ಮುಖಾಂತರ ವಿವರಣೆಯೊಂದಿಗೆ ತಿಳಿಹೇಳಿ ಜಾಗೃತಿ ಮೂಡಿಸುವುದು.