ಹಾಕಿ ಚಿಟ್ಟೆಯ ಸುತ್ತ ನನ್ನ ಚಿತ್ತ

ಹಾಕಿ ಚಿಟ್ಟೆಯ ಸುತ್ತ ನನ್ನ ಚಿತ್ತ

© ರಘುಕುಮಾರ್ ಸಿ.

ಹೀಗೆ ಒಂದು ದಿನ ಬೆಳಿಗ್ಗೆ ಬೇಗ ಎದ್ದು ಎಂದಿನಂತೆ ನಾನು ನಮ್ಮ ಪಕ್ಕದ ಊರಿನ ಮಳೂರು ಕೆರೆಗೆ ಪಕ್ಷಿ ವೀಕ್ಷಣೆಗೆಂದು ಹೊರಟೆ. ಹಿಂದಿನ ದಿನ ಮಳೆಯಾಗಿದ್ದ ಕಾರಣ ಆ ಪ್ರದೇಶವೆಲ್ಲ ಒದ್ದೆ ಒದ್ದೆಯಾಗಿ ಸುತ್ತಲಿನ ಗಿಡ, ಮರಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು.  ಕೆರೆಯ ಪ್ರಾರಂಭದ ಅಂಚಿನಲ್ಲೇ ಟುವ್ವಿ ಹಕ್ಕಿಯೊಂದು ಟುವ್ವಿ..ಟುವ್ವಿ.. ಎಂದು ಹಾಡುತ್ತಾ ಒಂದು ಬಳ್ಳಿಯ ಮೇಲೆ ಕುಳಿತು ಮುಗಿಲು ಮುಟ್ಟುವ ಹಾಗೆ ಹಾಡುತ್ತಿತ್ತು.  ಅದನ್ನು ದೂರದಿಂದಲೇ ನೋಡಿದ ನಾನು ನನ್ನ ನಡಿಗೆಯನ್ನು ತಕ್ಷಣ ನಿಲ್ಲಿಸಿ, ಸ್ವಲ್ಪ ಸಮಯ ಅಲ್ಲೆ ನಿಂತು ಟುವ್ವಿ ಹಕ್ಕಿಯ ಹಾಡನ್ನು ಕೇಳುತ್ತಾ, ಅದನ್ನೇ ನೋಡುತ್ತಾ ಮಗ್ನನಾಗಿ ನಿಂತೆ. ಸ್ವಲ್ಪ ಸಮಯದ ನಂತರ ಹಾಗೆ ಮುಂದೆ ಸಾಗುತ್ತಾ ಹೋದಂತೆ ಅಲ್ಲೇ ಪಕ್ಕದ ಬೇಲಿಯಲ್ಲಿ ಕುಳಿತಿದ್ದ ಕೆಂಪು ಕಿಬ್ಬೊಟ್ಟೆಯ ಪಿಕಳಾರ ಒಂದು ಬಿಳಿ ಹಣ್ಣನ್ನು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡು ಹಾರಿಹೋಯಿತು. ಅದು ಯಾವ ಹಣ್ಣು ಎಂದು ತಿಳಿಯಲು ನಾನು  ಮುಳ್ಳುಗಳಿರುವ ಆ ಪೊದೆಯ ಬಳಿ ಸಾಗಿದೆ. ಅದು ಕುಂಡಲಿ ಗಿಡದಲ್ಲಿ ಬಿಟ್ಟ ಬಿಳಿ ಬಣ್ಣದ ಹಣ್ಣು ಎಂದು ತಿಳಿಯಲು ನನಗೆ ಹೆಚ್ಚು ಸಮಯಹಿಡಿಯಲಿಲ್ಲ. ಹಾಗೆ ಆ ಗಿಡವನ್ನೇ ಗಮನಿಸುತ್ತಿದ್ದ ನನಗೆ ಅದರ ಒಂದು ಎಲೆಯು, ತನ್ನ ವಿಭಿನ್ನ ಅರಿಶಿಣ ಬಣ್ಣದಿಂದ ನನ್ನ ಗಮನ ಸೆಳೆಯಿತು. ಸೂಕ್ಷ್ಮವಾಗಿ ಗಮನಿಸಿದ ನನಗೆ ಆಶ್ಚರ್ಯ ಕಾದಿತ್ತು. ಅದು ಎಲೆಯ ಬಣ್ಣವಾಗಿರಲಿಲ್ಲ; ಒಂದು ಬಗೆ ಚಿಟ್ಟೆಯ ಮೊಟ್ಟೆಗಳಾಗಿತ್ತು. ನನಗೆ ಕಂಬಳಿ ಹುಳು ಚಿಟ್ಟೆಯಾಗುವ ಪರಿ ತಿಳಿಯಬೇಕೆಂದು ಬಹಳ ದಿನಗಳಿಂದ ಕುತೂಹಲವಿತ್ತು.ಇದಕ್ಕೆ ತೆರೆ ಎಳೆಯಲು ಇದೇ ಸದಾವಕಾಶವೆಂದು ನಿಶ್ಚಯಿಸಿ, ಪ್ರತಿನಿತ್ಯ ಆ ಮೊಟ್ಟೆಯನ್ನು ಗಮನಿಸಿ ಮೊಟ್ಟೆಯಿಂದ ಯಾವ ರೀತಿ ಚಿಟ್ಟೆ ಹೊರ ಬರಬಹುದು ಎಂದು ತಿಳಿಯಲು ಮುಂದಾದೆ.

© ರಘುಕುಮಾರ್ ಸಿ.

ಅಂದಿನಿಂದ ಪ್ರತೀ ದಿನ ಮುಂಜಾನೆ ಅಲ್ಲಿಗೆ ಭೇಟಿ ನೀಡಿ ಆ ಮೊಟ್ಟೆಗಳನ್ನು ಗಮನಿಸುವುದು ನನ್ನ ದಿನಿನಿತ್ಯದ ಕಾರ್ಯಗಳಲ್ಲಿ ಒಂದಾಯಿತು. ಮೂರು, ನಾಲ್ಕು ದಿನಗಳ ನಂತರ ಆ ಮೊಟ್ಟೆಗಳು ಎಲೆಗಳ ಮೇಲೆ ಸಣ್ಣ ಸಣ್ಣ ಹುಳುಗಳಾಗಿ ಅಲ್ಲೇ ಇದ್ದ ಕುಂಡಲಿ ಎಲೆಗಳನ್ನು ಆಹಾರವನ್ನಾಗಿ ತಿನ್ನುತ್ತಾ ಹರಿದಾಡುತ್ತಿದ್ದದನ್ನು ನೋಡಿ ಕೆಲವೊಂದಷ್ಟು ಫೋಟೋ ತೆಗೆದುಕೊಂಡೆ. ಮೂರು ದಿನಗಳ ನಂತರ ಅಲ್ಲೇ ಕೆಲವು ಸಣ್ಣದಾಗಿ ಇದ್ದ ಕಂಬಳಿ ಹುಳುಗಳು ಸ್ವಲ್ಪ ದಪ್ಪವಾಗಿ ಗಿಡದ ಮೇಲೆಲ್ಲಾ ಹರಿಯುತ್ತಾ ಎಲೆಗಳನ್ನು ತಿನ್ನುತ್ತಿದ್ದವು. ಆದರೆ ಒಂದು ವಿಷಯ ಗಮನಕ್ಕೆ ಕಂಡುಬಂದದ್ದು ಏನೆಂದರೆ ನೂರಾರು ಚಿಟ್ಟೆಯ ಮೊಟ್ಟೆಗಳಲ್ಲಿ ಕೆಲವೇ ಕೆಲವು ಬೆರಳೆಣಿಕೆಯಷ್ಟು ಮಾತ್ರ ಕಂಬಳಿ ಹುಳುಗಳಾಗಿದ್ದವು. ನಂತರ ಅವು ಪ್ಯೂಪ ರೂಪವಾಗಿ ಅಲ್ಲೇ ಪಕ್ಕದ ಗಿಡಗಳಲ್ಲಿ ಬೆಳೆಯುತ್ತಾ ಹೋದವು. ಒಂದು ವಾರದ ಬಳಿಕ ಬೆಳಗಿನ ಸಮಯ 7.30 ರಿಂದ 9.30 ಸಮಯದ ನಡುವೆ ಈ ಚಿಟ್ಟೆಗಳು ಪ್ಯೂಪದಿಂದ ಹೊರಬರುವ ದೃಶ್ಯಗಳು ಅಲ್ಲಲ್ಲೇ ಕಾಣತೊಡಗಿದವು. ಆ ದೃಶ್ಯವನ್ನು ನೋಡಿ ಮೈಯೆಲ್ಲಾ ರೋಮಾಂಚನವಾಯಿತು. ಒಂದು ಸಣ್ಣ ಕಂಬಳಿ ಹುಳುವಿನಿಂದ ಚಿಟ್ಟೆ ಹೇಗೆ ಹೊರಬರುತ್ತದೆ ಎಂಬ ನನ್ನ ಕುತೂಹಲಕ್ಕೆ ಅಂದು ಉತ್ತರ ಸಿಕ್ಕಂತಾಯಿತು…

© ರಘುಕುಮಾರ್ ಸಿ.

ಈ ಅಪರೂಪದ ದೃಶ್ಯವನ್ನು ಕಣ್ತುಂಬಿಸಿಕೊಳ್ಳುತ್ತಾ ಇವು ಹಾರಿ ಎತ್ತ ಕಡೆ ಹೋಗುತ್ತವೆ ಎಂದು ತಿಳಿಯಲು ಅಲ್ಲೇ ಕುಳಿತೆ. ಆದರೆ ನನ್ನ ಎಣಿಕೆಯಂತೆ ಅವು ಪ್ಯೂಪದಿಂದ ಹೊರ ಬಂದ ತಕ್ಷಣ ಹಾರದೆ ಸುಮ್ಮನೆ ಕುಳಿತವು. ಈ ನಡವಳಿಕೆಯನ್ನು ತಿಳಿಯದೆ ನಾನು ಚಿಟ್ಟೆಯ ಹತ್ತಿರಕ್ಕೆ ಹೋಗಿ ನೋಡಿದಾಗ ತಿಳಿದದ್ದು, ಈ ಚಿಟ್ಟೆಗಳ ರೆಕ್ಕೆಗಳು ಒದ್ದೆಯಾಗಿವೆ ಅದಕ್ಕಾಗಿ ಅವು ಹಾರಲು ಸಾಧ್ಯವಾಗುತ್ತಿಲ್ಲ ಎಂದು. ಆದ ಕಾರಣ ಇವು ಸೂರ್ಯನ ಬಿಸಿಲಿನಲ್ಲಿ ಸ್ವಲ್ಪ ಸಮಯ ರೆಕ್ಕೆಗಳನ್ನು ಒಣಗಿಸುತ್ತಾ ಕುಳಿತಿದ್ದವು. ನಂತರ ರೆಕ್ಕೆಗಳನ್ನು ಬಿಚ್ಚಿ ಬಡಿಯುತ್ತ ಬೇರೊಂದೆಡೆಗೆ ಹಾರಿಹೋದವು. . .


ಚಿತ್ರ
ಲೇಖನ: ರಘುಕುಮಾರ್ ಸಿ.
             ರಾಮನಗರ ಜಿಲ್ಲೆ

Print Friendly, PDF & Email
Spread the love

2 thoughts on “ಹಾಕಿ ಚಿಟ್ಟೆಯ ಸುತ್ತ ನನ್ನ ಚಿತ್ತ

  1. ಅದ್ಬುತ ಬರಹ. ಒಳ್ಳೆಯ ಮಾಹಿತಿ ಮತ್ತು ಚಿತ್ರಗಳು

Comments are closed.

error: Content is protected.