ವಿ.ವಿ. ಅಂಕಣ – ಅಷ್ಟಪದಿಯ ವಿಷಜಾಲ!

ವಿ.ವಿ. ಅಂಕಣ – ಅಷ್ಟಪದಿಯ ವಿಷಜಾಲ!

ಮುಂಜಾನೆಯ ಸಮಯದಲ್ಲಿ, ಅದರಲ್ಲೂ ಮಳೆಗಾಲದ ಆದಿಯಲ್ಲಿ ಬೆಳಗಿನ ವಿಹಾರ ಹೋಗುವವರಿಗೆ, ಆ ಮುಂಜಾನೆ ಮಂಜಿನ ಹನಿಗಳು ಸಣ್ಣ ಗಿಡದ ಎಲೆಗಳ ಮೇಲೆ ಮುತ್ತುಗಳು ಜೋಡಿಸಿರುವ ಹಾಗೆ ಕಾಣುತ್ತದೆ. ಅದನ್ನು ಕಂಡೊಡನೆ ಏನೋ ಒಂದು ಸಂತಸದ ತಂಗಾಳಿ ಒಳಗೆ ಬೀಸಿದ ಹಾಗೆ ಅನಿಸುತ್ತದೆ. ನೀವು ಎಂದಾದರೂ ಗಮನಿಸಿದ್ದೀರೇನು, ಅದೇ ಮಂಜಿನ ಹನಿಗಳ ಜೇಡರ ಬಲೆಯ ಮೇಲಿನ ಅಲಂಕಾರವನ್ನು? ಅಬ್ಬಾ… ಅದು ಇನ್ನೊಂದು ವಿಸ್ಮಯ. ಪ್ರಕೃತಿ ಮಾತೆ ತನ್ನ ಮಕ್ಕಳಿಗೆ ಬೆಳಿಗ್ಗೆ ಬೆಳಿಗ್ಗೆಯೇ ಎದ್ದು ಸಿಂಗರಿಸಿದಳೇನೋ ಅನ್ನುವಷ್ಟು ಸುಂದರವಾಗಿ ಕಾಣುತ್ತವೆ. ಇವುಗಳನ್ನು ನೋಡಿ ಆನಂದಿಸಲೆಂದೇ ಏನೋ ಪಕ್ಷಿಗಳು ಹಿನ್ನೆಲೆಯಲ್ಲಿ ಗಾಯನವನ್ನೂ ನಡೆಸಿರುತ್ತವೆ. ಇವನ್ನೆಲ್ಲಾ ನೋಡಿದರೆ, ನಮ್ಮ ಸುತ್ತಲಿನ ಪರಿಸರವನ್ನು ಎಷ್ಟು ಅಚ್ಚುಕಟ್ಟಾಗಿ ಮತ್ತು ಸುಂದರವಾಗಿ ಹೆಣೆಯಲಾಗಿದೆ ಎನಿಸುವುದಿಲ್ಲವೇ? ಇವನ್ನೆಲ್ಲಾ ಗಮನಿಸಿದ ಮೇಲೆ ಖಂಡಿತ ಅನಿಸುತ್ತದೆ. ಆದರೆ ಇಷ್ಟು ಚಂದವಾಗಿ ಹೆಣೆಯಲಾದ ನಮ್ಮ ಸುತ್ತಲಿನ ಪರಿಸರದಲ್ಲೇ ಎಷ್ಟೋ ನಿಗೂಢ, ಕರಾಳ ಸಂಗತಿಗಳು ಅಡಗಿರುವುದೂ ಅಷ್ಟೇ ಸತ್ಯ.

ಅದು ಹೇಗೆ, ಎಂದು ನೀವು ಕೇಳುವ ಮುಂಚೆಯೇ ನಾನೇ ಒಂದು ಉದಾಹರಣೆಯ ಮೂಲಕ ವಿವರಿಸಿಯೇ ಬಿಡುತ್ತೇನೆ ತಾಳಿ. ಅದಕ್ಕೂ ಮೊದಲು ಜೇಡಗಳ ಬಗ್ಗೆ ನಮಗಿರುವ ಜ್ಞಾನ ಏನು ಎಂದು ಸ್ವಲ್ಪ ನೋಡಿಬಿಡೋಣ. ಜೇಡ ಒಂದು ಕೀಟ, ಅದಕ್ಕೆ ಎಂಟು ಕಾಲುಗಳು, 6-8 ಕಣ್ಣುಗಳು, ಅವುಗಳಲ್ಲೇ ಸಾವಿರಾರು ಪ್ರಭೇದಗಳು (ಸಿಗ್ನೇಚರ್ ಜೇಡ, ನೆಗೆ ಜೇಡ, ತೋಳ ಜೇಡ ಹೀಗೆ…) ಬಹುತೇಕ ಜೇಡಗಳು ಬಲೆ ಹೆಣೆದು ಕಾಯ್ದು ಬೇಟೆಯಾಡಿ ಆಹಾರ ಸೇವಿಸುವ ಕೀಟಾಹಾರಿಯಾದರೂ, ಅವುಗಳಲ್ಲೂ ಕೆಲವು ಸಸ್ಯಾಹಾರಿಗಳಿವೆ. ರಾತ್ರಿಯೆಲ್ಲಾ ಕಷ್ಟಪಟ್ಟು ಸರಿಯಾದ ಜಾಗ ಹುಡುಕಿ, ಬಲೆ ಹೆಣೆದು, ತಾಳ್ಮೆಯಿಂದ ಕಾಯ್ದಮೇಲೆ ಬಲೆಗೆ ಬಿದ್ದ ಕೀಟ ಟಕ್ಕನೆ ಹಾರಿ ಹೋದರೆ ಏನು ಪ್ರಯೋಜನ? ಅಲ್ಲವೇ? ಆದರೆ ಜೇಡರ ಬಲೆಗೆ ಒಮ್ಮೆ ಸಿಕ್ಕರೆ ಅಲ್ಲಿಂದ ಬಚಾವಾಗುವುದು ಅಷ್ಟು ಸುಲಭದ ಮಾತಲ್ಲ. ಕೆಲವೊಮ್ಮೆ ನೀವು ಗಮನಿಸಿರಬಹುದು ಅಥವಾ ಟಿ.ವಿ/ಯೂಟ್ಯೂಬ್ ನಲ್ಲೋ ನೋಡಿರಬಹುದು, ದೊಡ್ಡ ದೊಡ್ಡ ಕೀಟಗಳು, ಚಿಟ್ಟೆಗಳು, ಪಕ್ಷಿಗಳೂ ಸಹ ಬಲೆಗೆ ಸಿಕ್ಕಿ ಹಾಕಿಕೊಂಡು ತಪ್ಪಿಸಿಕೊಳ್ಳಲಾಗದೆ ಜೇಡಕ್ಕೆ ಆಹಾರವಾಗಿರುವುದುಂಟು. ಹಾಗಾದರೆ ಜೇಡರ ಆ ಬಲೆಯ ಬಲ ಎಷ್ಟಿರಬಹುದು? ಊಹಿಸಿಕೊಳ್ಳಿ. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಕೆಲವು ಜೇಡಗಳ ಇಷ್ಟು ಯಶಸ್ವಿ ಬೇಟೆಯ ಹಿಂದೆ ಇನ್ನೊಂದು ಗುಟ್ಟೂ ಅಡಗಿದೆ.

ಎಲ್ಲಿ…??

ಬೇರೆಲ್ಲೂ ಅಲ್ಲ ಅದೇ ಜೇಡದ ಜೇಡರ ಬಲೆಯಲ್ಲಿ. ಮೇಲೆ ಹೇಳಿದ ಹಾಗೆ ಮಂಜಿನ ಹನಿಗಳ ಸುಂದರ ನೋಟದ ಒಳಗೇ ಆ ಕರಾಳ ಸಂಗತಿಯೂ ಅಡಗಿದೆ.

ಏನದು…?

ನಮಗೆ ಕಾಣುವ ಹಾಗೆ ಜೇಡರ ಬಲೆ ಕೀಟಗಳ ಹಿಡಿಯುವ ಅಂಟು ಬಲೆ ಮಾತ್ರವಲ್ಲ. ಮಂಜಿನ ಹನಿಗಳ ಹಾಗೆಯೇ ವಿಷದ ಸೂಕ್ಷ್ಮ ಹನಿಗಳನ್ನೂ ಸಹ ಬಲೆಯ ಮೇಲೆ ಕೆಲವು ಜೇಡಗಳು ಲೇಪಿಸುತ್ತವೆ! ಇದು ನಂಬಲು ಸ್ವಲ್ಪ ಕಷ್ಟವಾದರೂ, ಸಂಶೋಧನೆ ಹೇಳಿದ ಮೇಲೆ ನಂಬಲೇಬೇಕು. ಹೌದು ಜೇಡಗಳ ಬೇಟೆ ಅಷ್ಟು ಯಶಸ್ವಿಯಾಗಬೇಕಾದರೆ ಇದೂ ಸಹ ಮುಖ್ಯ ಪಾತ್ರ ವಹಿಸುತ್ತದೆ. ಅದು ಹೇಗೆ? ಸಂಶೋಧನೆ ಏನು ಹೇಳುತ್ತಿದೆ? ಎಂಬ ನಿಮ್ಮ ಪ್ರಶ್ನೆಗಳ ಸಾಲಿಗೆ, ಸುಲಿದ ಬಾಳೆಹಣ್ಣಿನಂತೆ ಉತ್ತರಗಳು ಮುಂದಿವೆ.

ಮಾರಿಯೋ ಪಾಲ್ಮಾರ ಪ್ರಕಾರ, ನಾವೂ ಸಹ ನೋಡಿರಬಹುದಾದ ಸುರುಳಿಯಾಕಾರದ ಬಲೆ ಹೆಣೆಯುವ ಆರ್ಬ್ ವೀವರ್ ಎಂಬ ಸಾಮಾನ್ಯ ಹಿತ್ತಲ ಜೇಡವು ತನ್ನ ಬಲೆಯಲ್ಲಿ ನ್ಯೂರೋಟಾಕ್ಸಿನ್(ನರ ವಿಷ) ಸೂಕ್ಷ್ಮ ಕಣಗಳನ್ನೂ ಲೇಪಿಸುತ್ತವೆ. ಈ ಮಾತನ್ನು ಅವರ ಬಾಯಿಂದ ಕೇಳಿದ ತಕ್ಷಣವೇ ಅವರ ಸಹೋದ್ಯೋಗಿಗಳೆಲ್ಲಾ, ನೀವು ಈಗ ಅಂದುಕೊಳ್ಳುತ್ತಿರುವ ಹಾಗೆ, ‘ನಿಂಗೆ ತಲೆ ಕೆಟ್ಟಿದೆ’ ಎಂದೇ ಹೇಳಿದರಂತೆ. ಅದರಲ್ಲೇನು ತಪ್ಪಿಲ್ಲ ಬಿಡಿ. ಏಕೆಂದರೆ ಪ್ರಪಂಚದಲ್ಲಿಯೇ ಇದುವರೆಗೂ ಯಾರೂ ಸಹ ಇಂತಹ ವಿಷಯವನ್ನು ಊಹಿಸಲೂ ಇಲ್ಲ. ಜೇಡಕ್ಕೆ ತನ್ನ ಬೇಟೆಯು ತನ್ನ ಬಲೆಯಲ್ಲಿ ಸಿಕ್ಕಲು ಆ ಬಲೆಗಿರುವ ಅಂಟು ಗುಣವೇ ಸಾಕಾಗಿರುವುದರಿಂದ ಇಂತಹ ಒಂದು ಉಪಾಯ/ಗುಣ ಆ ಬಲೆಗೆ ಇರಬಹುದು ಎಂದು ಯೋಚಿಸಿಯೇ ಇರಲಿಲ್ಲ.

ಹಾಗೆಂದ ಮಾತ್ರಕ್ಕೆ ಪಾಲ್ಮಾರವರು ಹೇಳಿದ ಮಾತು ತಪ್ಪೆಂದಲ್ಲ. ಆ ಸಮಯದಲ್ಲಿ ಯಾರೂ ನಂಬಲಿಲ್ಲ. ಇನ್ನೊಂದು ಕೋನದಲ್ಲಿ ಯೋಚಿಸುವುದಾದರೆ, ಪಾಲ್ಮಾರಂತಹ ಜೀವರಸಾಯನಶಾಸ್ತ್ರದ ವಿಜ್ಞಾನಿ ಈ ಮಾತನ್ನು ಹೇಳುತ್ತಿದ್ದಾನೆ ಎಂದಮೇಲೆ ಏನೋ ಕಾರಣ ಇರಬೇಕಲ್ಲವೇ?

ಖಂಡಿತ ಇದೆ. ಈಗ ಹೇಳುತ್ತಿರುವ ಈ ಸಂದರ್ಭ ನಡೆದದ್ದು ಇಪ್ಪತೈದು ವರ್ಷಗಳ ಹಿಂದೆ. ಆಗ ಪಾಲ್ಮಾರವರು ವಾಸಿಸುತ್ತಿದ್ದ ಪ್ರದೇಶದಲ್ಲಿ ಈ ಆರ್ಬ್ ವೀವರ್ ಜೇಡವೂ ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಹುಳ ಹುಪ್ಪಟೆಗಳು ಹೋಗಿ ಜೇಡರ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದುದನ್ನು ಗಮನಿಸುತ್ತಲೇ ಇದ್ದರು. ಒಮ್ಮೆ ಅವರ ಕಣ್ಣೆದುರೇ ಒಂದು ಕೀಟ ಬಂದು ಬಲೆಯಲ್ಲಿ ಬಿತ್ತು. ಹಾಗೆ ಗಮನಿಸುತ್ತಿರುವಾಗ ಆ ಕೀಟ ನಿಮಿಷಗಳಲ್ಲಿ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ನಾಲಿಗೆ ಹೊರ ಚಾಚಿ, ಜೇಡವೇ ಬಂದು ವಿಷ ಬಿಟ್ಟಹಾಗೆ ವರ್ತಿಸುವುದನ್ನು ಗಮನಿಸಿದರು. ನಂತರ ಅದನ್ನು ಬಲೆಯಿಂದ ಬಿಡಿಸಿ ಕೆಳಗೆ ಬಿಟ್ಟರು. ಆಶ್ಚರ್ಯವೆಂದರೆ ಆಗಲೂ ಆ ಕೀಟ ಕಂಠಪೂರ್ತಿ ಕುಡಿದವರಂತೆ ತಟ್ಟಾಡುತ್ತಾ, ದಿಕ್ಕು-ದೆಸೆ ಇಲ್ಲದೇ ಓಡಾಡುತ್ತಿತ್ತಂತೆ. ಪಾಲ್ಮಾರವರು ನ್ಯ್ಯೂರೋಟಾಕ್ಸಿನ್ ಗಳ ಮೇಲೆಯೇ ಹಲವಾರು ವರ್ಷಗಳಿಂದ ಕೆಲಸಮಾಡುತ್ತಿದ್ದರಾದ್ದರಿಂದ ತಕ್ಷಣ, ಇದು ಯಾವುದೋ ನ್ಯೂರೋಟಾಕ್ಸಿನ್ ನ ಕೆಲಸವೇ ಇರಬೇಕು ಎಂದುಕೊಂಡರು. ಆದರೆ ಆಗ ಅದನ್ನು ನಿರೂಪಿಸಲು ಆಗಲಿಲ್ಲ. ಹಲವು ವರ್ಷಗಳ ಬಳಿಕ ತನ್ನ PhD ಶಿಷ್ಯನ ಮೂಲಕ ನಡೆಸಿದ ಪ್ರಯೋಗ ಮತ್ತು ಅಧ್ಯಯನಗಳಿಂದ ಅದೇ ನಿಜವೆಂದು ಹೇಳಬಹುದಾಗಿದೆ.

ಅವರು ಬನಾನ ಜೇಡವೆಂಬ ಒಂದು ಬಗೆಯ ಆರ್ಬ್ ವೀವರ್ ಜೇಡದ ಬಲೆಯನ್ನು ತೆಗೆದುಕೊಂಡರು. ನಂತರ ಅದರಲ್ಲಿನ ಜೀನ್ ಮತ್ತು ಪ್ರೋಟೀನ್ ಗಳನ್ನು ಅಭ್ಯಸಿಸಿದಾಗ ಆಶ್ಚರ್ಯಕ್ಕಿಂತ ಹೆಚ್ಚು ಖುಷಿಯೇ ಆಯಿತು ಎಂದರೆ ಸುಳ್ಳಾಗದು. ಏಕೆಂದರೆ ವರ್ಷಗಳ ಹಿಂದೆ ಪಾಲ್ಮಾ ಊಹಿಸಿದ ಹಾಗೆ ಆ ಪ್ರೋಟೀನ್ ಗಳು ನ್ಯೂರೋಟಾಕ್ಸಿನ್ ಪ್ರೋಟೀನ್ ಗಳನ್ನೇ ಹೋಲುತ್ತಿದ್ದವು. ಹಾಗಿದ್ದರೆ ಆರ್ಬ್ ವೀವರ್ ಪ್ರಭೇದದ ಎಷ್ಟೋ ಜೇಡರ ಬಲೆಗಳು ಈ ತರಹದ ನ್ಯೂರೋಟಾಕ್ಸಿನ್ ಅನ್ನು ಹೊಂದಿರಬಹುದು, ಎನ್ನುತ್ತಾರೆ.

ನಂತರ ಈ ಪ್ರೋಟೀನ್ ಗಳಿದ್ದ ಸೂಕ್ಷ್ಮ ಹನಿಗಳನ್ನು ತೆಗೆದುಕೊಂಡು ಜೇನು ಹುಳುಗಳಿಗೆ ಕೊಟ್ಟಾಗ ಒಂದು ನಿಮಿಷದ ಒಳಗೇ ಜೇನು ಹುಳುಗಳು ಜಡ ಹಿಡಿದ ಹಾಗಾದವು. ಇದನ್ನು ತಿಳಿಸಿದ ನಂತರ ಆಸ್ಟ್ರೇಲಿಯಾದ ಒಬ್ಬ ವಿಷ ಸಂಶೋಧಕ ಹೇಳಿದ್ದು ಹೀಗೆ. ‘ವಿಷಯುಕ್ತ ಜೇಡರ ಬಲೆಗಳಿರುವುದು ಸಾಧ್ಯವಿದೆ. ಏಕೆಂದರೆ ಜೇಡಗಳು ತಮ್ಮ ಬಲೆಯನ್ನು ಇರುವೆಗಳಂತಹ ಉಪದ್ರವಕಾರಿ ಹಾಗು ತನ್ನ ಬೇಟೆಯನ್ನು ಕದಿಯುವ ಇತರ ಕೀಟಗಳಿಂದ ರಕ್ಷಿಸಲು ಮತ್ತು ಅವುಗಳನ್ನು ಓಡಿಸಲು ಈ ತರಹದ ವಿಷದ ಸೂಕ್ಷ್ಮಕಣಗಳನ್ನು ಬಲೆಯಲ್ಲಿ ಲೇಪಿಸಿರಬಹುದು’ ಎಂದು. ಜೊತೆಗೆ ಪಾಲ್ಮಾರವರೂ ಸಹ ತಮ್ಮ ವಿಧ್ಯಾರ್ಥಿಗಳಿಗೆ ‘ಅಷ್ಟಪದಿಯ ಈ ವಿಷಜಾಲ’ದಲ್ಲಿರುವ ಇನ್ನಿತರ ಪ್ರೋಟೀನ್ ಗಳನ್ನು ಅಧ್ಯಯನ ಮಾಡಿ ಅವುಗಳ ಕೆಲಸ ಕಾರ್ಯಗಳನ್ನು ಪತ್ತೆ ಹಚ್ಚಲು ಹೇಳಿದ್ದಾರೆ. ಇದರಿಂದ ಈಗ ಮಾಡಿರುವ ಈ ಸಂಶೋಧನೆಗೆ ಪುಷ್ಟಿ ನೀಡುವ ಇನ್ನೂ ಹೊಸ ವಿಚಾರಗಳ ಅನಾವರಣವಾಗಬಹುದು.

ಇದರ ಜೊತೆ ಜೊತೆಗೇ…ಓದುಗರೇ, ನಿಮ್ಮ ಸಣ್ಣ ಪುಟ್ಟ ಸಂಶೋಧನೆಗಳ, ಆಲೋಚನೆಗಳ ಅಥವಾ ಪ್ರಕೃತಿಯೊಂದಿಗಿನ ಅನುಭವ, ಅನಿಸಿಕೆಗಳ ಅನಾವರಣ ಮಾಡಲು ಕಾನನ ಒಂದು ಉತ್ತಮ ವೇದಿಕೆ, ಮರೆಯದಿರಿ.

ನಿಮ್ಮ ಅನಿಸಿಕೆಗಳ ನಮಗೆ ಬರೆದು ತಿಳಿಸಿ.

ಲೇಖನ: ಜೈಕುಮಾರ್ ಆರ್.
ಡಬ್ಲೂ.ಸಿ.ಜಿ. ಬೆಂಗಳೂರು

Print Friendly, PDF & Email
Spread the love
error: Content is protected.