ಕೆರೆ ಹಬ್ಬ
© ಡಬ್ಲ್ಯೂ. ಸಿ. ಜಿ.
ಕಾಳೇಶ್ವರಿ ಗ್ರಾಮದ ಪುರಾತನ ಕೆರೆಯನ್ನು ಭೂ ಕಳ್ಳರಿಂದ ರಕ್ಷಿಸಲು ಪಣತೊಟ್ಟ ಕಾಳೇಶ್ವರಿ ಗ್ರಾಮದ ಯುವಕರೊಂದಿಗೆ, ವೈಲ್ಡ್ಲೈಫ್ ಕನ್ಸರ್ವೇಷನ್ ಗ್ರೂಪ್ (WCG) ಸೇರಿ ಒತ್ತುವರಿಯಾದ ಕೆರೆಯ ಜಾಗವನ್ನು ಬಿಡಿಸಿಕೊಡಿ ಎಂದು ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾಧಿಕಾರಿವರೆಗೂ ಅರ್ಜಿಗಳನ್ನು ಕೊಟ್ಟು ಬಂದೆವು. ಕಳೆದ 10 ವರ್ಷಗಳಿಂದ ಒತ್ತುವರಿಯಾದ ಕೆರೆ ಮಾತ್ರ ತೆರವು ಆಗಿರಲಿಲ್ಲ. ಹಾಗೆಂದು ಸುಮ್ಮನೆ ಬಿಟ್ಟುಬಿಡುವ ಜಾಯಮಾನದವರಲ್ಲ ಈ ನಮ್ಮೂರಿನ ಈ ಹುಡುಗರು.
ಕಾಳೇಶ್ವರಿ ಗ್ರಾಮಕ್ಕೆ ಮಾಜಿ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಗಳಾಗಿದ್ದ ರಾಮಯ್ಯನವರು ಇತ್ತೀಚೆಗೆ ಊರಿಗೆ ಭೇಟಿಕೊಟ್ಟಿದ್ದರು. ಆಗ ಊರಿನ ಯುವಕರು ಕೆರೆಯನ್ನು ಉಳಿಸಲು ತಾವು ಅಡಿಯಿಂದ ಮುಡಿಯವರೆಗೂ ಸಲ್ಲಿಸಿದ್ದ ಅರ್ಜಿಗಳ ಕಂತೆಯನ್ನು ಜಂಟಿ ಕಾರ್ಯದರ್ಶಿಗಳ ಕೈಗೆ ಇಟ್ಟು ಕೆರೆಯನ್ನು ಉಳಿಸಿಕೊಡಲು ಕೇಳಿಕೊಂಡರು. ಅವರು ಮನಸ್ಸು ಮಾಡಿ ಸರ್ಕಾರದ ಫೈಲುಗಳಲ್ಲಿ ಹುದುಗಿದ್ದ ಈ ನಾಲ್ಕೂವರೆ ಎಕರೆ ಕೆರೆಯನ್ನು ಮೇಲೆ ತಂದು ಅಧಿಕಾರಿಗಳಿಗೆ ತೋರಿಸಿ ಒತ್ತುವರಿಯನ್ನು ತೆರವುಗೊಳಿಸಲು ಸೂಚಿಸಿದರು. ನಂತರ ತುಂಬಾ ಕಾರ್ಯ ನಿರತವಾಗಿರುವ ಇಲಾಖೆಯಾದ ಕಂದಾಯ ಇಲಾಖೆಯ ಸರ್ವೇ ಮಾಡುವವರು ಒಂದು ಭಾನುವಾರ ಬಂದರು. ಕೆರೆಯ ಸುತ್ತ ಇದ್ದ ಹಳೆಯ ಬಾಂದು ಕಲ್ಲುಗಳನ್ನು ಹುಡುಕಿ ಡಿಜಿಟಲ್ ಸರ್ವೇ ಮಾಡಿ, ಕೆರೆಯ ಗಡಿಯನ್ನು ಗುರುತಿಸಿ ಕಲ್ಲುಗಳನ್ನು ನೆಟ್ಟರು. ಆ ಸರ್ವೇ ಅಧಿಕಾರಿಗಳು ಅತ್ತ ಹೋಗುತ್ತಿದ್ದಂತೆ ಇತ್ತ ಒತ್ತುವರಿದಾರರು ಬಂದು “ನೀವೇನು ನಮಗೆ ನೋಟಿಸ್ ಕೊಟ್ಟು ಸರ್ವೇ ಮಾಡಿದ್ದೀರಾ? ಕಲ್ಲು ಹಾಕಲು ನೀವು ಯಾರು?” ಎಂದು ಹೇಳಿ ಸರ್ವೇ ಗುರುತು ಮಾಡಿದ್ದ ಕಲ್ಲುಗಳನ್ನು ಕಿತ್ತು ಬಿಸಾಕಿ ಮತ್ತೊಂದು ತಪ್ಪು ಮಾಡಿಯೇ ಬಿಟ್ಟರು!
ಈ ವಿಚಾರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೂಲಕ ಮೇಲಿನ ಅಧಿಕಾರಿಗಳಿಗೆ ತಿಳಿಸಲಾಯಿತು. ಸರ್ಕಾರ ಜೆಸಿಬಿ ಗಳ ಸಮೇತ ಬಂದಿತು. ಕೆರೆಯ ಅಂಗಳದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ರಸ್ತೆಯನ್ನು ದೂಳೆಬ್ಬಿಸಿ, ಸರ್ವೇ ಕಲ್ಲುಗಳನ್ನು ಮತ್ತೆ ನೆಟ್ಟು ಹಳದಿ ಬಣ್ಣ ಬಳೆದು ಕಾಂಪೌಂಡ್ ಹಾಕಿ ತಂತಿ ಬೇಲಿಯನ್ನು ಅಳವಡಿಸಲಾಯಿತು. ಕೆರೆಯ ಖಾಲಿ ಅಂಗಳದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ರಮವನ್ನು ನಮ್ಮ ಡಬ್ಲ್ಯೂ.ಸಿ.ಜಿ ಹಾಗೂ ಸ್ನೇಹ ಸಂಪದ ತಂಡ ವಹಿಸಿಕೊಂಡಿತು. ವಿವಿಧ ಪ್ರಭೇದದ ಸ್ಥಳೀಯ ಗಿಡಗಳೇ ಆದ ಬಸರಿ, ಆಲ, ಗೋಣಿ, ಅತ್ತಿ, ಅರ್ಜುನ, ಹೊಳೆಮತ್ತಿ ಇತರೆ ಹಲವು ಪ್ರಭೇದದ ಗಿಡಗಳನ್ನು ಸಂಗ್ರಹಿಸಲು ಬಯಸಿದ್ದ ನಮಗೆ, ಚನ್ನಪಟ್ಟಣ ಅರಣ್ಯ ಇಲಾಖೆಯ ಅರಣ್ಯ ಅಧಿಕಾರಿಗಳಾದ ಮೊಹಮ್ಮದ್ ಮನ್ಸೂರ್ ಸರ್ ಅವರು, ಶಿವನಹಳ್ಳಿಯ ರಾಮಕೃಷ್ಣ ಮಿಷನ್ ನ ಸ್ವಾಮೀಜಿಯವರು ಗಿಡಗಳನ್ನು ನೀಡುವಲ್ಲಿ ನಮಗೆ ನೆರವಾದರು. ನಮ್ಮ ತಾಲೂಕಿನ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಕೆಲವು ಹೊಂಗೆ ಗಿಡಗಳನ್ನು ತಂದುಕೊಟ್ಟರು. ಕೆರೆಯ ಅಂಗಳದಲ್ಲಿ ಗುಂಡಿಗಳನ್ನು ತೋಡಲಾಗಿತ್ತು.
ಸ್ವಯಂಸೇವಕರು, ಹಳ್ಳಿಯ ಜನರು, ಮಕ್ಕಳು, ವಿದ್ಯಾರ್ಥಿಗಳು ಮತ್ತು ನಗರದಲ್ಲಿನ ಪರಿಸರ ಪ್ರಿಯರು, ಎಲ್ಲರಿಗೂ ಗಿಡ ನೆಡುವ ಕಾರ್ಯಕ್ರಮ ಇದೆ ಎಂದು ತಿಳಿಸಲಾಯಿತು. ಕಳೆದ 22 ನೇ ಆಗಸ್ಟ್ 2021 ರ ಭಾನುವಾರದಂದು ಎಲ್ಲರೂ ಬಂದರು. ಮಾಜಿ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಶ್ರೀ ಎಂ. ರಾಮಯ್ಯ ನವರು, ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಾಲ್ಲೂಕು ಪಂಚಾಯಿತಿಯ ಸದಸ್ಯರು, ಸ್ನೇಹ ಸಂಪದ ತಂಡದವರು, ಸುತ್ತಮುತ್ತಲಿನ ಗ್ರಾಮಸ್ಥರು, ಡಬ್ಲ್ಯೂ.ಸಿ.ಜಿ ಸ್ವಯಂಸೇವಕರು ಹಾಗೂ ನಗರದ ಪರಿಸರ ಆಸಕ್ತರು ಈ ಕಾರ್ಯಕ್ರಮಕ್ಕೆ ಬಂದರು. ಕೆರೆಯ ಸುತ್ತಮುತ್ತ ಬಿದ್ದಿದ್ದ ಪ್ಲಾಸ್ಟಿಕ್, ಗಾಜು ಇತರೆ ಕಸವನ್ನು ಹೆಕ್ಕಿ ಸಂಗ್ರಹಿಸಲಾಯಿತು.
ನಮ್ಮ ಪರಿಸರದಲ್ಲಿ ಉಂಟಾಗುತ್ತಿರುವ ಹವಾಮಾನ ವೈಪರೀತ್ಯ ಹಾಗೂ ನೀರಿನ ಕೊರತೆ ನೀಗಿಸಲು ಕೆರೆಯನ್ನು ಉಳಿಸಿ, ಗಿಡಗಳನ್ನು ಬೆಳೆಸಬೇಕೆಂದು ಪಣತೊಟ್ಟು ಎಲ್ಲರೂ ಸಂತೋಷದಿಂದ ನೆಡುವುದಕ್ಕೆ ಸಜ್ಜಾದರು. ಗಿಡ ನೆಡುವ ಖುಷಿಯು ಎಲ್ಲರ ಮನದಲ್ಲಿಯೂ ಮೂಡಿತ್ತು. ಒಂದು ಉತ್ತಮ ಸಾರ್ಥಕ ಭಾವದ ವಾತಾವರಣ ನಿರ್ಮಾಣವಾಗಿತ್ತು. ಗುಂಡಿಯಲ್ಲಿ ಮೊದಲೇ ಇಟ್ಟಿದ್ದ ಗಿಡಗಳನ್ನು ಎಲ್ಲರೂ ಸೇರಿ ನೆಟ್ಟರು. ನೆಟ್ಟ ಗಿಡಗಳನ್ನು ಪೋಷಿಸಿ ಬೆಳೆಸಿ ಮುಂದಿನ ವರ್ಷವೂ ಕೆರೆ ಹಬ್ಬ ಮಾಡೋಣವೆಂದು ನಿರ್ಧರಿಸಲಾಯಿತು. ನೆಟ್ಟ 300 ಗಿಡಗಳಿಗೂ ಕೆರೆಯಿಂದಲೇ ನೀರುಣಿಸಿ, ನೆರೆದಿದ್ದ ಸ್ವಯಂಸೇವಕರು ರುಚಿಯಾದ ಭೋಜನ ಸವಿದು ಎಲ್ಲರೂ ನಿರ್ಗಮಿಸಿದರು.
ಸಂಜೆ ಬಿಳಿ ಕತ್ತಿನ ಜೋಡಿ ಬಾತುಕೋಳಿಗಳು ಕೆರೆಯ ನೀರಿನಲ್ಲಿ ಸ್ವಚ್ಛಂದವಾಗಿ ಈಜುತ್ತಿದ್ದವು. ನೀರು ಕಾಗೆಯೊಂದು ರೆಕ್ಕೆಯಗಲಿಸಿ ಸಂಜೆ ಕಿರಣಗಳಿಗೆ ಮೈಯೊಡ್ಡಿ ನಿಂತಿತ್ತು. ಕೆರೆಯ ಏರಿಯ ಮೇಲೆ ದೃಢವಾಗಿ ನಿಂತಿದ್ದ ಅತ್ತಿ ಮರದ ಪೊಟರೆಯಲ್ಲಿ ಹಾಲಕ್ಕಿ ಏನೋ ಶಕುನ ನುಡಿಯುತ್ತಿತ್ತು. ಗಿಡ ನೆಟ್ಟ ಆ ರಾತ್ರಿಯೇ ಜೋರು ಮಳೆ ಸುರಿಸಿ ಪ್ರಕೃತಿಯು ಈ ಹುಡುಗರ ಕಾರ್ಯಕ್ಕೆ ಸೈ ಎಂದಿತ್ತು.
‘ಈ ಕೆರೆ ನಮ್ಮದು’ ಹಾಗೂ ‘ಕೆರೆ ಹಬ್ಬ’ ಯೋಜನೆಗೆ ಧನ ಸಹಾಯದ ಮೂಲಕ WCG ತಂಡದ ಜೊತೆ ಕೈ ಜೋಡಿಸಿದ ಸ್ನೇಹ ಸಂಪದ ತಂಡಕ್ಕೂ, ಎಲ್ಲಾ ನಡೆಯಲ್ಲೂ ಜೊತೆಯಾಗಿದ್ದ ಮಂಟಪ ಗ್ರಾಮ ಪಂಚಾಯಿತಿ ಸದಸ್ಯರಿಗೂ, ಕಾಳೇಶ್ವರಿ ಗ್ರಾಮಸ್ಥರಿಗೂ ಧನ್ಯವಾದಗಳು.
ಲೇಖನ: ಶಂಕರಪ್ಪ ಕೆ. ಪಿ.
ಡಬ್ಲ್ಯೂ. ಸಿ. ಜಿ. ಬೆಂಗಳೂರು ಜಿಲ್ಲೆ
ಸಹಾಯಕ ಪ್ರಾಧ್ಯಾಪಕರು
ಎಸ್ ಎನ್ ಆರ್ ಪದವಿ ಕಾಲೇಜ್ , ಜಿಗಣಿ , ಬೆಂಗಳೂರು.