ಸಹ್ಯಾದ್ರಿ ಕಪ್ಪೆಗಳ ಲೋಕ

ಸಹ್ಯಾದ್ರಿ ಕಪ್ಪೆಗಳ ಲೋಕ

ಚಿಕ್ಕವರಿದ್ದಾಗ ಶಾಲೆಯಲ್ಲಿ ಕಪ್ಪೆ ಜಿಗಿತದ ಸ್ಪರ್ಧೆಯಲ್ಲಿ ಯಾರು ಭಾಗವಹಿಸಿರಲಿಲ್ಲ ಹೇಳಿ? ಒಂದ್ವೇಳೆ ನೀವು ಭಾಗವಹಿಸಿರದಿದ್ದರೆ ಏನಂತೆ, ಈಗ ನಿಮ್ಮ ಮಕ್ಕಳಾದರೂ frog race ಕ್ರೀಡೆಯಲ್ಲಿ ಭಾಗವಹಿಸಿರಬೇಕಲ್ಲವೆ? ನಾವೂ, ನಮ್ಮ ಮಕ್ಕಳೂ ಸೋತಿರಲಿ ಗೆದ್ದಿರಲಿ, ಬಹುಮಾನಗಳನ್ನು ಪಡೆದಿರಲಿ, ಪಡೆಯದಿರಲಿ ಆದರೆ ಆ ಸ್ಪರ್ಧೆಗಳು ನಮ್ಮಲ್ಲಿ ಕ್ರೀಡಾಮನೋಭಾವದ ಬೀಜವನ್ನು ಬಿತ್ತಿ ಮನಕ್ಕೆ ಮುದ ನೀಡಿರುವುದಂತೂ ಖರೆ ಅಂಥ ಹೇಳಬಹುದು. ಹಾಗಾದರೆ ತಡ ಯಾಕೆ, ಕಪ್ಪೆಗಳ ಲೋಕದಲ್ಲಿ ಒಂದಿಷ್ಟು ಕುಪ್ಪಳಿಸಿ ಬರೋಣ ಬನ್ನಿ.

ಪುರಾಣ ಪ್ರಸಿದ್ಧ ಗೋಕರ್ಣ ಪಟ್ಟಣಕ್ಕೆ ಹೋಗುವಾಗ ಸಾಣಿಕಟ್ಟಾ ಎಂಬ ಗ್ರಾಮವನ್ನು ಬಳಸಿ ನಾವು ಸಾಗಬೇಕಾಗುತ್ತದೆ. ಈ ಗ್ರಾಮದ ಉತ್ಕೃಷ್ಟ ಉಪ್ಪಿನ ರುಚಿಯನ್ನು ಸವಿಯದೇ ಇರುವವರು ನಮ್ಮಲ್ಲಿ ಬಹಳ ಕಡಿಮೆ. ಸಮುದ್ರದ ಹಿನ್ನೀರಿನಿಂದ ಆವೃತ ಸಾಣಿಕಟ್ಟೆಯಲ್ಲಿ ನಾವು ಉಪ್ಪಿನ ಆಗರಗಳನ್ನು ನೋಡಬಹುದು. ಈ ಊರಿನ ಮೂಡಣದ ಅಗಸಿಯಲ್ಲಿ ಗಜನಿ(ಜೌಗು) ಭೂಮಿ ಮುಗಿಯುತ್ತಾ ಬಂದು ಸಹ್ಯಾದ್ರಿ ಶ್ರೇಣಿಯ ಚಿಕ್ಕಚಿಕ್ಕ ಗಿರಿಗಳು ನಿಧಾನವಾಗಿ ಪ್ರಾರಂಭವಾಗಿ ಮಾದನಗೇರಿ ಕ್ರಾಸ್ ನಿಂದ ಅವು ವೇಗಪಡೆದು ಆಗಸದೆತ್ತರಕೆ ಚಿಮ್ಮಲು ಪ್ರಾರಂಭಿಸುತ್ತವೆ.

ಕರಾವಳಿಯ ರಮಣೀಯ ಪರಿಸರದ ಈ ಗ್ರಾಮದಲ್ಲಿ ಸನ್ 2015 ರಲ್ಲಿ ಒಂದು ವಿಶಿಷ್ಟ ಘಟನೆ ನಡೆದು, ಅದು ಈ ಊರಿನ ನಂಟನ್ನು ಜೈವಿಕ ಸಂಶೋಧನಾ ಕ್ಷೇತ್ರದೊಂದಿಗೆ ಬೆಸೆಯುವಂತೆ ಮಾಡಿತು. ಒಂದು ದಿನ ಸಾಣಿಕಟ್ಟೆಗೆ ವಿಜ್ಞಾನಿ ಹಾಗೂ ಸ್ವಯಂ ಸೇವಕರ ತಂಡವೊಂದು ಸ್ಥಳೀಯ ನಿವಾಸಿ ಅರಣ್ಯಾಧಿಕಾರಿ ಚಂದ್ರಕಾಂತ ಆರ್. ನಾಯ್ಕ ರವರ ಮನೆಗೆ ಬಂದರು. ಅತಿಥಿ ಸತ್ಕಾರಗಳು ಮುಗಿದ ತರುವಾಯ ಚಂದ್ರಕಾಂತ, ವಿಜ್ಞಾನಿ ಡಾ. ಕೆ.ವಿ. ಗುರುರಾಜರಿಗೆ ತಮ್ಮ ಮೊಬೈಲ್ ನಲ್ಲಿ ರೆಕಾರ್ಡಿಂಗ್ ಮಾಡಿಕೊಂಡಿದ್ದ ಒಂದು ಧ್ವನಿಯನ್ನು ಕೇಳಿಸಿದರು. ಏನೋ ವಿಶೇಷವಿದೆ ಎಂದು ಆಸಕ್ತಿಯಿಂದ ಕಿವಿಗೊಟ್ಟು ಆಲಿಸಿದ ಗುರುರಾಜರು ಸಪ್ಪೆ ಮೋರೆಹಾಕಿಕೊಂಡು “ಏನು ನಾಯ್ಕರೇ ಸಾಮಾನ್ಯ ಹಕ್ಕಿ ಗದ್ದೆಮಿಂಚುಳ್ಳಿಯ ಶಬ್ಧವಿದು. ನಿಮಗೆ, ಅಷ್ಟೂ ತಿಳಿಯಲಿಲ್ಲವೇ?” ಎಂದರು. ಚಂದ್ರಕಾಂತ ಮುನಿಸಿಕೊಳ್ಳದೆ “ಸರ್, ಹತ್ತಾರು ವರುಷಗಳಿಂದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸ್ತಿದ್ದೀನಿ. ಇದು ಹಕ್ಕಿಯ ಧ್ವನಿ ಅಲ್ಲ ಯಾವುದೋ ಕಪ್ಪೆಯ ಧ್ವನಿ, ಬನ್ನಿ ತೋರಿಸ್ತೀನಿ” ಎಂದು ವಿಶ್ವಾಸದಿಂದ ಭತ್ತದ ಗದ್ದೆಗಳೆಡೆಗೆ ತಂಡವನ್ನು ಕರೆದುಕೊಂಡು ಹೋದರು.

ಕುತೂಹಲದಿಂದ ಗದ್ದೆಗಳತ್ತ ಸಾಗಿದ ಸಂಶೋಧನಾ ತಂಡವು ಅಲ್ಲಿ ಬರುತ್ತಿದ್ದ ಧ್ವನಿಯನ್ನು ಕೇಳಿ ಅಚ್ಚರಿಗೊಂಡಿತು. ಆ ಕೂಗು ಊಹಿಸಿದಂತೆ ಗದ್ದೆ ಮಿಂಚುಳ್ಳಿಯ ಧ್ವನಿಯನ್ನು ಹೋಲುತ್ತಿತ್ತು. ತಜ್ಞರು ಕಪ್ಪೆಗಳನ್ನು ಹುಡುಕಿ ಅವುಗಳ ಚಟುವಟಿಕೆ ಹಾಗೂ ಧ್ವನಿಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಧ್ವನಿಮುದ್ರಕಗಳಲ್ಲಿ ಸೆರೆ ಹಿಡಿದು, ಹೆಚ್ಚಿನ ಅಧ್ಯಯನಕ್ಕಾಗಿ ಜೀವಕೋಶಗಳನ್ನು ಜೈವಿಕ ಅಕೌಸ್ಟಿಕ್ ವಿಶ್ಲೇಷಣೆಗೆ ಕಳುಹಿಸಿದರು. ವೈಜ್ಞಾನಿಕ ವರದಿಗಳು ಬಂದು ವಿಜ್ಞಾನಿಗಳ ವೇದಿಕೆಯು ಇದು ಇಲ್ಲಿಯವರೆಗೆ ಯಾರು ಗುರುತಿಸದ ಪ್ರಭೇದ ಎಂದು ಒಪ್ಪಿಕೊಂಡಿತು. ಈ ಕಪ್ಪೆಯ ಪ್ರಭೇದಕ್ಕೆ “ಕರಾವಳಿ ಚಿಮ್ಮುವ ಕಪ್ಪೆ” (Euphlyctis karaavali skittering) ಎಂದು ನಾಮಕರಣ ಮಾಡಲಾಯಿತು. ಕನ್ನಡ ನಾಡಿನ ಕರಾವಳಿಯಲ್ಲಿ ಮೊದಲು ಇದನ್ನು ಗುರುತಿಸಿದ ಕಾರಣ ವೈಜ್ಞಾನಿಕ ಹೆಸರಿನಲ್ಲಿ ಅಚ್ಚಕನ್ನಡದ ಪದ ಕರಾವಳಿಯನ್ನು ಸೇರಿಸಲಾಯಿತು. ಈ ಕಪ್ಪೆಗಳು ಗೋವಾ, ಕರ್ನಾಟಕ ಹಾಗೂ ಕೇರಳದ ಕರಾವಳಿ ಪ್ರದೇಶದಲ್ಲಿ ಕಾಣುತ್ತವೆ. ನೀರಿನಲ್ಲಿ ತೇಲುತ್ತಾ ಅಪಾಯ ಎದುರಾದಾಗ ಇದ್ದಕ್ಕಿದ್ದಂತೆ ದೂರಕ್ಕೆ ಸರ್ರನೆ ಜರುಗುವ ಈ ಕಪ್ಪೆ ಪ್ರಭೇದದ ಉದ್ದ 11 ಸೆ.ಮೀ.

ಪರೋಪಕಾರಿ ಕಪ್ಪೆಗಳು ಮಾನವನಿಗಿಂತ ಸುಮಾರು 70 ದಶಲಕ್ಷ ವರುಷಗಳ ಮುಂಚೆ ಈ ಭೂಂಡಲದಲ್ಲಿ ಅಸ್ತಿತ್ವಕ್ಕೆ ಬಂದಿವೆ. ಇವು ನೀರಿನಿಂದ ನೆಲಕ್ಕೆ ಬಂದ ಪ್ರಪ್ರಥಮ ಉಭಯಚರಿಗಳಾಗಿವೆ. ಹಿಮಖಂಡಗಳು ಹಾಗೂ ಸಾಗರಗಳನ್ನು ಹೊರತುಪಡಿಸಿ ಎಲ್ಲ ಕಡೆಗಳಲ್ಲಿ ವಾಸಿಸುವ ಇವುಗಳ 7059 ಪ್ರಭೇದಗಳನ್ನು ಇಲ್ಲಿಯವರೆಗೆ ಪಟ್ಟಿ ಮಾಡಲಾಗಿದೆ. ಭಾರತದಲ್ಲಿ ಹೆಸರಿಸಲಾದ 445 ಕಪ್ಪೆಯ ಪ್ರಭೇದಗಳಲ್ಲಿ 330 ಪ್ರಭೇದಗಳನ್ನು ಪಶ್ಚಿಮ ಘಟ್ಟಗಳಲ್ಲೇ ಕಾಣಬಹುದು. ಕೇವಲ 19 ವರುಷಗಳ ಕಡಿಮೆ ಅವಧಿಯಲ್ಲಿ ಒಟ್ಟು 191 ಪ್ರಭೇದಗಳನ್ನು ಹೊಸದಾಗಿ ಗುರುತಿಸಲಾಗಿದೆ. ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವನ್ನು ಕೊಟ್ಟಲ್ಲಿ ಜೀವ ವೈವಿಧ್ಯತೆಯ ಆಗರಗಳಾದ ಪಶ್ಚಿಮ ಘಟ್ಟಗಳಲ್ಲಿ ಮತ್ತಷ್ಟು ಪ್ರಭೇದಗಳನ್ನು ಗುರುತಿಸಬಹುದೆಂಬ ಆಶಾಭಾವನೆ ವಿಜ್ಞಾನಿಗಳದು. ಈ ನಿಟ್ಟಿನಲ್ಲಿ ನಾಗರಿಕ ವಿಜ್ಞಾನ ವೇದಿಕೆಗಳೂ ಸಹ ತಮ್ಮ ಕೊಡುಗೆಗಳನ್ನು ನೀಡಬಹುದೆನ್ನುತ್ತಾರೆ. ಇತ್ತೀಚಿಗೆ ಅರಣ್ಯ ಇಲಾಖೆಯು ತನ್ನ ನಿಲುವನ್ನು ಬದಲಾಯಿಸಿಕೊಂಡು ಕಪ್ಪೆಗಳ ರಕ್ಷಣೆಗಾಗಿ ವಿಶೇಷ ಮುತುವರ್ಜಿವಹಿಸುತ್ತಿದೆ. ಇಲಾಖೆ ಕಪ್ಪೆಗಳ ಕಳ್ಳ ಬೇಟೆಯನ್ನು ತಡೆಯಲು ಅಪರಾಧಿಗಳ ಮೇಲೆ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು ವನ್ಯಜೀವಿ ಪ್ರೇಮಿಗಳಿಗೆ ಸಂತಸ ತಂದಿದೆ. ಭಾರತದ ಅತೀ ದೊಡ್ಡ ಕಪ್ಪೆ ಎಂದು ಹೆಗ್ಗಳಿಕೆ ಗಳಿಸಿರುವ ಡೊಂಗರು ಕಪ್ಪೆಗಳ ಸಂತತಿ ಕಳೆದ ದಶಕದಿಂದೀಚೆಗೆ ವೃದ್ಧಿಸುತ್ತಿರುವುದು ಸಕಾರಾತ್ಮಕ ಅಂಶವಾಗಿದೆ.

ಅಭಿವೃದ್ಧಿಯ ಹೆಸರಿನಲ್ಲಿನ ಅವೈಜ್ಞಾನಿಕ ಕಾಮಗಾರಿಗಳು, ಮಂಡೂಕಗಳ ವಾಸಸ್ಥಳಗಳನ್ನು ಒಂದು ಕಡೆ ನಾಶ ಪಡಿಸುತ್ತಿದ್ದರೆ, ಮತ್ತೊಂದೆಡೆ ಪರಿಸರದ ಉಳಿವಿಗಾಗಿ ಕಪ್ಪೆಗಳು ತಮ್ಮದೇ ಆದಂತಹ ಕೊಡುಗೆಗಳನ್ನು ನೀಡುತ್ತಿವೆ. ಭೂರಮೆಯ ಆಹಾರ ಸರಪಳಿಯ ಮಹತ್ವದ ಸ್ಥಾನದಲ್ಲಿರುವ ಕಪ್ಪೆಗಳು ಯಥೇಚ್ಛ ಕೀಟಗಳನ್ನು ಭಕ್ಷಿಸುತ್ತವೆ. ಗೊದಮೊಟ್ಟೆಗಳು (ಕಪ್ಪೆ ಮರಿ) ಕೂಡ ಮಳೆಗಾಲದಲ್ಲಿ ನಿಲ್ಲುವ ನೀರಿನಲ್ಲಿನ ಸೊಳ್ಳೆಯ ಮೊಟ್ಟೆಗಳನ್ನು ತಿಂದು ಅವುಗಳ ಪ್ರಸರಣವನ್ನು ನಿಯಂತ್ರಿಸುವ ಕಾಯಕವನ್ನು ಮಾಡುತ್ತಿವೆ. ಈ ವ್ಯವಸ್ಥೆ ಪರಿಸರದಲ್ಲಿನ ಕೀಟಗಳ ಅವ್ಯಾಹತ ಬೆಳವಣಿಗೆಗೆ ಪರಿಣಾಮಕಾರಿಯಾದ ತಡೆಯನ್ನು ಒಡ್ಡಿ ಸಮತೋಲನ ಕಾಯುತ್ತಿದೆ. ಇತ್ತೀಚಿಗೆ ಕಪ್ಪೆಗಳಿಂದ H1 N1 ಖಾಯಿಲೆಗೆ ಔಷಧವನ್ನು ತಯಾರಿಸಲಾಗುತ್ತಿದೆ. ಬಹುತೇಕ ಕಪ್ಪೆ ಪ್ರಭೇದಗಳ ಸಂತಾನಭಿವೃದ್ಧಿಗೆ ಮಳೆಯು ಅತ್ಯವಶ್ಯಕವಾಗಿದೆ. ಮುಂಗಾರಿನ ಪೂರ್ವದಲ್ಲಿ ವಾತಾವರಣದಲ್ಲಾಗುವ ಬದಲಾವಣೆಗಳಿಗನುಗುಣವಾಗಿ ಅವು ತಮ್ಮ ಬಾಣಂತನಕ್ಕೆ ಸಜ್ಜಾಗುತ್ತವೆ. ಹೆಣ್ಣು ಕಪ್ಪೆಗಳನ್ನು ಒಲಿಸಿಕೊಳ್ಳಲು ಗಂಡುಗಳು ಪೈಪೋಟಿ ನಡೆಸುತ್ತವೆ. ಗಂಡುಗಳು ತಮ್ಮ ಮೈ ಬಣ್ಣ ಬದಲಿಸಿಕೊಂಡು ಸತತವಾಗಿ ಧ್ವನಿ ಮೂಡಿಸುತ್ತಾ ಹೆಣ್ಣನ್ನು ಆಕರ್ಷಿಸುತ್ತವೆ. ಸಾಮಾನ್ಯವಾಗಿ ಯಾವ ಗಂಡನ್ನು ಆಯ್ದುಕೊಳ್ಳಬೇಕೆನ್ನುವ ಅಂತಿಮ ನಿರ್ಣಯ ಹೆಣ್ಣು ಕಪ್ಪೆಗೆ ಬಿಟ್ಟಿದ್ದು. ಗಂಡು ಕಪ್ಪೆಗಳು ಹೆಣ್ಣನ್ನು ಪಡೆಯಲು ಮೂಡಿಸುವ ಅನುರಣನ ಇರುಳಿನಲ್ಲಿ ಹೆಚ್ಚಾಗಿರುತ್ತದೆ ಮತ್ತು ಪ್ರತಿಯೊಂದು ಪ್ರಭೇದವು ತನ್ನದೇ ಆದ ಪ್ರತ್ಯೇಕ ಧ್ವನಿಯನ್ನು ಹೊಂದಿರುತ್ತದೆ.

ಭರತ ಖಂಡದಲ್ಲಿ ಅನಾದಿ ಕಾಲದಿಂದಲೂ ಕಪ್ಪೆಗಳ ಕುರಿತು ವಿಶೇಷ ಆಸಕ್ತಿಯನ್ನು ಜನಸಾಮಾನ್ಯರು ಹೊಂದಿದ್ದಾರೆ. ವರುಣ ದೇವನನ್ನು ಒಲಿಸಲು ಕಪ್ಪೆಗಳ ಮದುವೆ ಮಾಡಲಾಗುತ್ತದೆ. ಪೂರ್ವ ಹಾಗೂ ಉತ್ತರ ಭಾರತದಲ್ಲಿ ಕಪ್ಪೆಗಳ ಮದುವೆ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಬಾಜಾ ಭಜಂತ್ರಿ, ವಿಶೇಷ ಊಟದ ಸಹಿತ ಮೆರವಣಿಗೆಯೂ ಇರುತ್ತದೆ. ಮದುವೆ ನಂತರ ಕಪ್ಪೆಗಳು ಪ್ರಸ್ಥ ಆಚರಿಸಲೆಂದು ಅವುಗಳನ್ನು ಕೆರೆಯ ನೀರಿಗೆ ಬಿಡಲಾಗುತ್ತದೆ. ನಮ್ಮ ರಾಜ್ಯದ ಉಡುಪಿಯಲ್ಲೂ ಇತ್ತೀಚಿಗೆ ಮಳೆ ಬರಲೆಂದು ಕಪ್ಪೆಗಳ ಮದುವೆ ನಡೆದಿತ್ತು. ಲಗುಬಗೆಯಲ್ಲಿದ್ದ ಉಡುಪಿಯ ಜನ ತಾಳಿಯನ್ನು ಗಂಡುಕಪ್ಪೆಗೆ ಕಟ್ಟಿದ್ದರು. ಗಂಡುಕಪ್ಪೆಗೆ ತಾಳಿ ಕಟ್ಟಿರುವ ಈ ಸಂಗತಿಯು ಮಹಿಳಾಮಣಿಗಳಿಗೆ ಒಂದಿಷ್ಟು ಸಮಾಧಾನವೂ ತಂದಿತ್ತು. ಈ ವಿಷಯ ಇನ್ನೂ ಮುಂದೆ ಹೋಗಿ ಉತ್ತರ ಕನ್ನಡದ ಮುಂಡಗೋಡಿನ ಹಳ್ಳಿಯೊಂದರಲ್ಲಿ ಕಪ್ಪೆಯ ಮದುವೆಯನ್ನು ಯುವಕನೊಂದಿಗೆ ಮಾಡಲಾಯಿತು. ಆದರೆ ಇಲ್ಲಿ ಕಪ್ಪೆ ಹೆಣ್ಣೋ ಗಂಡೋ ಅಂತ ಗೊತ್ತಾಗಲಿಲ್ಲ! ಸುದ್ದಿಗೆ ಗ್ರಾಸವಾದ ಈ ಸ್ವಾರಸ್ಯಕರ ಘಟನೆಗಳು ಮೂಢನಂಬಿಕೆಯೆಂದು ಬಹುಜನರು ಆಡಿಕೊಂಡಿದ್ದರು. ಕಪ್ಪೆಗಳ ಮದುವೆ ಮಾಡಿದರೆ ಮಳೆ ಬರುತ್ತದೆಯೋ, ಬಿಡುತ್ತದೆಯೋ ಅದು ಬೇರೆ ಮಾತು. ಆದರೆ ನಮ್ಮ ಪೂರ್ವಿಕರು ಕಪ್ಪೆಗಳ ಸಂತಾನಭಿವೃದ್ಧಿಗೂ ಹಾಗೂ ಮಳೆಗೂ ಇರುವ ಅವಿನಾಭಾವ ಸಂಬಂಧವನ್ನು ಚೆನ್ನಾಗಿ ಗ್ರಹಿಸಿದ್ದರೆನ್ನಬಹುದು.

– ಮಹಾಂತೇಶ, ಕೈಗಾ

Spread the love
error: Content is protected.