ಬಾಲದಂಡೆ ಹಕ್ಕಿ

ಬಾಲದಂಡೆ  ಹಕ್ಕಿ

© ನಾಗೇಶ್ ಕೆ.ಜಿ

ಕಾಡಿನ ಸೊಬಗು ನೋಡುಗರಿಗೆ ಬಲು ಸೊಗಸು. ಆದರೆ ಕೆಲವೊಂದು ಪ್ರಾಣಿ-ಪಕ್ಷಿಗಳು ತನ್ನ ವಿಚಿತ್ರ ಮತ್ತು ವಿಭಿನ್ನ ಗುಣಲಕ್ಷಣ ಹಾಗೂ ಬಣ್ಣಗಳಿಂದ ನೋಡುಗರನ್ನು ಮನಸೂರೆಗೊಳಿಸುತ್ತವೆ. ಅಂತಹ ವಿಶಿಷ್ಟ ಗುಣಲಕ್ಷಣ ಹಾಗೂ ಬಣ್ಣಗಳಿಂದ ಕೂಡಿದ ಪಕ್ಷಿ ಈ ರಾಜಹಕ್ಕಿ ಅಥವಾ ಬಾಲದಂಡೆ ಹಕ್ಕಿ..

ಇವುಗಳು ನೋಡಲು ಸುಂದರವಾದ ಪಕ್ಷಿಗಳು ಅದರಲ್ಲೂ ಗಂಡು ಪಕ್ಷಿಗೆ ರಿಬ್ಬನ್ನಿನಂತಹ ಉದ್ದನೆಯ ಬಾಲ ಮತ್ತು ದೇಹ ಬಿಳಿ ಬಣ್ಣದಿಂದ ಕೂಡಿದ್ದು, ನೋಡಲು ಅತ್ಯಾಕರ್ಷಕವಾಗಿ ಕಾಣುತ್ತದೆ. ಈ ಉದ್ದನೆಯ ಬಾಲ ಮತ್ತು ಬಿಳಿ ಬಣ್ಣದ ಪಕ್ಷಿ ಬೆಳೆಯುತ್ತಾ ರೂಪುಗೊಳ್ಳುತ್ತದೆ. ಇವುಗಳು ಹಾರಾಡುತ್ತಲೆ ತಮ್ಮ ಬೇಟೆ, ಅಂದರೆ ನೊಣ, ಕೀಟ, ಚಿಟ್ಟೆ ಇತ್ಯಾದಿಗಳನ್ನು ಹಿಡಿಯುತ್ತವೆ. ಆದ್ದರಿಂದ ಇವುಗಳಿಗೆ ನೊಣ ಹಿಡುಕ (ಫ್ಲೈ ಕ್ಯಾಚರ್ಸ್) ಎನ್ನುತ್ತಾರೆ. ರಾಜಹಕ್ಕಿಗಳು ಆಕ್ರಮಣಕಾರಿ ಹಕ್ಕಿಗಳು. ಇವು ಗೂಡು ಕಟ್ಟಿ ಮೊಟ್ಟೆಯಿಡುವ ಸ್ಥಳಕ್ಕೆ ಯಾವುದೇ ಭಕ್ಷಕ ಪ್ರಾಣಿ ಅಥವಾ ಪಕ್ಷಿಗಳನ್ನು ಹತ್ತಿರ ಸುಳಿಯಲು ಬಿಡುವುದಿಲ್ಲ, ಅವು ಹಾವುಗಳೆ ಆಗಿರಲಿ ಅಥವಾ ಬಿಜ್ಜುಗಳೆ ಆಗಿರಲಿ ಅವುಗಳನ್ನು ಬೆದರಿಸುತ್ತವೆ. ಗಂಡು-ಹೆಣ್ಣು  ಎರಡು ಸೇರಿ ಸಮಾನವಾದ ಕೆಲಸದಿಂದ ಮರದ ಕೊಂಬೆಗಳಲ್ಲಿ ಬಟ್ಟಲಿನಾಕಾರದ ಗೂಡನ್ನು ಕಟ್ಟುತ್ತವೆ, ಮೊಟ್ಟೆ ಇಟ್ಟು ಮರಿ ಮಾಡಿ ಗಂಡು ಹೆಣ್ಣು ಎರಡೂ ಸಹ ತನ್ನ ಮರಿಗಳಿಗೆ ಆಹಾರ ಒದಗಿಸುತ್ತವೆ.

ಸಾಮಾನ್ಯವಾಗಿ ಮೂರರಿಂದ ನಾಲ್ಕು ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಆಹಾರ ಒದಗಿಸುವಲ್ಲೂ ಗಂಡು-ಹೆಣ್ಣು ಜೊತೆಯಲ್ಲಿರುತ್ತವೆ. ಮರಿಗಳು ಸುಮಾರು 15 ರಿಂದ 20 ದಿನಗಳಲ್ಲಿ ದೊಡ್ಡವಾಗುತ್ತವೆ. ಸ್ವಲ್ಪ ಬಲಿತು ದೊಡ್ಡದಾದ ಮರಿ ಮೊದಲು ಗೂಡಿನಿಂದ ಹೊರಬಂದು ಗೂಡಿನ ಪಕ್ಕದ ಕೊಂಬೆಯಲ್ಲಿ ಕೂರುತ್ತದೆ, ಅದಕ್ಕೆ ಆಹಾರವನ್ನು ಅದರ ಪೋಷಕರು ಅಲ್ಲೇ ನೀಡುತ್ತವೆ. ಒಂದು ಮರಿ ಗೂಡಿನಿಂದ ಹೊರಗೆ ಬಂದ ಒಂದು ಅಥವಾ ಎರಡು ದಿನಗಳಲ್ಲಿ ಉಳಿದ ಮರಿಗಳು ಹೊರಬರುತ್ತವೆ. ಬಂದು ಸ್ವತಂತ್ರವಾಗುತ್ತವೆ. ಅನಂತರ ಆ ಖಾಲಿ ಗೂಡಿನಲ್ಲಿ ಮತ್ತೆ ಬೇರೆ ಹಕ್ಕಿಯಾಗಲೀ ಅಥವಾ ಅದೇ ಪಕ್ಷಿಯಾಗಲೀ ಮೊಟ್ಟೆ ಇಟ್ಟು ಮರಿಮಾಡುವುದಿಲ್ಲ..

ಮುಂದಿನ ಬಾರಿ ಅದೇ ಕೆಲಸ, ಹೊಸ ಗೂಡು, ಹೊಸ ಜೀವನ..

© ನಾಗೇಶ್ ಕೆ.ಜಿ


ಲೇಖನ ಮತ್ತು ಛಾಯಾಚಿತ್ರ : ನಾಗೇಶ್ ಕೆ.ಜಿ
ರಾಮನಗರ ಜಿಲ್ಲೆ

Spread the love
error: Content is protected.