ಕಾಡಿನ ಮಗು ಈ ಕಾಡುಪಾಪ
©ಪ್ರಭಾಕರ್ ಗುಜ್ಜಾರಪ್ಪ
ಈ ಭುವಿಯ ನಿಸರ್ಗವೇ ವಿಶೇಷ ಹಾಗೂ ವಿಶಿಷ್ಟ ಜೀವ ಸಂಕುಲದ ಆಗರ, ಈ ಆಗರದಲ್ಲಿ ನಿಶಾಚರಿ ಪ್ರಾಣಿಯಾದ ಕಾಡುಪಾಪ ಕೂಡ ಒಂದು. ಮನುಷ್ಯರಲ್ಲಿ ಹುಟ್ಟಿದ ಮಗು ಯಾವ ಗಾತ್ರ ಇರುತ್ತದೆಯೋ ಈ ಜೀವಿ ಕೂಡ ಅಷ್ಟೇ ಗಾತ್ರದ್ದು ಹಾಗೂ ಮರದ ಮೇಲೆಯೇ ತಮ್ಮ ಜೀವನವನ್ನು ಕಳೆಯುವ ಈ ಜೀವಿಗಳನ್ನು ಕರ್ನಾಟಕದ ಹಲವಾರು ಕಡೆ “ಕಾಡುಪಾಪ” ಎಂದು ಕರೆಯುತ್ತಾರೆ. ಕೊಡಗು ಮತ್ತು ಮಲೆನಾಡಿನ ಕೆಲವು ಕಡೆ ‘ಬಿದಿರ ಮೆಳೆ ಚಿಗರೆ’ ಎಂದೂ ಕರೆಯುತ್ತಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನ್ಯಾಲ, ಬಡನ್ಯಾಲ, ವನ ಮನುಷ್ಯ ಎಂದೂ ಸಂಭೋದಿಸುತ್ತಾರೆ.
ಪ್ರಪಂಚದಲ್ಲಿ ಕಾಣಸಿಗುವ ಪ್ರಾಚೀನ ಸಸ್ತನಿಗಳ ವರ್ಗಕ್ಕೆ ಕಾಡುಪಾಪವೂ ಕೂಡ ಸೇರುತ್ತದೆ. ಲೋರಿಸಿಡೆ (Lorisidae) ಎಂಬ ಕುಟುಂಬಕ್ಕೆ ಸೇರಿದ ಇವುಗಳಲ್ಲಿ ಒಟ್ಟು ಎಂಟು ಪ್ರಭೇದಗಳನ್ನು ಗುರುತಿಸಿದ್ದಾರೆ, ಭಾರತದಲ್ಲಿ ನಾವು ಎರಡು ಪ್ರಭೇದದ ಕಾಡುಪಾಪಗಳನ್ನು ನೋಡಬಹುದು. ಬೆಂಗಾಲ್ ಕಾಡುಪಾಪ (ಬೆಂಗಾಲ್ ಸ್ಲೋ ಲಾರಿಸ್) ಹಾಗೂ ಬೂದು ಕಾಡುಪಾಪಗಳು (ಸ್ಲೇಂಡರ್ ಲಾರಿಸ್). ಶ್ರೀಲಂಕಾದಲ್ಲಿ ಆರು ಕಾಡುಪಾಪ ಪ್ರಾಣಿಯ ಪ್ರಭೇದಗಳನ್ನು ಕಾಣಬಹುದು.
ಬೆಂಗಾಲ್ ಕಾಡುಪಾಪ (ಬೆಂಗಾಲ್ ಸ್ಲೋ ಲಾರಿಸ್) ವು ಈಶಾನ್ಯ ಭಾರತ ಹಾಗೂ ಚೀನಾದಲ್ಲಿ ಕಂಡು ಬರುವ ಕಾಡುಪಾಪ. ಇನ್ನು ನಮ್ಮ ದಕ್ಷಿಣ ಭಾರತದಲ್ಲಿ ಕಂಡು ಬರುವ ಕಾಡುಪಾಪ ಬೂದು ಕಾಡುಪಾಪ (ಸ್ಲೆಂಡರ್ ಲಾರಿಸ್).
ಬೂದು ಕಾಡುಪಾಪಗಳಲ್ಲಿ ವಿಜ್ಞಾನಿಗಳು ಎರಡು ಉಪಜಾತಿಯನ್ನು ಗುರುತಿಸಿದ್ದಾರೆ. ಒಂದು ಮಲಬಾರ್ ಬೂದು ಕಾಡುಪಾಪಗಳು, ಲೋರಿಸ್ಲಿಡೆಕೆರಿಯಾನಸ್ಮಲಬರಿಕಸ್ (Loris lydekkerianus malabaricus)ಮತ್ತು ಮೈಸೂರು ಬೂದು ಕಾಡುಪಾಪಗಳು, ಲೋರಿಸ್ ಲಿಡೆಕೆರಿಯಾನಸ್ ಮಲಬರಿಕಸ್ (Loris lydekkerianus lydekkerianus). ನಿಶಾಚರಿ ಜೀವಿಗಳಾದ ಇವುಗಳ ಬಗ್ಗೆ ಅನೇಕ ಸಂಶೋಧನೆಗಳು ನಡೆದಿದೆಯಾದರೂ, ಇವುಗಳ ವಾಸಸ್ಥಳಗಳ ಹಾಗೂ ಆವಾಸ ಮಿತಿಗಳ ಪೂರ್ಣ ಮಾಹಿತಿ ಇನ್ನೂ ತಿಳಿದು ಬಂದಿಲ್ಲ. ಇಲ್ಲಿಯವರೆಗೆ ನಡೆದಿರುವ ಸಂಶೋಧನೆಗಳ ಪ್ರಕಾರ, ಪಶ್ಚಿಮ ಘಟ್ಟಗಳ ಮಲೆನಾಡ ಪ್ರದೇಶಕ್ಕೆ ಮಲಬಾರ್ ಬೂದು ಕಾಡುಪಾಪಗಳು ಒಗ್ಗಿ ಕೊಂಡಿವೆ ಎಂದೂ, ಹಾಗೇ ಕೇರಳದ ಪಶ್ಚಿಮ ಘಟ್ಟಕ್ಕೂ ಹಬ್ಬಿದೆ ಎಂದೂ ನಂಬಲಾಗಿದೆ. ಇನ್ನು ಮೈಸೂರಿನ ಬೂದು ಕಾಡುಪಾಪಗಳು ಪೂರ್ವ ಹಾಗೂ ಪಶ್ಚಿಮ ಘಟ್ಟಗಳ ಶುಷ್ಕ ಕಾಡುಗಳಲ್ಲಿ, ಮರಗಳು ಹಾಗೇ ಪೊದೆಗಳಿರುವ – ಶುಷ್ಕ ಪ್ರದೇಶದಲ್ಲಿ ಕಂಡುಬಂದಿವೆ. ಗುಜರಾತಿನ ತಪತಿನದಿ ಪಶ್ಚಿಮದ ಮಿತಿಯಾದರೆ, ಪೂರ್ವ ಕರಾವಳಿಯಲ್ಲಿ ಗೋದಾವರಿ ನದಿಯವರೆಗೆ ಇವುಗಳ ವಾಸಸ್ಥಾನ ಹಬ್ಬಿದೆ.
ಆವಾಸಕ್ಕೆ ಹೊಂದಿಕೊಂಡಂತೆ, ಈ ಎರಡೂ ಉಪಜಾತಿಗಳ ನಡುವೆ ರೂಪದಲ್ಲಿ ವ್ಯತ್ಯಾಸವಿದೆ. ಮಲಬಾರ್ ಬೂದು ಕಾಡುಪಾಪಗಳ ದೇಹ ಕೊಂಚ ಕೆಂಪುವರ್ಣ ಹೊಂದಿದೆ, ಹಾಗೇ ಕಣ್ಣಿನ ಸುತ್ತಲು ಅಗಲವಾದ ಕಪ್ಪುವರ್ಣದ ವೃತ್ತ ಕಂಡು ಬರುತ್ತದೆ. ಆದರೆ, ಮೈಸೂರು ಬೂದು ಕಾಡುಪಾಪಗಳ ದೇಹ ಪೂರ್ಣ ಬೂದಿ ಬಣ್ಣದ್ದಾಗಿದ್ದು, ಕಣ್ಣಿನ ಸುತ್ತ ಇರುವ ಕಪ್ಪುವರ್ಣದ ವೃತ್ತ ಕೊಂಚ ಕಡಿಮೆ ಅಗಲದ್ದಾಗಿರುತ್ತದೆ.
ನಮ್ಮ ಕರ್ನಾಟಕದಲ್ಲಿ ಈ ಎರಡೂ ಉಪಜಾತಿಯ ಕಾಡುಪಾಪಗಳನ್ನು ಅವುಗಳ ಆವಾಸ ಸ್ಥಾನಕ್ಕೆ ತಕ್ಕಂತೆ ನೋಡಬಹುದು. ಆಗುಂಬೆಯಂತಹ ಮಳೆಕಾಡು ಸೇರಿ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ಮಲಬಾರ್ ಬೂದು ಕಾಡುಪಾಪಗಳು ಹಾಗೂ ರಾಜ್ಯದ ಆಗ್ನೇಯ ಭಾಗದಲ್ಲಿ ಮೈಸೂರು ಬೂದು ಕಾಡುಪಾಪಗಳು ಪತ್ತೆಯಾಗಿವೆ. ಕರ್ನಾಟಕದಲ್ಲಿ ಈ ಎರಡೂ ಕಾಡುಪಾಪಗಳು ಕಂಡುಬರುತ್ತವೆಯಾದರೂ, ಮಲಬಾರ್ ಬೂದು ಕಾಡುಪಾಪಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದಿಲ್ಲ. ಹಾಗಾಗಿ ಇದೀಗ ಮೈಸೂರು ಬೂದು ಕಾಡುಪಾಪಗಳ ಜೀವನ ಕ್ರಮದ ಬಗ್ಗೆ ಒಂದಿಷ್ಟು ಮಾಹಿತಿ ಹಾಗೂ ಕೆಲ ವಿವರಣೆಗಳನ್ನು ತಿಳಿಯೋಣ.
ಆಕಾರ – ಆಹಾರ:
ಸಾಮಾನ್ಯವಾಗಿ ಗಂಡು ಕಾಡುಪಾಪವು 180 ರಿಂದ 290 ಗ್ರಾಂ ತೂಕವಿರುತ್ತದೆ ಹಾಗೂ 24 ರಿಂದ 26 ಸೆಂಟೀ ಮೀಟರ್ ಉದ್ದವಿರುತ್ತವೆ. ಹೆಣ್ಣು ಕಾಡುಪಾಪಗಳು 180 ರಿಂದ 275 ಗ್ರಾಂ ತೂಗಿ, 21 ರಿಂದ 24 ಸೆಂಟೀ ಮೀಟರ್ ಉದ್ದವಿರುತ್ತವೆ. ಮರದ ಮೇಲೆಯೇ ತಮ್ಮ ಜೀವನದ ಬಹಳಷ್ಟು ಕಾಲ ಕಳೆಯುವ ಕಾಡುಪಾಪದ ಆಹಾರ ಕೀಟಗಳು. ತಮ್ಮ ಕಾಲು ಹಾಗೂ ಒಂದು ಕೈಯಿಂದ ಮರವನ್ನು ಆಧಾರವಾಗಿ ಹಿಡಿದು ಇನ್ನೊಂದು ಕೈಯಿಂದ ಕೀಟಗಳನ್ನು ಹಿಡಿದು ತಿನ್ನುತ್ತವೆ. ಜೇಡ, ಚಿಟ್ಟೆ, ಪತಂಗ, ಗೆದ್ದಲು, ಇರುವೆ, ಜೀರುಂಡೆ ಹಾಗೂ ಇತರ ಹುಳಗಳ ಮೇಲೆ ಇವು ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿವೆ. ಕೆಲವೊಮ್ಮೆ ಮರದಿಂದ ಬರುವ ರಸವನ್ನೂ ಕೂಡ ಇವು ನೆಕ್ಕುವುದು ದಾಖಲಾಗಿದೆ. ಮಂದಗತಿಯಲ್ಲಿ ಮರದ ಮೇಲೆ ಒಡಾಡುವ ಕಾಡುಪಾಪದ ಕಣ್ಣುಗಳು ಕತ್ತಲಲ್ಲಿ ಟಾರ್ಚ್ ಬೆಳಕನ್ನು ಪ್ರತಿಫಲಿಸಿ ಕೆಂಪು ಕೇಸರಿ ಬಣ್ಣದಲ್ಲಿ ಹೊಳೆಯುತ್ತವೆ.
ಸ್ವಭಾವಗಳು:
ಎಲ್ಲಾ ಕಾಡುಪಾಪಗಳು ಒಂಟಿ ಅಥವಾ ಸಂಗಾತಿಯೊಡನೆ ಇರುವುದು ಕಂಡು ಬರುತ್ತದೆ. ಬೂದು ಕಾಡುಪಾಪಗಳು ಹಗಲಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಗುಂಪಿನಲ್ಲಿ ಮರದ ಮೇಲೆ ಮಲಗುತ್ತವೆ. ಈ ಮಲಗುವ ಗುಂಪಿನಲ್ಲಿ ಒಂದು ಹೆಣ್ಣು ಕಾಡುಪಾಪ ಹಾಗೂ ಅಪ್ರಾಪ್ತ ಮರಿಗಳು ಇರುತ್ತವೆ. ಗುಂಪಿನಲ್ಲಿ ತಲೆ ಬಾಚುವುದು, ಮೈ ಸ್ವಚ್ಛತೆ ಸಾಮಾನ್ಯವಾಗಿ ನಡೆಯುತ್ತದೆ. ಪ್ರೌಢ ಗಂಡು ಕಾಡುಪಾಪದ ಆವಾಸಸ್ಥಾನ (ಆ ಜೀವಿ ಸಾಮಾನ್ಯವಾಗಿ ಆಹಾರಕ್ಕಾಗಿ ಓಡಾಡುವ ಜಾಗದ ವಿಸ್ತೀರ್ಣ) 2.36 ರಿಂದ 3.6 ಹೆಕ್ಟರ್ ಅಗಲವಾಗಿರುತ್ತದೆ. ಹಾಗೇ ಪ್ರೌಢ ಹೆಣ್ಣು ಕಾಡುಪಾಪದ ಆವಾಸಸ್ಥಾನ 1.12 ರಿಂದ 1.56 ಹೆಕ್ಟರ್ ಆಗಿರುತ್ತದೆ. ಮೂತ್ರದ ಮೂಲಕ ತಮ್ಮ ಗುರುತಿಸುತ್ತವೆ. ಇವುಗಳ ಒಂದು ವಿಶೇಷ ಗುಣ ಎಂದರೆ ಮಲ-ಮೂತ್ರವನ್ನು ಕೈ-ಕಾಲುಗಳಿಗೆ ಬಳಿದುಕೊಳ್ಳುವುದು (ಯೂರಿನ್ ವಾಷ್); ಇದಕ್ಕೆ ನಿರ್ದಿಷ್ಟ ಕಾರಣ ತಿಳಿಯದೇ ಹೋದರೂ, ಈ ಕ್ರಿಯೆಯಿಂದ ಜೀವಿಯು ಒತ್ತಡಕ್ಕೆ ಒಳಗಾಗಿದೆ ಇಲ್ಲವೆ ತನ್ನ ಅಸ್ತಿತ್ವ ತೋರಲು ಕೂಡ ಇರಬಹುದು ಎಂದು ಸಂಶೋಧಕರು ಊಹಿಸಿದ್ದಾರೆ. ರಾತ್ರಿಯಲ್ಲಿ ಆಗಾಗ್ಗೆ ಕೂಗುವ ಮೂಲಕ ಇವುಗಳು ಸಂಪರ್ಕದಲ್ಲಿ ಇರುತ್ತವೆ. ಇವುಗಳು ಸದ್ದು ಮಾಡುವ ಮೂಲಕ ತಮ್ಮ ಶತ್ರುಗಳನ್ನು ಓಡಿಸುತ್ತವೆ.
ಸಂತಾನೋತ್ಪತ್ತಿ:
ಮಿಲನದ ಸಮಯದಲ್ಲಿ ಗಂಡು ಕಾಡುಪಾಪ ತನ್ನ ಜಾಗದಲ್ಲಿ ಕೂಡವ ಅವಸ್ಥೆಗೆ ಬಂದ ಹೆಣ್ಣು ಕಾಡುಪಾಪವನ್ನು ಅರಸುತ್ತದೆ. ಇತರ ಜೀವಿಗಳಂತೆ ಇವುಗಳಲ್ಲೂ ಗಂಡು – ಗಂಡಿನ ನಡುವೆ ಹೆಣ್ಣಿಗಾಗಿ ಸ್ಪರ್ಧೆ ಸಾಮಾನ್ಯ. ಬೂದು ಲಾರಿಸ್ ಬಹುಪತಿ ಹಾಗೂ ಬಹುಪತ್ನಿತ್ವ ಎರಡನ್ನೂ ತೋರುತ್ತವೆ ಅರ್ಥಾತ್ ಒಂದು ಗಂಡು ಕಾಡುಪಾಪವು ಅನೇಕ ಹೆಣ್ಣು ಕಾಡುಪಾಪದ ಜೊತೆ ಕೂಡುತ್ತವೆ. ಹಾಗೇ ಒಂದು ಹೆಣ್ಣು ಕಾಡುಪಾಪ ಅನೇಕ ಗಂಡು ಕಾಡುಪಾಪದ ಜೊತೆ ಕೂಡುತ್ತವೆ. ಗರ್ಭಧಾರಣ ಅವಧಿ 165 ದಿನಗಳು. ಏಳು ತಿಂಗಳ ಅಂತರದಲ್ಲಿ ಮತ್ತೆ ಹೆಣ್ಣು ಲಾರಿಸ್ ಗರ್ಭಧರಿಸಲು ಅನುವಾಗುತ್ತದೆ. ಒಮ್ಮೆ ಗರ್ಭಧರಿಸಿದರೆ ಒಂದು ಅಥವಾ ಎರಡು ಮರಿ ಜನಿಸುವ ಸಂಭವ ಇರುತ್ತದೆ. ಜನಿಸಿದ ಮರಿಗಳನ್ನು ಕೋತಿಗಳು ಹಿಡಿದು ತಿರುಗುವ ರೀತಿಯೇ ತಾಯಿ ಕಾಡುಪಾಪ ಹಾಲುಣಿಸುತ್ತಾ ಆರೈಕೆ ಮಾಡುತ್ತದೆ. 4 ರಿಂದ 5 ತಿಂಗಳ ನಂತರ ಮರಿಯನ್ನು ಮಲಗುವ ಸ್ಥಳದಲ್ಲಿಯೇ ಬಿಟ್ಟು ತಾಯಿ ಆಹಾರ ಅರಸಿ ತರುವ ಅಭ್ಯಾಸ ಕೂಡ ಇದ್ದು, ಇತರ ಕಾಡುಪಾಪಗಳು ಮರಿಯೊಡನೆ ಆಡುವುದೂ ಕಾಣಬಹುದು. 5 ತಿಂಗಳ ಅನಂತರ ಮರಿಗಳು ಸ್ವಾವಲಂಬಿಗಳಾಗಿ, 10 – 15 ತಿಂಗಳಲ್ಲಿ ಪ್ರೌಢಾವಸ್ಧೆ ತಲುಪುತ್ತವೆ. ಕಾಡುಪಾಪಗಳು 16 ವರ್ಷ ಬದುಕುತ್ತವೆ ಎಂದು ತಿಳಿದು ಬಂದಿದೆ.
ತೊಂದರೆಗಳು:
ಕಾಡುಪಾಪಗಳನ್ನು ಮಲೆನಾಡಿನ ಪ್ರದೇಶದಲ್ಲಿ ಕೊಂದು ತಿನ್ನುವುದು ಕಡಿಮೆ. ಆದರೆ ಏಲಕ್ಕಿ, ಮಾವು ಇತ್ಯಾದಿ ತೋಟಗಳಲ್ಲಿ ಕಂಡಾಗ ಇದನ್ನು ಕೆಲವರು ಕೊಲ್ಲುತ್ತಾರೆ. ಐಯುಸಿಎನ್ ಕೆಂಪು ಪಟ್ಟಿಯಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿ ಎಂದು ಇದನ್ನು ಗುರುತಿಸಿದ್ದಾರೆ. ಮರದ ಕೊಂಬೆಗಳು ಹಾಗೂ ಕುರುಚಲು ಗಿಡವಿರುವ ಅಕೇಶಿಯಾ, ನೀಲಗಿರಿ ತೋಪುಗಳಲ್ಲೂ ಇವುಗಳು ವಾಸವಿರುವುದರಿಂದ, ಒಮ್ಮೆಲೆ ತೋಪುಗಳ ಕಟಾವು ಮಾಡುವುದು ಇವುಗಳ ಅಳಿವಿಗೆ ಒಂದು ಕಾರಣ. ಕಾಡುಪಾಪದ ದೇಹದ ಮಾಂಸ, ಚರ್ಮ ಹಾಗೂ ಇವುಗಳಿಂದ ತಯಾರಿಸುವ ಎಣ್ಣೆಗೆ ಯಾವುದೇ ವೈಜ್ಞಾನಿಕವಾಗಿ ಸಾಬೀತಾದ ಉಪಯೋಗ ಇಲ್ಲಾವಾದರೂ ಕೂಡ ಔಷಧೀಯ ಗುಣಗಳಿವೆ ಎಂಬ ಕಾರಣಕ್ಕೆ ಇವುಗಳ ಹತ್ಯೆ ಕಾನೂನುಬಾಹಿರವಾಗಿ ನಡೆದಿದೆ. ಮರದ ಮೇಲೆಯೇ ಇರುವ ಇವುಗಳಿಗೆ ನಿರಂತರವಾಗಿರುವ ಕೊಂಬೆಗಳು ಅವಶ್ಯ. ರಸ್ತೆ, ರೈಲ್ವೆ ಹಳಿಗಳ ನಿರ್ಮಾಣ, ವಿದ್ಯುತ್ ತಂತಿ ಮತ್ತು ಇನ್ನಿತರ ಬೆಳವಣಿಗೆಗಳೂ ಕೂಡ, ಮರಗಳಿಗೆ ಮತ್ತು ಮರದ ಮೇಲೇ ಅವಲಂಬಿತವಾದ ಜೀವಿಗಳ ಜೀವನಕ್ಕೆ ಮಾರಕವಾಗಿ ಪರಿಣಮಿಸಿದೆ.
ತಮಿಳುನಾಡಿನ ಹಲವಾರು ಕಡೆ ಬೇಟೆಗಾರರ ಬಲೆಗೆ ಸಿಕ್ಕಿ ಸಂತತಿ ಕಡೆಗೊಳ್ಳುತ್ತಿರುವಾಗಲೇ ಎಚ್ಚೆತ್ತ ಸೀಡ್ ಟ್ರಸ್ಟ್ ಎಂಬ ಸಂಸ್ಥೆ ಅಲ್ಲಿನ ಹಳ್ಳಿ ಜನರಿಗೆ ನಿಸರ್ಗದಲ್ಲಿ ಕಾಡುಪಾಪಗಳ ಮಹತ್ವ ತಿಳಿಸುತ್ತಾ, ಬೇಟೆಗಾರರನ್ನು ಸಂರಕ್ಷಕರಾಗಿಸುವಲ್ಲಿ ಯಶಸ್ವಿಯಾಗಿದೆ. ಆಹಾರ ಸರಪಳಿಯಲ್ಲಿ ಕೀಟಗಳೇ ಪ್ರಧಾನ ಆಹಾರವಾಗಿರುವ ಈ ಕಾಡುಪಾಪಗಳು ತೋಟದ ನೈಸರ್ಗಿಕ ಕೀಟ ನಿಯಂತ್ರಕರಾಗಿ ಕೆಲಸ ಮಾಡುತ್ತದೆ. ಆದರೇ, ತೋಟದಲ್ಲಿ ಉಪಯೋಗಿಸುವ ರಾಸಾಯನಿಕಗಳು ಕೀಟಗಳೊಡನೆ ಕಾಡುಪಾಪಗಳಿಗೂ ಮಾರಕವಾಗಿದೆ. ಹಾಗಾಗಿ ಸಾವಯವ, ನೈಸರ್ಗಿಕ ತೋಟಗಾರಿಕೆಯಿಂದ ನಮ್ಮ ಹಾಗೂ ನಿಸರ್ಗದ ಆರೋಗ್ಯವನ್ನೂ ನಾವು ಕಾಪಾಡಬಹುದು. ರಸ್ತೆಯ ಬದಿಯಲ್ಲಿ ಮರಗಳ ಮೂಲಕ ರೆಂಬೆಗಳ ಸೇತುವೆ ಮಾಡುವ ಮೂಲಕ ಕೂಡ ಇವುಗಳ ಆವಾಸಸ್ಥಾನ ರಕ್ಷಣೆ ಸಾಧ್ಯ.
ಲೇಖನ: ರಕ್ಷಾ
ಉಡುಪಿ ಜಿಲ್ಲೆ
ಅರಣ್ಯಶಾಸ್ತೃ (ಬಿ. ಎಸ್.ಸಿ. ಫೋರೆಸ್ಟ್ರೀ) ವಿದ್ಯಾರ್ಥಿನಿಯಾಗಿದ್ದು, ಪರಿಸರದ ಕುರಿತು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೇನೆ.