ರಮಣೀಯ ಕಿನ್ನೇರಸಾನಿ ವನ್ಯಜೀವಿ ಅಭಯಾರಣ್ಯದ – ಕಿರುಪರಿಚಯ

ರಮಣೀಯ ಕಿನ್ನೇರಸಾನಿ ವನ್ಯಜೀವಿ ಅಭಯಾರಣ್ಯದ – ಕಿರುಪರಿಚಯ

© ಭಗವತಿ

ತ್ರೇತಾಯುಗದ ದಂಡಕಾರಣ್ಯ ಕಾಡುಗಳ ಭಾಗವಾಗಿರುವ ಕಿನ್ನೇರಸಾನಿ ವನ್ಯಜೀವಿ ಅಭಯಾರಣ್ಯ, ಪ್ರಭು ರಾಮಚಂದ್ರನು ತನ್ನ ವನವಾಸದ ದಿನಗಳನ್ನು ಇಲ್ಲಿ ಕಳೆದಿದ್ದಾನೆ ಎಂಬುದು ಪುರಾಣ. ಹಿಂದೂ ಪುರಾಣಗಳಲ್ಲಿ ವಿಶೇಷ ಸ್ಥಾನ ಪಡೆದಿರುವ ಪರ್ಣಶಾಲಾ, ರೇಖಾಪಲ್ಲಿ, ದುಮ್ಮುಗುಡೆಮ್ ಮುಂತಾದ ಸ್ಥಳಗಳು ಇದಕ್ಕೆ ಸಾಕ್ಷಿ.

ಕಿನ್ನೇರಸಾನಿ ವನ್ಯಜೀವಿ ಅಭಯಾರಣ್ಯವು ಭಾರತದ ತೆಲಂಗಾಣದ ಖಮ್ಮಮ್ ಜಿಲ್ಲೆಯ ಪಾಲೊಂಚ ಪಟ್ಟಣದಿಂದ 21 ಕಿಲೋಮೀಟರ್ ದೂರದಲ್ಲಿದೆ. ಇದು ಗೋದಾವರಿ ನದಿಯ ಬಲ ದಂಡೆಯಲ್ಲಿ 635 ಚದರ ಕಿ.ಮೀ ವಿಸ್ತೀರ್ಣದಲ್ಲಿದೆ. ಕಿನ್ನೇರಸಾನಿ ವನ್ಯಜೀವಿ ಅಭಯಾರಣ್ಯಕ್ಕೆ ಕಿನ್ನೇರಸಾನಿ ಎಂಬ ನದಿಯ ಹೆಸರನ್ನೇ ಇಡಲಾಗಿದೆ. ಈ ನದಿಯು ಅಭಯಾರಣ್ಯವನ್ನು ವಿಭಜಿಸುತ್ತದೆ ಮತ್ತು ಗೋದಾವರಿಯನ್ನು ಸಂಧಿಸುತ್ತದೆ. ಈ ಕಿನ್ನೇರಸಾನಿ ನದಿ ಅಭಯಾರಣ್ಯಕ್ಕೆ ವಕ್ರಾಕೃತಿ ರೀತಿಯಲ್ಲಿ ಹರಿದು ಒಂದು ಸುಂದರವಾದ ದೃಶ್ಯವನ್ನು ಸೃಷ್ಟಿಸಿದೆ. ಈ ಕಿನ್ನೇರಾಸಾನಿ ನದಿಯಲ್ಲಿ ಹಲವಾರು ದೀರ್ಘಕಾಲಿಕ ಸುಳಿಗಳು ಆಗಾಗ ಗೋಚರಿಸುತ್ತವೆ, ಅವುಗಳನ್ನು “ಟೋಗಸ್” ಎಂದು ಕರೆಯಲಾಗುತ್ತದೆ. ಪ್ರವಾಸಿಗರು ಅವುಗಳನ್ನು ಸುಲಭವಾಗಿ ಗುರುತಿಸಬಹುದು. ಕಿನ್ನೇರಸಾನಿ ಅಣೆಕಟ್ಟೆಯು ಕಿನ್ನೇರಸಾನಿ ಅಭಯಾರಣ್ಯಕ್ಕೆ ನಿಖರವಾಗಿ ವಿರುದ್ಧ ದಿಕ್ಕಿನಲ್ಲಿದೆ. ಈ ಅಭಯಾರಣ್ಯದ ಹೃದಯಭಾಗದಲ್ಲಿ ಒಂದು ಸುಂದರವಾದ ಸರೋವರವಿದೆ, ಕಿನ್ನೇರಸಾನಿ ದಟ್ಟವಾದ ಕಾಡು ದ್ವೀಪಗಳನ್ನು ಹೊಂದಿದೆ, ಇದು ಅಳಿವಿನಂಚಿನಲ್ಲಿರುವ ಬಹಳಷ್ಟು ಗಿಡ-ಮರಗಳು ಮತ್ತು ಪ್ರಾಣಿ-ಪಕ್ಷಿಗಳಿಗೆ ಅತ್ಯುತ್ತಮ ವಾಸಸ್ಥಳವಾಗಿದೆ. ಇಲ್ಲಿ ತೇಗ, ಬಿದಿರು, ನೀಲಗಿರಿ, ಎಣ್ಣೆ ಮರ (hydnocarpus pentandrus), ಆಮ್ಲಾ, ಮಾವು, ಧುಮಾ, ಸಾಲಧೂಪ, ತಪಸಿ, ಕಾಯಿಧೂಪ, ಬೋಗಿ, ಹೊಳೆಗೆರೆ ಮತ್ತು ಪಾಲಿ ಎಂಬ ರಮಣೀಯ  ಮರಗಳು ಕಣ್ಮನಸೆಳೆಯುತ್ತವೆ. ಈ ಮರಗಳ ಮೇಲ್ಭಾಗಗಳಲ್ಲಿ ಅನೇಕ ವಲಸೆ ಹಕ್ಕಿಗಳು ನೆಲೆಸುತ್ತವೆ ಮತ್ತು ಪಕ್ಷಿ ವೀಕ್ಷಣೆಗೆ ಸೂಕ್ತ ಕೇಂದ್ರವಾಗಿದೆ. ಈ ಅಭಯಾರಣ್ಯದಲ್ಲಿ ಕಂಡುಬರುವ ಪ್ರಾಣಿಗಳೆಂದರೆ ಹುಲಿ, ಕರಿ ಚಿರತೆ, ನರಿ, ಕರಡಿ, ಕಾಡು ನಾಯಿ, ಕಾಡುಹಂದಿ, ಚಿಂಕಾರ, ಸಾಂಬಾರ್, ಚೀಟತಲ್, ಹೈನಾ, ಕಾಡುಹಂದಿಗಳು, ಕೃಷ್ಣಮೃಗ ಸೇರಿವೆ. ಸರೀಸೃಪಗಳಲ್ಲಿ ಮಂಡಲಹಾವುಗಳು (ವೈಪರ್ಸ್), ಹೆಬ್ಬಾವು (ಪೈಥಾನ್), ನಾಗರಹಾವು (ಕೋಬ್ರಾ), ಕಟ್ಟು ಹಾವು (Krait), ಜವುಗು ಮೊಸಳೆಗಳು, ಉಡಗಳು ಸೇರಿವೆ. ಈ ಅಭಯಾರಣ್ಯವು ಪಕ್ಷಿ ವಿಕ್ಷಣೆಗೆ ಪ್ರಶಸ್ತವಾದ ತಾಣವಾಗಿದ್ದು, ನದಿಯ ದಡದಲ್ಲಿ ಹಲವಾರು ಜಲ ಪಕ್ಷಿಗಳನ್ನು ಸಹ ಕಾಣಬಹುದು.

© J.M.Garg -Wikimedia

ಪ್ರವಾಸಿಗರಿಗಾಗಿ ವನ್ಯಜೀವಿ ಅಭಯಾರಣ್ಯದಲ್ಲಿ ಜಿಂಕೆ ಉದ್ಯಾನವಿದೆ ಅಥವಾ ನಿಖರವಾಗಿ ಹೇಳುವುದಾದರೆ, ಒಂದು ಸಣ್ಣ ಪ್ರದೇಶವನ್ನು ಜಿಂಕೆಗಳಿಗಾಗಿ ಸಂರಕ್ಷಿಸಲಾಗಿದೆ. ಇಲ್ಲಿ ಜಿಂಕೆ ಉದ್ಯಾನವನದ ಹೊರತಾಗಿ ಪ್ರತ್ಯೇಕ ನವಿಲು ಪ್ರದೇಶವಿದೆ.  ಕಿನ್ನೇರಸಾನಿ ವನ್ಯಜೀವಿ ಅಭಯಾರಣ್ಯದಲ್ಲಿರುವ ವೀಕ್ಷಣೀಯ ಸ್ಥಳವೆಂದರೆ ಅದು ಪರಿಸರ ಉದ್ಯಾನವನ. ಈ ಪರಿಸರ ಉದ್ಯಾನವನವು ಕಿನ್ನೇರಸಾನಿ ಅಣೆಕಟ್ಟಿನ ಬಳಿ ಇದೆ. ಇಲ್ಲಿನ ಮತ್ತೊಂದು ಆಕರ್ಷಣೆ ’ಹಾಲಿಡೇ ಹೋಮ್’ಗಾಜಿನ ಮನೆ.  ಈ ಗಾಜಿನ ಮನೆ ಚಿಕ್ಕ ಮಕ್ಕಳಿಗೆ ಸಂಪೂರ್ಣವಾದ ಮನೋರಂಜನೆಯನ್ನು ನೀಡುತ್ತದೆ. ಇನ್ನು ಈ ಅಭಯಾರಣ್ಯವು ಪರಿಸರ ಶಿಕ್ಷಣ ಕೇಂದ್ರವನ್ನೂ ಸಹ ಹೊಂದಿದೆ. ಈ ಕೇಂದ್ರದಲ್ಲಿ ಕಾಡು ಪ್ರಾಣಿಗಳ ದೊಡ್ಡ ಶಿಲ್ಪಗಳಿವೆ, ಅವುಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿರುವ ವಿವರಣಾತ್ಮಕ ಫಲಕಗಳಿವೆ. ಇದು ಮಕ್ಕಳು ಸುತ್ತಮುತ್ತಲಿರುವ ಪ್ರಾಣಿಗಳ ಬಗ್ಗೆ ತಿಳಿಯಲು ಅನುಕೂಲವಾಗಿದೆ. ಈ  ವನ್ಯಜೀವಿ ಅಭಯಾರಣ್ಯವು ಕೆಲವು ಅಪರೂಪದ ವನ್ಯಜೀವಿಗಳ ನೈಸರ್ಗಿಕ ವಾಸಸ್ಥಾನವಾಗಿದೆ ಮತ್ತು ಅಭಯಾರಣ್ಯಕ್ಕೆ ಭೇಟಿ ನೀಡುವ ಪ್ರವಾಸಿಗರು ತಮ್ಮ ನೈಸರ್ಗಿಕ ಆವಾಸಗಳಲ್ಲಿ ಪ್ರಾಣಿಗಳನ್ನು ಸುಲಭವಾಗಿ ಗುರುತಿಸಬಹುದು.

© Pranayraj Vangari -Wikipedia

ಕಿನ್ನೇರಸಾನಿ ವನ್ಯಜೀವಿ ಅಭಯಾರಣ್ಯವು ಒಂದು ಸಮೃದ್ಧ ಭೂಮಿಯಾಗಿದ್ದು, ಹಲವಾರು ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ಆಶ್ರಯವಾಗಿದೆ. ”ಹಾಲಿಡೇ ಹೋಮ್’ ಗಾಜಿನ ಅತಿಥಿಗೃಹ, ಪರಿಸರ ಶಿಕ್ಷಣ ಕೇಂದ್ರ, ಜಿಂಕೆವನ, ಕಿನ್ನೇರಸಾನಿ ಅಣೆಕಟ್ಟು ಮತ್ತು ಜಲಾಶಯ, ಕಿನ್ನೇರಸಾನಿ ವನ್ಯಜೀವಿ ಅಭಯಾರಣ್ಯದ ಪ್ರಮುಖ ಆಕರ್ಷಣೆಗಳು.

ಲೇಖನ:  ವಿಜಯ ಕುಮಾರ್ ಹೆಚ್. ಕೆ.
                           ರಾಯಚೂರು  ಜಿಲ್ಲೆ

Spread the love
error: Content is protected.