ಜೈವಿಕ ಅನುಕರಣೆ
© ವಿಪಿನ್ ಬಾಳಿಗಾ ಬಿ. ಎಸ್.
ಮಾನವನ ಜನಸಂಖ್ಯೆ ಹಿಂದೆಂದಿಗಿಂತಲೂ ಈ ಸಮಯದಲ್ಲಿ ಅತ್ಯಂತ ಹೆಚ್ಚಾಗಿದೆ ಎಂದು ನಮಗೆಲ್ಲ ಗೊತ್ತೇ ಇದೆ. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ವೈದ್ಯಕೀಯ ಸವಲತ್ತುಗಳ ಲಭ್ಯತೆ, ಮುಂತಾದ ಕಾರಣಗಳಿಂದ ಮನುಷ್ಯನ ಜೀವಿತಾವಧಿ ಹಿಗ್ಗಿದೆ ಎಂದರೆ ತಪ್ಪಾಗಲಾರದು. ಮನುಷ್ಯ ಬದುಕಲು ಭೂಮಿಯ ಮೇಲೆ ಲಭ್ಯವಿರುವ ಎಲ್ಲಾ ಸಂಪನ್ಮೂಲಗಳೂ ಅತ್ಯವಶ್ಯಕ. ತನ್ನ ನಿತ್ಯವಶ್ಯಕತೆಗಳಿಂದ ಹಿಡಿದು ಐಷಾರಾಮಿ ಜೀವನಕ್ಕೆ ಬೇಕಾದ ಎಲ್ಲದಕ್ಕೂ ನಾವು ಆಶ್ರಯಿಸುವುದು ಸಂಪನ್ಮೂಲಗಳನ್ನೆ. ಆದರೆ ಈ ಸಂಪನ್ಮೂಲಗಳು ಕೋಟ್ಯಾಂತರ ವರ್ಷಗಳಿಂದ ಭೂಮಿಯ ಭಾಗವಾಗಿದ್ದು, ನಿರಂತರವಾಗಿ ಸಿಗುತ್ತಲೇ ಇರುತ್ತವೆ ಮತ್ತೆ ಕೆಲವು ಬಳಕೆ ಹೆಚ್ಚಾದ ಹಾಗೆ ಮುಗಿದುಹೋಗುತ್ತವೆ. ಇತ್ತೀಚೆಗೆ ಮೂವತ್ತು ನಲವತ್ತು ವರ್ಷಗಳಲ್ಲಿ ಈ ರೀತಿಯ ಅವಲಂಬನೆ ಹಲವಾರು ಪಟ್ಟು ಹೆಚ್ಚಾಗಿ ನವೀಕರಿಸಲಾಗದ ಸಂಪನ್ಮೂಲಗಳು ತೀರಾ ಕಳವಳಕಾರಿ ಮಟ್ಟಕ್ಕೆ ಕುಸಿದು ಹೋಗುತ್ತಿವೆ. ಹಾಗಾಗಿ ನವೀಕರಿಸಲಾಗುವ ಸಂಪನ್ಮೂಲಗಳನ್ನು ಸರಿಯಾಗಿ ಉಪಯೋಗಿಸುವ ಅವಶ್ಯಕತೆ ಇದ್ದೇ ಇದೆ. ಹೀಗಿರುವಾಗ “ಸುಸ್ಥಿರತೆಯ” ಪಾಠ ನಮಗೆ ದಾರಿದೀಪವಾಗಬಲ್ಲದು.
ಆದರೆ “ಸುಸ್ಥಿರತೆ” ಯ ಪಾಠ ಹೇಳಿಕೊಡುವವರು ಯಾರು?
ಕೋಟ್ಯಾಂತರ ವರ್ಷಗಳಿಂದ ಜೀವ ಸಂಕುಲವನ್ನು ಕಾಪಾಡಿಕೊಂಡು ನಿರ್ಜೀವ ರಾಶಿಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿರುವುದು ಪ್ರಕೃತಿ. ಹಾಗಿದ್ದರೆ ಪ್ರಕೃತಿಯು ಪಾಲಿಸಿಕೊಂಡು ಬಂದಿರುವ ಮಾರ್ಗವೇ ಸುಸ್ಥಿರ ಎಂದು ಒಪ್ಪುವುದಾದರೆ ಅದನ್ನೇ ಅನುಕರಣೆ ಮಾಡಿ ಬಿಡೋಣ.
ಜೈವಿಕ ಅನುಕರಣೆ (ಬಯೋ ಮಿಮಿಕ್ರಿ)
“ಅರೆ! ಇದೇನಿದು ಒಬ್ಬರನ್ನು ಮತ್ತೊಬ್ಬರು ಅಣಕಿಸುವುದು ಅನುಕರಣೆ (ಮಿಮಿಕ್ರಿ)”. ಈ ವಿಧಾನ ಇಡೀ ವಿಶ್ವವನ್ನೇ ಅಂಜಿಸುತ್ತಿರುವ ಮಹಾ ಸಮಸ್ಯೆಯೊಂದಕ್ಕೆ ಪರಿಹಾರ ಎಂದರೆ ನಂಬಲು ಸ್ವಲ್ಪ ಕಷ್ಟವಾಗುವುದಲ್ಲವೇ? ಬನ್ನಿ ಹಾಗಾದರೆ ಪ್ರಕೃತಿಯ ಅನುಕರಣೆ ಬಗ್ಗೆ ತಿಳಿದುಕೊಳ್ಳೋಣ.
ನಾವೆಲ್ಲ ಗಿಡದ ಎಲೆಗಳನ್ನು ನೋಡಿಯೇ ಇದ್ದೇವೆ. ಎಲೆಯ ಕೆಲಸ ಅಡುಗೆ ಮಾಡಿ ಗಿಡದ ಎಲ್ಲಾ ಭಾಗಗಳಿಗೂ ಉಣಿಸುವುದು ಎಂದು ನಮಗೆ ಗೊತ್ತೇ ಇದೆ. ಹಾಂ! ಇಲ್ಲೇ ಇದೆ ಗಮ್ಮತ್ತು! ಆಹಾರವನ್ನು ತಯಾರಿಸಲು ಮುಖ್ಯವಾಗಿ ಆಶ್ರಯಿಸುವುದು ಸೂರ್ಯನ ಬೆಳಕನ್ನೇ ಅಲ್ಲವೇ? ಎಲೆಗಳ ಮೇಲೆ ಬಿದ್ದ ಬೆಳಕನ್ನು / ಸೂರ್ಯರಶ್ಮಿಯನ್ನು ಪ್ರತಿಯೊಂದು ಜೀವಕೋಶವು ಬಳಸಿಕೊಂಡು ಅದನ್ನು ತನಗಗತ್ಯವಾದ ರೂಪಕ್ಕೆ ಪರಿವರ್ತಿಸಿ ಬಿಡುತ್ತದೆ. ಈ ಎಲೆಗಳೇ ಸೋಲಾರ್ ಪ್ಯಾನೆಲ್-ಗಳಿಗೆ ಸ್ಪೂರ್ತಿ, ಎಲೆಗಳ ಜೀವಕೋಶವನ್ನು ಅನುಕರಿಸಿ ತಯಾರಿಸಿದ ಸೋಲಾರ್ ಪ್ಯಾನಲ್ ಗಳು ಸೂರ್ಯಶಕ್ತಿಯನ್ನು ವಿದ್ಯುತ್ತಾಗಿ ಪರಿವರ್ತಿಸಿ ಕೊಡುತ್ತದೆ. ಈ ಪರಿವರ್ತನೆ ಪ್ರಕೃತಿಯ ಮೇಲೆ ಯಾವುದೇ ರೀತಿಯಲ್ಲಿ ತೊಂದರೆಯನ್ನು ಒಡ್ಡುವುದಿಲ್ಲ, ಬದಲಾಗಿ ಪೋಲಾಗಿ ಹೋಗುತ್ತಿದ್ದ ಶಕ್ತಿಯು ಪುನರ್ ಬಳಕೆಯಾಗುತ್ತಿದೆ, ಇದೇ ರೀತಿ ನಮ್ಮ ಕಣ್ಣಿಗೆ ಸುಲಭವಾಗಿ ಕಾಣಬರುವ ಜೈವಿಕ ಅನುಕರಣೆ (ಬಯೋಮಿಮಿಕ್ರಿ ) ಗೆ ಇನ್ನೂ ಕೆಲವು ಉದಾಹರಣೆಗಳನ್ನು ನೋಡೋಣ.
● ಹಾರುವ ಹಕ್ಕಿಯನ್ನು ಅನುಕರಿಸಿ ಬಂದ ವಿಮಾನ.
● ಈಜುವ ಮೀನುಗಳನ್ನು ಅನುಕರಿಸಿ ಬಂದ ದೋಣಿ, ಹಡಗುಗಳು.
● ಕಾಡನ್ನು ಅನುಕರಿಸಿ ನಗರಗಳ ಒಳಗೆ ನಿರ್ಮಿಸಿಕೊಂಡ ಉಪವನಗಳು.
ಮುಂತಾದವು. ಇದೇನು ನಿನ್ನೆಮೊನ್ನೆ ನಾವು ಕಂಡುಕೊಂಡ ವಿಧಾನವಲ್ಲ ಎಂಬುದು ನಮಗೆಲ್ಲ ಗೊತ್ತಾಗಿ ಹೋಯಿತು. ಹಾಗಿದ್ದರೆ ಈಗೇಕೆ ಈ ವಿಚಾರ ಎಂಬ ಪ್ರಶ್ನೆ ನಿಮಗೆ ಬರಬಹುದಲ್ಲವೇ? ಅದಕ್ಕೆ ಉತ್ತರ ಇಲ್ಲಿದೆ ನೋಡಿ, ನಾನಾಗಲೇ ಹೇಳಿದ ಹಾಗೆ ಸಂಪನ್ಮೂಲಗಳ ಕೊರತೆ ಇದೆ ಎಂಬ ಒಂದೇ ಕಾರಣಕ್ಕೆ ನಾವು ಬಯೋಮಿಮಿಕ್ರಿ ಮಾಡಬೇಕಿಲ್ಲ. ಈ ವಿಧಾನ ನಮ್ಮ ದೈನಂದಿನ ಅಗತ್ಯತೆಗಳನ್ನು ಉಚಿತವಾಗಿ ಹೆಚ್ಚಿನ ಶ್ರಮವಿಲ್ಲದೆ ಸುಲಭವಾಗಿ ಸೂಕ್ತವಾಗಿ ಪೂರೈಸಿಕೊಳ್ಳಲು ನೆರವು ನೀಡುತ್ತಿದೆ.
ಕಾಡನ್ನು ಅನುಕರಿಸಿ ನಮ್ಮ ತೋಟಗಳಲ್ಲಿ ದೊಡ್ಡ ಮರಗಳಾಗುವ ಸಸಿಗಳನ್ನು ನೆಟ್ಟು ಪೋಷಿಸಿದರೆ ಕೆಲವೇ ವರ್ಷಗಳಲ್ಲಿ ಅಲ್ಲೊಂದು ಜೀವ ವೈವಿಧ್ಯತೆ ಕಂಡು ಬರುತ್ತದೆ. ಜೀವವೈವಿಧ್ಯತೆ ಹೊತ್ತು ತರುವ ಅಪಾರ ಕೊಡುಗೆಗಳನ್ನು ನೀವೆಲ್ಲ ಈಗಾಗಲೇ ತಿಳಿದೇ ಇರುತ್ತೀರಿ. ನಗರಗಳಲ್ಲಂತೂ ಮರಗಳನ್ನು ಹೊತ್ತ ಉಪವನಗಳು ಗಾಳಿಯನ್ನು ಶುದ್ಧ ಮಾಡಲು ಅತಿ ಅವಶ್ಯಕ.
ಉಪ ವನಗಳು ಗಾಳಿಯನ್ನು ಅಂತೂ ಶುದ್ಧ ಮಾಡಲು ಅತಿ ಅವಶ್ಯಕ.
ಕಾಡನ್ನು ಅನುಕರಿಸಿ ನಮ್ಮ ತೋಟಗಳಲ್ಲಿ ಮರಗಳನ್ನು ನೆಟ್ಟು ಪೋಷಿಸಿದರೆ ಕೆಲವೇ ವರ್ಷಗಳಲ್ಲಿ ಅಲ್ಲೊಂದು ಜೀವ ವೈವಿಧ್ಯತೆ ಕಂಡುಬರುತ್ತದೆ. ಆದರೆ ನಮ್ಮ ಅನುಕರಣೆ ಅಂಧಾನುಕರಣೆಯಾದರೆ ಕಷ್ಟ ನಷ್ಟ ಎರಡೂ ಕಟ್ಟಿಟ್ಟಬುತ್ತಿ.
ಸರಿಯಾದ ಉತ್ತರ ಬೇಕು ಎಂದರೆ ಪ್ರಶ್ನೆಯನ್ನು ತಪ್ಪಾಗಿ ಕೇಳಬಾರದಲ್ಲವೆ? ಹಾಗೆಯೇ ಕಾಡನ್ನು ಅನುಕರಿಸಿದರೂ ನಮ್ಮ ತೋಟಕ್ಕೆ ಯಾವ ರೀತಿಯ ಮರಗಳು ಬೇಕಾಗುತ್ತದೆ ಎಂದು ನಾವೇ ಯೋಚಿಸಿ ಅಂತಹವುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆ ಆಯ್ಕೆಗೆ ಕೆಲವಾರು ಮಾನದಂಡಗಳನ್ನು ಬಳಸಿಕೊಳ್ಳಬಹುದು ಅವು ಯಾವುವೆಂದರೆ.
ಬೇಲಿಯ ಬದಿಯಲ್ಲಿ ಹೆಚ್ಚು ನೀರನ್ನು ಬೇಡದೆ ಆದಷ್ಟು ನೇರವಾಗಿ ಬೆಳೆಯುವ ಮರಗಳು, ವರ್ಷಕ್ಕೊಮ್ಮೆ ರೆಂಬೆಕೊಂಬೆಗಳನ್ನು ಕತ್ತರಿಸಿದರೂ ತೆರೆದುಕೊಳ್ಳುವಂತಹ ಮರಗಳು, ಉತ್ತಮ ಗೊಬ್ಬರವನ್ನು ನೀಡುವಂತಹವು, ದನಕರು ಮತ್ತಿತರ ಪ್ರಾಣಿಗಳಿಗೆ ಮೇವಾಗುವಂತಹವು, ಬೇಗ ಎತ್ತರಕ್ಕೆ ಬೆಳೆಯುವ ಸಾಮರ್ಥ್ಯ ಇರುವಂತಹವು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಂತಹ ಮರಗಳು, ತೋಟವನ್ನು ಬಿರುಗಾಳಿಯಿಂದ ತಡೆಯಲು ಬಲವಾಗಿ ಬೇರೂರಿ ನಿಲ್ಲುವಂತಹ ಶಕ್ತಿ ಹೊಂದಿರುವ ಮರಗಳಾದರೆ ನಮ್ಮ ತೋಟವನ್ನೂ ಶ್ರೀಮಂತಗೊಳಿಸಿ ಜೊತೆಗೆ ಕ್ರಿಮಿಕೀಟಗಳನ್ನು ಆಹಾರವಾಗಿಸಿ ಬದುಕುವ ಹಕ್ಕಿಗಳಿಗೂ ನೆಲೆಯನ್ನು ಕಲ್ಪಿಸಿಕೊಡುತ್ತದೆ. ಜೀವ ವೈವಿಧ್ಯತೆ ಹೆಚ್ಚಿ ಉತ್ತಮ ವಾತಾವರಣದ ನಿರ್ಮಾಣವಾಗುತ್ತದೆ.
ಬೇವು, ಹಿಪ್ಪೆ, ಲಕ್ಷ್ಮಿತರು, ನೆಲ್ಲಿ, ನೇರಳೆ, ಹಲಸು, ಹರಿತಕಿ, ಮುತ್ತುಗ, ನುಗ್ಗೆ, ಹೊಂಗೆ, ಶ್ರೀಗಂಧ, ಅಗಸೆ, ಸೀತಾಫಲ, ಕಾಡು ಬಾದಾಮಿ, ಸುಬಾ ಬುಲ್, ಹೀಗೆ ಇನ್ನೂ ಹತ್ತು ಹಲವಾರು ಮರ-ಗಿಡಗಳು ನಮ್ಮ ಕಣ್ಣಿಗೆ ಆಕಸ್ಮಾತ್ ನಿರುಪಯುಕ್ತ ಎನಿಸಿದರೂ ಪ್ರಕೃತಿಯ ಪರೀಕ್ಷೆಗಳಲ್ಲಿ ಪಾಸಾಗಿ ಬಂದವುಗಳಿಗೆ ನಮ್ಮ ತೋಟದಲ್ಲಿ ಒಂದಿಷ್ಟು ಜಾಗ ಕೊಟ್ಟರೆ ಮುಂದೆ ಬರಬಹುದಾದ ಲೆಕ್ಕವೇ ಇಲ್ಲದ ಪರೀಕ್ಷೆಗಳಲ್ಲಿ ಅವು ನಮ್ಮನ್ನು ಕಾಪಾಡುತ್ತದೆ. ಪ್ರಕೃತಿಗೆ ಸಾಕಷ್ಟು ಸಮಯ ಇದೆ. ಮನುಷ್ಯ ನಾಲ್ಕೈದು ದಶಕಗಳಲ್ಲಿ ಮಾಡಿ ಮುಗಿಸಲೇ ಬೇಕಾದ ಪ್ರಯೋಗಗಳನ್ನು ಪ್ರಕೃತಿ ನಾಲ್ಕಾರು ಶತಮಾನಗಳ ಕಾಲ ಮಾಡಿ, ಅಳೆದು ತೂಗಿ, ಸಮರ್ಥವಾದವುಗಳನ್ನು ಉಳಿಸಿಕೊಂಡು ಮುನ್ನಡೆಯುತ್ತಿದೆ. ಹಾಗಾಗಿ ಜೈವಿಕ ಅನುಕರಣೆಯಿಂದ ಮತ್ತು ಪರಿಸರಸ್ನೇಹಿ ವಿಧಾನಗಳಿಂದ ನಮ್ಮ ಅವಶ್ಯಕತೆಗಳನ್ನು ನಿರ್ವಹಿಸಿಕೊಳ್ಳಬಹುದು. ಈ ವಿಧಾನದಲ್ಲಿ ಶಕ್ತಿಯ ಪರಿಪೂರ್ಣ ಬಳಕೆಯ ಕಡೆ ನಾವು ಹೆಜ್ಜೆಹಾಕುತ್ತಾ ಮಾಲಿನ್ಯವನ್ನು ಕಡಿಮೆ ಮಾಡಬಹುದು. ಪ್ರಕೃತಿಯಲ್ಲಿನ ಮಾದರಿಗಳು, ವಿನ್ಯಾಸಗಳ ಅನುಕರಣೆಯಿಂದ ವಿಕೋಪದ ಸಮಯದಲ್ಲಿ ಆಗಬಹುದಾದ ಹಾನಿಯನ್ನು, ನಷ್ಟವನ್ನು ಬಹುತೇಕ ಪ್ರಮಾಣದಲ್ಲಿ ಕಡಿತಗೊಳಿಸಬಹುದು.
ನಾವಷ್ಟೇ ಅಲ್ಲ! ನಮ್ಮೊಂದಿಗೆ ಎಲ್ಲ ಜೀವಿಗಳು ಬದುಕಬೇಕು, ಈಗಷ್ಟೇ ಅಲ್ಲ! ಇನ್ನು ಕೋಟ್ಯಾಂತರ ವರ್ಷ ಜೀವಿಗಳ ಕೊಂಡಿ ಉಳಿಯಬೇಕು. ಹಾಗಾಗಿ ಪ್ರಕೃತಿಯು ಪಾಲಿಸಿಕೊಂಡು ಬಂದಿರುವ ಸುಸ್ಥಿರತೆಯ ಸೂತ್ರವನ್ನು ಇನ್ನೂ ಹೆಚ್ಚಾಗಿ ಅಳವಡಿಸಿಕೊಳ್ಳುವ ಸಂಕಲ್ಪ ನಮ್ಮದಾಗಬೇಕು.
ಲೇಖನ: ಕೆ. ಎಸ್. ಸುಮಂತ್ ಭಾರದ್ವಾಜ್
ರಾಮನಗರ ಜಿಲ್ಲೆ