ಸುಕ್ರಿ , ತುಳಸಿ ಅಜ್ಜಿಯರ ಪರಿಸರ ಪಾಠ

ಸುಕ್ರಿ , ತುಳಸಿ ಅಜ್ಜಿಯರ ಪರಿಸರ ಪಾಠ

ಮೊದಲನೇ ಚಿತ್ರ: ಸುಕ್ರಿ ಅಜ್ಜಿ (© ಅಪುಲ್ ಆಳ್ವಾ ಇರಾ), ಎರಡನೇ ಚಿತ್ರ: ತುಳಸಿ ಅಜ್ಜಿ (© ಶಕ್ತಿಪ್ರಸಾದ ಅಭ್ಯಂಕರ್)

ಹಾಲಕ್ಕಿ ಸಮುದಾಯದವರು ಉತ್ತರಕನ್ನಡದ ಕಾಳಿ ನದಿಯಿಂದ ಶರಾವತಿ ನದಿಯ ವ್ಯಾಪ್ತಿಯವರೆಗಿನ ಕಾರವಾರ, ಅಂಕೋಲ, ಗೋಕರ್ಣ, ಕುಮಟಾ, ಹೊನ್ನಾವರ ಮುಂತಾದ ಭಾಗಗಳಲ್ಲಿ ಕಾಣಸಿಗುತ್ತಾರೆ. ಇವರು ಜೀವನಾಧಾರಕ್ಕೆ ಕೃಷಿಯನ್ನು ಅವಲಂಬಿಸಿದ್ದಾರೆ. ಯಾವುದೇ ಪ್ರಚಾರ, ಹಣದಾಸೆಯನ್ನು ಬಯಸದೇ ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಎಂಬುದನ್ನು ಅರಿತು ಬದುಕುವ ಶ್ರಮಜೀವಿಗಳು. ಬೇರೆಲ್ಲಾ ಸಮುದಾಯಕ್ಕಿಂತ ಹಾಲಕ್ಕಿ ಒಕ್ಕಲಿಗದವರ ಉಡುಗೆ, ಆಚಾರ-ವಿಚಾರ, ಜೀವನಪದ್ಧತಿ ವಿಭಿನ್ನ. ರವಿಕೆ ಉಡದೆ ಸೀರೆಯನ್ನು ಜಡಿಕೆ ಕಟ್ಟಿ ಬಣ್ಣ ಬಣ್ಣದ ಮಣಿಸರ ಹಾಕಿಕೊಂಡು ತಾರ್ಲೆ, ಗುಮಟೆ, ಪುಗುಡಿ ಮೂಲಕ ಹಬ್ಬ ಹರಿದಿನಗಳಲ್ಲಿ, ಮದುವೆ ಸಮಾರಂಭದಲ್ಲಿ ಹಾಡುವ ಹಾಡು, ಕುಣಿತ ಅವರ ಗ್ರಾಮೀಣ ಸೊಗಡಿನ ವೈಶಿಷ್ಟ್ಯತೆಗೆ ಸಾಕ್ಷಿಯಾಗಿದೆ.

ಸುಕ್ರಿ ಅಜ್ಜಿ, © ಅಪುಲ್ ಆಳ್ವಾ ಇರಾ

        ಹಾಲಕ್ಕಿ ಸಮುದಾಯದಲ್ಲೆ ಹುಟ್ಟಿದ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅವರು ನಾಡಿನ ಜಾನಪದ ಸಂಸ್ಕೃತಿ, ಪರಂಪರೆಯನ್ನು ಜನಮಾನಸದಲ್ಲಿ ಅಚ್ಚಳಿಯದಂತೆ ಮಾಡಿದ ಹಿರಿಯ ಜೀವ. ಸುಕ್ರಿ ಅಜ್ಜಿಯ ತಂದೆ ಸುಬ್ಬಣ್ಣ, ತಾಯಿ ದೇವಮ್ಮ. ಗಂಡ ಬೊಮ್ಮ ಗೌಡ. ಇವರೆಲ್ಲರೂ ಶ್ರಮ ಜೀವಿಗಳು. ಅಜ್ಜಿಯೂ ಸಹ ಶ್ರಮದ ಬದುಕನ್ನು ಬಾಲ್ಯದಿಂದಲೇ ಕಂಡಿದ್ದರ ಪರಿಣಾಮವಾಗಿ ಮಾನವೀಯತೆಯೊಂದಿಗೆ, ಪರಿಸರಕ್ಕೆ ತಮ್ಮ ಜೀವನವನ್ನೇ ಮುಡಿಪಿಟ್ಟರು. ಬಾಳ ಪಯಣದ ತುಂಬೆಲ್ಲಾ ಬಡತನವಿದ್ದರೂ ಹಣದ ಅಭಿಲಾಷೆಯಾಗಲಿ, ಪ್ರಚಾರದ ದಾಹವಾಗಲಿ ಸುಕ್ರಿ ಅಜ್ಜಿಗೆ ಬಂದಿಲ್ಲ. ಈ ಅಜ್ಜಿಯ ವಯಸ್ಸು ಸರಿ ಸುಮಾರು 90 ವರ್ಷಗಳಿರಬಹುದು. ಅಕ್ಷರ ಅಭ್ಯಾಸ ಕಲಿಯದಿದ್ದರು ಇವರು ನಿಸರ್ಗದ ಒಡಲ ಕೂಗು, ಹೆಣ್ಣಿನ ಮನದಾಳದ ಸಂಕಟ, ಸ್ತ್ರೀ ಶೋಷಣೆ, ಸಾಮಾಜಿಕ ಅಸಮಾನತೆಯನ್ನು 4000ಕ್ಕೂ ಹೆಚ್ಚಿನ ಜನಪದ ಹಾಡಿನ ಮೂಲಕ ಬಿಂಬಿಸಿದ್ದಾರೆ. ದುಡಿದ ಹಣವನ್ನು ಕುಡಿತವೆಂಬ ಚಟಕ್ಕೆ ವ್ಯರ್ಥ ಮಾಡುವ ಹಾಲಕ್ಕಿ ಯುವಕರನ್ನು ಕಂಡ ಸುಕ್ರಿ ಅಜ್ಜಿಯು, ತಮ್ಮ ಯುವ ಸಮುದಾಯ ಎಲ್ಲೊ ಹಾದಿ ತಪ್ಪುತ್ತಿದೆಯೆಂದು ಮದ್ಯಪಾನ ಚಳುವಳಿ ನಡೆಸಿ ಯಶಸ್ವಿಯಾಗಿದ್ದಾರೆ. ಶಾಲಾ ಮೆಟ್ಟಿಲನ್ನೆ ತುಳಿಯದ ಈ ಅಜ್ಜಿಯನ್ನು ಕರ್ನಾಟಕ ವಿಶ್ವವಿದ್ಯಾಲಯವು ಜಾನಪದ ವಿಭಾಗದ ಉಪನ್ಯಾಸಕಿಯಾಗಿ ನೇಮಿಸಿದೆ! ಅಜ್ಜಿ ಮನೆಗೆ ಸ್ವತ: ನಾನೇ ಕಳೆದ ಮಾರ್ಚ್ ತಿಂಗಳಲ್ಲಿ ಹೋಗಿದ್ದೆ. ಅಜ್ಜಿಯಲ್ಲಿರುವ ಲವಲವಿಕೆ, ಕಾಯಕನಿಷ್ಠೆ, ಸ್ಮರಣಶಕ್ತಿ, ಮುಗ್ಧ ನಗು, ಸರಳತೆ ಅವರು ನೀಡಿದ ನಿರಪೇಕ್ಷಿತ ಪ್ರೀತಿ ಎಂದಿಗೂ ಅವಿಸ್ಮರಣೀಯ. ಎಲ್ಲೆ ಹೋದರೂ, ಯಾವ ಪ್ರತಿಷ್ಠಿತ ವ್ಯಕ್ತಿ ಮುಂದೆ ನಿಂತರೂ ಅವರ ಹಾಲಕ್ಕಿ ಶೈಲಿಯ ಉಡುಗೆಯಲ್ಲಾಗಲಿ, ಭಾಷೆಯಲ್ಲಾಗಲಿ ಬದಲಾವಣೆ ಎಂಬುದಿಲ್ಲ. ಎಂದಿಗೂ ತಮ್ಮ ಸಮುದಾಯದ ಆಚಾರ, ಸಂಪ್ರದಾಯಕ್ಕೆ ಬದ್ಧರಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅಜ್ಜಿಗೆ ಇರುವ ಆಸೆ ಎಂದರೆ, ತನ್ನೆಲ್ಲಾ ಹಾಡುಗಳು ಕೃತಿ ರೂಪದಲ್ಲಿ ಪ್ರಕಟವಾಗಿ ಮುಂಬರುವ ಪೀಳಿಗೆ ಓದುವಂತಾಗಬೇಕು ಎಂಬುದಾಗಿದೆ.  ಹೀಗಾದಾಗ ಮಾತ್ರಾ ಹಾಲಕ್ಕಿ ಸಮುದಾಯದ ಜಾನಪದ ಸಾಹಿತ್ಯ ಶಾಶ್ವತವಾಗಿ ಉಳಿಯಲು ಸಾಧ್ಯ.

© ಅಪುಲ್ ಆಳ್ವಾ ಇರಾ
ತುಳಸಿ ಅಜ್ಜಿ, © ಶಕ್ತಿಪ್ರಸಾದ ಅಭ್ಯಂಕರ್

ಇನ್ನೋರ್ವ ಹಾಲಕ್ಕಿ ಸಮುದಾಯದ ಪದ್ಮಶ್ರಿ ಪುರಸ್ಕೃತೆ ತುಳಸಿ ಗೌಡ. ಇವರು ಅಂಕೋಲ ತಾಲೂಕಿನ ಹೊನ್ನಳ್ಳಿ ಗ್ರಾಮದವರು. ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಲಕ್ಷಕ್ಕೂ ಹೆಚ್ಚು ಸಸಿ ನೆಟ್ಟು ಸಲುಹಿದ ಹಿರಿ ಜೀವ. ಇವರ ವ್ಯಕ್ತಿತ್ವವೇ ಅಂತಹದ್ದು, ಮಾತು ಕಡಿಮೆ ಕೆಲಸ ಹೆಚ್ಚು… ತುಳಸಿ ಅಜ್ಜಿಯು ಯಾವ ಬಿರುದು, ಸನ್ಮಾನದ ಹಿಂದೆ ಹೋದವರಲ್ಲ, ತನ್ನ ಪಾಡಿಗೆ ಗಿಡ ನೆಟ್ಟು ಮರವಾಗಿ ಬೆಳೆಯುವ ತನಕ ಮಕ್ಕಳಂತೆ ಸಲುಹಿದವರು. ಒಮ್ಮೆ ಅಜ್ಜಿಯ ಕಾಯಕ ನಿಷ್ಠೆ ಗಮನಿಸಿದ ಅಂದಿನ ಅರಣ್ಯ ಅಧಿಕಾರಿ ಯಲ್ಲಪ್ಪ ರೆಡ್ಡಿ ಯವರು ಮಾಸ್ತಿಕಟ್ಟೆ ಅರಣ್ಯ ವಲಯದಲ್ಲಿ ಸಸಿ ನೆಡುವ ಕೆಲಸವೊಂದನ್ನು ಕೊಡಿಸಿದರು. ಇವರಿಗಿದ್ದ ವೃತ್ತಿ ಗೌರವ, ಸಸಿ ಪೋಷಣೆ, ಪರಿಸರ ಕಾಳಜಿಯ ಮುಂದೆ ಸಮಯದ ಅರಿವಿರದೆ ಇಲಾಖಾ ವೇಳೆ ಹೊರತಾಗಿಯೂ ಹೆಚ್ಚು ಹೆಚ್ಚು ಕಾರ್ಯನಿರ್ವಹಿಸುತ್ತಿದ್ದರು. ಕಾಡಿನ ಸುತ್ತೆಲ್ಲಾ ತಿರುಗಿ ಅಪರೂಪದ ಬೀಜ ಮತ್ತು ಗಿಡಗಳನ್ನು ಸಂಗ್ರಹಿಸಿ ನೆಡುತ್ತಿದ್ದರು. ನೋಡು ನೋಡುತ್ತಿದ್ದಂತೆ ಮಾಸ್ತಿಗಟ್ಟ, ಹೊನ್ನಾಳಿ, ವಜ್ರಹಳ್ಳಿ, ಅಡಗೂರು, ಅಗಸೂರು, ಕಲ್ಲೇಶ್ವರ, ದೊಂಗ್ರಿ ಹೀಗೆ ಅಲ್ಲಿಯ ಖಾಲಿ ಭೂಮಿಯ ತುಂಬೆಲ್ಲ ತುಳಸಿ ಅಜ್ಜಿ ನೆಟ್ಟಿರುವ ಗಿಡ ಮರಗಳು ಕಾಣಸಿಗುತ್ತವೆ. ಮತ್ತಿಘಟ್ಟ ಅರಣ್ಯ ನರ್ಸರಿಯಲ್ಲಿ ಸೇವೆ ಮಾಡಿ ನಿವೃತ್ತಿಯಾದರೂ ಇಂದಿನ ಯುವಕರಿಗೆ ತಾನು ನೆಟ್ಟಿರುವ ಸಸಿಗಳ ಜಾತಿ, ಬೇಕಾಗುವ ನೀರಿನ ಪ್ರಮಾಣ, ಯಾವ ಸಮಯದಲ್ಲಿ ಮರ ಬೀಜ ಬಿಡುತ್ತದೆ, ಹೇಗೆ ನೆಟ್ಟು ಬೆಳೆಸಬೇಕೆಂಬುದರ ಕುರಿತಾಗಿ ಮಾರ್ಗದರ್ಶನ ನೀಡುತ್ತಾರೆ. ಈ ಕಾರಣದಿಂದಾಗಿ ತುಳಸಿ ಅಜ್ಜಿ “ಅರಣ್ಯ ವಿಶ್ವಕೋಶ” ಎಂದೇ ಜನಮನದಲ್ಲಿ ಪ್ರಸಿದ್ಧರಾಗಿದ್ದಾರೆ.

            17 ನೇ ವಯಸ್ಸಿನಲ್ಲಿಯೇ ಪತಿ ಗೋವಿಂದ ಗೌಡ ರನ್ನು ಕಳೆದುಕೊಂಡರೂ, ಕಡು ಬಡತನದಲ್ಲಿ ಕೇವಲ 1.25 ಪೈಸೆಗೂ ಕಡಿಮೆ ದಿನಕೂಲಿ ಸಿಗುತ್ತಿದ್ದರೂ ಕೂಡಾ ಪರಿಸರದ ಕಾಳಜಿಯಿಂದಾಗಿ ಕೆಲಸ ಬಿಡಲಿಲ್ಲ. ಬರಡು ಭೂಮಿಯನ್ನು ಹಸಿರಾಗಿಸಿ ‘ವೃಕ್ಷ ಮಾತೆ’ ಎನಿಸಿಕೊಂಡರು. ಇವರ ಕಾಯಕ ನಿಷ್ಠೆಗೆ “ಪದ್ಮಶ್ರಿ ಪ್ರಶಸ್ತಿ“, ಕೇಂದ್ರ ಸರ್ಕಾರ ನೀಡುವ “ಪ್ರಿಯ ದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ” ಮತ್ತು ಪರಿಸರದ ಕಾಯಕಕ್ಕೆ “ರಾಜ್ಯೋತ್ಸವ ಪ್ರಶಸ್ತಿ” ದೊರಕಿವೆ.

ಕಳೆದ 6 ದಶಕಗಳಿಂದ ಪ್ರಕೃತಿ ಸೇವೆಯ ಸಾರ್ಥಕತೆ ಕಂಡುಕೊಂಡರು ತುಳಸಿ ಅಜ್ಜಿ ಎಲ್ಲೆ ಹೋದರು ಮೂಲತನವನ್ನು ಬಿಡದೆ ಸಂಪ್ರದಾಯಕ್ಕೆ ಬದ್ಧವಾದ ಉಡುಗೆ ಶೈಲಿಯನ್ನೇ ಪಾಲಿಸುತ್ತಾರೆ. ಬೆಳಿಗ್ಗೆ, ಸಂಜೆಯ ಸಮಯ ಸಿಕ್ಕಾಗಲೆಲ್ಲ ತನ್ನ ಗಿಡ ಮರಗಳು ಇರುವ ಜಾಗಕ್ಕೆ ಹೋಗುತ್ತಾರೆ. ಅದರ ಪೋಷಣೆಯಲ್ಲಿ ತೋಡಗುತ್ತಾರೆ! ಇದು ಅಜ್ಜಿಯ ಕಾಯಕ ನಿಷ್ಠೆ. ತುಳಸಿ ಅಜ್ಜಿಗೆ ಇಂದಿಗೂ ತಾನು ನೆಟ್ಟ ಗಿಡದ ಸರಿಯಾದ ಲೆಕ್ಕ ಇಲ್ಲ. ತುಳಸಿ ಅಜ್ಜಿಯನ್ನೊಮ್ಮೆ ಭೇಟಿ ಆದಾಗ ನನಗೆ ಹೇಳಿದ್ದು “ನಾವ್ ಎಷ್ಟು ಗಿಡ ನೆಟ್ಟಿದ್ದೇವೆ ಎಂಬುದು ಮುಖ್ಯ ಅಲ್ಲ, ನೆಟ್ಟ ಗಿಡಗಳೆಷ್ಟು ಬದುಕುಳಿದಿವೆ ಎಂಬುದು ಮುಖ್ಯ” ಎಂದಿದ್ದರು. ಅಜ್ಜಿಯಿಂದ ನಾ ಕಲಿತು ಮರೆಯಲಾಗದ ಮೌಲ್ಯಯುತ ಮಾತಿದು. ಅಕ್ಷರ ಜ್ಞಾನವಿಲ್ಲದಿದ್ದರೂ ತುಳಸಿ ಅಜ್ಜಿಯ ಕಾಯಕ ನಿಷ್ಠೆ, ಪರಿಸರ ಕಾಳಜಿ, ಸಸ್ಯ ಪೋಷಣೆಗೆ ತೋರುವ ಉತ್ಸುಕತೆಯನ್ನು ನಾವೆಲ್ಲರೂ ತುಳಸಿ ಅಜ್ಜಿಯನ್ನು ನೋಡಿ ಕಲಿಯಬೇಕಿದೆ.

© ಅಪುಲ್ ಆಳ್ವಾ ಇರಾ

ಲೇಖನ : ಅನ್ನಪೂರ್ಣ ಬೈಂದೂರು
ಉಡುಪಿ ಜಿಲ್ಲೆ

Print Friendly, PDF & Email
Spread the love
error: Content is protected.