ಕಾಕನಕೋಟೆಯ ಹಾದಿಯಲ್ಲಿ

ಕಾಕನಕೋಟೆಯ ಹಾದಿಯಲ್ಲಿ

© ಶ್ರೀಕಾಂತ್ ಎ. ವಿ

ಬೆಳಗಿನ ಝಾವ ಸರಿಯಾಗಿ 2.30 ಕ್ಕೆ ಅಲರಾಂ ಮೊಳಗಿಸಿ ನನ್ನ ಮೊಬೈಲ್ ಫೋನ್ ತನ್ನ ಕಾರ್ಯನಿಷ್ಠತೆಯನ್ನು ನಿರೂಪಿಸುತ್ತಿತ್ತು. ಅರೆಬರೆಯಾಗಿ ನನ್ನ ಕಣ್ಗಳನ್ನು ತೆರೆದು ಶಹಬ್ಬಾಸ್ ಹೇಳುವ ರೀತಿ ಅದರ ಪರದೆಯ ಮೇಲೆ ಕೈಸವರಿ ಅಲಾರಾಂ ಸದ್ದನ್ನು ನಿಲ್ಲಿಸಿದೆ. ಇತರೆ ದಿನಗಳಲ್ಲಿ ನನಗೆ ಕಿರಿಕಿರಿ ಎನಿಸುತ್ತಿದ್ದ ಅಲಾರಾಂ ಸದ್ದು ಇಂದು ವೆಂಕಟೇಶ್ವರ ಸುಪ್ರಭಾತದಂತೆ ಹಿತವೆನಿಸಿತು. ಇದಕ್ಕೆ ಬಲವಾದ ಕಾರಣವೂ ಇಲ್ಲವೆಂದೇನಲ್ಲ. ಇಂದು ಮೊದಲ ಬಾರಿಗೆ ಕಾಕನಕೋಟೆ ಕಾಡಿಗೆ ಹೊರಡುವ ಕಾರ್ಯಕ್ರಮವಿತ್ತು.

ಕಾಕನಕೋಟೆ ಕಬಿನಿಯ ನದಿಯ ಹಿನ್ನೀರಿನ ಒಂದು ಬದಿಯಲ್ಲಿ  ಹರಡಿರುವ ವಿಶಾಲ ಅರಣ್ಯ. ನಮ್ಮ ಮಲೆನಾಡಿನ ಕಾಡುಗಳಿಗಿಂತ ಬಹಳ ವಿಭಿನ್ನ. ಇಲ್ಲಿ ಮುಗಿಲೆತ್ತರದ ಮರಗಳಿಲ್ಲ, ಮರಗಳ ನಡುವೆ ಹೆಬ್ಬಾವುಗಳಂತೆ ತೂಗಾಡುವ ಬಳ್ಳಿಗಳಿಲ್ಲ, ವರುಷಪೂರ್ತಿ ಹರಿಯುವ ಅಬ್ಬಿಯ ನೀರಿಲ್ಲ. ಇಲ್ಲಿಯ ಕಾಡು ಬಹುತೇಕ ಸಮತಟ್ಟಾದ ನೆಲದ ಮೇಲೆ ಹರಡಿ ನಿಂತಿದೆ, ಉಬ್ಬು ತಗ್ಗಿನ ಬೆಟ್ಟ ಗುಡ್ಡಗಳಿಲ್ಲ. ನಮ್ಮ ಮಲೆನಾಡಿನ ಕಾಡುಗಳಲ್ಲಿ ಮರಗಿಡಗಳ ದಟ್ಟತೆಯಿಂದಾಗಿ, ಅವುಗಳ ಎತ್ತರದಿಂದಾಗಿ ವನ್ಯಜೀವಿಗಳನ್ನು ನೋಡುವುದು ದುಸ್ತರವಾದ ಕೆಲಸ. ಆದರೆ ಕಬಿನಿ ಹಿನ್ನೀರಿನ ವಿಶಾಲ ನಾಗರಹೊಳೆ (ಕಾಕನಕೋಟೆಯು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಒಂದು ಭಾಗ) ಹಾಗೂ ಬಂಡೀಪುರ ಅರಣ್ಯಗಳಲ್ಲಿ ವನ್ಯಮೃಗಗಳ ವೀಕ್ಷಣೆ ಸುಲಭದ ಕೆಲಸ. ಇದೇ ಕಾರಣವೋ ಏನೋ, ಹೆಚ್ಚಿನ ಸಂಖ್ಯೆಯ ಹುಲಿ, ಚಿರತೆಗಳಿದ್ದರೂ ಮಲೆನಾಡಿನ ಭದ್ರಾ ಅಭಯಾರಣ್ಯ, ವನ್ಯಜೀವಿ ಪ್ರೇಮಿಗಳ ಪಾಲಿನ ನೆಚ್ಚಿನ ತಾಣವಾಗುವುದರಲ್ಲಿ ಕೊಂಚ ಹಿಂದೆ ಉಳಿದಿದೆ.

© ವಿನೋದ್ ಕುಮಾರ್ ವಿ ಕೆ

ಕಾಕನಕೋಟೆಯ ಸಫಾರಿ ಎಂದರೆ ಬಹಳ ಜನಪ್ರಿಯ. ಇಲ್ಲಿನ ಸಫಾರಿಗೆ ಟಿಕೆಟ್ ದೊರೆಯುವುದೆಂದರೆ ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನದ ಟಿಕೆಟ್ ಸಿಗುವುದಕ್ಕೆ ಸಮ. ಹಾಗಾಗಿಯೇ ಬೆಳಿಗ್ಗೆ 6.30 ಕ್ಕೆ ಆರಂಭವಾಗುವ ಸಫಾರಿಗೆ 3.00 ಗಂಟೆಗೇ ಹೋಗಿ ಸಾಲುಗಟ್ಟಬೇಕು. ನಾವು ತಂಗಿದ್ದ ಜಾಗ ಸಫಾರಿಯ ಬುಕ್ಕಿಂಗ್ ಕೌಂಟರಿನಿಂದ 30 ಕಿಮೀ ದೂರದಲ್ಲಿತ್ತು. ಇಬ್ಬನಿ ಕವಿದ ದಾರಿಯಲ್ಲಿ ನಮ್ಮ ಬಂಡಿ 70 ಕಿ.ಮೀ. ವೇಗದಲ್ಲಿ ಸಾಗುತ್ತಿತ್ತು. ಟಿಕೆಟ್ ಕ್ಯೂನಲ್ಲಿ ನಾವೇ ಮೊದಲಿಗರಾಗಿರಬೇಕೆಂಬ ಧಾವಂತದಲ್ಲಿ ಸಾಗುತ್ತಿದ್ದೆವು. ತಲೆ ತುಂಬ ಬರಿ ಹುಲಿ ಚಿರತೆಯ ಆಲೋಚನೆಯೇ ತುಂಬಿದ್ದರಿಂದ ರಸ್ತೆ ಬದಿಯಲ್ಲಿ ಗೋಡೆ ಹಾರಿದ ಬೆಕ್ಕನ್ನೂ ಸಹ ಚಿರತೆಯ ಮರಿಯೇನೋ ಎನ್ನುವಷ್ಟರ ಕುತೂಹಲದಲ್ಲಿ ನೋಡುತ್ತಿದ್ದೆ. ನಾವು ತಲುಪಬೇಕಾದ ಜಾಗ ಇನ್ನೂ ಎರಡು ಕಿ.ಮೀ. ಇರುವಾಗ ರಸ್ತೆ ಬದಿಯಲ್ಲಿ ಯಾವುದೋ ಮತ್ತೊಂದು ಬೆಕ್ಕು ಮರ ಏರುತ್ತಿರುವಂತೆ ಕಾಣಿಸಿತು. ಹತ್ತಿರ ಹೋದಾಗಲೇ ಗೊತ್ತಾದದ್ದು ಅದು ಬೆಕ್ಕಲ್ಲ ಚಿರತೆಯೆಂದು. ತಕ್ಷಣವೇ ಬ್ರೇಕು ಕಂಡ ನಮ್ಮ ಬಂಡಿ ಝರ್ರೆಂದು ಸದ್ದು ಮಾಡಿ ನಿಂತಿತು. ಇದರಿಂದ ಕೊಂಚ ಗಲಿಬಿಲಿಗೊಂಡ ಅದು ಮರ ಏರುವುದ ಮರೆತು ಅದರ ಬುಡದಲ್ಲೇ ಕುಳಿತು ಬಿಟ್ಟಿತು. ಗಾಡಿ ಹಿಂದಕ್ಕೆ ಚಲಿಸುತ್ತ ಅದರ ಬಳಿ ಸರಿದ ಕೂಡಲೆ ಪಕ್ಕದ ತೋಟದ ಕತ್ತಲೆಯಲ್ಲಿ ಮಾಯವಾಯಿತು. ಕೇವಲ 30 ಸೆಕೆಂಡುಗಳ ಈ ಘಟನೆ ಉಂಟುಮಾಡಿದ ರೋಮಾಂಚನ ಮಾತ್ರ ಎಂದಿಗೂ ಅವಿಸ್ಮರಣೀಯ. ಕಾಡಿನಲ್ಲಿ ಹುಡುಕಿ ಹೊರಟ ಪ್ರಾಣಿ ಅಚಾನಕ್ಕಾಗಿ ರಸ್ತೆಯಲ್ಲೇ ದರ್ಶನ ನೀಡಿ ನಮ್ಮ ಸಫಾರಿಯ ಪ್ರಯಾಣಕ್ಕೆ ಶುಭ ಸೂಚನೆ ನೀಡಿ ಹೋಯಿತು.

© ಶ್ರೀಕಾಂತ್ ಎ. ವಿ

ನಮಗಿಂತಲೂ ಮೊದಲೇ ಬಿಳಿಯ ಕಾರೊಂದು ಅಲ್ಲಿ ನಿಂತು ಕಾಯುತ್ತಿದ್ದದ್ದನ್ನು ಕಂಡು ನಾವು ಎರಡನೆಯವರಾದೆವಲ್ಲ ಎಂದು ಕೊಂಚ ಬೇಸರಗೊಂಡೆವು. ಸರದಿ ಸಾಲಿನಲ್ಲಿ ನಿಂತು ಇನ್ನೂ ಮೂರು ಗಂಟೆ ಕಾಯುವುದಿತ್ತು. ಹೊತ್ತು ಕಳೆದಂತೆ ಸಾಲು ದೊಡ್ಡದಾಗುತ್ತಿತ್ತು. ರಾತ್ರಿಯೆಲ್ಲ ಡ್ರೈವ್ ಮಾಡಿಕೊಂಡು ದೂರದ ಬೆಂಗಳೂರಿನಿಂದೆಲ್ಲ ಜನ ಅಷ್ಟೊತ್ತಿಗೇ ಬರುತ್ತಿದ್ದರು. ಅವರಿವರೊಡನೆ ಹರಟುತ್ತ ಸಮಯ ಕಳೆಯುವುದು ಚಳಿಯ ಮರೆಯಲು ಅನಿವಾರ್ಯವಾಗಿತ್ತು. ವರ್ಷಕ್ಕೆ ನೂರು ಬಾರಿ ಸಫಾರಿ ಮಾಡುವವರಿಂದ ಹಿಡಿದು ನನ್ನಂತೆಯೇ ಅದೇ ಮೊದಲ ಬಾರಿಗೆ ಕಾಕನಕೋಟೆಗೆ ಬಂದಿರುವವರೊಡನೆಯೂ ಕುಶಲೋಪರಿ ನಡೆಯಿತು. ಎರಡೂ ವರ್ಗದವರಲ್ಲೂ ಕುತೂಹಲ ಮಾತ್ರ ಒಂದೇ ಸಮನಾಗಿ ಇದ್ದುದ್ದನ್ನು ಕಂಡು ಅಚ್ಚರಿಯೆನಿಸಿತು. 6 ಗಂಟೆಗೆ ಟಿಕೆಟ್ ದೊರೆತ ಬಳಿಕ ಬಿಸಿಬಿಸಿ ಚಹಾ ಕುಡಿದು ಸನ್ನದ್ಧರಾದೆವು. ಸಫಾರಿಯ ಬಸ್ಸಿನ ಚಾಲಕರು ರಥದ ಸಾರಥಿಯಂತೆ ಕಂಡರು. ಒಂದು ನಿಮಿಷವೂ ಆಚೀಚೆ ಆಗದಂತೆ 6.30 ಕ್ಕೆ ಸರಿಯಾಗಿ ಮೂರು ಬಸ್ಸುಗಳು ಹೊರಟವು. ಒಂದು ಬಸ್ಸು ಕಾಡಿನ ಹಾದಿಯಲ್ಲಿ ಧೂಳೆಬ್ಬಿಸಿಕೊಂಡು ಮಿಂಚಿನ ವೇಗದಲ್ಲಿ ಕಣ್ಮರೆಯಾಯಿತು, ಇನ್ನೊಂದು ಬಸ್ಸು ಬೇರೆ ದಿಕ್ಕಿಗೆ ಸಾಗಿತು. ನಮ್ಮ ಬಸ್ಸು ಮಾತ್ರ ಬಸುರಿ ಹೆಂಗಸನ್ನು ಹೊತ್ತ ಎತ್ತಿನ ಬಂಡಿಯಂತೆ ಕುಲುಕಾಡುತ್ತಾ ಮಂದಗತಿಯಲ್ಲಿ ಸಾಗುತ್ತಿತ್ತು. ನಾವಿನ್ನೂ ಕ್ಯಾಮೆರಾದ ಸೆಟ್ಟಿಂಗ್ಸ್ ಸರಿಮಾಡಿಕೊಳ್ಳುತ್ತಿರುವಾಗಲೇ ಕೊನೆಯ ಸೀಟಿನಿಂದ “Leopard….Leopard” ಎಂದು ಕೂಗಿದ ಹೆಣ್ಣಿನ ಧ್ವನಿಯೊಂದು ಕೇಳಿತು. ಕಿಟಕಿ ಆಚೆಗಿನ ಮಂದ ಬೆಳಕಿನಲ್ಲಿ ಅದನ್ನು ಹುಡುಕಲು ನನ್ನ ಕಣ್ಣುಗಳು ಕೊಂಚ ತಡಕಾಡಿದವು. ಅಚ್ಚರಿಯೆಂಬಂತೆ ಅಲ್ಲಿ ಕಂಡದ್ದು ಒಂದಲ್ಲ, ಎರಡೆರಡು ಚಿರತೆಗಳು. ಅಲ್ಲಿಂದ ಸುಮಾರು ಅರ್ಧ ಗಂಟೆಯವರಗೂ ನಮ್ಮ ಕ್ಯಾಮೆರಾಗಳಿಗೆ ವಿಶ್ರಾಂತಿಯೇ ಸಿಗಲಿಲ್ಲ.

© ಶ್ರೀಕಾಂತ್ ಎ. ವಿ

ಚಿರತೆಗಳೆರಡು ಪ್ರೇಮಸಲ್ಲಾಪಕ್ಕೆ ಅಣಿಯಾಗುತ್ತಿದ್ದವು. ಬಲಿಷ್ಠವಾಗಿ ಬೆಳೆದ ಎರಡು ಪ್ರೌಢ ಚಿರತೆಗಳು ಪರಸ್ಪರ ಸಂಭಾಷಣೆಯಲ್ಲಿ ತೊಡಗಿದ್ದವು. ಈ ಪ್ರಕ್ರಿಯೆಯಲ್ಲಿ ಹೆಣ್ಣು ಕೊಂಚ ಹೆಚ್ಚು ಸಕ್ರಿಯವಾಗಿರುತ್ತದೆ. ತನ್ನ ಸಹಮತವನ್ನು ಅನೇಕ ರೂಪದಲ್ಲಿ ವ್ಯಕ್ತಪಡಿಸುತ್ತ ಗಂಡಿಗೆ ಆಮಂತ್ರಣ ಕೊಡುತ್ತದೆ. ಮೆಲು ಧ್ವನಿಯಲ್ಲಿ ಆಗಾಗ ತೇಗಿದಂತೆ ಸದ್ದು ಮಾಡುತ್ತ, ತನ್ನ ಮೈಯನ್ನು, ಕುತ್ತಿಗೆಯನ್ನು ಮರದ ಬುಡಕ್ಕೆ ಉಜ್ಜುತ್ತ, ಮರದ ಕೊಂಬೆಯನ್ನೇರಿ ಕುಳಿತು ಗಂಡನ್ನೇ ದಿಟ್ಟಿಸುತ್ತ, ಅತ್ತಿತ್ತ ಓಡಾಡುತ್ತಾ, ಅಲ್ಲಲ್ಲಿ ಮೂತ್ರ ಸಿಂಪಡಿಸಿ ಗಂಡನ್ನು ಮಿಲನಕ್ಕೆ ಕರೆಯುತ್ತದೆ. ಗಂಡು ಸಹ ಇಂತಹುದೇ ಕೆಲವು ಭಂಗಿಗಳಿಂದ ತನ್ನ ಉತ್ಸುಕತೆನ್ನು ವ್ಯಕ್ತಗೊಳಿಸುತ್ತದೆ. ಚಿರತೆಗಳಲ್ಲಿ ಮಿಲನ ಕ್ರಿಯೆಯು ಕೆಲವೇ ಸೆಕೆಂಡುಗಳಲ್ಲಿ ಮುಗಿದು ಬಿಡುತ್ತದೆ. ಕ್ರಿಯೆಯು ಮುಗಿಯುವ ಕೊನೆಯಲ್ಲಿ ಗಂಡು  ಹೆಣ್ಣಿನ ಕುತ್ತಿಗೆಯನ್ನು ಬಲವಾಗಿ ಕಚ್ಚಿ ಹಿಡಿಯುತ್ತದೆ, ಕೊನೆಯಲ್ಲಿ ದೂರಕ್ಕೆ ಹಾರಿ ಬಿಡುತ್ತದೆ. ಹೀಗೆ ಮಾಡದಿದ್ದರೆ ಹೆಣ್ಣು ನೋವನ್ನು ತಾಳಲಾರದೆ ಗಂಡಿನ ಮೇಲೆ ದಾಳಿ ಮಾಡುವ ಸಂಭವವೇ ಹೆಚ್ಚು. ಇಂತಹ ನಡವಳಿಕೆ ನಮ್ಮಲ್ಲೂ ಇದ್ದಿದ್ದರೆ ಮೊದಲ ರಾತ್ರಿಯಲ್ಲೇ ಅದೆಷ್ಟು ಗಂಡಸರ ಪ್ರಾಣ ಹೋಗುತ್ತಿತ್ತೋ ಏನೋ??

ಆದರೆ ಚಿರತೆಗಳ ಮಿಲನ ಕ್ರಿಯೆಯ ದೃಶ್ಯವೈಭವ ನೋಡುವುದು ನಮ್ಮ ಅದೃಷ್ಟದ ಪಾಲಿಗಿರಲಿಲ್ಲ. ನಾವಿದ್ದೇವೆಂಬ ನಾಚಿಕೆಯಿಂದಲೋ ಏನೋ ಹೆಣ್ಣು ಪೊದೆಗಳ ಮರೆಗೆ ಸಾಗಿತು, ಗಂಡು ಕೂಡ ಸೂಪರ್ ಮಾರ್ಕೆಟಿನಲ್ಲಿ ಹೆಂಡತಿ ಹಿಂದೆ ಬ್ಯಾಗುಗಳನ್ನು ಹೊತ್ತು ಸಾಗುವ ಗಂಡನಂತೆ ಅಮಾಯಕ ಮೊಗವ ಹೊತ್ತು ಹೆಣ್ಣನ್ನು ಹಿಂಬಾಲಿಸಿತು. ಆದರೆ ನಮ್ಮ ಕ್ಯಾಮೆರಾಗಳ ಪಟಪಟ ಸದ್ದು ಅವುಗಳ ಮಿಲನಕ್ಕೆ ರಸಭಂಗವುಂಟುಮಾಡಿತು ಅನಿಸುತ್ತದೆ. ತಕ್ಷಣವೇ ಹೊರಬಂದು ನಮ್ಮನ್ನು ನೋಡಿ ಹೀನಾಮಾನ ಬೈದುಕೊಂಡು ಬೇರೆಡೆಗೆ ಹೊರಟು ಹೋದವು. ಆದರೆ ನಮ್ಮ ಕ್ಯಾಮೆರಾಗಳನ್ನು ಮಾತ್ರ ನಿರ್ಲಜ್ಜೆಯಿಂದ ಒಳ್ಳೊಳ್ಳೆ ಫೋಟೋಗಳಿಂದ ತುಂಬಿಕೊಂಡೆವು.

© ಶ್ರೀಕಾಂತ್ ಎ. ವಿ


ಲೇಖನ : ಶ್ರೀಕಾಂತ್ ಎ. ವಿ
ಶಿವಮೊಗ್ಗ ಜಿಲ್ಲೆ

Spread the love
error: Content is protected.