ವಿ.ವಿ. ಅಂಕಣ – ವಿಷಯ ಕಾರಿ, ಸಾಲಾಮಂಡರ್!

ವಿ.ವಿ. ಅಂಕಣ – ವಿಷಯ ಕಾರಿ, ಸಾಲಾಮಂಡರ್!

ಈ ಕೊರೋನಾ ವೈರಸ್ ತಂದಿರುವ ಉಪದ್ರವದ ಫಲವಾಗಿ ಇಡೀ ಪ್ರಪಂಚವೇ ಒಮ್ಮೆ ನಿಂತು ನಾವು ಎತ್ತ ಸಾಗುತ್ತಿದ್ದೇವೆ ಎಂದು ಯೋಚಿಸುವ ಹಾಗಾಗಿದೆ. ಈಗ ವೈರಸ್ ನ ಜೊತೆ ಜೊತೆಗೇ ನಮ್ಮೆಲ್ಲರ ಬಾಳು ಎಳೆದುಕೊಂಡು ಸಾಗಬೇಕಿದೆ. ಈ ಮಾರಿಯಿಂದ  ಸಾವನ್ನಪ್ಪಿದವರ ಸಂಖ್ಯೆ ಲಕ್ಷಗಳ ಮೆಟ್ಟಿಲುಗಳು ಏರುತ್ತಲೇ ಇವೆ. ಇದನ್ನು ನಿಗ್ರಹಿಸುವ ಸಲುವಾಗಿ ನಮ್ಮ ಸರ್ಕಾರ ಲಾಕ್ ಡೌನ್ ನಂತಹ ದಾರಿಗಳ ಮೊರೆ ಹೋದರೂ ಕೊರೋನಾ ವೈರಸ್ ನ ಅಟ್ಟಹಾಸ ಹಾಗೇ ಇದೆ, ನೋಡಿದರೆ ಹೆಚ್ಚಾಗಿದೆ. ಈ ಲಾಕ್ ಡೌನ್ ಗಳು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪರಿಣಾಮ ಬೀರಿದೆ. ನನ್ನ ಮೇಲಿನ ಪರಿಣಾಮ ಕೊಂಚ ವಿಭಿನ್ನವಾಗೇ ಇದೆ. 

ಹೇಗೆ…? ಎನ್ನುವ ಪ್ರಶ್ನೆ ಮೂಡಿದ್ದರೆ ನೀವು ನನ್ನ ಜೊತೆಯಲ್ಲೇ ಇದ್ದೀರೆಂದರ್ಥ, ಗುಡ್..

ಈ ಲಾಕ್ ಡೌನ್ ನ ಪ್ರತಿಫಲವಾಗಿ ನಮ್ಮ ಊರಿನ ಹಾಗೂ ನಗರದ ಸಂಪರ್ಕ ಸಂಪೂರ್ಣವಾಗಿ ಕಳೆದು ಹೋಯ್ತು. ಇದು ಒಂಥರಾ ಒಳ್ಳೆಯದೆ ಆಯಿತು. ಯಾಕೆ ಅನ್ನುತ್ತೀರಾ… ಲಾಕ್ ಡೌನ್ ಶುರುವಾದ ಮೇಲೆ ಪ್ರಾರಂಭದಲ್ಲಿ ಮಾಡಲು ಕೆಲಸಗಳು ಹೆಚ್ಚಿರಲಿಲ್ಲ. ನಮ್ಮ ಊರಿನ ಪಕ್ಕದಲ್ಲೇ ಕಾಡು-ಮೇಡು ಇದ್ದರೂ ಅದರ ಮೋಡಿ ಕಂಡಿರಲಿಲ್ಲ. ಈ ಸಮಯದಲ್ಲಿ ನಮಗೆ ಬೇರೆ ಏನೂ ತೋಚದೆ, ಈ ಕೊರೋನವೇ ನನಗೊದಗಿಸಿದ ಕೆಲವು ಹೊಸ ಸ್ನೇಹಿತರ ಜೊತೆ ನಮ್ಮ ಸುತ್ತಲಿನ ಪರಿಸರವನ್ನು ಕಣ್ ತೆರೆದು ನೋಡಲು ಅವಕಾಶ ದೊರಕಿತು. ಆಗಲೇ ತಿಳಿದದ್ದು ಇಷ್ಟು ದಿನ ಇವೆಲ್ಲಾ ಇದ್ದರೂ ನಾನೇ ನೋಡುವ ಮನಸ್ಸು ಮಾಡಿರಲಿಲ್ಲವೇ? ಅಥವಾ ಎಲ್ಲರಂತೇ ನಾನೂ ನನ್ನ ವೈಯಕ್ತಿಕ, ಅಷ್ಟು ಸಾರವಿಲ್ಲದ ದೈನಂದಿನ ಕೆಲಸಗಳಲ್ಲಿ ಮುಳುಗಿಹೋಗಿದ್ದೇನೆಯೇ? ಎಂದು.

ಹಾಗೇ ಸುಮಾರು ದಿನಗಳಿಂದ ಜಾಗ್ ಹೋಗಬೇಕೆಂದು ಮನಸ್ಸಲ್ಲೇ ಅಂದುಕೊಂಡು, ಬೆಳಿಗ್ಗೆ ಏಳಲಾಗದೆ, ಕನಸಲ್ಲೇ ಓಡಿ, ಸುಸ್ತಾಗಿ, ಬೆಳಿಗ್ಗೆ ತಡವಾಗಿ ಏಳುತ್ತಿದ್ದ ದಿನಗಳಲ್ಲಿ ಒಬ್ಬ ಒಳ್ಳೆ ಸ್ನೇಹಿತನಿಂದ ಅದೂ ನನಸಾಯಿತು. ಹೀಗೆ ಕೊರೋನಾ ದಿನಗಳ ನನ್ನ ಅನುಭವ ಹೊಸತಾಗಿತ್ತು. ಹೀಗೊಂದು ದಿನ ನಮ್ಮ ಹೊಸ ಸ್ನೇಹಿತರೊಡನೆ ಪಕ್ಕದಲ್ಲೇ ಇದ್ದ ಸಣ್ಣ ಗುಡ್ಡಕ್ಕೆ, ದೊಡ್ಡ ಮನಸ್ಸು ಮಾಡಿ ಹೊರಟಾಯಿತು. ಹೋಗುವಾಗ ಗುಯ್ ಎಂದು ಜೋರಾದ ಶಬ್ಧ… ಕಾಡಿನ ಬಳಿ ಗುಯ್ ಎನ್ನುವ ಶಬ್ಧ ಬಾರದೇ ಮೋಟಾರ್ ಸೈಕಲ್ ಶಬ್ಧ ಬರುವುದೇ? ಎಂದುಕೊಳ್ಳಬೇಡಿ, ಏಕೆಂದರೆ ಆ ಶಬ್ಧ ಸಾಮನ್ಯವಾಗಿ ಕಾಡಲ್ಲಿ ಕೇಳಲು ಸಿಗುವ ಶಬ್ಧವಾಗಿರಲಿಲ್ಲ, ಸ್ವಲ್ಪ ಜೋರಾಗೇ ಇತ್ತು. ಏನದು ಎಂದು ಹುಡುಕಿ ಆ ಶಬ್ಧಕ್ಕೆ ಹತ್ತಿರವಾಗುತ್ತಿದ್ದಂತೆಯೇ ಇದು ಕಪ್ಪೆಗಳ ಶಬ್ಧ ಎಂದು ತಿಳಿಯಿತು. ಆದರೆ ಹೇಗೆ ಇಷ್ಟು ಕಪ್ಪೆಗಳು ಒಮ್ಮೆಲೆ ಇಷ್ಟು ಶಬ್ಧ! ಎಂದುಕೊಂಡು ಒಂದೆರೆಡು ಹೆಜ್ಜೆ ಹಾಕುತ್ತಿದ್ದಂತೆ ‘ಸುಮಾರು ದಿನಗಳ ನಂತರ ಮೊನ್ನೆಯಷ್ಟೇ ಮಳೆ ಬಂತಲ್ಲಾ ಮಾರಾಯ ಅದಕ್ಕೇ ಗುಂಪು ಹೊರ ಬಂದಿವೆ’ ಎಂದು ನನ್ನ ಮೆದುಳೇ ಉತ್ತರಿಸಿತು. ಹತ್ತಿರ ಹೋಗಿ ನೋಡುತ್ತೇನೆ… ನಮ್ಮ ಊರಿನ ಜಾತ್ರೆಯ ಸಮಯದಲ್ಲೋ, ಮದುವೆ ನಂತರದ ಮರುಳಿ ಸಮಯದಲ್ಲೋ ಸೇರುವ ಜನರ ಹಾಗೆ ನೂರಾರು ಕಪ್ಪೆಗಳು ಒಂದೇ ಸಣ್ಣ ಕೊಳದಲ್ಲಿ ತೇಲಿಕೊಂಡು, ತಾವುಗಳು ಮಾಡುತ್ತಿರುವ ಶಬ್ಧವೇ ಸಂಗೀತವೆಂದು ತಿಳಿದುಕೊಂಡು ಕಿರಚುತ್ತಿದ್ದವು.  ಶೀತರಕ್ತ ಉಭಯವಾಸಿಗಳಾದ ನಿಮಗೇ ಇಷ್ಟಿರುವಾಗ, ಬಿಸಿ ರಕ್ತ ಪ್ರಾಣಿ ನಾನು… ಎಂದು ಮನಸ್ಸಿನಲ್ಲೇ ನನ್ನ ಧ್ವನಿ ಯಾರಿಗೇನು ಕಡಿಮೆ ಎಂದು ಸಣ್ಣಗೆ ಹಾಡುತ್ತಾ ನಡೆದೆ. 

ಉಭಯವಾಸಿ ಎಂದರೆ ನೆನಪಾಯಿತು, ಉಭಯವಾಸಿಗಳಿಗೆ ಇನ್ನೊಂದು ಉದಾಹರಣೆ ಸಾಲಾಮಂಡರ್, ತಿಳಿದಿದೆಯಲ್ಲವೇ? ತಿಳಿಯದೇ ಏನು, ತಿಳಿದಿರುತ್ತದೆ. ಆದರೂ ಗೊತ್ತಿಲ್ಲವೆಂದರೆ ಏನು ಮಾಡುವುದು? ಒಮ್ಮೆ ಗೂಗಲ್ ಅನ್ನು ಕೇಳಿಬಿಡಿ ಅಷ್ಟೆ. ವಿಷಯಕ್ಕೆ ಬಂದರೆ ಈ ಸಾಲಾಮಂಡರುಗಳಲ್ಲೇ ಹಲವಾರು ವಿಧಗಳಿವೆ. ಅದರಲ್ಲೇನು ವಿಶೇಷ? ಎನ್ನುತ್ತೀರಾ… ಅಲ್ಲೇ ಇರುವುದು, ಅಮೇರಿಕಾದ ಪಶ್ಚಿಮ ಭಾಗದಲ್ಲಿ ಸಿಗುವ ನ್ಯೂಟ್ (newt) ಎಂದು ಕರೆಯಲ್ಪಡುವ ಈ ಸಾಲಾಮಂಡರ್, ವಿಷಕಾರಿಯಂತೆ! 

ಓಹೋ ಹೌದೇನು… ಆದರೆ ನಮಗೆ ತಿಳಿದ ಹಾಗೆ ಕೆಲವು ಕಪ್ಪೆಗಳಲ್ಲೂ ವಿಷಕಾರಿಯಾಗಿರುವವು ನಮ್ಮಲ್ಲೇ ಇವೆ ಎಂದು ಹೇಳುವುದಾದರೆ  ಮುಂದೆ ಓದಲು ಇನ್ನೂ ಸ್ವಾರಸ್ಯಕರವಾದ ವಿಷಯವಿದೆ ಬನ್ನಿ… ಈ ನ್ಯೂಟ್ ನ ಮೈ ಸ್ವಲ್ಪ ಒರಟಾಗಿದ್ದು ಒಂದು ಬಗೆಯ ಬ್ಯಾಕ್ಟೀರಿಯಾವನ್ನು ಹೊಂದಿದೆ. ಈ ಬ್ಯಾಕ್ಟೀರಿಯಾ ಟೆಟ್ರೊಡೋ ಟಾಕ್ಸಿನ್ (Tetrodotoxin-TTX) ಎಂಬ ವಿಷಕಾರಿ ಕೆಮಿಕಲ್ ಅನ್ನು ಸ್ರವಿಸುತ್ತದೆ. ಇದು ಯಾವುದಾದರೂ ಪ್ರಾಣಿಯ ದೇಹದ ಒಳಗೆ ಸ್ವಲ್ಪ ಪ್ರಮಾಣದಲ್ಲಿ ಹೋದರೆ ದೇಹದ ಮಾಂಸಖಂಡಗಳನ್ನು ಮರಗಟ್ಟಿಸುವಂತೆ ಮಾಡುತ್ತವೆ. ಅದೇ ಕೆಮಿಕಲ್ ನ ಪ್ರಮಾಣ ಹೆಚ್ಚಾದರೆ ಸಾವೂ ಸಂಭವಿಸುತ್ತದೆ. ಒಂದು ನ್ಯೂಟ್ ನಲ್ಲಿ ಕೆಲವು ಮನುಷ್ಯರನ್ನು ಕೊಲ್ಲುವಷ್ಟು ವಿಷವಿರುತ್ತದೆ. ಆದರೆ ಈ ಪ್ರಾಣಿಯು ಆ ಆಯುಧವನ್ನು ತಾನು ಯಾವುದೇ ಹಾವುಗಳಂತಹ ಪರಭಕ್ಷಕಗಳಿಗೆ ಆಹಾರವಾಗದೇ ಇರಲೆಂದು, ರಕ್ಷಣೆಗಾಗಿ ಬಳಸಿಕೊಂಡಿವೆ. 

ಈ TTX ವಿಷವು ಕೇವಲ ಈ ನ್ಯೂಟ್ ನಂತಹ ಉಭಯವಾಸಿಗಳಲ್ಲಿ ಅಲ್ಲದೇ ಕೆಲವು ಜಲವಾಸಿಗಳಾದ ಆಕ್ಟೋಪಸ್, ಏಡಿ, ನಕ್ಷತ್ರ ಮೀನುಗಳಲ್ಲಿ ಸಹ ಸಿಗುತ್ತವೆ. ಪಫರ್ ಫಿಶ್ ಎಂಬ ಜಲವಾಸಿಯು TTX ಅನ್ನು ತಾನು ತಿನ್ನುವ ವಿಷಕಾರಕ ಆಹಾರದಿಂದ ಹಾಗೂ ತನ್ನ ಮೈ ಮೇಲೆ ಇರುವ ಬ್ಯಾಕ್ಟೀರಿಯಾದಿಂದ ಪಡೆಯುತ್ತವಂತೆ. ಆದರೆ ಈ ನ್ಯೂಟ್ ನ ಆಹಾರದಲ್ಲಿ ವಿಷಕಾರಿಯಾದ ಜೀವಿಗಳನ್ನು ತಿನ್ನುವ ಉದಾಹರಣೆಗಳಿಲ್ಲ. ಹಾಗೂ 2004ರಲ್ಲಿ ಬಂದಿದ್ದ ಒಂದು ವೈಜ್ಞಾನಿಕ ಲೇಖನದಲ್ಲಿ ನ್ಯೂಟ್ ಗಳ ಮೇಲೆ TTX ತಯಾರಿಸಬಹುದಾದ ಬ್ಯಾಕ್ಟೀರಿಯಾಗಳು ಇಲ್ಲ ಎಂದು ಹೇಳಲಾಗಿತ್ತು. ಇವೆಲ್ಲಾ ನೋಡಿದರೆ ಈ ನ್ಯೂಟ್ ಗಳೇ ಸ್ವತಃ ಈ ವಿಷಕಾರಿ ಕೆಮಿಕಲ್ ಅನ್ನು ತಯಾರಿಸುತ್ತಿವೆ ಎಂದು ಊಹಿಸುವುದು ಸಾಮಾನ್ಯ ವಿಜ್ಞಾನ. ಅಲ್ಲವೇ?

ಆದರೆ TTX ತಯಾರಿಸುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಇದುವರೆಗೂ ಯಾವ ಪ್ರಾಣಿಯಲ್ಲೂ ಈ ರೀತಿಯ ಗುಣ ಇರದೇ, ಇದಕ್ಕೆ ಮಾತ್ರ ಇರುವುದು ಕಷ್ಟ ಸಾಧ್ಯ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಜೀವ ವಿಜ್ಞಾನಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಹಾಗಾಗಿ ಇದನ್ನು ಇನ್ನೊಮ್ಮೆ ಪರೀಕ್ಷಿಯೇ ಬಿಡೋಣವೆಂದು, ಮಿಶಿಗನ್ ವಿಶ್ವವಿದ್ಯಾಲಯದ ವಿಜ್ಞಾನಿಯ ತಂಡವೊಂದು ನ್ಯೂಟ್ ನ ಮೈ ಮೇಲೆ ಸಿಗುವ ಎಲ್ಲಾ ಬ್ಯಾಕ್ಟೀರಿಯಾಗಳನ್ನು ಸಂಗ್ರಹಿಸಿ ಲ್ಯಾಬ್ ನಲ್ಲಿ ಬೆಳೆಸಿದರು. ನಂತರ ಅವುಗಳಲ್ಲಿ TTX ಉತ್ಪಾದಿಸಲು ಸಾಧ್ಯವಿರುವ ನಾಲ್ಕು ಬಗೆಯ ಬ್ಯಾಕ್ಟೀರಿಯಾಗಳನ್ನು ಗುರುತಿಸಿದರು. ಅದರಲ್ಲಿ ಸುಡೋಮಾನಸ್ ಎಂಬ ಬಗೆಯ ಬ್ಯಾಕ್ಟೀರಿಯಾವೂ ಒಂದು. ಈ ಬ್ಯಾಕ್ಟೀರಿಯಾ ಸಮುದ್ರವಾಸಿಗಳಾದ ಕೆಲವು ಮೀನು, ಬಸವನ ಹುಳು ಮತ್ತು ಆಕ್ಟೋಪಸ್ ಗಳಲ್ಲಿ ಸಿಕ್ಕರೂ ನೆಲವಾಸಿ, ಒರಟು ಮೈ ನ ಈ ನ್ಯೂಟ್ ನಲ್ಲಿ ಸಿಕ್ಕಿರುವುದೇ ವಿಶೇಷ ಎನ್ನುತ್ತಾರೆ ವಿಜ್ಞಾನಿಗಳು. 

ಹಾಗೆಂದ ಮಾತ್ರಕ್ಕೆ ನ್ಯೂಟ್ ಗಳು TTXಗಳನ್ನು ಉತ್ಪಾದಿಸಲು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಲಾಗುವುದಿಲ್ಲ. ಯಾಕೆಂದರೆ ಈ ನ್ಯೂಟ್ ನ ಮೈ ಮೇಲೆ ಇದಲ್ಲದೇ ಬೇರೆ ಬೇರೆ ತರಹದ ವಿಷಕಾರಿ ಕೆಮಿಕಲ್ ಗಳು ಸಿಕ್ಕಿವೆ. ಜೊತೆಗೆ ಈ ಸುಡೋಮಾನಸ್ ಬ್ಯಾಕ್ಟೀರಿಯಾಗಳು ಹೇಗೆ ಈ TTXಅನ್ನು ತಯಾರಿಸುತ್ತವೆ ಎನ್ನುವುದು ಇದುವರೆಗೆ ತಿಳಿದಿಲ್ಲ. ಇವೆಲ್ಲಾ ನೋಡಿದರೆ ನನಗಂತೂ ಹೀಗೆನ್ನಿಸುತ್ತದೆ, ನಮ್ಮ ವಿಜ್ಞಾನ ಎಷ್ಟೇ ಮುಂದುವರೆದರೂ, ಹೊಸ ವಿಚಾರಗಳ ಅನಾವರಣ ಮಾಡಿದರೂ, ಎಲ್ಲರ ಹುಬ್ಬೇರಿಸಿದ್ದರೂ ಕೆಲವು ವಿಷಯಗಳು… ಇಲ್ಲ ಇಲ್ಲಾ… ಎಷ್ಟೋ ವಿಷಯಗಳು ಪ್ರಶ್ನಾರ್ಥಕ ಚಿಹ್ನೆಗಳಾಗಿಯೇ ಉಳಿಯುತ್ತವೆ! ನಮ್ಮೆಲ್ಲಾ ಈ ಹೊಸ ಸಂಶೋಧನೆಗಳು, ವಿಜ್ಞಾನವೆಂಬ ವಾಹನದ ಒಳಗೆ ಕೂತು ಅಚ್ಚರಿಯ ದಾರಿಯಲ್ಲಿ ಸಾಗುತ್ತಿರುವ ನಮಗೆ ಸಿಗುವ ಒಂದು ಮೈಲಿಗಲ್ಲು ಅಷ್ಟೆ. ಮುಂದೆ ಬರಬಹುದಾದ ಮೈಲಿಗಲ್ಲುಗಳ ದೊಡ್ಡ ಸಾಲೇ ಇದೆ. ವಿಜ್ಞಾನದ ವಾಹನಕ್ಕೆ ನಮ್ಮ ಮೆದುಳಿನ ನ್ಯೂರಾನ್ ಗಳ ಮಧ್ಯೆ ಉದ್ಭವಿಸುವ ಈ ಪ್ರಶ್ನಾರ್ಥಕಗಳೇ ಇಂಧನ!

ಲೇಖನ: ಜೈಕುಮಾರ್ ಆರ್.
ಡಬ್ಲೂ. ಸಿ. ಜಿ., ಬೆಂಗಳೂರು

Spread the love
error: Content is protected.