ಮಣ್ಣಿನಿಂದ ಮನೆ ಕಟ್ಟಿಕೊಂಡು ವಾಸಿಸುವ ಪಕ್ಷಿ ರೂಫಸ್ ಹಾರ್ನೆರೋ

ಮಣ್ಣಿನಿಂದ ಮನೆ ಕಟ್ಟಿಕೊಂಡು ವಾಸಿಸುವ ಪಕ್ಷಿ ರೂಫಸ್ ಹಾರ್ನೆರೋ

BY-SA 4.0

ಭೂಮಿಯ ಜೀವ ವೈವಿಧ್ಯವು ಅತ್ಯಂತ ಕೌತುಕಮಯ ಹಾಗೂ ಅದ್ಭುತಗಳಿಂದ ಕೂಡಿದೆ. ಜೀವರಾಶಿಗಳ ಪೈಕಿ ಮಣ್ಣಿನಿಂದ ಮನೆಯನ್ನು ಕಟ್ಟಿಕೊಂಡು ಕೆಲವೇ ಕೆಲವು ಜೀವಿಗಳು ಜೀವಿಸುತ್ತವೆ. ಆದರೆ ಒಂದು ಪಕ್ಷಿಯೂ ಮಣ್ಣಿನಿಂದ ತನಗೆ ಅಗತ್ಯವಿರುವ ಆಕಾರದ ಮತ್ತು ಒಂದು ನಿರ್ದಿಷ್ಟವಾದ ಗಾತ್ರದ ಮನೆಯನ್ನು ಮರದ ಮೇಲೆ ಕಟ್ಟಿಕೊಂಡು ಅದರಲ್ಲಿ ಜೀವಿಸುತ್ತದೆಯೆಂದರೆ ನಂಬುತ್ತೀರಾ? ಹೌದು ನಂಬಲೇ ಬೇಕು. ಇಲ್ಲೊಂದು ಪಕ್ಷಿಯಿದ್ದು, ಇದು ಮರದ ಮೇಲ್ಭಾಗದಲ್ಲಿ ಮಳೆ ಗಾಳಿಗೂ ಅಂಜದೇ ಸದೃಢವಾದ ಮಣ್ಣಿನ ಮನೆಯನ್ನು ಕಟ್ಟಿಕೊಂಡು ವಾಸಿಸುತ್ತದೆ. ಅದುವೇ ‘ರೂಫಸ್ ಹಾರ್ನೆರೋ ಪಕ್ಷಿ’ (ಫರ್ನೇರಿಯಸ್ ರುಫುಸ್). ಇದು ‘ಫರ್ನಾರಿಡೆ’ ಪ್ರಭೇದದ ಮಧ್ಯಮ ಗಾತ್ರದ ಪಕ್ಷಿಯಾಗಿದೆ. ಫರ್ನೇರಿಯಸ್ ಲ್ಯಾಟಿನ್ ಭಾಷೆಯಿಂದ ಬಂದಿದ್ದು, ಇದರರ್ಥ ‘ಓವನ್’ ಅಥವಾ ಒಲೆ ಎಂದು. ಇವುಗಳು ಹೆಚ್ಚಾಗಿ ಪೂರ್ವ ದಕ್ಷಿಣ ಅಮೆರಿಕಾದಲ್ಲಿ ವಾಸಿಸುತ್ತವೆ. ಇದು ಅರ್ಜೆಂಟೀನಾ ಹಾಗು ಉರುಗ್ವೆ ದೇಶಗಳ ರಾಷ್ಟ್ರಪಕ್ಷಿಯೂ ಆಗಿದ್ದು, ಇದನ್ನು ‘ಕೆಂಪು ಓವನ್ಬರ್ಡ್’ ಎಂದು ಕರೆಯಲಾಗುತ್ತದೆ. ಗಂಡು ಮತ್ತು ಹೆಣ್ಣು ಪಕ್ಷಿಗಳು ಜೊತೆಯಾಗಿಯೇ ಜೀವಿಸುವುದರಿಂದ ಸವನ್ನಾ ಹುಲ್ಲುಗಾವಲು, ಕುರುಚಲು ಕಾಡು, ಹುಲ್ಲುಗಾವಲು ಪ್ರದೇಶಗಳಲ್ಲಿ ಮತ್ತು ಕೃಷಿ ಭೂಮಿಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ.

© BY-SA 2.0

ರೂಫಸ್ ಹಾರ್ನೆರೋ ಪಕ್ಷಿಯು, ಆಗ್ನೇಯ ಮತ್ತು ದಕ್ಷಿಣ ಬ್ರೆಜಿಲ್, ಬೊಲಿವಿಯಾ, ಪರುಗ್ವೆ, ಉರುಗ್ವೆ, ಉತ್ತರ ಹಾಗೂ ಮಧ್ಯ ಅರ್ಜೆಂಟೀನಾ ದೇಶಗಳಲ್ಲೂ ಕಾಣಸಿಗುತ್ತವೆ. ಈ ಪಕ್ಷಿಯು ಚೌಕಾಕಾರದ ಬಾಲ ಮತ್ತು ಕೊಳೆತಂತೆ ಕಾಣಿಸುವ ಕೊಕ್ಕನ್ನು ಹೊಂದಿದೆ. ಇದರ ಪುಕ್ಕಗಳು ಕೆಂಪು ಮಿಶ್ರಿತ ಕಂದು ಬಣ್ಣದ್ದಾಗಿದ್ದು, ತಿಳಿ ಕಂದು ಬಣ್ಣದ ತಲೆ ಹಾಗೂ ಬಿಳಿ ಗಂಟಲನ್ನು ಹೊಂದಿರುತ್ತದೆ. ಗಂಡು ಮತ್ತು ಹೆಣ್ಣು ರೂಫಸ್ ಹಾರ್ನೆರೋ ಪಕ್ಷಿಗಳು ರೂಪದಲ್ಲಿ ನೋಡಲು ಸಾಮಾನ್ಯವಾಗಿ ಒಂದೇ ರೀತಿಯಿದ್ದು, ಇವು ಮಣ್ಣಿನಲ್ಲಿರುವ ಕೀಟ ಮತ್ತು ಸಂಧೀಪದಿಗಳನ್ನು ಹುಡುಕಿ ಹೆಕ್ಕಿ ತಿನ್ನುವುದರೊಂದಿಗೆ ಅಪರೂಪಕ್ಕೆ ಧಾನ್ಯಗಳನ್ನೂ ತಿನ್ನುತ್ತವೆ.

ರೂಫಸ್ ಹಾರ್ನೆರೋ ಪಕ್ಷಿಗಳ ಕೂಗುವಿಕೆಯು ಗಂಡು ಮತ್ತು ಹೆಣ್ಣು ಪಕ್ಷಿಗಳಲ್ಲಿ ವಿಭಿನ್ನವಾಗಿರುತ್ತದೆ. ಗಂಡು ಪಕ್ಷಿಗಳು ನಿರಂತರವಾಗಿ ಕೂಗುತ್ತಾ, ಕೂಗಿಗೆ ಅನುಗುಣವಾಗಿ ತಮ್ಮ ಬಾಲಗಳನ್ನು ಮೇಲೆ ಕೆಳಗೆ ಬಡಿಯುವ ಮೂಲಕ ಹೆಣ್ಣು ಪಕ್ಷಿಯನ್ನು ಆಕರ್ಷಿಸುತ್ತವೆ. ಹೆಣ್ಣು ಪಕ್ಷಿಯ ಕಲರವ ತೀರಾ ನಿಧಾನವಾಗಿದ್ದು, ಪಕ್ಷಿಯು ಕೂಗುವ ಮತ್ತು ಬಾಲವನ್ನು ಬಡಿಯುವ ವೇಗದಿಂದ ಗಂಡು ಮತ್ತು ಹೆಣ್ಣು ಪಕ್ಷಿಗಳು ಯಾವುದೆಂದು ಗುರುತಿಸಬಹುದು. ಗಿಡುಗಗಳು, ಸಣ್ಣ ಸಸ್ತನಿಗಳು, ಕಾಡು ಬೆಕ್ಕುಗಳು ಮತ್ತು ಹಲವಾರು ಜಾತಿಯ ಹಾವುಗಳು ಮತ್ತು ದೊಡ್ಡ ಗಾತ್ರದ ಹಲ್ಲಿಗಳು ಈ ಪಕ್ಷಿಗಳನ್ನು ಬೇಟೆಯಾಡುತ್ತವೆ. ಆದರೂ ಈ ಪಕ್ಷಿಗಳು ಮುಚ್ಚಿದ ಗೂಡಿನಲ್ಲಿ ವಾಸಿಸುವುದರಿಂದ ಇವುಗಳಿಗೆ ಪರಭಕ್ಷಕಗಳಿಂದ ಅಪಾಯ ತಕ್ಕಮಟ್ಟಿಗೆ ಕಡಿಮೆ.

© BY-SA 4.0

 ಹೆಣ್ಣು ಪಕ್ಷಿಯು ಆಗಸ್ಟ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಮೊಟ್ಟೆಯಿಡುವುದರಿಂದ ಮೊಟ್ಟೆಯಿಡುವ ಪೂರ್ವದಲ್ಲಿ ಗಂಡು ಮತ್ತು ಹೆಣ್ಣು ಹಾರ್ನೆರೋ ಪಕ್ಷಿಗಳು ಎರಡೂ ಸೇರಿ ಮಣ್ಣಿನಿಂದ ಗೂಡನ್ನು ಕಟ್ಟುತ್ತವೆ. ಇದೇ ಗೂಡಿನೊಳಗೆ ಹೆಣ್ಣು ಪಕ್ಷಿಯು ಮೊಟ್ಟೆಯಿಟ್ಟು ಅದಕ್ಕೆ ಕಾವು ಕೊಟ್ಟು ಮರಿ ಮಾಡಿ, ಮರಿಗಳನ್ನು ಇದೇ ಗೂಡಿನಲ್ಲಿ ಬೆಳೆಸುತ್ತವೆ. ಮರಿಗಳು ತಾಯಿಯ ಮುಂದಿನ ಸಂತಾನೋತ್ಪತ್ತಿಯ ಅವಧಿಯವರೆಗೂ ಇದೇ ಗೂಡಿನಲ್ಲಿ ಉಳಿಯುತ್ತವೆ. ಗಂಡು ಹಾರ್ನೆರೋ ಒಂದೇ ಹೆಣ್ಣು ಪಕ್ಷಿಯೊಂದಿಗೆ ದೀರ್ಘಕಾಲಿಕವಾಗಿ ಬದುಕುವ ಮೂಲಕ ಏಕ ಪತ್ನಿತ್ವ ಪದ್ದತಿಗೆ ಒತ್ತು ನೀಡುತ್ತದೆ.

ಹೆಣ್ಣು ಪಕ್ಷಿಯು ಒಮ್ಮೆಗೆ ಎರಡರಿಂದ ಮೂರು ಮೊಟ್ಟೆಗಳನ್ನಿಟ್ಟು, ನಂತರ ಹೆಣ್ಣು ಮತ್ತು ಗಂಡು ಪಕ್ಷಿಗಳು 14–18 ದಿನಗಳ ಕಾಲ ಮೊಟ್ಟೆಗಳಿಗೆ ಕಾವುಕೊಡುತ್ತವೆ. ಗಂಡು ಪಕ್ಷಿಯು ಆಹಾರವನ್ನು ತಂದು ತಾಯಿ ಪಕ್ಷಿಗೆ ನೀಡುತ್ತದೆ. ತಾಯಿ ಪಕ್ಷಿಯು ಮರಿಗಳಿಗೆ 23 ರಿಂದ 26 ದಿನಗಳವರೆಗೆ ಆಹಾರವನ್ನು ತನ್ನ ಕೊಕ್ಕಿನಿಂದಲೇ ತಿನ್ನಿಸುತ್ತದೆ. ಹಾರಾಡಲು ಕಲಿತ ಮರಿಗಳು ಮುಂದಿನ ಆರು ತಿಂಗಳುಗಳವರೆಗೆ ಅಥವಾ ತಾಯಿಯು ಮುಂದಿನ ಸಂತಾನೋತ್ಪತ್ತಿಗೆ ಸಿದ್ಧಗೊಳ್ಳುವವರೆಗೂ ಅದೇ ಗೂಡಲ್ಲಿದ್ದು, ನಂತರ ಇವುಗಳು ಹೆತ್ತವರಿಂದ ಪ್ರತ್ಯೇಕಗೊಳ್ಳುತ್ತವೆ. ಇವುಗಳು ಮುಂದಿನ ಸಂತಾನೋತ್ಪತ್ತಿಗೂ ತನ್ನ ಹಳೆಯ ಗೂಡನ್ನೇ ಮರುಬಳಕೆ ಮಾಡಿದರೆ, ಗೂಡುಗಳನ್ನು ರಿಪೇರಿ ಮಾಡಿ ನವೀಕರಿಸಿಕೊಳ್ಳುವುದು ಇವುಗಳ ವಿಶೇಷತೆ. ಇವುಗಳು ಜನವಸತಿ ಇರುವ ಉಪನಗರಗಳಲ್ಲೂ ಗೂಡುಕಟ್ಟಿಕೊಂಡು ವಾಸಿಸುತ್ತವೆ. ಈ ಪಕ್ಷಿಗಳು ಗೂಡುಬಿಟ್ಟು ಹೋದ ನಂತರ ಈ ಗೂಡುಗಳನ್ನು ಇತರ ಸಣ್ಣಪುಟ್ಟ ಪಕ್ಷಿಗಳು ವಾಸಿಸಲು ಬಳಸುವುದೂ ಇದೆ. ಇವುಗಳು ಮನುಷ್ಯನ ಜೀವನದೊಂದಿಗೆ ಸಮಾನಾಂತರವಾಗಿಯೂ ಜೀವಿಸುತ್ತವೆ.

ಈ ರೂಫಸ್ ಹಾರ್ನೆರೋ ಪಕ್ಷಿಯು 7 ರಿಂದ 8 ಇಂಚು ಉದ್ದವಿದ್ದು, 31 ರಿಂದ 58 ಗ್ರಾಂ ತೂಗುತ್ತದೆ. ಗಂಡು ಪಕ್ಷಿಯು ಹೆಣ್ಣಿಗಿಂತ ಹೆಚ್ಚು ಭಾರವಾಗಿದ್ದು, ಕೀಟಗಳನ್ನು ತಿನ್ನುವುದಕ್ಕೆ 2.5 ಸೆಂ.ಮೀ ಉದ್ದದ ಚೂಪಾದ ಕೊಕ್ಕನ್ನು ಹೊಂದಿರುತ್ತದೆ. ರೆಕ್ಕೆಗಳ ಉದ್ದವು 10.2 ಸೆಂ.ಮೀ ಮತ್ತು ಬಾಲವು 7.1 ಸೆಂ.ಮೀ ಉದ್ದವಿದ್ದು, ಇದರ ರೆಕ್ಕೆಗಳು ಮಸುಕಾದ ಕಂದು ಬಣ್ಣದ್ದಾಗಿರುತ್ತದೆ.

© Public Domain

ಈ ಪಕ್ಷಿಗಳು ತಮ್ಮ ಸಂಸಾರಕ್ಕಾಗಿ ಮಣ್ಣಿನಿಂದ ಗೂಡು ಕಟ್ಟುವುದು ಇವುಗಳ ವೈಶಿಷ್ಟ್ಯತೆ. ಮರದ ಮೇಲೆ, ದೂರವಾಣಿ ಕಂಬಗಳು ಮತ್ತು ಕಟ್ಟಡಗಳ ಗೋಡೆಗಳಲ್ಲಿ ಜೇಡಿಮಣ್ಣಿನಿಂದ ಒಲೆಯಂತಹ (ಓವನ್) ದಪ್ಪದಾದ ಗೂಡನ್ನು ಕಟ್ಟುತ್ತವೆ. ಇವುಗಳು ಕೇವಲ ಎರಡೇ ವಾರಗಳಲ್ಲಿ 4.5 ಕಿಲೋ ತೂಕದ ಹಸಿ ಮಣ್ಣಿಗೆ ಹುಲ್ಲನ್ನು ಸೇರಿಸಿ ಮಿಶ್ರಣ ಮಾಡಿ ಸರಿ ಸುಮಾರು ಎರಡು ಸಾವಿರ ಉಂಡೆಗಳಾಗಿ ಪರಿವರ್ತಿಸುತ್ತವೆ. ಈ ಉಂಡೆಗಳನ್ನು ಮರದ ಮೇಲೆ ಅಥವಾ ಮನೆಯ ಛಾವಣಿಯ ಮೇಲೆ ತಂದು ಹದ ಮಾಡಿ ಗಟ್ಟಿಮುಟ್ಟಾದ ಗುಮ್ಮಟದಂತಹ ಮನೆಯನ್ನು ಕುಂಬಾರನ ಕೌಶಲಕ್ಕೆ ಸಮಾನವಾಗಿ ಕಟ್ಟುತ್ತವೆ. ಮಣ್ಣಿನ ಒಲೆಯಂತಹ ರಚನೆಯನ್ನು ಮಾಡಿ ಒಳಗೆ ಹೋಗಲು ಮತ್ತು ಹೊರಬರಲು ಅಗತ್ಯವಿರುವಷ್ಟೇ ಸಣ್ಣ ರಂಧ್ರವನ್ನು ಬಿಟ್ಟು ಉಳಿದೆಡೆ ಪೂರ್ತಿಯಾಗಿ ಮುಚ್ಚುತ್ತವೆ. ಈ ಗೂಡಿನ ಬಾಗಿಲು ಹೊರಗಡೆಗೆ ಕಾಣಿಸುವಂತಿರದೇ ಗುಪ್ತವಾಗಿರುವುದರಿಂದ ಈ ಪಕ್ಷಿಗಳ ಶತ್ರುಗಳು ಇವುಗಳ ಮೊಟ್ಟೆ, ಮರಿಗಳನ್ನು ಕದಿಯಲು ಸುಲಭವಾಗಿ ಗೂಡಿಗೆ ಪ್ರವೇಶಿಸಲಾಗುವುದಿಲ್ಲ.

ಈ ಪಕ್ಷಿಗಳು ಗೂಡು ಕಟ್ಟುವಾಗ ಕೊಂಬೆಯ ಮೇಲೆ ನೇರವಾಗಿ ಕಟ್ಟದೇ, ಮಣ್ಣಿನ ಉಂಡೆಗಳನ್ನು ಸೇರಿಸುವಾಗ ಗುಮ್ಮಟದ ಮೇಲ್ಛಾವಣಿಯು ಒಳಮುಖವಾಗಿ ವಕ್ರವಾಗಿರುವುದರಿಂದ ಗೂಡುಗಳು ಕುಸಿಯುವ ಅಪಾಯ ಕಡಿಮೆ. ಪಕ್ಷಿಗಳು ಮನೆಯ ಛಾವಣಿಯ ಕಡೆಗೆ ಮುಕ್ಕಾಲು ಭಾಗದಷ್ಟು ಬಾಗಿದ ಆಂತರಿಕ ಗೋಡೆಯನ್ನು ನಿರ್ಮಿಸಿ, ಬಾಗಿಲು ಮತ್ತು ಗೂಡಿನ ಕುಹರದ (Ventricle) ನಡುವೆ ಪ್ರವೇಶ ಕೋಣೆಯನ್ನು ರಚಿಸುತ್ತವೆ. ಪರೋಕ್ಷವಾದ ಪ್ರವೇಶದ್ವಾರದಿಂದಾಗಿ ತನ್ನ ಶತ್ರುಗಳು ನೇರವಾಗಿ ಗೂಡಿನೊಳಗೆ ಪ್ರವೇಶಿಸಲು ಅಸಾಧ್ಯವಾಗುತ್ತದೆ. ಪ್ರವೇಶ ದ್ವಾರದ ನಯವಾದ ಕಾಂಕ್ರೀಟ್ನಂತಹ ಒಣಗಿದ ಮಣ್ಣು ಶತ್ರುಗಳನ್ನು ದಾಳಿಯಿಂದ ಹಿಮ್ಮೆಟ್ಟಿಸುತ್ತದೆ. ಇವುಗಳು ಬಹುಮಹಡಿಯ ಗೂಡುಗಳನ್ನೂ ತನ್ನ ಅಗತ್ಯತೆಗನುಗುಣವಾಗಿ ಕಟ್ಟುತ್ತವೆ.


ಲೇಖನ: ಸಂತೋಷ್ ರಾವ್ ಪೆರ್ಮುಡ
             ದಕ್ಷಿಣ ಕನ್ನಡ ಜಿಲ್ಲೆ

Print Friendly, PDF & Email
Spread the love
error: Content is protected.