ಪ್ರಕೃತಿ ಬಿಂಬ
© ಕಾಂತರಾಜು ಡಿ., ಬೆಳ್ಗಣ್ಣ
ಭಾರತ, ಇಂಡೋನೇಷ್ಯಾ, ಮಲೇಷ್ಯಾದ ಕಾಡುಗಳಲ್ಲಿ ಕಂಡುಬರುವ ಬೆಳ್ಗಣ್ಣ ಪಕ್ಷಿಯು ಗುಬ್ಬಚ್ಚಿ ಗಾತ್ರದ ಪಕ್ಷಿಯಾಗಿದ್ದು, ಕಣ್ಣಿನ ಸುತ್ತಲು ಬಿಳಿ ಅಂಚು ಹೊಂದಿರುವ ಹಕ್ಕಿಗಳ ಕುಟುಂಬಕ್ಕೆ ಸೇರಿದೆ. ಇವುಗಳ ಮೈ ಮೇಲ್ಭಾಗ, ಕೊರಳು ಹಾಗೂ ಬಾಲವು ಹಳದಿ ಅಥವಾ ಹಸಿರು ಮಿಶ್ರಿತ ಹಳದಿ ಬಣ್ಣದ್ದಾಗಿದ್ದು, ಕಣ್ಣಿನ ಸುತ್ತಲೂ ಬಿಳಿ ಉಂಗುರವಿರುತ್ತದೆ. ಹೆಣ್ಣು ಹಾಗೂ ಗಂಡು ಪಕ್ಷಿಗಳ ಬಣ್ಣದಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಹೂಗಳಲ್ಲಿನ ಕೀಟ ಹಾಗೂ ಮಕರಂದವನ್ನು ಆಹಾರವಾಗಿ ಸೇವಿಸುವ ಈ ಪಕ್ಷಿ ಸದಾ ಹಿಂಡುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಸಂತಾನೋತ್ಪತ್ತಿಯ ಸಮಯದಲ್ಲಿ ಮಾತ್ರ ತಾತ್ಕಾಲಿಕವಾಗಿ ಬೇರೆಯಾಗುತ್ತವೆ. ಬೆಳ್ಗಣ್ಣಗಳು ಇತರೆ ಪಕ್ಷಿಗಳ ಗೂಡು ಕಟ್ಟುವ ಸಾಮಗ್ರಿಗಳನ್ನು ಕದಿಯುತ್ತವೆ ಎಂದು ಹೇಳಲಾಗುತ್ತದೆ. ಇವುಗಳ ಒಂದು ವಿಶೇಷತೆಯೆಂದರೆ, ಇವು ಬೇರೆ ಪಕ್ಷಿಗಳ ಮರಿಗಳಿಗೂ, ಅಂದರೆ ಸಾಮಾನ್ಯವಾಗಿ ಬಾಲದಂಡೆ ಹಕ್ಕಿಗಳ ಮರಿಗಳಿಗೂ ಆಹಾರ ಉಣಿಸುವುದನ್ನು ಕಾಣಬಹುದು. ಸಾಧಾರಣವಾಗಿ 2 ತಿಳಿ ನೀಲಿ ಬಣ್ಣದ ಮೊಟ್ಟೆಗಳನ್ನಿಡುವ ಇವು ಸುಮಾರು 10 ದಿನಗಳು ಕಾವು ಕೊಟ್ಟು ಮರಿ ಮಾಡುತ್ತವೆ. ತಂದೆ ಮತ್ತು ತಾಯಿ ಹಕ್ಕಿಗಳೆರಡೂ ಸಂತಾನ ಪಾಲನೆಯಲ್ಲಿ ಸಮನಾಗಿ ಶ್ರಮಿಸುತ್ತವೆ.
© ಕಾಂತರಾಜು ಡಿ., ಬೇಲಿ ಚಟಕ
ಬೇಲಿ ಚಟಕ ಪಕ್ಷಿಯು ಭಾರತದಾದ್ಯಂತ ಕಂಡುಬರುವ ಗುಬ್ಬಚ್ಚಿ ಗಾತ್ರದ ಪಕ್ಷಿಯಾಗಿದೆ. ಗಂಡು ಪಕ್ಷಿಯ ಪೃಷ್ಠ, ತಳ ಹೊಟ್ಟೆ ಮತ್ತು ರೆಕ್ಕೆಗಳಲ್ಲಿ ಬಿಳುಪು ತೇಪೆಗಳಿರುವ ಕಡು ಕಪ್ಪು ಬಣ್ಣವನ್ನು ಹೊಂದಿದೆ. ಹೆಣ್ಣು ಪಕ್ಷಿಯು ತಿಳಿ ತುಕ್ಕು ವರ್ಣದ ಪೃಷ್ಠವಿದ್ದು ಸಾಧಾರಣ ಕಂದು ಬಣ್ಣದ್ದಾಗಿದೆ. ಇವುಗಳಲ್ಲಿ ಕೆಲವು ಸ್ಥಳೀಯವಾದರೆ, ಇನ್ನೂ ಕೆಲವು ವಲಸೆ ಪಕ್ಷಿಗಳಾಗಿವೆ. ಸಣ್ಣ ಹುಳುಗಳನ್ನು ಹಿಡಿದು ತಿನ್ನಲು ಆಗಾಗ ನೆಲದ ಮೇಲಿಳಿಯುತ್ತವೆ. ಚಿಕ್-ಚಿಕ್ ಶಬ್ಧದಿಂದ ಪ್ರಾರಂಭಿಸಿ ಶಿಳ್ಳಿನಂತಹ ಧ್ವನಿಯನ್ನು ಹೊರಹೊಮ್ಮಿಸುತ್ತವೆ. ಈ ಹಾಡನ್ನು ಪ್ರಣಯಾಚರಣೆಯಲ್ಲಿ ಹಾಗೂ ಪ್ರತಿಸ್ಫರ್ಧಿಗಳನ್ನು ಎದುರಿಸಲು ಪ್ರತಿಭಟನಾ ಸೂಚಕವಾಗಿ ಹಾಡುತ್ತವೆ. ಇವುಗಳ ಸಂತಾನೋತ್ಪತ್ತಿಯ ಕಾಲ ಫೆಬ್ರವರಿಯಿಂದ ಆಗಸ್ಟ್ ತಿಂಗಳಾಗಿದ್ದು, ಮಾರ್ಚ್ ಹಾಗು ಜೂನ್ ತಿಂಗಳಲ್ಲಿ ಹೆಚ್ಚು ಉತ್ತುಂಗದಲ್ಲಿರುತ್ತದೆ. 3 ರಿಂದ 5 ಮೊಟ್ಟೆಗಳನ್ನಿಡುವ ಇವುಗಳ ಮೊಟ್ಟೆಯ ಬಣ್ಣ ಕಲೆಯಿರುವ ತಿಳಿ ನೀಲಿ ಬಿಳುಪು.
© ಕಾಂತರಾಜು ಡಿ., ಚೋರೆಹಕ್ಕಿ ಚಾಣ
ಏಷ್ಯಾ, ಯುರೋಪ್, ಆಫ್ರಿಕಾ ಮತ್ತು ಕೆಲವೊಮ್ಮೆ ಉತ್ತರ ಅಮೆರಿಕಾಗಳಲ್ಲಿ ಈ ಪಕ್ಷಿಗಳು ಕಂಡುಬರುತ್ತವೆ. ಹೆಣ್ಣು ಪಕ್ಷಿ ಗಂಡು ಪಕ್ಷಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಉದ್ದನೆಯ ರೆಕ್ಕೆ ಹಾಗು ಬಾಲವನ್ನು ಹೊಂದಿರುವ ಈ ಹಕ್ಕಿಗಳು ಕಂದು ಮೈಬಣ್ಣದ ಜೊತೆಗೆ ಮೈಯ ಮೇಲ್ಭಾಗದಲ್ಲಿ ಕಪ್ಪು ಚುಕ್ಕೆಗಳನ್ನು ಹಾಗು ಕೆಳಗೆ ಕಪ್ಪು ಗೆರೆಗಳನ್ನೊಳಗೊಂಡಿದೆ. ಅವುಗಳ ಬಣ್ಣದಿಂದಲೇ ಹೆಣ್ಣು ಹಾಗು ಗಂಡು ಪಕ್ಷಿಗಳಲ್ಲಿರುವ ವ್ಯತ್ಯಾಸವನ್ನು ಹೇಳಬಹುದು. ಕಡಿಮೆ ಕಪ್ಪು ಚುಕ್ಕೆಗಳು, ಗೆರೆಗಳು ಮತ್ತು ನೀಲಿ-ಬೂದಿ ಬಣ್ಣದ ಬಾಲವನ್ನು ಹೊಂದಿದ್ದರೆ ಅವು ಗಂಡು ಹಕ್ಕಿಯೆಂದು ಗುರುತಿಸಬಹುದು. ಹೆಣ್ಣು ಹಕ್ಕಿಗಳು ಕಂದು ಬಣ್ಣದ ಗೆರೆಗಳುಳ್ಳ ಬಾಲವನ್ನು ಹೊಂದಿರುತ್ತವೆ. ಎರೆ ಹುಳು, ಇಲಿಗಳು, ಕಪ್ಪೆ, ಹಲ್ಲಿ, ಕೆಲವು ಬಗೆಯ ಕೀಟಗಳು ಹಾಗೂ ಸಣ್ಣ ಪ್ರಾಣಿಗಳನ್ನು ತಿನ್ನುವ ಇವು ಸಣ್ಣ ಹಕ್ಕಿಗಳನ್ನೂ ಬೇಟೆಯಾಡುತ್ತವೆ. ಇವುಗಳು ಸುಮಾರು 3 ರಿಂದ 7 ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ.
© ಕಾಂತರಾಜು ಡಿ., ಬದನಿಕೆ ಹಕ್ಕಿ
ಭಾರತ, ಶ್ರೀಲಂಕಾ, ಬಾಂಗ್ಲಾದೇಶಗಳಲ್ಲಿ ಕಂಡುಬರುವ ಈ ಸಣ್ಣ ಪಕ್ಷಿಗಳ ಆಹಾರ ಹೂವಿನ ಮಕರಂದ. ಇವು ಕ್ಷಿಪ್ರ ಗತಿಯ ಚಿಲಿಪಿಲಿ ಧ್ವನಿಯ ಕರೆಯನ್ನು ಹೊಂದಿವೆ. ಬೂದಿ ಅಥವಾ ಆಲೀವ್ ಹಸಿರು ಮೈಬಣ್ಣ ಹಾಗು ಗುಲಾಬಿ ಬಣ್ಣದ ವಕ್ರ ಕೊಕ್ಕನ್ನೂ ಇವುಗಳು ಹೊಂದಿವೆ. ಈ ಹಕ್ಕಿಗಳು ಸಾಮಾನ್ಯವಾಗಿ ಹಣ್ಣುಗಳಿರುವ ಮರದಲ್ಲಿ ನಗರದ ಉದ್ಯಾನಗಳಲ್ಲಿ ಕಾಣಸಿಗುತ್ತವೆ. ಹೂವುಗಳ ಮಕರಂದ ಹೀರುತ್ತಾ, ಸಣ್ಣ ಸಣ್ಣ ಹಣ್ಣುಗಳನ್ನು ಸೇವಿಸುತ್ತಾ ಪರಾಗಸ್ಪರ್ಶ ಕ್ರಿಯೆಗೆ ಸಹಾಯಮಾಡುತ್ತವೆ. ಇವುಗಳ ಸಂತಾನೋತ್ಪತ್ತಿಯ ಕಾಲ ಫೆಬ್ರವರಿಯಿಂದ ಜೂನ್ ತಿಂಗಳು. ಈ ಹಕ್ಕಿಗಳು ಸಂತಾನೋತ್ಪತ್ತಿಯ ಕಾಲದಲ್ಲಿ ಸುಮಾರು 2 ರಿಂದ 3 ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ.
ಚಿತ್ರಗಳು: ಕಾಂತರಾಜು ಡಿ
ಲೇಖನ: ಶಾಂಭವಿ ಎನ್.
ಪಕ್ಷಿಗಳೆ ಕಾಣಸಿಗದ ಈ ಊರಿನಲ್ಲಿ, ಇಂತಹ ಸುಂದರ ಚಿತ್ರಗಳು ಮತ್ತು ಅದರ ವಿಶ್ಲೇಷಣೆಯನ್ನು ಕೇಳಿದಾಗ ನೈಜ್ಯವಾಗಿ ಕಂಡಷ್ಟು ಖುಷಿಯಾಯ್ತು…ಬಹಳ ಚೆನ್ನಾಗಿದೆ…❤️??