ಬಿಳಿ ಹೊಟ್ಟೆಯ ಮೀನು ಗಿಡುಗ ಹಕ್ಕಿಯ ಮತ್ಸ್ಯ ಬೇಟೆ

ಬಿಳಿ ಹೊಟ್ಟೆಯ ಮೀನು ಗಿಡುಗ ಹಕ್ಕಿಯ ಮತ್ಸ್ಯ ಬೇಟೆ

ಕೊಲ್ಕತ್ತಾದ ಸಂತೋಷಕುಮಾರ, ಜಾನಾ, ಅರ್ಪೂಬ್ ದಾಸ್, ದಾವಣಗೆರೆಯ ಹೇಮಚಂದ್ರ ಜೈನ್, ಕುಂದಾಪುರದ ಸಂತೋಷ, ಕುಂದೇಶ್ವರ, ಉದಯಕುಮಾರ, ಶೆಟ್ಟಿ ಹಾಗೂ ನಾನು, ನಮ್ಮೆಲ್ಲರ ತಂಡದ ನಾವಿಕರಾದ ನಾರಾಯಣ ಕಾರ್ವಿಯವರ ಹಾಯಿದೋಣಿಯಲ್ಲಿ ಕೂತಾಗ ಕುಂದಾಪುರದ ಅಳವೆಯಲ್ಲಿ ದೋಣಿ ನಿಧಾನವಾಗಿ ಚಲಿಸಿತು. ನಾವು ಕಡಲ ಹಕ್ಕಿಗಳ ಫೋಟೋಗ್ರಫಿಗಾಗಿ ಸಾಗಿದೆವು. ಅಲ್ಲಲ್ಲಿ ಕಪ್ಪೆಚಿಪ್ಪನ್ನು ಸೋಸಲು ನೆಟ್ಟ ಕಟ್ಟಿಗೆ ಗೂಟಗಳು ಹಕ್ಕಿಗಳಿಗೆ ವಿಶ್ರಾಂತಿ ಪಡೆಯಲು ಹೇಳಿ ಮಾಡಿಸಿದಂತೆ ಇದ್ದವು. ದೂರದ ಇಂತಹ ಒಂದು ಗೂಟದ ಮೇಲೆ ಬಿಳಿ-ಕಂದು ಬಣ್ಣದ ಹಕ್ಕಿಯೊಂದು ವಿಶ್ರಮಿಸುತ್ತಿತ್ತು. ಅದರತ್ತ ನಿಧಾನವಾಗಿ ಚಲಿಸಿ ಸ್ವಲ್ಪ ದೂರದಲ್ಲಿ ದೋಣಿಯನ್ನು ನಿಲ್ಲಿಸಿ ವೀಕ್ಷಿಸತೊಡಗಿದೆವು. ಬೆಳಗಿನ ಉಪಹಾರಕ್ಕೆ ಇದು ಮೀನನ್ನು ಬೇಟೆಯಾಡಿ ಈ ಗೂಟದ ಮೇಲೆ ಕೂತು ಭಕ್ಷಿಸುತ್ತದೆ ಎಂಬುದು ನಮ್ಮ ನಿರೀಕ್ಷೆ. ಆಗ ನಾವು ಅದರ ಫೋಟೊಗ್ರಫಿ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ಆ ಗಿಡುಗನತ್ತ ತದೇಕಚಿತ್ತರಾಗಿ ಅದನ್ನೇ ನೋಡುತ್ತಾ ಕೂತೆವು. ಗೂಟದ ಮೇಲೆ ಕುಳಿತ ಅದರ ಕೆಲ ಫೋಟೊಗಳನ್ನು ಕ್ಲಿಕ್ಕಿಸಿಕೊಂಡದ್ದೂ ಆಯ್ತು. ಸಮಯ ಜಾರುತ್ತಿತ್ತು, ಮುಕ್ಕಾಲು ಘಂಟೆ ಸಮಯ ಕಾಯ್ದರೂ ಅದು ಆ ಗೂಟಕ್ಕೆ ಅಂಟಿಕೊಂಡು ಕುಳಿತೇ ಇತ್ತು. ಹಾಗಾಗಿ ನಮ್ಮ ಚಿತ್ತವೂ ಅದರತ್ತಲೇ ಇತ್ತು. ಈಗ ಅದಕ್ಕೆ ಹಸಿವಾಗಿರಬೇಕು… ತಕ್ಷಣವೇ ತನ್ನ ಅಗಲವಾದ ರೆಕ್ಕೆಗಳನ್ನು ರಭಸವಾಗಿ ಬಡಿದು ಹಾರತೊಡಗಿದಾಗ ನಾವು ಕ್ಯಾಮರಾದಲ್ಲಿ ಆ ಕ್ಷಣವನ್ನು ದಾಖಲಿಸಿಕೊಂಡೆವು.

ಈ ಹಕ್ಕಿಯ ಹೆಸರು ಬಿಳಿ-ಹೊಟ್ಟೆಯ ಮೀನು ಗಿಡುಗ ಅಥವಾ ಬಿಳಿ ಎದೆಯ ಸಮುದ್ರ ಹದ್ದು ಎಂದು. ಆಂಗ್ಲ ಭಾಷೆಯಲ್ಲಿ ವೈಟ್ ಬೆಲ್ಲೀಡ್ ಸೀ ಈಗಲ್ (White-bellied sea eagle) ಅಥವಾ ವೈಟ್ ಬ್ರೆಸ್ಟೆಡ್ ಸೀ ಈಗಲ್ (White-breasted sea eagle) ಎಂದು ಕರೆಯಲಾಗುತ್ತದೆ. ವೈಜ್ಞಾನಿಕವಾಗಿ ಹಾಲಿಯೆಟಸ್ ಲ್ಯುಕೋಗಾಸ್ಟರ್ (Haliaeetus leucogaster) ಎಂದು ಕರೆದು ಫಾಲ್ಕೋನಿಫಾರ್ಮಿಸ್ (Falconiformes) ಗಣದ, ಅಸ್ಸಿಪಿಟ್ರಿಡೇ (Accipitridae) ಕುಟುಂಬಕ್ಕೆ ಸೇರಿಸಲಾಗಿದೆ. 1788 ರಲ್ಲಿ ಜರ್ಮನ್ ನಿಸರ್ಗವಾದಿ ಜೋಹಾನ್ ಫ್ರೆಡ್ರಿಕ್ ಗೆಲ್ಮಿನ್ ಅವರು ಬಿಳಿ-ಹೊಟ್ಟೆಯ ಸಮುದ್ರ ಹದ್ದನ್ನು ಮೊದಲು ಬಾರಿಗೆ ವಿವರಿಸಿದರಾದರೂ, ಜಾನ್ ಲಾಥಮ್ 1781 ರಲ್ಲಿ ಈ ಜಾತಿ ಪಕ್ಷಿಗಳ ಬಗ್ಗೆ ಟಿಪ್ಪಣಿಗಳನ್ನು ಮಾಡಿದರು. ಫೆಬ್ರವರಿ 1780ರಲ್ಲಿ ಕ್ಯಾಪ್ಟನ್ ಕುಕ್ ಸಮಯದಲ್ಲಿ ಜಾವಾದ ಪಶ್ಚಿಮ ಕೇಪ್‌ನ ಪ್ರಿನ್ಸಸ್ ದ್ವೀಪದಲ್ಲಿ ಈ ಪ್ರಭೇದದ ಬಗ್ಗೆ ಟಿಪ್ಪಣಿಸಿದ್ದರು.

ಬಿಳಿ ಎದೆಯ ಸಮುದ್ರ ಹದ್ದುಗಳ ತಲೆ ಹೊಟ್ಟೆಯ ತಳಭಾಗ ಹಾಗೂ ಎದೆಯು ಬಿಳುಪಾಗಿದೆ. ಬೆನ್ನು ಮತ್ತು ರೆಕ್ಕೆಗಳು ಕಂದು ಬಣ್ಣವನ್ನು ಹೊಂದಿದೆ. ಹಾರುವಾಗ ರೆಕ್ಕೆಗಳಲ್ಲಿನ ಕಂದು ಗರಿಗಳು ಸ್ಪಷ್ಟವಾಗಿ ಕಾಣುತ್ತವೆ. ತುದಿಯಲ್ಲಿ ತುಸು ಬಾಗಿದ ಮೊನಚಾದ ಕೊಕ್ಕು ತುದಿಯಲ್ಲಿ ಗಾಢವಾದ ನೀಲಿ-ಬೂದು ಮತ್ತು ಕಡು ಕಂದು ಬಣ್ಣದಿಂದ ಕೂಡಿದೆ. ಕಾಲುಗಳು ಹಳದಿ ಬಣ್ಣದ್ದಾಗಿವೆ, ಕಪ್ಪಾದ ಉದ್ದನೆಯ ಉಗುರುಗಳಿವೆ. ಗಂಡು-ಹೆಣ್ಣುಗಳು ನೋಡಲು ಒಂದೇ ತರನಾಗಿದ್ದು, ಗಂಡು ಹಕ್ಕಿಯು 66–80 ಸೆಂ.ಮೀ ಗಾತ್ರದ್ದು, ಹೆಣ್ಣು ಹಕ್ಕಿಯು ಗಂಡಿಗಿಂತ ಗಾತ್ರದಲ್ಲಿ ದೊಡ್ಡದಾಗಿ ಸುಮಾರು 80-90 ಸೆಂ.ಮೀ. ಗಾತ್ರದಾಗಿದೆ. ರೆಕ್ಕೆಗಳ ಹರವು 1.78 ರಿಂದ 2.2 ಮೀಟರ್. ದೇಹದ ಪುಕ್ಕಗಳಲ್ಲಿ ಋತುಮಾನಕ್ಕೆ ತಕ್ಕಂತೆ ಯಾವುದೇ ಬದಲಾವಣೆ ಆಗುವುದಿಲ್ಲ.

ಈ ಗಿಡುಗವು ಅವಕಾಶವಾದಿ ಮಾಂಸಾಹಾರಿ ಪಕ್ಷಿಯಾಗಿದ್ದು ಇದರ ಮುಖ್ಯ ಆಹಾರ ಮೀನು, ಆದರೂ ಆಮೆ ಮತ್ತು ಸಮುದ್ರ ಹಾವುಗಳು, ಮುಂತಾದ ಜಲಚರ ಜೀವಿಗಳನ್ನು ಬೇಟೆಯಾಡುತ್ತದೆ. ಕೆಲ ಸಲ ಕಡಲಕ್ಕಿಗಳನ್ನು ಬೇಟೆಯಾಡಿ ಭಕ್ಷಿಸಿರುವುದು ವರದಿಯಾಗಿದೆ. ಇದು ಸಮುದ್ರ ನೀರಿನ ಮೇಲೆ ಕಡಿಮೆ ಮಟ್ಟದಲ್ಲಿ ಹಾರುವ ಮೂಲಕ ಬೇಟೆಯನ್ನು ಹಿಡಿಯುತ್ತದೆ. ತನ್ನ ಕಾಲುಗಳನ್ನು ಮುಂದಕ್ಕೆಚಾಚಿ ಉಗುರುಗಳನ್ನು ಅಗಲಿಸಿಕೊಳ್ಳುವ ಮೂಲಕ ಅದು ಸಿದ್ಧಗೊಳ್ಳುತ್ತದೆ. ಅಂದರೆ ಬಹುತೇಕ ಅದರ ಗಲ್ಲದ ಅಡಿಯಲ್ಲಿ ಮತ್ತು ನಂತರ ಏಕಕಾಲದಲ್ಲಿ ತನ್ನ ರೆಕ್ಕೆಗಳನ್ನು ಮೇಲಕ್ಕೆ ಎತ್ತುವಂತೆ ಹಿಡಿದಿಟ್ಟುಕೊಂಡಿರುತ್ತದೆ. ಸಾಮಾನ್ಯವಾಗಿ ಒಂದು ಕಾಲು ಮಾತ್ರ ಬೇಟೆಯನ್ನು ವಶಪಡಿಸಿಕೊಳ್ಳಲು ಬಳಸಲಾಗುತ್ತದೆ. ಬಿಳಿ ಎದೆಯ ಸಮುದ್ರ ಗಿಡುಗವು ತಾನು ಕುಳಿತ ಜಾಗದಿಂದ ಹಾರುತ್ತ 45 ಡಿಗ್ರಿ ಕೋನದಲ್ಲಿ ಜಿಗಿದು ಧುಮುಕಿ ನೀರಿನ ಮೇಲ್ಮೈ ಬಳಿ ಬೇಟೆ ಹಿಡಿಯಲು ಅಲ್ಪ ಪ್ರಮಾಣದಲ್ಲಿ ನೀರಿನಲ್ಲಿ ಮುಳುಗುವುದೂ ಉಂಟು. ಬಿಸಿಲಿನ ದಿನಗಳಲ್ಲಿ ನೀರಿನ ಮೇಲೆ ಬೇಟೆಯಾಡುವಾಗ, ಸೂರ್ಯನ ದಿಕ್ಕನ್ನು ಅರಿತು ಅದು ನೇರವಾಗಿ ಹಾರುತ್ತದೆ. ನೀರಿನ ಮೇಲೆ ನೆರಳು ಬೀಳುವುದನ್ನು ತಪ್ಪಿಸಲು ಮತ್ತು ಸಂಭವನೀಯ ಬೇಟೆಯ ದಿಕ್ಕನ್ನು ತಪ್ಪಿಸಲು ಈ ತಂತ್ರಗಾರಿಕೆಯನ್ನು ರೂಢಿಸಿಕೊಂಡು ಬೇಟೆಯನ್ನು ಶಿಕಾರಿ ಮಾಡುತ್ತದೆ. ಬಿಳಿ-ಹೊಟ್ಟೆಯ ಮೀನು ಗಿಡುಗವು ಬೇಟೆಯ ಮೇಲೆ ಆಕ್ರಮಣ ಮಾಡುವ ನುರಿತ ಬೇಟೆಗಾರ ಹದ್ದಾಗಿದೆ.

ಬಿಳಿ ಎದೆಯ ಸಮುದ್ರ ಹದ್ದುಗಳ ಸಂತಾನಾಭಿವೃದ್ಧಿ ಸಮಯವು ಅಕ್ಟೋಬರ್ ನಿಂದ ಜೂನ್ ತಿಂಗಳಾಗಿದ್ದು ಸಮುದ್ರ ತೀರದ ಹತ್ತಿರದಲ್ಲಿರುವ ಎತ್ತರದ ಮರಗಳಲ್ಲಿ ಕಟ್ಟಿಗೆ ಹಾಗೂ ಎಲೆಗಳನ್ನು ಸೇರಿಸಿ ಅವ್ಯವಸ್ಥಿತ ವೇದಿಕೆಯಂತಿರುವ ದೊಡ್ಡದಾದ ಗೂಡನ್ನು ರಚಿಸಿ ಎರಡು ಬಿಳಿವರ್ಣದ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ಮತ್ತೆ ಸಂತಾನಾಭಿವೃದ್ಧಿ ಸಮಯದಲ್ಲಿ ಹಿಂದಿನ ಇದೇ ಗೂಡನ್ನು ನವೀಕರಿಸಿ ಮೊಟ್ಟೆ ಇಟ್ಟು ಮಾಡುತ್ತವೆ. ಬೇಟೆಯಾಡುವ ಸಂದರ್ಭದಲ್ಲಿ ಒಂಟಿಯಾಗಿ ಇರುವುದೇ ಜಾಸ್ತಿ. ಅಪರೂಪವೆಂಬಂತೆ ಜೊತೆಯಾಗಿರುತ್ತವೆ. ವರ್ಷಪೂರ್ತಿ ತನ್ನದೇ ಪ್ರಾಂತ್ಯಗಳಲ್ಲಿ ವಾಸಿಸುವ ಶಾಶ್ವತ ಜೋಡಿಗಳಾಗಿರುವ ಇವು ತಮ್ಮ ಜೊತೆಗಾತಿ ಸಾಯುವವರೆಗೂ ಜೋಡಿಯಾಗಿ ಒಟ್ಟಿಗೆ ಬಾಳು ನಡೆಸುತ್ತವೆ. ಸಂಗಾತಿ ಅಸುನೀಗಿದಾಗ ಬದುಕುಳಿದ ಇನ್ನೊಂದು ಹಕ್ಕಿ ಹೊಸ ಸಂಗಾತಿಯನ್ನು ಶೀಘ್ರವಾಗಿ ಹುಡುಕುತ್ತದೆ. ಬಿಳಿ ಎದೆಯ ಸಮುದ್ರ ಹದ್ದನ್ನು ಆಸ್ಟ್ರೇಲಿಯಾದ ಕೆಲ ಭಾಗಗಳಲ್ಲಿನ ಸ್ಥಳೀಯ ಜನರು ಭಕ್ತಿಯಿಂದ ಪೂಜಿಸುತ್ತಾರೆ ಮತ್ತು ಅಲ್ಲಿ ಅದರ ಬಗ್ಗೆ ಅನೇಕ ಜಾನಪದ ಕಥೆಗಳು ಇವೆ.

ಬಿಳಿ-ಹೊಟ್ಟೆಯ ಸಮುದ್ರ ಗಿಡುಗವು ಭಾರತದ ಕರಾವಳಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ. ಆದರೆ ಒಳನಾಡಿನಲ್ಲೂ ಕಂಡುಬಂದ ದಾಖಲೆಗಳಿವೆ. ಪನ್ನಾ ಟೈಗರ್ ಉದ್ಯಾನವನದಲ್ಲಿ ಕಂಡುಬರುತ್ತದೆ, ಇದು ಸಮುದ್ರ ತೀರದಿಂದ ಸುಮಾರು 1,000 ಕಿ.ಮಿ (621 ಮೈಲಿ) ದೂರವಿದೆ. ನಾನೂ ಸಹ ಕಾರವಾರ ಸಮುದ್ರ ತಟದಿಂದ 110 ಕಿ. ಮೀ ದೂರವಿರುವ ದಾಂಡೇಲಿ ಅಭಯಾರಣ್ಯದಲ್ಲಿ ಎತ್ತರವಾದ ಮರದಲ್ಲಿ ಕುಳಿತಿರುವುದನ್ನು ಫೋಟೋಗ್ರಫಿ ಮಾಡಿರುವೆ. ಭಾರತದ ಕರಾವಳಿ, ಅಂಡಮಾನ್–ನಿಕೋಬಾರ್ ದ್ವೀಪ ಪ್ರದೇಶಗಳಲ್ಲಿ ಇವು ಸಾಮಾನ್ಯವಾಗಿ ಸಮುದ್ರದ ಸನಿಹದಲ್ಲಿ ಕಂಡರೂ ಒಳನಾಡಿನಲ್ಲಿ ಬಹಳ ದೂರ ಪ್ರಯಾಣಿಸಬಲ್ಲದು. ಥೈಲ್ಯಾಂಡ್, ಮಲೇಷಿಯಾ, ಇಂಡೋನೇಷಿಯಾ, ಬಾಂಗ್ಲಾದೇಶ, ಶ್ರೀಲಂಕಾ, ಆಸ್ಟ್ರೇಲಿಯಾ ದೇಶಗಳಲ್ಲಿಯೂ ಕಾಣಸಿಗುತ್ತವೆ. ಜೆರ್ವಿಸ್ ಕೊಲ್ಲಿಯರು ತಮ್ಮ ಅಧ್ಯಯನದಲ್ಲಿ ಸೌತ್ ಆಸ್ಟ್ರೇಲಿಯದ ಕೋವೆಲ್ ನಲ್ಲಿಯ ಒಂದು ಬಿಳಿ ಎದೆಯ ಸಮುದ್ರ ಹದ್ದು 3,000 ಕಿ.ಮಿ (1,900 ಮೈಲಿ) ದೂರದಲ್ಲಿ ಕಂಡ ಬಗ್ಗೆ ವರದಿ ಮಾಡಿದ್ದಾರೆ.

ಅಲ್ಲಿಂದ ಹಾರಿದ ಗಿಡುಗವು ದೂರ ಹೋಗಿತು. ನಮ್ಮ ನಿರೀಕ್ಷೆ ಹುಸಿಯಾಗಲಿಲ್ಲ ಅದು ಮೀನನ್ನು ಬೇಟೆಯಾಡಿರುವುದು ಖಾತ್ರಿಯಾಗಿತ್ತು, ಕಾಲಲ್ಲಿ ಮೀನು ಇತ್ತು. ಅದು ಮತ್ತೇ ಅದೇ ಗೂಟಕ್ಕೆ ಮರಳಿ ಬರುವುದನ್ನು ಗಮನಿಸಿದ ನಾವು ದೋಣಿಯನ್ನು ಸ್ವಲ್ಪ ಮುಂದಕ್ಕೆ ನಡೆಸಿ ನಿಲ್ಲುವಂತೆ ಹೇಳಿದೆವು. ಸಮುದ್ರದ ಮಟ್ಟದಲ್ಲಿ ಹದ್ದು ಶರವೇಗದಲ್ಲಿ ಸುಯ್ಯೆಂದು ಹಾರುತ್ತ ಬರತೊಡಗಿದಾಗ ನಾನು ನನ್ನ ಕ್ಯಾಮರದಲ್ಲಿ ಶಟರ್ ಮೋಡ್ ನಲ್ಲಿ ಕವಾಟವೇಗವನ್ನು ಎಸ್-1/2000ಗೆ ಇಟ್ಟು, ಬೆಳಕು ಚನ್ನಾಗಿದ್ದುದ್ದರಿಂದ ಐ.ಎಸ್‌.ಒ. ವನ್ನು 400ಕ್ಕೆ ಅಳವಡಿಸಿಕೊಂಡು, ಕಂಟಿನ್ಯೂವಸ್ ಫ್ರೇಮ್‌ ನಲ್ಲಿ ಅದರ ಫೋಟೊ ಕ್ಲಿಕ್ಕಿಸತೊಡಗಿದೆ. ಅದು ಮೀನನ್ನು ಕಾಲಿನಲ್ಲಿ ಹಿಡಿದುಕೊಂಡು ಬಂದು ಆ ಗೂಟದ ಮೇಲೆ ಲ್ಯಾಂಡ್ ಆಗುವವರೆಗಿನ ಎಲ್ಲ ಕ್ಷಣಗಳು ಕ್ಯಾಮರದ ಮೆಮರಿ ಕಾರ್ಡ್ ನಲ್ಲಿ ದಾಖಲಾದವು. ಅಲ್ಲಿ ಕುಳಿತು ಮೀನನ್ನು ಭಕ್ಷಿಸತೊಡಗಿತು. ನಮ್ಮಿಂದ ಯಾವ ತೊಂದರೆ ಇಲ್ಲವೆಂದು ತಿಳಿದ ಅದು ಮೀನನ್ನು ಹರಿದು ಸ್ವಾದಿಸತೊಡಗಿತು. ಮೀನನ್ನು ಸ್ವಲ್ಪ ತಿಂದಿರಬೇಕು, ಅದಕ್ಕೆ ಏನು ತಿಳಿಯಿತೊ ಏನೋ ಕಾಲಲ್ಲಿ ಮೀನನ್ನು ಹಿಡಿದು ಅಲ್ಲಿಂದ ಹಾರಿಹೋಗಿ ದೂರದಲ್ಲಿದ್ದ ಇನ್ನೊಂದು ಗೂಟದ ಮೇಲೆ ಕುಳಿತು ಮೀನನ್ನು ಭಕ್ಷಿಸತೊಡಗಿತು. ನಾವು ಕಾರ್ವಿಯವರಿಗೆ ದೋಣಿಯನ್ನು ಅದರತ್ತ ಒಯ್ಯಲು ಹೇಳಿದೆವು. ನಾವು ಅದರ ಸನಿಹ ಹೋಗುತ್ತಿದ್ದ ಹಾಗೆ ಅದು ಅದರ ಬೆಳಗಿನ ಉಪಹಾರ ಮುಗಿಸಿ ಆಗಿತ್ತು. ನಾವು ಅದನ್ನೇ ನೋಡುತ್ತ ಕುಳಿತೆವು, ಐದಾರು ನಿಮಿಷವಾಗಿರಬೇಕು ಹಿಂಬದಿಯ ಪುಕ್ಕವನ್ನು ಎತ್ತಿ ಒಮ್ಮೆ ಮೈ ಕೊಡವಿ ಪಿಚಕಾರಿಯಂತೆ ಹಿಕ್ಕೆ ಹಾಕಿ ನಮ್ಮನೊಮ್ಮೆ ನೋಡಿ ಮಂದಹಾಸ ಬೀರಿ ಅಲ್ಲಿಂದ ಹಾರಿ ದೂರದಲ್ಲಿ ಮರೆಯಾಯಿತು. ನಮ್ಮ ಹೊಟ್ಟೆಯು ಹಸಿವೆಯಿಂದ ಚುರ್ ಗುಟ್ಟಿದಾಗ ಉಪಹಾರದ ನೆನಪಾಗಿ ದೋಣಿಯನ್ನು ತೀರದತ್ತ ತಿರುಗಿಸಿ ಮರಳಿದೆವು.

ಶಶಿಧರಸ್ವಾಮಿ ಆರ್. ಹಿರೇಮಠ

Print Friendly, PDF & Email
Spread the love
error: Content is protected.