ಪರ್ಯಾಯ ಹುಡುಕಿದ ಪತಂಗ

ಪರ್ಯಾಯ ಹುಡುಕಿದ ಪತಂಗ

ಕತ್ತಲಲ್ಲಿ ಬರುವಾಗ ಹೆದರಿಕೆ ಆಗಬಾರದೆಂದು ಅಲ್ಲಲ್ಲಿ ನಿಲ್ಲುತ್ತಾ, ಟಾರ್ಚ್ ಅನ್ನು ಅತ್ತ-ಇತ್ತ ಆಡಿಸಿ ನೋಡುತ್ತಾ, ಕಾಡಿನಂತಿರುವ ಆಶ್ರಮದ ತೋಟದ ಒಳಗಿರುವ ನನ್ನ ರೂಮಿಗೆ ಬರುತ್ತಿದ್ದೆ. ಹಾಗೆ ಬರುವಾಗ ಏಕೋ ತಿಳಿಯದು ಹಾಗೆ ಟಾರ್ಚ್ ಅನ್ನು ಮೇಲಕ್ಕೆ ಹಾಯಿಸಿದೆ ಸ್ವಲ್ಪ ದೂರದ ಹಸಿರು ಎಲೆಗಳಿರುವ ಮರದಲ್ಲಿ ಸುಮಾರಾಗಿರುವ ಒಂದು ಬಿಳಿ ಪೇಪರ್ ಹೊಳೆದಂತಾಯಿತು. ಮರದ ಮೇಲೆ ಅಷ್ಟು ಎತ್ತರಕ್ಕೆ ಪೇಪರ್ ಇರಲಿಕ್ಕೆ ಹೇಗೆ ಸಾಧ್ಯ? ಹೆಚ್ಚೆಚ್ಚು ಇಂಗ್ಲೀಷ್ ಸಿನೆಮಾ ನೋಡುತ್ತಿದ್ದರಿಂದ ನನಗೆ ಅನಿಸಿದ್ದು ಓಹ್ ಇದು ಯಾವುದೋ ಇಂಗ್ಲೀಷ್ ದೇವತೆ ಇರಬೇಕು. ಅರೇ… ಮೊದಲೇ ಅರ್ಧ ಧೈರ್ಯದಲ್ಲಿ ತುಂಬಾ ಸಾಹಸ ಮಾಡಿ ಬರುತ್ತಿದ್ದ ನನಗೆ ಇದ್ಯಾವುದೋ ತಗುಲಿಕೊಂಡಿತಲ್ಲ… ಎಂದನಿಸಿದರೂ ಧೈರ್ಯ ಮಾಡಿ ಒಂದು ದೀರ್ಘ ಉಸಿರು ಒಳಗೆಳೆದು,   ಹಿಂದಿಗಿಂತಲೂ ಎಚ್ಚರವಾಗಿ ಅತ್ತಿತ್ತ ಹೆಚ್ಚೆಚ್ಚು ನೋಡುತ್ತಾ ಮರದ ಸಮೀಪಕ್ಕೆ ಹೆಜ್ಜೆ ಹಾಕಿದೆ. ನನ್ನ ಆಶ್ಚರ್ಯಕ್ಕೆ ಅಲ್ಲಿದ್ದುದು ನಾನೆಂದೂ ಕಂಡಿರದ ಭಾರತದಲ್ಲೇ ವಿರಳವಾಗಿ ಸಿಗುವಂತಹ ಒಂದು ಪ್ರಭೇದದ ಪತಂಗ!

ಆಕಾರದಲ್ಲಿ ಪತಂಗಗಳು ಚಿಟ್ಟೆಗಳ ಹೋಲಿಕೆಯಿದ್ದರೂ ಅವೇ ಬೇರೆ – ಇವೇ ಬೇರೆ. ಚಿಟ್ಟೆಗಳು ಹೆಚ್ಚಾಗಿ ಬೆಳಗಿನ ಸಮಯದಲ್ಲಿ ಕಾರ್ಯಗತವಾಗಿದ್ದರೆ, ಪತಂಗಗಳು ರಾತ್ರಿ ವೇಳೆ ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಅಲ್ಲದೇ ಇನ್ನೂ ಕೆಲವು ವ್ಯತ್ಯಾಸಗಳಿದ್ದೂ ಅವನ್ನು ಮುಂದೆ ಎಂದಾದರು ಈ ಪತಂಗದ ಕತೆ ಬರೆಯುವಾಗ ಇಲ್ಲಿ ಹೇಳದ ಆ ವಿಶೇಷ ಪತಂಗದ ಹೆಸರಿನ ಜೊತೆಗೆ ಹೇಳುತ್ತೇನೆ. ಒಟ್ಟಿನಲ್ಲಿ ಪತಂಗಗಳು ಚಿಟ್ಟೆಗಳಿಗಿಂತ ಭಿನ್ನವಾಗಿದ್ದು ರಾತ್ರಿಯಲ್ಲಿ ಹಾರಾಡುವುದಂತೂ ನಿಜ. ಆದರೆ ಪತಂಗಗಳೂ ಸಹ ಚಿಟ್ಟೆಗಳ ರೀತಿಯೇ ರಾತ್ರಿ ಅರಳುವ ಹೂಗಳನ್ನು ಅರಸಿ ಹೋಗಿ ಮಕರಂದ ಹೀರಿ ಪರಾಗಸ್ಪರ್ಶದಂತಹ ಮಹತ್ಕಾರ್ಯ ಮಾಡುತ್ತವೆ. ಪತಂಗಗಳ ಮಕರಂದ ಹೀರುವ ನಳಿಕೆಗಳಿಗೆ ಅನುಗುಣವಾಗಿಯೇ ಕೆಲವು ಗಿಡಗಳು ಆ ಆಕಾರದಲ್ಲಿಯೇ ಹೂ ಬಿಡುತ್ತವೆ ಎಂದರೆ ನಂಬಲು ಕಷ್ಟವೆನಿಸಿದರೂ ಸತ್ಯವೇ. ಅದೋ ನಿಮ್ಮ ಪ್ರಶ್ನೆ ನನಗೆ ಕೇಳಿಸಿತು. ರಾತ್ರಿಯಲ್ಲಿ ಅಷ್ಟು ಕತ್ತಲೆ ಇದ್ದು ಹೀಗೆ ವಿಶೇಷ ಹೂಗಳನ್ನು ಪತಂಗಗಳು ಹೇಗೆ ಹುಡುಕಿಕೊಂಡು ಹೋಗುತ್ತವೆ ಎಂದಲ್ಲವೇ? ಸ್ವಲ್ಪ ವೈಜ್ಞಾನಿಕವಾಗಿ ಯೋಚಿಸಿದರೆ ನಿಮಗೇ ಉತ್ತರ ಸಿಗುತ್ತದೆ. ಉತ್ತರ ಸರಳ, ಪತಂಗಗಳು ಹೆಚ್ಚಾಗಿ ಹೂವಿನ ಸುಗಂಧವನ್ನು ಗುರುತಾಗಿಸಿಕೊಂಡು ಅದನ್ನೇ ಗೂಗಲ್ ಮ್ಯಾಪ್ ಆಗಿಸಿಕೊಂಡು ಹೂವನ್ನರಸಿ ಹೋಗುತ್ತವೆ. ಹಾಗೆಂದು ಅವುಗಳಿಗೆ ಕಣ್ಣಿನ ಅವಶ್ಯಕತೆ ಇಲ್ಲವೆಂದಲ್ಲ. ವಾಸನೆಯ ಜೊತೆಗೆ ತಮ್ಮ ಸೂಕ್ಷ್ಮ ಕಣ್ಣುಗಳ ಸಹಾಯದಿಂದಲೂ ಆ ರಾತ್ರಿಯ ಮಂದ ಬೆಳಕಿನಲ್ಲಿ ಹೂಗಳನ್ನು ಹುಡುಕುತ್ತವೆ. ಓಹ್ ಹಾಗಾದರೆ ಮತ್ತೇನು ಎಲ್ಲ ಒಳಿತಾಯಿತಲ್ಲ. ಪತಂಗಗಳು ಆನಂದವಾಗಿ ಮಕರಂದ ಹೀರುತ್ತಾ, ಜಾಲಿಯಾಗಿ ಹಾಡುತ್ತಾ, ಖುಷಿಯಿಂದ ಇರಬೇಕಲ್ಲಾ… ಎಂದು ಮಾತ್ರ ಕೇಳಬೇಡಿ. ಅರೇ… ನಾವು ಮಾಡಿರುವ ಘನತ್ಕಾರ್ಯಗಳು ಒಂದೇ.. ಎರಡೇ..? ಅದರಲ್ಲೊಂದಾದ ವಾಯು ಮಾಲಿನ್ಯದಿಂದ ಪತಂಗಗಳಂತಹ ಎಷ್ಟೋ ಜೀವಿಗಳ ಜೀವನ ಕಂಗೆಟ್ಟಿದೆ. ತಮ್ಮ ಜೀವನಾಧಾರವಾದ ಹೂಗಳ ಮಕರಂದ ಹೀರಲು ಸಾಧ್ಯವಾಗದೇ ಸಾಯುವಂತಾಗಿದೆ. ಹೇಗೆ ಹೇಳಿ? ಈ ಮುಂಚೆಯೇ ಹೇಳಿದ ಹಾಗೆ ಪತಂಗಗಳು ತಮ್ಮ ವಾಸನಾಗ್ರಹಿಕೆ ಸಾಮರ್ಥ್ಯದಿಂದ ಹೂಗಳನ್ನರಸಿ ಹೋಗುತ್ತಿದ್ದವು. ಈಗ ಆ ಗಾಳಿಯಲ್ಲಿ

ನಾವು ಸೇರಿಸಿರುವ ಮಾಲಿನ್ಯದಿಂದ ಹೂಗಳ ಆ ವಾಸನೆ ಬದಲಾಗುತ್ತಿದೆ. ಇದರಿಂದ ಪತಂಗಗಳಿಗೆ ಆ ವಾಸನೆ ಹೂವಿನದ್ದು ಎಂದು ಗ್ರಹಿಸಲಾರದೆ, ಆಹಾರವಿಲ್ಲದೆ, ಕೊನೆಗೆ ದಾರಿಯಿಲ್ಲದೆ ಸಾಯುವ ಸ್ಥಿತಿಗೂ ಬರುತ್ತದೆ. ಆದರೇ… ಇಲ್ಲೊಂದು ಪತಂಗ ಇದಕ್ಕೆ ಪರ್ಯಾಯವಾಗಿ ಮಾಲಿನ್ಯಯುಕ್ತ ಗಾಳಿಯಲ್ಲಿ ತೇಲಿ ಬರುವ ಬದಲಾದ ಹೂವಿನ ಸುಗಂಧವನ್ನೂ ಗ್ರಹಿಸುವಂತೆ ತನ್ನನ್ನು ತಾನು ಬದಲಿಸಿಕೊಂಡಿದೆ ಎನ್ನುತ್ತಿದೆ ಹೊಸ ಸಂಶೋಧನೆ. ಅದು ಹೇಗೆ?

ಕೆಲವು ಪರಾಗಸ್ಪರ್ಶಕಗಳು ಹೊಸ ಸುಗಂಧವನ್ನು ಗ್ರಹಿಸುವ ಸಾಮರ್ಥ್ಯ ಪಡೆದುಕೊಂಡಿದ್ದರೂ ಹೀಗೆ ಮಾಲಿನ್ಯದಿಂದ ಬದಲಾದ ಸುಗಂಧವನ್ನು ಗ್ರಹಿಸಬಲ್ಲ ಪರಾಗಸ್ಪರ್ಶಕಗಳ ಬಗ್ಗೆ ಮಾಡಿದ ಮೊದಲನೇ ಸಂಶೋಧನೆ ಇದೆ. ಹಾಗಾದರೆ ನೇರ ಸಂಶೋಧನೆಯ ಮೂಲಕ್ಕೆ ಇಳಿದುಬಿಡೋಣ. ಈ ಕತೆಯಲ್ಲಿ(ಸಂಶೋಧನೆಯಲ್ಲಿ) ಹೀರೋ ಟೊಬ್ಯಾಕೋ ಹಾಕ್ ಮಾತ್ ಎಂದು ಕರೆಯಲ್ಪಡುವ ಪತಂಗ. ಹೀರೋಯಿನ್ ಬಂದು ಜಾಸ್ಮಿನ್ ಟೊಬ್ಯಾಕೋ ಎನ್ನುವ ಸುಗಂಧಮಯ ಹೂವು. ಪೊಲ್ಲ್ಯೂಷನ್ ಎನ್ನುವುದು ಇವರ ಮಧ್ಯೆ ಬರುವ ವಿಲನ್. ಇಲ್ಲಿಯವರೆಗೆ ಇಲ್ಲದ ಈ ವಿಲನ್ ನ ಆಗಮನದಿಂದ ಹೀರೋ ಪತಂಗವು ಜಾಸ್ಮಿನ್ ಹೂವನ್ನು ಸೇರಲು ಆಗುತ್ತಿಲ್ಲ. ಆದರೆ ಸ್ವಲ್ಪ ಸಮಯ ಮತ್ತು ಚಾಕಚಕ್ಯತೆಯಿಂದ ಪತಂಗವು ಪೊಲ್ಲ್ಯೂಷನ್ ಎಂಬ ವಿಲನ್ ಅನ್ನು ಹೊಡೆದಟ್ಟಿ ಜಾಸ್ಮಿನ್ ಅನ್ನು ಸೇರಬಲ್ಲ ಪ್ರಬಲ ಪತಂಗವಾಗಿ ಹೊರಹೊಮ್ಮಿದೆ. ಇಷ್ಟೇ ಈ ಸಂಶೋಧನೆಯ ಕಥಾವಸ್ತು. ಆದರೆ ಸಂಶೋಧನೆಯನ್ನು ಸಂಶೋಧನೆಯ ಹಾಗೆ ಹೇಳಿದರೆ ಅದರ ನಿಜವಾದ ಅರ್ಥ ತಿಳಿಯುವುದಾದ್ದರಿಂದ, ಸಂಶೋಧನೆಯಲ್ಲಿ ನಿಖರವಾಗಿ ಏನಾಯಿತು ಎಂದು ನೋಡಿಬಿಡೋಣ.

ವಾಯುಮಾಲಿನ್ಯದ ಮುಖ್ಯ ಕಾರಣಗಳಲ್ಲಿ ಒಂದಾದ ಓಝೋನ್ ಅನ್ನು ಗಮನಿಸಿದರೆ; ಈ ಓಝೋನ್ ಮಲ್ಲಿಗೆ ಹೂ ಹೊರಸೂಸುತ್ತಿದ್ದ ಸುಗಂಧದ ಜೊತೆ ರಾಸಾಯನಿಕವಾಗಿ ಬೆರೆತು ಸುಗಂಧ ಕಣಗಳ ರಾಸಾಯನಿಕ ರಚನೆಯನ್ನು ಬದಲಿಸುತ್ತಿತ್ತು. ಇದರಿಂದಾಗಿ ಮಲ್ಲಿಗೆ ಹೂವಿನಿಂದ ಬರುತ್ತಿದ್ದ ನಿಜವಾದ ಸುಗಂಧ ಹಾಕ್ ಮಾತ್ ಗೆ ಅದೇ ರೀತಿಯಲ್ಲಿ ತಲುಪುತ್ತಲೇ ಇರಲಿಲ್ಲ. ಇದರಿಂದಾಗಿ ಪತಂಗಗಳು ತಮ್ಮ ಆಹಾರವಾದ ಮಕರಂದ ಹೀರಲು ಹೂವನ್ನು ಸೇರಲು ಮುಖ್ಯ ದಾರಿದೀಪ ಆರಿಹೋದ ಹಾಗಾಯಿತು. ಆದರೆ ಸ್ವಲ್ಪ ಸಮಯದಲ್ಲೇ ಪತಂಗಗಳು ಆ ಬದಲಾದ ಸುಗಂಧವು ಮಲ್ಲಿಗೆ ಹೂವಿನದೇ ಎಂದು ಗುರುತಿಸುವುದನ್ನು ಕಲಿತುಕೊಂಡಿವೆ ಎನ್ನುತ್ತಿದ್ದಾರೆ ಸಂಶೋಧಕರು. ಇದನ್ನು ತಿಳಿಯಲು ಅವರು ನಡೆಸಿದ ಪ್ರಯೋಗ, ಓಝೋನ್ ಜೊತೆಗೆ ಸೇರಿ ಬದಲಿದ ಸುಗಂಧದ ಗಾಳಿಯನ್ನು ಒಂದು ಸಣ್ಣ ನಳಿಕೆಯಲ್ಲಿ ಹೋಗಲು ಬಿಟ್ಟರು. ಆ ನಳಿಕೆ ಇನ್ನೊಂದು ತುದಿಯಲ್ಲಿ ಫ್ರಿಡ್ಜ್ ಗಾತ್ರದ ಒಂದು ಗಾಜಿನ ಡಬ್ಬ ಇರಿಸಿ ಅದರೊಳಗೆ ಈ ಹಾಕ್ ಮಾತ್ ಅನ್ನು ಬಿಡಲಾಗಿತ್ತು. ಈ ಬದಲಿದ ಸುಗಂಧ ಗಾಳಿಯು ನಳಿಕೆಯಲ್ಲಿ ಬಂದಾಗ ಸ್ವಲ್ಪ ತಡಬಡಿಸಿ ಪತಂಗ ಕೊನೆಗೆ ತನ್ನ ಮಕರಂದ ಹೀರುವ ನಳಿಕೆಯನ್ನು ಮೇಲೆತ್ತಿ ಪ್ಲಾಸ್ಟಿಕ್ ನಳಿಕೆಯ ಬಳಿ ಬರುತ್ತದೆಂದು ಸಂಶೋಧಕರು ಊಹಿಸಿದ್ದರು. ಆದರೆ ಪತಂಗವು ಯಾವುದೇ ಬದಲಾವಣೆಯನ್ನು ತೋರಲಿಲ್ಲ.

ಮುಂದಿನ ಹಂತದಲ್ಲಿ, ಪತಂಗಗಳು ಕೇವಲ ವಾಸನೆ ಗ್ರಹಿಸಿ ಅಲ್ಲದೆ ಹೂವನ್ನು ಕಣ್ಣಿನಿಂದ ನೋಡಿಯೂ ಸಹ ಗುರುತಿಸುತ್ತಿದ್ದವು ಎಂಬ ಸತ್ಯ ನೆನಪಾದ ಮೇಲೆ; ತಾವೇ ತಯಾರಿಸಿದ ಗಾಢ ಬಣ್ಣದ ಪ್ಲಾಸ್ಟಿಕ್ ಮಲ್ಲಿಗೆ ಹೂವನ್ನು ಆ ಸುಗಂಧ ಕಳಿಸಲಾಗುತ್ತಿದ್ದ ಪ್ಲಾಸ್ಟಿಕ್ ನಳಿಕೆಗೆ ಹೊಂದಿಸಿ, ಆ ಹೂವಿನ ಮೇಲೆ ಮಕರಂದವನ್ನು ಹೋಲುವಂತಹ ಸಕ್ಕರೆ ಪಾಕವನ್ನೂ ಇರಿಸಿ ನಂತರ ಬದಲಿಸಿದ ಸುಗಂಧವನ್ನು ನಳಿಕೆಯಿಂದ ಬಿಟ್ಟರು. ಆಗ ಪತಂಗವು ಹೂವಿನ ಬಳಿ ಬಂದು ಮಕರಂದ ಹೀರುತ್ತಿತ್ತು. ಹೀಗೆ ಕೆಲವು ನಿಮಿಷಗಳು ಅಭ್ಯಾಸ ಮಾಡಿಸಿದ ನಂತರ ಅಂದರೆ ಸುಮಾರು 15 ನಿಮಿಷಗಳ ಅಂತರದಲ್ಲಿ ಮತ್ತೆ ಪತಂಗವನ್ನು ಗಾಜಿನ ಡಬ್ಬಿಯಲ್ಲಿ ಬಿಟ್ಟರು. ಈ ಬಾರಿ ಯಾವುದೇ ಹೂ ಅಥವಾ ಮಕರಂದವ ಹೋಲುವ ಸಕ್ಕರೆ ಪಾಕ ಇರಲಿಲ್ಲ. ನಳಿಕೆಯಲ್ಲಿ ಕೇವಲ ಬದಲಿಸಿದ ಮಲ್ಲಿಗೆ ಹೂ ಸುಗಂಧವನ್ನು ಕಳುಹಿಸಲಾಯಿತು. ಏನಾಗಿರಬಹುದು ಊಹಿಸಿ? ಹೌದು ನೀವು ಸರಿಯಾಗಿ ಯೋಚಿಸಿದ್ದೀರಿ. ಯಾವುದೇ ಹೂ ಅಥವಾ ಸಕ್ಕರೆ ಪಾಕ ಇಲ್ಲದಿದ್ದರೂ ಪತಂಗವು ತನ್ನ ಮಕರಂದ ಹೀರುವ ನಳಿಕೆಯನ್ನು ಮೇಲೆತ್ತಿ ನಳಿಕೆಯ ಬಳಿ ಹಾರುತ್ತಿತ್ತು. ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ, ಈ ಪತಂಗಗಳು ಸ್ವಲ್ಪ ಸಮಯದಲ್ಲೇ ಹೂವಿನಿಂದ ಹೊರಬಂದ ಬದಲಾದ ಸುಗಂಧವನ್ನೂ ಗ್ರಹಿಸಿ, ಇದು ಜಾಸ್ಮಿನ್ ಟೊಬ್ಯಾಕೋ ಮಲ್ಲಿಗೆ ಹೂವಿನದೇ ಎಂದು ಗುರುತಿಸುವಲ್ಲಿ ಯಶಸ್ವಿಯಾಯಿತು.

ಅದೇನೆ ಆದರೂ ನಾವು ಮಾಡುತ್ತಿರುವ ಈ ಮಾಲಿನ್ಯಗಳ ಪರಿಣಾಮ ಕೆಟ್ಟದ್ದೇನು ಅಲ್ಲ! ಈ ಸಂಶೋಧನೆ ಹೇಳುವ ಹಾಗೆ ಕೀಟಗಳೇ ಈ ಮಾಲಿನ್ಯಕ್ಕೆಲ್ಲಾ ಒಗ್ಗಿಕೊಳ್ಳುತ್ತವೆ ಎಂಬ ಆಲೋಚನೆ ಮಾತ್ರ ಒಳ್ಳೆಯದಲ್ಲ. ಆದರೆ ನಾವು ಇಲ್ಲಿ ಗಮನಿಸಬೇಕಾದದ್ದು ಒಂದು ಸೂಕ್ಷ್ಮ ವಿಷಯವಿದೆ. ಏನು ಹೇಳಿ ನೋಡೋಣ?… ಈ ಬದಲಿದ ಸುಗಂಧ ಗ್ರಹಿಸಬಲ್ಲ ಪತಂಗದ ಸಂಶೋಧನೆ ನಡೆದದ್ದು ಒಂದು ಚಿಕ್ಕ – ಚೊಕ್ಕ ಪ್ರಯೋಗಾಲಯದಲ್ಲಿ. ಹೊರಗಿನ ವಿಶಾಲವಾದ ಪರಿಸರದಲ್ಲಿ ಪತಂಗಗಳು ಹೇಗೆ ಈ ಬದಲಿ ಸುಗಂಧವನ್ನು ಗ್ರಹಿಸಬಲ್ಲವು ಎಂಬುದು ಇನ್ನೂ ಅರಿಯದ ಮಾಹಿತಿಯಾಗಿಯೇ ಉಳಿಯುತ್ತದೆ. ನಮ್ಮ ತಪ್ಪನ್ನು ಇಷ್ಟು ದಿನ ಸಮರ್ಥಿಸಿಕೊಂಡು ಬಂದದ್ದು ಸಾಕು. ಈಗ ಕನಿಷ್ಠ ಎಂದರೆ ನಮ್ಮ ತಪ್ಪುಗಳ ಅರಿವಾದರೂ ಮೂಡಿಸಿಕೊಳ್ಳುತ್ತಾ ಹೋಗೋಣ. ಆಗಲಾದರೂ ಪರಿಹಾರದ ದಾರಿಗಳು ಗೋಚರವಾದೀತು.…

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Spread the love
error: Content is protected.