ಪ್ರಕೃತಿ ಬಿಂಬ
© ಸಂತೋಷ್ ಎನ್, ಸಣ್ಣ ಕಳ್ಳಿಪೀರ
ಸಣ್ಣ ಕಳ್ಳಿಪೀರ ಹಕ್ಕಿಯು (Bee eaters) ಮೀರಾಪಿಡೇ ಕುಟುಂಬಕ್ಕೆ ಸೇರುತ್ತದೆ. ಇದರ ರೆಕ್ಕೆ ಮತ್ತು ನೆತ್ತಿ ಹಸಿರು-ಕಂದು ಬಣ್ಣದಿಂದ ಕೂಡಿರುತ್ತದೆ. ಹೆಸರಿಗೆ ತಕ್ಕಂತೆ ಮಧು ಸಂಗ್ರಹಣೆಗೆ ಹೊರಡುವ ಜೇನು ಹುಳುಗಳನ್ನು ಬೇಟೆಯಾಡುತ್ತವೆ. ಜೊತೆಗೆ ಇತರ ಕೀಟಗಳಾದ ಏರೋಪ್ಲೇನ್ ಚಿಟ್ಟೆ ಮತ್ತು ಪತಂಗಗಳನ್ನು ಬೇಟೆಯಾಡುತ್ತವೆ. ಈ ಹಕ್ಕಿಯು ಮರದ ಕೊಂಬೆಯ ಮೇಲೆ ಕುಳಿತು ಹಾರುತ್ತಿರುವ ಕೀಟಗಳನ್ನು ವೀಕ್ಷಿಸುತ್ತಾ, ಹುಳುಗಳನ್ನು ಕಂಡೊಡನೆ ಅಟ್ಟಾಡಿಸಿ ಹಿಡಿದು ಮತ್ತದೇ ಕೊಂಬೆ ಮೇಲೆ ಬಂದು ಕುಳಿತು ಹುಳುಗಳನ್ನು ಕೊಕ್ಕಿನಿಂದ ಕೊಂಬೆಗೆ ಹೊಡೆದು, ಹುಳುಗಳನ್ನು ಕುಕ್ಕಿ-ಸಾಯಿಸಿ ನುಂಗುತ್ತವೆ. ಇವುಗಳನ್ನು ಸ್ಥಳೀಯವಾಗಿ ನೊಣಬಾಕ, ಗಣಿಗಾರಲು ಹಕ್ಕಿ ಎಂದು ಕರೆಯುತ್ತಾರೆ. ಸಣ್ಣ ಕಳ್ಳಿಪೀರಗಳು ಬೇರೆ ಹಕ್ಕಿಗಳಂತೆ ಮರದಲ್ಲಿ ಗೂಡುಕಟ್ಟದೇ, ಮಣ್ಣಿನ ದಂಡೆಯಂಚಿನ ಬಿಲಗಳಲ್ಲಿ ಗೂಡು ಮಾಡಿ ಸಾಮೂಹಿಕವಾಗಿ ಜೀವಿಸುತ್ತವೆ.
© ಸಂತೋಷ್ ಎನ್, ಚಮಚದ ಕೊಕ್ಕು
ಚಮಚದ ಕೊಕ್ಕು (ಸ್ಪೂನ್ ಬಿಲ್) ಹಕ್ಕಿಯು ಕೆಂಬರಲುಗಳು (ಐಬೀಸ್ ಮತ್ತು ಸ್ಪೂನ್ ಬಿಲ್) ಪ್ರಭೇದಕ್ಕೆ ಸೇರಿರುವ ಹಕ್ಕಿಯಾಗಿದೆ. ಇದರ ದೇಹ, ಕೊಕ್ಕು ಮತ್ತು ಕಾಲುಗಳನ್ನು ಹೊರತುಪಡಿಸಿ ಮೈಯೆಲ್ಲಾ ಬಿಳಿ ಬಣ್ಣದ್ದಾಗಿದ್ದು, ಕೊಕ್ಕಿನ ತುದಿ ಹಳದಿ ಬಣ್ಣದಿಂದ ಕೂಡಿರುತ್ತದೆ. ಈ ಪಕ್ಷಿಯ ಮೂಲ ಯುರೋಪ್ ದೇಶಗಳಾದ ಇಂಗ್ಲೆಂಡ್, ಸ್ಪೇನ್, ಆಸ್ಟ್ರೀಯ, ಹಂಗೇರಿ ಮತ್ತು ಗ್ರೀಸ್. ಇವು ಚಳಿಗಾಲದಲ್ಲಿ ಉಷ್ಣವಲಯದ ದೇಶಗಳಾದ ಆಫ್ರಿಕಾ ಮತ್ತು ಭಾರತಕ್ಕೆ ವಲಸೆ ಬರುತ್ತದೆ. ಕರ್ನಾಟಕದ ರಂಗನತಿಟ್ಟು ಕೂಡ ಇವುಗಳಿಗೆ ಆಶ್ರಯ ತಾಣ. ಇದರ ಕಾಲುಗಳು ಕೊಕ್ಕರೆಯಂತೆ ತೆಳ್ಳಗಿದ್ದು, ಕಡಿಮೆ ಆಳದ ಜಲ ಪ್ರದೇಶಗಳಲ್ಲಿ, ಬಂಡೆಗಳ ನಡುವೆ ಓಡಾಡಲು ಸಹಾಯಕವಾಗಿವೆ. ಇದರ ಮುಖ್ಯ ಆಹಾರ ಚಿಕ್ಕ ಮೀನು, ಏಡಿ, ಕಪ್ಪೆ, ಸೀಗಡಿ ಮತ್ತು ಇತರ ಜಲಚರಗಳಾಗಿವೆ. ಈ ಪಕ್ಷಿಯು ಇತರ ಪಕ್ಷಿಗಳಂತೆ ಜಲಚರಗಳನ್ನು ಹೊಂಚುಹಾಕಿ ಹಿಡಿಯದೇ ಕೊಕ್ಕನ್ನು ನೀರಿನಲ್ಲಿ ಮುಳುಗಿಸಿ-ಮೇಲೆತ್ತಿ ನೀರನ್ನು ಸೊಸುತ್ತದೆ. ಆಗ ಸಣ್ಣ ಮೀನು, ಕಪ್ಪೆ ಯಂತಹ ಚಿಕ್ಕ ಜಲಚರಗಳು ಇದರ ಬಾಯಿಗೆ ಬೀಳುತ್ತವೆ. ಇದು ನೀರಿನ ನಡುಗಡ್ಡೆಗಳಂತಹ ನೆಲಮಟ್ಟದಲ್ಲಿ ಜಲಸಸ್ಯಗಳ ನಡುವೆ ಗೂಡು ಕಟ್ಟುತ್ತದೆ.
© ಸಂತೋಷ್ ಎನ್, ಉಲಿಯಕ್ಕಿ
ಉಲಿಯಕ್ಕಿ ಪಕ್ಷಿಯ ವಾಸಸ್ಥಾನವು ಭಾರತ, ಪಾಕಿಸ್ತಾನದಿಂದ ದಕ್ಷಿಣ ಚೀನಾವರೆಗೆ ವಿಸ್ತರಿಸಲ್ಪಡುತ್ತದೆ. ಈ ಹಕ್ಕಿಯು ಜೌಗುಪ್ರದೇಶ, ಹುಲ್ಲುಗಾವಲು ಮತ್ತು ಮರಗಳಿಂದ ಆವೃತವಾದ ಕಾಡಿನಲ್ಲಿ ಕಂಡುಬರುತ್ತದೆ. ನಾಗರಿಕ ವಾಸಸ್ಥಾನಗಳಿರುವ ಉದ್ಯಾನವನಗಳಲ್ಲಿ ಕೂಡ ಕಂಡುಬರುತ್ತದೆ. ಚಿಕ್ಕದಾದ ಕೊಕ್ಕು, ಉದ್ದವಾದ ಬಾಲದ ರೆಕ್ಕೆ, ಬಲಿಷ್ಠವಾದ ಕಾಲುಗಳು, ಆಹಾರ ಅನ್ವೇಷಣೆ ಸಂದರ್ಭದಲ್ಲಿ ಪೊದೆ, ಗಿಡ ಮತ್ತು ಹುಲ್ಲಿನ ಗರಿಗಳ ಮೇಲೆ ನೆಗೆಯಲು ಸಹಾಯಕವಾಗಿವೆ. ಇದು ಗಿಡ-ಗಂಟೆ ನಡುವೆ ನೆಗೆಯುವಾಗ “ಚಿಕ್ಚಿಕ್” ಎಂದು ಸದ್ದನ್ನು ಹೊರಡಿಸುತ್ತದೆ. ಈ ಹಕ್ಕಿಯು ಆಹಾರವಾಗಿ ಹುಳು-ಹುಪ್ಪಟೆಗಳನ್ನು ಮತ್ತು ಹೂವಿನ ಮಕರಂದವನ್ನು ಸೇವಿಸುತ್ತದೆ.
ಚಿತ್ರಗಳು – ವಿವರಣೆ : ಸಂತೋಷ್ ಎನ್.
ಬೆಂಗಳೂರು ಜಿಲ್ಲೆ