ಮಾಸ ವಿಶೇಷ – ಹುಣಸೆ ಮರ

ಮಾಸ ವಿಶೇಷ – ಹುಣಸೆ ಮರ

                          ©  ರಾಕೇಶ್ ಆರ್. ವಿ., ಹುಣಸೆ ಮರ , ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Tamarind Tree
ವೈಜ್ಞಾನಿಕ ಹೆಸರು : Tamarindus indica

ಉಷ್ಣವಲಯ ಪ್ರದೇಶದಲ್ಲಿ ಬೆಳೆಯುವ ಹುಣಸೆ ಮರದ ಮೂಲಸ್ಥಳ ಆಫ್ರಿಕಾ ಖಂಡದ ಪೂರ್ವ ಭಾಗ. ಇದು ಆಫ್ರಿಕಾ, ಅಮೇರಿಕಾ ಹಾಗೂ ಭಾರತದಲ್ಲಿಯೂ ಸಹ ವ್ಯಾಪಿಸಿದೆ. ಸುಮಾರು 15 ರಿಂದ 25 ಮೀಟರ್ ಗಳಷ್ಟು ಎತ್ತರ ಬೆಳೆಯಬಲ್ಲ, ಈ ಮರದ ಕಾಂಡದ ಸುತ್ತಳತೆ ಸುಮಾರು 7.5 ಮೀಟರ್ ಗಳು. ಇದರ ತೊಗಟೆ ಒರಟಾಗಿದ್ದು, ಗಾಢ ಕಂದು ಬಣ್ಣವನ್ನು ಹೊಂದಿದೆ. ತುದಿ ದುಂಡಾಗಿರುವ ಸುಮಾರು 5 ಸೆಂಟಿಮೀಟರ್ ಅಗಲದ 10 ರಿಂದ 20 ಜೊತೆಯ ಸಣ್ಣ ಸಣ್ಣ ಎಲೆಗಳು ಪರಸ್ಪರ ವಿರುದ್ಧವಾಗಿ ಟೊಂಗೆಗಳಲ್ಲಿ ಜೋಡಣೆಯಾಗಿರುತ್ತವೆ. ಸದಾ ಹಸಿರಾಗಿರುವ ಎಲೆಗಳಿಂದ ಈ ಮರ ನಿತ್ಯ ಹರಿದ್ವರ್ಣವಾಗಿರುತ್ತದೆ. ಹಳದಿ ಹಾಗೂ ಕೆಂಪು ಮಿಶ್ರಿತವಾದ ಸಣ್ಣ ಹೂಗಳು, ಚಿಕ್ಕ-ಚಿಕ್ಕ ರೆಂಬೆಯ ಗೊಂಚಲಿನಲ್ಲಿರುತ್ತವೆ. ಸಾಮಾನ್ಯವಾಗಿ 5 ದಳಗಳನ್ನು ಹೊಂದಿರುತ್ತವೆ. ಗುಲಾಬಿ ಬಣ್ಣದ ಗೆರೆಗಳು ಹೂ ದಳಗಳ ಮೇಲೆ ರಚಿತವಾಗಿರುತ್ತವೆ. 12 ರಿಂದ 15 ಸೆಂಟಿಮೀಟರ್ ಗಳಷ್ಟು ಉದ್ದವಿರುವ ಇದರ ಕಾಯಿ ಹಸಿರಾಗಿ ಹುಳಿಯ ರುಚಿ ಹೊಂದಿದ್ದು, ಹಣ್ಣಾದಾಗ ಸಿಹಿ ಮಿಶ್ರಿತ ಹುಳಿಯಾಗಿರುತ್ತದೆ ಹಾಗೂ ಹಸಿರು ಬಣ್ಣದ ಸಿಪ್ಪೆಯು ಕಂದು ಬಣ್ಣಕ್ಕೆ ತಿರುಗುತ್ತದೆ. ಭಾರತದಲ್ಲಿ ಸಿಗುವ ಹುಣಸೆ ಪ್ರಭೇದವು 6 ರಿಂದ 12 ಬೀಜಗಳನ್ನು ಒಳಗೊಂಡಿರುತ್ತವೆ. ಇದರ ಎಲೆ ಹಾಗೂ ಹಣ್ಣನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಹುಣಸೆ ಹಣ್ಣನ್ನು ಮಲಬದ್ಧತೆ, ಪಿತ್ತಜನಕಾಂಗ ಮತ್ತು ಪಿತ್ತಕೋಶದ ಸಮಸ್ಯೆಗಳ ಜೊತೆಗೆ, ಉದರ ಸಮಸ್ಯೆಗೂ ಸಹ ಔಷಧಿಯಾಗಿ ಬಳಸಲಾಗುತ್ತದೆ.

Spread the love
error: Content is protected.