ಬೆಳ್ಳಿಗೆರೆ ಚಿಟ್ಟೆ

ಬೆಳ್ಳಿಗೆರೆ ಚಿಟ್ಟೆ

ಇದು ಸಣ್ಣ ಗಾತ್ರದ ಕೇಸರಿ-ಬಿಳಿ ಮಿಶ್ರಿತ ಹೊಳೆಯುವ ಸುಂದರ ಚಿಟ್ಟೆ. ಮೇಲಿನ ರೆಕ್ಕೆಗಳ ಹಿಂಭಾಗ ಮತ್ತು ಕೆಳಗಿನ ರೆಕ್ಕೆಗಳ ಹಿಂಭಾಗದಲ್ಲಿ ಹೊಳೆವ ಬೆಳ್ಳಿಗೆರೆಗಳಿರುತ್ತವೆ ಹಾಗೂ ಪಕ್ಕದಲ್ಲಿರುವ ನಾಲ್ಕು ಉದ್ದವಾದ ಕೇಸರಿ ಪಟ್ಟಿಗಳಿಗೆ ಕಂದು ಅಂಚಿದೆ. ಉಳಿದ ಭಾಗವು ಬಿಳಿ ವರ್ಣದಿಂದ ಕೂಡಿದೆ. ಕೆಳಗಿನ ರೆಕ್ಕೆಗಳಲ್ಲಿ ಎರಡು ಪುಟ್ಟ ಬಾಲಗಳಿವೆ. ದೇಹವು ಬಿಳಿ ಮತ್ತು ಕಂದು ಪಟ್ಟಿಗಳಿಂದ ಕೂಡಿದೆ. ಕಾಲುಗಳು ಬಿಳುಪಾಗಿವೆ. ಗ್ರಹಣಾಂಗವು ಕಂದಾಗಿದ್ದು ಸೂಕ್ಷ್ಮವಾದ ಬಿಳಿ ಚುಕ್ಕೆಗಳಿವೆ. ರೆಕ್ಕೆಗಳನ್ನು ಅರಳಿಸಿದಾಗ ನೀಲಿ ವರ್ಣವು ಕಾಣುತ್ತದೆ. 27-35 ಮಿಲಿ ಮೀಟರ್ ರೆಕ್ಕೆಗಳ ಹರವು ಹೊಂದಿವೆ. ಕೇಸರಿ ಪಟ್ಟೆಗಳ ಮಧ್ಯದಲ್ಲಿ ಹೊಳೆಯುವ ಬೆಳ್ಳಿಗೆರೆ ಇರುವುದರಿಂದ ಇವಕ್ಕೆ ಬೆಳ್ಳಿ ಗೆರೆ ಚಿಟ್ಟೆಗಳೆನ್ನುವರು.

ಪೊದೆಗಳಲ್ಲಿ ವೇಗವಾಗಿ ಹಾರಾಡುತ್ತವೆ. ಹೂ-ಗಿಡಗಳ ಮೇಲೆ ಕುಳಿತು ಬಿಸಿಲು ಕಾಯಿಸುತ್ತವೆ. ತೇವಾಂಶವಿರುವ ಮಣ್ಣು ಇಲ್ಲವೇ ಪಕ್ಷಿಗಳ ಮಲದ ಮೇಲೆ ಕೂರುತ್ತವೆ. ಹೂವುಗಳ ಮೇಲೆ ಕುಳಿತು ಮಕರಂದ ಹೀರುವಾಗ ಹತ್ತಿರ ಹೋದರೂ ಹಾರುವುದಿಲ್ಲ ಆದರೆ ತೊಂದರೆ ಕಂಡು ಬಂದಾಗ ವೇಗವಾಗಿ ಅಲ್ಲಿಂದ ಹಾರಿ ಮತ್ತೆ ಸ್ವಲ್ಪ ಸಮಯದ ನಂತರ ಅದೇ ಜಾಗಕ್ಕೆ ಹಿಂದಿರುಗಿ ಬಂದು ಕೂರುವ ಸ್ವಭಾವವನ್ನು ಹೊಂದಿವೆ. ಈ ಚಿಟ್ಟೆಗಳ ಕಂಬಳಿ ಹುಳುವಿನ ಆಹಾರ ಸೀಗಡಿ, ಅಬನಾಶಿ ಬಳ್ಳಿ, ಕಕ್ಕೆ, ವಿಷಮಧಾರಿ, ತಮರಿ ಪುಷ್ಪ, ಎಲಚಿ (ಬಾರಿಹಣ್ಣು) ಜಾತಿ, ಕೌಳಿಕಾಯಿ, ಕಾರಿಹಣ್ಣಿನ ಸಸ್ಯಗಳಾಗಿವೆ. ಈ ಚಿಟ್ಟೆಗಳು ಕರುನಾಡಲ್ಲಿ ಮಾರ್ಚ್ ನಿಂದ ಅಕ್ಟೋಬರ್ ತಿಂಗಳಲ್ಲಿ ಕಂಡು ಬರುತ್ತವೆ.

ಬೆಳ್ಳಿಗೆರೆ ಚಿಟ್ಟೆಗಳನ್ನು “ಕಾಮನ್ ಸಿಲ್ವರ್‌ಲೈನ್” (Common Silverline) ಎಂದು ಆಂಗ್ಲ ಭಾಷೆಯಲ್ಲಿ ಕರೆದು ವೈಜ್ಞಾನಿಕವಾಗಿ “ಸ್ಪಿಂಡಾಸಿಸ್ ವಲ್ಕನಸ್” (Spindasis vulcanus) ಎಂದು ಹೆಸರಿಸಿ, ಸಂದಿಪದಿಗಳ ಕೀಟ (Insecta) ವರ್ಗದ ಲೆಪಿಡೋಪ್ಟೆರಾ (Lepidoptera) ಗಣದ ನೀಲಿ ಚಿಟ್ಟೆಗಳ “ಲೈಕೇನಿಡೇ” (Lycaenidae) ಕುಟುಂಬಕ್ಕೆ ಸೇರಿಸಲಾಗಿದೆ. ಡ್ಯಾನಿಶ್ ಪ್ರಾಣಿಶಾಸ್ತ್ರಜ್ಞ ಜೋಹಾನ್ ಕ್ರಿಶ್ಚಿಯನ್ ಫ್ಯಾಬ್ರಿಸಿಯಸ್‌ ರವರು 1775ರಲ್ಲಿ ಪ್ರಪ್ರಥಮವಾಗಿ ಈ ಚಿಟ್ಟೆಗಳನ್ನು ದಾಖಲಿಸಿದರು.

ಈ ಬೆಳ್ಳಿಗೆರೆ ಚಿಟ್ಟೆಗಳು ಕುರುಚಲು ಕಾಡು, ಎಲೆ ಉದುರುವ ಕಾಡು, ನಿತ್ಯ ಹರಿದ್ವರ್ಣ ಕಾಡು, ಶುಷ್ಕ ಪ್ರದೇಶ, ಕೃಷಿ ಪ್ರದೇಶ, ವಿರಳವಾದ ಸಸ್ಯಗಳಿರುವ ಪ್ರದೇಶ, ಚದುರಿದ ಅರಣ್ಯದ ಸಸ್ಯಪೊದೆಗಳಲ್ಲಿ ವಾಸಿಸುತ್ತವೆ. ನೈರುತ್ಯ ಮತ್ತು ಈಶಾನ್ಯ ಮುಂಗಾರು ಮಳೆ ಮಾರುತುಗಳ ಋತುವಿನಲ್ಲಿ ಇವುಗಳ ಸಂಖ್ಯೆಯು ಹೆಚ್ಚಾಗುತ್ತದೆ. ಈ ಚಿಟ್ಟೆಗಳು ನಮ್ಮ ದೇಶದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಒರಿಸ್ಸಾ, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ, ಉತ್ತರ ಪ್ರದೇಶದ ಪ್ರಾಂತ್ಯಗಳಲ್ಲಿ ಕಂಡು ಬರುತ್ತವೆ. “ಸ್ಪಿಂಡಾಸಿಸ್ ವಲ್ಕನಸ್ ವಲ್ಕನಸ್” ಎಂಬ ಉಪತಳಿಯು ಭಾರತದಲ್ಲಿ, “ಸ್ಪಿಂಡಾಸಿಸ್ ವಲ್ಕನಸ್ ಫಸ್ಕಾ” ಎಂಬ ಉಪತಳಿಯು ಶ್ರೀಲಂಕಾದಲ್ಲಿ “ಸ್ಪಿಂಡಾಸಿಸ್ ವಲ್ಕನಸ್ ಜವಾನಸ್” ಎಂಬ ಉಪತಳಿಯು ಜಾವಾದಲ್ಲಿ “ಸ್ಪಿಂಡಾಸಿಸ್ ವಲ್ಕನಸ್ ಟವೋಯಾನಾ” ಎಂಬ ಉಪತಳಿಯು ಇವಾನ್ಸ್, ಮ್ಯಾನ್ಮಾರ್ ಹಾಗೂ ಥೈಲ್ಯಾಂಡ್‌ ಗಳಲ್ಲಿ ಈ ಚಿಟ್ಟೆಯ ಉಪ ಪ್ರಭೇದಗಳನ್ನು ಗುರುತಿಸಿ ದಾಖಲಿಸಲಾಗಿದೆ.

ಚಿತ್ರ ಲೇಖನ:
ಶಶಿಧರಸ್ವಾಮಿ ಆರ್. ಹಿರೇಮಠ
ಹಾವೇರಿ ಜಿಲ್ಲೆ

Print Friendly, PDF & Email
Spread the love
error: Content is protected.