ಮಳೆಗಾಲ ಮತ್ತು ಮರಕುಟಿಗ ಹಕ್ಕಿ
©ಸ್ಮಿತಾ ರಾವ್
ಕಳೆದ ವರ್ಷ ವಿವಿಧ ಕಾರಣಗಳಿಂದ ಎಲ್ಲರಿಗೂ ಭಿನ್ನ. ಕೆಲ ವರ್ಷಗಳ ಹಿಂದೆ ಬರೀ ಕೆಲವು ದಿನಗಳ ಮಟ್ಟಿಗೆ ಮಾತ್ರ ಅತಿಥಿಯಾಗಿ ಹೋಗುತ್ತಿದ್ದ ಅಜ್ಜಿಯ ಮನೆಗೆ, ಕೋವಿಡ್ ಪರಿಸ್ಥಿತಿಯಿಂದ ಕಳೆದ ವರ್ಷ ವಾರಗಟ್ಟಲೆ ಹೋಗಿ ನೆಮ್ಮದಿಯಿಂದ ಕಾಲಕಳೆಯುವ ಅವಕಾಶ ಸಿಕ್ಕಿತ್ತು. ಎಲ್ಲರಿಗೂ ಅಜ್ಜಿ ಮನೆಯೆಂಬುದು ಒಂದೊಂದು ರೀತಿಯಲ್ಲಿ ವಿಶೇಷವಾಗಿರುತ್ತದೆ. ನನಗೂ ಹಾಗೇ ಅಜ್ಜಿ ಮನೆ ಅನ್ನೋದು ಒಳ್ಳೆಯ ನೆನಪುಗಳನ್ನಷ್ಟೇ ಕೊಡುವ ಕಟ್ಟಿಟ್ಟ ಬುತ್ತಿ. ಪೂರ್ವಜನ್ಮದ ಪುಣ್ಯವೋ ಏನೋ ಎಂಬಂತೆ ಮಲೆನಾಡಿನಲ್ಲಿ ಬಾಲ್ಯದ ಅಮೂಲ್ಯ ಕ್ಷಣಗಳನ್ನು ಕಳೆದು, ಹಕ್ಕಿಗಳ ಕಲರವದಿಂದ ಆರಂಭವಾಗುವ ಬೆಳಗಿನಿಂದ, ಹಲವು ಜೀವಿಗಳ ಆಲಾಪಗಳಿಂದ ಮುಕ್ತಾಯವಾಗುವ ಹಲವು ರಾತ್ರಿಗಳನ್ನು ಇಲ್ಲಿ ನೋಡಿದ್ದೆ.
ನಾನು ಹೇಳುತ್ತಿರುವ ನನ್ನ ಅಜ್ಜಿಯ ಮನೆ ಮಲೆನಾಡಿನ ಒಂದು ಮೂಲೆಯಲ್ಲಿದೆ. ಇದಕ್ಕೆ ಗುಡ್ಡದ ಮನೆಯೆಂದೇ ಹೆಸರು. ಜನರು ವಾಸವಿರುವ ಹಳ್ಳಿಯಿಂದ ಸುಮಾರು 2 ಕಿ. ಮೀ ದೂರವಾಗಿ ಸಂಪೂರ್ಣ ಪ್ರತ್ಯೇಕವಾಗಿದ್ದು, ಈ ಮನೆಯ ಅಸ್ತಿತ್ವದ ಬಗ್ಗೆಯೂ ಎಷ್ಟೋ ಜನರಿಗೆ ತಿಳಿದಿರುವುದಿಲ್ಲ. ಬಾಗಿಲು ತೆರೆದು ಚಪ್ಪರ ದಾಟುತ್ತಿದ್ದಂತೆಯೇ ಹಲವು ಮಲೆನಾಡ ಮನೆಗಳಂತೆ ಇಲ್ಲೂ ಬ್ಯಾಣ (ಮಲೆನಾಡಿನ ಮನೆಯ ಮುಂದಿನ ಅಥವಾ ಹಿಂದಿನ ಜಾಗ) ಆರಂಭವಾಗುತ್ತದೆ. ಇಂದಿಗೂ ಮನುಷ್ಯನ ಸ್ಪರ್ಶ ಕಾಣದ ತಮ್ಮಷ್ಟಕ್ಕೆ ಬೆಳೆಯಲು ಬಿಟ್ಟಿರುವ, ಯಾರೂ ಅದರ ಅಸ್ತಿತ್ವವನ್ನು ಪ್ರಶ್ನೆ ಮಾಡದೆ ಇದ್ದುದರಿಂದ ಮನಸ್ಸಿಗೆ ಬಂದ ಹಾಗೆ ಬೆಳೆಯುತ್ತಾ ಬಂದ ಇಲ್ಲಿಯ ಮರಗಳು, ದಾರಿ ಸವೆಸಿದಷ್ಟು ಉದ್ದಕ್ಕೂ ವಿಸ್ತರಿಸುತ್ತಾ ಹೋಗುತ್ತವೆ. ಇವು ಹಲವು ಜೀವ ವೈವಿಧ್ಯವನ್ನು ಪೋಷಿಸುತ್ತಾ, ತೇಜಸ್ವಿ, ಕುವೆಂಪು ಅವರ ಸಾಹಿತ್ಯದಲ್ಲಿ ಬರುವ ಎಷ್ಟೋ ಘಟನೆಗಳನ್ನು ನಿದರ್ಶಿಸುವ, ಅವರ ಮಾತಿನ ಗಾಂಭೀರ್ಯತೆಯ ಆಳವನ್ನು ತಲುಪುವ ತಾಣಗಳಾಗಿವೆ.
ಇಷ್ಟೆಲ್ಲಾ ಅಜ್ಜಿ ಮನೆಯ ಬಗ್ಗೆ ಹೇಳಲು ನನ್ನ ಒಳಗಿರುವ ಮೊದಲ ತುಡಿತವೇ ಇಂದು ಮಲೆನಾಡಿನಿಂದ ದೂರ ಬಂದು, ಬೇರೆ ದೇಶದಲ್ಲಿ ಅನಿವಾರ್ಯತೆಯ ಹೆಸರಿನಲ್ಲಿ ತಂಗಿದ್ದು, ಮಲೆನಾಡಿನ ನೆನಪಿನಲ್ಲಿ ಬದುಕುತ್ತಾ ಇರುವುದು. `ಬಿ ಅ ರೋಮನ್ ಇನ್ ರೋಮ್’ ಎನ್ನುವ ಸಾಲಿನ ಅರ್ಥ ತಿಳಿಯುವುದು ಕಷ್ಟವಲ್ಲದಿದ್ದರೂ, ಅದರಂತೆ ಬದುಕುವುದು ಇನ್ನೂ ಸುಲಭದ ಮಾತಾಗಿಲ್ಲ. ಕಳೆದ ಮಳೆಗಾಲದಲ್ಲಿ ಮಂಗನಿಗೆ ಸ್ಪರ್ಧೆ ಕೊಡುವಂತೆ ಇಡೀ ಮಳೆಗಾಲದ ಉದ್ದಕ್ಕೂ ಹಲಸಿನ ಹಣ್ಣು ತಿಂದ ನೆನಪು, ತಿಂದು ಬಿಸಾಡಿದ ನೇರಳೆ ಹಣ್ಣಿನ ಬೀಜ, ಮಾವಿನ ಹಣ್ಣಿನ ಗೊರಟು ಎಲ್ಲವೂ ಇಂದು ಕನಸಿನಲ್ಲಿ ಬಂದು ಹೋಗುತ್ತವೆ. ಹೀಗೆ ಕೆದಕುತ್ತಾ ಹೋದರೆ ದಿನಗಟ್ಟಲೆ ಜಗಲಿ ಕಟ್ಟೆ ಕಥೆಯಂತೆ ಹೇಳುತ್ತಾ ಹೋಗಬಹುದಾದರೂ, ಇದರಲ್ಲಿ ಒಂದನ್ನು ಹೆಕ್ಕಿ, ಆ ವಿಶೇಷ ಅನುಭವವನ್ನು ಹಂಚಿಕೊಳ್ಳುವುದೇ ಈ ಲೇಖನದ ಉದ್ದೇಶ.
ಮುಂಗಾರು ಕಳೆದ ವರ್ಷ ಹೆಚ್ಚು ಕಡಿಮೆ ಸರಿಯಾಗೇ ಆಗಮನವಾಗಿ, ಮಳೆಗಾಲಕ್ಕೆ ಒಳ್ಳೆ ಆರಂಭವನ್ನೇ ನೀಡಿತ್ತು. ಹೀಗೆ ಭೋರ್ಗರೆಯುವ ಮಳೆಯ ಸೂಚನೆಯಿದ್ದ ಒಂದು ದಿನ, ಕೊಡೆ ಹಿಡಿದು ಕ್ಯಾಮೆರಾವನ್ನು ಹೆಗಲಿಗೇರಿಸಿ ಹೊರಟಿದ್ದೆ. ಮನೆಯಿಂದ ಸುಮಾರು 2 ಕಿ. ಮೀ ದೂರದವರೆಗೆ ಕಂಡ ದಾರಿಯಲ್ಲಿ ಸುಮ್ಮನೆ ನಡೆದು ಬಂದಿದ್ದೆ. ಎತ್ತರದ, ಒಂದು ಸಂಪೂರ್ಣ ಹಸಿರು ಹೊಂದಿದ್ದ ಮರದ ಮಧ್ಯದಲ್ಲಿ, ಕಪ್ಪು ಬಣ್ಣದ ದೊಡ್ಡ ಹಕ್ಕಿಯೊಂದು ಹಾರಿದಂತೆ ಕಂಡಿತು. ಯಾವ ಬಣ್ಣ ಕಂಡರೂ ಅದು ಕಪ್ಪು ಬಣ್ಣದಂತೆ ಕಾಣುವಂತಿದ್ದ ಮಬ್ಬು ಬೆಳಕಿನಲ್ಲಿ ಹಾರಿದ್ದು ಇಂತದ್ದೇ ಎಂದು ಹೇಳೋದು ಸುಲಭವಾಗಿರಲಿಲ್ಲ. ಸುಮಾರು ಹೊತ್ತು ತಲೆಯೆತ್ತಿ ನೋಡಿದರೂ, ಒಂದು ದೊಡ್ಡ ಪಕ್ಷಿ ಮರದ ಎತ್ತರಕ್ಕೆ ಹಾರಿ ಹೋಗಿದ್ದಷ್ಟೇ ನನಗೆ ಕಂಡಿದ್ದು. ಕೊನೆಗೆ ಮಳೆಯೂ ಆರಂಭವಾಗಿದ್ದರಿಂದ ಇನ್ನು ಅದರ ಜಾಡನ್ನು ಮುಂದೆ ಅರಸಲಾಗದೆ ಮನೆಗೆ ತೆರಳಬೇಕಾಯಿತು. ಇನ್ನು ಎರಡು ಮೂರು ದಿನ ಬೇರೆ-ಬೇರೆ ಸಮಯಕ್ಕೆ ಅದೇ ಜಾಗಕ್ಕೆ ತೆರಳಿ ಹುಡುಕಾಟ ನಡೆಸಿದರೂ ಸಹ ಅಂತಹ ಯಾವುದೇ ಹಕ್ಕಿಯ ಸುಳಿವು ಕಾಣಲಿಲ್ಲ.
ಇದಾಗಿ ಆರು ದಿನ ಕಳೆಯುತ್ತಿದ್ದಂತೆ ಬೆಳ್ಳಂ ಬೆಳಿಗ್ಗೆ, ನಮ್ಮ ಮನೆಯ ಜಾನುವಾರುಗಳ ಕೊಟ್ಟಿಗೆಯ ಬೆಳಗಿನ ಕೆಲಸದಲ್ಲಿ ಭಾಗಿಯಾಗುವ ನಮ್ಮ ಕೆಲಸದವನಾದ ಜಾನ ಬಂದು ಸಗಣಿ ತೆಗೆಯುತ್ತಾ, “ಅಮ್ಮಾ, ನಮ್ಮ ಮನೆಯ ಹತ್ರ ಕಪ್ಪಗೆ, ದೊಡ್ಡಕೆ ಇರೋ ಹಕ್ಕಿ ದಿನಾ 10 ಗಂಟೆಯ ಮೇಲೆ ಬಂದು ಸದ್ದು ಮಾಡ್ತದೆ. ನಿಮ್ಮ ಅಮ್ಮನವರ ದುರ್ಬಿನ್ ನಲ್ಲಿ ಚೆನ್ನಾಗಿ ಕಾಣಬಹುದೇನೋ” ಎಂದು ತನ್ನ ಎಲೆ ಅಡಿಕೆ ಹಾಕಿದ ಬಾಯಲ್ಲಿ ರಾಗವಾಗಿ ಎಳೆದು ಚಿಕ್ಕಮ್ಮನಿಗೆ ಹೇಳುತ್ತಿದ್ದ. ಇದನ್ನು ಕೇಳಲೆಂದೇ ಕಾದಿದ್ದ ಕಿವಿಗಳು ನಿದ್ರಾವಸ್ಥೆಯಲ್ಲೂ ಸೂಕ್ಷ್ಮವಾಗಿ ತೆರೆದು, ಎಲ್ಲವನ್ನೂ ತನ್ನೊಳಗೆ ಸದ್ದಿಲ್ಲದೇ ಸೆಳೆದಿತ್ತು. ಸಂಪೂರ್ಣ ನಿದ್ದೆಯಿಂದ ಎಚ್ಚರವಾಗುತ್ತಿದ್ದಂತೆ ಜಾನ ಹೀಗೆ ಹೇಳಿದ್ದಾನಾ ಎಂದು ಚಿಕ್ಕಮ್ಮನಲ್ಲಿ ದೃಢಪಡಿಸಿಕೊಂಡು, ಅದೇ ಹುರುಪಿನಲ್ಲಿ ತಿಂಡಿ ತಿಂದು ಅವರ ಮನೆಯ ಹತ್ತಿರ ಹೋಗೋಕೆ ಸನ್ನದ್ಧಳಾದೆ.
ಅಂದೂ ಮಳೆಯ ಮುನ್ಸೂಚನೆ ಇದ್ದರೂ, ಹಕ್ಕಿ ಕಾಣುವ ಸಮಯಕ್ಕೆ ಅದು ಸ್ವಲ್ಪ ಬಿಡುವು ಕೊಡುತ್ತದೆ ಅನ್ನೋ ಭರವಸೆಯಲ್ಲಿ, ಜಾನನ ಹೆಜ್ಜೆ ಗುರುತುಗಳ ಹಿಂದೆಯೇ ಹೆಜ್ಜೆ ಹಾಕುತ್ತ, ಬ್ಯಾಣ, ಬೇಲಿ, ಗದ್ದೆಗಳನ್ನು ದಾಟಿ ಅವನ ಮನೆ ಹತ್ತಿರ ತಲುಪಿದೆ. ಚಿಕ್ಕಂದಿನಿಂದಲೂ ಪರಿಚಯವಿದ್ದ, ಅವರ ಕೇರಿಯಲ್ಲಿ ನಮ್ಮಲ್ಲಿರುವಂತೇ ಚಿಕ್ಕ ಕೊಟ್ಟಿಗೆ, ಒಂದಷ್ಟು ಹೂ ಗಿಡಗಳು, ಕೋಳಿ ಅದರ ಮರಿಗಳೆಲ್ಲವೂ ಇದ್ದು, ಸುಸ್ಥಿರ ಬದುಕನ್ನು ಕಟ್ಟಿಕೊಂಡಿದ್ದರು. ಅಲ್ಲಿಂದ ಅವನಿಗೆ ಸದ್ದು ಕೇಳುತ್ತಿದ್ದ ಮರದ ಕಡೆ ಕರೆದೊಯ್ದು, “ಅಮ್ಮಾ, ದಿನಾ ಇಲ್ಲಿ ಹತ್ತು ಹತ್ತೂವರೆ ಹೊತ್ತಿಗೆ ಬರೋದು” ಅಂತ ಸಮಯವನ್ನೂ ಅಷ್ಟೂ ವಿಶ್ವಾಸದಿಂದ ಹೇಳಿದ. ಹಾಗೆ ಅಲ್ಲೇ ನಿಲ್ಲುವುದರ ಬದಲು ಮರ ಕಾಣುವ ದಿಕ್ಕಿನಲ್ಲಿ ಸ್ವಲ್ಪ ದೂರದಲ್ಲಿ ಬಂದು ಇಬ್ಬರೂ ಕುಳಿತೆವು. ಅವನು ತೋರಿಸಿದ್ದು ಸಿಡಿಲು ಬಡಿದು ಒಣಗಿ ನಿಂತಿದ್ದ ಒಂದು ತೆಂಗಿನ ಮರವನ್ನು. ಅದು ಬಹಳ ಎತ್ತರವಾಗಿದ್ದು, ಒಂದಷ್ಟು ರಂಧ್ರಗಳು ಇದ್ದಿದ್ದನ್ನು ಕಂಡಾಗ, ಇವನು ಹೇಳುತ್ತಿರುವುದೂ, ನಾನು ನೋಡಲು ಹವಣಿಸುತ್ತಿರುವುದೂ ಒಂದು ಮರಕುಟಿಗವೇ ಎಂದು ಖಚಿತವಾಯಿತು. ಬಂದು ಕೂತಲ್ಲಿಂದ ಅವನು ಎರಡು ಸುತ್ತು ಎಲೆ ಅಡಿಕೆ ತಿಂದು ಮುಗಿಸಿದ್ದರೂ, ಬರಬೇಕಾದವರು ಇನ್ನೂ ಬಂದಿರಲಿಲ್ಲ. ಪಾಪ, ಅವನ ಬೆಳಗಿನ ಸಮಯವನ್ನೆಲ್ಲಾ ಹಾಳು ಮಾಡುತ್ತಿದ್ದೇನೆಂದು ಎನಿಸಿ, ಅವನಿಗೆ ಹೋಗಲು ಹೇಳಿದೆ. “ಅಯ್ಯೋ, ಈಗಲೇ ಬರ್ತದೆ ನೋಡಿ, ಜಾಸ್ತಿ ಟೈಮ್ ಏನಿಲ್ಲ” ಎಂದು ಹೇಳಿ, ಅವನು ಮಾತು ಮುಗಿಸುವುದರಲ್ಲಾಗಲೇ, ಅವನ ಬಾಯಿಂದಲೇ ವರ್ಣಿಸಲ್ಪಟ್ಟ ಕಪ್ಪು – ದೊಡ್ಡ ಹಕ್ಕಿ, ಆ ಪಾಳು ಮರವನ್ನೇರಿತ್ತು. ಊಹಿಸಿದಂತೆಯೇ ಮರಕುಟಿಗಗಳಲ್ಲೇ ದೊಡ್ಡದೆಂದು ಸುಲಭವಾಗಿ ಹೇಳಬಹುದಾದ “ಹೆಮ್ಮರಕುಟಿಗ” (White-bellied Woodpecker) Dryocopus javensis ಅದಾಗಿತ್ತು. ತನ್ನ ದಿನನಿತ್ಯದ ಕರ್ಮವೇ ಇದೆಂಬಂತೆ ಬಡಗಿ ಕೆಳಕ್ಕೆ ಬಂದು ಮರಕ್ಕೆ ಒಂದು ಸುತ್ತು ಹಾಕಿತು. ಬೇರೆ ಯಾವ ಸದ್ದೂ ಅಷ್ಟು ಇರದಿದ್ದರಿಂದ ಇದರ ಕುಟ್ಟುವ ಸದ್ದು ಜೋರಾಗಿ ಎಲ್ಲಾ ಕಡೆ ಪ್ರತಿಧ್ವನಿಸುತ್ತಿತ್ತು. ಅಂದು ತನ್ನ ತಲೆ ಮೇಲೆ ಮಬ್ಬಾದ ಬೆಳಕಲ್ಲಿ ಕಣ್ಣಾಮುಚ್ಚಾಲೆ ಆಡಿದ ಹಕ್ಕಿಯೂ ಇದೆ ಎಂದು ಸ್ಪಷ್ಟವಾಗಿ ಈಗ ಹೇಳಬಲ್ಲವಳಾಗಿದ್ದೆ. ಬಂದು ಕೂತ ಗಳಿಗೆಯಿಂದ, ಆ ಮರದ ಇನ್ನೊಂದು ಕಡೆಗೇ ತುಂಬಾ ಹೊತ್ತು ಕುಟ್ಟುತ್ತಾ ಕೂತಿದ್ದರೂ, ಅದು ಮರಕ್ಕೆ ಒಂದು ಸುತ್ತು ಹೊಡೆಯುವಾಗ ಒಮ್ಮೆ ಸಂಪೂರ್ಣವಾಗಿ ನಮಗೆ ಕಂಡಿತು.
ಮಲೆನಾಡಿನುದ್ದಕ್ಕೂ ಕಾಣಬಹುದಾದ ಈ ಪಕ್ಷಿ ಮರಕುಟಿಗಗಳಲ್ಲೇ ಅತ್ಯಂತ ಸ್ಪಷ್ಟವಾಗಿ, ನೋಡಿದ ಕೂಡಲೇ ಗುರುತಿಸಬಹುದಾದ ಪಕ್ಷಿಯಾಗಿದೆ. ತಲೆ ಮೇಲೆ ಕೆಂಪು ಜುಟ್ಟೊಂದಿದ್ದು, ಹೊಟ್ಟೆ ಭಾಗದಲ್ಲಿ ಬಿಳಿ ಬಣ್ಣ ಹೊಂದಿರುತ್ತದೆ. ಏಷ್ಯಾದ ಉಷ್ಣವಲಯದ ಕಾಡುಗಳುದ್ದಕ್ಕೂ ಇದರ ವ್ಯಾಪ್ತಿ ಹರಡಿದೆ. ಏಷ್ಯಾದಲ್ಲಿ ಎರಡನೇ ದೊಡ್ಡ ಮರಕುಟಿಗವಾಗಿ, ನಮ್ಮ ದಕ್ಷಿಣ ಭಾರತದಲ್ಲಿರುವ ಮರಕುಟಿಗಗಳಲ್ಲಿ ದೊಡ್ಡದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಸಾಮಾನ್ಯವಾಗಿ ನಾನು ಕಂಡಂತೆ ತನ್ನ ಗೂಡಿನ ಆಯ್ಕೆಯಲ್ಲಿ ಸತ್ತು ಹೋದ ಅಥವಾ ಇನ್ನೇನು ಸತ್ತೇ ಹೋಗಬಹುದಾದ ಮರಗಳನ್ನೇ ಆಯ್ದುಕೊಳ್ಳುತ್ತದೆ. ಹೆಚ್ಚು ಇರುವೆ ಹಾಗು ಜೀರುಂಡೆಗಳನ್ನು ತಿನ್ನುವುದಾದರೂ, ಕೆಲವು ಹಣ್ಣುಗಳೂ ಇದರ ನೆಚ್ಚಿನ ಆಹಾರದ ಪಟ್ಟಿಯಲ್ಲಿವೆ. ಮಲೆನಾಡಿನಲ್ಲಿ ವಿಶೇಷವಾಗಿ ಕಾಣುವ ಕಂದು ಮರಕುಟಿಗ, ಚುಕ್ಕಿ ಮರಕುಟಿಗ, ಹಳದಿನೆತ್ತಿಯ ಮರಕುಟಿಗಗಳೆಲ್ಲವೂ ಇದೇ ದಾರಿಯುದ್ದಕ್ಕೂ ಹಿಂದೆ ನಾನು ಕಂಡಿದ್ದೆನಾದರೂ, ಹೆಮ್ಮರಕುಟಿಗದ ದೊಡ್ಡ ಗಾತ್ರ, ನನ್ನ ಈ ಹಕ್ಕಿಗಳ ಸಾಲಿಗೆ ಒಂದು ಹೊಸ ಮೆರಗು ನೀಡಿತ್ತು.
ಬೈನೋಕ್ಯುಲರ್ ನಲ್ಲಿ ಅದನ್ನು ಕಂಡು ಉದ್ಗಾರ ತೆಗೆದ ಜಾನ, ತಾನೂ ಹಕ್ಕಿ ತೋರಿಸಿದೆ ಎಂಬ ಖುಷಿಯಲ್ಲಿ ಹಾಗೇ ಸುತ್ತಲಿನ ಜಾಗವನ್ನೆಲ್ಲಾ ತೋರಿಸಿ, `ತುಂಬಾ ಹಕ್ಕಿಗಳು ಬರ್ತಾವೆ ಇಲ್ಲೆಲ್ಲಾ…! ತೋರುಸ್ತೀನಿ’ ಎಂದಾಗ ಮತ್ತೊಮ್ಮೆ ಬಿಡುವು ಮಾಡಿಕೊಂಡು ಬರ್ತೀನಿ ಅಂತ ಹೇಳಿ ಅಲ್ಲಿಂದ ಹೊರಟೆ. ಅರ್ಧದಾರಿಯವರೆಗೆ ಬಂದು ಅಲ್ಲಿಂದ ನಮ್ಮನೆ ದಾರಿ ತೋರಿಸಿ ಅವನೂ ಅವರ ಮನೆಯ ಕಡೆ ತೆರಳಿದ. ಎಷ್ಟೋ ಸಲ ಹಕ್ಕಿಗಳ ಹುಡುಕಾಟದಲ್ಲಿ ಊಹಿಸದೇ ಇದ್ದ ಹಕ್ಕಿ ಕಣ್ಣೆದುರು ಬಂದು ಹಾರಿ ಹೋದ ಘಟನೆಗಳು ಒಂದು ರೀತಿಯಲ್ಲಿ ಮನಸ್ಸಿನ ಮುದಕ್ಕೆ ಕಾರಣವಾದರೆ, ಈ ರೀತಿ ಇಲ್ಲಿ, ಈ ಸಮಯಕ್ಕೆ ಬಂದೇ ಬರುತ್ತದೆ ಎಂದು ನಿರೀಕ್ಷೆಯಲ್ಲಿ ಕೂತು ಪಕ್ಷಿಯನ್ನು, ಅದರಲ್ಲೂ ಜಾನನೊಂದಿಗೆ ಕೂತು ಕಂಡಿದ್ದು ನನ್ನ ಅನುಭವಗಳ ಬುಟ್ಟಿಗೆ ಮತ್ತಷ್ಟು ಖುಷಿಯನ್ನೂ ಸೇರಿಸಿತ್ತು.
ಲೇಖನ: ಸ್ಮಿತಾ ರಾವ್
ಶಿವಮೊಗ್ಗ ಜಿಲ್ಲೆ
ಮೂಲತಃ ಮಲೆನಾಡಿನವಳಾದ ನಾನು, ವೃತ್ತಿಯಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಸಂಶೋಧಕಿ. ಭೌತಶಾಸ್ತ್ರದ ಕೋನದಿಂದ ಪ್ರಕೃತಿಯನ್ನು ಅರಿಯುವುದು ಒಂದೆಡೆಯಾದರೆ, ಇನ್ನೊಂದೆಡೆ ಸೃಷ್ಟಿಯ ಜೀವ ವೈವಿಧ್ಯತೆಯ ಅನಂತತೆಯನ್ನು, ಅದರಲ್ಲಿ ಕಂಡುಕೊಂಡ ತನ್ಮಯತೆಯನ್ನು ಅಭಿವ್ಯಕ್ತಪಡಿಸುವ ಬಯಕೆ ನನ್ನದು. ಅದನ್ನು ಬರಹದ, ಹಾಗೇ ಸೆರೆಹಿಡಿದ ಛಾಯಾಚಿತ್ರಗಳ ಮೂಲಕ ಇತರರನ್ನೂ ತಲುಪುವ ಸಣ್ಣ ಹಂಬಲವನ್ನು ಇಲ್ಲಿ ಕಾಣಬಹುದು.