ವಿ.ವಿ. ಅಂಕಣ – ಹೊಳೆಯುವ ಕಪ್ಪೆಗಳು!

ವಿ.ವಿ. ಅಂಕಣ – ಹೊಳೆಯುವ ಕಪ್ಪೆಗಳು!

ನಾವು ಕೆಲವು ವರ್ಷಗಳಿಂದ ‘ಚಿಣ್ಣರ ವನ ದರ್ಶನ’ ಎಂಬ ಕಾರ್ಯಕ್ರಮ ಮಾಡುತ್ತಿದ್ದು, ಪ್ರೌಢಶಾಲೆಯ ಮಕ್ಕಳನ್ನು ಪ್ರಕೃತಿಯ ಮಡಿಲ ಹತ್ತಿರಕ್ಕೆ ಕರೆತಂದು ಅದರ ಸೊಬಗನ್ನು ಸವಿದು ಗೌರವಿಸುವ ಮನೋಭಾವ ಮೂಡಿಸುವ ಉದ್ದೇಶ ಇರುತ್ತದೆ. ಕರ್ನಾಟಕ ಅರಣ್ಯ ಇಲಾಖೆ ಪ್ರಾಯೋಜಿತ ಎರಡು ದಿನದ ಪ್ರಕೃತಿ ಶಿಬಿರ ಇದಾಗಿದೆ. ಈ ಕಾರ್ಯಕ್ರಮದಲ್ಲಿ ಒಂದು ಭಾಗವಾಗಿ ಮಕ್ಕಳನ್ನು ಪ್ರಾಣಿಗಳ ಬಳಿ ಸಫಾರಿಗೆ ಕರೆದೊಯ್ಯುತ್ತೇವೆ. ಅದೇನೋ.. ಮೊದಲ ದಿನದಿಂದಲೂ ಎಂದೂ ನೋಡಿರದ ಸಿಂಹ, ಬಿಳಿಹುಲಿ, ಕರಡಿ ಇವುಗಳನ್ನೆಲ್ಲಾ ನೋಡಿದರೂ ಅಷ್ಟು ಅಚ್ಚರಿ ಆದಹಾಗೆ ತೋರಲಿಲ್ಲ. ನನ್ನದೇ ಆಲೋಚನೆಗಳ ಜೊತೆ ಸ್ವಲ್ಪ ಮಾತುಕತೆ ನಡೆಸಿದ ನಂತರ ತಿಳಿಯಿತು, ಇವು ಎಲ್ಲಿಂದಲೋ ತಂದು ಇಲ್ಲಿ ನಾವು ನೋಡಲೆಂದು ಕೂಡಿಹಾಕಿರುವ ಮಾನವ ನಿರ್ಮಿತ ಆದರೆ ಸ್ವಾಭಾವಿಕವಾಗಿ ಕಾಣುವಂತೆ ಮಾಡಲು ಯತ್ನಿಸಿದ ಪ್ರಾಮಾಣಿಕವಲ್ಲದ ಒಂದುಪ್ರಯತ್ನ ಎಂದು. ಬೇರೆಯವರ ವಿಷಯ ನನಗೆ ಗೊತ್ತಿಲ್ಲ, ಕಾಡಿನ ಅಂಚಿನಲ್ಲೇ ಹುಟ್ಟಿಬೆಳೆದ ನನಗಂತೂ ನಮ್ಮ ಕಾಡಿನಲ್ಲಿ ಆಗಲೋ ಈಗಲೋ ನೋಡುವ ಒಂದು ಸಣ್ಣ ಮೊಲ ಅಥವ ಮುಂಗುಸಿ ಸೆಳೆಯುವ ಹಾಗೆ, ಈ ಕೂಡಿಹಾಕಿ ಬೆಳೆಸುತ್ತಿರುವ ಪ್ರಾಣಿಗಳು ವಿಶೇಷವಾದರೂ ನನ್ನನ್ನು ಸೆಳೆಯುವಲ್ಲಿ ವಿಫಲವಾಗಿವೆ ಎಂದರೆ ಅತಿಶಯವಲ್ಲ.

ಅದು ಹೇಗೆ ಸಾಧ್ಯ, ನಮ್ಮ ಕಾಡಿನಲ್ಲೆಲ್ಲೂ ಸಿಗದ ಅಪರೂಪದ ಪ್ರಾಣಿಗಳಾದ ಸಿಂಹಗಳೂ ಹೊಸದೆನಿಸಿಲ್ಲವೇ? ಎಂಬ ಪ್ರಶ್ನೆ ಕೆಲವರಲ್ಲಿ ಮೂಡಬಹುದು. ಅದಕ್ಕೊಂದು ನಿದರ್ಶನವಿದು, ಎಂದು ಹೇಳಲಾರೆ. ಆದರೆ ನನ್ನ ಈ ಸಣ್ಣ ಅನುಭವ ಕಾಡಿನಲ್ಲಿ ಸ್ವಾಭಾವಿಕವಾಗಿ ಪ್ರಾಣಿಗಳ ನೋಡಲು ಬಯಸುವ ಉತ್ಸುಕತೆಯನ್ನು ನಿಮಗೆ ಅರ್ಥವಾಗಿಸುವಲ್ಲಿ ಪ್ರಯೋಜನಕಾರಿಯಾಗಬಹುದು ಎಂದು ನಂಬಿದ್ದೇನೆ.

ಹೀಗೊಂದು ದಿನ ಪಟ್ಟಣದಿಂದ ನಮ್ಮ ಊರಿಗೆ ಮರಳುವ ಸಮಯ. ರಾತ್ರಿಯಾಗಿತ್ತು! ಎಂದೇ ಆಗಲಿ ರಾತ್ರಿಯ ಸಮಯದಲ್ಲಿ ನಮ್ಮ ಊರಿಗೆ ಮರಳುವುದಾದರೆ ನಮಗಂತೂ ಎಲ್ಲಿಲ್ಲದ ಸಂತಸ. ಯಾವುದಾದರು ಕಾಡುಪ್ರಾಣಿಯ ದರ್ಶನವಾಗಬಹುದು ಎಂದು. ಆ ದಿನವೂ ಸಹ ಅದೇ ಆಶಯದಿಂದ ಕಾಡಿನ ದಾರಿಯಲ್ಲಿ ಸ್ವಲ್ಪ ನಿಧಾನವಾಗಿ ಚಲಿಸುತ್ತಾ ಅತ್ತಇತ್ತ ಕಣ್ಣಾಡಿಸುತ್ತಾ ಬರುತ್ತಿದ್ದೆವು. ಆ ದಿನ ನಮ್ಮ ರಾಶಿಗಳಿಗೆ ಕೂಡಿಬಂದಿರಲಿಲ್ಲವೆಂದು ತೋರುತ್ತದೆ ಯಾವ ಪ್ರಾಣಿಯ ದರ್ಶನಭಾಗ್ಯವೂ ಸಿಗಲಿಲ್ಲ. ಇನ್ನೇನು ಕಾಡು ಮುಗಿಯುತ್ತಾ ಬಂತು, ಕಾಡಿನ ಗಡಿಯ ಗೇಟನ್ನು ದಾಟಿ ಬಿಟ್ಟರೆ ಇನ್ನು ಪ್ರಾಣಿಗಳು ಸಿಗುವುದಿಲ್ಲ ಎಂದುಕೊಂಡು ತುಸು ನಿರಾಶೆಯಿಂದ ಸ್ವಲ್ಪಗಾಡಿಯ ವೇಗ ಹೆಚ್ಚಿಸಿದ್ದೆವು. ಇನ್ನೇನು ಎಲ್ಲಾ ಮುಗಿಯಿತು ಮನೆಗೆ ಹೋಗಿ ಮಲಗುವುದೇ… ಅಮ್ಮ ಊಟಕ್ಕೆ ಕರೆದರೆ ಹೋಗುವುದು ಬೇಡ. ಹೀಗೆ ಬೇರೆ ಆಲೋಚನೆಗಳಕಡೆ ಹೊರಟೆ. ಹಾಗೆ ಯೋಚಿಸುತ್ತಾ ಗಾಡಿಯನ್ನು ತಿರುವಿನಲ್ಲಿ ತಿರುಗಿಸಿ ಮುಂದಿನ ನೇರರಸ್ತೆಯಲ್ಲಿ ಬರುವಾಗ ಎರಡು ವಸ್ತುಗಳು ದೂರದಲ್ಲಿ ಹೊಳೆದಂತಾದವು. ಅಯ್ಯೊ ಇದು ಯಾವುದೋ ಮಿಂಚುಹುಳವಿರಬೇಕು, ಹತ್ತಿರದಲ್ಲೇ ಇವೆ ಎಂದುಕೊಂಡೆ. ಸ್ವಲ್ಪ ಮುಂದೆಬಂದೆ. ಆಗಲೂ ಸಹ ಆ ಹೊಳೆಯುವ ವಸ್ತುಗಳು ಅಲ್ಲೇ ಅದೇ ದೂರದಲ್ಲಿವೆ. ಇಷ್ಟಾದರೂ ಸಹ, ಓಹೋ ಯಾವುದೋ ಪ್ಲಾಸ್ಟಿಕ್ ಮರಕ್ಕೆ ಅಂಟಿರಬೇಕು, ಅದೇ ಹೊಳೆಯುತ್ತಿರಬೇಕು ಎಂದುಕೊಂಡೆ. ಇನ್ನು ಸ್ವಲ್ಪ ಮುಂದೆಬಂದು ನೋಡಿದರೆ ಇನ್ನೂ ಅವೆರೆಡು ಹೊಳೆಯುವ ಬಿಂದುಗಳು ಹಾಗೆ ಅಲ್ಲಿಯೇ ಇವೆ. ಇಷ್ಟಾದಮೇಲೆ ನಿಮಗೇ ಅನಿಸುತ್ತಿದೆಯಲ್ಲವೇ ‘ಯೋ ಮಹರಾಯ ಅದ್ಯಾವುದೋ ಪ್ರಾಣಿಯಿರಬೇಕು ನೋಡು! ಸುಮ್ಮನೆ ಅದಿರಬಹುದು ಇದಿರಬಹುದು ಅಂತ ಮೀನಾ-ಮೇಷ ಎಣಿಸಬೇಡಾ…’ ಎಂದು ಹೇಳಬೇಕೆಂದು ಎಂದು…

ಮುಂದೆಕೇಳಿ,

ನಿಮ್ಮ ಈ ಮಾತಿಗೂ ಸಮಜಾಯಿಷಿ ಕೊಡುತ್ತೇನೆ. ನನ್ನ ಅನಿಸಿಕೆ ಈಗ ನಿರ್ಧಾರವಾಗತೊಡಗಿತು, ಇದು ಯಾವುದೋ ಪ್ರಾಣಿಯೇ, ನೆಲದಿಂದ ಅವಿರುವ ಎತ್ತರ, ಒಂದಕ್ಕೊಂದು ಇರುವ ದೂರ ಗಮನಿಸಿ ಲೆಕ್ಕಾಚಾರ ಮಾಡಿ ಇದ್ಯಾವುದೋ ಕಾಡೆಮ್ಮೆಯೋ ಅಥವ ಸಾರಂಗ ಇರಬೇಕು ಎಂದು ನಿರ್ಧರಿಸಿದೆ. ಮುಂದೆಬಂದು ಅದರ ಮೇಲೆ ಬೆಳಕು ಬಿದ್ದಾಗ ಕಂಡದ್ದು… ನಾವೆಣಿಸಿದ ಹಾಗೆ ಆ ಪ್ರಾಣಿ… ಸಾರಂಗ (ಸಾಂಬಾರ್ ಡೀರ್) ಆಗಿತ್ತು. ದೃಢಕಾಯ, ಹಲವು ಕವಲುಗಳೊಡನೆ ಕೊಂಬು ಆ ಕಾಯಕ್ಕೆ ಸುಂದರವಾಗಿಯೇ ಇತ್ತು. ಆ ಹೊಳೆಯುವ ಕಣ್ಣುಗಳು ಇನ್ನೂ ನನ್ನ ಕಣ್ಣಮುಂದೆ ಹಾಗೆಯೇ ಇವೆ. ಈ ಯೋಚನಾ ಕಸರತ್ತೆಲ್ಲಾ ನಡೆದದ್ದು ಸುಮಾರು ಮೂರರಿಂದ ನಾಲ್ಕು ಸೆಕೆಂಡುಗಳಲ್ಲಿ.

ಈಗ ನಿಮ್ಮ ಅನಿಸಿಕೆಗೆ ಬರುತ್ತೇನೆ. ನಾನು ಹಾಗೆ ಮಿಂಚುಹುಳುವಿರಬಹುದು ಪ್ಲಾಸ್ಟಿಕ್ ಇರಬಹುದು ಎಂದುಕೊಳ್ಳಲು ಕಾರಣವಿದೆ. ಈ ಮುಂಚೆಯೇ ಕಾಡಿನಲ್ಲಿ ಬರುವಾಗ ಈ ಮಿಂಚುಹುಳು ಮತ್ತು ಪ್ಲಾಸ್ಟಿಕ್ ಗಳು ಎಷ್ಟೋಬಾರಿ ನನ್ನ ಆಸೆಯನ್ನು ನಿರಾಸೆಗೊಳಿಸಿವೆ. ಈ ಹೊಳೆಯುವ ಮಿಂಚುಹುಳುವನ್ನು ಕಂಡು ಪ್ರಾಣಿಯೆಂದು ಮೋಸಹೋಗಿದ್ದೇನೆ. ಪ್ಲಾಸ್ಟಿಕ್ ಪೇಪರ್ ಅಂತೂ ಇನ್ನೂ ದರಿದ್ರ, ಮಿಂಚುಹುಳುವಾದರೂ ಹಾರಾಡುವುದರಿಂದ ಇದು ಪ್ರಾಣಿಯಲ್ಲವೆಂದು ಬೇಗ ತಿಳಿದುಬಿಡುತ್ತದೆ. ಆದರೆ ಈ ಪ್ಲಾಸ್ಟಿಕ್ ಅಲುಗಾಡುವುದಿಲ್ಲವಲ್ಲ, ಆದ್ದರಿಂದ ಕೊನೆಯ ಕ್ಷಣದವರೆಗೂ ತಾನು ಪ್ರಾಣಿಯೇ ಎಂದು ನಂಬಿಸುತ್ತದೆ. ಅದಕ್ಕೆಂದೇ ಮೊದಲಿಗೇ ಇದು ಪ್ರಾಣಿಯೆಂದು ಖುಷಿಯಿಂದ ಹತ್ತಿರ ಹೋಗಿ ನಂತರ ನಿರಾಸೆಯಾಗಬಾರದು ಎಂದು ಮೊದಲೇ ನನ್ನ ಮನಸ್ಸನ್ನು ತಯಾರು ಮಾಡುತ್ತಿದ್ದೆ ಅಷ್ಟೆ. ನಿಜ ಹೇಳಬೇಕೆಂದರೆ ಕಾಡಿನಲ್ಲಿ ಏನೇಕಂಡರೂ ಮೊದಲಿಗೆ ತಲೆಗೆ ಬರುವುದು ಇದು ಯಾವುದೋ ಪ್ರಾಣಿಯೆಂದು, ಆದರೆ ಯಾವ ಪ್ರಾಣಿ ಇರಬಹುದು? ಎಂಬ ಲೆಕ್ಕಾಚಾರ.

ಈ ಮಾಸದ ವಿವಿ ಅಂಕಣದ ಶೀರ್ಷಿಕೆಗೆ ಹೋಲುವಂತೆ ಈ ಹೊಳೆಯುವ ಕಣ್ಣುಗಳ ಸಂದರ್ಭ ನೆನಪಾಗಿ ಹೇಳಬೇಕೆನಿಸಿತು. ಮುಂದಿನ ವಿಚಾರ ನೇರ ಮುಖ್ಯ ವಿಷಯದ ಕಡೆಗೆ… ಹೊಳೆಯುವ ಕಪ್ಪೆಗಳೆಂದಾಕ್ಷಣ ಕಪ್ಪೆಗಳ ಕಣ್ಣುಗಳು ರಾತ್ರಿಯಲ್ಲಿ ಹೊಳೆಯುತ್ತವೆ ಎಂದು ತಿಳಿದೀರಿ. ಅಲ್ಲವೇಅಲ್ಲ. ನಾನು ಹೇಳಹೊರಟಿರುವ ಕಪ್ಪೆಗಳು ಹೊಳೆಯುತ್ತವೆ, ಆದರೆ ಮಿಂಚುಹುಳಿವಿನ ಹಾಗೂ ಅಲ್ಲ ಅಥವಾ ಪ್ರಾಣಿಗಳ ಕಣ್ಣುಗಳು ರಾತ್ರಿಯ ಸಮಯದಲ್ಲಿ ಬೆಳಕು ಬಿಟ್ಟರೆ ಹೊಳೆಯುವ ಹಾಗೂ ಅಲ್ಲ. ಈ ಕಪ್ಪೆಗಳ ಮೇಲೆ ನೀಲಿ ಅಥವಾ ಅತಿನೇರಳೆ ಕಿರಣಗಳನ್ನು ಬಿಟ್ಟರೆ ಕೆಲವುಬಣ್ಣ (ಹಸಿರು ಮತ್ತು ಹಳದಿಯ ವಿವಿಧ ಬಣ್ಣ) ಗಳಲ್ಲಿ ಹೊಳೆಯುತ್ತವೆ ಎನ್ನುತ್ತಿದೆ ಹೊಸ ಸಂಶೋಧನೆ. ಜೆನಿಫರ್ ಲ್ಯಾಂಬ್ ಮತ್ತು ಮಾತ್ಯೂ ಡೇವಿಸ್ ಎಂಬ ಜೀವವಿಜ್ಞಾನಿಗಳು ನಡೆಸಿದ ಸಂಶೋಧನೆ ಪ್ರಕಾರ ನೀಲಿ ಮತ್ತು ಅತಿ ನೇರಳೆ ಬಣ್ಣವನ್ನು ಅವರು ಹಾಯಿಸಿದ ಎಲ್ಲಾ ಮೂವತ್ತೆರೆಡು ಪ್ರಭೇದದ ಕಪ್ಪೆಗಳು ಮತ್ತು ಸಾಲಾಮಂಡರುಗಳು ಆ ಬಣ್ಣಕ್ಕೆ ಪ್ರತಿಫಲಿಸಿ ವಿವಿಧ ಬಗೆಯ ಹಸಿರು ಮತ್ತು ಹಳದಿ ಬಣ್ಣಗಳಲ್ಲಿ ಹೊಳೆಯುತ್ತಿತ್ತು. ಈ ಪ್ರತಿಕ್ರಿಯೆ ಅವರನ್ನೇ ಚಕಿತಗೊಳಿಸಿದೆ. ಏಕೆಂದರೆ ಈ ಹೊಳೆಯುವ ಜೀವಿಗಳ ದಾಖಲೆಗಳು ಇರುವುದು ಸಮುದ್ರದ ಮೀನುಗಳು ಹಾಗೂ ಹವಳಗಳಲ್ಲೇ ಹೆಚ್ಚು. ಉಭಯವಾಸಿಗಳಲ್ಲಿ ಈ ಗುಣ ಇದ್ದರೂ ಕೆಲವೇ ಕೆಲವು ಬಗೆಯ ಸಾಲಾಮಂಡರುಗಳಲ್ಲಿ ಮಾತ್ರ ಕಂಡುಹಿಡಿಯಲಾಗಿತ್ತು ಹಾಗೂ ಉಭಯವಾಸಿಗಳಲ್ಲಿ ಈ ಗುಣ ಅತೀಕಡಿಮೆ ಎಂದು ಪರಿಗಣಿಸಲಾಗಿತ್ತು. ಹೀಗಿರುವಾಗ ಇವರು ಪ್ರಯೋಗಿಸಿದ ಎಲ್ಲಾ ಉಭಯವಾಸಿಗಳು ಹೊಳೆದರೆ ಆಶ್ಚರ್ಯವಾಗದೇ ಇದ್ದೀತೆ? ಅಷ್ಟೇಅಲ್ಲ ಹೆಚ್ಚು ಶಕ್ತಿಯುಳ್ಳ ನೀಲಿಬಣ್ಣವನ್ನು ಹೀರಿಕೊಂಡು ಕಡಿಮೆ ಶಕ್ತಿಯುತ ಹಳದಿ ಬಣ್ಣವನ್ನು ಪ್ರತಿಫಲಿಸುವ ಜೀವಿಯಾಗಿ ಸಮುದ್ರದ ಆಮೆಗಳನ್ನು ಗುರುತಿಸಲಾಗಿತ್ತು. ಆದರೆ ಈಗಿನ ಸಂಶೋಧನೆ ಆ ಗುಣವು ಉಭಯವಾಸಿಗಳಲ್ಲೂ ಸಹ ಸಾಮಾನ್ಯವಾದುದು ಎಂದು ಕೂಗಿಹೇಳುವಂತಿದೆ.

ಜೊತೆಗೆ ಪ್ರತಿ ಬಗೆಯ ಉಭಯವಾಸಿಗಳಲ್ಲೂ ವಿವಿಧ ಮಾದರಿಯ ಚಿತ್ರಗಳು ಮೂಡುತ್ತಿದ್ದವು. ಉದಾಹರಣೆಗೆ ಟೈಗರ್ ಸಾಲಾಮಂಡರುಗಳ ಮೈಮೇಲೆ ಪಟ್ಟೆಗಳ ಹಾಗೆ ಕಂಡರೆ, ಮಾರ್ಬಲ್ಸಾಲಮಂಡರುಗಳಲ್ಲಿ ಅವುಗಳ ಮೂಳೆಗಳು ಹಾಗು ಹೊಟ್ಟೆಯ ಭಾಗವು ಹೊಳೆಯುತ್ತಿದ್ದವಂತೆ. ಈ ಹೊಳೆಯುವಿಕೆಗೆ ನಿರ್ದಿಷ್ಠ ಕಾರಣ ಈಸಂಶೋಧನೆಯಲ್ಲಿ ಮಾಡಿಲ್ಲವಾದರೂ ಇದಕ್ಕೆ ಕಾರಣ ಬಹುಶಃ ಅವುಗಳ ಚರ್ಮದ ಜೀವಕೋಶಗಳಲ್ಲಿ ಇರಬಹುದಾದ ಹೊಳೆಯುವ ಪ್ರೊಟೀನ್ ಗಳು (ಅಥವಾ ಪಿಗ್ಮೆಂಟ್ ಗಳು) ಎಂದು ಹೇಳಬಹುದು.

ಹಾಗಾದರೆ ಈ ಹೊಳೆಯುವ ಗುಣ ಅಥವಾ ಲಕ್ಷಣಗಳಿಂದ ಈ ಕಪ್ಪೆ-ಸಾಲಮಂಡರುಗಳಿಗೆ ಹೇಗೆ ಉಪಯೋಗವಾಗುತ್ತದೆ? ಎಂಬುದಲ್ಲವೇ ನಿಮ್ಮ ಪ್ರಶ್ನೆ? ಇಲ್ಲಿದೆ ನೋಡಿ, ಕಪ್ಪೆಗಳ ಕಣ್ಣುಗಳು ಹಸಿರು ಮತ್ತು ನೀಲಿ ಬಣ್ಣಗಳನ್ನು ಗ್ರಹಿಸುವ ವಿಶೇಷ ಜೀವಕೋಶಗಳನ್ನು ಹೊಂದಿವೆ. ಹೀಗೆ ಹಸಿರು ಹಳದಿ ಬಣ್ಣಗಳಲ್ಲಿ ಹೊಳೆಯುವುದರಿಂದ ಕಪ್ಪೆಗಳು ಹಾಗು ಸಾಲಾಮಂಡರುಗಳು ನಮಗೆ ಅಡಗಿರುವಂತೆ ಕಾಣುವ ಸುತ್ತಮುತ್ತಲಿನ ತನ್ನ ಸಂಗಾತಿಗಳನ್ನು ಹುಡುಕಲು ಹೆಚ್ಚು ಸಹಾಯಕವಾಗಬಹುದು. ಹಾಗೆಯೇ ಈ ಗುಣ ನಮ್ಮ ವಿಜ್ಞಾನಿಗಳು ವನ್ಯಜೀವಿಗಳ ಗಣತಿ ಮಾಡುವಾಗ ಅಡಗಿರುವ ಇವುಗಳನ್ನು ಗುರುತಿಸಿ ದಾಖಲಿಸಲು ಉಪಕಾರಿಯಾಗುವುದು. ಇವು ನಮ್ಮ ಉತ್ತರಗಳು…

ನಿಮ್ಮ ಉತ್ತರಗಳ ನಮಗೆ ಬರೆದು/ಟೈಪ್ ಮಾಡಿ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿ.

ಇ-ಮೇಲ್ ವಿಳಾಸ: [email protected]

ಲೇಖನ: ಜೈಕುಮಾರ್ ಆರ್.
ಡಬ್ಲೂ.ಸಿ.ಜಿ. ಬೆಂಗಳೂರು

Spread the love
error: Content is protected.