ವಿಶ್ವ ಘೇಂಡಾಮೃಗ ದಿನ – ಸೆಪ್ಟಂಬರ್ 22
© ಧನುಷ್ ಶೆಟ್ಟಿ
ಘೇಂಡಾಮೃಗಗಳನ್ನು ಆಂಗ್ಲಭಾಷೆಯಲ್ಲಿ ರೈನೋ ಎಂದು ಕರೆಯುತ್ತಾರೆ. ಇವು ಬೆಸ ಸಂಖ್ಯೆಯ ಕಾಲು ಬೆರಳುಗಳುಳ್ಳ “ರೈನೋ ಸಿರೊಟಿಡೆ” ಎಂಬ ಕುಟುಂಬಕ್ಕೆ ಸೇರಿವೆ. ಹುಲ್ಲನ್ನು ತಿಂದು ಬದುಕುವ ಈ ಸಸ್ಯಾಹಾರಿ ಜೀವಿಗಳು ಒಂದು ಟನ್ ತೂಕವಿರುತ್ತವೆ. ವಯಸ್ಕ ಘೇಂಡಾಮೃಗಗಳಿಗೆ ಮನುಷ್ಯನನ್ನು ಬಿಟ್ಟು, ಬೇರೆ ಯಾವುದೇ ವನ್ಯ ಪ್ರಾಣಿಗಳಿಂದಲೂ ಅಪಾಯವಿಲ್ಲ. ಈ ಘೇಂಡಾಮೃಗದ ಸಣ್ಣ ಮರಿಗಳನ್ನು ಹುಲಿ- ಚಿರತೆಯಂತಹ ದೊಡ್ಡ ಬೆಕ್ಕಿನ ಜಾತಿಯ ಪ್ರಾಣಿಗಳು ಸುಲಭವಾಗಿ ಬೇಟೆಯಾಡಬಲ್ಲವು. “ರೈನೋಸರಸ್” ಎಂಬುದು ಗ್ರೀಕರು ಬಳಸುತ್ತಿದ್ದ ಲ್ಯಾಟಿನ್ ಭಾಷೆಯ ಪದವಾಗಿದೆ. ರೈನೋ ಎಂದರೆ ಮೂಗು, ಕೆರಸ್ ಎಂದರೆ ಕೊಂಬು ಎಂದು ಅರ್ಥ. ಒಟ್ಟಿನಲ್ಲಿ ಮೂಗಿನ ಮೇಲೆ ಕೊಂಬು ಇರುವ ಪ್ರಾಣಿ ಎಂದರ್ಥ. ಘೇಂಡಾಮೃಗದ ಕೊಂಬುಗಳು ನಮ್ಮ ಉಗುರು ಮತ್ತು ಕೂದಲು ಯಾವ ಪ್ರೋಟೀನ್ ನಿಂದ ಆಗಿದೆಯೋ, ಅದೇ ಕೆರಾಟಿನ್ ಎಂಬ ಪ್ರೊಟೀನ್ ನಿಂದ ಮಾಡಲ್ಪಟ್ಟಿವೆ.
ಸದ್ಯ ಪ್ರಪಂಚದಾದ್ಯಂತ ಐದು ಪ್ರಭೇದದ ಘೇಂಡಾಮೃಗಗಳು ಜೀವಂತವಾಗಿವೆ. ಇವುಗಳಲ್ಲಿ ಎರಡು ಪ್ರಭೇದಗಳು ಆಫ್ರಿಕಾ ಖಂಡದಲ್ಲೂ, ಉಳಿದ ಮೂರು ಪ್ರಭೇದಗಳು ದಕ್ಷಿಣ ಏಷ್ಯಾ ಖಂಡದಲ್ಲೂ ಕಾಣಸಿಗುತ್ತವೆ. ಆಫ್ರಿಕಾದಲ್ಲಿ ಕಾಣಸಿಗುವ ಬಿಳಿ ಘೇಂಡಾಮೃಗ(Ceratotherium simum) ಮತ್ತು ಕಪ್ಪು ಘೇಂಡಾಮೃಗ(Diceros bicornis) ಎಂಬ ಎರಡೂ ಪ್ರಭೇದಗಳಲ್ಲಿ ಕಾಣಬಹುದಾದ ಮುಖ್ಯ ವ್ಯತ್ಯಾಸವೆಂದರೆ ಅವುಗಳ ಬಾಯಿಯ ಆಕಾರ. ಬಿಳಿ ಘೇಂಡಾಮೃಗಗಳಿಗೆ ಮೇಯಲು ಅಗಲವಾದ ತುಟಿಗಳಿದ್ದರೆ, ಕಪ್ಪು ಘೇಂಡಾಮೃಗಳು ಎಲೆಗಳನ್ನು ತಿನ್ನಲು ಸಹಾಯವಾಗುವಂತೆ ಉದ್ದವಾದ ಮೊನಚಾದ ತುಟಿಗಳಿರುತ್ತವೆ. ಉಳಿದ ಮೂರು ಪ್ರಭೇದದ ಘೇಂಡಾಮೃಗಗಳನ್ನು ದಕ್ಷಿಣ ಏಷ್ಯಾದ ಭೂಭಾಗಗಳಲ್ಲಿ ಕಾಣಬಹುದಾಗಿದೆ. ಅವು ಯಾವುವೆಂದರೆ ಜಾವನ್ ಘೇಂಡಾಮೃಗ (Rhinoceros sondaicus ), ಸುಮಾತ್ರನ್ ಘೇಂಡಾಮೃಗ (Dicerorhinus sumatrensis), ಮತ್ತು ಭಾರತದ ಘೇಂಡಾಮೃಗ (Rhinoceros unicornis).
ಆಫ್ರಿಕಾದ ಮತ್ತು ಸುಮಾತ್ರನ್ ಘೇಂಡಾಮೃಗಗಳಿಗೆ ಎರಡು ಕೊಂಬುಗಳಿರುತ್ತವೆ. ಆದರೆ ಜಾವನ್ ಮತ್ತು ಭಾರತದ ಘೇಂಡಾಮೃಗಗಳಿಗೆ ಒಂಟಿ ಕೊಂಬು ಇರುತ್ತದೆ. ಭಾರತ ಉಪಖಂಡದಲ್ಲಿ ಮಾತ್ರ ಕಂಡು ಬರುವ ಭಾರತದ ಘೇಂಡಾಮೃಗಗಳನ್ನು, ದೊಡ್ಡ ಕೊಂಬಿನ ಘೇಂಡಾಮೃಗ ಎಂದೂ ಸಹ ಕರೆಯುತ್ತಾರೆ. ಇವು ಆಫ್ರಿಕಾದ ಘೇಂಡಾಮೃಗಗಳಿಗೆ ಹೊಲಿಸಿದರೆ, ಗಾತ್ರದಲ್ಲಿ ಚಿಕ್ಕವು. ಇವುಗಳಲ್ಲಿ ಗಂಡು ಘೇಂಡಾಮೃಗ ಸುಮಾರು 2,200 ಕೆ.ಜಿ ತೂಕವಿದ್ದರೆ, ಹೆಣ್ಣು ಘೇಂಡಾಮೃಗ ಸುಮಾರು 1600 ಕೆ.ಜಿ ತೂಕವಿರುತ್ತದೆ. ಈ ಘೇಂಡಾಮೃಗಗಳಿಗೆ ದಪ್ಪವಾಗಿರುವ ಬೂದು-ಕಂದು ಚರ್ಮವಿದ್ದು, ಗುಲಾಬಿ ಬಣ್ಣದ ಚರ್ಮದ ಮಡಿಕೆಗಳಿರುತ್ತವೆ ಮತ್ತು ಅದರ ಮುಖದ ಮೇಲೆ ಒಂದು ಕೊಂಬನ್ನು ಹೊಂದಿರುತ್ತವೆ.
ಇದರ ಮೇಲಿನ ಕಾಲುಗಳು ಮತ್ತು ಭುಜಗಳನ್ನು ಮಡಿಕೆಗಳ ತರಹದ ಉಬ್ಬುಗಳಿಂದ ಮುಚ್ಚಿರುತ್ತದೆ. ಇದರ ರೆಪ್ಪೆ, ಕಿವಿ ಅಂಚುಗಳು ಮತ್ತು ಬಾಲದ ಕುಂಚಗಳನ್ನು ಹೊರತುಪಡಿಸಿ ದೇಹದ ಇತರೆ ಭಾಗಗಳಲ್ಲಿ ಕಡಿಮೆ ಕೂದಲನ್ನು ಹೊಂದಿದೆ. ಗಂಡು ಭಾರತದ ಘೇಂಡಾಮೃಗಗದ ಕುತ್ತಿಗೆಯ ಬಳಿ ದೊಡ್ಡ ದೊಡ್ಡ ಚರ್ಮದ ಮಡಿಕೆಗಳನ್ನು ಹೊಂದಿರುತ್ತದೆ. ಘೇಂಡಾಮೃಗಗಳು ಬಹಳ ಚೆನ್ನಾಗಿ ಈಜಬಲ್ಲವು. 55 km/h ವೇಗದಲ್ಲಿ ಸ್ವಲ್ಪ ಸಮಯ ಓಡಬಲ್ಲವು. ಅತ್ಯುತ್ತಮವಾದ ವಾಸನೆ ಗ್ರಹಿಸುವ ಸಾಮರ್ಥ್ಯವಿದ್ದರೂ ಇವುಗಳಿಗೆ ಕಣ್ಣಿನ ದೃಷ್ಟಿ ಕಡಿಮೆ.
ಸಾಮಾನ್ಯವಾಗಿ ವಯಸ್ಕ ಗಂಡುಗಳು ಒಂಟಿಯಾಗಿದ್ದು, ಹೆಣ್ಣು ಮತ್ತು ಮರಿ ಘೇಂಡಾಮೃಗಗಳು ಗುಂಪಿನಲ್ಲಿ ಜೀವಿಸುತ್ತವೆ. ಬೆಳಗಿನ ಝಾವ ಮತ್ತು ರಾತ್ರಿ ಬಹಳ ಚುರುಕಾಗಿ ಇರುವ ಈ ಜೀವಿಗಳು, ಬಿಸಿಲು ಮೇಲೇರುತ್ತಿದ್ದಂತೆ ನೆರಳಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತವೆ.
ಹಿಂದೆ ಭಾರತದ ಘೇಂಡಾಮೃಗಗಳ ಆವಾಸ ಪ್ರದೇಶ, ಪಾಕಿಸ್ತಾನದಿಂದ ಹಿಡಿದು ಮಾಯನ್ಮಾರ್ ವರೆಗೂ ಹಬ್ಬಿತ್ತು. ಹಾಗೂ ಚೀನಾದ ಕೆಲ ಭೂಭಾಗಗಳಲ್ಲೂ ಸಹ ಇವು ಕಂಡುಬರುತ್ತಿದ್ದವು. ಆದರೆ ಇಂದು ಮಾನವನ ಅತಿಕ್ರಮಣದಿಂದ ಕೇವಲ ಭಾರತದ ಕೆಲವೇ ಕೆಲವು ಸಂರಕ್ಷಿತ ಪ್ರದೇಶಗಳಲ್ಲಿ ಮಾತ್ರ ಇವು ಕಾಣಸಿಗುತ್ತವೆ. ಭಾರತದ ಅಸ್ಸಾಂ ರಾಜ್ಯದ ಗೊಲಘಟ್ ಜಿಲ್ಲೆಯಲ್ಲಿ ಇರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ವಿಶ್ವದ ಎರಡನೇ ಮೂರು( 2/3) ಭಾಗದಷ್ಟು ಘೇಂಡಾಮೃಗಗಳಿಗೆ ಆವಾಸ ಸ್ಥಳವಾಗಿದೆ.
18 ಮತ್ತು 19ನೇ ಶತಮಾನದಲ್ಲಿ ಕ್ರೀಡೆಗಾಗಿ ಬೇಟೆಯಾಡುವುದು ಸಾಮಾನ್ಯವಾಗಿತ್ತು. 19ನೇ ಶತಮಾನದ ಮಧ್ಯಭಾಗದಲ್ಲಿ ಅಸ್ಸಾಮಿನ ಕೆಲವು ಬ್ರಿಟೀಷ್ ಮಿಲಿಟರಿ ಆಫೀಸರ್ ಗಳು ಒಬ್ಬೊಬ್ಬರೂ ಇನ್ನೂರಕ್ಕೂ ಹೆಚ್ಚು ಘೇಂಡಾಮೃಗಗಳನ್ನು ಬೇಟೆಯಾಡಿದ ದಾಖಲೆಗಳಿವೆ. 1908 ರ ಹೊತ್ತಿಗೆ ಕಾಜಿರಂಗ ಉದ್ಯಾನವನದಲ್ಲಿ ಉಳಿದಿದ್ದ ಘೇಂಡಾಮೃಗಗಳ ಸಂಖ್ಯೆ ಕೇವಲ 12 ಮಾತ್ರ!
ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿಯೇ ಇವು ಅವನತಿಯ ಹಾದಿಯನ್ನು ಹಿಡಿಯಲು, ಕಾಳಸಂತೆಯಲ್ಲಿ ಇವುಗಳ ಕೊಂಬುಗಳಿಗೆ ಇರುವ ಬೇಡಿಕೆಯೇ ಕಾರಣ. ಭಾರತ ಸರ್ಕಾರ ಘೇಂಡಾಮೃಗಗಳ ಸಂತತಿಯನ್ನು ಉಳಿಸಲು, ಇವುಗಳನ್ನು ಸಂರಕ್ಷಿತ ಪ್ರಭೇದಗಳ ಪಟ್ಟಿಗೆ ಸೇರಿಸಿ ಪೂರ್ಣ ಸಂರಕ್ಷಣೆ ಕೊಟ್ಟು, ಅವುಗಳ ಬೇಟೆಯನ್ನು ನಿಷೇಧಿಸಲಾಯಿತು. ಭಾರತ ಮತ್ತು ನೇಪಾಳ ಸರ್ಕಾರಗಳು ಘೇಂಡಾಮೃಗಗಳ ಸಂತತಿಯನ್ನು ಉಳಿಸಿ ಸಂರಕ್ಷಿಸಲು ಮಹತ್ತರ ತೀರ್ಮಾನಗಳನ್ನು ತೆಗೆದುಕೊಂಡು ಇವುಗಳನ್ನು ವಿನಾಶದ ಅಂಚಿನಿಂದ ಪಾರುಮಾಡಿದವು.
ಪ್ರಸ್ತುತ ಭಾರತೀಯ ಘೇಂಡಾಮೃಗವನ್ನು ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ (1972) ಅಡಿಯಲ್ಲಿ ರಕ್ಷಿಸಲಾಗಿದೆ. ಇದನ್ನು ವರ್ಗ-I ಪ್ರಭೇದವೆಂದು ಪರಿಗಣಿಸಲಾಗುತ್ತದೆ ಮತ್ತು ಪ್ರಸ್ತುತ ಐಯುಸಿಎನ್ ಸ್ಥಿತಿಯ ಪ್ರಕಾರ ಅಪಾಯದಲ್ಲಿ ಇರುವ ವರ್ಗಕ್ಕೆ ಸೇರುತ್ತದೆ. ಸೆಪ್ಟಂಬರ್ 22ನೇ ವಿಶ್ವ ಘೇಂಡಾಮೃಗ ದಿನ ಎಂದು 2010ರಿಂದ ಆಚರಿಸುತ್ತಾ ಬರುತ್ತಿದ್ದೇವೆ. ಈ ಆಚರಣೆಯ ಮುಖ್ಯ ಉದ್ದೇಶ ದೇಶದ ನಾಗರೀಕರಲ್ಲಿ ಈ ಘೇಂಡಾಮೃಗ ಎಲ್ಲಾ ಐದು ಪ್ರಭೇದಗಳನ್ನು ಅವನತಿಯ ಅಂಚಿನಿಂದ ಪಾರು ಮಾಡಿ ಉಳಿಸಲು ಜಾಗೃತಿ ಮೂಡಿಸುವುದಾಗಿದೆ.
ಭಾರತ ಇಂದು ವಿಶ್ವದಲ್ಲೇ ಅತಿ ಹೆಚ್ಚು ಘೇಂಡಾಮೃಗಗಳಿರುವ ಏಕೈಕ ದೇಶವಾಗಿದೆ.
ಮೂಲ ಲೇಖನ: ಚತುರ್ವೇದ್ ಸೇಟ್ ಆರ್.
ಕನ್ನಡಕ್ಕೆ ಅನುವಾದ: ಶಂಕರಪ್ಪ ಕೆ. ಪಿ.
ಸಹಾಯಕ ಪ್ರಾಧ್ಯಾಪಕರು
ಎಸ್ ಎನ್ ಆರ್ ಪದವಿ ಕಾಲೇಜ್ , ಜಿಗಣಿ , ಬೆಂಗಳೂರು.