ಅಭಿವೃದ್ಧಿಯ ವಿಮಾನ ಹಾಗೂ ವನ್ಯಸಿರಿ

ಅಭಿವೃದ್ಧಿಯ ವಿಮಾನ ಹಾಗೂ ವನ್ಯಸಿರಿ

©ಹಯಾತ್ ಮೊಹಮ್ಮದ್

ಜೀವಜಗತ್ತು ಹರಿಯುವ ನೀರಿನಂತೆ, ಅದರ ಪಾಡಿಗೆ ಅದನ್ನು ಬಿಟ್ಟರೆ ಜೀವ ವಿಕಾಸವಾಗುತ್ತಲೇ ಹೋಗುತ್ತದೆ. ಅಕಸ್ಮಾತ್ ಪ್ರಕೃತಿಯ ಹಾದಿಗೆ ಯಾರಾದರೂ ತಡೆಗೋಡೆ ಕಟ್ಟಿದರೆ ಏನಾಗುತ್ತದೆ? ಈಗ ಮನುಷ್ಯ ಮಾಡುತ್ತಿರುವುದು ಅದನ್ನೇ. ಪ್ರಕೃತಿಯ ಸಾಗುವಿಕೆಯನ್ನು ಅಲ್ಲಲ್ಲಿ ‘ಅನಾವಶ್ಯಕ’ ರಸ್ತೆಗಳನ್ನು ಮಾಡಿ ಜೀವಜಗತ್ತಿನಲ್ಲಿ  ಮೂಗು ತೂರಿಸುತ್ತಿದ್ದಾನೆ. ವಿಶ್ವದ ಮೂವತ್ತಾರು ಬಗೆಯ ಜೀವವೈವಿಧ್ಯಗಳ ಸೂಕ್ಷ್ಮ ವಲಯ (Biodiversity Hotspots)ಗಳಲ್ಲಿ ನಮ್ಮ ‘ಪಶ್ಚಿಮ ಘಟ್ಟಗಳು’ ಕೂಡ ಒಂದು, ಹಿಮಾಲಯಗಳಿಗಿಂತ ಸುಮಾರು ನೂರು ಮಿಲಿಯನ್ ವರ್ಷಗಳಷ್ಟು ಪುರಾತನವಾದದ್ದು! ಸುಮಾರು 1,40,000 ಚದರ ಕಿಲೋಮೀಟರ್ನಷ್ಟು ಪ್ರದೇಶದಲ್ಲಿ ಪಶ್ಚಿಮ ಘಟ್ಟ ಹಬ್ಬಿಕೊಂಡಿದೆ.

7,000ಕ್ಕೂ ಹೆಚ್ಚು ಹೂ ಬಿಡುವ ಗಿಡಗಳು, 139 ಸಸ್ತನಿ ಪ್ರಭೇದಗಳು, 500ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು, 180ಕ್ಕೂ ಹೆಚ್ಚು ಉಭಯವಾಸಿ ಪ್ರಭೇದಗಳು, 6000ಕ್ಕೂ ಹೆಚ್ಚು ಕೀಟ ಪ್ರಭೇದಗಳು, 280ಕ್ಕೂ ಹೆಚ್ಚು ಮೀನುಗಳು ಹಾಗೂ ನೂರಾರು ಬಗೆಯ ಮರಗಳ  ಪ್ರಭೇದಗಳು ಪಶ್ಚಿಮಘಟ್ಟಗಳಲ್ಲಿವೆ. ಇವುಗಳಲ್ಲಿ 325ಕ್ಕೂ ಹೆಚ್ಚು ಪ್ರಭೇದಗಳು ಅಪರೂಪವಾದವುಗಳು ಹಾಗೂ ಪ್ರಪಂಚದ ಬೇರೆಡೆಗಳಲ್ಲಿ ವಿನಾಶದ ಅಂಚಿನಲ್ಲಿರುವಂತಹ ಜೀವಿಗಳು ಪಶ್ಚಿಮ ಘಟ್ಟಗಳಲ್ಲಿ ಇನ್ನೂ ಉಳಿದುಕೊಂಡಿವೆ. ಆ 325 ಪ್ರಭೇದಗಳಲ್ಲಿ 229 ಗಿಡ ಪ್ರಭೇದಗಳು, 31 ಸಸ್ತನಿ ಪ್ರಭೇದಗಳು, 15 ಹಕ್ಕಿ ಪ್ರಭೇದಗಳು, 43 ಉಭಯವಾಸಿ ಪ್ರಭೇದಗಳು, 5 ಉರಗ ಪ್ರಭೇದಗಳು ಹಾಗೂ 1 ಮತ್ಸ್ಯ ಪ್ರಭೇದವಿದೆ.

© ಧನರಾಜ್ ಎಮ್.

ನಿತ್ಯ ನೀವು ಒಂದು ಮಾರುಕಟ್ಟೆಯಲ್ಲಿ ಓಡಾಡುತ್ತಾ ಇರುತ್ತೀರ ಅಂದುಕೊಳ್ಳಿ, ನಿಮ್ಮಂತೆಯೇ ಸಾಕಷ್ಟು ಜನರು ಮಾರುಕಟ್ಟೆಯಲ್ಲಿ ಓಡಾಡುತ್ತಾ ಇರುತ್ತಾರೆ. ಒಮ್ಮೆಲೆ ದಿಢೀರ್ ಅಂತ ಮಾರುಕಟ್ಟೆ ನಡುವೆಯೇ  ಎರಡು ರೈಲ್ವೆ ಹಳಿಗಳನ್ನು  (Railway lines) ಹಾಕಿಬಿಡುತ್ತಾರೆ, ಹತ್ತು ನಿಮಿಷಕ್ಕೊಂದು ರೈಲು ಬಿಡುವಿಲ್ಲದೆ ಓಡಾಡುವುದಕ್ಕೆ ಶುರುವಾಗುತ್ತದೆ. ಜನರಿಗೆ ತೊಂದರೆಯಾಗಬಾರದೆಂದು ತಡೆಗೋಡೆ ಸಹ ಹಾಕಿರುವುದಿಲ್ಲ. ನೀವು ಅಲ್ಲಿ ಮುಂಚಿನಂತೆ ಓಡಾಡಲು ರೈಲ್ವೆ ಹಳಿಗಳನ್ನು ದಾಟಲೇಬೇಕು, ಆಗ ನಿಮಗೆ ಎಷ್ಟು ಕಿರಿಕಿರಿಯಾಗುತ್ತದಲ್ಲವೇ? ಸ್ವಲ್ಪ ಎಚ್ಚರ ತಪ್ಪಿದರೆ ಪ್ರಾಣಕ್ಕೆ ಕುತ್ತು ಬರಬಹುದು, ಕಾಡುಗಳ ವಿಚಾರದಲ್ಲಿಯೂ ಇಂಥದ್ದೇ ಸಮಸ್ಯೆ ಆಗುತ್ತಿರುವುದು.  ಕಾಡಿನ ಮಧ್ಯೆ ಹಾದಿಯನ್ನು ನಿರ್ಮಾಣ ಮಾಡುವುದರ ಪರಿಣಾಮವಾಗಿ ವನ್ಯಜೀವಿಗಳ ಅಸ್ತಿತ್ವಕ್ಕೆ ಹಾಗು ಬಾಳ್ವೆಗೆ ಕುತ್ತು ಬರುತ್ತಿದೆ. ಮನುಷ್ಯ ತನಗೆ ಬೇಕೆಂದಲ್ಲಿ ಓಡಾಡಬಹುದಾದರೆ, ಪ್ರಾಣಿಗಳು ತಮ್ಮದೇ ಸ್ವತ್ತಾದ ‘ಕಾಡಿನೊಳಗೆ’ ಬೇಕಾದಲ್ಲಿಗೆ ಬೇಕೆಂದಾಗ ಓಡಾಡಬಾರದೇ? ಪ್ರಾಣಿಗಳಿಗೆ ಮನುಷ್ಯರಂತೆ ಮೇಲು ಸೇತುವೆ, ಕೆಳರಸ್ತೆಗಳನ್ನು ಕಟ್ಟುವುದಕ್ಕೆ ಬರುವುದಿಲ್ಲ, ಹಾದಿಗಳ ಕೆಳಗೆ ಸುರಂಗ ಕೊರೆಯುವುದಕ್ಕೂ ಬರುವುದಿಲ್ಲ, ಬದಲಿಗೆ ಮನುಷ್ಯನ ಅಟ್ಟಹಾಸಕ್ಕೆ ಬಲಿಯಾಗುತ್ತಿವೆ.

          ಅಭಿವೃದ್ಧಿಯ ಹೆಸರಿನಲ್ಲಿ, ಆರ್ಥಿಕ ಉನ್ನತೀಕರಣದ ದೃಷ್ಟಿಯಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಬರೋಬ್ಬರಿ 18 ಯೋಜನೆಗಳು ರೂಪುಗೊಂಡಿವೆ, ಆ ಪ್ರಸ್ತಾವನೆಯಲ್ಲಿರುವ ಯೋಜನೆಗಳೆಂದರೆ

© ಧನರಾಜ್ ಎಮ್.

ಸೋಮವಾರಪೇಟೆ – ಮಾನಂತವಾಡಿ ರಾಷ್ಟ್ರೀಯ ಹೆದ್ದಾರಿ, ಮೈಸೂರು – ತಲಚೇರಿ ನಡುವೆ ರೈಲು ಮಾರ್ಗ, ಮೈಸೂರು – ವಿರಾಜಪೇಟೆ – ಕಣ್ಣೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ ಉನ್ನತೀಕರಣ, ಮೈಸೂರು – ಮಡಿಕೇರಿ – ಮಂಗಳೂರು ರೈಲುಮಾರ್ಗ, ಮಡಿಕೇರಿ – ಕಡಮಕಲ್ – ಸುಬ್ರಮಣ್ಯ ರೋಡ್, ತಾಳಗುಪ್ಪ – ಹೊನ್ನಾವರ ರೈಲು ಮಾರ್ಗ, ಸಾಗರ – ಕೊಲ್ಲೂರು ರಾಷ್ಟೀಯ ಹೆದ್ದಾರಿ, ಶಿವಮೊಗ್ಗ – ಹೊನ್ನಾವರ ರಸ್ತೆಯ ಅಭಿವೃದ್ಧಿ, ಶಿಕಾರಿಪುರ – ಬೈಂದೂರು – NH 766 C2 ಉನ್ನತೀಕರಣ, ತೀರ್ಥಹಳ್ಳಿ – ಮಲ್ಪೆ – ನಾಲ್ಕು ಲೇನ್ ರಾಷ್ಟ್ರೀಯ ಹೆದ್ದಾರಿ, ದಾಂಡೇಲಿ ಮೂಲಕ ಗೋವಾ & ಕರ್ನಾಟಕ ನಡುವೆ ರೈಲು ಲಿಂಕ್ ಯೋಜನೆ ಮತ್ತು ಕೈಗಾ ಸ್ಥಾವರ ಹಾಗೂ ಟ್ರಾನ್ಸ್ ಮಿಶನ್ ಲೈನ್ ವಿಸ್ತರಿಸುವ ಯೋಜನೆ.

© ಧನರಾಜ್ ಎಮ್.

ಘೋಷಣೆಯಾಗಿರುವ ಯೋಜನೆ
ಶಿವಮೊಗ್ಗ – ಮಂಗಳೂರು ನಡುವೆಯ NH169 ರಸ್ತೆ ಅಗಲೀಕರಣ, ಶಿಶಿಲ – ಭೈರಾಪುರ ನಡುವೆ 4 ಲೇನ್ ರಾಷ್ಟ್ರೀಯ ಹೆದ್ದಾರಿ, ತುಂಗಾ ಏತ ನೀರಾವರಿ ಯೋಜನೆ, ಮೈಸೂರು – ಕೋಜ್ಹಿಕೋಡ್ ನಡುವೆ 400KV ಪವರ್ ಲೈನ್, ಹುಬ್ಬಳ್ಳಿ – ಅಂಕೋಲಾ ನಡುವೆ ರೈಲು ಮಾರ್ಗ ಮತ್ತು ಶಿರಾಡಿ ಘಾಟಿಯಲ್ಲಿ 23 ಕಿಮೀ ಸುರಂಗ ನಿರ್ಮಾಣ ಯೋಜನೆ.

ಇದರಲ್ಲಿ ಕೆಲವು ಯೋಜನೆಗಳ ನಿರ್ಮಾಣ ಕಾರ್ಯವೂ ಆಗಲೆ ಶುರುವಾಗಿದೆ. ಕೆಲವು ಯೋಜನೆಗಳಿಗೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಇನ್ನೂ ಕೆಲವು ಪ್ರಸ್ತಾವನೆಯಲ್ಲಿವೆ.

© pikist (8)

“ಇದರಿಂದ ಏನಾಗುತ್ತದೆ? ರಸ್ತೆ ನಿರ್ಮಾಣ ಆಗುವಷ್ಟು ಪ್ರದೇಶದಲ್ಲಿ ಮರಗಳನ್ನು ಕಡಿದರೆ ಏನು ತೊಂದರೆ? ಹೋದರೆ ಹೋಗಲಿ” ಎನ್ನುವ ಉಡಾಫೆತನ ತೋರಿಸುತ್ತಾರೆ ಕೆಲವರು. ಉದಾಹರಣೆಯ ಮೂಲಕ ಹೇಳುವುದಾದರೆ, ಒಂದು ನಿತ್ಯ ಹರಿದ್ವರ್ಣ ಕಾಡು ಎಂದರೆ, ಅಲ್ಲಿ 1 ಚದರ ಕಿಲೋಮೀಟರ್ ಗೆ ಸುಮಾರು 3271 ಮರಗಳು ಇರುತ್ತವೆ. ಹಾಗಾದರೆ ನೂರಾರು ಕಿಲೋಮೀಟರ್ ರಸ್ತೆ ನಿರ್ಮಾಣಕ್ಕಾಗಿ ಎಷ್ಟು ಮರಗಳು ಧರೆಗೆ ಉರುಳಬಹುದು ಊಹಿಸಿ!.  ಇಷ್ಟೆಲ್ಲಾ  ಯೋಜನೆಗಳಲ್ಲಿ ಸಾವಿರಾರು ಕಿಲೋಮೀಟರ್ ನಷ್ಟು ಕಾಡು ನಾಶವಾಗುವಾಗ, ಎಷ್ಟು ಮರಗಳು ಉರುಳಬಹುದು? ಆ ಮರಗಳು ಸಾವಿರಾರು ಜೀವಜಂತುಗಳಿಗೆ ಊಟ, ಆವಾಸವನ್ನು ನೀಡಿವೆ, ಒಮ್ಮೆ ಊಹಿಸಿಕೊಳ್ಳಿ!. ಆ ಮರಗಳಿಗೆ ಮತ್ತು ಅಲ್ಲಿ ವಾಸಿಸುವ ಜೀವಿಗಳಿಗೆ ಮತ್ತೆ ಜೀವ ನೀಡಲು ಸಾಧ್ಯವೇ? ಒಂದು ಹೆದ್ದಾರಿ ನಿರ್ಮಾಣ ಕಾರ್ಯದಲ್ಲಿ, ಆ ಹೆದ್ದಾರಿ ಸಾಗುವ ಮಾರ್ಗದಲ್ಲಿನ ಮರಗಳು ಮಾತ್ರ ನಾಶವಾಗುತ್ತದೆ ಎಂಬುದು ನಮ್ಮ ತಿಳುವಳಿಕೆ. ಆದರೆ ಒಂದು ಹೆದ್ದಾರಿ ನಿರ್ಮಾಣವಾಗುತ್ತಿದೆ ಎಂದರೆ, ಆ ಹೆದ್ದಾರಿಯ ಸುತ್ತಮುತ್ತ ಹಳ್ಳಿ, ಊರುಗಳಿಗೂ ಸಂಪರ್ಕ ರಸ್ತೆಗಳನ್ನ ಕೊಡಲೇಬೇಕಾಗುತ್ತದೆ. ಆಗ ಸಂಪರ್ಕ ರಸ್ತೆಗಳ ನಿರ್ಮಾಣ ಕಾರ್ಯದಲ್ಲೂ ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ. ಆಗಲೂ ಸಹ ನೂರಾರು ಹೆಕ್ಟೇರ್ ನಷ್ಟು ಕಾಡು ನಾಶವಾಗುತ್ತದೆ.

© pikist (2)

ಹೊಸ ಹಾದಿಗಳನ್ನುನಿರ್ಮಾಣಮಾಡುವುದುನಗರೀಕರಣವನ್ನುಪ್ರೋತ್ಸಾಹಿಸುತ್ತದೆಒಂದು ವಿಶಾಲವಾದ ದಟ್ಟ ಕಾಡಿದೆ ಎಂದು ಕಲ್ಪನೆ ಮಾಡಿಕೊಳ್ಳಿ, ಅಲ್ಲಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಗುರುತುಮಾಡಿದ ಸಾವಿರಾರು ಮರಗಳನ್ನು ಕಡಿದು ಮುಖ್ಯ ಹೆದ್ದಾರಿ ಮಾಡಿದರೆ, ಆ ಮುಖ್ಯ ಹೆದ್ದಾರಿಯನ್ನು ಸುತ್ತಮುತ್ತ ಇರುವ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಮತ್ತೊಂದಷ್ಟು ಸಣ್ಣ ರಸ್ತೆಗಳನ್ನು ನಿರ್ಮಿಸಬೇಕು. ಅಲ್ಲಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಬೇಕು, ಆಗ ಇಡೀ ಕಾಡಿನಲ್ಲಿ ರಸ್ತೆಯ ಜಾಲ ನಿರ್ಮಾಣವಾಗಿರುತ್ತದೆ. ಹೆದ್ದಾರಿಯಲ್ಲಿ ವಾಹನಗಳ ಓಡಾಟ ಹೆಚ್ಚು ಅಂತ ಜನಗಳು ಬಂದು ಹೆದ್ದಾರಿಯ ಸಮೀಪ ಅಂಗಡಿಗಳನ್ನು, ಹೋಟೆಲ್ ಗಳನ್ನು ತೆರೆಯಲು ಪ್ರಾರಂಭ ಮಾಡುತ್ತಾರೆ. ವ್ಯಾಪಾರ ಆರಂಭಿಸಿದ ಮೇಲೆ ಅಲ್ಲಿಯೇ ನೆಲೆಯೂರಲು ಮನೆಗಳನ್ನು ಕಟ್ಟಿಕೊಳ್ಳುತ್ತಾರೆ. ಅಲ್ಲಲ್ಲಿ ಕಾಡುಗಳು ಕೃಷಿಭೂಮಿಗಳಾಗಿ, ಎಸ್ಟೇಟ್ ಗಳಾಗಿ ಮಾರ್ಪಾಡಾಗುತ್ತವೆ. ಇನ್ನೂ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕೆಂದು ಹೋಮ್ ಸ್ಟೇ ಗಳು, ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಆಡಳಿತಾರೂಢರು ಅಸ್ತು ಎನ್ನುತ್ತಾರೆ.

ಡಾ. ಎಸ್ ಶಿಶುಪಾಲ

ಹೀಗೆ, ಇದು ನಗರೀಕರಣಕ್ಕೆ ದಾರಿ ಮಾಡಿಕೊಡುತ್ತಾ ಹೋಗುತ್ತದೆ. ಇದಕ್ಕೆಲ್ಲ ಸರ್ಕಾರ ಅನುಮತಿ ಕೊಡುತ್ತದೆಯೇ? ಎಂದು ಕೇಳಬಹುದು, ಅದಕ್ಕೆ ಜ್ವಲಂತ ನಿದರ್ಶನವಾಗಿ ಈಗಾಗಲೇ ಚಾರ್ಮಡಿ, ಶಿರಾಡಿ ಇನ್ನೂ ಹಲವು ಪ್ರದೇಶಗಳಲ್ಲಿ ಮೇಲೆ ಊಹಿಸಿದ ರೀತಿಯಲ್ಲೇ ನಗರೀಕರಣವಾಗುತ್ತಿರುವುದು ನಮ್ಮ ಕಣ್ಮುಂದೆಯೇ ಇದೆ. ದಟ್ಟ ಕಾಡು, ನಗರವಾಗಿ ಮಾರ್ಪಾಡಾಗುವ ಸನ್ನಿವೇಶ ಇದು, ಇದಕ್ಕೆಲ್ಲಾ ಹೆದ್ದಾರಿ ನಿರ್ಮಾಣವೂ ಒಂದು ಮುಖ್ಯ ಕಾರಣವಾಗುತ್ತದೆ.

© ಧನರಾಜ್ ಎಮ್.

ನಮಗೆ ರಸ್ತೆಗಳು ಬೇಕು, ಹಾದಿಗಳು ಬೇಕು ಎನ್ನುವುದು ನಿಜ, ಆದರೆ ಎಷ್ಟು ಪ್ರಮಾಣದಲ್ಲಿ ಬೇಕು? ಪ್ರತಿಯೊಂದು ಬಾರಿಯೂ ಅಭಿವೃದ್ಧಿಯ ಹೆಸರಿನಲ್ಲಿ ಕಾಡು ಕಡಿದು, ಹೊಸ ಹೊಸ ಹಾದಿಗಳನ್ನು ನಿರ್ಮಾಣ ಮಾಡುತ್ತಾ ಹೋದರೆ ಪ್ರಕೃತಿಯು ಇದ್ದಂತೆಯೇ ಇರುವುದೇ? ಒಂದು ಪ್ರದೇಶಕ್ಕೆ ಅಥವಾ ವಸ್ತುವಿಗೆ ನಾವು ಒಡೆಯರಲ್ಲ ಎಂದಮೇಲೆ, ಅವನ್ನು ಬದಲಾಯಿಸುವ ಅಥವಾ ನವೀಕರಿಸುವ ಹಕ್ಕು ನಮಗಿರುವುದಿಲ್ಲ ಅಲ್ಲವೇ? ಒಂದು ಮರವೆಂದರೆ, ಅಲ್ಲಿ ಹಕ್ಕಿಗಳ ಗೂಡಿರುತ್ತದೆ, ಆ ಮರವನ್ನು ನಂಬಿದ ಕೀಟಗಳಿರುತ್ತವೆ, ಜೇಡಗಳಿರುತ್ತವೆ,  ಕಂಬಳಿಹುಳುಗಳು ಚಿಟ್ಟೆಯಾಗುವ ಹಂತದಲ್ಲಿರುತ್ತವೆ. ಹೀಗೆ ಆ ಚಿಟ್ಟೆಗಳನ್ನು, ಜೇಡಗಳನ್ನು, ಹಕ್ಕಿಗಳನ್ನು ಆಹಾರಕ್ಕಾಗಿ ಕಬಳಿಸುವ ಇನ್ನೊಂದಷ್ಟು ಜೀವಿಗಳಿರುತ್ತವೆ. ಆ ಮರದಲ್ಲಿ ಬಿಡುವ ಹಣ್ಣುಗಳನ್ನು ನಂಬಿ ಒಂದಷ್ಟು ಅಳಿಲುಗಳು, ಹಕ್ಕಿಗಳು ಇರುತ್ತವೆ. ಆ ಮರದ ಹೂವುಗಳ ಮೇಲೆ ದುಂಬಿಗಳು, ಚಿಟ್ಟೆಗಳು ಅವಲಂಬಿತವಾಗಿರುತ್ತವೆ… ಹೀಗೆ ಒಂದು ಆಹಾರ ಸರಪಳಿಯು ಪ್ರತೀ ಮರದಲ್ಲಿಯೂ ನಿರ್ಮಾಣವಾಗಿರುತ್ತದೆ. ಇನ್ನು ಲಕ್ಷಾಂತರ ಮರಗಳು ಉರುಳಿದರೆ ಗತಿ ಏನು? ಉದಾಹರಣೆಗೆ ಮಲಬಾರ್ ಟ್ರೋಜನ್, ಮಲೆಮಂಗಟ್ಟೆ ಹಕ್ಕಿ, ಮರಕುಟಿಗಗಳು, ಕುಟುರ ಹಕ್ಕಿಗಳು ಹಾಗು ಇನ್ನೂ ಹಲವು ಹಕ್ಕಿಗಳು ಮರಗಳ ಪೊಟ್ಟರೆಯಲ್ಲಿ ಗೂಡು ಕಟ್ಟಿ ಜೀವನ ಮಾಡುತ್ತವೆ. ಕೆಂದಳಿಲುಗಳು, ಗಿಳಿಗಳು, ಮನಿಯಾಡಲು ಹಕ್ಕಿ, ಮಲೆ ಮಂಗಟ್ಟೆ ಹಕ್ಕಿ, ಕುಟ್ರ ಹಕ್ಕಿ, ಇವೆಲ್ಲಾ ಮರಗಳಲ್ಲಿ ಬಿಡುವ ಹಣ್ಣುಗಳ ಮೇಲೆ ಅವಲಂಬಿತವಾಗಿರುತ್ತವೆ. ವಿಕಾಸದ ಹಾದಿಯಲ್ಲಿ, ಆ ಮರಗಳ ಹಣ್ಣನ್ನು ಜೀರ್ಣಿಸಿಕೊಳ್ಳುವ ಹಾಗೆ ಅವುಗಳ ಜೀರ್ಣಕ್ರಿಯೆಯೂ ವಿಕಾಸವಾಗಿ ಹೊಂದಿಕೊಂಡಿರುತ್ತದೆ. ಅವುಗಳು ಅದದೇ ಆಹಾರವನ್ನು ತಿನ್ನಬೇಕು. ಅಕಸ್ಮಾತ್ ಈ ಮರಗಳು ಉರುಳಿದರೆ ಅವೆಲ್ಲ ಎಲ್ಲಿ ಹೋಗಬೇಕು? ಅವುಗಳ ಆಹಾರದ ಮೂಲವೇನು? ಅವುಗಳ ಮರಿಗಳನ್ನು ಕಾಪಾಡುವವರು ಯಾರು? ಸತ್ತರೆ ಸತ್ತವು ಅನ್ನುವ ಅನಾಗರೀಕತನ ಯಾರಿಗೂ ಬೇಡ ಅಲ್ಲವೇ? ಮರಗಳು ಉರುಳಿದ ನಂತರ, ಸಹಜವಾಗಿ ಉಳಿದ ಜೀವಿಗಳ ಮಧ್ಯೆ ಆಹಾರಕ್ಕಾಗಿ ಸ್ಪರ್ಧೆ ಏರ್ಪಡುತ್ತದೆ, ಕೆಲವೊಂದಷ್ಟು ಬದುಕಿದರೆ, ಇನ್ನೂ ಕೆಲವು ನಿರ್ಗಮಿಸುತ್ತವೆ!  30 – 40 ಮಿಲಿಯನ್ ವರ್ಷಗಳಿಂದ ಭೂಮಿಯ ಮೇಲೆ ಜೀವನ ಸಾಗಿಸಿಕೊಂಡು ಬಂದಿದ್ದ ಜೀವಿಗಳನ್ನು, ಮನುಷ್ಯ ಇವತ್ತು ಹೇಳ ಹೆಸರಿಲ್ಲದಂತೆ ನಿರ್ನಾಮ ಮಾಡುತ್ತಿದ್ದಾನೆ. ಅಮೇರಿಕಾದ ಪ್ಯಾಸೆಂಜರ್‌ ಪಿಜನ್‌, ಕಾರೋಲಿನಾ ಪ್ಯಾರಾಕೀಟ್‌,‌ ಅಮೇರಿಕಾದ ಹೀತ್‌ ಕೋಳಿ, ಡೋಡೋ ಹಕ್ಕಿ ಕಳೆದ 200 ವರ್ಷಗಳಲ್ಲಿ ಭೂಮಿಯಲ್ಲಿ ಇಲ್ಲವಾಗಿವೆ. ಮತ್ತೆ ಭೂಮಿಯ ಮೇಲೆ ಆ ಪ್ರಾಣಿಗಳು ಹುಟ್ಟುವುದಿಲ್ಲ. ಅವುಗಳ ವಂಶನಾಶಕ್ಕೆ ಕಾರಣ ಬೇರೆ ಬೇರೆಯೇ ಇದೆ. ಇತಿಹಾಸದಿಂದ ನಾವು ಪಾಠಕಲಿಯದಿದ್ದರೆ ಒಂದಲ್ಲ ಒಂದು ದಿನ ನಮ್ಮಪಶ್ಚಿಮಘಟ್ಟದ ಹಕ್ಕಿಗಳು ಹಾಗೂ ಜೀವಸಂಕುಲ ಉಪವಾಸ ಸಾಯುವ ಸನ್ನಿವೇಶ ಬಂದರೆ ಆಶ್ಚರ್ಯವಿಲ್ಲ!.

© pikist (9)

ಈಗ ರಸ್ತೆಗಳನ್ನು ಮಾಡುವುದರಿಂದ, ವನ್ಯಪ್ರಾಣಿಗಳಿಗೆ ಆಗುವ ಪರಿಣಾಮದ ಬಗ್ಗೆ ಯೋಚನೆ ಮಾಡೋಣ. ನಾನು  ಆಗಲೇ ಒಂದು ಉದಾಹರಣೆ ಹೇಳಿದೆ, ಮಾರುಕಟ್ಟೆ ನಡುವೆ ರೈಲ್ವೆ ಹಳಿ ಹಾಕಿದರೆ ಏನಾಗಬಹುದು ಎಂದು. ಅದು ಈಗಾಗಲೇ ಆಗಿಬಿಟ್ಟಿದೆ. ಕಾಡು ವನ್ಯಪ್ರಾಣಿಗಳ ಸ್ವತ್ತು, ಅಂದರೆ ಅವುಗಳ ಸ್ವತ್ತಲ್ಲಿ ಅವು ಎಲ್ಲಿ ಬೇಕಾದರೂ ಓಡಾಡಬಹುದು, ಅವುಗಳ ಆವಾಸದ ನಡುವೆ ರಸ್ತೆ, ರೈಲು ಹಳಿಗಳು ಬಂದಾಗ ಏನು ಮಾಡಬೇಕು? ಕೆಂದಳಿಲು ಮರದಿಂದ ಮರಕ್ಕೆ ಜಿಗಿಯುವ ಪ್ರಾಣಿ. ರಸ್ತೆ ಅಡ್ಡ ಬಂದಾಗ ಅದು ಅನಿವಾರ್ಯವಾಗಿ ರಸ್ತೆಗಿಳಿದು ದಾಟಿ ಮತ್ತೆ ಇನ್ನೊಂದು ಮರ ಹತ್ತಬೇಕು. ಇನ್ನೊಂದು ಉದಾಹರಣೆ, ಜಿಂಕೆಯನ್ನು ಹುಲಿ ಅಟ್ಟಿಸಿಕೊಂಡು ಬರುತ್ತಿರುತ್ತದೆ ಎಂದುಕೊಳ್ಳಿ, ಜಿಂಕೆಗೆ ಪ್ರಾಣ ಉಳಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ, ಆ ಜಿಂಕೆ/ಹುಲಿ ಓಡುವ ಹಾದಿಯಲ್ಲಿ ರಸ್ತೆ ಅಡ್ಡ ಬಂದರೆ ಅದು ಏನು ಮಾಡಬೇಕು? ಜಿಂಕೆ/ಹುಲಿ ತಾನು ಪ್ರಾಣ ಉಳಿಸಿಕೊಳ್ಳುವ ಭರದಲ್ಲಿ ವಾಹನಗಳನ್ನು ಗಮನಿಸದೆ, ನುಗ್ಗಿ ವಾಹನಕ್ಕೆ ಸಿಕ್ಕು ಸತ್ತರೆ ಅಲ್ಲಿ ಜಿಂಕೆ/ಹುಲಿಯದ್ದು ತಪ್ಪಿದೆಯಾ? ಆನೆಗಳು ರಸ್ತೆಯಲ್ಲಿ ಬರುತ್ತವೆ ಎಂದು ಹೆದರುವ ಜನ, ಆನೆಗಳ ಸಾಮ್ರಾಜ್ಯಕ್ಕೆ ನುಗ್ಗಿ ಅವುಗಳ ವಿರುದ್ಧವೇ ಸಾಗಿ, ಅವಕ್ಕೆ ‘ಮೃಗ’ಗಳು ಎಂಬ ಪಟ್ಟ ಕೊಟ್ಟರೆ ಅದು ನ್ಯಾಯಸಮ್ಮತವಲ್ಲ.

ಉಭಯಜೀವಿಗಳು ತಾವು ಮೊಟ್ಟೆ ಇಟ್ಟ ನೀರಿನ ಸ್ಥಳದಿಂದ  ಬೇರೆಡೆಗೆ ನಡೆಯುತ್ತ ಹೋಗುವುದು ಸಹಜ. ಅವುಗಳು ಹೋಗುವ ಹಾದಿಯಲ್ಲಿ ರಸ್ತೆ ಇದ್ದರೆ ಅವು ಏನು ಮಾಡಬೇಕು? “ವಾಹನಗಳಿಗೆ ನಿಲ್ಲಿಸಿರಪ್ಪಾ, ನಾವು ದಾಟಿ ಹೋಗಬೇಕು ಅಂತ ಹೇಳಲು ಅವಕ್ಕೆ ನಮ್ಮ ಭಾಷೆ ಬರುವುದಿಲ್ಲ ಅಥವಾ ವಾಹನಗಳ ಚಾಲಕರು ಈ ಪ್ರಾಣಿಗಳನ್ನು ಗಮನಿಸಿ, ನಿಲ್ಲಿಸಿ ಅವುಗಳಿಗೆ ತೊಂದರೆ ಮಾಡದೆ ಸಾಗುವ ತಾಳ್ಮೆ ತೋರುವುದಿಲ್ಲ, ಹೀಗೆ ಎಷ್ಟೋ ಹಾವುಗಳು, ಕಪ್ಪೆಗಳು, ಹಲ್ಲಿಗಳು, ಇಲಿಗಳು, ನಾಯಿಗಳು, ಚಿರತೆಗಳು, ಕೋತಿಗಳು ಒಮ್ಮೊಮ್ಮೆ ಆನೆಗಳು ಕೂಡ ರಸ್ತೆಯಲ್ಲಿ ಸಾಗುವ ವಾಹನಕ್ಕೆ ಸಿಲುಕಿ ಸಾವನಪ್ಪಿವೆ. ಆನೆಗೆ ರೈಲು ಢಿಕ್ಕಿಯಾಗಿ, ಈಗಾಗಲೇ ಸುಮಾರು ಆನೆಗಳು ಸತ್ತಿರುವ ಉದಾಹರಣೆಗಳಿವೆ. ಕಳೆದ 10 ವರ್ಷದಲ್ಲಿ, ಭಾರತದಲ್ಲಿ 186 ಆನೆಗಳು, ರೈಲಿಗೆ ಸಿಕ್ಕಿ ಮೃತಪಟ್ಟಿವೆ.

© ಧನರಾಜ್ ಎಮ್.

ಕೃಪಾಕರ ಸೇನಾನಿಯವರು ‘ವಾಲಪರೈ ಅಭಿವೃದ್ಧಿ ತಂದ ದುರಂತ’ ಎಂಬ ಲೇಖನದ ಮೂಲಕ ವಿನಾಶದ ಅಂಚಿನಲ್ಲಿರುವ ಸಿಂಹ ಬಾಲದ ಸಿಂಗಳೀಕಗಳ ವ್ಯಥೆಯನ್ನು ಮನಮುಟ್ಟುವಂತೆ ಹೇಳುತ್ತಾರೆ. ಆ ಕೋತಿಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ, ಅವುಗಳು ಕೂಡ ರಸ್ತೆ ದಾಟಲು ಹೋಗಿ ಪ್ರಾಣ ಚೆಲ್ಲುತ್ತಿವೆ. ಅಂತಹದ್ದೇ ಘಟನೆ ನಮ್ಮ ಕನ್ನಡ ನಾಡಿನ ಆಗುಂಬೆಯಲ್ಲಿಯೂ ಪುನರಾವರ್ತನೆಯಾಗುತ್ತಿದೆ. ಅಲ್ಲಿಯೂ ಸುಮಾರು ಸಿಂಹ ಬಾಲದ ಸಿಂಗಳೀಕಗಳು ಇವೆ, ಅವು ಪ್ರವಾಸಿಗರ ಬಾಳೆಹಣ್ಣು ತಿಂಡಿ ಇಸಿದುಕೊಳ್ಳುವುದಕ್ಕೆ ಬರುತ್ತಿವೆ ಎಂದು ವರದಿಯಾಗಿತ್ತು. ಅವಕ್ಕೆ ಆಹಾರ ಕೊಟ್ಟು, ಅವುಗಳ ಸ್ವಾವಲಂಬನೆಗೆ ಹಾನಿ ಮಾಡಿದಂತಾಗುತ್ತದೆ ಅಲ್ಲವೇ? ಈಗ ತೀರ್ಥಹಳ್ಳಿ – ಮಲ್ಪೆ ಹಾದಿಯನ್ನು ಚತುಷ್ಪಥ ಮಾಡಬೇಕು ಅಂತ ಇದ್ದಾರೆ, ಆ ರೀತಿ ಮಾಡಿದರೆ, ಈ ಸಿಂಗಳೀಕಗಳು ಜನರು ಹಾಕಿದ ರಸ್ತೆ ವಿಭಜಕ ಹತ್ತಿ ಓಡಾಡಬೇಕಾ ಅಥವಾ ಆ ಸಿಂಗಳೀಕಗಳು ತಮಗೆ ಬೇಕಾದ ಹಾಗೆ ಅಂಡರ್ ಪಾಸ್ ನಿರ್ಮಿಸಿಕೊಳ್ಳಬೇಕಾ, ಅದು ಸಾಧ್ಯವಾ? ರಸ್ತೆ ನಿರ್ಮಾಣಕ್ಕೂ ಮುನ್ನ ಇಂತಹ ಜೀವನ್ಯಾಯದ ಪ್ರಶ್ನೆಗಳಿಗೆ ಪರಿಹಾರ ಕಂಡುಕೊಂಡು ಮುನ್ನಡೆಯಬೇಕು.

© ವಿಷ್ಣುಮೂರ್ತಿ ಶಾನ್ಬಾಗ್

ಇನ್ನೊಂದು ಸಮಸ್ಯೆಯ ಬಗ್ಗೆ ಹೇಳುತ್ತೇನೆ, ರಾತ್ರಿ ಸಮಯದಲ್ಲಿ ವಾಹನಗಳ ಗಲಾಟೆಯಿಂದ ಶಾಂತಿ ಕದಡುತ್ತದೆ ಎಂದು ಈ ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುವ ಪ್ರದೇಶಗಳ ಸುತ್ತಮುತ್ತಾ ಜನ ಮನೆ ಕಟ್ಟುವುದಕ್ಕೆ ಹಿಂದೆಮುಂದೆ ನೋಡುತ್ತಾರೆ. ಇದೇ ರೀತಿ ಕಾಡಿನಲ್ಲಿಯೂ ಗಲಾಟೆ ಉಂಟಾಗುತ್ತದೆ. ಕಾಡನಲ್ಲಿರುವ ಜೀವಿಗಳಿಗೆ ತನ್ನದೇ ಆದ ಭಾಷೆ ಇರುತ್ತದೆ, ಅವುಗಳ ಸಂದೇಶದ ಸದ್ದು ಆಗಾಗ ರವಾನೆಯಾಗುತ್ತಾ ಇರುತ್ತದೆ. ಪ್ರಾಣಿಗಳು ಆಡುವ ಮಾತು ನಮಗೆ ಅರ್ಥ ಆಗುವುದಿಲ್ಲ ಅಷ್ಟೆ, ಆದರೆ ಅವುಗಳ ನಡುವೆ ಸಂಭಾಷಣೆ ನಡೆಯುತ್ತಲೇ ಇರುತ್ತದೆ. ಹಕ್ಕಿಗಳು ತಮ್ಮ ಕೂಗಿನ ಮೂಲಕ, ಹಾಡಿನ ಮೂಲಕ ಇತರ ಹಕ್ಕಿಗಳ ಜೊತೆ ಮಾತನಾಡುತ್ತವೆ. ತನ್ನ ಸರಹದ್ದನ್ನು ಗೊತ್ತು ಮಾಡಲಾಗಲಿ, ಸಂಗಾತಿಯನ್ನು ಆಕರ್ಷಿಸಲಾಗಲಿ ಆಗಾಗ ಕೂಗುತ್ತಾ ಇರುತ್ತವೆ. ಆದರೆ ಈ ವಾಹನಗಳ ಗಜಿ ಬಿಜಿಯೇ ಮೊದಲಾಗಿ, ಹೆದ್ದಾರಿಯ ಬಳಿ ವಾಸವಿರುವ ಹಕ್ಕಿಗಳಿಗೆ, ಪ್ರಾಣಿಗಳಿಗೆ ಸುಮ್ಮನೆ ತೊಂದರೆ ಉಂಟಾಗುತ್ತದೆ. ಮನುಷ್ಯನಿಗೆ ಹೇಗೆ ಶಾಂತಿ ಬೇಕೋ, ವನ್ಯಪ್ರಾಣಿಗಳಿಗೂ ಹಾಗೆ ಶಾಂತಿ ಬೇಕು. ಹಾಗಂತ ವಾಹನಗಳು ಸದ್ದೇ ಮಾಡಬಾರದು ಎಂದಲ್ಲ, ಕಾಡಿನ ಮೂಲಕ ಹೊಸ ಹೊಸ ಮಾರ್ಗಗಳನ್ನು ನಿರ್ಮಾಣ ಮಾಡುವುದು ನಿಲ್ಲಿಸಬೇಕು. ಈಗ ಚಾಲ್ತಿಯಲ್ಲಿರೋ ಮಾರ್ಗಗಳಲ್ಲಿ ವಾಹನ ದಟ್ಟಣೆ ಆಗದಂತೆ, ಅಂತರ ಕಾಯ್ದುಕೊಂಡು ಶಬ್ಧ ಮಲಿನವನ್ನು ಮಾಡದಂತೆ ಸಾಗುವ ಹಾಗೆ ಜಾಗ್ರತೆವಹಿಸಬೇಕು.

© ಧನರಾಜ್ ಎಮ್.

ಈ ಕಾಡುಗಳಲ್ಲಿ ನಿರ್ಮಾಣವಾಗುವ ಘಾಟ್ ರಸ್ತೆಗಳು ಎಷ್ಟೋ ಬಾರಿ ಭೂ ಕುಸಿತಕ್ಕೆ ಕಾರಣವಾಗುತ್ತದೆ. ಈಗ ಒಂದು ಬಿಲ್ಡಿಂಗ್ ಗೆ ಸ್ಟೀಲ್ ಎಷ್ಟು ಮುಖ್ಯವೋ, ಮಣ್ಣಿಗೂ ಕಾಡಿನ ಮರಗಳ ಬೇರುಗಳು ಅಷ್ಟೇ ಮುಖ್ಯ. ರಸ್ತೆ ನಿರ್ಮಾಣದ ಹಾದಿಯಲ್ಲಿ, ಇವರು ಕಡಿಯುವ ಮರಗಳ ಜೊತೆಗೆ, ಸುತ್ತಮುತ್ತ ಇರುವ ಮರಗಳ ಗುಂಪಿನ ಬೇರುಗಳನ್ನು ಕೂಡ ಕಡಿದು ಹಾಕಿರುತ್ತಾರೆ. ಆಮೇಲೆ ರಸ್ತೆ ನಿರ್ಮಾಣಕ್ಕೆಂದು ಒಡ್ಡನ್ನು (embankment) ಮಾಡುವಾಗ, ಸರಿಯಾಗಿ ಭೂಮಿಯ ಮಣ್ಣು ಸರಿಯದಂತೆ ದಟ್ಟತೆ (ಕಾಂಪ್ಯಾಕ್ಟ್) ಮಾಡುವುದು ಬಲು ತ್ರಾಸದಾಯಕ ಹಾಗೂ ದೀರ್ಘಕಾಲ ಬಾಳಿಕೆ ಬರುವುದಿಲ್ಲ. ನೈಸರ್ಗಿಕವಾಗಿ ಉಂಟಾಗಿದ್ದ ತೊರೆಗಳಿಗೆ ಅಡೆತಡೆಯಾಗಿ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗುವುದಿಲ್ಲ. ಹೀಗೆ ಸಮಸ್ಯೆಗಳು ಒಂದಕ್ಕೊಂದು ಸೇರಿಕೊಂಡು ಮಳೆ ಹೆಚ್ಚಾದಾಗ ಭೂಕುಸಿತವಾಗುತ್ತದೆ. ಜೊತೆಗೆ ಬಂಡೆಗಳು ಹೆಚ್ಚಿರುವ ಪ್ರದೇಶವಾಗಿದ್ದರೆ, ಮಳೆ ಹೆಚ್ಚಾದಾಗ ಬಂಡೆಗಳು ಹಾದಿಯ ಮೇಲೆ ಬಂದು ಬೀಳುವ ಸಾಧ್ಯತೆ ಇರುತ್ತದೆ. ಇದಕ್ಕೆ ಉದಾಹರಣೆ ಹಾಸನ – ಮಂಗಳೂರು ರೈಲು ಹಾದಿ. ಅಲ್ಲಿ ಸುಮಾರು ಬಾರಿ ಹಳಿಗಳ ಮೇಲೆ ಬಂಡೆಗಳು ಬಿದ್ದಿವೆ. ಇದಕ್ಕೆ ಪ್ರಸ್ತುತ ಉದಾಹರಣೆ ಎಂದರೆ ಮಂಗಳೂರು-ಸಕಲೇಶಪುರ ಹೆದ್ದಾರಿಯ ಕುಸಿತ.

© ಅರವಿಂದ ರಂಗನಾಥ್

ಪರಿಹಾರ ಏನು? ಮೊದಲನೆಯದು, ಅನವಶ್ಯಕವಾಗಿ ಹೊಸ ಮಾರ್ಗಗಳ ನಿರ್ಮಾಣವನ್ನು ಕೈ ಬಿಡಬೇಕು. ಇರುವ ರಸ್ತೆಗಳನ್ನೇ ಮರ ಕಡಿಯದೆ ಅಭಿವೃದ್ಧಿ ಪಡಿಸಲು ಪ್ರಯತ್ನಿಸಬೇಕು. ರಾತ್ರಿ ಸಂಚಾರ ನಿಷೇಧಿಸಬೇಕು. ಅಕಸ್ಮಾತ್ ಮರ ಕಡಿಯಲೇಬೇಕಾದ ಸನ್ನಿವೇಶ ಉಂಟಾದಲ್ಲಿ, ಅದೇ ಮರಗಳನ್ನು ಸಮೀಪದಲ್ಲೇ ಪುನಃ ಬೆಳೆಸಿ, ಅದು ಬೆಳೆದಾದ ಮೇಲೆ ಅವಶ್ಯಕವಿರುವ ಮರವನ್ನು ಕಡಿದು ರಸ್ತೆ ಮಾಡಲು ತಾಳ್ಮೆಯ ಅಗತ್ಯ ಇದೆ. ಅಂದರೆ ಈಗ 150 ಗೋಣಿ ಮರಗಳನ್ನು ಕಡಿಯಬೇಕಾಗುತ್ತದೆ ಅಂದರೆ, ಆ ರಸ್ತೆಯ ಸಮೀಪದಲ್ಲಿ ಮತ್ತೊಂದು 150 ಗೋಣಿ ಮರಗಳನ್ನು ಹಣ್ಣು ಬಿಡುವ ತನಕವೂ ಬೆಳೆಸಿ, ಆಮೇಲೆ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾದ ಮರಗಳನ್ನು ಕಡಿಯಬೇಕು. ಆದಷ್ಟು ವಾಹನ ದಟ್ಟಣೆ  ಹೆಚ್ಚಾಗದಂತೆ, ಓಡಾಟದ ವೇಗಕ್ಕೆ ಕಾನೂನಿನ ನಿಯಂತ್ರಣ ಹಾಕಿ, ಅಲ್ಲಲ್ಲಿ ಕಣ್ಗಾವಲು ಇಡುವ ಅಗತ್ಯವಿದೆ. ಹೀಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾಡುಗಳನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸಂವಿಧಾನದ ಆರ್ಟಿಕಲ್ 51A ಪ್ರಕಾರ, ಕಾಡುಗಳನ್ನು, ಪರಿಸರವನ್ನು ಉಳಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ಮನುಷ್ಯನಿಗೆ ಬುದ್ಧಿ-ಶಕ್ತಿ ಹಾಗೂ ಆಲೋಚನಾ ಶಕ್ತಿ ಇತರೆ ಪ್ರಾಣಿಗಳಿಗಿಂತ ಹೆಚ್ಚಾಗಿದೆ ಅಂದ ಮಾತ್ರಕ್ಕೆ ಇವನಿಗೆ ಪ್ರಕೃತಿಯ ಮೇಲೆ ಅಧಿಕಾರ ಸ್ಥಾಪಿಸುವ ಹಕ್ಕನ್ನು ಯಾರೂ ಕೊಟ್ಟಿಲ್ಲ.

ಇಲ್ಲಿ ನಾನೊಬ್ಬ ನಿರೂಪಕ ಅಷ್ಟೇ, ಒಂದಷ್ಟು ಮೂಲ ಮಾಹಿತಿಗಳನ್ನ ನಾನು ಕೆಳಗಿನ ಲೇಖನಗಳಿಂದ ತಿಳಿದುಕೊಂಡಿದ್ದು. ಆ ಲೇಖನಗಳನ್ನ ಕ್ರೂಢೀಕರಿಸಿ, ತರ್ಕ ಬದ್ಧವಾಗಿ ಈ ಲೇಖನದಲ್ಲಿ ನಿರೂಪಿಸಲು ಪ್ರಯತ್ನಿಸಿರುವೆ.


ಲೇಖನ:  ತುಷಾರ್ ಜಿ. ಆರ್.
ದಾವಣಗೆರೆ ಜಿಲ್ಲೆ

Spread the love

One thought on “ಅಭಿವೃದ್ಧಿಯ ವಿಮಾನ ಹಾಗೂ ವನ್ಯಸಿರಿ

Comments are closed.

error: Content is protected.