ವಿಧವೆ ಜೇಡ

ವಿಧವೆ ಜೇಡ

ಥೆರಿಡೀಡೆ ಕುಟುಂಬಕ್ಕೆ ಸೇರಿದ ಲ್ಯಾಟ್ರೊಡಕ್ಟಸ್ ಪ್ರಭೇದದ ವಿಧವೆ ಜೇಡ ಗದಗ ಜಿಲ್ಲೆಯ ನರಗುಂದ ಪಟ್ಟಣದ ಜ್ಞಾನ ಮುದ್ರಾ ಪಬ್ಲಿಕ್ ಶಾಲಾ ಆವರಣದಲ್ಲಿ ಪತ್ತೆಯಾಗಿದೆ. ಇದರ ವೈಜ್ಞಾನಿಕ ಹೆಸರು ಲ್ಯಾಟ್ರೊಡಕ್ಟಸ್. ಇಲ್ಲಿವರೆಗೆ ವಿಶ್ವದಲ್ಲಿ ಲ್ಯಾಟ್ರೊಡಕ್ಟಸ್ ಪ್ರಭೇದಕ್ಕೆ ಸೇರಿದ ಮೂವತ್ತೊಂದು ಜಾತಿಯ ಜೇಡಗಳನ್ನು ಗುರುತಿಸಿದ್ದು, ಭಾರತದಲ್ಲಿ ಈ ಪ್ರಭೇದಕ್ಕೆ ಸೇರಿದ ನಾಲ್ಕು ಜಾತಿ ಜೇಡಗಳನ್ನು ದಾಖಲಿಸಲಾಗಿದೆ. ಲ್ಯಾಟ್ರೊಡಕ್ಟಸ್ ಎಲಿಗನ್ಸ್, ಲ್ಯಾಟ್ರೊಡಕ್ಟಸ್ ಜಿಯೊಮೆಟ್ರಿಕಸ್, ಲ್ಯಾಟ್ರೊಡಕ್ಟಸ್ ಇರಿಥ್ರೊಮಿಲಸ್ ಮತ್ತು ಲ್ಯಾಟ್ರೊಡಕ್ಟಸ್ ಹಸ್ಸೆಲ್ಟೀ. ಭಾರತದಲ್ಲಿ ವಿಧವೆ ಜೇಡಗಳು ಗುಜರಾತ್ ರಾಜ್ಯದಲ್ಲಿ ಹೆಚ್ಚಾಗಿ ದಾಖಲಾಗಿದ್ದು ಇನ್ನುಳಿದ ಬೇರೆ ರಾಜ್ಯಗಳಲ್ಲಿ ಇವುಗಳ ದಾಖಲೆ ತುಂಬಾ ಕಡಿಮೆ ಮತ್ತು ವಿರಳ.

ಲ್ಯಾಟ್ರೊಡಕ್ಟಸ್ ಹಸ್ಸೆಲ್ಟೀ ಆಸ್ಟ್ರೇಲಿಯಾ ಮೂಲದ ವಿಧವೆ ಜೇಡವಾಗಿದ್ದು ನಮ್ಮ ದೇಶದಲ್ಲಿ ಕಾಣಸಿಗುವುದು ತುಂಬಾ ಅಪರೂಪ. ಕರ್ನಾಟಕದಲ್ಲಿ ಈ ಪ್ರಭೇದದ ಜೇಡಗಳ ಹಂಚಿಕೆ ಇದ್ದರೂ ಗೋಚರಿಸುವುದು ವಿರಳ ಮತ್ತು ಈ ಜೇಡಗಳ ಜೀವನ ಕ್ರಮದ ಅಧ್ಯಯನ ಕಡಿಮೆ. ಲ್ಯಾಟ್ರೊಡಕ್ಟಸ್ ಪ್ರಭೇದಕ್ಕೆ ಸೇರಿದ ಎಲ್ಲ ಮೂವತ್ತೊಂದು ಜಾತಿ ಜೇಡಗಳು ಅತ್ಯಂತ ವಿಷಕಾರಿಯಾಗಿದ್ದು ತಮ್ಮ ಬಲೆಯಲ್ಲಿ ಸಿಲುಕಿದ ಬೇಟೆಯನ್ನು ಕೊಲ್ಲಲು ಮತ್ತು ಜೀರ್ಣಿಸಿಕೊಳ್ಳಲು ಈ ವಿಷ ಸಹಕಾರಿಯಾಗಿದೆ. ಇವು ಬಲೆಯಲ್ಲಿ ಸಿಲುಕಿದ ನೊಣ, ಸೊಳ್ಳೆ, ದುಂಬಿ, ಮಿಡತೆ, ಪತಂಗ, ಮತ್ತು ಜೇಡಗಳನ್ನು ತಿನ್ನುತ್ತವೆ. ವಿರಳವಾಗಿ ಬಲೆಯಲ್ಲಿ ಬಿದ್ದ ಹಲ್ಲಿಗಳನ್ನು ಕೂಡಾ ತಿನ್ನಬಲ್ಲವು.

ಈ ಪ್ರಭೇದದ ಎಲ್ಲಾ ಜೇಡಗಳಲ್ಲಿ ಹೆಣ್ಣು ಜೇಡ ಗಂಡು ಜೇಡದೊಡನೆ ಮಿಲನವಾದ ನಂತರ ಗಂಡು ಜೇಡವನ್ನು ತಿನ್ನುತ್ತವೆ- ಈ ವಿದ್ಯಮಾನಕ್ಕೆ (Sexual cannabalism)ಲೈಂಗಿಕ ಸ್ವಜಾತಿ ಭಕ್ಷಕತೆ ಎನ್ನುತ್ತಾರೆ. ಈ ಕಾರಣದಿಂದಾಗಿ ಈ ಪ್ರಭೇದದ ಜೇಡಗಳಿಗೆ ವಿಧವೆ ಜೇಡವೆನ್ನುತ್ತಾರೆ.

ಹೆಣ್ಣು ಜೇಡವು 2-ಬ್ಯಾಚ್‍ ಗಳಂತೆ ಪ್ರತಿ ಬ್ಯಾಚ್‍ ನಲ್ಲಿ ಹತ್ತು ಮೊಟ್ಟೆಚೀಲಗಳನ್ನಿಡುತ್ತದೆ. ಪ್ರತಿ ಮೊಟ್ಟೆ ಚೀಲದಲ್ಲಿ 200-250 ಮೊಟ್ಟೆಗಳಿರುತ್ತವೆ. 25-28 ದಿನಗಳ ನಂತರ ಮೊಟ್ಟೆ ಚೀಲದಿಂದ ಮರಿಗಳು ಹೊರಬರುತ್ತವೆ. (ಸದ್ಯ ನನ್ನ ಅಧ್ಯಯನದ ಪ್ರಕಾರ ಮೂವತ್ತು ದಿನವಾದರು ಇನ್ನು ಮರಿ ಆಗಿರುವುದಿಲ್ಲ, ಏಕೆಂದರೆ ಅವು ಮೊಟ್ಟೆ ಇಟ್ಟ ಸ್ಥಳದ ಕೊಠಡಿಯ ಉಷ್ಣತೆ ಮತ್ತು ಹೊರ ಪರಿಸರದ ಉಷ್ಣತೆ ಮೇಲೆ ಅವಲಂಬಿತವಾಗಿರುತ್ತದೆ)

ಗಂಡು ಜೇಡಗಳು 6-7 ತಿಂಗಳು ಬದುಕಿದರೆ, ಹೆಣ್ಣು ಜೇಡಗಳ ಆಯಸ್ಸು 2-3 ವರ್ಷ. ಹೆಣ್ಣು ಜೇಡಗಳ ಲೈಂಗಿಕ ಸ್ವಜಾತಿ ಭಕ್ಷಕತೆ ವಿದ್ಯಮಾನದಿಂದಾಗಿ ಗಂಡು ಜೇಡದ ಆಯಸ್ಸು ಕಡಿಮೆ. ಇವು ನಿಶಾಚರಿ ಜೇಡಗಳಾಗಿದ್ದು ಬಳಕೆ ಇರದ ಸಂಗ್ರಹ ಕೋಣೆ, ಶೌಚಾಲಯ ಮತ್ತು ಗೊದಾಮುಗಳಂತ ಕಟ್ಟಡಗಳಲ್ಲಿನ ಕತ್ತಲಿನ ಆವಾಸವನ್ನು ಇಷ್ಟಪಡುತ್ತವೆ.

ಚಿತ್ರ-ಲೇಖನ

ಮಂಜುನಾಥ ಎಸ್. ನಾಯಕ
ಗದಗ ಜಿಲ್ಲೆ

Print Friendly, PDF & Email
Spread the love
error: Content is protected.