ಬಕುಲ

ಬಕುಲ

ಸೇವಂತಿಕಾ ಬಕುಲ ಚಂಪಕಪಾಟಲಾದ್ಯೈಃ
ಪುನ್ನಾಗ ಜಾಜಿ ಕರವೀರರಸಾಲಪುಷ್ಪೈಃ
ಬಿಲ್ವಪ್ರವಾಲ!!
ತುಲಸೀದಲಮಲ್ಲಿಕಾಭಿಃ
ತ್ವಾಮ್ ಪೂಜಯಾಮಿ ಜಗದೀಶ್ವರ ಮೇ ಪ್ರಸೀದ॥

“ಜಗದೀಶನಿಗೆ ಇಷ್ಟವಾದ ಪುಷ್ಪಗಳಲ್ಲಿ ಬಕುಲವು ಒಂದು. ಶ್ರೀಕೃಷ್ಣ ಪರಮಾತ್ಮನ ಮಡದಿ ರುಕ್ಮಿಣಿಗೆ ಈ ಹೂಗಳ ಮೇಲೆ ಅತೀವ ಒಲವು.”.

ಮಲೆನಾಡಿನ ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಬಕುಲಕ್ಕೆ ಮಹತ್ವದ ಸ್ಥಾನವಿದೆ. ಸಮಾರಂಭಗಳಲ್ಲಿ ಪಾಲ್ಗೊಂಡ ಮಹಿಳೆಯರು ಬಕುಲ ಪುಷ್ಪಗಳನ್ನು ಮುಡಿದು ಓಡಾಡುತ್ತಿದ್ದರೆ ಅವುಗಳಿಂದ ಹೊರಸೂಸುವ ಪರಿಮಳವು ತನ್ನ ಕಂಪನ್ನು ಎಲ್ಲೆಡೆ ಸೂಸಿರುತ್ತದೆ. ಹಿಂದಿನ ಕಾಲದಲ್ಲಿ ಕೆಲ ಸಮಾಜಗಳಲ್ಲಿ ಬಕುಲದ ವರಮಾಲೆಗಳಿಲ್ಲದ ಮದುವೆಗಳೇ ಇರುತ್ತಿರಲಿಲ್ಲ. ಪಾರಂಪರಿಕ ಹಾಗೂ ಆಯುರ್ವೇದ ವೈದ್ಯ ಪದ್ಧತಿಗಳಲ್ಲಿ ಬಹು ಜನಪ್ರಿಯವಾಗಿರುವ ಬಕುಲ ಮರವು ಪ್ರಾಚೀನ ಕಾಲದಿಂದಲೂ ಭರತಭೂಮಿಯಲ್ಲಿ ತನ್ನ ಛಾಪನ್ನು ಮೂಡಿಸಿದೆ. ಬಹುವಿಧದ ಔಷಧಿಯ ಗುಣವುಳ್ಳ ಬಕುಲ ವೃಕ್ಷಗಳು ಭಾರತದೆಲ್ಲೆಡೆ ಹರಡಿವೆ. ಈ ಸಸ್ಯ ಪ್ರಭೇದದ ಅತಿ ಪುರಾತನ ಮರ ಒಂದು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಅಣಶಿ ಅರಣ್ಯದ ದುಧಗಾಳಿ ಮಜಿರೆಯಲ್ಲಿದೆ. ಈ ಮರವನ್ನು ಸಾಕಿ, ಪೊರೆದ ಗ್ರಾಮದ ಸಂತೋಷ ದೇಸಾಯಿಯವರ ಕುಟುಂಬಕ್ಕೆ ಹದಿನಾರು ವರುಷಗಳ ಹಿಂದೆ ಕೇಂದ್ರ ಸರಕಾರದ ಪರಿಸರ ಹಾಗೂ ಅರಣ್ಯ ಸಚಿವಾಲಯದಿಂದ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗಿತ್ತು.

ಸುಮಾರು ನಾಲ್ಕು ಶತಮಾನಗಳಷ್ಟು ಹಳೆಯದೆಂದು ಅಂದಾಜಿಸಿರುವ ಈ ಮರ ಬೃಹದಾಕಾರದಾಗಿದೆ. ಸಾಮಾನ್ಯವಾಗಿ ಬಕುಲ ಮರಗಳು ಹದಿನಾರು ಮೀ. ವರೆಗೆ ಮಾತ್ರ ಬೆಳೆಯುತ್ತವೆ. ಆದರೆ ದುಧಗಾಳಿಯ “ವಿಠ್ಠಲ್ ರುಕ್ಮಾಯಿ” ಮಂದಿರದ ಪ್ರಾಂಗಣದಲ್ಲಿರುವ ಬಕುಲವು ಸುಮಾರು ಮೂವತ್ತು ಮೀ. ಎತ್ತರಕ್ಕೆ ಬೆಳೆದು ನಿಂತಿದೆ

ಸುಮಾರು ನಾಲ್ಕು ಶತಮಾನಗಳಷ್ಟು ಹಳೆಯದೆಂದು ಅಂದಾಜಿಸಿರುವ ಈ ಮರ ಬೃಹದಾಕಾರದಾಗಿದೆ. ಸಾಮಾನ್ಯವಾಗಿ ಬಕುಲ ಮರಗಳು ಹದಿನಾರು ಮೀ. ವರೆಗೆ ಮಾತ್ರ ಬೆಳೆಯುತ್ತವೆ. ಆದರೆ ದುಧಗಾಳಿಯ “ವಿಠ್ಠಲ್ ರುಕ್ಮಾಯಿ” ಮಂದಿರದ ಪ್ರಾಂಗಣದಲ್ಲಿರುವ ಬಕುಲವು ಸುಮಾರು ಮೂವತ್ತು ಮೀ. ಎತ್ತರಕ್ಕೆ ಬೆಳೆದು ನಿಂತಿದೆ!

ಭಾರಿ ಸುತ್ತಳತೆಯ ಹಾಗೂ ಉದ್ದನೆಯ ಕಾಂಡವಿರುವ ದುಧಗಾಳಿಯ ಈ ಬಕುಲಮರಕ್ಕೆ ಈ ಹಿಂದೆ, ಪ್ರತಿಷ್ಠಿತ ದೇವಸ್ಥಾನಗಳಿಂದ ಬೇಡಿಕೆ ಬಂದಿತ್ತು. ದೇವಳಗಳ ಮುಂದೆ ಗರುಡ ಧ್ವಜವನ್ನಾಗಿ ಊರಲು ಹಾಗೂ ಬಾಗಿಲುಗಳಿಗೆ ಈ ಮರದ ಕಟ್ಟಿಗೆಯನ್ನು ಬಳಸಲು ಅವರು ಪ್ರಯತ್ನಿಸಿದ್ದರು. ಕೆಂಪು ಬಣ್ಣದ ಬಕುಲ ಮರದ ಕಟ್ಟಿಗೆಯು ಅತ್ಯಂತ ಗಟ್ಟಿ ಹಾಗೂ ಬಾಳಿಕೆ ಬರುತ್ತದೆ. ಈ ಕಟ್ಟಿಗೆಯು ಕೆತ್ತನೆಗೂ ಹೇಳಿ ಮಾಡಿಸಿದಂತಿರುವುದರಿಂದ ಧಾರ್ಮಿಕ ಮಂಡಳಿಗಳ ಕಣ್ಣು ಈ ಮರದ ಮೇಲೆ ಬಿದ್ದಿತ್ತು. ಆದರೆ ದುಧಗಾಳಿಯ ನಾಗರಿಕರು ಈ ಮರಕ್ಕೆ ಕೊಡಲಿ ಹಾಕಲು ತಮ್ಮ ಸಹಮತವನ್ನು ನೀಡದೆ ಅದನ್ನು ಸಂರಕ್ಷಿಸಿದರು. ಊರ ಜನರ ಪರಿಸರ ಪ್ರೇಮದಿಂದಾಗಿ ಬದುಕುಳಿದ ಈ ಮರವು ಗ್ರಾಮದ ನಯನ ಮನೋಹರ ಪರಿಸರದಲ್ಲಿ ಇನ್ನಷ್ಟು ಹುಲುಸಾಗಿ ಬೆಳೆದು ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಪರಿಸರ ಪ್ರೇಮಿಗಳು ಕತ್ತೆತ್ತಿ, ಸೋಜಿಗದಿಂದ ನೋಡುವಂತೆ ಮಾಡಿದೆ. ಸುವಾಸನೆ ಭರಿತ ಹೂಗಳನ್ನು ಅರಳಿಸುತ್ತಾ, ಯಥೇಚ್ಛ ಹಣ್ಣುಗಳನ್ನು ಸುರಿಸುತ್ತಾ ದುಂಬಿಗಳಿಗೆ ಹಾಗೂ ಹಕ್ಕಿಗಳಿಗೆ ಆಶ್ರಯ ನೀಡಿರುವ ಬಕುಲ ಮರವು ದುಧಗಾಳಿ ಗ್ರಾಮಕ್ಕೆ ಹೆಸರನ್ನು ತಂದಿದೆ.

Mimusops elengi ಎಂಬ ವೈಜ್ಞಾನಿಕ ಹೆಸರಿನ ಬಕುಲವನ್ನು ಆಂಗ್ಲದಲ್ಲಿ ಸ್ಪ್ಯಾನಿಷ್ ಚೆರಿ ಹಾಗೂ ಬುಲೆಟ್ ವುಡ್, ಹಿಂದಿಯಲ್ಲಿ ಮೌಲಶ್ರಿ, ಕೊಂಕಣಿಯಲ್ಲಿ ಅವಾಳೆ, ಕನ್ನಡದಲ್ಲಿ ರಂಜಲು ಎಂದು ಕರೆಯುತ್ತಾರೆ. ರಂಜಲುಗಳು ನಮ್ಮ ದೇಶದಲ್ಲಿ ಅಲ್ಲದೆ ದಕ್ಷಿಣ ಏಷಿಯಾ ಹಾಗೂ ಉತ್ತರ ಆಸ್ಟ್ರೇಲಿಯಾಗಳಲ್ಲಿಯೂ ಬೆಳೆಯುತ್ತವೆ. ಇತ್ತೀಚಿಗೆ ಔಷಧ ಕಂಪನಿಗಳು ಸಹ ಇವುಗಳನ್ನು ಬೆಳೆಸುತ್ತಿವೆ. ಮರದ ತೊಗಟೆ, ಹೂ, ಹಣ್ಣು ಹಾಗೂ ಬೀಜಗಳನ್ನು ಔಷಧವಾಗಿ ಬಳಸುತ್ತಾರೆ. ದೇಹದ ಉಷ್ಣತೆ ಕಡಿಮೆ ಮಾಡಲು, ಒಸಡುಗಳಲ್ಲಿನ ರಕ್ತ ಸೋರುವಿಕೆಯನ್ನು ನಿಲ್ಲಿಸಲು ಹಾಗೂ ಸಡಿಲವಾದ ಹಲ್ಲುಗಳನ್ನು ಗಟ್ಟಿಗೊಳಿಸಲು ಬಕುಲ ಔಷಧವನ್ನು ಪ್ರಮುಖವಾಗಿ ಉಪಯೋಗಿಸಲಾಗುತ್ತದೆ. ಜೇನುಹುಳುಗಳಿಗೆ ಅತಿ ಪ್ರಿಯವಾದ ಬಕುಲದ ಚಿಕ್ಕ ಚಿಕ್ಕ ಪುಷ್ಪಗಳು ರಾತ್ರಿ ಅರಳಿ ಬೆಳಿಗ್ಗೆ ಉದುರುತ್ತವೆ. ಹೂವಿನ ಸುವಾಸನೆ ಬಹುದಿನದವರೆಗೆ ಬಾಳುವುದರಿಂದ ಗ್ರಾಮೀಣರಿಗೆ ಇವು ಅಚ್ಚುಮೆಚ್ಚು.

  ಪರಿಸರ ಪ್ರಜ್ಞೆಯುಳ್ಳವರು ಪ್ರಶಸ್ತಿ ಪುರಸ್ಕೃತ ಈ ಬಕುಲ ಮರದ ಸೊಗಡನ್ನು ನೋಡಲು ಲೋಂಡಾ -ಸದಾಶಿವಗಡ ಹೆದ್ದಾರಿಯ ಕುಂಬಾರವಾಡಾ ಹಾಗೂ ಅಣಶಿ ಗ್ರಾಮಗಳ ಮಧ್ಯದಲ್ಲಿ ಸಿಗುವ ದುಧಗಾಳಿಯ ಬಸ್ ಪ್ರಯಾಣಿಕರ ತಂಗುದಾಣದಿಂದ ಒಳಕ್ಕೆ ಒಂದು ಕೀ.ಮಿ ದಾರಿ ಕ್ರಮಿಸಿದರಾಯಿತು. 

ಚಿತ್ರ – ಲೇಖನ: ಮಹಾಂತೇಶ, ಕೈಗಾ
ಉತ್ತರ ಕನ್ನಡ ಜಿಲ್ಲೆ

Spread the love
error: Content is protected.