ಊಸರವಳ್ಳಿ: ವಿಭಿನ್ನ ಬಣ್ಣ, ವಿಶಿಷ್ಟ ನೋಟ
© ಸೂರಜ್ ರೇವಾಡಿಗರ್
ಈ ಪ್ರಕೃತಿ ಒಂದು ಅವರ್ಣನೀಯ ಜಗತ್ತು, ಎಲ್ಲಿ ನೋಡಿದರು ಬಣ್ಣ ಬಣ್ಣ. ನಿಸರ್ಗದ ಈ ಸಹಜ ಸೌಂದರ್ಯಕ್ಕೆ ಪ್ರತಿ ದಿನವು ಬಗೆ ಬಗೆಯ ಬಣ್ಣಗಳ ಹೋಳಿ ಅಂದರೆ ತಪ್ಪಾಗಲಾರದು. ವಿವಿಧ ವರ್ಣದ ಹೂವು, ಚಿಗುರೆಲೆಗಳು, ಚಿಟ್ಟೆಗಳು, ಬೆಟ್ಟ ಗುಡ್ಡಗಳ ತಿಳಿ ನೀಲಿ, ಮುಂಜಾನೆ-ಮುಸ್ಸಂಜೆಯ ಚಿತ್ತಾರದ ನಸುಗೆಂಪು, ಮಿಂಚು ಹುಳುಗಳ ಬೆಳಕಿನಾಟ ಹೀಗೆ ಹತ್ತು ಹಲವು ಬಗೆಯ ಪ್ರಕೃತಿಯ ರಂಗಿನಾಟದ ನಡುವೆ ಆಧುನಿಕ ಬದುಕು ಶೂನ್ಯ. ನಮ್ಮ ಸುತ್ತಮುತ್ತಲಿನಲ್ಲಿ ಅನೇಕ ವಿಧದ ಗಿಡ-ಮರ, ಹಕ್ಕಿ, ಕೀಟ, ಸರೀಸೃಪಗಳು ಹೀಗೆ ವಿವಿಧತೆಯನ್ನು ನೋಡುತ್ತೇವೆ. ಅವುಗಳು ಕೇವಲ ಒಂದು ಬಣ್ಣಕ್ಕೆ ಸೀಮಿತವಾಗಿಲ್ಲ ಒಂದೇ ರೀತಿಯ ಬಣ್ಣ ಹೊಂದಿರುವ ಜೀವಿಗಳಂತೆಯೇ ಬಣ್ಣ ಬದಲಿಸುವ ಹಾಗೂ ತಮ್ಮ ಸುತ್ತಲಿನ ಪರಿಸರದೊಂದಿಗೆ ಸೇರಿಕೊಂಡಿರುವ ಜೀವಿಗಳೂ ಇವೆ. ಒಮ್ಮೆ ನಮ್ಮ ಸುತ್ತಲಿನ ಪರಿಸರದಲ್ಲಿ ಸುಮ್ಮನೆ ಒಂದು ಸುತ್ತು ಹಾಕಿ ಬಂದರೆ ಸಾಕು ನಾವು ಎಷ್ಟು ವಿಧದ ಬಣ್ಣಗಳನ್ನು ನೋಡುತ್ತೇವೆಂಬುದು ನಮ್ಮ ಊಹೆಗೂ ನಿಲುಕದ ಸಂಗತಿ. ನಮಗೆ ತಿಳಿದಿರುವುದು ಕೇವಲ ಬೆರಳೆಣಿಕೆಯ ಬಣ್ಣಗಳಷ್ಟೆ, ಅದಕ್ಕೂ ಹೊರತಾಗಿ ಇರುವ ಬಣ್ಣಗಳನ್ನು ನಾವು ಗುರುತಿಸಲು ಸಹ ಸಾಧ್ಯವಿಲ್ಲ ಏಕೆಂದರೆ ಅವು ನಿಸರ್ಗದ ಸೊಬಗಿನಲ್ಲಿ ವಿಲೀನವಾಗಿರುತ್ತವೆ. ಆಳವಾಗಿ ಪ್ರಕೃತಿಯೊಂದಿಗೆ ಬೆರೆತಾಗ ಮಾತ್ರ ನಮಗೆ ಅದು ಅರಿವಿಗೆ ಬರುತ್ತದೆ.
ಮರೆಮಾಚುವಿಕೆಯು ಜೀವಿಗಳು ತಮ್ಮ ಪರಿಸರದೊಂದಿಗೆ ಹೊಂದಿಕೊಳ್ಳಲು, ಬೇರೆ ಜೀವಿಗಳೊಡನೆ ಬೆರೆಯಲು, ಪರಭಕ್ಷಕಗಳಿಂದ ತಪ್ಪಿಸಿಕೊಳ್ಳಲು, ಸ್ಥಳ, ಗುರುತು ಮತ್ತು ಚಲನೆಯನ್ನು ಮರೆಮಾಚಲು ಹಾಗೂ ಆಹಾರ ಬೇಟೆಗಾಗಿ ನಡೆಸುವ ಒಂದು ನೈಸರ್ಗಿಕ ಪ್ರಕ್ರಿಯೆ. ಇದನ್ನು ರಹಸ್ಯ ಬಣ್ಣ (camouflage) ಎಂದು ಕರೆಯುತ್ತಾರೆ. ಇದು ಜೀವಿಗಳ ಬಾಹ್ಯ ಮತ್ತು ಆಂತರಿಕ ಲಕ್ಷಣಗಳ ಮೇಲೆ ಆಧಾರಿತವಾಗಿರುತ್ತದೆ, ಅಲ್ಲದೆ ಪರಭಕ್ಷಕ ಜೀವಿಗಳ ಇರುವಿಕೆಯ ಮೇಲೂ ಅವಲಂಬಿತವಾಗಿರುತ್ತದೆ ಮತ್ತು ಅವುಗಳ ರಕ್ಷಣೆಗೂ ಸಹಾಯವಾಗುತ್ತದೆ. ಈ ನಡವಳಿಕೆಯು ಮುಖ್ಯವಾಗಿ ಊಸರವಳ್ಳಿಯಲ್ಲಿ ಕಂಡುಬರುತ್ತದೆ.
ಊಸರವಳ್ಳಿ ಅಥವಾ ಗೋಸುಂಬೆ ಎಂದು ಕರೆಯುವ ಇದರ ವೈಜ್ಞಾನಿಕ ಹೆಸರು ಕಮಿಲಿಯೋ ಝೆಯ್ಲಾನಿಕಸ್ (chamaeleo zeylanicus). ಏಕಾಂಗಿಯಾಗಿ ಬದುಕುವ ಇದು ಹಲ್ಲಿಯ ಜಾತಿಯದ್ದಾಗಿದ್ದು, (Chamaeleonidae) ಕುಟುಂಬಕ್ಕೆ ಸೇರಿದೆ. ಇದು ಉಷ್ಣವಲಯ ಮತ್ತು ಮಳೆ ಕಾಡಿನಲ್ಲಿ ವಾಸಿಸುತ್ತದೆ. ಇದು ಹೆಚ್ಚಾಗಿ ಆಫ್ರಿಕ, ದಕ್ಷಿಣ ಏಷ್ಯ, ಯುರೋಪ್ ಮತ್ತು ಮಡಗಾಸ್ಕರ್ ನಲ್ಲಿ ಕಂಡುಬರುತ್ತದೆ. ಪ್ರಪಂಚದಾದ್ಯಂತ ಇದುವರೆಗು ನೂರಅರವತ್ತಕ್ಕೂ ಹೆಚ್ಚು ಪ್ರಭೇದಗಳನ್ನು ಗುರುತಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಒಂದು ಪ್ರಭೇದವನ್ನು ಕಮಿಲಿಯೋ ಝೆಯ್ಲಾನಿಕಸ್ (chamaeleo zeylanicus ) ಮಾತ್ರ ಗುರುತಿಸಲಾಗಿದೆ. ಇದರ ಮುಖ್ಯ ಆಹಾರ ಸಣ್ಣ ಕೀಟಗಳು, ಸೊಳ್ಳೆ, ಮಿಡತೆ, ದುಂಬಿ ಇತ್ಯಾದಿ.
ಬೇಟೆಯನ್ನು ಹಿಡಿಯುವಾಗ ಇವು ತಮ್ಮದೇಹದ ಎರಡರಷ್ಟು ಉದ್ದವಿರುವ ನಾಲಗೆಯಲ್ಲಿನ ಅಂಟು ದ್ರವ್ಯವನ್ನು ಬಳಸುತ್ತವೆ. ಇದರ ಹಯಾಯ್ಡ್ ಮೂಳೆ (Hyoid bones), ಸ್ನಾಯುಗಳು ಮತ್ತು ಕೊಲಾಜಿನಸ್ ಅಂಶಗಳನ್ನು (Collagenous elements) ಒಳಗೊಂಡಿದೆ.ಈ ಹಯಾಯ್ಡ್ ಮೂಳೆಯು ಉದ್ದವಾದ ಸಮಾನಾಂತರವಾದ ಹಂಚಿಕೆಯನ್ನು ಹೊಂದಿದ್ದು ಇದನ್ನು ಎನ್ಟೊಗ್ಲಾಸಲ್ ಪ್ರಕ್ರಿಯೆ (Entoglossal process) ಎಂದು ಕರೆಯುತ್ತಾರೆ. ಅದರ ಮೇಲೆ ಕೊಳವೆಯಾಕಾರಾದ ಸ್ನಾಯು (Tubular muscles) ಮತ್ತು ವೇಗ ವರ್ಧಕ ಸ್ನಾಯು (Accelerator mussels) ಇರುವುದರಿಂದ ನಾಲಿಗೆಯ ಕಾರ್ಯಕ್ಷಮತೆ ಹೆಚ್ಚು ಮತ್ತು ಬೇಟೆಯನ್ನು ಮುಟ್ಟುವ ವೇಗವೂ ಹೆಚ್ಚು (0.07-0.08 ಸೆಕೆಂಡುಗಳು).
ಇದು ಸುಮಾರು 25-30 ಸೆಂ.ಮೀ. ಉದ್ದವಾಗಿದ್ದು, ಚರ್ಮವು ಮೊಸಳೆಯ ದೇಹದಂತೆ ಒರಟಾಗಿರುತ್ತದೆ ಹಾಗೂ ಕಾಲಕಾಲಕ್ಕೆ ಚರ್ಮವನ್ನು ಕಳಚುತ್ತದೆ. ಇದರ ಕಾಲಿನ ಪಾದಗಳಲ್ಲಿ ಸ್ಪಷ್ಟವಾಗಿ ಐದು ಬೆರಳುಗಳಿದ್ದು ಎರಡು ಭಾಗಗಳಾಗಿ ವಿಂಗಡನೆಯಾಗಿದೆ, ಒಂದು ಭಾಗದಲ್ಲಿ ಎರಡು ಬೆರಳು ಮತ್ತು ಇನ್ನೊಂದು ಭಾಗದಲ್ಲಿ ಮೂರು ಬೆರಳುಗಳಿವೆ. ಬೆರಳ ತುದಿಗೆ ಚೂಪಾದ ಉಗುರುಗಳು ಇರುವುದರಿಂದ ಮರದ ರೆಂಬೆಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಸಹಾಯವಾಗುತ್ತದೆ. ಮುಂಭಾಗ ಮತ್ತು ಹಿಂಭಾಗದ ಕಾಲುಗಳ ರಚನೆ ವ್ಯತಿರಿಕ್ತವಾಗಿದ್ದು ಇದನ್ನು ಝೈಗೊಡೊಕ್ಟೈಲ್ ಪಾದ (Zygodactyl feet) ಎಂದು ಕರೆಯುತ್ತಾರೆ. ಬಾಲವು ಸುರಳಿಯಾಕಾರದ್ದಾಗಿದ್ದು ಅದು ಚಲಿಸುವಾಗ ಮರದ ರೆಂಬೆಯನ್ನು ಬಲವಾಗಿ ಹಿಡಿದುಕೊಳ್ಳಲು ಸಹಕಾರಿಯಾಗುತ್ತದೆ, ಇದನ್ನು ಐದನೇ ಕಾಲಿನ ರೀತಿಯಲ್ಲಿ ಬಳಸುತ್ತದೆ. ಈ ರಚನೆಗೆ ಪ್ರಿಹೆನ್ಸೈಲ್ ಟೇಲ್ (Prehensyle tail) ಎಂದು ಕರೆಯುತ್ತಾರೆ.
ಇದರ ದೃಷ್ಠಿ ವಿಭಿನ್ನವಾಗಿದ್ದು ಸುಮಾರು ಮೂವತ್ತೆರೆಡು ಅಡಿಗಳಷ್ಟು ದೂರದವರೆಗೆ ವಸ್ತುಗಳನ್ನು ಸ್ಪಷ್ಟವಾಗಿ ನೋಡುವ ಸಾಮರ್ಥ್ಯ ಹೊಂದಿದ್ದು ಆಹಾರ ಹುಡುಕಲು ಸಹಕಾರಿಯಾಗಿದೆ. ಊಸರವಳ್ಳಿಯ ಇನ್ನೊಂದು ವೈಶಿಷ್ಟ್ಯವೇನೆಂದರೆ, ಎರಡೂ ಕಣ್ಣುಗಳು ಪ್ರತ್ಯೇಕ ಚಲನೆಯನ್ನು ಹೊಂದಿದ್ದು ಸುತ್ತಲೂ 3600 ವರೆಗೂ ತಿರುಗಿಸಿ ನೋಡುತ್ತದೆ. ಇದರ ಕಣ್ಣುಗಳ ಮೇಲಿನ ಹಾಗೂ ಕೆಳಗಿನ ರೆಪ್ಪೆಗಳು ಸೇರಿಕೊಂಡಿದ್ದು ಚಿಕ್ಕರಂಧ್ರದ ಮೂಲಕ ಹೊರಪ್ರದೇಶದ ಗೋಚರಿಸುವ ಬೆಳಕಿನ (Visible light) ಜೊತೆಗೆ ನೇರಳಾತೀತ ಕಿರಣ (Ultra-violet rays) ಗಳನ್ನೂ ನೋಡುತ್ತದೆ.
ಆಹಾರ ಸರಪಳಿಯಲ್ಲಿ ಇದು ಕೆಳ ಸ್ಥಾನದಲ್ಲಿದೆ, ಅಂದರೆ ಊಸರವಳ್ಳಿಯನ್ನು ತಿನ್ನುವ ಅನೇಕ ಜೀವಿಗಳು ಪರಿಸರದಲ್ಲಿವೆ. ಪರಭಕ್ಷಕಗಳಾದ, ಹಾವು, ಪಕ್ಷಿ ಮತ್ತು ಕೆಲವು ಸಲ ಮಂಗಗಳೂ ಸಹ ಇದನ್ನು ತಿನ್ನುವುದುಂಟು. ಇದರ ಒಟ್ಟು ಜೀವಿತಾವಧಿ ನಾಲ್ಕರಿಂದ ಎಂಟು ವರ್ಷಗಳು. ಐ.ಯು.ಸಿ.ಎನ್. ವರದಿಯ ಪ್ರಕಾರ ಊಸರವಳ್ಳಿಯನ್ನು ಅಳಿವಿನಂಚಿನಲ್ಲಿರುವ ಪ್ರಭೇದ ಎಂದು ಕೆಂಪು ಪಟ್ಟಿಯಲ್ಲಿ ಸೇರಿಸಲಾಗಿದೆ, ಇದರ ಪ್ರಭೇದಗಳಲ್ಲಿ ಕೆಲವೊಂದು ಈಗಾಗಲೆ ನಶಿಸಿ ಹೋಗಿವೆ ಎಂದೂ ಕೂಡ ಪ್ರಕಟಿಸಲಾಗಿದೆ.
ಊಸರವಳ್ಳಿಯ ಚಲನೆ ಬಹಳ ನಿಧಾನಗತಿಯದ್ದಾಗಿದ್ದು, ಇದರಿಂದ ಪರಭಕ್ಷಕಗಳಿಗೆ ಬಹಳ ಸುಲಭವಾಗಿ ಆಹಾರವಾಗುತ್ತದೆ. ಅವುಗಳಿಂದ ತಪ್ಪಿಸಿಕೊಳ್ಳಲು ತನ್ನ ದೇಹವನ್ನು ಹಿಗ್ಗಿಸಿ, ಚರ್ಮದ ಬಣ್ಣವನ್ನು ಬದಲಾಯಿಸಿಕೊಂಡು ಮರೆಮಾಚುವ ಗುಣ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದಲ್ಲದೆ ಇನ್ನೂ ಕೆಲವು ಪ್ರಯೋಜನಗಳನ್ನು ಪಡೆದುಕೊಳ್ಳುತ್ತದೆ.
ಏಕೀ ಬಣ್ಣ ಬದಲಾವಣೆ?
ಬಣ್ಣ ಬದಲಾವಣೆ ಊಸರವಳ್ಳಿಯ ಸಂವಹನ ಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದು ಕಾಲಕ್ಕೆ ಅನುಗುಣವಾಗಿ ದೇಹದ ಬಣ್ಣವನ್ನು ಬದಲಿಸುತ್ತದೆ. ಸಂಗಾತಿಯನ್ನು ಆಕರ್ಷಿಸುವಲ್ಲಿ ತಿಳಿ ಬಣ್ಣದ ಪಾತ್ರ ಬಹಳ ಮುಖ್ಯ, ಹೆಣ್ಣಿಗೆ ಹೋಲಿಸಿದರೆ ಗಂಡು ಹೆಚ್ಚು ಆಕರ್ಷಕ ಬಣ್ಣದ್ದಾಗಿರುತ್ತದೆ.
ಒಂದು ಹೊಸ ಸಂಶೋಧನೆಯ ಪ್ರಕಾರ ಊಸರವಳ್ಳಿಯು ತತ್ ಕ್ಷಣದಲ್ಲಿ ತನ್ನ ದೇಹದಲ್ಲಿನ ವಿಶೇಷ ಕೋಶವಾದ ಇರಿಡೋಫೋರ್ ಕೋವನ್ನು (Iridophore cell) ಹೊಂದಿಸಿಕೊಂಡು ಬಣ್ಣ ಬದಲಿಸುತ್ತದೆ.ಈ ಕೋಶಗಳು ಚರ್ಮದೊಳಗೆ ಒಂದರ ಮೇಲೊಂದರಂತೆ ಎರಡು ಪದರಗಳನ್ನು ಹೊಂದಿದ್ದು ಈ ಪದರಗಳು ಸಾವಿರಾರು ಗ್ವಾನೈನ್ ನ್ಯಾನೋಕ್ರಿಸ್ಟಲ್ (Guanine nanocrystals) ಜಾಲವನ್ನು ಹೊಂದಿದೆ. ಇದು ಬೆಳಕಿನ ಯಾವ ತರಂಗಾಂತರಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಹೀರಿಕೊಳ್ಳುತ್ತದೆ ಎಂಬುದರ ಮೇಲೆ ಬಣ್ಣದ ಪರಿಣಾಮ ಬೀರುತ್ತದೆ. ಈ ಕೋಶಗಳು ವರ್ಣಪಲ್ಲಟ ಕೊಳವೆಯಂತೆ (Prism)ಕಾರ್ಯನಿರ್ವಹಿಸುತ್ತದೆ. ಅವುಗಳ ಬಣ್ಣ ಮತ್ತು ದೇಹದ ಉಷ್ಣತೆಯನ್ನು ಈ ಪದರ ನಿಯಂತ್ರಿಸುತ್ತದೆ. ಅಂತೆಯೇ ಸಮಾಧಾನ ಅಥವಾ ಶಾಂತ ಸ್ಥಿತಿಯಲ್ಲಿ ಹರಳುಗಳು (crystals) ನೀಲಿ ಮತ್ತು ಹಸಿರು ಬಣ್ಣವನ್ನು ಪ್ರತಿಬಿಂಬಿಸುತ್ತದೆ ಹಾಗೂ ಉತ್ಸಾಹ ಭರಿತ ಸ್ಥಿತಿಯಲ್ಲಿ ಹಳದಿ, ಕಿತ್ತಲೆ ಮತ್ತು ಹಸಿರು ಬಣ್ಣಗಳಂತಹ ದೀರ್ಘ ತರಂಗಾಂತರಗಳನ್ನು ಪ್ರತಿಫಲಿಸುತ್ತದೆ. ಚರ್ಮದಲ್ಲಿರುವ ಹಳದಿ ವರ್ಣದ್ರವ್ಯವು (Pigments) ನೀಲಿ ವರ್ಣದ್ರವ್ಯದೊಂದಿಗೆ ಸಂಯೋಜಿತವಾಗಿ ಹಸಿರು ಬಣ್ಣಕ್ಕೆ ಕಾರಣವಾಗುತ್ತದೆ.
ಕೆಲವು ಸಂಶೋಧನೆಗಳ ಪ್ರಕಾರ ಊಸರವಳ್ಳಿಗಳ ಚರ್ಮದಲ್ಲಿ ವಿಶೇಷ ಕೋಶಗಳಿದ್ದು ಅವು ವರ್ಣದ್ರವ್ಯಗಳನ್ನು ಹೊಂದಿದೆ. ಅದನ್ನು ಕ್ರೊಮೆಟೋಫೋರ (Chromatophores)ಎಂದು ಕರೆಯುತ್ತಾರೆ. ಇದರ ಮೊದಲ ಪದರ ಕೆಂಪು ಮತ್ತು ಹಳದಿ ವರ್ಣದ್ರವ್ಯವನ್ನು, ಕೆಳಪದರವು ನೀಲಿ ಹಾಗು ಬಿಳಿ ವರ್ಣದ್ರವ್ಯವನ್ನು ಹೊಂದಿದೆ. ಸಂದರ್ಭಕ್ಕೆ ತಕ್ಕಂತೆ ಮೆದುಳಿನಿಂದ ಕ್ರೊಮೆಟೋಫೋರ ಕೋಶಗಳಿಗೆ ಸಂದೇಶ ಬಂದಾಗ ವರ್ಣದ್ರವ್ಯಗಳು ಸಂಯೋಜನೆಗೊಂಡು ದೇಹದ ಬಣ್ಣ ಬದಲಾಗುತ್ತದೆ. ಇದಕ್ಕೆ ಮೆಲಾನಿನ್ (Melanin) ಎಂಬ ರಾಸಾಯನಿಕ ವಸ್ತುವೂ ಸಹ ಕಾರಣವಾಗುತ್ತದೆ. ಮೆಲಾನಿನ್ ಎಂಬುದು ಒಂದು ನಾರಿನ ಅಂಶವಾಗಿದ್ದು (Fiber) ಇದು ಜೇಡರ ಬಲೆಯಂತೆ ವರ್ಣದ್ರವ್ಯಗಳ ಮೇಲೆ ಹಾದು ಹೋಗಿರುತ್ತದೆ. ಇದು ಚರ್ಮದ ಗಾಢ ಬಣ್ಣಕ್ಕೆ ಕಾರಣವಾಗುತ್ತದೆ.
ಊಸರವಳ್ಳಿಯ ಈ ಬಣ್ಣ ಬದಲಾವಣೆ ಪರಿಸರದ ಹಾಗೂ ವಾತಾವರಣದ ಮೂಲಕ ವಿಕಸನಗೊಂಡಿದೆ. ಬೆಳಕಿನ ತೀಕ್ಷ್ಣತೆಯನ್ನು ಕಡಿಮೆ ಮಾಡಲು ಹಾಗು ದೇಹದ ಉಷ್ಣತೆಯನ್ನು ಸರಿದೂಗಿಸಲು ಬಣ್ಣ ಬದಲಿಸುತ್ತದೆ. ಉದಾಹರಣೆಗೆ, ಅತೀ ಶೀತವಾತಾವರಣದಲ್ಲಿ ಗಾಢ ಬಣ್ಣಕ್ಕೆ ತಿರುಗಿ ದೇಹವನ್ನು ಬೆಚ್ಚಗಿಟ್ಟುಕೊಳ್ಳುತ್ತದೆ ಮತ್ತು ಹೆಚ್ಚು ಬಿಸಿಲಿನ ವಾತಾವರಣವಿದ್ದಾಗ ದೇಹದ ಬಣ್ಣವನ್ನು ತಿಳಿಗೊಳಿಸಿಕೊಂಡು ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳುತ್ತದೆ. ಪರಿಸರ ವ್ಯವಸ್ಥೆಯ ಸಮತೋಲನದಲ್ಲಿ ಇವುಗಳು ಪ್ರಮುಖ ಪಾತ್ರ ವಹಿಸುತ್ತವೆ.
ಈ ಊಸರವಳ್ಳಿಯ ಬಗ್ಗೆ ಹಳ್ಳಿಯ ಜನರಲ್ಲಿ ಇದು ಅತ್ಯಂತ ವಿಷಕಾರಿ ಜೀವಿ, ಅಪಶಕುನದ ಪ್ರಾಣಿ, ಇದರಿಂದ ವಿಷ ತೆಗೆದು ಕೈ ಮದ್ದಿಗೆ ಬಳಸುವರು ಮತ್ತು ಏಳು ಊಸರವಳ್ಳಿಗಳನ್ನು ಸಾಯಿಸಿದರೆ ಒಂದು ದೇವಸ್ಥಾನ ಕಟ್ಟಿದ ಪುಣ್ಯ ಬರುತ್ತದೆಂಬ ಮೂಢನಂಬಿಕೆ ಇದೆ. ನಂಬಿಕೆ ತಪ್ಪಲ್ಲ ಆದರೆ ಮಾನವನ ಒಳಿತಿಗಾಗಿ ಇನ್ನೊಂದು ಜೀವಿಯ ಬದುಕನ್ನೇ ನಾಶ ಮಾಡುವ ಮೂಢನಂಬಿಕೆ ತಪ್ಪು. ಪ್ರಕೃತಿಯಲ್ಲಿ ಯಾವ ಜೀವಿಯೂ ಹೊಂದಿಲ್ಲದ ಅನೇಕ ವಿಶಿಷ್ಟ ಗುಣಗಳನ್ನು ಹೊಂದಿರುವ ಈ ಜೀವಿ ನಿಜಕ್ಕೂ ಪ್ರಕೃತಿಯ ಒಂದು ವಿಸ್ಮಯ. ಇಂತಹ ಜೀವಿಗಳಿಂದ ಪ್ರಕೃತಿಗೆ ಹಾನಿಗಿಂತ ಉಪಯೋಗವೇ ಹೆಚ್ಚು. ಇಂತಹ ಅಪರೂಪದ ಜೀವಿಗಳನ್ನು ನಾಶಮಾಡಿ ಚಿತ್ರಪಟದಲ್ಲಿ ನೋಡಿ ಆನಂದಿಸುವುದರ ಬದಲು ಪ್ರಕೃತಿಯ ನಡುವಿನಲ್ಲಿ ಅದರ ಸಹಜ ವರ್ತನೆಯನ್ನು ವೀಕ್ಷಿಸುವುದೇ ನಿಜಕ್ಕೂ ಒಂದು ಅದ್ಭುತ.
ಲೇಖನ: ಸೌಮ್ಯಾ ಅಭಿನಂದನ್ ಬೀಳೂರು
ಶಿವಮೊಗ್ಗ ಜಿಲ್ಲೆ