ಪ್ರಕೃತಿ ನೋಟ! ಬಣ್ಣಿಸುವ ಆಟ!!

© ಶ್ರದ್ಧಾ ಕುಮಾರಿ ಕೆ.

ನಿಸರ್ಗದ ನಿರಪರ ನಿಗೂಢತೆಗೆ ಮಾರುಹೋಗದವರು ಯಾರು? ನಿಗೂಢತೆಯ ನಿಖರತೆಯನ್ನು ಅಳೆಯಲು ಹೋದಂತೆಲ್ಲ ಅಚ್ಚರಿಯೇ ನಿಶ್ಚಯ. ದೊಡ್ಡಗಾತ್ರದ ಸಸ್ತನಿಗಳಿಂದ ಹಿಡಿದು, ಚಿಕ್ಕ-ಚಿಕ್ಕ ಇರುವೆಗಳು, ಹುಳುಹುಪ್ಪಟೆಗಳು ಕೂಡ ನಮ್ಮನ್ನು ಚಕಿತಗೊಳಿಸುತ್ತವೆ. ಹೀಗಿರುವಾಗ ಪ್ರಕೃತಿ ಸೌಂದರ್ಯಕ್ಕೆ ಶರಣಾಗಿ ಅದನ್ನು ವರ್ಣಿಸಲು ಆರಂಭಿಸಿದೆ. ನನ್ನಲ್ಲಿದ್ದ ಚಿತ್ರಕಲೆ ಹವ್ಯಾಸವೂ ಚುರುಕುಗೊಂಡಿತು.
ಪ್ರಕೃತಿಯಲ್ಲಿನ ವರ್ಣಗಳನ್ನು ವರ್ಣಿಸಲು ಕುಂಚಕ್ಕೆ ಮಾತ್ರವೇ ಸಾಧ್ಯ !
ಪ್ರಕೃತಿ ನೋಟ ! ಬಣ್ಣಿಸುವ ಆಟ !!


ಮೊದಲಿಗೆ ಪಾಕ್ಷಿಕಗಳಲ್ಲಿ ನೋಡುವ ಅಪರೂಪದ ಪ್ರಾಣಿಗಳನ್ನು ಚಿತ್ರಿಸುತ್ತಿದ್ದೆ. ಆದರೆ ನಮ್ಮ ಪರಿಸರವನ್ನು ಅನ್ವೇಷಿಸಿದಾಗ ಅದರ ಪರಿಗೆ ಮಣಿದೆ. ನಮ್ಮ ಸುತ್ತಮುತ್ತಲಿನ ಜೀವಿಗಳನ್ನು ಹಾಳೆಯ ಮೇಲೆ ಚಿತ್ರಿಸತೊಡಗಿದೆ. ಹಲವು ಮಂದಿಗೆ ಅವುಗಳ ಪರಿಚಯವಿಲ್ಲದಾಗ ಅವೆಲ್ಲವನ್ನು ವಿವರಿಸಿದೆ, ಆಶ್ಚರ್ಯಗೊಂಡರು! ಕೆಲವೊಮ್ಮೆ ಹೀಗೆಯೇ ನಮ್ಮ ಸುತ್ತಲು ಇರುವ ಜೀವಿಗಳನ್ನು ಬಿಟ್ಟು ಎಲ್ಲೋ ದೂರದಲ್ಲಿರುವ ವಿಷಯಗಳನ್ನು ತಿಳಿದುಕೊಳ್ಳಲು ಹವಣಿಸುತ್ತೇವೆ. ನಮ್ಮ ದೇಶವು ಅಗಣಿತ ಸಂಖ್ಯೆಯಲ್ಲಿ ಜೀವ ವೈವಿಧ್ಯತೆಯನ್ನು ಹೊಂದಿದೆ. ಅವುಗಳನ್ನು ಆಸ್ವಾದಿಸಬೇಕು, ಗೌರವಿಸಬೇಕು ಹಾಗೂ ಸಂರಕ್ಷಿಸಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ಬರಿಯ ಚಿತ್ರಪಟಗಳಿಗೆ ಅವು ಸೀಮಿತವಾಗಿರುತ್ತವೆ!

ಪ್ರಾಣಿ-ಪಕ್ಷಿಗಳ ನಿತ್ಯದ ಕಾರ್ಯವೈಖರಿ ಮತ್ತು ಹಸಿರು ಗಿಡಗಳ ನಿರ್ಲಿಪ್ತತೆ ಒಂದಕ್ಕೊಂದು ಬೆಸೆದುಕೊಂಡು ನಮ್ಮನ್ನು ಬೆರಗುಗೊಳಿಸುತ್ತವೆ. ಸಹಸ್ರ ಜಂತುಗಳು, ವೈವಿಧ್ಯಮಯ ಪಕ್ಷಿಗಳು, ನಿಬ್ಬೆರಗಾಗಿಸುವ ಪ್ರಾಣಿಸಂಕುಲ! ಅವುಗಳ ಬಣ್ಣಗಳನ್ನು ಪಟ್ಟಿ ಮಾಡಲು ಸಾಧ್ಯವೇ? ಆಕಾರಗಳನ್ನು ಹೆಸರಿಸಲು ಸಾಧ್ಯವೇ? ಮೂಕವಿಸ್ಮಯಗೊಳಿಸುವ ವಿವಿಧತೆ. ಅಂತೆಯೇ ಒಂದು ದಿನ ಪ್ರಕೃತಿಯ ಹಸಿರಿನ ಮಧ್ಯೆ ಒಂದು ಸಣ್ಣ ಜೇಡವು ಬಲೆ ಹೆಣೆಯುವುದನ್ನು ಕಂಡೆ. ಸೂಕ್ಷ್ಮವಾಗಿ ಗಮನಿಸಿದಾಗ ಅದು ಹತ್ತು – ಹಲವು ಪ್ರಯತ್ನಗಳ ನಂತರ ಯಶಸ್ವಿಯಾದದ್ದು ತೋರಿತು. ತದನಂತರ ತಿಳಿಯಿತು, ಜೇಡಗಳಲ್ಲಿಯೂ ಸಾಕಷ್ಟು ವಿಧಗಳಿವೆ ಎಂದು. ಅವುಗಳ ಬದುಕಿನ ಬಗೆಗಿನ ಸಾಮರ್ಥ್ಯ ನನ್ನನ್ನು ಚಿತ್ರ ಬಿಡಿಸಲು ಪ್ರೇರೇಪಿಸಿತು. ಇನ್ನೊಂದು ದಿನ ಚಿಟ್ಟೆ-ಪತಂಗಗಳ ಜೀವನ ಚಕ್ರವನ್ನು ಅರಿತೆ. ಪುನಃ ನನ್ನ ಬಣ್ಣ ಕುಂಚಗಳಿಗೆ ಸ್ವಲ್ಪ ಕೆಲಸ. ಪ್ರಾಣಿ ಪ್ರಪಂಚ ಎಷ್ಟು ಬಗೆಯ ಬಣ್ಣಗಳನ್ನು ಹೊಂದಿವೆ ಎಂದು ಯೋಚಿಸಿದರೆ ವಿಸ್ಮಯಗೊಳ್ಳುತ್ತೇವೆ. ಬಣ್ಣದ ಪೆಟ್ಟಿಗೆಯಲ್ಲಿರುವ ವರ್ಣಗಳು ಸಾಲುವುದೇ ಇಲ್ಲ!
ಜೀವವೈವಿಧ್ಯ ಎಷ್ಟೊಂದು ವಿಸ್ತಾರ ಎಂದರೆ, ವಿಜ್ಞಾನಿಗಳು ದಿನಕ್ಕೊಂದು ಹೊಸ ಜೀವಿಯನ್ನು ನಾಮಕರಣ ಮಾಡುತ್ತಿರುತ್ತಾರೆ. ಇಂದು ನನಗೆ ಹೊಸ ಪ್ರಾಣಿ-ಪಕ್ಷಿ, ಹುಳು-ಹುಪ್ಪಟೆ ಹೀಗೆ ಯಾವುದೇ ಜೀವಿಯ ಪರಿಚಯವಾದಂತೆಲ್ಲ ಅದನ್ನು ಚಿತ್ರಿಸುವ ಆಸೆ. ಅದರಿಂದ ಮನಸ್ಸಿನ ನೆಮ್ಮದಿ ಮತ್ತು ಏಕಾಗ್ರತೆ ಹೆಚ್ಚುತ್ತದೆ. ನಾಜೂಕಾಗಿ ದೃಷ್ಟಿ ನೆಟ್ಟರೆ ನಿಧಾನವಾಗಿ ನಿಸರ್ಗದ ಮಡಿಲಿನಲ್ಲಿ ಲೀನವಾಗುವ ಭಾಸ !
ಲೇಖನ : ಶ್ರದ್ಧಾ ಕುಮಾರಿ ಕೆ.
ದಕ್ಷಿಣ ಕನ್ನಡ ಜಿಲ್ಲೆ