ಚಮತ್ಕಾರಿ ವಿಭೂತಿ ಹೂ ಚೆಲುವೆಲ್ಲಾ ನಂದೆಂದಿತು

ಚಮತ್ಕಾರಿ ವಿಭೂತಿ ಹೂ ಚೆಲುವೆಲ್ಲಾ  ನಂದೆಂದಿತು

©ಶಶಿಧರಸ್ವಾಮಿ ಆರ್.

ಸಂಜೆಯಾಗುತ್ತಿದ್ದ ಹಾಗೆ ಅರಳಿ ಸುಗಂಧ ಸೂಸುವ ನಾನು ಪ್ರಕೃತಿಯ ಅದ್ಭುತ ತಿಂಗಳ ನಿಶಾಸುಂದರಿ. ನನ್ನ ತವರೂರು ಅಮೇರಿಕಾದ ಪೆರು. ಅಲ್ಲಿಂದ ಎಲ್ಲಾ ಉಷ್ಣವಲಯದ ಪ್ರದೇಶಗಳಲ್ಲಿ ಬೆಳೆದು ವಿಸ್ತರಿಸಲ್ಪಟ್ಟಿರುವೆ, ನನ್ನನ್ನು ಭಾರತದಲ್ಲಿ ಅಲಂಕಾರಿಕ ಸಸ್ಯವಾಗಿ ಕೈತೋಟ ಉದ್ಯಾನವನಗಳಲ್ಲಿ ಬೆಳಸುತ್ತಾರೆ. ಪೆರು ನನ್ನ ಮೂಲವಾಗಿದ್ದರಿಂದ ನನಗೆ “ಪೆರುವಿನ ಅದ್ಭುತ” (Marvel of Peru) ಎಂಬ ನಾಮಧೇಯವೂ ರೂಡಿಯಲ್ಲಿದೆ. ಯಾರೆಂದು ಗೊತ್ತಾಯಿತ್ತಲ್ಲವೇ? ಹೌದು ನಾನು ನಿಮಗೆಲ್ಲ ಚಿರಪರಿಚಿತವಾದ ‘ಸಂಜೆ ಮಲ್ಲಿಗೆ’. ಅಂದ ಹಾಗೆ ನನ್ನನ್ನು ಮಧ್ಯಾಹ್ನ ಮಲ್ಲಿಗೆ, ನಾಲ್ಕು ಘಂಟೆ ಹೂ, ವಿಭೂತಿ ಗಿಡ, ಚಂದ್ರಮಲ್ಲಿಗೆ ಎಂತೆಲ್ಲ ಕರೆಯುತ್ತಾರೆ. ನನ್ನ ಸಸ್ಯಶಾಸ್ತ್ರೀಯವಾಗಿ ಮಿರಾಬಿಲಿಸ್ಜಲಪ (Mirabilis jalapa) ಎಂದು ಕರೆದು. ನಿಕ್ಟಾಜಿನೇಶಿಯೆ (Nyctaginaceae) ಸಸ್ಯ ಕುಟುಂಬಕ್ಕೆ ಸೇರಿಸಿದ್ದಾರೆ. ಸ್ವೀಡನ್ ದೇಶದ ಕಾರ್ಲ್ ಲಿನ್ನಿಯಸ್ ಎಂಬ ಸಸ್ಯ ಮತ್ತು ಪ್ರಾಣಿ ವಿಜ್ಞಾನಿ 1753 ರಲ್ಲಿ ಪ್ರಪ್ರಥಮವಾಗಿ ನನ್ನ ಬಗ್ಗೆ ದಾಖಲಿಸಿದ್ದಾರೆ. ಲ್ಯಾಟಿನ್‌ನಲ್ಲಿ ‘ಮಿರಾಬಿಲಿಸ್’ (Mirabilis) ಎಂದರೆ ಅದ್ಭುತ ಎಂಬರ್ಥ. ‘ಜಲಪ’ (jalapa) ಎಂಬುದು ಉತ್ತರ ಅಮೇರಿಕಾದ ಊರಿನ ಹೆಸರಿನ ಸವಿನೆನಪಿಗೆ ಹೆಸರಿಸಲಾಗಿದೆ.

ನಾನೊಂದು ದೀರ್ಘಕಾಲಿಕ, ಹರಡಿಕೊಂಡ, ಕವಲೊಡೆದು ಬೆಳೆಯುವ ಪೊದೆ ಸಸ್ಯವಾಗಿ 2-3 ಅಡಿ ಎತ್ತರವಾಗಿ ಬೆಳೆಯುವೆ. ನನ್ನ ಹೂವುಗಳು ಕಹಳೆ (ತುತ್ತುರಿ) ಅಂದರೆ ಹಳೇ ಗ್ರಾಮಫೋನ್ ಆಕಾರದಲ್ಲಿವೆ, ಕೊನೆಯಲ್ಲಿ ಒಂದು ಇಂಚು ಅಡ್ಡಲಾಗಿ ಮತ್ತು ಎರಡು ಇಂಚು ಉದ್ದವಿವೆ. ಸಂಜೆ ಅರಳಿ ಮರುದಿನ ಬೆಳಿಗ್ಗೆ ಬಾಡುತ್ತವೆ. ಪರಿಮಳಯುಕ್ತ ಹೂವುಗಳು ಏಕ ಅಥವಾ ಗೊಂಚಲುಗಳಾಗಿ ಕೆಂಪು, ಕೆನ್ನೇರಳೆ, ಗುಲಾಬಿ, ಹಳದಿ ಅಥವಾ ಬಿಳಿ ವರ್ಣಮಯವಾಗಿವೆ, ಕೆಲವೊಮ್ಮೆ ಒಂದೇ ಸಸ್ಯದಲ್ಲಿ ಒಂದಕ್ಕಿಂತ ಹೆಚ್ಚು ಬಣ್ಣಗಳನ್ನು ಹೊಂದಿರುತ್ತವೆ. ಕೆಲವೊಂದು ಸಲ ಒಂದೇ ಹೂವಿನಲ್ಲಿ ದ್ವಿವರ್ಣದ ಹೂವುಗಳನ್ನು ಸಹ ಅರಳಿಸುವೆ. ನನ್ನ ಮೊನಚಾದ ಎಲೆಗಳು ಕಡು ಹಸಿರು ಬಣ್ಣದ್ದಾಗಿದ್ದು, 2-4 ಸೆಂ.ಮೀ ಉದ್ದವಿದ್ದು, ಪರ್ಯಾಯ ಜೋಡಣೆ ಹೊಂದಿವೆ. ಬೇರುಗಳಲ್ಲಿ ಕಪ್ಪು ಗೆಡ್ಡೆಯು ಒಂದು ಅಡಿಗಿಂತ ಹೆಚ್ಚು ಉದ್ದವಿದ್ದು, 18 ಕೆ.ಜಿಕ್ಕಿಂತ ಹೆಚ್ಚಿನ ತೂಕವನ್ನು ಹೊಂದಿದೆ.

©ಶಶಿಧರಸ್ವಾಮಿ ಆರ್.

ನನ್ನಲ್ಲಿರುವ ಕುತೂಹಲಕರ ಅಂಶವೆಂದರೆ ವಿವಿಧ ಬಣ್ಣಗಳ ಹೂವುಗಳು ಒಂದೇ ಗಿಡದಲ್ಲಿ ಏಕಕಾಲದಲ್ಲಿ ಬೆಳೆಯುವುದು. ಇದರೊಂದಿಗೆ ಒಂದೇ ಹೂ ಬೇರೆ ಬೇರೆ ರೀತಿಯ ಬಣ್ಣಗಳಲ್ಲಿ ಅರಳುವುದು. ಒಂದು ಹೂ ಅರಿಶಿನ, ಗುಲಾಬಿ ಅಥವಾ ಬಿಳಿ ಬಣ್ಣದಲ್ಲಿ ಇರಬಹುದು. ನನ್ನ ಗಿಡದ ಒಂದು ಸಾಮಾನ್ಯ ಹೂಗಳ ಮೇಲೆ ಅರಿಶಿನ, ಗುಲಾಬಿ ಅಥವಾ ಬಿಳಿ ಬಣ್ಣದ ಪಟ್ಟೆ, ಕಲೆಗಳ ರೂಪದಲ್ಲಿ ಮಿಶ್ರಣಗೊಂಡಿವೆ. ಇದೇ ರೀತಿ ಬೇರೆ ಬೇರೆ ಸಂಯೋಜನೆಗಳ ಹೂಗಳು ಒಂದೇ ಗಿಡದಲ್ಲಿ ಬಿರಿಯುತ್ತವೆ. ನನ್ನ ಹೂವಿನ ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಬಣ್ಣ ಬದಲಿಸುವ ಚಮತ್ಕಾರಿ ಗುಣ.

            1900ರ ಸುಮಾರಿಗೆ ಕಾರ್ಲ್ ಕೊರೆನ್ಸ್ ಎಂಬ ವಿಜ್ಞಾನಿಯು ಸೈಟೋಪ್ಲಾಸ್ಮಿಕ್ ಅನುವಂಶಿಕತೆಯ ಅಧ್ಯಯನಕ್ಕಾಗಿ ನನ್ನನ್ನು ಮಾದರಿ ಸಸ್ಯವಾಗಿ ಬಳಸಿಕೊಂಡು ಮೆಂಡೆಲ್ ಸಿದ್ಧಾಂತಗಳನ್ನು ವಿವರಿಸದೇ, ಅಧ್ಯಯನ ನಡೆಸಿ ಅದರಂತೆ ನ್ಯೂಕ್ಲಿಯಸ್ ಪರಿಣಾಮ ಫಿನೋಟೈಪ್ ಹೊರಗೆ ಕೆಲವು ಅಂಶಗಳು ಹೂವಿನ ಪಕುಳೆಯಲ್ಲಿ ಬಣ್ಣ ಬದಲಾಗಿಸಿತ್ತು. ನನ್ನ ಪಕುಳೆಗಳಲ್ಲಿನ ಬಣ್ಣವು ಅನುವಂಶಿಯವಾಗಿ ಬಂದಿರುವುದು ಎಂದು ಕೊರೆನ್ಸ್ ವಿವರಿಸಿದರು. ಅಲ್ಲದೆ, ಅಚ್ಚಗುಲಾಬಿ ಪುಷ್ಪಗಳ ಸಸ್ಯ ಮತ್ತು ಬಿಳಿಪುಷ್ಪಗಳ ಸಸ್ಯಗಳನ್ನು ಕೂಡಿಸಿ ದಾಟಿ ಮಾಡಿದಾಗ ತಿಳಿ ಗುಲಾಬಿ ಬಣ್ಣದ ಹೂಗಳು ಬಿಟ್ಟು ಅರಳಿಸಿದೆ, ಅಚ್ಚಗುಲಾಬಿ ಹೂವುಗಳನ್ನು ಕೊಡಲಿಲ್ಲ. ಇದು ಮೆಂಡಲ್ ಲಾ ಆಫ್ ಡಾಮಿನೆನ್ಸ ವಾದವನ್ನು ಅನುಸರಿಸಲಿಲ್ಲ. ಇದನ್ನು ಇನ್ಕಂಪ್ಲೀಟ್ ಡಾಮಿನೆನ್ಸ್ಷ್ಎಂದು ಕರೆಯಲಾಗಿತ್ತು. ಈ ವಿದ್ಯಮಾನವನ್ನು ಅಪೂರ್ಣ ಪ್ರಾಬಲ್ಯ ಎಂದು ಗುರುತಿಸಲಾಯಿತು. ಅದಾಗ್ಯೂ, ಎಫ್-1 ಪೀಳಿಗೆಯಲ್ಲಿ ಏಕರೂಪತೆಯ ಮೆಂಡೆಲಿಯನ್ ತತ್ವ ಮತ್ತು ಎಫ್-2 ಪೀಳಿಗೆಯ ಜೀನ್‌ಗಳಲ್ಲಿ ಬೇರ್ಪಡಿಸುವ ತತ್ವವು ಅನ್ವಯಿಸುತ್ತದೆ, ಇದು ಮೆಂಡೆಲ್‌ನ ಸಂಶೋಧನೆಗಳ ಮಹತ್ವವನ್ನು ಖಚಿತಪಡಿಸಿತು. ಈ ಎಲ್ಲ ಅಂಶಗಳಿಂದ ನನ್ನ ಹೂವುಗಳು ವಿವಿಧ ಬಣ್ಣಗಳಿಂದ ಅರಳುತ್ತವೆ.

ನನ್ನನ್ನು ಯಾರು ಮುಡಿಯುವುದಿಲ್ಲ ಹಾಗೂ ಪೂಜೆಗೆ ಅರ್ಪಿಸುವುದಿಲ್ಲ. ಆದರೇ ಸುವಾಸನಾಯುಕ್ತ ಸುಂದರ ಆಕರ್ಷಿತವಾದ ನನ್ನ ಪುಷ್ಪಗಳಿಗೆ ಝಂಕಾರ ಪತಂಗ, ಸಿಂಹನಾರಿ ಪತಂಗಗಳಂತಹ ನಿಶಾಚರಿ ಪತಂಗಗಳು ಭೇಟಿ ನೀಡಿ ತಮ್ಮ ಉದ್ದ ಹೀರುನಾಲಿಗೆಯಿಂದ ಮಕರಂದ ಹೀರುತ ಪರಾಗಸ್ಪರ್ಶ ಮಾಡುತ್ತವೆ. ಆಯುರ್ವೇದ, ಸಿದ್ಧ, ಯುನಾನಿ, ನಾಟೀ ಜಾನಪದೀಯ ಔಷಧ ಪದ್ಧತಿಗಳಲ್ಲಿ ನನ್ನನ್ನು ಉಪಯೋಗಿಸುತ್ತಾರೆ. ನನ್ನ ಹೂಗಳನ್ನು ಆಹಾರದ ಬಣ್ಣ ಬದಲಿಸಲು ಬಳಸುತ್ತಾರೆ. ನನ್ನ ಎಲೆಗಳನ್ನು ಊತ ಕಡಿಮೆ ಮಾಡಲು ಬಳಸುತ್ತಾರೆ. ಎಲೆಯ ರಸವನ್ನು ಗಾಯಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಬೀಜಗಳು ವಿಷಕಾರಿಯಾಗಿದ್ದು ಪುಡಿಮಾಡಿದ ಬೀಜಗಳನ್ನು ಕಾಸ್ಮೆಟಿಕ್ ಮತ್ತು ಡೈಯಾಗಿ ಬಳಸಲಾಗುತ್ತದೆ. ಹೀಗೆ ಪ್ರಕೃತಿಯಲ್ಲಿ ಒಂದೇ ಸಸ್ಯದಲ್ಲಿ ನಾನಾ ಬಗೆಯ ಹೂ ಅರಳಿಸುತ್ತಾ ಚಮತ್ಕಾರಿ ಸಸ್ಯವಾಗಿರುವೆ.

©ಶಶಿಧರಸ್ವಾಮಿ ಆರ್.

ಲೇಖನ : ಶಶಿಧರಸ್ವಾಮಿ ಆರ್. ಹಿರೇಮಠ್
ಹಾವೇರಿ ಜಿಲ್ಲೆ

Print Friendly, PDF & Email
Spread the love
error: Content is protected.