ಆಲಿಸುವ ಕಾಲುಗಳು

ಆಲಿಸುವ  ಕಾಲುಗಳು

©J_STAFSTROM

‘ಹಿತ್ತಲ ಗಿಡ ಮದ್ದಲ್ಲ’ ಎಂಬ ಮಾತಿನಂತೆ, ನಾನು ಇರುವ ಪ್ರದೇಶ ಬೆಟ್ಟ-ಗುಡ್ಡಗಳಿಂದ ಕೂಡಿದ್ದರೂ ಅದನ್ನು ಅನ್ವೇಷಿಸಿ ಹೊರಡುವ ಪ್ರಯತ್ನ ಹೆಚ್ಚು ಮಾಡಿರಲಿಲ್ಲ. ಆದರೆ ಒಮ್ಮೆ ಹೋಗಬೇಕೆಂದಿನೆಸಿ, ಬೆಳಿಗ್ಗೆಯ ವ್ಯಾಯಾಮ ಮುಗಿದ ತಕ್ಷಣ ಹೊರಟೆ. ದಾರಿ ಹಳೆಯದಾದರೂ ನೋಟ ಹೊಸದೆನಿಸುವಂತಿತ್ತು. ಬಹುಶಃ ಭೂಮಿಗೆ ಅರ್ಧ ಘಂಟೆ ಮುಂಚೆಯೇ ಇಳಿಯಬೇಕಿದ್ದ ಸೂರ್ಯನ ಕಿರಣಗಳ  ತಡೆಯುತ್ತಿದ್ದ  ಮಂಜಿನ ಕಾಟದಿಂದಿರಬಹುದು. ಇವೆಲ್ಲ ಪ್ರಕೃತಿಯ ಆಟ. ಇವನ್ನೆಲ್ಲ ಕಂಡ ಕಣ್ಣು ಮರ್ಕಟನಂತೆ ಇನ್ನೂ ಏನೋ ಸಿಗಬಹುದೆಂದು ಹುಡುಕಿದವು. ಅದೇಕೋ ಏನೋ ಕಂಡದ್ದೆಲ್ಲಾ ‘ಅರೇ ಇಷ್ಟು ಚಂದದ ಪ್ರದೇಶ ಇಷ್ಟು ದಿನ ಇಲ್ಲೇ ಇತ್ತೇ’ ಎನ್ನುವಷ್ಟು ಹೊಸದಾಗಿಯೂ ಸುಂದರವಾಗಿಯೂ ಕಾಣುತ್ತಿತ್ತು. ಗಾಢ ಹಸಿರು

© ಜೈಕುಮಾರ್ ಆರ್

ಬಣ್ಣದ ಬಳ್ಳಿಯ, ಬಿಳಿಯ ಹೂ. ಕಲ್ಲಿನ ಮೇಲೆ ಸುಮ್ಮನೆ ಮೈಯೊಡ್ಡಿ ಮಲಗಿದ್ದ ನೀಲಿ ಹೂವಿನ ಬಳ್ಳಿ. ಹೀಗೆ ಕಂಡದ್ದೆಲ್ಲಾ ಕನಸೆ ಎಂಬಂತಿತ್ತು. ಹಾಗೆ ಗುಡ್ಡದ ಮೇಲೆ ಏರಿದಂತೆ ದೂರದಲ್ಲೊಂದು ಬೆಟ್ಟ. ಅರ್ಧ ಕಳುವಾದಂತಿತ್ತು. ಪೋಲೀಸರಿಗೆ ಪಿರ್ಯಾದು ನೀಡಿ ಕಳ್ಳನನ್ನು ಹುಡುಕಿಸಬೇಕಾಗಿರಲಿಲ್ಲ, ಏಕೆಂದರೆ ಕದ್ದದ್ದು ಬೇರಾರೂ ಅಲ್ಲ, ಈ ಮಂಜಿನ ಮೋಡ ಮಹರಾಯನೇ. ಹಾಗಾಗಿ ಅದನ್ನು ಕಂಡವರು ‘ದೂರದ ಬೆಟ್ಟ ನುಣ್ಣಗೆ’ ಎನ್ನುವ ಬದಲಾಗಿ ‘ದೂರದ ಬೆಟ್ಟ ಮಂಜಿಗೆ’ ಎನ್ನಬಹುದಿತ್ತು. ಹೀಗೆ ಮುಂದುವರೆದರೆ ಕಂಡದ್ದು ಸಾವಿರಾರು ಮುತ್ತಿನ ಹನಿಗಳು. ಸೂರ್ಯನ ತಿಳಿ ಕಿರಣಗಳು ಅವುಗಳೊಡಗೂಡಿ  ನರ್ತಿಸುತ್ತಿದ್ದವು. ಕಸವೆಂದು ಮನೆ ಗುಡಿಸುವಾಗ ಗೋಡೆಯ ಮೇಲೆ ಹಾಗೆ ಪರಕೆ ಆಡಿಸಿ ತೆಗೆದು ಹಾಕುವ ಆ.. ಜೇಡರ ಬಲೆಗೂ, ಒಂದೊಂದು ಹನಿಯನ್ನೂ ತೊಟ್ಟಿಲಿನಲ್ಲಿರುವ ಮಗುವನ್ನು ಆಡಿಸುವ ಹಾಗೆ ಹಿಡಿದು ತೂಗುತ್ತಿದ್ದ ಈ.. ಜೇಡರ ಬಲೆಗೂ ಅಜಗಜಾಂತರ ವ್ಯತ್ಯಾಸ.. ಅಂದಿನಿಂದ ಜೇಡರ ಬಲೆಯನ್ನು ನೋಡುವ ವಿಧಾನವೇ ಬದಲಾಯಿತು ನನ್ನದು. ಇಷ್ಟು ಕಣ್ಣು ತುಂಬಿಕೊಂಡ ಬಳಿಕ, ಅಲ್ಲೇ ಐದು ನಿಮಿಷ ಕೂತು ಕಾಣದ ತಂಪಾದ ಗಾಳಿಯನ್ನು ಸವಿದು, ಗಾಳಿ ತಂದ ಸುದ್ದಿಯನ್ನೂ ಕೇಳಿ ಹಿಂತಿರುಗಿದೆನು.

© ಜೈಕುಮಾರ್ ಆರ್

ಈ ಜೇಡಗಳೇ ಕೊಂಚ ವಿಚಿತ್ರ ನೋಡಿ. ಸಾಮಾನ್ಯವಾಗಿ ಕೀಟಗಳ ಹಾಗೆ ಕಂಡರೂ ಅವು ಕೀಟಗಳಲ್ಲ. ಅವುಗಳದ್ದೇ ಬೇರೆ ಗುಂಪು. ಎಷ್ಟೋ ಕೀಟಗಳಿಗೆ ಸಾಮಾನ್ಯವಾಗಿ 6 ಕಾಲುಗಳಿದ್ದರೆ, ಇವುಗಳಿಗೆ 8 ಕಾಲುಗಳು. ಬೇಕಿದ್ದರೆ ಅವುಗಳನ್ನು ಮುಟ್ಟದೇ ಎಣಿಸಿ ನೋಡಿ. 3-4 ಜೋಡಿ ಕಣ್ಣುಗಳು. ಕೆಲವು ನಡೆಯುತ್ತವೆ, ಕೆಲವು ನೆಗೆಯುತ್ತವೆ, ಕೆಲವು ತೆವಳುತ್ತವೆ, ಕೆಲವಂತೂ ಹಾರುತ್ತವೆ(ತೇಲುತ್ತವೆ). ಸಾಮಾನ್ಯವಾಗಿ ನಾವು ಬಣ್ಣ ಬಣ್ಣದ ಚಿಟ್ಟೆಗಳು ಮತ್ತು ಪಕ್ಷಿಗಳನ್ನು ಮಾತ್ರ ನೋಡಿರುತ್ತೇವೆ. ಜೇಡಗಳಲ್ಲಿರುವ ಬಣ್ಣಗಳೇನಾದರೂ ನೋಡಿಬಿಟ್ಟರೆ ಹುಬ್ಬೇರುವುದಂತಂತೂ ಖಂಡಿತ. ಕೆಲವು ಜೇಡಗಳು ದಾರಿಗಳಿಗೆ ಅಡ್ಡಲಾಗಿ ಬಲೆ ಹೆಣೆದು ಬೇಟೆ ಆಡಿದರೆ, ಕೆಲವು ನೆಲದ ಮೇಲೆ ಬಲೆ ಕಟ್ಟಿ ಕಾಯುತ್ತವೆ. ಇನ್ನು ಕೆಲವು ನೀರಿನ ಮೇಲೆ ಬಲೆ ಹೆಣೆದು ಗಾಳ ಹಾಕಿ ಬೇಟೆಯಾಡಿದರೆ, ಇನ್ನೂ ಕೆಲವು ತನ್ನ ಆಹಾರದ ಮೇಲೆಯೇ ತನ್ನ ಬಲೆಯನ್ನು ಹಾಕಿ ಬೇಟೆಯಾಡುತ್ತವೆ. ಹೌದು ಕೆಲವು ಜೇಡಗಳು ತನ್ನ ನಾಲ್ಕು ಕಾಲುಗಳನ್ನು ಬಳಸಿ ಆಯತಾಕಾರದ ಬಲೆಯನ್ನು ಹೆಣೆದು ಇಟ್ಟುಕೊಂಡಿರುತ್ತದೆ. ತನ್ನ ಬೇಟೆಯನ್ನು ಕಂಡ ತಕ್ಷಣ ಅದರ ಮೇಲೆ ಎರಗಿ ಬಲೆ ಹಾಕಿ ಬಲಿ ತೆಗೆದುಕೊಳ್ಳುತ್ತದೆ. ತನ್ನ ಎಂಟೂ ಕಾಲುಗಳನ್ನು ಸಮರ್ಥವಾಗಿ ಹೇಗೆ ಬಳಸಿಕೊಳ್ಳುತ್ತವೆ ನೋಡಿ. ಹೌದಲ್ಲ ಪರವಾಗಿಲ್ಲವೇ… ಎಂದು ನೀವಂದುಕೊಳ್ಳುವ ಮೊದಲು ಇನ್ನೊಂದು ವಿಷಯ ಹೇಳಿಬಿಡುತ್ತೇನೆ. ಈ ಬಗೆಯ ಕೆಲವು ಜೇಡಗಳು ಅದೇ ಬಲೆಯನ್ನೇ ಬೇಟೆಯ ಮೇಲೆ ಎಸೆಯುವ ಜೇಡಗಳು, ತನ್ನ ಅದೇ ಕಾಲುಗಳನ್ನು ಬಳಸಿ ಸುತ್ತ ಮುತ್ತ ಹಾರಾಡುವ ತನ್ನ ಬೇಟೆಯ ಶಬ್ಧವನ್ನು ಕಾಲುಗಳಿಂದ ಗ್ರಹಿಸಿ, ಹೆಣೆದ ಜೇಡರ ಬಲೆಯನ್ನು ಬೀಸಿ, ಬೇಟೆಯಾಡುತ್ತವೆ. ಹೌದು ನೀವು ಕೇಳಿದ್ದು ನಿಜ. ಈ ಜೇಡದ ಕಾಲುಗಳು ಆಲಿಸುತ್ತವೆ.

© ಜೈಕುಮಾರ್ ಆರ್

ನಮಗೆಲ್ಲಾ ಕೇಳಲು ಎರಡು ಕಿವಿಗಳಿವೆ. ಹಾಗೆ ಬೇರೆ ಎಷ್ಟೋ ಜೀವಿಗಳಿಗೆ ಕೇಳಲು ಕಿವಿಗಳೇ ಇರುವುದು. ಇಲ್ಲದಿದ್ದರೆ ಶಬ್ಧ ಕೇಳುವ ಅಂಗದ ಬದಲಿಗೆ ಬೇರೇನಾದರೂ ವಿಶೇಷ ಅಂಗ ಇರುತ್ತದೆ. ಆದರೆ ನಡೆಯಲು, ಓಡಲು, ಜಿಗಿಯಲು ಬಳಸುವ ಈ ಕಾಲುಗಳನ್ನು ಇಷ್ಟು ಸಾಲದು ಎಂಬಂತೆ, ಶಬ್ಧ ಆಲಿಸಲು ‘ರಾಕ್ಷಸ ಮುಖದ ಜೇಡ(ogre-faced spider)’ಎಂಬ ಹೆಸರಿನ ಈ ಜೇಡ ಬಳಸುತ್ತದೆ ಎಂದರೆ ಆಶ್ಚರ್ಯ ಆಗುವುದಂತೂ ಖಂಡಿತ. ಇದು ಹೇಗೆ ಬೇಟೆಯಾಡುತ್ತದೆ ಗೊತ್ತೇನು? ಬಾವಲಿಯ ಹಾಗೆ ಉಲ್ಟಾ ನೇತಾಡುತ್ತಾ ತನ್ನ ನಾಲ್ಕು ಕಾಲುಗಳ ಮಧ್ಯೆ ಹೆಣೆದ ಜೇಡರ ಬಲೆಯನ್ನು ಹಿಡಿದು ಹೊಂಚು ಹಾಕಿ ಕಾಯುತ್ತಿರುತ್ತದೆ. ಯಾವುದಾದರೂ ಕೀಟ ತನ್ನ ಹಿಂದೆ ಬಂದರೆ, ಕ್ಷಣಾರ್ಧದಲ್ಲಿ ನೆಗೆದು ಅದರ ಮೇಲೆ ತನ್ನ ಬಲೆಯನ್ನು ಬೀಸುತ್ತದೆ. ಹೀಗೆ ತನ್ನ ಹಿಂದೆ ಬಂದ ಕೀಟದ ಸಣ್ಣ ಪ್ರಮಾಣದ ಶಬ್ಧವನ್ನು ಗ್ರಹಿಸಿ ಬೇಟೆಯಾಡಲು ಈ ಜೇಡಕ್ಕೆ ಏನೋ ವಿಶೇಷ ಗ್ರಹಣಾ ಶಕ್ತಿ ಅಥವಾ ಅಂಗ ಇರಬೇಕು ಎಂದು ವಿಜ್ಞಾನಿಗಳು ಊಹಿಸಿದರು. ‘ಕೆಲವೇ ವರ್ಷಗಳ ಹಿಂದೆಯ ತನಕ ನಮಗೆ ಜೇಡಗಳು ಕೇಳಬಲ್ಲವು ಎಂದು ತಿಳಿದಿರಲಿಲ್ಲ’ ಎನ್ನುತ್ತಾರೆ ಜೇ ಸ್ಟಾಫ್ ಸ್ಟ್ರೋರ್ಮ್. ಇವರು ಕಾರ್ನೆಲ್ ವಿಶ್ವವಿದ್ಯಾಲಯದ ಜೀವಶಾಸ್ತ್ರಜ್ಞ. ಇವರು ನಡೆಸಿದ ಅಧ್ಯಯನದಲ್ಲಿ ಎಷ್ಟೋ ಜೇಡಗಳು ತಮ್ಮ ಕಾಲುಗಳಿಂದ ಶಬ್ಧವನ್ನು ಗ್ರಹಿಸುತ್ತವೆ ಎಂದು ತಿಳಿದರು. ‘ನೆಗೆಯುವ ಜೇಡ’ದ ಗುಂಪು ಸಣ್ಣ ಪ್ರಮಾಣದ ಶಬ್ಧವನ್ನು ಆಲಿಸುತ್ತಿತ್ತು. ಆದರೆ ಈ ರಾಕ್ಷಸ ಜೇಡದ ಗ್ರಹಿಕೆ ಸ್ವಲ್ಪ ಹೆಚ್ಚೇ ಇತ್ತಂತೆ. ಅಂದರೆ ಸ್ವಲ್ಪ ದೊಡ್ಡ ಪ್ರಮಾಣದ ಶಬ್ಧವನ್ನೂ ಆಲಿಸಿ ಪ್ರತಿಕ್ರಿಯಿಸುತ್ತಿದ್ದವಂತೆ. ಇದಕ್ಕೆಂದು ಇವರು 13 ರಾಕ್ಷಸ ಮುಖದ ಜೇಡಗಳ ಮೆದುಳಿನೊಳಗೆ ಮೈಕ್ರೋಎಲೆಕ್ಟ್ರೋಡ್ ಗಳನ್ನು ತೂರಿಸಿದರು. ನಂತರ ವಿವಿಧ ಪ್ರಮಾಣದ ಶಬ್ಧವನ್ನು ಹೊರಡಿಸಿ ಮೆದುಳಿನೊಳಗೆ ಸೇರಿಸಿದ ಮೈಕ್ರೋಎಲೆಕ್ಟ್ರೋಡ್ ಗಳ ಮೂಲಕ ಜೇಡದ ಶಬ್ಧಕ್ಕೆ ಪ್ರತಿಕ್ರಿಯಿಸುವ ನರ ಜೀವಕೋಶಗಳನ್ನು ಅಭ್ಯಸಿಸಿದರು. ಇದರಿಂದ ತಿಳಿದದ್ದು, ಈ ಜೇಡಗಳು 100Hz ರಿಂದ10,000Hzರ ವರೆಗೆ ಶಬ್ಧವನ್ನು ಆಲಿಸಬಲ್ಲವಾಗಿದ್ದವೆಂದು. (ಮನುಷ್ಯರ ಶಬ್ಧ ಗ್ರಹಣಾ ಸಾಮರ್ಥ್ಯ 20Hz ರಿಂದ 20,000Hz). ಇದನ್ನು ಖಚಿತಪಡಿಸಿಕೊಳ್ಳಲು ಕೆಲವು ಜೇಡಗಳ ಕಾಲುಗಳನ್ನು ಕತ್ತರಿಸಿ ತೆಗೆದು ಅವುಗಳ ಮೂಲಕ ಶಬ್ಧ ಹರಿಸಿದರು. ಜೇಡರ ಆ ಕಾಲುಗಳಲ್ಲಿ ಇದ್ದ ‘ಸ್ಲಿಟ್ ಸೆನ್ಸಿಲ್ಲಾ’ ಎಂಬ ಅಂಗದಿಂದ ಶಬ್ಧವನ್ನು ಗ್ರಹಿಸುತ್ತಿದ್ದವೆಂದು ತಿಳಿದರು. ಇದರಿಂದ ಕೆಲವು ಜೇಡಗಳು ತನ್ನ ಕಾಲುಗಳ ಸಹಾಯದಿಂದ ಆಲಿಸುತ್ತವೆ ಎಂದು ಖಚಿತಪಡಿಸಿಕೊಂಡರು.

© ಜೈಕುಮಾರ್ ಆರ್

ಆದರೆ ಇವೆಲ್ಲ ಪ್ರಯೋಗಾಲಯದ ವಾತಾವರಣ. ಅದೇ ಹೊರಗಿನ ವಾತಾವರಣದಲ್ಲಿ ಹೇಗೆ? ಗಾಳಿ ಇರುತ್ತದಲ್ಲ? ಆಗ ಇವು ಏನು ಮಾಡುತ್ತವೆ? ಎಂಬ ಪ್ರಶ್ನೆಗಳು ಮೂಡಿದವೆಂದರೆ, ನೀವು ಚೆನ್ನಾಗಿ ಊಹಿಸಿ ಅರ್ಥೈಸಿಕೊಳ್ಳುತ್ತಿದ್ದೀರಿ ಎಂದರ್ಥ. ಗುಡ್. ಇದನ್ನು ತಿಳಿಯಲು ನಮ್ಮ ಸ್ಟಾಫ್ ಸ್ಟ್ರೋಮ್ ತಂಡ 25 ಜೇಡಗಳನ್ನು ಸ್ವಾಭಾವಿಕ ವಾತಾವರಣದಲ್ಲಿಟ್ಟು ಶಬ್ಧವನ್ನು ಹೊರಡಿಸಿದರು. ಆಗ ಅಲ್ಲಿದ್ದ ಜೇಡಗಳಲ್ಲಿ 13ಜೇಡಗಳು, ಹಿಂದೆ ತಿರುಗಿ ಬಲೆ ಎಸಗುತ್ತಾ ಒಂದೇ ರೀತಿಯಲ್ಲಿ ಪ್ರತಿಕ್ರಿಯಿಸಿದವಂತೆ. ಹೆಚ್ಚಾಗಿ 150Hz, 400Hz ಮತ್ತು 750Hz ಶಬ್ಧ ಪ್ರಮಾಣದಲ್ಲಿ. ಆದರೆ ಇಲ್ಲಿ ಅವರು ಗಮನಿಸಿದ ಒಂದು ಮುಖ್ಯ ಅಂಶವೆಂದರೆ, ಜೇಡಗಳು ಕಡಿಮೆ ಪ್ರಮಾಣದ ಶಬ್ಧಕ್ಕೆ ಬಲೆ ಎಸೆಯುತ್ತಾ ಬೇಟೆ ಆಡುವ ಪ್ರತಿಕ್ರಿಯೆ ಕೊಟ್ಟರೆ, ದೊಡ್ಡ ಪ್ರಮಾಣದ ಶಬ್ಧಗಳಿಗೆ ಏನೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲವಂತೆ. ಏಕಿರಬಹುದು..?

ಕೆಲವರು ಊಹಿಸಿರಬಹುದು. ಈ ದೊಡ್ಡ ಪ್ರಮಾಣದ ಶಬ್ಧಗಳು ಸಾಮಾನ್ಯವಾಗಿ ಜೇಡದ ಹತ್ತಿರ ಬಂದ ತನ್ನ ಭಕ್ಷಕಗಳಾದ ಪಕ್ಷಿಗಳದ್ದೂ ಆಗಿರಬಹುದಾದ ಸಾಧ್ಯತೆ ಹೆಚ್ಚು. ಆ ಸಮಯದಲ್ಲಿ ಯಾವುದೇ ಪ್ರತಿಕ್ರಿಯೆ ಇಲ್ಲದೇ ಇರುವುದೇ ಇವುಗಳ ರಕ್ಷಣಾ ತಂತ್ರ. ನೋಡಿದಿರಾ, ನಮ್ಮ ಬೆರಳಿನ ಗಾತ್ರವೂ ಇಲ್ಲದ ಇಂತಹ ಜೇಡಗಳ ಬುದ್ಧಿಮತ್ತೆ! ಇದೆಲ್ಲಾ ನೋಡೀದರೆ ರಾಷ್ಟ್ರಕವಿ ಕುವೆಂಪು ಅವರ ‘ಮಲೆಗಳಲ್ಲಿ ಮಧುಮಗಳು’ ನಾಟಕದ ಈ ಸಾಲುಗಳು ಇಲ್ಲಿ ಹೇಳಬೇಕೆನಿಸುತ್ತಿದೆ.

ಇಲ್ಲಿ,
ಯಾರೂ ಮುಖ್ಯರಲ್ಲ;
ಯಾರೂ ಅಮುಖ್ಯರಲ್ಲ;
ಯಾವುದೂ ಯಃಕಶ್ಚಿತವಲ್ಲ!

ವೀಡಿಯೋ ಲಿಂಕ್: https://youtu.be/xUWwVGNu38c

© ಜೈಕುಮಾರ್ ಆರ್

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Print Friendly, PDF & Email
Spread the love
error: Content is protected.