ಬೋಟ್ಸವಾನದ ಆನೆಗಳ ಸಾವು – ಒಂದು ವಿಶ್ಲೇಷಣೆ
ಬೋಟ್ಸವಾನಾ, ಆಫ್ರಿಕಾದ ದಕ್ಷಿಣ ಭಾಗದಲ್ಲಿ ಇರುವ ಒಂದು ಚಿಕ್ಕ ದೇಶ. ಇಲ್ಲಿನ ಆಕರ್ಷಣೆಯೇ ಆನೆ. ಇಲ್ಲಿರುವ ವಿಶಾಲ ಹುಲ್ಲುಗಾವಲು, ಸುಮಾರು ಒಂದು ಲಕ್ಷದ ಮೂವತ್ತು ಸಾವಿರ ಆನೆಗಳ ಆಶ್ರಯತಾಣವಾಗಿದೆ. ಇಲ್ಲಿನ ಜನರ ಮುಖ್ಯ ಕಸುಬು ಹೈನುಗಾರಿಕೆ ಮತ್ತು ವ್ಯವಸಾಯ. ಪ್ರತೀ ವರ್ಷವೂ ಸತತವಾಗಿ ಕಾಡುತ್ತಿರುವ ಬರದಿಂದ ಇಲ್ಲಿನ ಜನ ಜಾನುವಾರುಗಳ ಮತ್ತು ಕಾಡುಪ್ರಾಣಿಗಳ ನಡುವೆ ಆಹಾರಕ್ಕಾಗಿ, ನೀರಿಗಾಗಿ ಹೋರಟ ಸಂಘರ್ಷ ಇದ್ದುದ್ದೇ.
ಬೊಟ್ಸವಾನದ ವನ್ಯಜೀವಿಗಳ ಜೀವವೈವಿಧ್ಯವನ್ನು ನೋಡಲು, ವಿಶ್ವದ ಮೂಲೆ ಮೂಲೆಗಳಿಂದ ಪ್ರವಾಸಿಗರು ಬಂದು ಸಫಾರಿ ಮಾಡುತ್ತಾರೆ. ಪ್ರವಾಸೋದ್ಯಮ ಅಲ್ಲಿನ ಜನರಿಗೆ ಕೆಲಸ ಮತ್ತು ಸರ್ಕಾರಕ್ಕೆ ಉತ್ತಮ ಆದಾಯವನ್ನೂ ತಂದುಕೊಡುತ್ತಿದೆ. ಈ ದೇಶದ ಸುಮಾರು ಶೇಕಡಾ 40ರಷ್ಟು ಭೂಭಾಗವನ್ನು ವನ್ಯಜೀವಿಗಳಿಗಾಗಿಯೇ ಮೀಸಲಿಟ್ಟಿದ್ದಾರೆ.
ಈ ಕೊರೋನಾ ಕಾಲದಲ್ಲಿ ವೈರಸ್ಸುಗಳಿಂದ ಜೀವಿಗಳ ಮೇಲೆ ಉಂಟಾಗುವ ಮಾರಣಾಂತಿಕ ಕಾಯಿಲೆಗಳ ಬಗ್ಗೆ ನಿಮಗೆ ಗೊತ್ತು. ಬೋಟ್ಸವಾನಾದ ಒಂದೇ ಪ್ರದೇಶದಲ್ಲಿ ಮುನ್ನೂರೈವತ್ತು ಆನೆಗಳು ಮಕಾಡೆಮಲಗಿ ನೆಲಕ್ಕೊರಗಿ ಸತ್ತಿವೆ. ಇಷ್ಟೊಂದು ಆನೆಗಳು ಏಕೆ ಸತ್ತುಬಿದ್ದವು ಎಂಬುದೇ ಈಗ ಯಕ್ಷ ಪ್ರಶ್ನೆ. ಯಾವುದಾದರೂ ಕಾಯಿಲೇನಾ? ವೈರಸ್ಸಾ? ಉಪವಾಸ ಬಿದ್ದು ಸತ್ತವೇ? ಅಥವಾ ಯಾರಾದರು ವಿಷವಿಕ್ಕಿ ಕೊಂದರೇ? ನಿಖರವಾದ ಕಾರಣ ಕಾಣುತ್ತಿಲ್ಲ. ಒಟ್ಟಿನಲ್ಲಿ ಇದೊಂದು ದುರಂತ!
ಇದು ಆನೆ ದಂತಚೋರರ ಕಳ್ಳ ಕೆಲಸವೆ ಎನ್ನೋಣ ಅಂದರೆ ದಂತಗಳು ಕಳುವಾಗಿಲ್ಲ! ಈ ಆನೆಗಳು ಆಂತ್ರಾಕ್ಸ್ ರೋಗದಿಂದ ಸತ್ತಿಲ್ಲ ಎಂದು ಇಲ್ಲಿನ ಅರಣ್ಯಾಧಿಕಾರಿಗಳು, ವೈದ್ಯರು ತಿಳಿಸಿದ್ದಾರೆ. ಚಿಕ್ಕ ಆನೆ- ದೊಡ್ಡಾನೆ ಎನ್ನದೆ ಎಲ್ಲಾ ವಯಸ್ಸಿನ ಆನೆಗಳೂ, ಕೆರೆ ಕುಂಟೆಗಳ ನೀರಿನ ಬಳಿ ಎಲ್ಲೆಂದರಲ್ಲಿ ಸತ್ತು ಬಿದ್ದಿವೆ. ಸಾಯೋ ಮುಂಚೆ ವೃತ್ತಾಕಾರವಾಗಿ ನಡೆದು-ನಡೆದು, ಸುತ್ತಿ-ಸುತ್ತಿ ಹಠಾತ್ತನೆ ಕುಸಿದು ಸತ್ತು ಬಿದ್ದಿರುವುದನ್ನು ನೋಡಿದರೆ ಇದು ಯಾವುದೋ ಭೀಕರ ಹುಚ್ಚು ರೋಗವೇ ಇರಬೇಕು ಎಂದು ವೈದ್ಯರು ಸಂಶಯ ಪಟ್ಟಿದ್ದಾರೆ.
ಇಲ್ಲಿನ ಅರಣ್ಯ ಇಲಾಖೆಯ ಸಿಬ್ಬಂದಿ ಸತ್ತ ಆನೆಗಳನ್ನು ಲೆಕ್ಕ ಮಾಡಲು ಆನೆಗಳ ಕಳೇಬರದ ಮೇಲೆ ಪೈಂಟ್ ನಿಂದ ನಂಬರು ಬರೆಯುತ್ತಿದ್ದಾರೆ. ಕಾರಣವೇನೆಂದರೆ ಒಂದೇ ಪ್ರದೇಶದಲ್ಲಿ ಸತ್ತು ಬಿದ್ದಿರುವ ನೂರಾರು ಆನೆಗಳನ್ನು ಲೆಕ್ಕಮಾಡುವಾಗ ಗೊಂದಲವಾಗದಿರಲಿ ಎಂದು. ಅಷ್ಟು ಭಯಂಕರವಾಗಿದೆ ಇಲ್ಲಿನ ಸ್ಥಿತಿ! ಯಾರಾದರೂ ಈ ಆನೆಗಳಿಗೆ ಸೈನೈಡ್ ಇಟ್ಟಿದ್ದರೇ? ಅಕಸ್ಮಾತ್ ವಿಷವಿಟ್ಟಿದ್ದರೆ ಅವು ಒಂದೇ ಜಾಗದಲ್ಲಿ ಮಾತ್ರ ಸಾಯಬೇಕಿತ್ತು. ಆದರೆ ಹಾಗೆ ಆಗಿಲ್ಲ. ಆನೆಗಳನ್ನು ಬಿಟ್ಟು ಉಳಿದ ಪ್ರಾಣಿಗಳು ಸತ್ತಿಲ್ಲ. ಬರಪೀಡಿತ ಬೋಟ್ಸವಾನಾ ಪ್ರದೇಶದಲ್ಲಿ ಜೀವಿಗಳು ರೋಗಗಳಿಗೆ ತುತ್ತಾಗುತ್ತಿವೆ, ಆದರೆ ಇದೊಂದು ವನ್ಯಜೀವಿ ಸಂರಕ್ಷಣಾ ದುರಂತ!
ಈ ದೇಶದಲ್ಲಿ ಹಿಂದೆ ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಾದಾಗ, ಕೆಲವು ಸಲ ಇಲ್ಲಿನ ಸರ್ಕಾರ ಕೆಲ ಖಾಸಗಿ ವನ್ಯಧಾಮಗಳಿಗೆ ಆನೆ, ಸಿಂಹ ಮತ್ತು ಇತರೆ ಪ್ರಾಣಿಗಳನ್ನು ನಿರ್ದಿಷ್ಠ ಪ್ರಮಾಣದಲ್ಲಿ ಕೊಲ್ಲಲು ಲೈಸನ್ಸ್ ಕೊಟ್ಟ ನಿದರ್ಶನಗಳು ಇವೆ. ತಮ್ಮಷ್ಟಕ್ಕೆ ತಾವು ಸ್ವತಂತ್ರವಾಗಿ ಸುತ್ತಾಡಿ ಬೆಳೆಯುತ್ತಿದ್ದ ಮಾನವನ ಉಗಮದ ತೊಟ್ಟಿಲಾದ ಆಫ್ರಿಕಾದ ನೆಲದಲ್ಲಿ ಇಂದು ವನ್ಯಜೀವಿಗಳಿಗೆ ಬಂದೊದಗುತ್ತಿರುವ ಗಂಡಾಂತರವನ್ನು ಕಂಡರೆ, ಮನದಲ್ಲಿ ಮರುಕವೂ ಕೋಪವೂ ಒಟ್ಟಿಗೆ ಬರುತ್ತದೆ.
ಮಾನವನ ದುರಾಸೆಯ ಜೊತೆಗೆ ರಾಜಕೀಯವೂ ಬೆರೆತರೆ ಏನಾಗುತ್ತದೆ ಎನ್ನುವುದಕ್ಕೆ ಈ ದುರಂತ ಒಂದು ಸ್ಪಷ್ಟ ಉದಾಹರಣೆ. ಬರದಿಂದ ಕಂಗೆಟ್ಟ ಆನೆಗಳು ಅಲ್ಲಿನ ಜನರು ವಾಸಿಸುವ ಪ್ರದೇಶಕ್ಕೆ ಗುಂಪು ಗುಂಪಾಗಿ ನುಗ್ಗಿದವು. ಈ ಕಾಡಾನೆಗಳಿಗೆ ಏನಾದರೂ ಮಾಡಿ ಎಂದು ಜನರು ಜನನಾಯಕರಲ್ಲಿ ಕೇಳಿಕೊಂಡರು. ಸರ್ಕಾರ ಸರ್ವಪಕ್ಷಗಳ ಸಭೆ ಕರೆಯಿತು. ಅಲ್ಲಿ ನೆರೆದವರಲೊಬ್ಬ, “ನಮ್ಮ ನೆರೆ ದೇಶದವರು ಅಲ್ಲಿನ ಆನೆಗಳನ್ನ ಕೊಲ್ಲುತ್ತಿದ್ದಾರೆ. ಅದಕ್ಕೆ ಅಲ್ಲಿನ ಆನೆಗಳೆಲ್ಲಾ ಇಲ್ಲಿಗೆ ವಲಸೆ ಬರುತ್ತಿವೆ. ಇಲ್ಲಿ ಅವುಗಳಿಗೆ ಸುರಕ್ಷೆ ಎಂದು. ಅದಕ್ಕೆ ನಾವೂ ಕೂಡ ಕೆಲವು ಆನೆಗಳನ್ನು ಕೊಲ್ಲಲು ಅನುಮತಿ ಕೊಡೋಣ” ಎಂದ.
“ಇಲ್ಲಾ ಇಲ್ಲಾ ಹಾಗೇನಾದರೂ ಮಾಡಿದರೆ ಕಳ್ಳ ಬೇಟೆಗೆ ದಾರಿಯಾಗುತ್ತೆ.” ಎಂದು ವಾದಿಸಿತು ಮತ್ತೊಂದು ಪಕ್ಷ. “ಇಲ್ಲಿನ ಆನೆಗಳನ್ನು ಕೊಲ್ಲೋದಾದ್ರೆ, ಸ್ಥಳೀಯರಿಗೂ ಕೊಲ್ಲುವ ಈ ವ್ಯವಹಾರದಲ್ಲಿ ಭಾಗವಹಿಸಿ ಲಾಭಗಳಿಸಲು ಅವಕಾಶ ಕೊಡಬೇಕು” ಎಂದು ವಾದಿಸಿತು ಇನ್ನೊಂದು ಪಕ್ಷ.
ಆನೆಗಳನ್ನು ಬೇಟೆಯಾಡಲು ಅನುಮತಿ ಕೊಡೋದಾದ್ರೇ, ಕೆಲವು ಸಿಂಹಗಳನ್ನೂ ಬೇಟೆಯಾಡಲು ಅನುಮತಿ ಕೊಡಿ, ಏಕೆಂದರೆ ಈ ಸಿಂಹಗಳು ಜನರ ಜಾನುವಾರುಗಳನ್ನು ಬೇಟೆಯಾಡಿ ನುಂಗಿ ನೀರು ಕುಡಿಯುತ್ತಿವೆ” ಎಂದು ವಿರೋಧ ಪಕ್ಷದವರು ವಾದಿಸಿದರು.
ಸರ್ಕಾರ ಈಗ ಅಡ್ಡಕತ್ತರಿಯಲ್ಲಿ ಸಿಕ್ಕಿಕೊಂಡು, ಯಾವುದೇ ನಿರ್ಧಾರ ಕೈಗೊಳ್ಳದೆ ಏನು ಮಾಡುವುದು ಎಂದು ಕೈ ಕೈ ಹಿಸುಕಿಕೊಳ್ಳುತ್ತಿರುವ ಸಮಯದಲ್ಲಿ ಈ ದುರಂತ ಸಂಭವಿಸಿದೆ. ಸತ್ತ ಆನೆಗಳ ಅಂಗಾಂಗದ ಕೆಲವು ಸ್ಯಾಂಪಲ್ಲುಗಳನ್ನು ವಿಶ್ವದ ಎಲ್ಲಾ ಪ್ರತಿಷ್ಠಿತ ಲ್ಯಾಬ್ ಗಳಿಗೆ ಕಳುಹಿಸಿ ಕೊಡಲಾಗಿದೆ. ಲ್ಯಾಬ್ ವರದಿ ಬರಲು ಒಂದು ವಾರ ಅಥವಾ ಒಂದು ತಿಂಗಳು ಆಗಬಹುದು. ಜನ ಆ ಸತ್ತ ಆನೆಗಳನ್ನು ಮರೆಯಬಹುದು. ಆದರೆ ಆ ಬದುಕುಳಿದ ಆನೆಗಳು ಮರೆಯಲಾರವು. ಏಕೆಂದರೆ ಆನೆ ಅದ್ಭುತ ನೆನೆಪಿನ ಶಕ್ತಿ ಹೊಂದಿರುವ ಅತ್ಯಂತ ಸುಂದರ ಸಂವೇದನಶೀಲ ಪ್ರಾಣಿ.
ಚಿತ್ರಗಳು: Livescience.com
ಲೇಖನ: ಶಂಕರಪ್ಪ ಕೆ.ಪಿ.
ಡಬ್ಲೂ. ಸಿ. ಜಿ., ಬೆಂಗಳೂರು
ಸಹಾಯಕ ಪ್ರಾಧ್ಯಾಪಕರು
ಎಸ್ ಎನ್ ಆರ್ ಪದವಿ ಕಾಲೇಜ್ , ಜಿಗಣಿ , ಬೆಂಗಳೂರು.