ಆಕರ್ಷಕ ನಾಗಲಿಂಗ ಪುಷ್ಪ

ಆಕರ್ಷಕ ನಾಗಲಿಂಗ ಪುಷ್ಪ

ಪ್ರಕೃತಿಯ ಸೋಜಿಗ, ಸಸ್ಯ ವಿವಿಧತೆ. ಇದರಲ್ಲಿ ಹಲವು ಗಿಡ-ಮೂಲಿಕೆಗಳು, ಕುರುಚಲು-ಪೊದೆಗಳು ಮತ್ತು ವಿವಿಧ ಗಾತ್ರ-ಆಕಾರದ ಮರಗಳುಂಟು. ಅಂತಹ ಒಂದು ವಿಶೇಷ ಮರಗಳಲ್ಲೊಂದು ನಾಗಲಿಂಗ ಪುಷ್ಪ. ಆಂಗ್ಲ ಭಾಷೆಯಲ್ಲಿ ಕ್ಯಾನೋನ್-ಬಾಲ್ (Cannon-ball tree) ಮರವೆಂದು ಕರೆಯಲ್ಪಡುವ ಇದರ ಸಸ್ಯಶಾಸ್ತ್ರೀಯ ಹೆಸರು ಕೌರ್ಪಿಟಗಯಾನೆನ್ಸಿಸ್ಸ್ (Couroupita guianensis). ಕುಟುಂಬ: ಲೆಸಿತಿಡೆಸಿ (Lecythidaceae).  ಮೂಲತಃ ಗಯಾನ ಮತ್ತು ದಕ್ಷಿಣ ಅಮೇರಿಕಾದಲ್ಲಿಂದ ಬಂದರೂ ಸಮಶೀತೋಷ್ಣವಲಯದ ಎಲ್ಲಾ ದೇಶಗಳಲ್ಲಿ ವೇಗವಾಗಿ ಬೆಳೆಯುವ ದೊಡ್ಡದಾದ ಮರ (ಎತ್ತರ ಗರಿಷ್ಠ 110 ಅಡಿ).  ಎಲೆ ಉದುರಿಸುವ ಮರಗಳ ಪ್ರಭೇದಕ್ಕೆ ಸೇರಿರುವ ಇದರ ಕಾಂಡವು ದಪ್ಪ ಮತ್ತು ನೇರವಾಗಿರುತ್ತದೆ.  ತೊಗಟೆಯು ಒರಟಾದ ಬೂದು-ಮಿಶ್ರಿತ ಕಂದು ಬಣ್ಣವಿರುತ್ತದೆ.  ಕೊಂಬೆಗಳು ನೇರವಾಗಿ ಕಾಂಡದ ಮೇಲ್ಭಾಗದಲ್ಲಿ ಬೆಳೆಯುತ್ತವೆ.

ಎಲೆಗಳು:

ಹಳದಿ-ಮಿಶ್ರಿತ ಹಸಿರು ಬಣ್ಣದ ಎಲೆಗಳು.  ಉದ್ದವಾದ ಮತ್ತು ಕಿರಿದಾದ ಎಲೆಗಳು ಸಣ್ಣದಿರುವಾಗ ಪೂರ್ಣ ಹಸಿರು ಬಣ್ಣವಿದ್ದು ಬೆಳೆದಂತೆ ಗಾಢ ಬಣ್ಣಕ್ಕೆ ತಿರುಗುತ್ತದೆ. ಎಲೆಗಳು ವರ್ಷದಲ್ಲಿ ಹಲವಾರು ಬಾರಿ ಉದುರುತ್ತವೆ. ಆದರೆ ಕೆಲವೇ ದಿನಗಳಲ್ಲಿ ಹೊಸ ಎಲೆಗಳು ಹುಟ್ಟುವುದರಿಂದ ಮರದಲ್ಲಿ ಯಾವಾಗಲೂ ಎಲೆಯಿರುವಂತೆ ಕಾಣುತ್ತದೆ.

ಹೂಗಳು:

ವರ್ಷ ಪೂರ್ತಿ ಹೂವು ಬಿಡುತ್ತದೆ. ಇದರ ಹೂವಿನಲ್ಲಿ ಆರು ದಳಗಳು ಮತ್ತು ತಿರುಳು ತುಂಬಿರುತ್ತದೆ. ತಿಳಿ-ಗುಲಾಬಿ ಬಣ್ಣದಿಂದ ಕಡು-ಕೆಂಪು ಬಣ್ಣವಿರುವ ಹೂವು ನೋಡಲು ಆಕರ್ಷಕವಾಗಿರುತ್ತವೆ. ಹೂವಿನ ಮಧ್ಯದಲ್ಲಿ ಬಿಳಿ ಅಥವಾ ಹಳದಿ ಬಣ್ಣವನ್ನೊಳಗೊಂಡಂತೆ ಹಲವು ಬಣ್ಣಗಳಿರುತ್ತವೆ. ಹೂ ಗೊಂಚಲುಗಳು ವಿಶಿಷ್ಠವಾಗಿ ಸಿಹಿಯಾದ ಸುವಾಸನೆಯನ್ನು ಹೊಂದಿವೆ. ಮರದ ಕಾಂಡದಿಂದ ಮತ್ತು ಕೊಂಬೆಗಳಿಂದ ನೂರಾರು ಹೂಗಳು ಜೋತು ಬೀಳುತ್ತವೆ. ಒಂದೇ ಮರದಲ್ಲಿ ಸಾವಿರಕ್ಕೂ ಹೆಚ್ಚು ಹೂಗಳಿರುವ ದಾಖಲೆಯೂ ಇದೆ. ಜೇನ್ನೊಣ, ದುಂಬಿ, ಚಿಟ್ಟೆ ಮುಂತಾದ ಕೀಟಗಳನಲ್ಲದೇ ಹಕ್ಕಿಗಳನ್ನೂ ಸಹ ಈ ಹೂಗಳು ಆಕರ್ಷಿಸುತ್ತವೆ.  ಹೂಗಳನ್ನು ಜಜ್ಜಿದ ತಕ್ಷಣ ನೀಲಿ ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ಕಾರಣ, ಹೂಗಳಲ್ಲಿರುವ ಆಂಥೋಸಯಾನಿನ್ಸ್, ಕೆರೋಟಿನ್ಯಾಡ್ಸ್, ಫ್ಲೆವೋನಾಲ್ಸ್ ಮುಂತಾದ ವರ್ಣದ್ರವ್ಯಗಳು ಹೂವಿನ ಜೀವಕೋಶಗಳ ಒಳಗೆ ವಿವಿಧ ವಿಭಾಗಗಳಲ್ಲಿ ಇರುತ್ತವೆ. ಹೂವನ್ನು ಜಜ್ಜಿದಾಗ ವರ್ಣದ್ರವ್ಯವಿರುವ ಕವಚಗಳು ಒಡೆದು, ಬಣ್ಣಗಳ ಮಿಶ್ರಣವಾಗಿ ನೀಲಿ ಬಣ್ಣ ಕಾಣುವುದು. ಭಾರತದಲ್ಲಿ ಈ ಹೂಗಳನ್ನು ವಿಶೇಷವಾಗಿ ಶಿವನ ಪೂಜೆಗೆ ಬಳಸುತ್ತಾರೆ.  ಹೂಗಳ ಆಕಾರ ಲಿಂಗದ ತಲೆಯ ಮೇಲೆ ಇರುವ ನಾಗರ ಹೆಡೆಯಂತೆ ಕಾಣುವುದರಿಂದ ನಾಗಲಿಂಗ ಪುಷ್ಪವೆಂಬ ಹೆಸರು ಬಂದಿದೆ.

ಹಣ್ಣುಗಳು:

ಬಹಳ ದೊಡ್ಡದಾದ ಅಂದರೆ ಸಣ್ಣ ಪುಟ್‍ಬಾಲ್‍ನಂತಿರುವ ಕಾಯಿಗಳು ಬೆಳೆಯಲು ತೆಗೆದುಕೊಳ್ಳುವ ಸಮಯ ಎಂಟರಿಂದ ಒಂಬತ್ತು ತಿಂಗಳು.  ಗುಂಡಗಿನ ಆಕಾರದ, ಕಂದು ಬಣ್ಣದ, ಗಟ್ಟಿ ಕವಚವಿರುವ ಹಣ್ಣಿನ ತಿರುಳು ಹುಳಿವಾಸನೆಯಿದ್ದು ಹಲವಾರು ಬೀಜಗಳನ್ನು ಹೊಂದಿರುತ್ತದೆ. ನೆಲಕ್ಕೆ ಬಿದ್ದು ಒಡೆದಾಗ ಒಳಗಿನ ತಿರುಳು ನೀಲಿ-ಮಿಶ್ರಿತ ಹಸಿರು ಬಣ್ಣವಿದ್ದು ದುರ್ವಾಸನೆಯನ್ನು ಬೀರುತ್ತದೆ.

ಉಪಯೋಗಗಳು:

ಹೂವಿನ ಅಂದ ಮತ್ತು ಪರಿಮಳಕ್ಕಾಗಿ ಸಮಶೀತೋಷ್ಣವಲಯದ ದೇಶಗಳಲ್ಲಿ ಬೆಳೆಸುತ್ತಾರೆ. ಸಾವಿರಾರು ತರಹದ ಕೀಟಗಳಿಗೆ ಆಹಾರ ಒದಗಿಸಬಲ್ಲದು. ಮರದ ಕಾಂಡದಿಂದ ಯಾವುದೇ ಪ್ರಯೋಜನವಿಲ್ಲ.  ಕಾಯಿಯ ಕವಚವನ್ನು ದಕ್ಷಿಣ ಅಮೇರಿಕಾ ದೇಶಗಳಲ್ಲಿ ಪಾತ್ರೆಯಾಗಿ ಉಪಯೋಗಿಸುವರು.  ಹಣ್ಣಿನ ತಿರುಳನ್ನು ಪ್ರಾಣಿಗಳಿಗೆ ಆಹಾರವಾಗಿಯೂ ಬಳಸುತ್ತಾರೆ. ಸ್ಥಳೀಯ ಮಂಗಗಳು ಸಹ ಹಣ್ಣನ್ನು ತಿನ್ನುವುದರಿಂದ ಇದನ್ನು ಮಂಗನ ಮಡಿಕೆ ಎಂದು ಸಹ ಕರೆಯುತ್ತಾರೆ. ಅಮೇಜಾನ್ ಕಾಡುಗಳಲ್ಲಿರುವ ಸ್ಥಳೀಯರು ಈ ಮರದ ಸಾರವನ್ನು ಔಷಧಿಯಾಗಿ ಬಳಸುವರು.  ಕೆಲವು ತೊಂದರೆಗಳಾದ ರಕ್ತದೊತ್ತಡ, ನೋವು, ಉರಿಯೂತ, ನೆಗಡಿ, ಹೊಟ್ಟೆನೋವು, ಹಲ್ಲುನೋವು ಮುಂತಾದವುಗಳ ಶಮನಕ್ಕೆ ಬಳಸುವುದುಂಟು. ಮಲೇರಿಯಾ ವಿರುದ್ಧವೂ ಪರಿಣಾಮಕಾರಿಯೆಂದು ತಿಳಿದುಬಂದಿದೆ.

ಸಸ್ಯ ವಿವಿಧತೆಗೆ ತನ್ನದೇ ಕಾಣಿಕೆ ನೀಡಿ, ಕೀಟ, ಪಕ್ಷಿ-ಪ್ರಾಣಿಗಳಿಗೆ ಆಹಾರವಾಗಿ, ಶಿವನ ಪೂಜೆಗೆ ಯೋಗ್ಯವಾಗಿರುವ ಹೂವನ್ನು ನೀಡುವ ಈ ಮರ ವಿಶಿಷ್ಟವಾದದ್ದು. ಅಲ್ಲಲ್ಲಿ ಕೆಲವು ದೇವಸ್ಥಾನಗಳಲ್ಲಿ ಮಾತ್ರ ಕಾಣಸಿಗುವ ಈ ಮರವನ್ನು ನಗರಗಳ ಉದ್ಯಾನವನಗಳಲ್ಲಿ ನೆಟ್ಟು ಬೆಳೆಸಬೇಕಾಗಿದೆ.  ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಆವರಣದಲ್ಲೂ ಇಂತಹ ಮರಗಳು ಇರುವುದು ಅವಶ್ಯಕ. ಪ್ರಕೃತಿಯ ಮೂಸೆಯಲ್ಲಿ ಹೊರಬಂದ ಈ ಆಕರ್ಷಕ ಮರದ ಸಂತತಿಯನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ.

ಚಿತ್ರ- ಲೇಖನ:  ಡಾ. ಎಸ್. ಶಿಶುಪಾಲ
ದಾವಣಗೆರೆ ಜಿಲ್ಲೆ

Print Friendly, PDF & Email
Spread the love
error: Content is protected.